ಕಾವ್ಯಯಾನ-ಗಜಲ್

ಗಜಲ್

ನಯನ . ಜಿ . ಎಸ್

Brown Mountains Near Body of

ಮಂದ ಮಾರುತದ ತಂಪು ಸ್ಪರ್ಶಿಸುತಿರಲು ವಧುವಾದಳು ವಸುಧೆ
ಹನಿ ಇಬ್ಬನಿಗಳು ಇಳೆಯ ಬಳಸಿ ಶೃಂಗರಿಸಿರಲು ವಧುವಾದಳು ವಸುಧೆ !

ಕಾರ್ಮೋಡಗಳು ಘರ್ಜಿಸಿ ಕಾಳಗವ ಗೈಯುತಿದೆ ನಭದ ರಂಗದಲಿ
ಮಿಂಚುಗಳ ಸಲ್ಲಾಪ ನಭದಲಿ ಮೇಳೈಸುತಿರಲು ವಧುವಾದಳು ವಸುಧೆ !

ಹಸಿರು ಹಾಸಿನ ಮಡಿಲೊಳು ಸಾಗಿದೆ ಇಬ್ಬನಿಗಳ ವಯ್ಯಾರದ ನರ್ತನ
ಸುಮಗಳ ಕಂಪು ಸೌಗಂಧವಾಗಿ ಪಸರಿಸುತಿರಲು ವಧುವಾದಳು ವಸುಧೆ !

ಜೀರುಂಡೆಗಳ ಗುನುಗುವಿಕೆಯ ಮೆಲು ದನಿಯ ಸಂಭಾಷಣೆಯ ಹಿತದೂಟ
ಭಾವಗಳು ಮೇಳೈಸಿ ನವ್ಯತನವು ಮೂಡುತಿರಲು ವಧುವಾದಳು ವಸುಧೆ !

‘ನಯನ’ ಗಳಲಿ ಹೊಸತನವ ಬಿತ್ತುತ ಮೆರೆದಿಹ ವರುಣ ಈ ಕ್ಷಣಗಳಲಿ
ಸಂಜೆಯ ತಂಗಾಳಿ ನಯವಾಗಿ ಆವರಿಸಿರಲು ವಧುವಾದಳು ವಸುಧೆ !!

********************

Leave a Reply

Back To Top