ಅಂಕಣ ಬರಹ

ರಂಗ ರಂಗೋಲಿ

ರಂಗದ ಹೊಲದಲಿ

ಕವಿತೆಯ ಬಿತ್ತು

” ನೀವು ಬರೆದಿರೋದು ಕವನ ಹೌದೋ ಅಲ್ವೋ ಎಂಬ ನಿರ್ಣಯ ಓದುಗರಿಗೆ ಬಿಡಿ.

ಹೀಗೆ ಸಿಕ್ಕಿಸಿಕ್ಕಿದ ಡೈರಿ, ಹಳೆಯ ಪುಸ್ತಕ, ತುಂಡು ಪೇಪರಿನಲ್ಲೆಲ್ಲ ಗೀಚಿ ಗೀಚಿ ಇಡ್ತೀರಲ್ವಾ.

ಏನಾಗಿದೆ ನಿಮಗೆ? ಒಂದು ಶಿಸ್ತು ಬೇಡ್ವಾ. ಕಲಾವಿದನಾದವನು ಮೊದಲು ಶಿಸ್ತು ಕಲಿಯಬೇಕು.

ಇದನ್ನೆಲ್ಲ ಒಂದೇ ಕಡೆ ಸೇರಿಸಿ. ನಾಳೆ ನಾನು ನೋಡಬೇಕು

 ಹೀಗೆ ಅವರು ಕಣ್ಣರಳಿಸಿ,ಬಗೆದು ನೋಡುವಂತೆ ಆಡುತ್ತಿದ್ದರೆ, ನನ್ನ ಮನಸ್ಸು, ಆಮೆ ಚಿಪ್ಪಿನೊಳಗಿಂದ ತಲೆ ಮಾತ್ರ ಹೊರಗಿಣುಕಿಸಿ ಕ್ಷಣದಲ್ಲಿ ಇಳಸೆಳೆದು ಬಚ್ಚಿಟ್ಟುಕೊಳ್ಳುವ ಸಾಹಸ ಮಾಡುತ್ತಿತ್ತು.

ಅದು ಸುಮಾರು 2009 ರ ಇಸವಿ. ಬದುಕಿನ ಸಂಕ್ರಮಣ ಕಾಲ. ಹಲವು ಕೌತುಕಗಳನ್ನು, ಹಲವು ತಿರುವುಗಳನ್ನೂ, ಹಲವು ಸಂಕಟಗಳನ್ನೂ, ಸಂಭ್ರಮಗಳನ್ನು ಯಥೇಚ್ಛವಾಗಿ ಸುರಿದುಬಿಟ್ಟಿತ್ತು.

 ಅಲ್ಲಿಯವರೆಗಿನ ಬದುಕಿನ ಹಾದಿ ಒಂದು ಬಗೆಯಾದರೆ ಈಗ ಚಕ್ರವ್ಯೂಹದ ವೃತ್ತದಲ್ಲಿ ಬಂದು ನಿಂತಂತೆ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ. ನಡೆಯುವ ಘಟನೆಗಳಿಗೆ ಸಾಕ್ಷಿಯಾಗಿ. ನಿಜ. ಬದುಕು ನಿಂತ ನೀರಲ್ಲ. ಹಲವು ಪಲ್ಲಟಗಳು, ತಿರುವುಗಳು.

ಮೂಲತಃ, ಕಲಾವಿದರೆಂದರೆ ಭಾವನೆಗಳನ್ನು ಎತ್ತಿ ಮುದ್ದಿಟ್ಟು ಆಟವಾಡುವವರು. ಹಾಗಾಗಿ ಉಳಿದವರಿಗಿಂತ ತುಸು ಹೆಚ್ಚೇ ಭಾವುಕರು. ರಂಗಭೂಮಿ ಉಡುಪಿಯ ನಾಟಕಗಳಲ್ಲಿ ಅಭಿನಯದಿಂದ ಒಂದು ಹೆಜ್ಜೆ ಹಿಂದೆ ಸರಿದಾಗಿತ್ತು. ಇನ್ನು ಸಾಕು ಎಂಬುದು ಬುದ್ದಿ ಕೊಟ್ಡ ತೀರ್ಪು. ಭಾವುಕ ಕನಸಿನ ಹಾದಿ ಹಾಗೇ ಅನಾಥವಾಗಿ ಕಾಯುತ್ತಿತ್ತು. ಯಾವುದೇ ಸ್ಪಷ್ಟತೆಯಿಲ್ಲ. ಕಾಯ ತೊರೆದ ಅತೃಪ್ತ ಆತ್ಮದಂತೆ ಅಲೆದಾಟ. ಕಾಣದ ಬೇಸರ, ಕಾಡುವ ಕನಸುಗಳಿಗೆ ಮುಕ್ತಿ ಕೊಡುವವಳಂತೆ ಅಕ್ಷರಗಳ ಮೊರೆ ಹೋಗಿದ್ದೆ. ವ್ಯವಹಾರದ ಜಗತ್ತು ವ್ಯಸ್ತಳಾಗುವಂತೆ ತನ್ನೊಳಗೆ ಸೇರಿಸಿಕೊಂಡಿತ್ತು.

 ಆಗಾಗ್ಗೆ ರಂಗಭೂಮಿ ಸಂಸ್ಥೆಯ ನಾಟಕಗಳ ರಿಹರ್ಸಲ್ ನೋಡಲು ಹೋಗುವುದು. ತಳಮಳ, ಚಡಪಡಿಕೆ, ಅಸಮಾಧಾನದಂತಹ ಅದೋವುದೋ ಭಾವ ಸಂತೈಸುತ್ತ ನಡೆಯುವುದು. ಇಂತಹ ಸಂದರ್ಭದಲ್ಲೇ ಮಕ್ಕಳ ಶಿಬಿರವನ್ನು ಸಂಸ್ಥೆ ಆಯೋಜಿಸಿತ್ತು. ಅದರಲ್ಲಿ ಬಹಳಷ್ಟು ಕಲಾವಿದರೊಂದಿಗೆ ನನ್ನನ್ನೂ ತೊಡಗಿಸಿಕೊಂಡಿದ್ದೆ.  ಇದು ಸಂಘಟನೆಯ ಕಾರ್ಯ.

 ಶಿಬಿರದ ಕೊನೆಯ ದಿನದ ಅಭ್ಯಾಗತರಾಗಿ ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾರವರನ್ನು ಕರೆಸಲಾಗಿತ್ತು. ರಂಗಭೂಮಿ ಕಲಾವಿದರೊಂದಿಗೆ ಮುಖಾಮುಖಿಯಾಗಿ ಒಂದಷ್ಟು ಮಾತನಾಡಿದವರು

” ನೀವು ಅಭಿನಯಿಸಬೇಕು”

 ಎಂದರು. ಒತ್ತಿಟ್ಟ ಸ್ಪ್ರಿಂಗ್ ಬಿಟ್ಟಾಗ ನೆಗೆಯುವಂತೆ ಮನ ಒಮ್ಮೆಲೇ ನಿಂತಲ್ಲೇ ಕುಪ್ಪಳಿಸಿತ್ತು. ಆದರೂ ನನಗೆ ಇನ್ನು ಕಷ್ಟವಿದು ಎಂಬ ಸತ್ಯ ಅರಗಿಸಿಕೊಂಡವಳಂತೆ ಮೌನವಾಗಿದ್ದೆ.

ಹಸಿರಿನ ಮೇಲೆ ಬಿದ್ದ ಹುಳವೊಂದು ಪರಿವರ್ತನೆಯ ಹಾದಿಯಲ್ಲಿ ಹಸಿರನ್ನುಂಡು  ತನ್ನ ಸುತ್ತ ಕೋಶ ಕಟ್ಟಿ ಬಂಧಿಯಾದಂತೆ. ರಂಗಪ್ರೀತಿ, ಸೆಳೆತ, ರಂಗಸಂಬಂಧಗಳು ನನ್ನ ಸುತ್ತ ರೇಶ್ಮೆಎಳೆಗಳಂತಹಾ ನುಣುಪು ಎಳೆಗಳಾಗಿ ಸುತ್ತಿ ಆ ಸುಂದರ ಚಿನ್ನದ ಬಣ್ಣದ ಗೂಡೊಳಗೆ ಬಂಧಿಯಾಗಿಸಿದ್ದವು ಅಂತ ಅನಿಸುತ್ತಿತ್ತು. ಒಂದು ಮುಕ್ತತೆಗೆ ಜಾಗಬೇಕು. ಮೊಟ್ಟೆಯಿಂದ ಹೊರಬಂದು ರೆಕ್ಕೆಯಗಲಿಸಬೇಕು. ಮಣ್ಣಿನಾಳದಲಿ ಕೊಸರುತಿಹ ಬೀಜ, ಗಟ್ಟಿ ಕವಚ ಬಿರಿದು ಬಂಧ ತೊರೆದು ಮಣ್ಣಿನಿಂದ ಮೊಳಕೆಯಾದಂತೆ ಹೊರಗೆ ಇಣುಕಬೇಕು. ಆದರೆ ಆಳದಲ್ಲಿ ಸ್ಥಾಪನೆಯಾಗಿ ನನ್ನ ಆಳುತಿದ್ದ ಹಿಂಜರಿಕೆ, ಸ್ವಸಂಶಯ ಅಭದ್ರತೆ ಕಟ್ಟಿಹಾಕಿ ಕೂರಿಸಿತ್ತು. ಇಂತಹ ಸಮಯದಲ್ಲಿ ಬಂದ ಚಿನ್ನಾರವರು ನಿದ್ದೆಯಾಳದಲಿ ಮುಳುಗಿದವಳನ್ನು ಎಚ್ಚರಿಸುವಂತೆ

 ” ಏನು ಮೂಲೆ ಹಿಡಿದು ಕೂತಿದ್ದೀರಿ. ಏಳಿ. ನಿಮ್ಮೊಳಗೆ ದೊಡ್ಡದಾದ ಜನರೇಟರ್ ಇದೆ. ಗೊತ್ತಾ ನಿಮಗೆ! ಆದರೆ ನೀವು..? ಜೀರೋ ವೋಲ್ಟೇಜಿನ ಒಂದು ಬಲ್ಬ್ ಮಾತ್ರ ಉರಿಸುತ್ತಿದ್ದೀರಿ.

ನಿಮ್ಮ ಪರಿಚಯ ಮಾಡಿಕೊಳ್ಳಿ. ನಿಜದ ಅಭಿನೇತ್ರಿ ನೀವು. ಅಕ್ಷರಮೋಹೀ ಕವಯತ್ರಿ ನೀವು. ನೂರು ಜನರನ್ನು ಎಚ್ಚರಿಸುವ ಶಕ್ತಿ ಇದ್ದೂ ಕುಸಿದು ಕೂತಿದ್ದೀರಲ್ವಾ.  ನೀವು ಮಾಡಬಲ್ಲಿರಿ. ನಿಮ್ಮಿಂದ ಸಾಧ್ಯ. ರಾಮನಿಗೆ ಸಿಕ್ಕಿದ ಹನುಮಂತ ನೀವು. ಭಜರಂಗಿಗೂ ಶಕ್ತಿಯ ಸಾಧ್ಯತೆಗಳನ್ನು ಜಾಂಬವಂತ ಮಾಡಿಕೊಡಬೇಕಾಯಿತು. ಸಾಗರವನ್ನೇ ಲಂಘಿಸಬಲ್ಲಿರಿ.

ಸಾಮಾನ್ಯಳಾಗಿ ಮಣ್ಣಿನ‌ ಪದರದಲ್ಲಿ ಸಿಕ್ಕಿ ಕೊಂಡ ಪುಟ್ಟ ಕಲ್ಲಿನಂತೆ ಬಿದ್ದವಳನ್ನು ಎಚ್ಚರಿಸಿದ್ದರು. ಕನಸಿನ ಚಿತ್ತಾರಕ್ಕೆ ಕುಸುರಿ ಮಾಡಿದ ಫ್ರೇಮ್ ಕೂರಿಸಿ ತೋರಿಸಿದ್ದರು

ಕಾಲನೆದೆಯಲ್ಲಿ ಮೌನ ಮಾತನಾಡಿಸುತ್ತದೆ. ಅರ್ಥಕ್ಕಾಗಿ ಹೊಂಚುತ್ತದೆ.  ಚಿನ್ನಾರವರು ಮುಂದೆ “ಕೊಂಕಣಿ ನಾಟಕ” ದ ಬಗ್ಗೆ ಮಾತನಾಡಲು ಉಡುಪಿಗೆ ಬಂದರು. ಉಡುಪಿಯ ಹಿರಿಯ ರಂಗಕಲಾವಿದರಾದ ರಾಜಗೋಪಾಲ ಶೇಟ್ ರವರನ್ನು ತಮ್ಮ ನಾಟಕಕ್ಕೆ ಮಾತನಾಡಿಸಿ ಇನ್ನೊಂದು ಪಾತ್ರಕ್ಕಾಗಿ ನನ್ನನ್ನು ಕೇಳಿದರು. ಮನೆಯವರನ್ನು ಒಪ್ಪಿಸಿದರು. ವಾರಾಂತ್ಯದಲ್ಲಿ ರಿಹರ್ಸಲ್ ಎಂದು ನಿಶ್ಚಯವಾಯಿತು. ಮೂರೇ ಪಾತ್ರಗಳಿರುವ ನಾಟಕ, ಲಂಕೇಶರ

 ” ಸಿದ್ದತೆ”

ಕೊಂಕಣಿಯಲ್ಲಿ “ಕರ್ಮಾಧೀನ್” ಎಂಬ ಹೆಸರಿನಲ್ಲಿ ಕಟ್ಟುವ ಬಗ್ಗೆ ತಯಾರಿಗಳು ಆರಂಭಗೊಂಡವು.

ಒಂದು ನಾಟಕ ಕಟ್ಟುವುದೆಂದರೆ ಸಾಮಾನ್ಯವಲ್ಲ. ಅದೆಷ್ಟು ಪೂರ್ವ ತಯಾರಿಗಳ ಅಗತ್ಯವಿದೆ. ಕನಸಿನ ಬೀಜ ಎಲ್ಲೋ ಒಂದು ಕಡೆ ಮೊಳಕೆಯೊಡೆದರೆ ಸಾಕಾಗದು. ಪಾತಿ ಮಾಡಬೇಕು. ಮಣ್ಣು, ಗೊಬ್ಬರ, ನೀರು, ಬೆಳಕು, ಆಧಾರ ಎಲ್ಲವೂ ಬೇಕು. ಒಬ್ಬರ ಆಸೆಯಲ್ಲ. ತಂಡವಾಗಿ‌ ಪರಿಶ್ರಮ, ಪ್ರೀತಿಯಿಂದ ಕಲೆತು ಕನಸು ಕಟ್ಟುವ ಕಾಯಕ.

ಕಾಸರಗೋಡಿನ ನಿರ್ದೇಶಕರು, ಮಂಗಳೂರಿನ ಗಣೇಶ ಎಂಬ ಕಲಾವಿದನಿಗೆ ಮಗನ ಪಾತ್ರ. ಗಂಡ ಹೆಂಡತಿಯರ ಪಾತ್ರದಲ್ಲಿ ನಾನು ಹಾಗೂ ರಾಜಗೋಪಾಲ ಶೇಟ್.

ಇದರ ಜೊತೆಯಲ್ಲೇ ” ಗುಡ್ ನೈಟ್” ಎನ್ನುವ ಪುಟ್ಟ ಎರಡೇ ಎರಡು ಪಾತ್ರಗಳಿರುವ ನಾಟಕವನ್ನು

 ” ಎಕ್ಲೋ- ಅನೆಕ್ಲೋ” ಎಂಬ ಹೆಸರಿನಲ್ಲಿ ಕೊಂಕಣಿ ಭಾಷೆಯಲ್ಲಿ ಕಟ್ಟುವ ಕಾಯಕ. ಇದರಲ್ಲಿ ಸುರೇಶ್ ಹಾಗೂ ಭೂಷಣ ಎಂಬ ಕಲಾವಿದರನ್ನು ಸೇರಿಸಲಾಗಿತ್ತು.

ಕಡಿಯಾಳಿ ಶಾಲೆಯಲ್ಲಿ ಟ್ರಾಯಲ್. ಒಂದು ತಪ ಹಾಗೂ ತಪಸ್ಸು ದೃಗ್ಗೋಚರವಾಗುವ ಸಮಯಕ್ಕಾಗಿ ಸಜ್ಜುಗೊಳ್ಳುತ್ತಿದ್ದೆವು.

ಅದುವರೆಗೂ ರಂಗದ ಮೇಲೆ ಅಭಿನಯಿಸಿದ್ದರೂ,ಒಂದು ಧಾರವಾಹಿಗೆ ಮುಖ ತೋರಿ ಒಳಗಣ್ಣು ತೆರೆದು ಬಂದಿದ್ದೆ. ಅದರ ಜೊತೆಯಲ್ಲಿ ಹಿರಿತೆರೆಯಲ್ಲಿ ಒಂದು ಸಿನೇಮಾದ ಅಭಿನಯವೂ ಆಗಿತ್ತು. ಆದರೆ ಸೂತ್ರದ ಗೊಂಬೆ. ರಂಗದ ಪ್ರತಿಭಾವಂತ ವಿಧ್ಯಾರ್ಥಿ ಆಗಲೇ ಇಲ್ಲ. ಕೊಟ್ಟದ್ದನ್ನು ಪೂರ್ತಿಗೊಳಿಸಿ ಹಿಂತಿರುಗಿಸುವ ವಿಧೇಯ ಶಿಷ್ಯೆ.

   ಇಲ್ಲಿ ಕಲಿಕೆ ಅನಿವಾರ್ಯ ವಾಯಿತು. ದಂಡಿಸುವ, ಬೆದರಿಸುವ, ಪ್ರೀತಿಸುವ ಬಿಡಿಬಿಡಿಯಾಗಿ ಪಾಠದ ಎಳೆ ಬಿಡಿಸಿಡುವ, ಹೇಳಿಕೊಡುವ ಮೇಷ್ಟ್ರ ಎದುರಿಗಿದ್ದ ಕಲಿಕೆಯ ಹಂಬಲದ, ಮಹತ್ವಾಕಾಂಕ್ಷೆಯ ಶಿಷ್ಯೆ.  ಅದುವರೆಗೆ ದೊರಕಿದ್ದ ಸ್ವಾತಂತ್ರ್ಯ ಇಲ್ಲಿರಲಿಲ್ಲ. ನಾಳೆ ಟ್ರಾಯಲ್ ಎಂದರೆ ಇಂದೇ ನಡುಕ ಆರಂಭವಾಗುತ್ತಿತ್ತು. ಸಂಜೆ 6 ಘಂಟೆಗೆ ಟ್ರಾಯಲ್ ಆರಂಭವೆಂದರೆ ಆರಂಭ ಆಗಿಯೇ ಬಿಡುತ್ತಿತ್ತು. ಯಾವುದೇ ರಿಯಾಯತಿ ಇಲ್ಲ.  10 ನಿಮಿಷ ಮೊದಲು ಇರಲೇಬೇಕು. ನಮಗಿಂತ ಮೊದಲೇ ಅವರು ಬಂದಿರುತ್ತಿದ್ದರು. ಒಳಬಂದ ನಂತರ ನಾಟಕದ ಪುಸ್ತಕ  ಮುಟ್ಟುವಂತಿರಲಿಲ್ಲ. ನಾಟಕ ಏನು ಎಂಬುದರ ಬಗ್ಗೆ ನಿಜವಾದ ಸರಸ್ವತೀ ಪೂಜೆ, ಅಕ್ಷರಾಭ್ಯಾಸ ಇಲ್ಲಿಂದಲೇ ಆರಂಭ ಎನಿಸುತ್ತದೆ.

ಆಗಲೇ ನನ್ನ ಹಳೇ ಡೈರಿಯಲ್ಲಿ ಬರೆದ, ಅಲ್ಲ ಗೀಚಿದ!, ಮನದ ಗೀಚುರೇಖೆಗಳನ್ನು ಓದಿದ್ದರು.

ಪತ್ರಿಕೆಗೆ ಕಳುಹಿಸಿದ್ದೀರಾ

ಇಲ್ಲ ಸರ್

ಯಾರಿಗೆ ತೋರಿಸಿರುವಿರಾ

ಇಲ್ಲ..ಹಾಂ ನನ್ನ ಕನ್ನಡ ಸರ್ ನೋಡಿದ್ದಾರೆ

ಎಷ್ಟಿದೆ

ಗೊತ್ತಿಲ್ಲ ಸರ್

ಸಂಕಲನ ತರಬಹುದು

ಬೇಡ ಸರ್

ಯಾಕೆ

ಅದು ಕವನ ಅಲ್ಲ. ಕವನದ ಹಾಗೆ. ಮನಸ್ಸಿನ ಭಾವ ತಂತುಗಳು

ಇರಲಿ, ಪ್ರಕಟಿಸುವ

ಅಯ್ಯೋ,ಎಲ್ಲರೂ ಓದುತ್ತಾರೆ ಸರ್. ಬೇಡವದು. ಕವನ ಆಗಿಲ್ಲ

“ನಿಮ್ಮ ಬರಹ ಯಾವ ಬಗೆ ಎಂಬ ತೀರ್ಮಾನ ಓದುಗರಿಗೆ ಬಿಡಿ. ಪುಸ್ತಕ ಬರಲಿ. ಇನ್ನೂ ಒಂದಷ್ಟು ಬರೆಯಿರಿ.”

ಚದುರಿ ಬಿದ್ದ ಒಳಮನೆಯ ತುಣುಕುಗಳು ಯಾವುದೋ ಅದೃಶ್ಯ ಕಾಂತತ್ವಕ್ಕೆ ಒಳಗಾದ ಹಸಿ ಕಬ್ಬಿಣದ ಹುಡಿಯಂತೆ ಒಂದೆಡೆ ಸೆಳೆಯಲ್ಪಟ್ಟಿತ್ತು. ಕಾಂತೀಯ ಕ್ಷೇತ್ರದ ರೇಖೆಗಳಿಗನುಗುಣವಾಗಿ ಅಲೈನ್ ಆಗುತ್ತಿತ್ತು.

ಸರ್ ಅವರು ನಾನು ಜೋಡಿಸಿಕೊಟ್ಟ ಕವನಗಳು ಎಂಬ ಹೆಸರಿನ ಭಾವಗುಚ್ಛಗಳನ್ನು ಕಂದನನ್ನು ಮಡಿಲಿಗೆ ಸೆಳೆದು ವಾತ್ಸಲ್ಯ ತೋರುವ ತಾಯಿಯಂತೆ ಎದೆಗಾನಿಸಿಕೊಂಡರು. ತಮ್ಮ ಸ್ನೇಹಿತರಿಗೆ ತೋರಿಸಿದರು. ಎಮ್.ಎನ್.ವ್ಯಾಸರಾವ್ ಅವರಿಗೆ ಕವನಗಳನ್ನು ನೀಡಿ ಮುನ್ನುಡಿ ಬರೆಯುವಂತೆ ಕೋರಿದರು. ಹೊರಪ್ರಪಂಚ ತಿಳಿಯದ ನನ್ನನ್ನು ನನ್ನದೇ ಕವನಗಳ ಮೂಲಕ ಹಿರಿದಾದ ಬೆಳಕು ಹಾಯುವ ಕಿಂಡಿ ಮೂಡಿಸಿ ತೋರಿಕೊಟ್ಟರು.

ಬರಹ ಹಾಗೂ ಅಭಿನಯ ಬೇರೆಯಲ್ಲ. ಕವಿಯೊಬ್ಬ ಕವನದ ಭಾವ ಅನುಭವಿಸದೇ ಹೇಗೆ ಬರೆದಾನು? ತಾನುಂಡ ಅನನ್ಯತೆಯನ್ನು ಬೊಗಸೆಯಲ್ಲಿ ತುಂಬಿದ ಕಲಾವಿದ ಅಕ್ಷರದ ನಾದತಂತಿ ನುಡಿಸಬಲ್ಲ. ಅಭಿನಯವೂ ಅದೇ ತಾನೇ!. ತಾನು ಓದಿದ ಪಾತ್ರದ ಜೀವ ಅವಾಹಿಸಿ ಅದರ ಅನುಭೂತಿ ಪಡೆದು ದೇಹ, ಭಾವ ರಂಗಕ್ಕೆ ಶರಣಾಗತಿ ಹೊಂದಿ ಪ್ರೇಕ್ಷಕರಿಗೆ ಅದೇ ಅನುಭವ ಅನುಭೂತಿ ಹುಟ್ಟು ಹಾಕುವ,  ಜನ್ಮ ನೀಡುವ ನೋವು ನಲಿವಿನ ಘಳಿಗೆಗಳು. ಆದುದರಿಂದ ಬರಹಗಾರ ನಟ, ನಟಿ,  ಕವಿ, ಕಥೆಗಾರ ಎಲ್ಲಾ ಅಗಬಲ್ಲರು.

ಅದುವರೆಗೂ ಕನಸುಗಳ ಖಜಾನೆಯೇ ನನ್ನೊಳಗಿತ್ತು. ಆದರೆ ಅವುಗಳಿಗೆ ನಾನು ಅನಾಮಿಕಳಾಗಿದ್ದೆ. ನನಗೂ ಸ್ಪಷ್ಡತೆಯಿಲ್ಲ. ಸಿದ್ದತೆ ನಾಟಕವು ನನ್ನೊಳಗನ್ನು ಸಿದ್ದಗೊಳಿಸಿದೆ. ಮೊದಲೆಲ್ಲ ರಂಗದ ಮೇಲೆ ನಿಂತಾಗ ನನ್ನ ಕೈ ಕಾಲು ದೇಹ ನನಗೇ ಅಪರಿಚಿತ. ಹೇಗೆ ಅವುಗಳನ್ನು ಬಳಸಬೇಕು,ಎಲ್ಲಿ ಇಡಲಿ. ನನ್ನ ವಿರುದ್ದವೇ ಅವು ಮುಷ್ಕರ ಹೂಡಿವೆಯೇನೋ ಅನಿಸುತ್ತಿತ್ತು.

ರಂಗದ ಮೇಲೆ ನಡೆಸುವ ಪ್ರತೀ ಕ್ರಿಯೆಗೂ, ಪ್ರತಿಯೊಂದು ಸ್ಥಿತಿಗೂ ನಿರ್ಧಿಷ್ಟ ಕಾರಣಗಳಿರುತ್ತವೆ. ಇದೂ ನನಗೆ ತಿಳಿಯದೆ ಅಭಾಸಗಳಾಗಿದ್ದುದೂ ಇದೆ. ಆದರೆ ಆರಂಭದಿಂದಲೂ ಪಾತ್ರದ ಗುಣಗಳನ್ನು, ಪಾತ್ರವನ್ನು ಬಹಳ ಆರ್ತಿಯಿಂದ ನೆಚ್ಚಿಕೊಂಡು ಸಂಭ್ರಮಿಸುತ್ತಿದ್ದೆ‌ ಅವುಗಳಿಗೆಲ್ಲ ಇಲ್ಲೀಗ ಸ್ಪಷ್ಟತೆ ದೊರಕಿತ್ತು.

 ಯಾಕೆ ಎಂಬ ಪ್ರಶ್ನೆಗಳು ಹುಟ್ಟತೊಡಗಿ ಅದರ ಉತ್ತರಕ್ಕೆ ಕಾದು ಅರಿವಿಗೆ ತಿಳಿವಿನ ತುತ್ತು ಸಿಗತೊಡಗಿತು.

‘ಸಿದ್ದತೆ’ ನಾಟಕದ ಮೂಲಕ ನನ್ನ ಬರಹದ ಹಾದಿ ಹಾಗೂ ಅಭಿನಯದ ದಾರಿ ಕಾಲುದಾರಿಯಿಂದ ಮುಖ್ಯರಸ್ತೆಗೆ ಬಂದಂತೆ. ನನ್ನೊಳಗು ನನಗೇನು ಬೇಕಾಗಿದೆ ಎಂಬುದನ್ನು ಕಂಡುಕೊಂಡಿತ್ತು. ಸುಂದರ ಕನಸುಗಳು ಹೆಚ್ಚು ಆಶಾದಾಯವಾಗಿ ಪರಿಮಳ ಬೀರುತ್ತಿದ್ದವು. ಮೊದಲ ಕವನ ಸಂಕಲನ ಬಿಡುಗಡೆಯಾಗಿತ್ತು. ಅದು ಬದುಕಿನ ಸಂಭ್ರಮದ ತೇರು. ” ನನ್ನೊಳಗಿನ ಭಾವ” ಅನಾವರಣಗೊಂಡಿತ್ತು.

 ಅಕ್ಷರದ ಕಲಿಕೆ, ರಂಗ ಶಿಕ್ಷಣ ಜೊತೆ ಜೊತೆಯಾಗಿ ನನ್ನ ತಬ್ಬಿಕೊಂಡಿದ್ದವು. ಆ ಪುಳಕಕ್ಕೆ ಎಣೆಯಿಲ್ಲ.

ಪ್ರತೀ ಕವನದ ಹುಟ್ಟಿನೊಂದಿಗೆ ನಟಿಯೂ ಅರಳುತ್ತಿದ್ದಳು. ನನ್ನೊಳಗೇ ಸುಪ್ತವಾಗಿದ್ದ ಕವನದ ಎಳೆಎಳೆಗಳು

” ನೀನು ಬರೆಯಬಲ್ಲೆ”

ಎಂದ ಪ್ರೋತ್ಸಾಹದಾಯಕ ವಾಣಿಗೆ ಪುಷ್ಟಿಗೊಂಡು  ಮನದ ಕದ ತೆರೆದು  ಅಕ್ಷರಗಳಾಗುವ ಮಾಯೆಯಿದು.

*************

ಪೂರ್ಣಿಮಾ ಸುರೇಶ್

“ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

2 thoughts on “

  1. ಬಹುಮುಖ ಪ್ರತಿಭೆ ನೀನು.ಒಳಗಿನ ಭಾವವನ್ನು ಎಷ್ಟು ಚೆಂದಕ್ಕೆ niroopisiruve.ಇಷ್ಟ ಆಯ್ತು ಸಿರಿ

Leave a Reply

Back To Top