ರಾಧೆಯ ಭಾವತಲ್ಲಣ

ರಾಧೆಯ ಭಾವತಲ್ಲಣ

ಚಂದನ  ಜಿ ಪಿ

Radha in abstract pose | Krishna art, Krishna painting, Krishna radha  painting

ನೆನಪಿದೆಯಾ ಕೃಷ್ಣಾ.. 
ಲಲಿತೆ ಏನನ್ನುತಿದ್ದಳು ಎಂದು
ನೀನು ನನಗೆ ಸಿಕ್ಕಿದ್ದು 
ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ 
ಬೃಂದಾವನದ ಹೊನ್ನ ಹೂವಂತೆ
ಯಾರಿಗೂ ಎಟುಕದ ಭಾಗ್ಯವಂತೆ
ನನ್ನ ಏಳೇಳು ಜನ್ಮದ ಪುಣ್ಯವಂತೆ 

ಕೃಷ್ಣಾ..
ಸ್ಮೃತಿ ಪಟಲದಲ್ಲಿ ನಿನ್ನ 
ನೆನಪೆಲ್ಲವೂ ಸ್ಪುಟ-ನಿಚ್ಚಳ 
ನೀ ನನ್ನ ಅರಿತಂತೆ 
ಅರಿತು ನನ್ನ ಬೆರೆತಂತೆ 
ಒಮ್ಮೇಲೆ ನನ್ನ ತೊರೆದಂತೆ  
ತೊರೆದು  ನನ್ನ ಮರೆತಂತೆ 
ಮರೆತವನ ನಾ ನೆನೆದಂತೆ 
ನೆನೆನೆನೆದು ಅತ್ತಂತೆ 

ಕೇಳುತ್ತಿರುವೆಯ ಕೃಷ್ಣಾ..
ವಿಶಾಖ ಏನೆಂದಳು ಗೊತ್ತೆ 
ನೀನು ನನ್ನಿಂದ ದೂರಾದದ್ದು 
ಪೂರ್ವ ಜನ್ಮದ ನನ್ನ ಪಾಪವಂತೆ 
ನಾನು ನತದೃಷ್ಠೆಯಂತೆ 
ನಿನ್ನ ಪ್ರೇಮ ಪೂಜೆಗೆ ಹೂವಾಗಿ 
ಭಾಮಾ ರುಕ್ಮಿಣಿಯರು ಇಹರಂತೆ
ಅವರ ರತ್ನಾಭರಣಗಳ ಮೆರುಗಲ್ಲಿ 
ನನ್ನ ಹೂವಾಭರಣಗಳು ಬಡವಂತೆ  
ನಾನು ಬೃಂದಾವನದ ಕಾಣದ
ಎಲೆ ಮರೆಯ ಮಲ್ಲಿಗೆಯಂತೆ 
ನಿನ್ನ ಕಾಯುವುದು ವ್ಯರ್ಥವಂತೆ 

 ಕೃಷ್ಣಾ..
ಜಗದ ಪರಿವೆ ಬೇಡ ಎನಗೆ 
ಮನಸುಗಳ ಮಿಲನವಾದ ಮೇಲೆ 
ಮದುವೆಯ ಬೇಲಿ ಬೇಕೆ ಹೇಳು 
ನೀ ನುಡಿಸುತ್ತಿದ್ದ ಕೊಳಲ ಇಂಪು 
ನಿನ್ನ ಮೈಯ ಚಂದನದ ಕಂಪು 
ಮಾಮರದಡಿ ಅಪ್ಪಿ ತೂಗಿದ ಜೊಂಪು 
ಯಮುನೆಯಲಿ ಮಿಂದ ತಂಪು  
ರಾಧೆ, ಪ್ರಿಯ ಸಖಿ ರಾಧೆ, ನನ್ನಾಕೆ ರಾಧೆ  
ಎಂದು ಬೃಂದಾವನದಲೆಲ್ಲಾ ಕರೆದ ನೆನಪು 
ಸಾಕೆನಗೆ ಈ ಜನ್ಮಕೆ ಬದುಕಲು 

******

3 thoughts on “ರಾಧೆಯ ಭಾವತಲ್ಲಣ

  1. ಕವನ ಚೆನ್ನಾಗಿದೆ ಚಂದನಾ.. ಒಂದು ಬರಹ ಮಾಡಬಹುದಿತ್ತು ಇದನ್ನು.

Leave a Reply

Back To Top