ಗಜಲ್ ಜುಗಲ್ ಬಂದಿ-09

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-09

ಬೆಳಕು ಮೂಡುವಾಗ ಹೂ ಅರಳುವುದ ಮರೆಯುವುದಿಲ್ಲ/
ಪ್ರತಿ ಸಂಜೆಯಲಿ ನೆನಪು ಜೊತೆಯಾಗುವುದ ಮರೆಯುವುದಿಲ್ಲ /

ನೋವುಗಳೆಲ್ಲ ನಮ್ಮನ್ನೇ ಕಾಡುತ್ತವೆ ಅಂದುಕೊಳ್ಳುವೆ ಏಕೆ
ಉಳಿದ ಖುಷಿಯೊಂದು ಹಿತನೀಡುವುದ ಮರೆಯುವುದಿಲ್ಲ/

ಮಾತು ಹೇಗೆಲ್ಲ ಹರಿಯುತ್ತದೆ ಜೀವನದ ದಾರಿಯಲಿ
ಮೌನವೊಂದು ಪ್ರೀತಿಉಳಿಸುವುದ ಮರೆಯುವುದಿಲ್ಲ/

ಭಾವವೇ ಕುರುಡಾಗಿ ಗಮ್ಯ ತಲುಪಿದ್ದು ಇರಲಾರದು
ನಗುವ ಜೀವ ಘಮವ ಹಂಚುವುದ ಮರೆಯುವುದಿಲ್ಲ/

ಆಡಿಕೊಳ್ಳುವವರ ಮಾತಿಗೆ ಕಣ್ಣೀರು ಎಂದಿಗೂ ವ್ಯರ್ಥವೇ
ತೆರೆ ಅಂತರಂಗದ ಚೀಲವ, ಖುಷಿ ಇರಿಸುವುದ ಮರೆಯುವುದಿಲ್ಲ/

ಕ್ಷಿತಿಜದ ಅಂಚಲ್ಲಿ ಹುಟ್ಟು ಸಾವು ಎರಡೂ ಕಾಣಬಹುದು”ಸ್ಮಿತ”
ಪ್ರತಿ ಬೆಳಗೂ ಹೊಸ ಚೆಲುವ ಚೆಲ್ಲುವುದ ಮರೆಯುವುದಿಲ್ಲ/

ಸ್ಮಿತಾ ಭಟ್


ಈ ಬದುಕು ಖಾಲಿಯೆನಿಸಿದರೂ ಮುನ್ನಡೆಯಲು ಮರೆಯುವುದಿಲ್ಲ
ದಿನ ಹಾಗೆ ಉರುಳಿದರೂ ನಾಳೆಯ ಸ್ವಾಗತಿಸಲು ಮರೆಯುವುದಿಲ್ಲ

ಬಯಕೆಯ ಹೆಮ್ಮರವೊಂದು ಸುಳಿಗಾಳಿಗುರುಳಿ ಬಿದ್ದರೇನು
ಎಂದೊ ಬಲಿತ ಬೀಜವೊಂದು ಬೇರೂರಲು ಮರೆಯುವುದಿಲ್ಲ

ಜತನದಲಿ ಕಾಯ್ದ ಹೂಗಿಡದಂತ ಬಂಧ ಬಾಡಿ ಹೋದರೇನು
ಕಾಡ ಮಲ್ಲಿಗೆಯಂಥ ಜೀವ ಕಂಪೆರೆಯಲು ಮರೆಯುವುದಿಲ್ಲ

ನಂಬಿದ್ದೆಲ್ಲವೂ ಭ್ರಮೆಯಾಯಿತೆಂದು ಮರುಗುತ್ತಿತ್ತು ಮನವು
ಕೊನೆಗೆ ಅಂತರಂಗದ ಅರಿವು ಕಣ್ತರೆಯಲು ಮರೆಯುವುದಿಲ್ಲ

ನಿರೀಕ್ಷೆಯ ಬಾಗಿಲುಗಳು ಒಂದೊಂದಾಗಿ ಮುಚ್ಚಿಹೋದರೇನು
ಕನಸು ಹಿರಿಯ ಹೆಜ್ಜೆ ಗುರುತುಗಳ ಅನುಸರಿಸಲು ಮರೆಯುವುದಿಲ್ಲ

ಮನದ ಗೋರಿಯಲಿ ಅದೆಷ್ಟೋ ಸಂಗತಿಗಳು ಮಣ್ಣಾದವು ‘ರೇಖೆ’
ಸುತ್ತಲೂ ಭರವಸೆಯ ಬಳ್ಳಿ ಹಬ್ಬಿ ಹಸಿರಾಗಲು ಮರೆಯುವುದಿಲ್ಲ

ರೇಖಾ ಭಟ್

********

5 thoughts on “

Leave a Reply

Back To Top