ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ

ಲೇಖನ

ಕನ್ನಡದ ಸಾಕ್ಷೀಪ್ರಜ್ಞೆ,

ಗಾಂಧಿವಾದಿ ದೊರೆಸ್ವಾಮಿ

ಆರ್.ಜಿ.ಹಳ್ಳಿ ನಾಗರಾಜ

ಕನ್ನಡದ ಸಾಕ್ಷೀಪ್ರಜ್ಞೆಯಂತಿದ್ದು ನಮ್ಮನ್ನಗಲಿದ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಅವರ ಜನಪರ ಕಾಳಜಿ ಬಗ್ಗೆ ಹತ್ತಾರು ನಿದರ್ಶನ ಕೊಡಬಹುದು. ತಕ್ಷಣ ನಾನಿದ್ದ ಕಚೇರಿಯ ಒಂದು ಘಟನೆಯಿಂದ ಅವರನ್ನಿಲ್ಲಿ ನೆನೆಯುತ್ತೇನೆ:

ಅವರಿಗೆ‌ 102 ವರ್ಷವಾಗಿತ್ತು. ಒಂದುದಿನ ಬೆಂಗಳೂರು  ಕೆರೆಗಳ  ಮಾಲಿನ್ಯದ ಬಗ್ಗೆ ಲಿಖಿತ ದೂರು ಕೊಡಲು 3ನೇ‌ ಮಹಡಿಗೆ  ಬಂದರು! ಕಚೇರಿಯಲ್ಲಿ ಇದ್ದವರಿಗೆಲ್ಲ ಆಶ್ಚರ್ಯ ಹಾಗೂ ದಿಗಿಲು. ಅಧ್ಯಕ್ಷರನ್ನು ಕಾಣಬೇಕು,  ಇದ್ದಾರಾ? ಎಂದರು. ಹೊರಗೆ ಸಾಕಷ್ಟು ಜನ ಕಾಯುತ್ತಿದ್ದರು ಈ‌ ಶತಾಯುಷಿಯನ್ನು ಕಂಡ ಸಿಬ್ಬಂದಿ ನೇರವಾಗಿ ಅಧ್ಯಕ್ಷರ ಛೇಂಬರಿಗೆ ಕಳುಹಿಸಿದರು. ಏನೋ ಚರ್ಚೆಯಲ್ಲಿದ್ದ ಅಧ್ಯಕ್ಷರು ಈ ಹಿರಿಯ ಜೀವ‌ ಬಂದದ್ದು ಕಂಡು ಆಶ್ಚರ್ಯವಾಯಿತು. ಕೂಡಲೆ  ಕುರ್ಚಿಯಿಂದ ಎದ್ದುಬಂದು, ಅವರನ್ನು ಬರಮಾಡಿಕೊಂಡು ಕೈ ಹಿಡಿದು ಕುರ್ಚಿಯಲ್ಲಿ ಕೂರಿಸಿದರು.

ಈ ಇಳಿ ವಯಸ್ಸಿನಲ್ಲಿ ದೊರೆಸ್ವಾಮಿ ಅವರೇ ಕಚೇರಿಗೆ ಬಂದಿದ್ದಾರೆಂದರೆ ಏನೋ ದೊಡ್ಡ ಸಮಸ್ಯೆಯೇ ಇರಬೇಕೆಂದುಕೊಂಡ ಅಧ್ಯಕ್ಷರು, “ಸಾರ್ ಇಷ್ಟುದೂರ ನೀವೇಕೆ ಬಂದಿರಿ? ಒಂದು ಫೋನ್ ಮಾಡಿದ್ದರೆ ನಾನೇ ಸಮಸ್ಯೆ ಬಗೆಹರಿಸುತ್ತಿದ್ದೆನಲ್ಲ” ಅಂದರು. ಆಗ ತಾವು ತಂದಿದ್ದ ದೂರನ್ನು ಅಧ್ಯಕ್ಷರಿಗೆ ನೀಡಿದರು. ಅದನ್ನು ಓದಿದ ಅಧ್ಯಕ್ಷರಿಗೆ ಎಲ್ಲಾ ಅರಿವಾಗಿ, ಬೇಗ ನಾನೇ ನಿಂತು ಈ ಸಮಸ್ಯೆ ಬಗೆಹರಿಸಿ ನಿಮ್ಮನ್ನು ಕಾಣುತ್ತೇನೆ” ಅಂದರು.

.

ಈ ಮೇಲಿನ ಘಟನೆ ನಡೆದು ಎರಡೂವರೆ ವರ್ಷವಾಗಿದೆ.  ಸ್ಥಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,  ಚರ್ಚ್ ಸ್ಟ್ರೀಟ್, ಬೆಂಗಳೂರು. ಬರಮಾಡಿಕೊಂಡ ಅಧ್ಯಕ್ಷರು: ಲಕ್ಷ್ಮಣ್.

ಕೆಲವು ನಿಮಿಷ ಅವರು ಬೆಂಗಳೂರು ಕೆರೆಗಳ ಹೂಳು, ಕೊಳಚೆ ನೀರು ಹರಿದು ಕೆರೆ ಒಡಲು ಸೇರುವ‌ ವಿಚಾರ, ಜಲಚರಗಳ ನಾಶ… ಎಲ್ಲಾ ಪ್ರಸ್ತಾಪ ಮಾಡಿದರು.

ನಾನು ಆಗ ಆ ಕಚೇರಿಯಲ್ಲಿ ಮಾಧ್ಯಮ ಸಲಹೆಗಾರ / ಪರಿಸರ ಪತ್ರಿಕೆ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನ ಅಲ್ಲಿ ಕಂಡ ದೊರೆಸ್ವಾಮಿಯವರು ಅನೇಕ‌ ನೆನಪು‌ ಕೆದಕಿ ಮಾತಾಡಿದರು. ಅಧ್ಯಕ್ಷರಿಗೆ ನನ್ನ ಬಗ್ಗೆ ಹೇಳಿದರು. ಆ ವಯಸ್ಸಲ್ಲೂ ಅವರ ನೆನಪಿನ‌ ಶಕ್ತಿಗೆ ಶರಣೆಂದೆ.

ಅಧ್ಯಕ್ಷ ಲಕ್ಷ್ಮಣ್ ಅವರು ದೊರೆಸ್ವಾಮಿ ಅವರ ಕೈ ಹಿಡಿದು, ಮಾತಾಡುತ್ತ  3ನೇ ಮಹಡಿಯಿಂದ ಲಿಪ್ಟಲ್ಲಿ ಕೆಳಗೆ ಕರೆತಂದರು. ನಾನು ಅವರ ಜೊತೆ ಇದ್ದೆ. ಮತ್ತೆ ಬಾಗಿಲಲ್ಲಿ ಮಾತಾಡುತ್ತ ಬೀಳ್ಕೊಟ್ಟೆವು.

**

ದೊರೆಸ್ವಾಮಿ ಅವರಿಗೆ 98 ವಯಸ್ಸಾದಾಗ ವಾರಪತ್ರಿಕೆಯೊಂದಕ್ಕೆ ಸಂದರ್ಶನ ಮಾಡಿ, ಲೇಖನ‌ ಮಾಡಿದ್ದೆ. (ಅದು ನನ್ನ ಹೆದ್ದಾರಿ‌ ಕವಲು ಸಂಕಲನದಲ್ಲಿದೆ.) ಅವರ ಜೊತೆ ಉತ್ತಮ ಸಂಪರ್ಕ ಇತ್ತು. ಅನೇಕ ಧರಣಿಗಳಲ್ಲಿ… ಸ್ವಾತಂತ್ರ್ಯ ಉದ್ಯಾನವನ, ಟೌನ್ ಹಾಲ್, ಗಾಂಧಿ ಪ್ರತಿಮೆ ಎದುರು… ಹೀಗೆ ಹಲವೆಡೆ ಜೊತೆ ಭಾಗವಹಿಸಿದ್ದೇವೆ.

ದೊರೆಸ್ವಾಮಿ ಅವರು‌ ಲೇಖಕರು ಹಾಗೂ ಪ್ರಕಾಶಕರೂ ಆಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ರಚನೆಯಾಗಿ ಒಂದು ದಶಕವೂ ಆಗಿರಲಿಲ್ಲ.‌ ಅದರ ಕಚೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಪುಸ್ತಕ ಮಾರಾಟ ಮಳಿಗೆಯ ಭಾಗದಲ್ಲಿತ್ತು. ಆಗ ಕೆಲವು ನೂನ್ಯತೆಗಳು ತಲೆದೋರಿ, ಲೇಖಕ/ಪ್ರಕಾಶಕರ ಪುಸ್ತಕ ಖರೀದಿಗೆ ಕೊಕ್ಕೆ ಹಾಕಲಾಗಿತ್ತು. ಆ ಸಂದರ್ಭ  ಪ್ರಾಧಿಕಾರದ ವಿರುದ್ಧ ಪ್ರತಿಭಟನೆಯನ್ನು ಕಚೇರಿ ಎದುರೇ ಹಮ್ಮಿಕೊಳ್ಳಲಾಯಿತು. ಪ್ಲೇ ಕಾರ್ಡು ಹಿಡಿದು ದೊರೆಸ್ವಾಮಿ ಮೊದಲು ಕೂತರು. ಅವರ ಜೊತೆ ಎ.ಎಸ್. ಮೂರ್ತಿ, ಡಾ. ವಿಜಯಾ, ಡಾ. ಲಕ್ಷ್ಮಿನಾರಾಯಣಭಟ್ಟ, ಪ್ರೊ. ಎಂ.ಎಚ್. ಕೃಷ್ಣಯ್ಯ, ನಾನು ಮೊದಲ್ಗೊಂಡು ಹತ್ತಾರು ಲೇಖಕರು ಪ್ರತಿಭಟನೆ ಮಾಡಿದೆವು. ಎಚ್ಚೆತ್ತ ಪ್ರಾಧಿಕಾರ ಸರ್ಕಾರದ ಮೊರೆಹೋಗಿ, ತಿಂಗಳಲ್ಲೇ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿತು. ಗೆಲುವಿನ ಇಂಥ ಎಷ್ಟೋ ನಿದರ್ಶನಗಳಿವೆ.

ಅವರದ್ದು ಸದಾ ಜನಪರ ಕಾಳಜಿ. ಭ್ರಷ್ಟಾಚಾರದ ವಿರುದ್ಧ ಮೊದಲ ದನಿ. ಸುಳ್ಳು, ಕಪಟ, ವಂಚನೆ ಅವರಿಗಾಗದು. ಅವರೊಬ್ಬ ನಿಷ್ಠುರವಾದಿ. ಮಾತು ಖಡಕ್. ರಾಜಿಯಾಗದ ಮನಸ್ಸು. ಪ್ರಾಮಾಣಿಕವಾಗಿದ್ದವರ ಜೊತೆ ಅವರ ಸ್ನೇಹ. ಅದರಲ್ಲೂ ಯುವಕರ ಬಗ್ಗೆ ಅಪಾರ ಪ್ರೀತಿ, ಕಾಳಜಿ. ವೇದಿಕೆಯಲ್ಲಿ ನಿಂತು, (ಈಚೆಗೆ ಕುಳಿತು) ಮೈಕ್ ಹಿಡಿದರೆ ನಿರರ್ಗಳವಾಗಿ ಮಾತಾಡುತ್ತ ಭ್ರಷ್ಟರೆಲ್ಲರ ಜಾತಕ ಬಿಚ್ಚಿಡುತ್ತಿದ್ದರು. ಅವರು ಪ್ರತಿದಿನ ಹತ್ತಾರು ಪತ್ರಿಕೆ ಓದುತ್ತಿದ್ದರು. ಪುಸ್ತಕಗಳ ಅಧ್ಯಯನ ಮಾಡುತ್ತಿದ್ದರು.

ಅವರೊಬ್ಬ ನಿಜವಾದ ಪ್ರಜಾಪ್ರಭುತ್ವವಾದಿ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟದಲ್ಲಿ‌ ಭಾಗವಹಿಸಿದವರು. ಭೂಗತರಾಗಿ (ಈಗಿನ ಆಂಧ್ರದ) ಆಧೋನಿಯಿಂದ “ಪ್ರಜಾಧ್ವನಿ” ಎಂಬ ಪತ್ರಿಕೆ ಅಚ್ಚುಹಾಕಿ, ಬ್ರಿಟಿಷರ ವಿರುದ್ಧ ಕಹಳೆ ಊದಿದವರು.

ಅನ್ಯಾಯ ಎಲ್ಲಿ ನಡೆಯುತ್ತೋ ಅಲ್ಲಿ ಅವರ ದನಿ. ಪ್ರತಿಭಟನೆ, ಧರಣಿ ಬಂಧನ, ಜೇಲು ಅವರ ಬದುಕಿನ ಭಾಗವಾಗಿತ್ತು. ಕಿರಿಯ ಹೋರಾಟಗಾರರನ್ನು ಸದಾ ಹುರಿದುಂಬಿಸುತ್ತಿದ್ದ ಹಿರಿಯ ಅಜ್ಜ ಅವರು. ಅವರಿಗೆ ಕರ್ನಾಟಕ ರತ್ನ ನೀಡಿ ಸರ್ಕಾರ ಗೌರವಿಸಬೇಕು ಎಂದು ಸಂದರ್ಶನ‌ ಮಾಡಿದ್ದ ಸಂದರ್ಭದ ಲೇಖನದಲ್ಲಿ ಬರೆದಿದ್ದೆ. ಆದರೆ, ಸರ್ಕಾರಕ್ಕೆ ಅಂಥ ಕಾಳಜಿ ಇರಬೇಕಲ್ಲ?

ಅವರು, ಆಳುವ‌ ಸರ್ಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸಿ, ಅದರ ವಿರುದ್ಧವೇ ಪ್ರತಿಭಟನೆಯ ದನಿ ಎತ್ತುತ್ತಿದ್ದರಿಂದ  ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿತ್ತು.   ಸರ್ಕಾರದ ವಿರುದ್ಧವಾಗೆ ಚಳವಳಿ ನಡೆಸುತ್ತಿದ್ದರಿಂದ ಸಹಜವಾಗೇ ಆಯಾ ಸರ್ಕಾರಗಳಿಗೆ ಅವರು ಅಪಥ್ಯವಾಗಿದ್ದರು.

ಸರಳ‌ ಸಜ್ಜನ ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ಅವರು ಸರ್ಕಾರದ ಯಾವುದೇ ಪ್ರಶಸ್ತಿ, ಗೌರವ, ಸ್ಥಾನಮಾನ ಅಪೇಕ್ಷೆ ಪಡಲಿಲ್ಲ. ಹೀಗಾಗಿ ಅವರು ಸದಾ ನಮ್ಮ ಮನದಲ್ಲಿ ಇರುತ್ತಾರೆ ಹಾಗೂ ಜನಪರ ಚಳವಳಿಗಳಲ್ಲಿ ಜೀವಂತವಾಗಿರುತ್ತಾರೆ ಎಂದು ಭಾವಿಸುವೆ. ಅವರ ನಿಧನಕ್ಕೆ ನನ್ನ ಅಶ್ರುತರ್ಪಣ.

**************

One thought on “ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ

  1. ದೊರೆಸ್ವಾಮಿ ಅವರ ಬದುಕಿನ ಒಂದು ಪುಟವನ್ನೇ ತೆರೆದಿಟ್ಟಿದ್ದೀರಿ

Leave a Reply

Back To Top