ಗಜಲ್
ವಾಣಿ ಭಂಡಾರಿ
ಹಗಲುಗಳೆ ಕತ್ತಲಾಗಿ ಬಿಕ್ಕುತ್ತಿವೆ ರಾತ್ರಿಗಳ ಹಂಗೇಕೆಲ್ಲಿ ಅವನು ಹೋದ ಮೇಲೆ
ಏನು ಮಾಡಲಿ ಇರುಳ ನೆನಪುಗಳು ಮುಳುಗಿವೆ ಮಧು ಬಟ್ಟಲಿನಲ್ಲಿ ಅವನು ಹೋದ ಮೇಲೆ.
ಹಿಡಿದ ಕೈಗಳು ಕಲೆತು ಆಡಿ ಮಲೆತು ಅಂಗಳದಲ್ಲಿ ಮಂಗಳ ಬೀರಿ ನಕ್ಕಿದ್ದವಂದು
ಮನದ ನಭ ಚುಕ್ಕಿಗಳು ಮಂಕಾಗಿವೆ ದರ್ದ್ ಗೆ ಮುಲಾಮೆಲ್ಲಿ ಅವನು ಹೋದ ಮೇಲೆ.
ಗಲ್ಲಹಿಡಿದು ಲಲ್ಲೆಗರೆದ ಕೈಗಳು ಜೋಡು ದೀಪದ ನಡುವೆ ಮಾತಿರದ ಮೌನ ತಾಳಿವೆ
ಜೋತಿರುವ ನೆನಪಿನೊಳಗೆ ಕಣ್ಣೀರು ಕಡಲಾಗಿದೆ ಕಾಲನ ಅಲೆಯಲ್ಲಿ ಅವನು ಹೋದ ಮೇಲೆ
ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ
ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ.
ಏನು ಹೇಳುತ್ತಿದೆ “ವಾಣಿ” ಕರಗಿದ ಮೊಂಬತ್ತಿ ಹೆಸರಿನ ಮುಂದಿರುವ ಉಸಿರು ಹೋದ ಮೇಲೆ
ಆತ್ಮದ ಜೊತೆ ಸುಖಿಸುವ ನನಗೆ ಸಾವಲ್ಲದ ಸಾವಿನ ಮಾತೇಕಿಲ್ಲಿ ಅವನು ಹೋದ ಮೇಲೆ.
**************