ಅಂಕಣ ಬರಹ

ದೀಪದ ನುಡಿ

*ಗೆಲುವವರೆಗೂ ಹೋರಾಡಬೇಕಿದೆ* ….

Girl, Mountain, View, Activity

ಎಲ್ಲಿ ಕಾದಿತ್ತೋ ಈ ಕೊರೋನಾ ಎಂಬ ಕಾಯಿಲೆ ಮನುಕುಲಕ್ಕಾಗಿ. ಮುಖ ಮರೆಮಾಚಿ , ಶುದ್ಧಗಾಳಿ ಉಸಿರಾಡದಂತೆ ಕಟ್ಟಿಹಾಕಿ ದೂರ …ದೂರ….ಎನ್ನುವ ಜಪ ಕಲಿಸಿಬಿಟ್ಟಿತಲ್ಲ..ಹಾಗೇ ಅದೆಷ್ಟು ಮನೆಗಳಲ್ಲಿ ಸಾವಿನ ಮೀರವ ಮೌನವನ್ನು ಹಬ್ಬಿಸಿದೆಯೊ..ಮೊದಲ ಅಲೆ, ಎರಡನೆ …ಬರಲಿರುವ ಮೂರನೆ ಅಲೆ…

       ಕಣ್ಣ ಮುಂದೆ ಗಟ್ಟಿಮುಟ್ಟಾಗಿ ಓಡಾಡಿಕೊಂಡಿದ್ದ ಆಪ್ತ ಜೀವಗಳು, ಆಧಾರ ಸ್ತಂಭಗಳು ನೋಡ ಮೋಡುತ್ತಿದ್ದಂತೆಯೇ ಮರೆಯಾಗುವ ಈ ಪರಿ ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ.ಮನೆಯ ಸದಸ್ಯರೆಲ್ಲ ಕೊರೊನಾದ ಸುಳಿಯಲ್ಲಿ ಕೊಚ್ಚಿಹೋಗಿ ಒಬ್ಬರೊ ಇಬ್ಬರೊ ಉಳಿದಿದ್ದರೆ ಅವರ ಮನಸ್ಥಿತಿ ಹೇಗಾಗಿರಬಹುದು.ಅಕ್ಷರಶಃ ಸಾವಿನ , ಆತಂಕದ ರೌದ್ರತೆಗೆ ನಾವೆಲ್ಲ ಸಾಕ್ಷಿಯಾಗಿಬಿಟ್ಟಿದ್ದೇವೆ…ಬೀದಿಗೆ ಬಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಪರೀಕ್ಷೆಯಲ್ಲಿ ಪರಿತಪಿಸುತ್ತಿರುವ ಜನ.

             ಕುಣಿದು ಕುಪ್ಪಳಿಸುತ್ತ ನಲಿಯಬೇಕಿದ್ದ ಕಲಿಯಬೇಕಿದ್ದ ಮಕ್ಕಳು ಮಂಕಾಗಿ ಮೂಲೆ ಹಿಡಿದಿವೆ.ಮಧ್ಯಾಹ್ನದ ಬಿಸಿಯೂಟವನ್ನೇ ಅವಲಂಬಿಸಿದ್ದ ಅದೆಷ್ಟೋ ಮಕ್ಕಳು ಹಸಿವೆಯಿಂದ ಪರಿತಪಿಸುತ್ತ ಶಾಲೆ ಎಂದು ಆರಂಭ ? ಎಂದು ಕಾಯುತ್ತಿವೆ.ಪುಸ್ತಕಪೆನ್ನು ಹಿಡಿಯಬೇಕಾದ ಕೈಗಳು ಕೂಲಿ ಜಡ್ಡುಗಟ್ಟಿಹೋಗಿವೆ.ಅನುಕೂಲಸ್ಥರ ಮಕ್ಕಳು ಮೊಬೈಲ್, ಇಂಟರ್ನೆಟ್ ಎಂದು ತಮ್ಮದೆ ಪ್ರಪಂಚದಲ್ಲಿ ಮುಳುಗಿಹೋಗಿದ್ದಾರೆ ..

      ಮನುಷ್ಯನಿಗಿದ್ದ ಅದರಲ್ಲೂ ಹೆಣ್ಣುಗಳಿಗೆ ಸೌಂದರ್ಯದ ಬಗ್ಗೆ ಇದ್ದ ಖುಷಿ ,ಹೆಮ್ಮೆ ,ಅಹಂ ..ಇವುಗಳೂ ದೂರ …ದೂರ …ಸಾಗಿ ಮಾಸ್ಕ್ ನಿಂದ , ಮುಖ ಕವಚದಿಂದ ಮುಚ್ಚಿದ ಮುಖಗಳೇ ಸುತ್ತ ಮುತ್ತ ಕಾಣುವಂತೆ ಸಂದರ್ಭ ನಿರ್ಮಾಣವಾಗಿಬಿಟ್ಟಿತಲ್ಲ!!

               ಏನೆಲ್ಲ ಬದಲಿಬಿಟ್ಟಿದೆ ಈ ಕೊರೊನಾ ಎಂಬ ಮೂರಕ್ಷರದ ವ್ಯಾಧಿ!!ಅಕ್ಕ ಪಕ್ಕದ ಮನೆಗಳಿಗೆ ಹೋಗದಂತೆ ನಮ್ಮ ನಮ್ಮ ಮನೆಯ ಗೋಡೆಗಳೊಳಗೇ ಬಂಧಿಸಿದೆ.ಕೆಲಸ ಎಂದು ದಿನವೂ ಹೊರಗೆ ಹೋಗಿ ಬರುವವರು ಅಕ್ಕ ಪಕ್ಕದವರ ,ಮನೆ ಓನರ್ ಗಳ ಆತಂಕದ ದೃಷ್ಟಿಯನ್ನೆದುರಿಸಿಯೇ ಓಡಾಡಬೇಕು.

        ತರಕಾರಿ ಎಲ್ಲಿ ತರುವುದು? ಉಪ್ಪು ನೀರಲ್ಲಿ ತೊಳೆದರಾಯ್ತೆ? ವಿನೆಗರ್ ಹಾಕಿ ತೊಳೆವುದಾ? ಅಥವಾ ಡೆಟಾಲ್ ನೀರಿನಲ್ಲಿ?? ಉಹೂಂ ವಾಸನೆ …ತಿನ್ನುವುದು ಹೇಗೆ? ಇವಾವುದೂ ಬೇಡ ಹಿತ್ತಿಲ ಕಟ್ಟೆಯ ಮೇಲೋ ಹಿತ್ತಿಲಿಲ್ಲದಿದ್ದರೆ ಅಡುಗೆ ಕಟ್ಟೆಯ ಒಂದು ಮೂಲೆಯಲ್ಲೋ ಇಡೀ ದಿನ ಇಟ್ಟು ಮುಂದಿನ ದಿನ ಬಳಸುವುದೇ ಸರಿ ಅನ್ನುವ ತೀರ್ಮಾನಕ್ಕೆ ಬರುವ ಹೊತ್ತಿಗೆ ತಲೆ ಧಿಂ ಅಂದಿರುತ್ತದೆ. 

            ಕೊರೋನಾಕ್ಕೆ ಹೆದರುವುದು ಬೇಕಿಲ್ಲ ..ತೊಂಭತ್ತು ಪರ್ಸೆಂಟ್ ಜನರಿಗೆ ಚಿಕಿತ್ಸೆಯೇ ಬೇಕಿಲ್ಲ ಅನ್ನುವ ಕೆಲವು ಹೇಳಿಕೆಗಳು ..ಡೆಡ್ಲಿ ವೈರಸ್ ,ಹೆಮ್ಮಾರಿ ರೋಗ ..ಎಂದು ಆತಂಕ ಹುಟ್ಟಿಸುವ ಕೂಗಾಟಗಳು….ನಮ್ಮಂತ ಸಾಮಾನ್ಯರು ಯಾವುದನ್ನು ನಂಬುವುದು? ದಿನಕ್ಕೊಂದು ಹೊಸ ಅವತಾರ ಹೊಸ ಹೆಸರು..ಹೊಸ ಭೀತಿ

             ಅಯ್ಯೋ ..ನೋಟು ಮುಟ್ಟಿದ ಕೈ ಸ್ಯಾನಿಟೈಸರ್ ಹಾಕಿ ತೊಳೆದೆನಾ?? ಆ ವ್ಯಾನಿಟಿ ಬ್ಯಾಗ್ ಹೊರಗೆ ತೆಗೆದುಕೊಂಡು ಹೋದದ್ದು ಅಲ್ಲೇ ಇರಲಿ ..ಬೇಕರಿಯಿಂದ ತಂದ ಬಿಸ್ಕೆಟ್ಟಾ?  ಬೇಡವೇ ಬೇಡ ! ಅಲ್ಲಿ ..ಆ ಬಿ ಎಮ್ ಟಿ ಸಿ ಲಿ ನೋಡಿದರೆ ಒಬ್ಬರೋ ಇಬ್ಬರೋ…ಆಟೋ ಹತ್ತುವುದಾ ?

               ಅರೆ …ಇವರು ಊರಿಗೆ ಹೋಗಿ ಬಂದಿದಾರೆ .ಏನಾಗಿದೆಯೋ…

                ಈ ವರ್ಷ ಮಗನ / ಮಗಳ ಎಜುಕೇಷನ್ ಮುಗಿದು ಮುಂದಿನ ವರ್ಷ ಕೆಲಸ ಸಿಕ್ಕು ನಾವೆಲ್ಲ ಸೆಟಲ್ ಆಗುವ ಕನಸು ಕಂಡಿದ್ದು ವೇಸ್ಟ್ …ಈ ವರ್ಷ ಯಾವಾಗ ಮುಗಿಯುತ್ತೋ…? ಇಲ್ಲ ಈ ವರ್ಷ ಯಾರಿಗೂ ಮನೆ ಬಾಡಿಗೆ ಕೊಡುವುದಿಲ್ಲ ಖಾಲಿ ಇದ್ದರೂ ಸರಿ…ಬೇಡ ಕೆಲಸದವರು ಸದ್ಯಕ್ಕೆ ಮನೆಯೊಳಗೆ ಬರುವುದು … ಎಂದು ಯೋಚಿಸುವ ಜನರ ಗುಂಪು ಒಂದೆಡೆ …

              ದಿನಗೂಲಿ ಸಿಗದೆ , ಮುಂಚಿನಂತೆ ವ್ಯಾಪಾರ ವಹಿವಾಟುಗಳಾಗದೆ ಎರಡು ಹೊತ್ತಿನ ಊಟಕ್ಕೆ ಪರದಾಡುವ ಜನರೊಂದೆಡೆ…

        ಏ ..ಕೊರೊನಾ ಅಂತೆ ಕೊರೋನಾ ..ಬಿಡಿ ಅತ್ಲಾಗೆ ..ನಮ್ಮ ಹಣೇಲಿ ಬರೆದಿದ್ರೆ ಯಾರೂ ತಪ್ಪಿಸಕ್ಕಾಗಲ್ಲ ಅನ್ನುವ ವೇದಾಂತ ಹೇಳುತ್ತಾ   ರಸ್ತೆ ಬದಿ ಅಂಗಡಿಗಳು,ಬೇಕರಿಗಳಲ್ಲಿ ಗುಂಪುಗಟ್ಟಿ ಪಫ್, ಸ್ಯಾಂಡ್ ವಿಚ್ , ಬೋಂಡ ,ಬಜ್ಜಿ…….ತಿನ್ನುವ ಜನರ ಗುಂಪು ಇನ್ನೊದೆಡೆ   ಸದ್ಯಕ್ಕೆ ಊರಿಗೆ  ಬರೋದು ಬೇಡ …ಎಂದು ಭಾರವಾದ ಧ್ವನಿಯಲ್ಲಿ ಮಕ್ಕಳಿಗೆ ,ತಾಯ್ತಂದೆಗೆ ,ಗಂಡನಿಗೆ ,ಹೆಂಡತಿಗೆ , ಸೋದರ ಸೋದರಿಯರಿಗೆ ಹೇಳುವ ಇದ್ದಲ್ಲೇ ಚೆನ್ನಾಗಿರಲಿ ಎಂದು ಪ್ರಾರ್ಥಿಸುವ ತೋಯ್ದ ಮನಸುಗಳು..

           ಸೋಂಕು ತಗುಲಿದವರ ಮನೆಯವರ ಪರಿಸ್ಥಿತಿ ,ಮಾನಸಿಕ ತೊಳಲಾಟ, ಆರ್ಥಿಕ ಅಸಹಾಯಕತೆ …ಅಸಹಾಯ ಪರಿಸ್ಥಿತಿಯಲ್ಲಿ ಪ್ರೀತಿ ಪಾತ್ರರಿಂದ ದೂರವಾಗಿ ಕೋವಿಡ್ ಆಸ್ಪತ್ರೆಯಲ್ಲಿ ಒರಗಿರುವ ಜೀವಗಳು….ಅಬ್ಬಾ….

          ಜೀವ ಒತ್ತೆಯಿಟ್ಟು ಕಣಕ್ಕಿಳಿದು ಹೋರಾಡುತ್ತಿರುವ ವೈದ್ಯರು ,ವೈದ್ಯಕೀಯ ಸಿಬ್ಬಂದಿ, ಆರಕ್ಷಕ ಇಲಾಖೆ, ಕೈಜೋಡಿಸಿರುವ ಆಶಾ ಕಾರ್ಯಕರ್ತೆಯರು , ಸ್ವಯಂ ಸೇವಕರು , ಉದಾರ ಹೃದಯಿಗಳು ,ಶಿಕ್ಷಕರು….ಯಾರ್ಯಾರ ನೆನೆಯುವುದು , ವಂದಿಸುವುದು?

            ಎಲ್ಲ ನೋಡುತ್ತಾ , ಅವಿಶ್ರಾಂತವಾಗಿ ದುಡಿಯುತ್ತ ಜನರ ರಕ್ಷಣೆಗೆ ಕ್ರಮಗಳ ತೆಗೆದುಕೊಳ್ಳುತ್ತಿರುವ ಸರ್ಕಾರ , ಸರ್ಕಾರ ನಮ್ಮದೇ ಸುರಕ್ಷತೆಗಾಗಿ ಮಾಡಿರುವ ನಿಯಮಗಳನ್ನು ಅಸಹಾಯಕತೆಯಿಂದಲೋ ,ಅನಿವಾರ್ಯತೆಯಿಂದಲೋ ಅಥವಾ ಅಹಂಕಾರದಿಂದಲೋ ಪಾಲಿಸದೇ ಸೋಂಕು ಹೆಚ್ಚಾಗಲು ಕಾರಣವಾಗುತ್ತಿರುವ ಜನಸಮೂಹ..ಇವೆರಡರ ನಡುವೆ ಇಂತಹಾ ಸ್ಥಿತಿಯಲ್ಲಿಯೂ ಕೆಸರೆರಚುತ್ತಾ ಸಂಭ್ರಮಿಸುವ ಮನಸ್ಥಿತಿಗಳು …

         ನಿಜ , ಬದುಕು ಅನಿಶ್ಚಿತವಾಗೇ ಇತ್ತು..ಹುಟ್ಟಿನಿಂದ ಸಾವು ಹೆಗಲೇರಿಯೇ ಇತ್ತು..ಆದರೆ ಅದು ಸ್ವೀಕೃತ ಸತ್ಯವಾಗಿತ್ತು.ಆದರೆ ಈ ಕೊರೊನಾ? ಬದುಕಿನ ಅನಿಶ್ಚಯತೆಯನ್ನ ಇನ್ನಷ್ಟು ಹೆಚ್ಚಿಸಿದೆ ..ಏನು ಬಂದು ಸತ್ತರೂ ಪರವಾಗಿಲ್ಲ ಕೊರೊನಾ ಬಂದು ಸಾಯಬಾರದು ಕಣ್ರೀ…ಮನೆಯವರ್ಯಾರೂ ಮುಖ ನೋಡೋ ಹಾಗಿಲ್ಲ… ಅನ್ನುವ ಸಹೋದ್ಯೋಗಿಯ ಮಾತು ಶಾಕಿಂಗ್ ಅನಿಸುವುದೇ  ಇಲ್ಲ.

ಇತ್ತ …ಸಾಯುವವನೂ   ಒಂಟಿ..ಕೊನೆಯಾಸೆ ಹೇಳದೆ  ಒಂಟಿ ಪ್ರೀತಿ ಪಾತ್ರರ ಕೊನೆಗೊಮ್ಮೆ ನೋಡದೆ ಉಸಿರ ಚೆಲ್ಲುವ ಅನಾಥ ..ಕಳೆದುಕೊಂಡವರೂ ಕಳೆದುಕೊಂಡವರೂ ಅಳಬೇಕೊ ಅಥವಾ ಮನೆಯಲ್ಲಿ ಮತ್ತಾರಿಗೆ ಅಥವಾ ತಮಗೇ ಸೋಂಕು ತಗುಲಿತೋ ಎಂದು ಆತಂಕ ಪಡಬೇಕೊ ಎಂದು ತಿಳಿಯದ ಅಯೋಮಯ ಸ್ಥಿತಿ.

          ಬಹಳಷ್ಟು ಜನ ಹುಷಾರಾಗ್ತ ಇದಾರೆ ಅನ್ನುವ ಸುದ್ದಿ ಕಿವಿಗೆ ಬಿದ್ದಾಗ, ಸೋಂಕಿನ ಪ್ರಮಾಣ ಕಡಿಮೆಯಾಗುತಗತಿದೆ ಎನ್ನುವ ಸುದ್ದಿ ಕೇಳಿದಾಗ ಸಮಾಧಾನದ ನಿಟ್ಟುಸಿರು!  , ಕಳೆದ ವರ್ಷವೆಲ್ಲಾ ಔಷಧವೇ ಇಲ್ಲದ ರೋಗ ಎಂದು ಹಬ್ಬಿದ್ದ ಭೀತಿ ತಗ್ಗುತ್ತಿದೆ.ವಿಜ್ಞಾನಿಗಳ ,ವೈದ್ಯರ  ಅದಮ್ಯ ಪರಿಶ್ರಮದಿಂದ  ಇಂದು ಲಸಿಕೆಗಳು ನಮ್ಮ ರಕ್ಷಾ ಕವಚವಾಗಿ ಬಂದಿವೆ.ಲಸಿಕೆಯ ರಕ್ಷಾಕವಚದ ಬಗ್ಗೆ ಕೆಲವರಿಗೆ ಅದಮ್ಯ ವಿಶ್ವಾಸ , ಕೆಲವರಿಗೆ ಭೀತಿ, ಅನುಮಾನ ಇನ್ಮೂ ಕೆಲವರಿಗೆ ಅತಿರೇಕವೆನಿಸುವಷ್ಟು ಉದಾಸೀನ….

     ಬುದ್ದಿ ತಿಳಿದಾಗಿನಿಂದ ಕಂಡ ಜಗತ್ತು ,ಬದುಕಿನ ಶೈಲಿ ನಂಬಲಾಗದಷ್ಟು ಬದಲಾಗಿಬಿಟ್ಟಿರುವ ಈ ಸಂದರ್ಭದಲ್ಲಿ ಅರಿವಿನ ಗಾಂಭೀರ್ಯವೊಂದೇ ನಮ್ಮನ್ನು ಕಾಪಾಡುವುದು ಎನ್ನುವುದಂತೂ ಸತ್ಯ….ಉದಾಸೀನತೆ ಸಲ್ಲದು.ಯಾವುದೇ ಕ್ಷಣ ಮೈಮರೆವ ಮುನ್ನ ಇದುವರೆಗೂ ಕಣ್ಣಿಗೆ ಕಾಣದ ಮೈರಾಣುವೊಂದು  ಸೃಷ್ಟಿಸಿರುವ ಅನಾಹುತಗಳ ನೆನೆಯಬೇಕಿದೆ.

ನಮ್ಮ ಜೊತೆಜೊತೆಗೇ ನಮ್ಮವರ ಬದುಕಿನ ಜವಾಬ್ದಾರಿಯೂ  ನಮ್ಮ ಹೆಗಲಮೇಲಿದೆ ಎಂಬ ಸತ್ಯ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.ಲಸಿಕೆ ಪಡೆಯೋಣ.ಉದಾಸೀನ ಮಾಡುವವರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿಸೋಣ.

           ಹೇ ಕೊರೋನಾ… ನಿಜಕ್ಕೂ ನೀನು ಈ ಜಗತ್ತಿನ ರೀತಿ ನೀತಿಗಳನೇ ಬದಲಿಸಿಬಿಟ್ಟೆ!! ಹಾಗೆಂದು ಬೀಗಬೇಡ ..ಮೇಲೇರಿದ  ತಿರುಗಿ ಚಕ್ರ ಕೆಳಗಿಳಿಯಲೇಬೇಕು…ಯುದ್ಧಕ್ಕಿಳಿದವರು ನಾವು ಹಿಮ್ಮೆಟ್ಟುವುದಿಲ್ಲ…ಹಿಮ್ಮೆಟ್ಟಲಾಗುವುದೂ ಇಲ್ಲ.

         ಹೇ ವೈರಾಣುವೇ ನೀನು ನಮ್ಮೆಲ್ಲರ ಬದುಕಿನಲ್ಲಿ ಸೃಷ್ಟಿಸಿರುವ ಈ ಅಂಧಕಾರ ಶಾಶ್ವತವಲ್ಲ.ನಾವು ಗೆಲ್ಲುತ್ತೇವೆ.

ನಮ್ಮ ಬಳಿ ಈಗ ಲಸಿಕೆಯೆಂಬ ಬ್ರಹ್ಮಾಸ್ತ್ರವಿದೆ..ಈ ಬ್ರಹ್ಮಾಸ್ತ್ರ ಪ್ರತಿಯೊಬ್ಬರ ಕೈ ತಲುಪುವಂತೆ ನಾವೆಲ್ಲರೂ ಶ್ರಮಿಸುತ್ತೇವೆ.

ಮನೆ ಮನೆಯಲ್ಲಿ ಈ ಬಗ್ಗೆ ಅರಿವಿನ ದೀಪ ಹಚ್ಚುತ್ತವೆ.

 *ಮತ್ತೆ ಒಂದು ದಿನ ನಾವೆಲ್ಲ …ಉಸಿರಾಡುತ್ತೇವೆ ..ನಿರಾಳವಾಗಿ…ನಮ್ಮ ನಮ್ಮ ಅಸ್ತಿತ್ವಗಳ , ಗುರುತುಗಳ ಮರಳಿ ಪಡೆದೇ ಪಡೆಯುತ್ತೇವೆ ….ಈ ಯುದ್ಧ ನಿಲ್ಲದು …ನಾವು ಗೆಲುವವರೆಗೂ* …

******

             ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

Leave a Reply

Back To Top