ಕಥೆ
ಹೊಸ ಬಿಳಲು….!!
ಯಮುನಾ.ಕಂಬಾರ
ಚೆನ್ನವ್ವಳ ಕೈಗೆ ಹಚ್ಚಿದ BP ಮೀಟರ ತೆಗೆದು , ನರ್ಸಮ್ಮನಿಗೆ ಸುಗರ ಚೆಕ್ಕ ಮಾಡಲು ಡಾಕ್ಟರ ‘ಕಿರಣ ‘ ಹೇಳಿದ. ಚೆನ್ನವ್ವ ಬೆಡ್ಡ ಮೇ ಲಿಂದ ಗಡಬಡಿಸಿ ಎದ್ದು ನರ್ಸ್ಸಮ್ಮ ನನ್ನೇ ನೋಡತೊಡಗಿದಳು. ನರ್ಸ್ಸ ಕೈಯಲ್ಲಿ ಚಿಕ್ಕದೊಂದು ಸೂಜಿಯಿತ್ತು ಅದರ ಮೇಲೆ ಅಂಟಿಸಿದ ಹಾಳೆ ಮಾಸಿತ್ತು. ಅದರ ಮೇಲೆ ಅಲ್ಲಲ್ಲಿ ಕಂದು ಕಪ್ಪು ಕಲೆಗಳೂ ಇದ್ದವು . ಚೆನ್ನವ್ವ ತನ್ನ ಮೈಯ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು ” ಸೂಜಿ, ಹೊಸದಿದ್ದ್ರ ಚುಚ್ಚರಿ …..” ಎಂದು ಹೇಳಿದಳು.
“ಅವ್ರು….ಯಾವಾಗ ಬಂದ್ರುನೂ ಹಿಂಗ ಅಂತಾರ……ಹೊಸಾವ ಅದಾವ ಅಂತ ಹೇಳ್ರಿ…..! ” ಎಂಬ ಮಾತೊಂದು ತೂರಿ ಬಂತು …..ಎದುರಿನ ರೂಮಿನಿಂದ.
ಚೆನ್ನವ್ವನ ಕೈ ಕಾಲುಗಳು ಕಂಪಿಸಿದವು. ಕೆಸರಿಗೆ ಕಲ್ಲು ಒಗೆದಾಗ ಚಿಲ್ಲನೇ ಸಿಡಿವ ಕೆಸರಿನ ತರಹ ಸಲ್ಪು ನಿಧಾನತೆಯನ್ನು ತಾಳದೇ ದಾಸಪ್ಪ ಡಾಕ್ಟರ ನುಡಿದ ಮಾತುಗಳು ಚೆನ್ನವ್ವನ ಗಂಟಲಲ್ಲಿಳಿಯದೇ ಅವಳು ಒದ್ದಾಡುತ್ತಿದ್ದಳು. ಈಗಲಾದರೂ ಈತ ಸುಮ್ಮನಿರಬಾರದೇ. ….!!!ಎಂದು .
ದಾಸಪ್ಪ ಡಾಕ್ಟರು ತುಂಬಾ ಜಾಣ ಡಾಕ್ಟರ ಎಂದೇ ಹೇಳಬೇಕು. ರೋಗಿಯ ಜೊತೆ ಬಹಳ ತಲೆ ಕೆಡಿಸಿಕೊಳ್ಳದೇ ರೋಗಿಯನ್ನು ಇಡಿಯಾಗಿ ನೋಡಿ ರೋಗವನ್ನು ಸರಿಯಾಗಿ ನಿರ್ಣಯಿಸುವ ರೀತಿ ರೋಗಿಗೆ ಬಲು ಮೆಚ್ಚಿಕೆಯಾಗುತ್ತಿತ್ತು. ಆದರೆ ಒಂದು ವಿಷಾಧದ ಸಂಗತಿಯೆಂದರೆ ರೋಗಿಯನ್ನು ಕೈ ಮುಟ್ಟಿ ನೋಡದೇ ದೂರದಿಂದಲೇ ನಿಂತು ಅಳೆದು ಗುಳಿಗೆ ಬರೆಯುತ್ತಿದ್ದ ಡಾಕ್ಟರೆಂದೇ ಹೇಳಬೇಕು. ಆದರೆ ರೋಗಿಗಳು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ” ತಮ್ಮ ಜ್ವರ , ತಲೆ ನೋವು, ವಾಂತಿ ಭೇದಿ ,ಕಡಿಮೆ ಆಯಿತಲ್ಲಾ ಅಷ್ಟೇ ಸಾಕು ದೇವರೇ” ಎಂದು ತಣ್ಣಗಾಗುತ್ತಿದ್ದರು. ದಾಸಪ್ಪ ಡಾಕ್ಟರಿಗೆ ಬರುವ ರೋಗಿಗಳಲ್ಲಿ ಚೆನ್ನವ್ವ ಮಾತ್ರ ಗುಂಪಿನಿಂದ ಹೊರಗಿಟ್ಟ ಪದದಂತೆ ಇದ್ದಳು.ಜ್ವರ ಬಂದ್ರು ಆತು , ತಲೆನೋವು ಇದ್ದ್ರು ಆತು , ಏನಂಬಕು ಒಂದು ಪ್ಯಾಕ್ಡ ಸಿರಂಜನ ತೆಗೆದುಕೊಂಡೇ ಬರುತ್ತಿದ್ದಳು. ದಾಸಪ್ಪ ಡಾಕ್ಟರ ಸ್ಟೆತೆಸ್ಕೋಪ ತೆಗೆದು ನಿಲ್ಲುವ ಪುರುಸೊತ್ತು ಇಲ್ಲದೇ ಇವಳು ಗಡಬಡಿಸಿ ಎದ್ದು ಮೊದಲು ನರ್ಸಳ ಕೈಯನ್ನೇ ನೋಡುತ್ತಿದ್ದಳು. ” ನಾ ಸಿರೆಂಜ ತಂದೇನ್ರಿ ….” ಎಂದು ದೊಡ್ಡ ಧೈರ್ಯ ಮಾಡಿ ಹೇಳಿದ್ದಳು. ಆಗ ದಾಸಪ್ಪ ಡಾಕ್ಟರ ಮುಖ ಕಪ್ಪಿಟ್ಟಿತು. ಆ ಕಪ್ಪು ಇವಳಿಗೆ ಅಳಿಸದ ನೋವಾಗುತ್ತಿತ್ತು.
ದೊಡ್ಡ ದವಾಖಾನೆಯಲ್ಲಿ ರೋಗಿಯ ಕಿಡ್ನಿಯನ್ನೇ ಡಾಕ್ಟರ ತಕ್ಕೊಂಡ್ರ್ಂತ ಎಂಬ ಸುದ್ದಿ ಕೇಳಿದ ಚೆನ್ನವ್ವ ದಂಗಾಗಿ ಹೋಗುತ್ತಿದ್ದಳು. “ತಾನು ತನ್ನ ದೇಹ ಆರೋಗ್ಯದ ಕುರಿತು ಎಚ್ಚರವಾಗಿದ್ದೇನೆ ” ಎಂಬ ಸಮಾಧಾನದಲ್ಲಿದ್ದಳು. ಅಷ್ಟೇ ಏಕೆ ತನ್ನ ತಾಯಿಗೆ ಹೊಟ್ಟೆ ನೋವು ಬಂದಾಗ ಇದ ಡಾಕ್ಟರ ಜ್ವರ ಗುಳಿಗೆ ಕೊಟ್ಟು ಮೂರು ಹೊತ್ತು ಮೂರು ಮೂರು ಗುಳಿಗೆ ತಗೋ ಅಂತ ಹೇಳಿದ್ದ್ರಲ್ಲಾ ಅವಾಗ ತನ್ನ ತಾಯಿಗಾದ ಆವಾಂತರ ಮರೆಯದಾಗಿದ್ದಳು ಚೆನ್ನವ್ವ. ಇಂತ ಅನಾಹುತಗಳನ್ನು ತಪ್ಪಿಸಿಕೊಳ್ಳುವ ಒಂದು ಉಪಾಯ ಚೆನ್ನವ್ವ ಹುಡುಕಿಕೊಂಡಿದ್ದಳು. ಡಾಕ್ಟರ ಏನೇ ಗುಳಿಗೆ ಕೊಟ್ರುನು ಮೊದಲು ಅದರಲ್ಲಿ ನಾಲ್ಕು ಭಾಗ ಮಾಡಿ ಒಂದ ಭಾಗ ತೆಗೆದುಕೊಂಡು ಪರೀಕ್ಷೆ ಮಾಡಿಯೇ ಮುಂದಿನ ಹೊತ್ತಿಗೆ ಪೂರ್ಣ ಗುಳಿಗೆಯನ್ನು ತೆಗೆದುಕೊಳ್ಳುತ್ತಿದ್ದಳು. ಈಗ ದಾಸಪ್ಪ ಡಾಕ್ಟರಿಗೆ ವಯಸ್ಸಾಗಿದೆ. ಆತ ತನ್ನ ವೃತ್ತಿಯನ್ನು ಮಗನಿಗೆ ವಹಿಸಿಕೊಟ್ಟಿದ್ದಾನೆ. ಈಗ ಮಗ ‘ ಕಿರಣ ‘ ಆಸ್ಪತ್ರೆಯಲ್ಲಿ ಡಾಕ್ಟರಿಕಿ ಮಾಡುತ್ತಿದ್ದಾನೆ. ಯಾವುದೇ ವೃತ್ತಿ ಖಾಸಗಿ ವಲಯದಲ್ಲಿ ಕೈ ಹಿಡಿತ ಬೇಕಾದರೆ ಬಹಳ ಕಷ್ಟ ಎಂಬುದು ದಾಸಪ್ಪ ಡಾಕ್ಟರನಿಗೆ ಬಹಳ ಚೆನ್ನಾಗಿ ಗೊತ್ತು ಅದಕ್ಕಾಗಿ ಆತ ಟೆತೆಸ್ಕೋಪ ಕೆಳಗಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ.
ಮಗನ ಜೊತೆ ಬಂದು ಆತನಿಗೆ ಟೆತೆಸ್ಕೋಪಕೊಟ್ಟು ತಾನು ಒಂದು ಕುರ್ಚ್ಚಿ ಹಾಕಿಕೊಂಡು ಕುಳಿತು ತನ್ನ ರೋಗಿಗಳಿಗೆ ವಿಶ್ವಾಸಕೊಡುತ್ತಿದ್ದಾನೆ.
“ನಾ ಯಾವುದ ದವಾಖಾನೆಗೆ ಹೋದ್ರುನೂ ಒಂದ ಹೊಸ ಸಿರಂಜನ ಒಯ್ದ ಒಯ್ಯತೇನ್ರಿ.. ” ಎಂದು ದಾಸಪ್ಪ ಡಾಕ್ಟರಿಗಾದ ಮಾನಸಿಕ ಅವಮಾನ ತೊಳೆಯಲು ಪ್ರಯತ್ನಿಸಿದಳು ಚೆನ್ನವ್ವ .”ಹೊಸಾವ ಇಟ್ಟಿರಿತೇವ್ರಿ..! ” ದಾಸಪ್ಪ ಡಾಕ್ಟರ ವಾದ . ನೀವು ಹಿಂಗ ಸಿಟ್ಟಿಗೆದ್ದ್ರ ಹೆಂಗ್ರಿ…….!! ” ಎನ್ನುತ್ತಾ ಆತನ ತಪ್ಪನ್ನು ಹೈ ಲೈಟ ಮಾಡಿ ,” ಆರೋಗ್ಯ ನಂದರಿ……!!” ಎಂದು ತನ್ನ ವಯಕ್ತಿಕ ಬೇಡಿಕೆಯನ್ನೂ ದಾಸಪ್ಪ ಡಾಕ್ಟರ ಮುಂದಿಟ್ಟ ಳು. ದಾಸಪ್ಪ ಡಾಕ್ಟರಿಗೆ ಮುಂದೆ ಮಾತನಾಡಲು ದಾರಿ ಸಿಗಲಿಲ್ಲವೋ ಎಂಬಂತೆ ಅವನಿಂದ ಮಾತುಗಳು ಮತ್ತೆ ಮೂಡಿ ಬರಲಿಲ್ಲ. ತನ್ನ ವೃತ್ತಿಯನ್ನು ಮಗ ಕಿರಣನಿಗೆ ವಹಿಸಿಕೊಟ್ಟಿದ್ದ. ” ಅವೇರ್ನ್ನೆಸ್ಸ ನಿಮ್ಮ ಹಕ್ಕು ” ಎಂದನು ಕಿರಣ. ಆತನ ಮಾತುಗಳನ್ನು ಕೇಳಿದ ಚನ್ನವ್ವನಿಗೆ ಮರದಿಂದ ಬೀಳುವ ಮನುಷ್ಯನಿಗೆ ಸಿಕ್ಕ ಮರದ ಬಿಳಲಿನಂತೆ ಆಧಾರವಾಯಿತು. ಆ ಬಿಳಲನ್ನೇ ಹಿಡಿದು ಒಂದು ಸಾರೆ ಜೀಕಿ ಬೀಗಿದಳೂ ಕೂಡಾ.
ತನ್ನ ಉಪಾಯಕ್ಕೆ ಸಿಕ್ಕ” ಹೊಸ ಶಬ್ದ, ಹಾಗೂ ರೋಗಿಯ ಹಕ್ಕು ” ಎಂದು ಅರಿತುಕೊಂಡಳು. ನರ್ಸ್ಸ ಹಳೇ ಸೂಜಿ ಒಗೆದಳು. ಬಾಕ್ಸಿನಿಂದ ಹೊಸ ಸೂಜಿ ತೆಗೆದು ” ಇದನ್ನ ನೋಡ್ರಿ ….! ? ” ಎಂದಳು.” ಹೂನ್ರಿ…..ಇಷ್ಟ ಆದ್ರ ಸಾಕ್ರಿ….” ಎನ್ನುತ್ತಾ …..ಚೆನ್ನವ್ವ ಗೆಲುವಿನಿಂದ ತನ್ನ ಬಲಗೈಯ ಬೆರಳನ್ನು ನರ್ಸ್ಸಮ್ಮನಿಗೆ ನೀಡಿದಳು.
ಆದರೆ ದಾಸಪ್ಪ ಡಾಕ್ಟರು ತಾನು ಬಿಟ್ಟ ಕಪ್ಪು ನೆರಳಿನಲ್ಲಿ ಮತ್ತಷ್ಟು ಕಪ್ಪಾಗಿ ಕಾಣತೊಡಗಿದನು.
**************************
ಬಹಳ ಇಷ್ಟವಾಯ್ತು ಮೇಡಂ…. ಚೆಂದದ ನಿರೂಪಣೆ ಅಭಿನಂದನೆಗಳು