ಕವಿತೆ
ಸುರುಳಿ ಕನಸು.
ರಾಜಶ್ರೀ. ಟಿ. ರೈ.ಪೆರ್ಲ
ಅವಳು ಒಲೆಯಲಿಟ್ಟ ಕುದಿವ ಅನ್ನದ ಪಾತ್ರೆಯೊಳಗೆ ನಲಿವ ಅಗುಳ ಸ್ತಬ್ಧವಾಗಿಸಿ
ಅವಸರದಿ ಹೊರಡುತ್ತಿದ್ದಾಳೆ.
ಉಟ್ಟ ಸೀರೆಯ ಒಳಕೋಣೆಯಲಿ ಅರ್ಧ ಜಾರಿಸಿ, ಕೊಡವಿ ಬಿಚ್ಚಿ
ಮತ್ತೆ ಗೆರೆ ಬಿಡಿಸಿ ಅಂಗೈಯಲ್ಲಿ ನೆರಿಗೆಗಳ ದೇಹಕ್ಕೆ ಒತ್ತಿದ್ದಾಳೆ .
ಸಣ್ಣ ಸಣ್ಣ ಸೂಡಿ ಬೀಡಿಗಳು
ಸಂಗೀಸಿನ ಚೀಲದ ಕಿರುಗಣ್ಣ
ನಡುವೆ ಹೊರ ನೋಡುವ ಕಾತರದಿ ಇಣುಕಿದಾಗ ಮೃದುವಾಗಿ ಅವುಗಳ ಒಳ ದಬ್ಬಿದ್ದಾಳೆ
.
ಅಂಗಳದಿ ಎಲ್ಲೊ ಬಿಸುಟಿಟ್ಪ ಸ್ಲಿಪ್ಪರು ಮೆಟ್ಟಿದಾಕೆ, ಬೆರಳುಗಳಲಿ
ಸಾಧ್ಯವಾದಷ್ಟು ಕನಸುಗಳ ನಡಿಗೆಯ ಜೊತೆ ಜೊತೆಗೆ
ಸುರುಟುತ್ತಿದ್ದಾಳೆ.
ಪಾದಗಳ ನಡುವೆ ಓಟದ ಪಂದ್ಯ,
ಮುಂದೊತ್ತಿ ನಡೆವ ಗಡಿಬಿಡಿ .
ಅಲ್ಲಿ ಸಾಲಿನಲಿ ತನ್ನ ಸರದಿಗಾಗಿ
ಕಾಯುವಾಗಲು ಕಟ್ಟುಗಳ
ಒಪ್ಪವಾಗಿಸುತ್ತಿದ್ದಾಳೆ.
ಚೀಲದ ಕೈಗೆ ಕೈ ತೂರಿಸಿದ
ಕೀಲು ಬೊಂಬೆಯ ಹಾಗವಳು
ಸಾಲಿಗೆದುರು ಖುರ್ಚಿಯಲಿ ಕೂತವನ ಪೋಲಿ ಜೋಕುಗಳಿಗೆ ಕಿವುಡಿಯಾಗಿದ್ದಾಳೆ.
ಕಂತೆಗಳ ದುತ್ತೆಂದು ಸುರುವಿದಾತನಿಗೆ ಕನಿಕರವೇ ಇಲ್ಲ,
ಅರ್ಧ ತುಂಡರಿಸಿ ಮೂಲೆಗೆ ಎಸೆದಾಗ, ಸದ್ದಾಗದಂತೆ ಉಸಿರ
ತುಂಡರಿಸಿ ಹೊರ ಬಿಟ್ಟಿದ್ದಾಳೆ.
ಮಗನ ಸವೆದ ಪೆನ್ಸಿಲಿನ ಟೋಪಿ.
ಮಗಳ ಹರಿದ ಲಂಗದ
ನೆರಿಗೆಗೆರಡು ಕೈಹೊಲಿಗೆ,
ನೆನೆದು ರಾತ್ರಿಗಳ ಜಾಗರಣೆ
ಹೆಚ್ಚಿಸಬೇಕೆಂದಿದ್ದಾಳೆ.
ತಡವಾಗಿ ಏಳಲಿ ಮಕ್ಕಳು,ಒಂದು ಹೊತ್ತಿನ ಅನ್ನದ ಉಳಿಕೆ.
ದಾರಿಯಲಿ ಮದುವೆ ಮನೆ, ನಿನ್ನೆ
ಮಿಕ್ಕುಳಿದದ್ದಕ್ಕೆ ಕರೆವರೇನೊ ,
ನಡಿಗೆ ನಿಧಾನವಾಗಿಸಿದ್ದಾಳೆ.
ರಾತ್ರಿ ಪೂರ್ತಿ ಅಳುತಿತ್ತು ಮರಿ ಬೆಕ್ಕು ಹಸಿವಿನಲ್ಲಿ.
ಇತ್ತೀಚೆಗೆ ಇರುವೆ, ಜಿರಲೆಗಳ ಸುಳಿವಿಲ್ಲ,ಅವುಗಳಿಗೆ ನೆಕ್ಕುವುದಕ್ಕೆ
ಎಲ್ಲಿ ಉಳಿಸಿದ್ದಾಳೆ.
ಅರಳಿ ಕಟ್ಟೆಯಲಿ ಅಪರಿಚಿತನೊಬ್ಬ
ಆಕೆಯ ಕನಸುಗಳಿಗೆ ಜೀವ ಕೊಟ್ಟು ಹೊಗೆಯುಸಿರು ತೇಲಿ ಬಿಟ್ಟು ತನ್ನನ್ನು ತಾನು ಸುಟ್ಟುಕೊಳ್ಳುವುದ ಕಂಡು ,ಆತನಿಗೆ ದೀರ್ಘಾಯುಷ್ಯ ಬೇಡಿ ಕಣ್ಣಂಚು ಒದ್ದೆಯಾಗಿಸಿದ್ದಾಳೆ
*****************
ರಾಜಶ್ರೀ… chendide ಪದ್ಯ
Thank you
ವಾಹ್… ಮೌನವಾಯಿತು ಮನ… ಉತ್ತಮ ಕವನ ಮ್ಯಾಮ್…
Thank you
ವಂದನೆಗಳು
ಎದೆಯಾಳಕಿಳಿದ ಕವಿತೆ ರಾಜಶ್ರೀ…
ಸೊಗಸಾದ ಕವಿತೆ. ಒಳಬೇಗುದಿ ಚೆನ್ಬಾಗಿ ಪ್ರಕಟಗೊಂಡಿದೆ
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ವಂದನೆಗಳು
ಕಷ್ಟ ಕಾಪ೯ಣ್ಯಗಳ ನಡುವಿನ ಜೀವನದ ಬೇಗುದಿಯನ್ನು ಚೆನ್ನಾಗಿ ಬಿಂಬಿಸಿರುವಿರಿ.
ರಾಜಶ್ರೀ ಕವನ ಚಲೊ ಉಂಟು