ಅಂಕಣ ಬರಹ

ರಂಗ ರಂಗೋಲಿ

ಪರದೆಯಲ್ಲೇ ಉಳಿದ

ರಾಜಕುಮಾರಿ

India's prominent theatre personalities - EducationWorld

ಆ ಉದ್ದದ ಹಜಾರದ  ಗೋಡೆಗೆ ಮರದ ಕುಸುರಿ ಮಾಡಿದ್ದ ದಳಿಗಳ ಕಿಟಕಿ. ಆ ಕಿಟಕಿಯ ಒಂದೊಂದೇ ದಳಿಯನ್ನು ಹಿಡಿದು ಕಣ್ಣುಗಳಲ್ಲಿ ನಿರೀಕ್ಷೆ, ಹಂಬಲ ತುಂಬಿಕೊಂಡು ಹೊರಪ್ರಪಂಚಕ್ಕೆ ದೃಷ್ಟಿ ಹೊಂದಿಸುತ್ತಾಳೆ.

“ಅವನು ಬಂದೇ ಬರುತ್ತಾನೆ.”

 “ಇಂದು ಬರುವನು. “

“ನಿನ್ನೆಗಳು ಮುಗಿದಿವೆ. ಇಂದು ಹೊಸದು.”

” ಬಂದ…ರಾಜಕುಮಾರ. “

 ” ಫುಟಫುಟನೆ ಕುದುರೆ ಕಾಲಿನ ಸದ್ದಿನೊಂದಿಗೆ, ಕುದುರೆಯ ಬೆನ್ನ ಏರಿ ಬರುತ್ತಾನೆ ನನ್ನ ಎದೆಬಡಿತ ಏರಿಸುತ್ತ ಬರುತ್ತಾನೆ.”

 ಅವಳ ಕಣ್ಣಲ್ಲಿ ಬೆಳಕಿನ ಪ್ರಭೆ ಹೆಚ್ವಿತ್ತಲೇ ಇದೆ. ನಿರೀಕ್ಷೆ..ನಿರೀಕ್ಷೆ..ಕಾತರ..ಹಂಬಲ.

ಅವಳು ಸುಂದರ ರಾಜಕುಮಾರಿ. ತನ್ನ ರಾಜಕುಮಾರನ ನಿರೀಕ್ಷೆಯಲ್ಲಿ ಕಾಯುತ್ತಾಳೆ.   ಆದರೆ ಇದು ಅವಳ ಕಲ್ಪನಾಲೋಕ. ವಾಸ್ತವದಲ್ಲಿ ಅವಿದ್ಯಾವಂತೆ, ಸುಂದರಿಯಲ್ಲದ ಕಪ್ಪು ಹೆಣ್ಣನ್ನು ಮೆಚ್ಚುವ ಗಂಡೆದೆಯ ಗಂಡೆಲ್ಲಿದೆ?.  ಅವಳ ಕಾಯುವಿಕೆಗೆ ಕೊನೆಯಿಲ್ಲ.

 ಶಿವರಾಮ ಕಾರಂತರ ” ಸರಸಮ್ಮನ ಸಮಾಧಿ” ಕಾದಂಬರಿಯ ಜಲಜಾಕ್ಷಿ ಎಂಬ ಪಾತ್ರವಿದು. ಇದನ್ನು ದೂರದರ್ಶನಕ್ಕಾಗಿ ಧಾರವಾಹಿಯಾಗಿಸಲು ಹೊರಟವರು ಆರ್. ನಾಗೇಶ್.

 ಪಾತ್ರಗಳ ಆಯ್ಕೆಗಾಗಿ ಉಡುಪಿಯ ರಂಗಭೂಮಿ ಸಂಪರ್ಕಿಸಿದ್ದರು. ಆಗ ರಂಗಭೂಮಿ ಕಲಾವಿದರನ್ನು ಕಲೆಹಾಕಿದ ಒಡ್ಡು. ಹಾಗಾಗಿ ರಂಗಭೂಮಿ ಕಲಾವಿದರೇ ಹೆಚ್ಚಾಗಿ ಅಭಿನಯಿಸಿದ್ದ ಧಾರವಾಹಿಯಿದು.

 ರಂಗಭೂಮಿ ಉಡುಪಿಯ ಹಲವಾರು ಕಲಾವಿದರು ವಿವಿಧ ಪಾತ್ರಗಳಿಗೆ ಆಯ್ಕೆಯಾಗಿದ್ದರು. ನನ್ನನ್ನು ಜಲಜಾಕ್ಷಿ ಪಾತ್ರ ಮಾಡುವಂತೆ ನಿರ್ದೇಶಕರು ಸೂಚಿಸಿದ್ದರು.

 ಅದುವರೆಗೂ ದೂರದರ್ಶನದ ಕೆಲವು ಧಾರವಾಹಿಗಳನ್ನಷ್ಟೇ ನೋಡಿದ್ದು. ಇದೀಗ ಅಭಿನಯಕ್ಕಾಗಿ ಆಯ್ಕೆಯಾಗಿದ್ದೆ. ಯಲ್ಲಾಪುರ ದ ಬಳಿಯ ಹಳ್ಳಿಯ ಪರಿಸರದಲ್ಲಿ ಚಿತ್ರೀಕರಣ.

 ಹಳೆಯ ಮಗ್ಗದ ಕಣ ಕಣ ಅಂಕಣದ ಸೀರೆ , ಕಪ್ಪು ನಾಜೂಕಾಗಿ ಮುಖಕ್ಕೆ ತುಂಬಿದ, ದಪ್ಪ ಹುಬ್ಬಿನ ಮೇಕಪ್ಪ್ ಮಾಡಿದ ಮುಖ.

” ರಾಜಕುಮಾರ ಬರ್ತಾನೆ.

ನನ್ನ ರಾಜಕುಮಾರ…

ಕುದುರೆ ಏರಿ ಬರುತ್ತಾನೆ!

ನನ್ನನ್ನು ಕುದುರೆಯ ಬೆನ್ನ ಮೇಲೆ ಕೂರಿಸಿ ಕರೆದೊಯ್ತಾನೆ.”

ಇದು ನನಗೆ ಕೊಟ್ಟ  ನನ್ನ ಜಲಜಾಕ್ಷಿಯ ಮಾತುಗಳು.

 ಕಣ್ಣಲ್ಲಿ ಆ ಕಾಯುವಿಕೆ, ನಿರೀಕ್ಷೆ ಇರಬೇಕು..

“Action.” 

ನಿರ್ದೇಶಕರ ಆದೇಶ..

ನನ್ನ ಒಳಮನೆಯಲ್ಲಿ ಕೂತ ಕಲ್ಪನೆಗಳ ತೇರು ಕಣ್ಣಿಗೆ ಎಳೆದು ಜಲಜಾಕ್ಷಿಯ ನಿರೀಕ್ಷೆಯಾದೆ. ಮತ್ತೆ ಮತ್ತೆ ಅದೇ, ಅದೇ ಮಾತು.

ಅಷ್ಟೇ ಅಂದರೆ ಅಷ್ಟೇ..

ಅದರ ನಂತರ ಬೇರೆ ದೃಶ್ಯ. ಬೇರೆ ಕಲಾವಿದರ ದೃಶ್ಯ. ನಾನು ಅವರ ಅಭಿನಯವನ್ನು ಅಚ್ಚರಿಯಿಂದ ಗಮನಿಸುವುದು.

ಸುತ್ತಲೂ ವ್ಯಾಪಿಸಿಕೊಂಡ ಸಿರಿ ತುಂಬಿದ ಬಸುರಿ ಪ್ರಕೃತಿ. ಹಸಿರು,ಹಸಿರು,ಹಸಿರು. ಶತಮಾನದಿಂದ ಧ್ಯಾನಕ್ಕೆ ನಿಂತಂತಿರುವ ಬೃಹತ್ ವೃಕ್ಷ ಸಮೂಹ. ಆಲ,ಅಶ್ವತ್ಥ. ಮನಸ್ಸಿಗೆ ತುಂಬಿ ಹರಿಯುವ ಅಪರಿಚಿತ ವಿನೂತನ ಭಾವ.

ಹೊಸ ಅನುಭವದ ಅನುಭೂತಿ ಹರಿದಾಡುತ್ತಿತ್ತು.

ತಂಡದಲ್ಲಿ ಮಂಗಳೂರಿನ ಸುಂದರ ಕಲಾವಿದೆ ಸರೋಜ ಶೆಟ್ಟಿ, ಗೀತಾ ಸುರತ್ಕಲ್, ಚಂದ್ರಹಾಸ ಉಳ್ಳಾಲ. ಎಂತೆಂತಹ ರಂಗಭೂಮಿಯ ದಿಗ್ಗಜ ಹೆಸರುಗಳು!.

ಅವರ ನಡುವೆ ಶೂನ್ಯದಂತೆ ಪೆದ್ದುಪೆದ್ದಾಗಿ, ಪೆಚ್ಚಾಗಿ ಅತ್ತಿತ್ತ ಸರಿದಾಡುತ್ತಿದ್ದೆ. ಊರೊಳಗಿನ  ತೋಡಿನ ಕಪ್ಪೆಯನ್ನು ಸಮುದ್ರದಲ್ಲಿ ಬಿಟ್ಟಂತೆ.

ಆ ನನ್ನ ಜಲಜಾಕ್ಷಿಯ ಪಾತ್ರ ಸರಸಮ್ಮನ ಬಳಿ ಮುಂದುವರಿಯಲಿಲ್ಲ. ರಾಜಕುಮಾರನ ಕನಸು ಅಲ್ಲೆ ಮರದ ಕಿಟಕಿಗೆ ಅಂಟಿಸಿದ್ದ ಕಣ್ಣುಗಳಲ್ಲಿ ಚಿತ್ರವಾಗಿತ್ತು.

 ಒಂದು ವಾರದ ಕಾಲ ಅಲ್ಲಿನ ರೆಸಾರ್ಟ್ ಒಂದರಲ್ಲಿ ತಂಡವು ತಂಗಿತ್ತು. ಅದೊಂದು ದಿನ ನನ್ನ ಕನಸು ಕಾಣುವ ಪಾತ್ರ ಜಾರಿ ಕನಸು ಭಿತ್ತುವ ಪಾತ್ರಕ್ಕೆ ನನ್ನನ್ನು ತಯಾರು ಮಾಡಲಾಯಿತು. ಉದ್ದನೆಯ ಜಡೆ, ಮಲ್ಲಿಗೆ ಹೂವು, ಮುಖಕ್ಕೆ ಗಾಢ ಬಣ್ಣ, ಕಣ್ಣಿಗೆ ಕಾಡಿಗೆ, ಲಂಗ ದಾವಣಿ.

ನಿರ್ದೇಶಕರು ವಿವರಿಸುತ್ತಿದ್ದರು:

“ಈಗಿನ ದೃಶ್ಯ‌ನೀನು ಗದ್ದೆಯಲ್ಲಿ ಹೋಗುತ್ತಿರುವೆ.

ನಿನ್ನ ಹಿಂದೆ ಕೆಲಸಗಾರನೊಬ್ಬ ಅಕ್ಕಿ, ತರಕಾರಿಯ ಮೂಟೆ ಹೊತ್ತು ಬರುತ್ತಾನೆ.

ಎದುರಿಗೆ ಶ್ರೀಮಂತ ಸಾಹುಕಾರ ಬರುತ್ತಾನೆ. ಲಾಸ್ಯದ ನಡಿಗೆ. ಮರುಳು ಮಾಡುವ ಹೆಣ್ಣು.

ಆ ಉದ್ದನೆ ಜಡೆಯ ತುದಿ ಹಿಡಿದು ತಿರುಗಿಸುತ್ತ,

ಮುಗುಳು ನಗುತ್ತಾ, ಬೆಡಗು,

ಬಿನ್ನಾಣದಲ್ಲಿ ನಡೆಯಬೇಕು.

ಗಂಡಸರನ್ನು ಮೋಹಕ್ಕೆ ಸೆಳೆಯುವಂತೆ ತೋರಬೇಕು. ಊರ ವೇಶ್ಯೆಯ ಅಪ್ಸರೆಯಂತಹಾ ಮಗಳು.

ಊರ ಸಿರಿವಂತರೆಲ್ಲ ನಿನ್ನ ಹಿಂದೆ..”

ವಿವರಿಸುತ್ತಿದ್ದರು.

 ” ಹಾಂ ಹೋಗು.. ಅಭಿನಯಿಸು..

ಟೇಕ್ ಗೆ ರೆಡಿಯಾಗಿ ಎಲ್ಲರೂ”

ದೂರದಲ್ಲಿ ಕ್ಯಾಮರಾ ಕಣ್ಣುಗಳು ಗದ್ದೆ, ಹಸಿರು ಜೊತೆಗೆ ನಮ್ಮನ್ನು ತನ್ನಲ್ಲಿ ಹಿಡಿದಿರಿಸುತ್ತಿತ್ತು. ಅದು ಆ ದಿನದ ಕೊನೆಯ ದೃಶ್ಯ. ಚೆನ್ನಾಗಿ ಮಾಡಿದೆ. ನಿರ್ದೇಶಕರಿಂದ

” ಶಹಭಾಸ್ ಗಿರಿ”.

ಏನೋ ತಳಮಳ,ಸಣ್ಣನೆಯ ಭಯ. ರಾತ್ರಿ ಸರಿಯಾಗಿ ನಿದ್ದೆ ಬಾರದೆ ಹೊರಳಾಡಿದೆ.

 “ಅಯ್ಯೋ,ಈ  ಧಾರವಾಹಿ ಮನೆಯವರು ನೋಡುತ್ತಾರೆ.”

 ” ಹಳ್ಳಿಯ ಮನೆ, ಅತ್ತೆ, ಚಿಕ್ಕತ್ತೆ, ಭಾವನವರು, ಮಾವ. ಕೆಲಸಕ್ಕೆ ಬರುವ ಆಳುಗಳು. ನಿಜಕ್ಕೂ ಅವರೆಲ್ಲ ಇದು ನಿಜ ಅಂದುಕೊಂಡರೆ..? “

ಮನಸ್ಸೊಳಗೆ ನಚಿಕೇತ ಪ್ರಶ್ನೆ ಮಾಡುತ್ತಿದ್ದ!.

ನಮ್ಮ ತೋಟದ ನಡುವೆ ಅಲ್ಲಲ್ಲಿ ನಮ್ಮ ಜನಗಳು ಗುಸುಗುಸು ಮಾತನಾಡುವುದನ್ನು ಕಲ್ಪಿಸಿಕೊಂಡೆ.

 ” ಯಬ್ಬಾ..ದೇವರೇ..ಸತ್ತೇ ಹೋದೆ..”

 ” ಏನು ಮಾಡುವುದೀಗ?. ನಾನು ರಾಜಕುಮಾರನನ್ನು ಕಾಯುವ ಕನಸು ತುಂಡು ಮಾಡಿದ್ದಾದರೂ ಯಾಕೆ? ಇದೆಂತಹ ಶಿಕ್ಷೆ?.

ವಾಪಾಸ್ ಹೋಗುವುದು ಹೇಗೆ? ನನ್ನನ್ನು ಇವರು ಬಿಡುತ್ತಾರೆಯೇ? ವಾಪಾಸ್ ಹೋದರೆ ಅಭಿನಯದ ಕನಸೂ ಹೊಳೆಗೆ ಬಿದ್ದ ಹುಣಸೆ ಹಣ್ಣು. “

ಮನಸ್ಸು ಕಲಸು ಮೇಲೋಗರವಾಗಿತ್ತು.

ಮರುದಿನ ನಮ್ಮ ರಂಗಭೂಮಿಯ ಗೆಳೆಯರೊಬ್ಬರಲ್ಲಿ ಸಂಕಟ ತೋಡಿಕೊಂಡೆ. ಕಣ್ಣು  ತುಂಬುತ್ತಿತ್ತು.

” ಅದೇನು, ಬಹಳ ಚೆಂದದ ಪಾತ್ರವಿದು. ಎಷ್ಟು ಸುಂದರವಾಗಿ ಅಭಿನಯಿಸಬಹುದು. ಚಾಲೆಂಜಿಂಗ್ ಎಂದರು.

 ಕೊನೆಗೆ,

” ನಿನಗೆ ಸಮಸ್ಯೆಯಾಗುವುದಾದರೆ ನಿರ್ದೇಶಕರಲ್ಲಿ ಹೇಳು. ಮೊದಲಿನ ಪಾತ್ರವೇ ಕೊಟ್ಟಾರು “

ಆ ದಿನವಿಡೀ ಸುಮ್ಮಸುಮ್ಮನೆ ನಿರ್ದೇಶಕರ ಹಿಂದೆ ಹಿಂದೆ ಹೋಗುವುದು. ಅವರು ಅವರ ಕಾರ್ಯ ಒತ್ತಡದಲ್ಲಿ.

“ಏನು?”

ಎಂದಾಗ ನಾಲಗೆ ತಿರುಗದೆ ತಲೆತಗ್ಗಿಸುತ್ತಿದ್ದೆ.

ಕೊನೆಗೂ ಅವರು

 ” ಏನೋ ಹೇಳಲು ಇರುವಂತಿದೆ.” ಎಂದರು.

” ಸ..ರ್! ,ಈ ಪಾತ್ರ ನನಗೆ ಬೇಡ ” ಎಂದೆ.

ಥಟ್ಟನೆ ನಿಂತವರು

“ಯಾಕೆ? ” ಎಂದರು.

 “ಆ ಮೊದಲಿನ ಪಾತ್ರ..” ನಾನು ತಡವರಿಸುತ್ತಿದ್ದೆ

 ” ಇದಕ್ಕೆ ಜೀವ ಕೊಡು. ಜನರು ನಿನ್ನ ಗುರುತಿಸುತ್ತಾರೆ “

” ಆದರೆ..ನಮ್ಮ ಮನೆಯಲ್ಲಿ ಎಲ್ಲರೂ ಗುರುತಿಸುತ್ತಾರೆ. ಅವರಿಗೆ ಅಭಿನಯ ಹಾಗೂ ವಾಸ್ತವದ ಅಂತರ ತಿಳಿಯದೆ ಇರಬಹುದು. ನನಗೆ ಹೆದರಿಕೆ “

” ಅಭಿನಯಕ್ಕೆ ಇಂತಹ ಪಾತ್ರ ದೊರೆಯಲಿ ಎಂದು ಕಲಾವಿದರು ಬಯಸುತ್ತಾರೆ.”

ನನ್ನ ಮೌನ ಗಮನಿಸಿ

 ” ಸರಿ ಯೋಚಿಸುವೆ. ಜಲಜಾಕ್ಷಿ ಪಾತ್ರ ನಿನಗೆ ಅಷ್ಟು ಹೊಂದುತ್ತಿರಲಿಲ್ಲ. ನೀನೋ ಸುಂದರ ಹುಡುಗಿ. ಆ ಪಾತ್ರಕ್ಕೆ ಕ್ಯಾಮಾರದಲ್ಲಿ ಚೆಂದ ಕಾಣಬಾರದು.”  ಎಂದರು.

 ಮತ್ತೆರಡು ದಿನವೂ  ಅಭಿನಯದ ಕೆಲಸವಿಲ್ಲದೆ ಅಲೆದಾಟವಾಯಿತು. ಮೊದಲ ಹಂತದ ಚಿತ್ರೀಕರಣ ಮುಗಿದಿತ್ತು.

ಮತ್ತೆ ,೧೫-೨೦ ದಿನಗಳ ನಂತರ ಮುಂದಿನ ಚಿತ್ರೀಕರಣ ಎಂದರು.

 “ಬರುವಾಗ ಮುಂದಿನ ಚಿತ್ರೀಕರಣಕ್ಕೆ ನೀನು ಕಪ್ಪಾಗಿ ತೋರಬೇಕು. ಹುಬ್ಬು ದಪ್ಪಗಾಗಿರಬೇಕು”

ಎಂದರು ನಿರ್ದೇಶಕರು.

ನನಗೆ ಮತ್ತೆ ಮುಂದಿನ ಚಿತ್ರೀಕರಣದಲ್ಲಿ ಸರಸಮ್ಮನ ಸಮಾಧಿಯ ಪಾತ್ರವಾಗಲು ಅವಕಾಶ ದೊರೆಯಲಿಲ್ಲ.

ಈಗ ಯೋಚಿಸಿದರೆ ಅದೆಷ್ಟು ಬಾಲಿಶ ಯೋಚನೆಗಳ ದಿನಗಳಾಗಿದ್ದವವು. ಎಂತಹ ಒಳ್ಳೆಯ ಪಾತ್ರ ಬಿಟ್ಟುಕೊಟ್ಟಿದ್ದೆ ಅನಿಸುತ್ತದೆ.

ಮುಂದೆ ಆ ಧಾರವಾಹಿಯು ಟಿ.ವಿಯಲ್ಲಿ  ಪ್ರಸಾರವಾದಾಗಲೂ  ನನ್ನ ಚಿತ್ತದ ಗಮ್ಯ ಜಲಜಾಕ್ಷಿ..ಆ ಕುದುರೆ, ಕನಸು.. ರಾಜಕುಮಾರ..ನಿರೀಕ್ಷೆ.  ತಪ್ಪಿ ಹೋದ ಸುಂದರ ಅವಕಾಶ.

 ಈ ರೀತಿ ನನ್ನ ಮೊದಲ ಕಿರುತೆರೆ ನಟಿ ಯಾಗುವ ನಿರೀಕ್ಷೆ ಮುರುಟಿಹೋಯಿತು. ಆದರೂ ಈಗಲೂ ಧಾರವಾಹಿಯಲ್ಲಿ ಅಭಿನಯಿಸಿದ್ದೀರಾ ಎಂದಾಗೆಲ್ಲ

 ” ಹು. ಸರಸಮ್ಮನ ಸಮಾಧಿ ಮೊದಲನೆಯದ್ದು!”.

ಎಂದು ಗಿಟ್ಟಿಸಿಕೊಳ್ಳಲಾಗದ ಕನಸ ಮತ್ತೆ ಚಿಗುರಿಸಿ ನೀರೆರೆದು ನನ್ನ ಸಮಾಧಾನಿಸಿಕೊಳ್ಳುತ್ತಿರುವೆ.

ಕಲಿಕೆಯ ದೃಷ್ಟಿಯಿಂದ ಸರಸಮ್ಮನ ಸಮಾಧಿಯ ಚಿತ್ರೀಕರಣದ ಸಮಯದಲ್ಲಿ ಹಲವಾರು ಕಲಾವಿದರ ಅಭಿನಯ, ದೇಹಭಾಷೆ, ತೊಡಗಿಸಿಕೊಳ್ಳುವ ಪರಿ, ಸಂಭಾಷಣೆಯನ್ನು ಉಚ್ಚರಿಸುವ ಬಗೆ ಇವನ್ನೆಲ್ಲ ಬಹಳ ಸಮೀಪದಿಂದ ಗಮನಿಸಿದ್ದೆ. ಇದು ನನ್ನೊಳಗಿನ ರಂಗದ ಹುಚ್ಚಿಗೆ ಬಹಳ  ಕಾಣಿಕೆ ನೀಡಿದೆ.

ಈ “ಸರಸಮ್ಮನ..” ಧಾರವಾಹಿಗೆ ಆಯ್ಕೆಯಾಗಲು ಬಲು ಮುಖ್ಯ ಕಾರಣ ರಂಗಭೂಮಿ ಸಂಸ್ಥೆ,  ಒಂದು ರಂಗ ಕಾರ್ಯಾಗಾರ ಏರ್ಪಡಿಸಿತ್ತು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ (National School of Drama)  ಶ್ರೀನಿವಾಸ ಪ್ರಭು ಆ ಕಾರ್ಯಾಗಾರದ ನಿರ್ದೇಶಕರು. ಅವರಂತಹಾ ಹಿರಿಯ, ಅನುಭವಿ ಕಲಾವಿದ, ನಿರ್ದೇಶಕರಿಂದ ಧ್ವನಿಭಾರ, ದೇಹ ಭಾಷೆ, ಸಂಭಾಷಣೆಗಳಿಗೆ ಜೀವ ತುಂಬುವ ವಿಧಾನ ಇತ್ಯಾದಿಗಳನ್ನು ಕಲಿತ ಭಾಗ್ಯ ನಾವೆಲ್ಲಾ ಮೊಳಕೆ ಕಲಾವಿದರದ್ದು. ಒಂದೇ ವಾಕ್ಯವನ್ನು ವಿಧವಿಧದ ಭಾವಗಳಲ್ಲಿ ಪರಿಣಾಮಕಾರಿಯಾಗಿ ಹೇಗೆ ಪ್ರಸ್ತುತಗೊಳಿಸಬಹುದು. ಮಾತಿನ, ಪದಗಳ ನಡುವಿನ ಮೌನಕ್ಕೆ ಜೀವ ಕೊಡುವುದು ಹೇಗೆ? ದೇಹದ ಅಂಗಗಳನ್ನು ರಂಗದಲ್ಲಿ ಕಲಾವಿದ ಹೇಗೆ ಬಳಸಬಹುದು. ಮೂಕಾಭಿನಯ. ಹೀಗೆ ಬಹಳಷ್ಟು ಉದಾಹರಣೆಗಳ ಸಮೇತ ಕಲಿಸುತ್ತಿದ್ದರು. ಆ ಸಮಯದಲ್ಲಿ ನಾನು  ಕಲಿಸಿದ ಅರ್ಧದಷ್ಟನ್ನಾದರೂ ಎದೆಗಿಳಿಸಿಕೊಂಡಿದ್ದೆನೋ .‌?

ಉಡುಪಿ ರಂಗಭೂಮಿಯ ಯಶಸ್ವೀ ‘ಹೇಮಂತ ” ನಾಟಕದ ಹಲವು ಷೋಗಳ ನಂತರ ನಾಟಕದ ನನ್ನ ಅಭಿನಯ ನಿಂತಿತ್ತು.

ಇದಕ್ಕೆ ಮುಖ್ಯವಾಗಿ ಸಾರ್ವಜನಿಕ ಬದುಕಿನಲ್ಲಿ ಅದರಲ್ಲೂ ರಂಗಭೂಮಿ, ನಾಟಕಗಳಲ್ಲಿ ತೊಡಗಿಸಿಕೊಂಡಾಗ ಹೆಣ್ಣಿಗೆ ಬರಬಹುದಾದ ಹಲವಾರು ತೊಡಕುಗಳು. ಇಲ್ಲಿ ನಿರಂತರವಾಗಿ ತರಬೇತಿ, ಹಗಲು ರಾತ್ರೆ ರಿಹರ್ಸಲ್ಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆ, ಹವ್ಯಾಸಿ ಕಲಾವಿದರೇ ಇರುವುದರಿಂದ ಸಂಜೆ‌ ಸಮಯ ಕಲಾವಿದರಿಗೆ  ರಿಹರ್ಸಲ್ ಗಳಿಗೆ ಸೂಕ್ತ. ಮುಗಿಯುವಾಗ ವೇಳೆ ಬಹಳವಾಗಿರುತ್ತದೆ.

ಮನೆ, ಅಕ್ಕಪಕ್ಕ..  ಇಂತಹ ಹಲವಾರು ಪರದೆಯೊಳಗಿನ ಕಾರಣಗಳು ಕಲಾವಿದೆಯರಿಗೆ, ಅವರ ಕನಸಿನ ಹಾದಿಗೆ ತೊಡಕಾಗುವುದು. ಇಂತಹ ಹಲವು ಕಾರಣಗಳು ನನ್ನ ಅಭಿನಯದ ತುಡಿತಕ್ಕೂ ಲಗಾಮು ಹಾಕಿದ್ದವು. ಆದರೆ ಖಾಲಿಯಾಗಿರಲು ಒಪ್ಪದ ಮನ ಅಲ್ಲೇ ಹೊಸದನ್ನು ಹುಡುಕಾಡುತ್ತಿತ್ತು.

ಆಗ ಕಂಡದ್ದು ಸಂಘಟನೆ. ಸಂಘಟನೆಯತ್ತ ನನ್ನ ಒಲವು ಹರಿದಿತ್ತು.

ಪಾತ್ರದೊಳಗೆ ಅರಿವಜಲ ತುಂಬುತ್ತಾ ಹೋದಂತೆ ತುಳುಕುವುದೂ ಕಡಿಮೆಯಾಗಿ ಚಿಂತನೆಗೆ ಪ್ರಬುದ್ಧತೆ, ಮುಂದಿನ ಹಾದಿಗೆ ಸ್ಪಷ್ಟತೆ ಬರುತ್ತದೆ. ಒಂದಂತೂ ನಿಜ. ಮಹಿಳೆಗೆ ಹೊಸ್ತಿಲು ದಾಟುವುದೂ ಕಷ್ಟ. ಅದರಾಚೆಗಿನ ನಡಿಗೆ ಇನ್ನೂ ಕಷ್ಟ.

*******************************

ಪೂರ್ಣಿಮಾ ಸುರೇಶ್

“ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

9 thoughts on “

  1. ಎಷ್ಟೊಂದು.ಅನುಭವ ಸಿರಿ.ಚೆಂದಕ್ಕೆ ಬರೆದಿರುವೆ

      1. ಅನುಭವದ ಅನುಭೂತಿಯನ್ನು ಇಂಚಿಂಚು ವಿಚಾರ ಲಹರೆಯಲ್ಲಿ ವಿವೇಚಿಸಿದ ರೀತಿ ಅದಮ್ಯ ಚೇತನ

  2. Dear Poornima,
    Really enjoyed. You would have turned out as one of the leading actress in serials and made big name. At the same time it would have been a loss to literary world. But still you have shown your abilities in acting too.

Leave a Reply

Back To Top