ಕವಿತೆ
ಭಾವದೆಳೆ
ಅರುಣಾ ನರೇಂದ್ರ
ಎದೆಯ ಮೇಲೆ
ನೀ ಗೀಚಿಟ್ಟು ಹೋದ ಬರಹ
ದಿನವೂ ಓದುತ್ತೇನೆ
ಓದಿದಾಗಲೆಲ್ಲಾ ಒಂದೊಂದು ಅರ್ಥ
ನನ್ನೊಳಗೆ ನಾನು
ಅಂತರ್ಗತವಾಗಿ ಬಿಡುತ್ತೇನೆ
ನಿನ್ನೊಳಗನ್ನು ಅರಿಯುವಷ್ಟರಲ್ಲಿ
ಸಂಪೂರ್ಣ ಮೌನ ಆವರಿಸುತ್ತದೆ
ಕನಸು ಕರಗಿದ ಮೇಲೂ
ಉಳಿದುಕೊಳ್ಳುವ ಕನವರಿಕೆ
ಹಳವಂಡಗಳ ಹುಚ್ಚು ಭ್ರಮೆ
ಬೆಳಕು ಹರಿಯುವ ಮೊದಲು ಮತ್ತೆ ಅದೇ ಕತ್ತಲು
ಬಿಚ್ಚಲಾಗುತ್ತಿಲ್ಲ ಬಿಗಿಯಾಗಿ
ನೀ ಹೆಣೆದ ಭಾವದೆಳೆಗಳನು
ಬಿಡಿಸಿದಷ್ಟೂ ಗಂಟಾಗಿ
ಸುತ್ತಿಕೊಳ್ಳುವ ಸಿಕ್ಕುಗಳು!
ನೇಪಥ್ಯದಲ್ಲಿ ಅದೋ ನಿನ್ನದೇ ರೂಪು
ಕೂಗಿ ಕರೆಯುತ್ತೇನೆ
ನೆಲ ಮುಗಿಲು ಒಂದಾಗುವ ಹಾಗೆ
ಕಡಲು ಕುದಿದು ಉಕ್ಕೇರುವ ಹಾಗೆ
ಹುಡುಕುತ್ತಾ ಹೋದಂತೆಲ್ಲಾ
ನೀ ನನಗೆ ಬಯಲೊಳಗಿನ ಬೆರಗು
ಗಾಳಿಯೊಳಗಿನ ಗಂಧ
ಮಿಂಚಿ ಮಾಯವಾಗುವ ಕೋಲ್ಮಿಂಚು
***************