ದಾರಾವಾಹಿ-

ಅದ್ಯಾಯ-13

shallow focus photo of pig

ಅಂದು ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಶಂಕರ ತನ್ನ ಹೊಚ್ಚ ಹೊಸ ‘ಪಜೆರೋ’ ಕಾರಿನಲ್ಲಿ ಏಕನಾಥರ ಮನೆಯೆದುರು ಬಂದಿಳಿದ. ಅವನ ಹಣೆಯಿಂದ ನಡು ನೆತ್ತಿಯವರೆಗೆ ಬೋಳಾಗಿದ್ದ ಬಕ್ಕ ತಲೆ, ಒರಟೊರಟಾಗಿ ಕಾಣುವ ಎಣ್ಣೆಗೆಂಪಿನ ಅಗಲವಾದ ಮುಖದ ಮುಕ್ಕಾಲು ಭಾಗವನ್ನು ಮುತ್ತಿಕೊಂಡಿದ್ದ ಅರೆಗಪ್ಪು ಅರೆ ಬಿಳುವಿನ ದಟ್ಟ ಗಡ್ಡ ಮೀಸೆಗಳು. ಹರಿತವಾದ ನೋಟ ಬೀರುವ ಅವನ ಕದಡಿದ ಕೆಂಪು ಕಣ್ಣುಗಳು, ಕ್ರೂರತೆಯನ್ನು ಬಿಂಬಿಸುವ ದಪ್ಪ ಹುಬ್ಬುಗಳು, ಬಿಳಿ ಅಂಗಿಯ ಎದೆಯ ಭಾಗದ ಎರಡು ಗುಂಡಿಗಳನ್ನು ತೆರೆದಿಟ್ಟುಕೊಂಡಿದ್ದವನ ಉಬ್ಬಿದ ಕೊರಳಿನಿಂದ ಇಳಿಬಿದ್ದು ರೋಮ ತುಂಬಿದ ವಿಶಾಲ ಎದೆಯ ಮೇಲೆ ನಾಯಿಯ ಸರಪಳಿಗಳಂತೆ ನೇತಾಡುವ ವಿವಿಧ ವಿನ್ಯಾಸದ ನಾಲ್ಕೈದು ಚಿನ್ನದ ಚೈನುಗಳು, ಕಿಸೆಗೆ ನೇತು ಬಿದ್ದ ರೇಬನ್ ಗ್ಲಾಸು. ಅವನು ಮೋಟಾರು ಗ್ಯಾರೇಜ್ ನಡೆಸುತ್ತಿದ್ದ ಕಾಲದಲ್ಲಿ ಎನ್‍ಫೀಲ್ಡ್ ಬೈಕೊಂದರ ಎಂಜಿನ್ ರಿಪೇರಿ ಮಾಡಿ ಟ್ರಾಯಲ್ ಹೊರಟ ಸಂದರ್ಭ, ರಾರ್ಬಟ್ ಸೈಕಲ್‍ವಕ್ರ್ಸ್‍ನ ಎದುರುಗಡೆ ಬಸ್ಸೊಂದು ವೇಗವಾಗಿ ಬಂದು ಬಡಿಯಲಿದ್ದುದನ್ನು ಕ್ಷಣದಲ್ಲಿ ಗ್ರಹಿಸಿ ಬುಲೆಟ್ಟನ್ನು ಸರಕ್ಕನೆ ಸೈಕಲ್ ಶಾಪಿನತ್ತ ನುಗ್ಗಿಸಿದಾಗ ಆಯತಪ್ಪಿದ ಬೈಕ್ ವಿದ್ಯುತ್ ಕಂಬಕ್ಕೆ ಬಡಿದು, ಬಲಗೈಯ ತೋರು ಬೆರಳೊಂದು ಕಂಬಕ್ಕೂ ಬೈಕಿಗೂ ನಡುವೆ ಸಿಲುಕಿ ತುಂಡಾಗಿ ಹಾರಿ ಹೋಗಿತ್ತು. ಆದ್ದರಿಂದ ಉಳಿದ ಒಂಬತ್ತು ಬೆರಳುಗಳಲ್ಲಿ ಏಳು ಬೆರಳುಗಳಿಗೆ ವಜ್ರ ಮತ್ತು ನವರತ್ನಗಳನ್ನು ಕಟ್ಟಿಸಿದ್ದ ಕಣ್ಣು ಕೊರೈಸುವಂಥ ದೊಡ್ಡ ದೊಡ್ಡ ಉಂಗುರಗಳು. ಎಡಗೈಗೆ ಚಿನ್ನದ ಡಾಬಿನ ರ್ಯಾಡೋ ವಾಚು. ಬಲಗೈಯಲ್ಲಿ ನೂರೈವತ್ತು ಗ್ರಾಮ್ ತೂಕದ ಚಿನ್ನದ ಬ್ರಾಸ್‍ಲೆಟ್. ಬ್ರಾಂಡೆಡ್ ಜೀನ್ಸ್ ಮತ್ತು ಉಡ್‍ಲ್ಯಾಂಡ್ ಶೂ ಧರಿಸಿ ಮನುಕುಲದ ಕಣ್ಣು ಕುಕ್ಕುವಂತಿದ್ದ ಶಂಕರ, ಏಕನಾಥರ ಮನೆಯ ಗೇಟಿನೆದುರು ಬಂದು ನಿಂತ.

   ಏಕನಾಥರು ತಮ್ಮ ಕಿಷ್ಕಿಂದೆಯಂಥ ಹಳೆಯ ಮನೆಯ ಹೊರಗಿನ ಇಳಿಮಾಡಿನ ಮಣ್ಣಿನ ಜಗುಲಿಯ ಮೇಲೆ ಮರದ ಕಂಬಕ್ಕೊರಗಿ ಕುಳಿತು ಏನೋ ಯೋಚನೆಯಲ್ಲಿ ಮಗ್ನರಾಗಿದ್ದರು. ಅವರ ಆ ಸಣ್ಣ ಚೌಕಿ ಮನೆಯನ್ನು ಅವರ ಹಿರಿಯರು ಓಬಿರಾಯನ ಕಾಲದಲ್ಲಿ ಕಟ್ಟಿಸಿದ್ದಾಗಿತ್ತು. ದಪ್ಪನೆಯ ಮಣ್ಣಿನ ಗೋಡೆಯ ಮೇಲೆ ಬೋಗಿ ಮರದ ಪಕ್ಕಾಸುಗಳನ್ನು ಜೋಡಿಸಿ, ಓಟೆ ಹಂಚುಗಳನ್ನು ಹೊದೆಸಿ ನಿರ್ಮಿಸಿದ್ದ ಆ ಮನೆಯಿಂದು ಭಾಗಶಃ ಅವನತಿಯ ಅಂಚಿನಲ್ಲಿತ್ತು. ಒಂದು ಕಾಲದಲ್ಲಿ ತುಂಬು ಕುಟುಂಬವಿದ್ದು ನೋವು ನಲಿವುಗಳೊಂದಿಗಿನ ಸುಸಂಸ್ಕೃತ ಜೀವನವನ್ನು ಬಾಳಿ ಬದುಕಿದ ಏಕನಾಥರ ಹಿರಿಯರ ಹತ್ತಾರು ಕೋಣೆಗಳು ಈಗ ಶಿಥಿಲಾವಸ್ಥೆಗೊಂಡಿದ್ದವು. ಪ್ರಸ್ತುತ ಉಳಿದಿರುವ ಒಂದು ಭಾಗವು ಏಕನಾಥರ ಕುಟುಂಬಕ್ಕೆ ಆಶ್ರಯ ನೀಡುತ್ತ ಕ್ಷೀಣವಾಗಿ ಉಸಿರಾಡಿಕೊಂಡಿತ್ತು.

ಶಂಕರನನ್ನು ಕಂಡ ಏಕನಾಥರು ತಮ್ಮ ಯೋಚನೆಯಿಂದ ಹೊರಗೆ ಬಂದು ಅವನತ್ತ ದೀರ್ಘ ನೋಟ ಬೀರಿದರು. ಅವನ ವೇಷಭೂಷಣವನ್ನೂ, ಕಣ್ಣು ಕೊರೈಸುವಂಥ ಅವನ ಶ್ರೀಮಂತಿಕೆಯನ್ನೂ ಕಂಡವರಿಗೆ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದ ಅನುಭವವಾಗಿ ಆ ಕ್ಷಣಕ್ಕೆ ಅವನನ್ನು ಹೇಗೆ ಬರಮಾಡಿಕೊಳ್ಳುವುದೆಂದು ತೋಚದೆ ಚಡಪಡಿಸಿದರು. ಅಷ್ಟರಲ್ಲಿ, ‘ನಮಸ್ಕಾರ ಗುರೂಜಿ ಹೇಗಿದ್ದೀರೀ…? ಎಷ್ಟು ವರ್ಷವಾಯ್ತು ಮಾರಾಯ್ರೆ ನಿಮ್ಮನ್ನು ನೋಡಿ…!’ ಎನ್ನುತ್ತ ಶಂಕರ ಏಕನಾಥರ ಹಳೆಯ ಗೇಟು ತೆರೆಯಲು ತಿಣುಕತೊಡಗಿದ. ಆಗ ಏಕನಾಥರು ಚೇತರಿಸಿಕೊಂಡರು.

‘ಓಹೋ, ಶಂಕರನಾ ಬಾ ಬಾ ಮಾರಾಯಾ, ನಿನ್ನ ಗುರುತೇ ಸಿಗುವುದಿಲ್ಲ ನೋಡು!’ ಎಂದು ಕುಳಿತಲ್ಲಿಂದಲೇ ಅಚ್ಚರಿ ತೋರಿಸುತ್ತ ಅಂದರು.

‘ಹರ್ಕಟ್ಟು ಸೂರಿಗೆ ಮುರ್ಕಟ್ಟು ಬಾಗಿಲು!’ ಎಂಬಂತಿದ್ದ ಏಕನಾಥರ ಆ ಗೇಟು ಅಲ್ಲಲ್ಲಿ ತುಕ್ಕು ಹಿಡಿದು ಉದುರಿ ತಿರುಗಣೆ ಕಳಚಿಕೊಂಡಿತ್ತು. ಅದನ್ನು ಹೇಗೆ ತೆರೆಯುವುದೆಂದು ತಿಳಿಯದ ಶಂಕರ ಒಂದು ನಿಮಿಷ ನಿಂತಲ್ಲಿಯೇ ನಿಂತು ಏಕನಾಥರನ್ನು ಮಿಕಮಿಕ ನೋಡಿದ. ನಂತರ, ‘ಈ ಗೇಟನ್ನು ಹೇಗೆ, ಎಲ್ಲಿಂದ ತೆಗೆಯಬೇಕು ಗುರೂಜಿ…!’ ಎಂದ ನಗುತ್ತ. ಆದರೂ ಏಕನಾಥರು ತಾವೇ ಎದ್ದು ಹೋಗಿ ಗೇಟು ತೆರೆದು ಅವನಿಗೆ ರಾಜಮರ್ಯಾದೆ ನೀಡಲು ಯಾಕೋ ಅರೊಳಗಿನ ಮೇಲರಿಮೆಯು ಬಿಡಲಿಲ್ಲ. ಆದ್ದರಿಂದ, ‘ಹಾಗೆಯೇ ಎತ್ತಿ ಬದಿಗೆ ತಳ್ಳಿಕೊಂಡು ಬಾ ಮಾರಾಯಾ…!’ ಎಂದರು ತಾವೂ ನಗುತ್ತ. ಅವರ ಅಸಡ್ಡೆಯನ್ನು ಕಂಡ ಶಂಕರನಿಗೆ ಅಸಹನೆಯೆದ್ದಿತು. ಆದರೂ ತಾಳ್ಮೆ ತಂದುಕೊಂಡ. ಈಗ ತಾನು ಈ ಗೇಟನ್ನು ಒಟ್ಟಾರೆ ತಳ್ಳಿದೆನೆಂದರೆ ಇದು ಕೈಯಲ್ಲೇ ಕಿತ್ತು ಬರುವುದು ಖಂಡಿತಾ ಎಂದೆನ್ನಿಸಿತವನಿಗೆ. ಹಾಗಾಗಿ ಆದಷ್ಟು ಜಾಗ್ರತೆಯಿಂದ ಎಳೆದು ಸರಿಸಿ ಅದರ ಸಪೂರ ಎಡೆಯಿಂದ ತನ್ನ ದಪ್ಪ ದೇಹವನ್ನು ತೂರಿಸಿಕೊಂಡು ಅಂಗಳಕ್ಕಡಿಯಿಟ್ಟವನು ಮರಳಿ, ‘ಹೇಗಿದ್ದೀರಿ ಗುರೂಜಿ…?’ ಎನ್ನುತ್ತ ಅವರ ಸಮೀಪ ಬಂದ.

‘ಹೇಗಿರುವುದು ಮಾರಾಯ…ನೋಡು ಹೀಗಿದ್ದೇವೆ. ನಿನ್ನದೆಂಥದು ಈ ಬಗೆಯ ದವಲತ್ತು? ಸಿಕ್ಕಾಪಟ್ಟೆ ಸಾಹುಕಾರನಾಗಿ ಬಿಟ್ಟಿದ್ದಿಯಲ್ಲ ಮಾರಾಯಾ! ನಿನ್ನನ್ನು ನೋಡುವಾಗ ಅಂದಿನ ಆ ಸಿಂಬಳ ಬುರುಕ, ನಮ್ಮ ಹಿಂದೆ ಹಿಂದೆಯೇ ಓಡಾಡಿಕೊಂಡಿದ್ದ ಆ ದರಬೇಸಿ ಶಂಕರ ಹೌದೋ ಅಲ್ಲವೋ ಅಂತ ಅನುಮಾನ ಬರುತ್ತಿದೆ ಮಾರಾಯಾ. ಅಷ್ಟೊಂದು ಬದಲಾಗಿಬಿಟ್ಟಿದ್ದಿ. ಅಂಥದ್ದೆಂಥ ಬಿಜಿನೆಸ್ಸು ನಿನ್ನದು?’ ಎಂದು ಅವನನ್ನು ಅಚ್ಚರಿಯಿಂದ ನೋಡುತ್ತ ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು. ‘ಹೇ, ದೇವಕೀ, ನಮ್ಮ ಹಳೆಯ ದೋಸ್ತಿಯೊಬ್ಬ ಬಂದಿದ್ದಾನೆ ಮಾರಾಯ್ತೀ…ಅವನಿಗೆ ಕುಡಿಯಲೇನಾದರೂ ಬಾಯಾರಿಕೆ ತಕೊಂಡು ಬಾರೇ…!’ ಎಂದು ಹೆಂಡತಿಗೆ ಕೂಗಿ ಹೇಳಿದವರು ಮರಳಿ ಅವನತ್ತ ತಿರುಗಿ ನಗುತ್ತ ಲೋಕಾಭಿರಾಮಕ್ಕಿಳಿದರು. ಸ್ವಲ್ಪಹೊತ್ತಲ್ಲಿ ದೇವಕಿ ಎರಡು ಲೋಟ ಲಿಂಬೆ ಪಾನಕವನ್ನು ತಂದು ಅವರೆದುರಿಗಿಟ್ಟು ಒಳಗೆ ಹೋದಳು.

ಶಂಕರ, ಏಕನಾಥರೊಂದಿಗೆ ಮಾತಾಡುತ್ತ ಅವರ ಮನೆಯ ಅವಸ್ಥೆಯನ್ನೂ ಅವರ ಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಹಾಗಾಗಿ ಅವರ ದುರಾವಸ್ಥೆಯನ್ನು ಕಂಡವನಿಗೆ ವಿಸ್ಮಯವಾಯಿತು. ಜೊತೆಗೆ ಇವನಂಥ ನಿರ್ಗತಿಕನಿಂದಲೇ ತನ್ನ ಕೆಲಸ ಹೆಚ್ಚು ಸಲೀಸಾಗಿ ನೆರವೇರಲು ಸಾಧ್ಯ! ಎಂದೂ ಯೋಚಿಸಿದವನಿಗೆ ಖುಷಿಯೂ ಆಯಿತು. 

‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.

‘ಏನು ಮಾಡುವುದು ಮಾರಾಯಾ…? ಅಷ್ಟು ವರ್ಷ ಪರವೂರಿನಲ್ಲಿದ್ದು ಕತ್ತೆಯಂತೆ ದುಡಿದೆವೇ ಹೊರತು ಮೋಸ, ದಗಲ್ಬಾಜಿ ಮಾಡಿ ಹಣ ಸಂಪಾದಿಸಬೇಕೆಂದು ನಮಗೆ ಹೊಳೆಯಲೇ ಇಲ್ಲ ನೋಡು. ನಮ್ಮನ್ನು ದುಡಿಸಿಕೊಂಡವರು ಕೂಡಾ ಖಾಲಿ ಕೈಯಲ್ಲೇ ಕಳುಹಿಸಿಬಿಟ್ಟರು. ಹಾಗಾಗಿ ಇಂದು ನಿನ್ನ ಮುಂದೆ ಈ ಸ್ಥಿತಿಯಲ್ಲಿ ಕುಳಿತಿದ್ದೇವೆ ನೋಡು. ಹ್ಞಾಂ! ಆದರೂ ಒಂದು ಮಾತು ಶಂಕರ, ಏನೆಂದರೆ ಈಗಿನ ನಮ್ಮ ಸಮಾಜದ ಹಲವು ಮತ ಧರ್ಮಗಳ ಬುದ್ಧಿವಂತರೆಲ್ಲ ತಮ್ಮ ಮತ್ತು ಸಮಾಜದ ಏಳಿಗೆ, ಯಶಸ್ವಿಗಾಗಿ ಕಲಿತಿರುವಂಥ ವೇದವಿದ್ಯೆಗಳನ್ನೂ, ತಾಂತ್ರಿಕ ಸಿದ್ಧಿಗಳನ್ನೂ ನಾವು ಕೂಡಾ ಹಠ ಹಿಡಿದು ಒಲಿಸಿಕೊಂಡಿದ್ದೇವೆ ಮಾರಾಯಾ. ಹಾಗಾಗಿ ಅವು ನಮ್ಮ ಕೈಯಲ್ಲಿರುವತನಕ ಯಾವುದರ ಭಯ ಹೇಳು? ನಮ್ಮದೇ ಸಮಾಜದ ವಿಷಯದಲ್ಲಿ ಹೇಳುವುದಾದರೆ ಮನೆಮಠಗಳ ವಾಸ್ತುದೋಷವನ್ನು ನಿವಾರಿಸಬಲ್ಲೆವು. ನಾಗದೋಷವನ್ನು ಸರಿಪಡಿಸಬಲ್ಲೆವು. ಜಾತಕದೋಷವನ್ನೂ ಪರಿಹರಿಸಬಲ್ಲೆವು. ಹೊಸ ಜ್ಯೋತಿಷ್ಯವೂ ಗೊತ್ತಿದೆ. ಮಾಟಮಂತ್ರಗಳಂಥ ವಿದ್ಯೆಯನ್ನೂ ಒಂದು ಮಟ್ಟಿಗೆ ಕಲಿತಿದ್ದೇವೆ. ಈಗ ಊರಿಗೆ ಬಂದು ಒಂದೆರಡು ತಿಂಗಳಾದುದಷ್ಟೆ ಅಲ್ಲವಾ. ಇನ್ನೂ ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಂಡ ಮೇಲೆ ನಮ್ಮ ಕಾಯಕವನ್ನು ಊರಿನಲ್ಲಿಯೇ ಶುರು ಮಾಡಬೇಕೆಂದಿದ್ದೇವೆ. ಯಾವುದಕ್ಕೂ ಕಾಲ ಕೂಡಿ ಬರಬೇಕು ನೋಡು?’ ಎಂದು ಹೇಳುತ್ತ ತಮ್ಮ ಮೇಲೆ ಅವನಿಗಿದ್ದ ಹಗುರಭಾವನೆಗಳಿಗೆ ಎದಿರೇಟು ಕೊಟ್ಟರು. ಏಕನಾಥರ ಗತ್ತಿನ ಮಾತಿನಿಂದ ಶಂಕರ ಸ್ವಲ್ಪ ಕಸಿವಿಸಿಯಾದ. ಏಕೆಂದರೆ, ‘ನಿನಗಿಂತ ನಾವೇ ಮೇಲಿದ್ದೇವೋ ಮೂರ್ಖ!’ ಎಂದು ಅವರು ಸೂಕ್ಷ್ಮವಾಗಿ ಸೂಚಿಸಿದಂತೆ ಅವನಿಗನ್ನಿಸಿತು. ಆದರೆ ಅವರ ಆ ವಿವರಣೆಯಿಂದ, ಅವರ ಶಕ್ತಿಯೇನೆಂಬುದನ್ನೂ ತಿಳಿದವನು ತಾನು ಬಯಸಿ ಬಂದುದು ಇವನ ಬಳಿ ಹೇರಳವಾಗಿದೆ! ಎಂದೂ ಭಾವಿಸಿದ. ಆದ್ದರಿಂದ ಅಹಂಕಾರವನ್ನು ಬದಿಗೊತ್ತಿ ನಕ್ಕ.

‘ಓಹೋ ಹೌದಾ ಗುರೂಜೀ, ಇಷ್ಟೆಲ್ಲ ವಿದ್ಯೆಗಳನ್ನು ಕಲಿತು ಬಂದಿದ್ದೀರಾ? ಹಾಗಾದರೆ ಚಿಂತೆಯಿಲ್ಲ ಬಿಡಿ. ನಿಮಗೇನು ಅಂಥ ವಯಸ್ಸಾಗಿರುವುದು? ಇನ್ನು ನಾಲ್ಕೈದು ವರ್ಷದೊಳಗೆ ಯಥೇಚ್ಛವಾಗಿ ಸಂಪಾದಿಸಬಹುದು. ಅದು ಹಾಗಿರಲಿ. ನಾನು ಬಂದ ವಿಷಯ ಮಾತಾಡುವನಾ…?’ ಎಂದ ಮೃದುವಾಗಿ.

‘ಓಹೋ ಹೌದಲ್ಲವಾ ಮಾರಾಯಾ. ಈ ಮಾತುಕತೆಯಲ್ಲಿ ಅದು ಮರೆತೇ ಹೋಯಿತು ನೋಡು. ಹೌದೂ, ಏನು ವಿಷ್ಯ ಹೇಳು?’ ಎಂದು ಏಕನಾಥರೂ ಆಸಕ್ತಿಯಿಂದ ಪ್ರಶ್ನಿಸಿದರು.

‘ಅಂಥದ್ದೇನಿಲ್ಲ ಗುರೂಜೀ, ನೇರವಾಗಿ ವಿಷಯಕ್ಕೆ ಬರುತ್ತೇನೆ. ತಪ್ಪು ತಿಳ್ಕೋಬೇಡಿ. ನಿಮ್ಮಿಂದ ನನಗೊಂದು ಸಣ್ಣ ಉಪಕಾರವಾಗಬೇಕು. ಅದನ್ನು ನೀವು ಮಾಡಿಕೊಟ್ಟಿರಾದರೆ ನಿಮ್ಮ ಈ ಹಳೆಯ ಮನೆಯನ್ನು ಗಟ್ಟಿಮುಟ್ಟು ರಿಪೇರಿ ಮಾಡಿಕೊಡುವ ಜವಾಬ್ದಾರಿ ನನ್ನದು ಏನಂತೀರೀ…?’ ಎಂದು ಶಂಕರ, ಏಕನಾಥರಿಗೆ ಏಕಾಏಕಿ ದೊಡ್ಡ ಆಸೆಯೊಂದನ್ನು ತೋರಿಸಿದ. ಆದರೆ ಏಕನಾಥರು ಶಂಕರನಿಗಿಂತ ದುಪ್ಪಟ್ಟು ಬುದ್ಧಿವಂತರು. ಹಾಗಾಗಿ ಅವನ ಸಂಚನ್ನು ತಟ್ಟನೆ ಗ್ರಹಿಸಿದವರು, ತಮ್ಮಿಂದ ಇವನಿಗೇನೋ ದೊಡ್ಡ ಕೆಲಸವೇ ಆಗಬೇಕಿದೆ. ಅದಕ್ಕೇ ಮನೆ ರಿಪೇರಿಯ ಮಾತಾಡುತ್ತಿದ್ದಾನೆ ಖದೀಮ! ಇರಲಿ. ವಿಷಯವೇನೆಂದು ತಿಳಿದ ಮೇಲೆಯೇ ಒಪ್ಪಂದ ಮಾಡಿಕೊಳ್ಳುವ!’ ಎಂದು ಯೋಚಿಸಿದರು.

‘ಆಯ್ತು ಮಾರಾಯ ನೀನು ನಮ್ಮ ಇವತ್ತು ನಿನ್ನೆಯ ದೋಸ್ತಿಯಾ ಹೇಳು? ನಿನಗೆ ಉಪಕಾರವಾಗುವುದಾದರೆ ನಮಗೆ ಅದಕ್ಕಿಂತ ಹೆಮ್ಮೆಯ ಸಂಗತಿ ಬೇರೇನಿದೆ?’ ಎಂದು ನಗುತ್ತ ಅಂದವರು, ‘ಹೌದೂ, ವಿಷಯವೇನೆಂದು ಹೇಳು ಮಾರಾಯಾ?’ ಎಂದರು ಗಂಭೀರವಾಗಿ.

‘ಅಂಥ ತಲೆ ಹೋಗುವ ಕೆಲಸವೇನೂ ಅಲ್ಲ ಗುರೂಜಿ. ನನ್ನ ವ್ಯವಹಾರ ನಿಮಗೆ ಗೊತ್ತೇ ಉಂಟಲ್ಲವ, ರೀಯಲ್ ಎಸ್ಟೇಟು. ಅದರಿಂದಲೇ ಒಂದಿಷ್ಟು ಆಸ್ತಿಪಾಸ್ತಿ ಮಾಡಿಕೊಂಡು ತಕ್ಕಮಟ್ಟಿಗೆ ಚೆನ್ನಾಗಿದ್ದೇನೆ. ಆದರೆ ಅಷ್ಟಾದ ಮೇಲೂ, ಇನ್ನು ಸಾಕಪ್ಪಾ…! ಎಲ್ಲಾ ರಗಳೆಗಳನ್ನು ಬದಿಗಿಟ್ಟು ಆರಾಮವಾಗಿದ್ದು ಬಿಡುವ ಎಂದುಕೊಳ್ಳಲು ಅದೇನು ಸರಕಾರಿ ನೌಕರಿಯಾ ಹೇಳಿ? ಒಂದುವೇಳೆ ನಾವು ಹಾಗೆ ಯೋಚಿಸಿದರೂ ಕಟ್ಟಿಕೊಂಡ ವ್ಯವಹಾರಗಳು ನಮ್ಮನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡಬೇಕಲ್ಲ! ಈ ಫೀಲ್ಡ್‍ನಲ್ಲಿ ಇರುವತನಕ ಏನಾದರೊಂದು ಡೀಲ್ ಮಾಡಿಕೊಂಡೇ ಇರಬೇಕಾಗುತ್ತದೆ. ಹಾಗಾಗಿ ಎರಡು ವರ್ಷಗಳ ಹಿಂದೆ ಒಂದು ಮರ್ಡರ್ ಕೇಸಿನ ಲಫಡಾದಲ್ಲೂ ಸಿಕ್ಕಿಬಿದ್ದು ಅದರಿಂದ ‘ಅಂದರ್!’ ಆಗಿ ಒಂದು ವರ್ಷ ಹಾಳಾಗಿ ಹೋಯ್ತು. ಹೊರಗೆ ಬಂದ ನಂತರ ಈಗ ಮತ್ತೆ ಒಂದು ದೊಡ್ಡ ವ್ಯವಹಾರಕ್ಕೆ ಕೈ ಹಾಕಿದ್ದೇನೆ!’ ಎಂದು ಶಂಕರ ತನ್ನ ಸಾಧನೆಯನ್ನು ಹೆಮ್ಮೆಯಿಂದಲೂ ಮತ್ತು ಅವರಿಗೆ ತನ್ನ ಮೇಲೆ ಸ್ವಲ್ಪ ಭಯವೂ ಹುಟ್ಟಲಿ ಎಂಬ ಧಾಟಿಯಿಂದಲೂ ಹೇಳಿದ.

‘ಕೊಲೆ’ ಎಂದ ಕೂಡಲೇ ಏಕನಾಥರಿಗೆ ತಟ್ಟನೆ ಅಳುಕಾಯಿತು. ‘ಹೌದಾ ಮಾರಾಯಾ…? ನೀನು ಮರ್ಡರ್ ಕೇಸಿನಲ್ಲಿ ಒಳಗಿದ್ದಿಯಾ…! ಯಾರು, ಯಾರನ್ನು ಕೊಲೆ ಮಾಡಿದ್ದು ಮಾರಾಯಾ? ನೀನೇ ಮಾಡಿದ್ದಾ…?’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು.

‘ಅಯ್ಯೋ ಅದು ಬಿಡಿ ಗುರೂಜಿ, ಎಲ್ಲೆಲ್ಲಿಂದಲೋ ಬಂದವುಗಳೆಲ್ಲ ನಮ್ಮೂರಿನಲ್ಲಿ ರಾಜ್ಯಭಾರ ಮಾಡಲು ಹೊರಟರೆ ನಾವು ಸುಮ್ಮನಿರುತ್ತೇವಾ ಹೇಳಿ? ಹೇಳುವುದನ್ನು ಅವನಿಗೆ ಒಳ್ಳೆಯ ರೀತಿಯಲ್ಲೇ ಹೇಳಿದೆ. ಆದರೆ ಅವನಿಗದು ನಾಟಲಿಲ್ಲ. ಬುದ್ಧಿವಾದವನ್ನೂ ಹೇಳಿ ನೋಡಿದೆ. ದರ್ವೇಶಿ ಅದಕ್ಕೂ ಜಗ್ಗದೆ ನನ್ನ ಹತ್ತಿರವೇ ಪಿಸಂಟ್ ತೋರಿಸಿದ. ಹಿಡ್ಕೊಂಡು ನಾಲ್ಕು ಒದ್ದು ಸರಿದಾರಿಗೆ ತರುವ ಅಂತ ಯೋಚಿಸಿದೆ. ಆದರೆ ಅವನ ದುರಾದೃಷ್ಟಕ್ಕೆ ಒಂದೇ ಪೆಟ್ಟಿಗೆ ಕಲಾಸ್ ಆಗಿಬಿಟ್ಟ. ಒಟ್ಟಾರೆ ನನ್ನ ಗ್ರಹಚಾರ. ಅದು ಬಿಡಿ, ಮುಗಿದು ಹೋದ ಕಥೆ!’ ಎಂದ ಶಂಕರ ಉದಾಸೀನ ನಟಿಸುತ್ತ.

‘ತಾನೇ ಒಬ್ಬನನ್ನು ಹೊಡೆದು ಕೊಂದುಬಿಟ್ಟೆ!’ ಎಂದ ಶಂಕರನ ಮಾತಿನಿಂದ ಏಕನಾಥರು ತೀವ್ರ ಕಳವಳಪಟ್ಟರು. ಛೇ, ಛೇ! ಇವನು ಈ ಮಟ್ಟಕ್ಕೆ ಇಳಿದವನಾ…? ಹಾಗಾದರೆ ಇವನೊಡನೆ ವ್ಯವಹರಿಸುವುದು ಬಹಳ ಅಪಾಯ! ಇಂಥ ಕೊಲೆಗಡುಕನ ಸಹವಾಸ ಮಾಡಿದೆವೆಂದರೆ ಮುಂದೆ ತಮಗೆ ಸಮಾಜದಲ್ಲಿ ಮರ್ಯಾದೆ ದೊರಕೀತಾ…? ಎಂದೆಲ್ಲ ಯೋಚಿಸಿದವರ ಮನಸ್ಸು ತುಸು ಕಹಿಯಾಯಿತು. ಆದರೂ ಮುಂಬೈಯಲ್ಲಿ ತಾವೂ ಎಂಥೆಂಥ ಪಂಟರನ್ನೂ, ರೌಡಿಗಳನ್ನೂ ಕಂಡು ಬಂದವರು. ಅಂಥವರ ಮುಂದೆಲ್ಲ ಇವನು ಬೋಸುಡಿಮಗ ಯಾವ ಲೆಕ್ಕಕ್ಕೆ! ಇರಲಿ. ಇವನೇನು ಮಾಡಿದ್ದರೂ ತಮಗೇನಾಗಬೇಕಿದೆ? ಎಂದು ಧೈರ್ಯ ತಂದು ಕೊಂಡು ಆ ವಿಷಯವನ್ನು ಬದಿಗೊತ್ತಿ, ಇವನು ತಮ್ಮ ಹತ್ತಿರ ಬಂದಿರುವ ಕೆಲಸವೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆಮೇಲೆ ಏನು ಮಾಡಬೇಕೆಂಬುದನ್ನು ನಿರ್ಧರಿಸಿದರಾಯ್ತು ಎಂದು ಯೋಚಿಸಿದವರು, ‘ಯಾರು ಮಾರಾಯ ಅವನು ನಿನ್ನನ್ನು ಎದುರು ಹಾಕಿಕೊಂಡ ನತದೃಷ್ಟ?’ ಎಂದು ನಗುತ್ತ ಅವನನ್ನು ಉಬ್ಬಿಸಿದರು.

‘ಯಾವನೋ ಒಬ್ಬ ಉತ್ತರ ಕರ್ನಾಟಕದಾಚೆಯವನು ಗುರೂಜೀ. ಅವನಿಗೆ ನನ್ನ ಕೈಯಿಂದಲೇ ಮರಣ ಬರೆದಿತ್ತು ಅಂತ ಕಾಣುತ್ತದೆ. ಸತ್ತೇ ಹೋದ. ಅದಿರಲಿ. ನಾನು ಬಂದ ವಿಷಯ ಮಾತಾಡುವನಾ…?’ ಎಂದು ಶಂಕರ ಮರಳಿ ಪ್ರಶ್ನಿಸಿದ.

‘ಸರಿ, ಸರಿ ಅದನ್ನು ಹೇಳು!’ ಎಂದರು ಏಕನಾಥರೂ ಆಸಕ್ತಿಯಿಂದ.

‘ಇತ್ತೀಚೆಗೆ ನಾನೊಂದು ಐವತ್ತೆಕರೆ ಜಮೀನು ಕೊಂಡೆ ಗುರೂಜಿ. ಅದಕ್ಕೆ ಸಂಬಂಧಪಟ್ಟೇ ನಿಮ್ಮಲ್ಲಿಗೆ ಬಂದಿರುವುದು. ನಿಮಗೆ ಕೇಳುವ ಪುರುಸೋತ್ತಿದ್ದರೆ ಮೊದಲು ಅದರ ಕಥೆಯನ್ನು ಸ್ವಲ್ಪ ಹೇಳುತ್ತೇನೆ. ಒಳ್ಳೆಯ ಮಜಾ ಉಂಟು! ಆಮೇಲೆ ಮುಂದಿನ ವಿಷಯ ಮಾತಾಡುವ ಏನಂತೀರಾ?’ ಎಂದ ಶಂಕರ ಉತ್ಸಾಹದಿಂದ.

‘ಅಯ್ಯೋ ಮಾರಾಯಾ, ಸಮಯ ಇರದೆ ಏನು? ನಮ್ಮ ಕಥೆ ಏನೂಂತ ನಿನಗೆ ಆಗಲೇ ಹೇಳಿದೆವಲ್ಲ. ಹಾಗಾಗಿ ನಿನ್ನ ಕಥೆಯನ್ನು ಆರಾಮವಾಗಿ ಹೇಳಬಹುದು…!’ ಎಂದರು ತಾವೂ ಕುತೂಹಲದಿಂದ. ಆಗ ಶಂಕರ ಗೆಲುವಿನಿಂದ ಕಥೆಯನ್ನಾರಂಭಿಸಿದ.

‘ಇಲ್ಲೇ ಶೀಂಬ್ರಗುಡ್ಡೆಯ ಸಮೀಪದ ಬಾಕುಡಬೈಲಿನಲ್ಲಿರುವ ಜಮೀನದು ಗುರೂಜಿ. ಅದನ್ನು ಕೊಳ್ಳುವಾಗ ಹೇಗಿತ್ತು ಅಂತೀರಿ? ಇನ್ನೂರು ಮುನ್ನೂರು ವರ್ಷಗಳಿಂದಲೂ ಪಾಳು ಬಿದ್ದಂಥ ರಣ ಕಾಡಾಗಿತ್ತದು! ಅದರೊಳಗೆ ಎಂಥೆಂಥ ಭಯಂಕರ ಪ್ರಾಣಿಗಳಿದ್ದವೋ ದೇವರಿಗೇ ಗೊತ್ತು! ನಮ್ಮ ಕಣ್ಣಿಗೆ ಬಿದ್ದವುಗಳಲ್ಲಿ ಕಾಡುಹಂದಿ, ಮುಳ್ಳುಹಂದಿ, ಚಿಪ್ಪುಹಂದಿ, ಕತ್ತೆಕಿರುಬ, ಬರ್ಕ (ಬರಿಂಕಾ) ಹೆಬ್ಬಾವು, ಕಂದೊಡಿ, ಸರ್ಪಗಳಂಥ ಭಯಂಕರ ಜಂತುಗಳ ದಂಡೇ ಇತ್ತು. ಆ ಜಾಗದ ಕಾಡು ಕಡಿದು ಸಮತಟ್ಟು ಮಾಡುವ ಕೆಲಸವನ್ನು ನನ್ನ ದೋಸ್ತಿ ಪುರಂದರಣ್ಣ ಮತ್ತು ಅವರ ಪಾರ್ಟನರ್ ರಫಿಕ್‍ನಿಗೆ ವಹಿಸಿಕೊಟ್ಟಿದ್ದೆ. ಅವರು ಆ ಕೆಲಸದಲ್ಲಿ ಅನುಭವಸ್ಥರು. ಅಲ್ಲದೇ ಅಂಥ ಕೆಲಸಕ್ಕಾಗಿ ಅವರೊಡನೆ ಭಟ್ಕಳದ ಯಾವುದೋ ಹಳ್ಳಿಯಿಂದ ಬಂದಿದ್ದ ಕೆಲಸಗಾರರ ಎರಡು ಕುಟುಂಬವೂ ಇತ್ತು. ಯಬ್ಬಾ! ಆ ಮನುಷ್ಯರೇ…! ಅವರೆಲ್ಲ ಥೇಟ್ ಕಾಡು ಮನುಷ್ಯರ ಥರಾನೇ ಇದ್ದರು ಗುರೂಜೀ! ಕಾಡು ಕಡಿಯುವುದಕ್ಕಿಂತ ಮೊದಲು ಕಾಡಿನೊಳಗೆ ಎಂಥೆಂಥ ಪ್ರಾಣಿಗಳಿವೆ. ಅವುಗಳನ್ನು ಹೇಗೆ ಯಾವ ಯಾವ ತಂತ್ರಗಳಿಂದ ಬೇಟೆಯಾಬೇಕು? ಎಂಬುದೆಲ್ಲ ಅವರ ಹೆಂಗಸರು ಮಕ್ಕಳಾದಿಯಾಗಿ ಎಲ್ಲರಿಗೂ ಗೊತ್ತಿತ್ತು!

   ಆವತ್ತು ಕೆಲಸ ಆರಂಭಿಸುವ ದಿನ ನಾನೂ ಅಲ್ಲೇ ಇದ್ದೆ. ಅವರ ತಂಡದ ಮುಖಂಡನಾದ ಹಣ್ಣು ಹಣ್ಣು ಮುದುಕನೊಬ್ಬ ಆ ಕಾಡಿನೊಳಗೆ ಸುಮಾರು ದೂರವರೆಗೆ ಒಬ್ಬನೇ ಸುತ್ತಾಡಿಕೊಂಡು ಹೋದವನು ಸ್ವಲ್ಪ ಹೊತ್ತಿನ ನಂತರ ಹಿಂದಿರುಗಿದ. ಅಲ್ಲಿ ಒಂದು ಕಡೆ ದಟ್ಟ ಪೊದೆಯೊಳಗೆ ಅವನಿಗೆ ಯಾವುದೋ ಪ್ರಾಣಿಗಳಿದ್ದುದು ಅವುಗಳ ವಾಸನೆಯಿಂದಲೇ ತಿಳಿಯಿತಂತೆ! ಮುದುಕನ ಸೂಚನೆಯಂತೆ ಕೂಡಲೇ ಬೇಟೆಗಾರರಂತಿದ್ದ ಐದಾರು ಹುಡುಗರು ಆ ಪ್ರಾಣಿಗಳಿದ್ದ ಜಾಗದ ಸುತ್ತಮುತ್ತ ಉದ್ದಕ್ಕೆ ಮೀನು ಹಿಡಿಯುವ ಬಲೆಯನ್ನು ಕಟ್ಟಿದರು. ಇನ್ನೊಂದಷ್ಟು ಮಂದಿ ಪೊದೆಯ ಮೂರೂ ದಿಕ್ಕುಗಳಿಂದಲೂ ಡಬ್ಬ, ಬಟ್ಟಲು ಮತ್ತು ಪಾತ್ರೆಪಗಡಗಳನ್ನೆಲ್ಲ ಕರ್ಕಶವಾಗಿ ಬಡಿಯುತ್ತ, ಬೊಬ್ಬೆ ಹಾಕುತ್ತ ಆ ಪ್ರಾಣಿಗಳನ್ನು ಪೊದೆಯಿಂದ ಹೊರಗಟ್ಟತೊಡಗಿದರು. ಅವು ಹೆದರಿ ದಿಕ್ಕಾಪಾಲಾಗಿ ಓಡತೊಡಗಿದವು. ಆದರೆ ಅವುಗಳನ್ನು ಬಲೆಯ ಕಡೆಗೆ ಓಡಿಸುವ ಉಪಾಯ ಅವರದ್ದು. ಇದನ್ನೆಲ್ಲ ನಾವು ಸುಮಾರು ದೂರದ ಒಂದು ಮರದಡಿಯಲ್ಲಿ ನಿಂತುಕೊಂಡು ಕುತೂಹಲದಿಂದ ನೋಡುತ್ತಿದ್ದೆವು.

   ಅಯ್ಯಬ್ಬಾ! ಎಂಥದು ಸಾವು ನೋಡುವುದಾ ಗುರೂಜಿ…! ಮರಿಯಾನೆ ಗಾತ್ರದ ಮೂರು ಕಾಡುಹಂದಿಗಳು! ಅವು ಒಂದೇ ಉಸಿರಿಗೆ ಪೊದೆಯನ್ನು ಸೀಳಿಕೊಂಡು ಹೊರಗೆ ನುಗ್ಗಿದವು. ಅದರಲ್ಲೊಂದು ದೊಡ್ಡ ಹಂದಿಗೆ ಒಂದೊಂದು ಅಡಿಯುದ್ದದ ದಾಡೆಯಿತ್ತು. ಆದರೆ ಅದು ತನ್ನನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದ ಜನರತ್ತ ನುಗ್ಗುವುದನ್ನು ಬಿಟ್ಟು ಎಲ್ಲೋ ದೂರದಲ್ಲಿ ನಮ್ಮಪಾಡಿಗೆ ನಾವು ನಿಂತುಕೊಂಡು ಮಜಾ ನೋಡುತ್ತಿದ್ದ ನಮ್ಮತ್ತಲೇ ಗುರಿಯಿಟ್ಟು ಧಾವಿಸಬೇಕೇ! ಅದನ್ನು ನೋಡಿದ ರಫಿಕ್ ಉಚ್ಚೆ ಹುಯ್ದುಕೊಳ್ಳುವುದೊಂದೇ ಬಾಕಿಯಿತ್ತು ನೋಡಿ. ‘ಯಾ, ಅಲ್ಲಹ್…! ಸೂವರ್‍ಗೆ ಹುಟ್ಟಿದ ಈ ಪ್ರಾಣಿ ಇವತ್ತು ನಮ್ಮನ್ನು ಹಲಾಲ್ ಮಾಡಿಯೇ ತೀರುತ್ತದೆ ಶಂಕರಣ್ಣಾ… ಪುರಂದರಣ್ಣಾ ಓಡುವ, ಓಡುವಾ ಮಾರಾಯ್ರೇ…!’ ಎಂದರಚುತ್ತ ಹೇಗೆ ಓಡಿದನೆಂದರೆ ಅವನು ಕಾಲಿಟ್ಟ ನೆಲದಲ್ಲಿ ಮತ್ತೆ ಹುಲ್ಲು ಕಡ್ಡಿಯೂ ಹುಟ್ಟಲಿಕ್ಕಿಲ್ಲ ನೋಡಿ. ಹಾಗೆ ಎಸ್ಕೇಪ್ ಆಗಿಬಿಟ್ಟಿದ್ದ. ಆದರೆ ಪುರಂದಣ್ಣನಿಗೆ ಪಾಪ ತಮ್ಮ ಡೊಳ್ಳು ಹೊಟ್ಟೆಯನ್ನು ಹೊತ್ತುಕೊಂಡು ಅವನಷ್ಟು ವೇಗವಾಗಿ ಓಡಲಾಗುತ್ತದೆಯೇ…? ಅವರು ಪಾಪ ಧೂಳೆಬ್ಬಿಸುತ್ತ ಓಡುತ್ತಿದ್ದ ಅವನ್ನೂ, ನನ್ನನ್ನೂ ಶಾಕ್ ಹೊಡೆದವರಂತೆ ನಿಂತುಕೊಂಡು ನೋಡುತ್ತಲೇ ಇದ್ದರು.

   ಆದರೆ ಈ ಇಬ್ಬರು ಪುಕ್ಕಲರ ಮಧ್ಯೆ ನನ್ನ ಅವಸ್ಥೆಯನ್ನು ಕೇಳಿ ಗುರೂಜೀ. ಮೊದಲು ಹಂದಿಗಳ ಕ್ರೂರ ಗುಟುರನ್ನು ಕೇಳಿದವನು ನಾನೂ ಓಡುವ ಯೋಚನೆಯಲ್ಲೇ ಇದ್ದೆ. ಆದರೆ ಯಾವ ಕಡೆ ಓಡುವುದೆಂದು ಪಕ್ಕನೆ ತೋಚಲಿಲ್ಲ. ಅತ್ತಿತ್ತ ನೋಡಿದೆ. ನಿಂತದ್ದು ಮರದ ಬುಡದಲ್ಲಿ ಅಂತ ತಿಳಿಯಿತು. ಸಣ್ಣವನಿರುವಾಗ ಮರಕೋತಿ ಆಡಿದ್ದು ತಟ್ಟನೆ ನೆನಪಿಗೆ ಬಂತು. ಆದರೆ ಆ ಅಭ್ಯಾಸ ನಿಂತು ಎಷ್ಟೋ ವರ್ಷಗಳಾದುವಲ್ಲ ಏನು ಮಾಡುವುದು? ಎಂದುಕೊಂಡವನಿಗೆ ಈಗ ಅದನ್ನೆಲ್ಲ ಯೋಚಿಸುತ್ತ ನಿಂತರೆ ಆ ದರಿದ್ರ ಹಂದಿಯ ಉದ್ದುದ್ದದ ದಾಡೆಗಳು ನನ್ನನ್ನು ಎಲ್ಲೆಲ್ಲೋ ತಿವಿದು ಹರಿದುಬಿಟ್ಟಾವು ಎಂದೆನ್ನಿಸಿತು. ಮರುಕ್ಷಣ ಆ ದಪ್ಪ ಮರವನ್ನು ಬಾಚಿ ತಬ್ಬಿಕೊಂಡು ಮಲೆಮಂಗನಂತೆ ನೆಗೆಯುತ್ತ ಹೇಗೇಗೋ ಹತ್ತಿ ಅಂತೂ ಮೇಲೆ ಹೋಗಿ ಕುಳಿತುಬಿಟ್ಟೆ. ಅಷ್ಟರಲ್ಲಿ ಮರವನ್ನು ಸಮೀಪಿಸುತ್ತಿದ್ದ ಹಂದಿಯು ಒಂದುಕ್ಷಣ ಕೆಟ್ಟದಾಗಿ ಅರಚಿದ್ದು, ನಾವು ಮೂವರೂ ಒಟ್ಟಿಗೆ ಸಿಗದ ಕೋಪಕ್ಕೋ ಏನೋ ತಟ್ಟನೆ ಪುರಂದರಣ್ಣನನ್ನೇ ತಿವಿಯಲು ಮುನ್ನುಗ್ಗಿತು. ಅದನ್ನು ಗಮನಿಸಿದ ಅವರು, ‘ಅಯ್ಯಯ್ಯೋ…! ಶಂಕರ ಕೊಂದುಬಿಟ್ಟೆಯಲ್ಲ ಮಾರಾಯಾ ನನ್ನನ್ನು…!’ ಎಂದು ಬೊಬ್ಬಿಡುತ್ತ ತಾವೂ ಮರ ಹತ್ತಲು ಹೆಣಗಿದರು. ಆದರೆ ಅವರ ಗುಡಾಣದಂಥ ಹೊಟ್ಟೆ ಅದಕ್ಕೆ ಅವಕಾಶ ಕೊಡಲಿಲ್ಲ. ಹಾಗಾಗಿ ಅವರ ಆಗಿನ ಅವಸ್ಥೆಯನ್ನು ನೋಡಬೇಕಿತ್ತು ಗುರೂಜೀ…! ನನಗೆ ನಗು ತಡೆಯಲಾಗಲಿಲ್ಲ. ಆದರೂ ಧಮ್ಮುಗಟ್ಟಿ ತಡೆದುಕೊಂಡು, ‘ಓ… ಪುರಂದರಣ್ಣ ಮರ ಹತ್ತಬೇಡಿ ಮಾರಾಯ್ರೇ ಓಡಿ, ಓಡಿ ಅಲ್ಲಿಂದ…!’ ಎಂದು ಬೊಬ್ಬೆ ಹಾಕಿದೆ. ನನ್ನ ಕೂಗಿಗೆ ರಪ್ಪನೇ ಹಂದಿಯತ್ತ ನೋಡಿದ ಅವರು ತಮ್ಮ ಜೀವಮಾನದಲ್ಲಿ ಯಾವತ್ತೂ ಆ ರೀತಿ ಓಡಿರಲಿಕ್ಕಿಲ್ಲ ನೋಡಿ. ಅಂಥ ವೇಗದಲ್ಲಿ ಎದ್ದುಬಿದ್ದು ಓಡತೊಡಗಿದರು. ಆದರೂ ಹಂದಿ ಅವರನ್ನು ಬಿಡಲಿಲ್ಲ. ಅದೂ ಬೆನ್ನಟ್ಟಿದ್ದು ಅವರನ್ನು ಸಮೀಪಿಸಿ ಇನ್ನೇನು ಅವರ ಕುಂಡೆಗೆ ತಿವಿದೇ ಬಿಟ್ಟತು ಎಂಬಷ್ಟರಲ್ಲಿ ಅಲ್ಲೊಂದು ವಿಸ್ಮಯ ನಡೆದುಬಿಟ್ಟಿತು ಗುರೂಜಿ! ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಆ ತನಕ ನಾನು ಅಂಥ ವಿಚಿತ್ರ ಮನುಷ್ಯಪ್ರಾಣಿಗಳನ್ನು ನೋಡೇ ಇರಲಿಲ್ಲ! ಅಯ್ಯಬ್ಬಾ ದೇವರೇ…!’ ಎಂದು ಶಂಕರ ಜೋರಾಗಿ ಉದ್ಗರಿಸಿ ತಲೆ ಕೊಡಹಿಕೊಂಡ.

===========================

(ಮುಂದುವರೆಯುವುದು)

******************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

One thought on “

  1. ಮುಂಬೈ ನಗರಿಯನ್ನು ಶಾಶ್ವತವಾಗಿ ತೊರೆದು ಬಂದ ಏಕನಾಥನ ಪರಿಸ್ಥಿತಿ ಒಂದೆಡೆಯಾದರೆ, ಕೊಲೆ ಆಸ್ತಿ ಲಪಟಾಯಿಸುವಿಕೆಯಲ್ಲಿ ಸಿಲುಕಿಕೊಂಡಿರುವ ಶಂಕರನ ಸಮಸ್ಯೆ ಇನ್ನನೊಂದು ರೀತಿಯದ್ದು. ಒಂದು ನಿರ್ದಿಷ್ಟ ಕಾರ್ಯ ದ ನಿಮಿತ್ತ ಭೇಟಿಯಾದ ಏಕನಾಥನ ಬಾಲ್ಯದ ಗೆಳೆಯ ಶಂಕರ ಇವರ ಸಂಭಾಷಣೆ ಈ ಅಧ್ಯಾಯದಲ್ಲಿ ಇದೆ. ಶಂಕರ ತನ್ನ ವೃತ್ತಾಂತವನ್ನು ಹೇಳುವ ಬಗೆಯನ್ನು ಕಾದಂಬರಿಕಾರರು ರೋಚಕವಾಗಿ ಚಿತ್ರಿಸಿದ್ದಾರೆ. ಅಭಿನಂದನೆಗಳು

Leave a Reply

Back To Top