ಪುಸ್ತಕ ಪರಿಚಯ
ತ್ರಿದಳ
ಶ್ರೀಮತಿ ವಾಸಂತಿ ಮೇಳೆದ ಅವರು ತಮ್ಮ ಅನುಭವದ ವಾಣಿಗಳಿಗೆ ಸಾಹಿತ್ಯದ ಮಾಸೆಯೊಳಗೆ ತ್ರಿಪದಿಗಳೆಂದು ಎರಕ ಹೊಯ್ದ ಕವನ ಸಂಕಲನಕ್ಕೆ ತ್ರಿದಳವೆಂದು ನಾಮಕರಣ ಮಾಡಿದ್ದಾರೆ. ತ್ರಿಪದಿಗಳ ಸಾಹಿತ್ಯ ಸಾಲಿಗೆ ತಮ್ಮಕೊಡುಗೆಯನ್ನು ನೀಡಿದ್ದಾರೆ.೧೮೦ ತ್ರಿಪದಿಗಳನ್ನೊಳಗೊಂಡ ಸಂಕಲನವು ಜೀವನಾನುಭವದಲ್ಲಿ ಅರಳಿ ಜಾನಪದ ಸಾಹಿತ್ಯದ ಸೊಗಡಿನಿಂದ ಪ್ರಭಾವಿತವಾಗಿದೆ. ಪ್ರಾಸಬದ್ದವಾಗಿಒಡಮೂಡಿ ಆಡುಮಾತುಗಳು ನೀತಿ ಭೋದಕವಾಗಿ ತ್ರಿಪದಗಳಲ್ಲಿ ಮೂಡಿಬಂದಿವೆ. ಸಮಾಜದಲ್ಲಿ ಹೆಣ್ಣಿನ ಮಹತ್ವ ,ಅವಳ ಅಸ್ತಿತ್ವವನ್ನು ಸಾರುವ ವಿಷಯವಸ್ತುವನ್ನುತಮ್ಮ ತ್ರಿಪದಗಳಲ್ಲಿ ಚಿಕ್ಕದಾಗಿಚೊಕ್ಕದಾಗಿ ಹಿಡಿದಿಟ್ಟಿದ್ದಾರೆ.
ಇಂದಿನ ನಾರಿ ಕಣ್ಣಕಟ್ಟಿದಗಾಣದೆತ್ತಲ್ಲ/
ಹೆಗಲಿಗೆ ಹೆಗಲುಕೊಟ್ಟು ನಡೆದಿಹಳು// ಗೆಳತಿ
ಅನ್ಯಾಯಕೆದ್ವನಿಯಾಗಿ ನಿಂತಿಹಳು//.
ನಲ್ಲ ನಾನಲ್ಲ ನಿನ್ನ ಗುಲಾಮ/
ನಾ ಕೊಟ್ಟಿಲ್ಲ ನಿನ್ನ ಕೈಗೆ ಲಗಾಮ//ಯಜಮಾನ
ನಮ್ಮ ಬಾಳಿಗೆ ನಾವಿಬ್ಬರು ಮಲಾಮ.//
ಎನ್ನುವ ತ್ರಿಪದಿಯು ಹೆಣ್ಣಿನ ಸಮಾನತೆಯನ್ನು ಮತ್ತುಕುಟುಂಬ
ಸಮಾಜದಲ್ಲಿ ಹೆಣ್ಣಿನ ಸಹಬಾಳ್ವೆಯನ್ನು ಸಾರುತ್ತವೆ.
ಪರಿಸರದ ಇಂದಿನ ಹಲವಾರು ಸಮಸ್ಯೆಗಳಿಗೆ ಕವಯಿತ್ರಿ ಮನ ಮಿಡಿಯುವುದರ ಜೊತೆಗೆ ಪರಿಸರ ಪ್ರೇಮವನ್ನು ತಮ್ಮ ತ್ರಿಪದಿಗಳಲ್ಲಿ ವ್ಯಕ್ತಪಡಿಸಿದ್ದಾರೆ.
ತವರಿನದರ್ಯಾಗ ಸಾಲು
ಮರಗಳು ಇರಲಿ/
ತವರಿಗೆಕ್ಷಾಮ ಬರದಿರಲಿ// ಓ ಶಿವನೆ
ತವರಕಡೆಗೆ ಹೊಳೆ ಹರಿಯಲಿ./
ತವರು ಮನೆಗೆ ಹೆಣ್ಣುಮಗಳ ಕೊಡುವ ಹಾರೈಕೆಯಲ್ಲಿನ ಜಾಣತನವನ್ನು ನೋಡಬಹುದು. ಸಾಲುಮರಗಳಿದ್ದರೆ ಕ್ಷಾಮ ತಾನಾಗೆಯ ದೂರವಾಗುತ್ತದೆ. ಕ್ಷಾಮ ದೂರವಾದರೆ ಹೊಳೆ ಬತ್ತುವುದಿಲ್ಲ ತವರು ಯಾವಾಗಲೂ ಹಸಿರಾಗಿರುತ್ತದೆ ಎನ್ನುವ ಆಶಯ ಒಡಮೂಡಿಬಂದಿದೆ
ತಾಯಿಯ ಹಾಲಾಗ ನಂಜ ಬೆರೆತರ/
ಗಂಜ್ಯಾಗ ಎಲ್ಲೇದ ಎದೆಯೊಳ ಮಾಯ//ಗೆಳತಿ
ಹಿಡಿದ ಟೊಂಗಿಯ ಗಿಡಕಡಿದಂಗ.//
ಎನ್ನುವ ಸಾಲುಗಳು ಪರಿಸರ ಮಾಲಿನ್ಯದಿಂದಾಗಿ ಇಂದು ತಾಯಿ ಎದೆ ಹಾಲು ನಂಜಾಗಿರುವ ನೋವನ್ನುತೋಡಿಕೊಂಡಿದ್ದಾರೆ.ಕೌಟುಂಬಿಕ ಸಂಬಂಧಗಳ ಜಾಲದಲ್ಲಿರುವ ಅತ್ತೆ ಸೊಸೆ ಅಪ್ಪ ಅವ್ವ ಅಕ್ಕ ತಂಗಿ ನಾದಿನಿ ವೋರಗಿತ್ತಿಯ ಅನುಬಂಧವನ್ನು ತ್ರಿಪದಿಗಳಲ್ಲಿ ಮನೋಜ್ಞವಾಗಿ ಮೂಡಿಬಂದಿವೆ.
ನಡೆಯುವ ಕಾಲಕ್ಕೆ ನಡೆಸಿಕೊಂಡವರೆಂದು/
ಅಡಿಗಡಿಗೆ ನೀ ನುಡಿಬೇಡ ,//ಮಗಳೆ
ನಡಗುವ ಜೀವ ಕಾಡಬೇಡ.//
ಎಂದು ಹೇಳುವ ತ್ರಿಪದಿಗಳ ಸಾಲಿನಲ್ಲಿ ಮಾನವೀಯ ಮೌಲ್ಯಗಳು ಓದುಗರ ಮನಸ್ಸಿನಾಳಕ್ಕಿಳಿಯುತ್ತವೆ
ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಹೆಣ್ಣಿಗೆ ಶಿಕ್ಷಣವೇ ಮೆಟ್ಟಿಲಿನಂತೆಎನ್ನುವ ಮಾತುಗಳಲ್ಲಿ ಮಹಿಳಾ ಶಿಕ್ಷಣದ ಕಳಕಳಿಯನ್ನು ಕಾಣಬಹುದು.
ಸಾಲಿಯ ಬಿಡಿಸಿ ಒಲಿಮುಂದ ಕೂರಿಸಿ/
ಬಾಲಿಗ್ಯಾಕ ಸಾಲಿ ಅನಬೇಡ/ಅಣ್ಣಯ್ಯ
ಕಲಿತರ ಬಾಲಿ ತೆಗೆದಂಗ ಸಾಲಿ//
ಎನ್ನುವ ತ್ರಿಪದಿಯಲ್ಲಿ ಹೆಣ್ಣಿನ ಸಾಮರ್ಥ್ಯಗಳನ್ನು ಅಡಿಗೆ ಮನೆಗೆ ಸೀಮಿತ ಮಾಡಿದೆ ಶಿಕ್ಷಣ ಕೊಡಿಸಿದರೆ ಅವಳು ಇಡಿ ಕುಟುಂಬವನ್ನೆ ಸುಶಿಕ್ಷಿತವಾಗಿ ಮಾಡುತ್ತಾಳೆ ಎನ್ನುವ ಆಶಯ ವ್ಯಕ್ತವಾಗುತ್ತದೆ.
ಕಲಿತರ ಸಾಲಿ ಆಗುವಿ ದೇವರ ಕೊರಳಿನ ಮಾಲಿ/
ಕಲಿಯದಿದ್ದರಾಗುವಿ ತೋಟಕಾಯೋ ಮಾಲಿ//ತಂಗೆವ್ವ
ಕಲಿತು ಸಾಲಿ ಆಗು ಸಾಕ್ಷರತೆಯ ಸಾರುವ ಕಲಿ//
ಎಂದು ಮಹಿಳೆಯರನ್ನು ಸಾಕ್ಷರರನ್ನಾಗಿಸಲು ಪ್ರೇರೇಪಿಸುವ ಕವಯಿತ್ರಿಯ ತ್ರಿಪದಿಯ ಸಾಲುಗಳು ಮಹಿಳಾ ಶಿಕ್ಷಣದ ಜಾಗೃತೆಯನ್ನು ಸಾರುತ್ತವೆ. ಜೀವನದ ವಾಸ್ತವ ಸತ್ಯಗಳನ್ನು ಸಾರುವ ತ್ರಿಪದಿಗಳು ತುಂಬಾ ಮಾರ್ಮಿಕವಾಗಿವೆ. ೭೦ ವರ್ಷದ ವಸಂತದಲ್ಲಿ ಜೀವನಾನುಭವದ ಅಮೃತ ಬಳ್ಳಿಯಲಿ ಅರಳಿದ ಕಾವ್ಯ ಕುಸುಮಗಳಾಗಿ ಶ್ರೀಮತಿ ವಾಸಂತಿ ಮೇಳೆದ ಅವರ ತ್ರಿದಳ ಸಂಕಲನದಲ್ಲಿ ಮೂಡಿಬಂದಿವೆ.
***************
ಡಾ.ನಿರ್ಮಲಾ ಬಟ್ಟಲ