ಮಕ್ಕಳಿಗಾಗಿ ಅನುಭವ ಕಥನ
ಕಾಡಂಚಿನಊರಿನಲ್ಲಿ…..
ವಿಜಯಶ್ರೀ ಹಾಲಾಡಿ
ವಿಜಿ ಸಣ್ಣವಳಿರುವಾಗ, ಅಜ್ಜಿ ಅಂದಿಗೆ ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದೆ (ಅಂದರೆ ಇವತ್ತಿಗೆ ತೊಂಬತ್ತು-ತೊಂಬತ್ತೈದು ವರ್ಷಗಳ ಹಿಂದೆ) ನಡೆದ ಘಟನೆಯನ್ನು ಹೇಳುತ್ತಿದ್ದರು. ಅಜ್ಜಿಯ ಮಾವ ಮುಂತಾದ ಹಿರಿಯರಿದ್ದ ಸಮಯವದು. ಆಗ ನಮ್ಮೂರು `ಮುದೂರಿ’ಯ ಸುತ್ತಲಿನ ಕಾಡುಗಳಲ್ಲಿ ಹುಲಿಯಿತ್ತಂತೆ! ಎಷ್ಟು ಹುಲಿಗಳಿದ್ದವೋ, ತಿಳಿಯದು, ಆದರೆ ಊರಿಗೆ ಬಂದು ದನಗಳನ್ನು ಕೊಂಡೊಯ್ದ ಅನೇಕ ಪ್ರಸಂಗಗಳಿದ್ದವು. ಹಟ್ಟಿಯ ಗೋಡೆಯನ್ನು ಮಣ್ಣಿನಿಂದ ಗಟ್ಟಿಯಾಗಿ ನಿರ್ಮಿಸಿ ಬಂದೋಬಸ್ತು ಮಾಡಿದ್ದರೂ ಬಾಗಿಲು ಸ್ವಲ್ಪ ಸದರ ಇದ್ದರೆ ಅದರ ಮೂಲಕ ಹಟ್ಟಿಗೆ ನುಗ್ಗಿ ರಾತ್ರೋರಾತ್ರಿ ದನಗಳನ್ನು ಹೊತ್ತೊಯ್ಯುತ್ತಿತ್ತು. ಹಾಗೊಂದು ಸಲ ಹತ್ತಿರದಲ್ಲೇ ಹುಲಿಯ ಭೀಕರ ಘರ್ಜನೆ ಕೇಳಿ ಮನೆಯವರೆಲ್ಲ ನಡುಗಿ ಕುಳಿತಿದ್ದಾಗ ಹಟ್ಟಿಯಿಂದ ಒಂದು ದನವನ್ನು ಕೊಂಡೊಯ್ದಿತ್ತು ಎಂಬ ಭೀಕರ ಘಟನೆಯನ್ನುಅಜ್ಜಿ ಹೇಳಿದರು. ಮೇಯಲು ಬಿಟ್ಟಾಗಲೂ ದನಕರುಗಳನ್ನು ಕದ್ದುಕೊಂಡು ಹೋಗುತ್ತಿತ್ತು ಎಂದರು. ಈ ಘಟನೆಗಳನ್ನು ಕೇಳಿದ ನಂತರ ವಿಜಿಗೆ ಸುಮಾರು ಸಲ ಹುಲಿ ಬಂದು ತಮ್ಮ ದನಗಳನ್ನು ತೆಗೆದುಕೊಂಡು ಹೋದಂತೆ; ತಡೆಯಲು ಹೋದ ಊರಿನವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದಂತೆ ಕನಸು ಬೀಳುತ್ತಿತ್ತು! ಅಜ್ಜಿ ಹೇಳಿದ ಹಳೆಯ ಕಾಲದಲ್ಲಿ ಹುಲಿಗಳು ಜನರಿಗೆ ಬಹಳಷ್ಟು ಕಾಟ ಕೊಟ್ಟಿದ್ದರೂ ವಿಜಿ ಸಣ್ಣವಳಿರುವಾಗ ಅಂತದ್ದೇನೂ ಇರಲಿಲ್ಲ. ಆದರೆ ಹುಲಿಯ ಬದಲಿಗೆ `ಕುರ್ಕ’ ಎಂದು ಕರೆಯುವ ಸಣ್ಣ ಚಿರತೆ ಇತ್ತು. ಇದು ನಾಯಿಗಳನ್ನು ಕದ್ದೊಯ್ಯುತ್ತಿತ್ತು. ಕಾಡಿನೊಳಗೇ ಇರುವ ಕೆಲ ಮನೆಗಳ ನಾಯಿಗಳನ್ನು ಕೊಂಡೊಯ್ಯುತ್ತಿತ್ತು. ಪ್ರೀತಿಯ ನಾಯಿಗಳನ್ನು ಕಳೆದುಕೊಂಡ ಅಂತಹ ಮನೆ ಜನರ ನೋವಿನ ಪ್ರಕರಣಗಳನ್ನು ರುಕ್ಮಿಣಿಬಾಯಿ ಆಗಾಗ ಹೇಳುತ್ತಿದ್ದರು. ಆದರೆ ವಿಜಿಯ ಮನೆ ಕಾಡಿನಿಂದ ಹೊರಗೆ ತೋಟದ ಪಕ್ಕದಲ್ಲಿದ್ದುದರಿಂದ ಇಂತಹ ಅನುಭವ ಆಗಿರಲಿಲ್ಲ. ಅವರೂರಿಗೆ ಸಮೀಪದಲ್ಲೇ ಇದ್ದ `ಹರಿನ್‌ಗುಡ್ಡೆ’ ಎಂಬ ದೊಡ್ಡ ಬೆಟ್ಟದಲ್ಲಿ ಹುಲಿ ಇದೆ ಎಂದು ಜನ ಹೇಳುತ್ತಿದ್ದರು. ಅದು ಸುತ್ತಮುತ್ತಲಿನ ದಟ್ಟ ಕಾಡುಗಳಲ್ಲಿ ರಾತ್ರಿ ತಿರುಗುತ್ತದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ರಾತ್ರಿ ಹೊತ್ತುಅಂತಹ ಜಾಗಗಳಿಗೆ ಯಾರೂ ಕಾಲು ಹಾಕುತ್ತಿರಲಿಲ್ಲ.
ಮುದೂರಿನಲ್ಲಿಕಬ್ಬಿನಾಲೆ (ಅಲೆಮನೆ) ಪ್ರತೀ ವರ್ಷ ನಡೆಯುತ್ತಿತ್ತು. ಸುತ್ತಮುತ್ತ ಕಬ್ಬು ಬೆಳೆದವರು ಅಲೆಮನೆಗೆ ಸಾಗಿಸಿ ಬೆಲ್ಲ ಮಾಡುತ್ತಿದ್ದರು. ಈ ಕಬ್ಬಿನಾಲೆ ಆಗುತ್ತಿದ್ದುದು ಚಳಿಗಾಲದಲ್ಲಿ. ಆಗ ರಾತ್ರಿಯೆಲ್ಲ ಆಲೆಮನೆಯಲ್ಲಿ ಕೋಣಗಳನ್ನು ಓಡಿಸುತ್ತ ಹಾಡುತ್ತಿದ್ದ ಹಾಡು ಕಿವಿಗೆ ಬೀಳುತ್ತಿತ್ತು. ಇಂತಹ ಸಿಹಿ ಕಬ್ಬಿನಗದ್ದೆಗೆ ನರಿಗಳು ಬರುತ್ತಿದ್ದವು. ರಾತ್ರಿ ಬಂದು ಕಬ್ಬು ತಿಂದು ಹೋಗುತ್ತಿದ್ದವು. ಬಹುಶಃ ಕಬ್ಬು ತಿಂದ ಖುಷಿಯಲ್ಲೋ ಏನೋ ಕೂಕೂಕೂ ಎಂದು ಜೋರಾಗಿ ಊಳಿಡುತ್ತಿದ್ದವು. ಈ ಕೂಗಂತೂ ಮನುಷ್ಯರದ್ದೇ ಸ್ವರ ಎಂಬಷ್ಟರಮಟ್ಟಿಗೆ ಹೋಲಿಕೆಯಾಗುತ್ತದೆ! ಮನೆಯಲ್ಲಿ ಬೆಚ್ಚಗೆ ಮಲಗಿದ ವಿಜಿಗೆ ಈ ಕೂಗು ಕೇಳಿದೊಡನೆ ಕಬ್ಬು, ಸೌತೆಕಾಯಿ ತಿನ್ನುವ ವಿಚಿತ್ರ ಪ್ರಾಣಿ ನರಿ ಇಷ್ಟವೆನಿಸಿ ಅದನ್ನು ನೋಡಬೇಕೆನಿಸುತ್ತಿತ್ತು. ಆದರೆ ಅದನ್ನು ಕಾಡಿನಲ್ಲಿ ನೋಡಿದ್ದು ಒಂದೇ ಸಲ. ಉಳಿದಂತೆ ಝೂಗಳಲ್ಲಿ ನೋಡಿದ್ದಷ್ಟೇ. ಕತೆಗಳಲ್ಲಿ ಓದಿದಂತೆ ನರಿ ಮೋಸ ಮಾಡುವ ಪ್ರಾಣಿ ಎಂದು ಒಪ್ಪಿಕೊಳ್ಳಲು ಅವಳಿಗೆಂದೂ ಸಾಧ್ಯವಾಗಲೇಇಲ್ಲ. “ಮೋಸ ಮಾಡುವುದು ಮನುಷ್ಯರು ಮಾತ್ರ, ಪ್ರಾಣಿಗಳಲ್ಲ” ಎನಿಸುತ್ತಿತ್ತು. ನರಿಗಳ ಕುರಿತು ಅವರೂರಿನ ಜನರು ಒಂದು ಮಾತು ಹೇಳುತ್ತಿದ್ದರು. ಅದು ತಮಾಷೆಯಾಗಿ ಕಂಡರೂ ಜನಕ್ಕೆ ಅದು ನಿಜವೆಂದೇ ನಂಬಿಕೆಯಿತ್ತು. ಕಬ್ಬು ತಿನ್ನುವಾಗ ನಡುನಡುವೆ ಕೆಲಭಾಗ ಕೆಂಪಾಗಿ ಬಿರುಕುಬಿಟ್ಟು ಹಾಳಾಗಿರುತ್ತದಲ್ಲ; `ನರಿ ಪೂಂಕಿ ಬಿಟ್ಟು ಹಾಗಾದದ್ದು’ ಎಂದು ಜನ ಹೇಳುತ್ತಿದ್ದರು! ರಾತ್ರಿ ಕಬ್ಬಿನಗದ್ದೆಗೆ ಇಳಿದು ಚೆನ್ನಾಗಿ ತಿಂದು ಆಮೇಲೆ ಹೀಗೆ ಕಿಡಿಗೇಡಿತನ ಮಾಡಿ ನರಿಗಳು ವಾಪಸ್ಸಾಗುತ್ತವಂತೆ! ವಿಜಿ ಕೂಡಾ ಇದು ನಿಜವೆಂದೇ ತಿಳಿದುಕೊಂಡಿದ್ದಳು. ಆಮೇಲೆ ಸ್ವಲ್ಪ ದೊಡ್ಡವಳಾದ ನಂತರ ಅದು ಕಬ್ಬಿಗೆ ಬರುವ ಎಂತದೋ ರೋಗ ಎಂದು ಗೊತ್ತಾಯಿತು. ಆದರೂ ಪ್ರತೀ ಸಲ ಕಬ್ಬು ತಿನ್ನುವಾಗ ಹಾಳಾದ ಭಾಗವನ್ನು ನೋಡಿದಾಗ ನರಿಯ ಈ ಪ್ರಕರಣ ನೆನಪಾಗದೇ ಹೋಗುವುದಿಲ್ಲ! ಬಿಸಿಲು-ಮಳೆ ಒಟ್ಟಾಗಿ ಬಂದರೆ “ಹಾ ನರಿಯಣ್ಣನ್ ಮದಿ ಆತ್ತ್ಕಾಣಿ ಮಕ್ಳೇ ಈಗ” ಎನ್ನುತ್ತಿದ್ದರು ಅಜ್ಜಿ ಮತ್ತು ಆಚೆಮನೆ ದೊಡ್ಡಮ್ಮ. ಬಿಸಿಲು-ಮಳೆ ಬಂದಾಗಷ್ಟೇ ನರಿಗಳ ಮದುವೆ ನಡೆಯುತ್ತದೆ ಎಂದು ವಿಜಿಯಂತಹಾ ಮಕ್ಕಳು ಕಲ್ಪಿಸಿಕೊಂಡೂ ಇದ್ದರು! ನರಿಗಳು ‘ಕೂಕೂಕೂ’ ಎಂದು ಗುಂಪಾಗಿ ಕೂಗುತ್ತವಲ್ಲ; ಅದು ರಾತ್ರಿ ಹೊತ್ತು ಮಾತ್ರ. ಕಗ್ಗತ್ತಲಲ್ಲಿ ಕೇಳುವ ಆ ವಿಚಿತ್ರ ಕೂಗು ಬಾಲ್ಯದ ಸಿಹಿನೆನಪುಗಳಲ್ಲಿ ಒಂದು. ವಿಶೇಷವೆಂದರೆ ದೀಪಾವಳಿ ಹಬ್ಬದ ದಿನ ಗದ್ದೆಗೆ ದೀಪವಿಟ್ಟ ನಂತರ ಮನುಷ್ಯರೂ ನರಿಗಳಂತೆ ಕೂಕೂಕೂ ಎಂದು ಕೂಗು ಹಾಕುತ್ತಿದ್ದರು! ಇದಾದರೆ ಭೂಮಿಯ ರಾಜ ಬಲೀಂದ್ರನನ್ನು ಕರೆಯುವ ಸಲುವಾಗಿ ವರ್ಷಕ್ಕೊಮ್ಮೆ ಹಬ್ಬ ಮಾಡಿ ಕರೆಯುವುದು. ಆದರೆ ನರಿಗಳು ಯಾರನ್ನು ಕರೆಯಲು ಕೂಗುತ್ತವೋ ವಿಜಿಗೆ ಗೊತ್ತಿರಲಿಲ್ಲ. ಕಬ್ಬು ತಿಂದ ಖುಷಿಯಲ್ಲಿ ಅವು `ದಿಗಣ’ ಹಾರಿ ಕೂಗುವುದು ಎನ್ನುತ್ತಿದ್ದರು ಅಜ್ಜಿ! ಅದೇ ನಿಜವೆಂದು ಅವಳೂ ನಂಬಿದ್ದಳು. ಆದರೆ ಕತೆಗಳಲ್ಲಿ ಓದಿದ ಕಳ್ಳನರಿ, ಸುಳ್ಳನರಿ, ಕುತಂತ್ರಿ ನರಿ, ಮೋಸಗಾರ ನರಿಯ ಪಾತ್ರ ಎಂದೂ ವಿಜಿಯೊಳಗೆ ಇಳಿಯಲೇ ಇಲ್ಲ. ನರಿಯೆಂದರೆ ಮುದ್ದಿನಪ್ರಾಣಿ ಅವಳಿಗೆ! ಗಾಢ ರಾತ್ರಿಗಳಲ್ಲಿ ಕಬ್ಬು, ಸೌತೆ ತಿಂದು ಹಾಡು ಹೇಳುವ ಜೀವನಪ್ರೀತಿಯ ನರಿ ಅವಳಿಗೆ ಸದಾ ಇಷ್ಟ.
ಮನೆ ಎದುರಿನ ಗದ್ದೆಯಲ್ಲಿ ಬಸಳೆ ಚಪ್ಪರವನ್ನು ಹಾಕುತ್ತಿದ್ದರು. ಮಳೆಗಾಲದ ಮೂರ್ನಾಲ್ಕು ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಬಸಳೆ ಚಪ್ಪರ ಇದ್ದೇ ಇರುತ್ತಿತ್ತು. ಉಳಿದ ತರಕಾರಿಗಳೂ ಇರುತ್ತಿದ್ದವು. ಕಾಡುಹಂದಿ ರಾತ್ರಿ ಬಂದು ಈ ಗಿಡಗಳ ಬುಡವನ್ನು ಒಕ್ಕಿ ಹೋಗುತ್ತಿತ್ತು. ಬೆಳಿಗ್ಗೆ ಹೋಗಿ ನೋಡುವಾಗ ಅಗೆದು ಹಾಕಿದ ಮಣ್ಣು; ಕೆಲವು ಗಿಡಗಳು ಬುಡಮೇಲಾಗಿ ಬಿದ್ದದ್ದು ಕಾಣುತ್ತಿತ್ತು. ರಾತ್ರಿ ಯಾವ ಮಾಯಕದಲ್ಲೋ ಬಂದು ಹೀಗೆಲ್ಲ ಕರಾಮತ್ತು ಮಾಡಿಹೋದ ಆ ಹಂದಿಗೆ ಅಜ್ಜಿ ಬಯ್ಯುತ್ತಿದ್ದರು. ಕಾಡುಹಂದಿ ಹೀಗೆ ಅಗೆದು ಹೋಗುವುದು ಯಾಕೆ ಎಂದು ವಿಜಿ ಕೇಳಿದಾಗ ಅದು ಗಿಡದ ಗಡ್ಡೆ ಹುಡುಕುವುದುಎಂದು ಅಜ್ಜಿ ಹೇಳುತ್ತಿದ್ದರು. ಅಂದರೆ ಬಸಳೆಯನ್ನು ಗೆಣಸೋ, ಮರಸಣಿಗೆಯೋ, ಕೆಸವೋ, ಮರಗೆಣಸೋ ಎಂದು ಭ್ರಮಿಸಿ, ಅಗೆದು ನೋಡುತ್ತಿತ್ತೇನೋ ಪಾಪದ್ದು! ‘ಕಾಡುಹಂದಿಗೆ ದೊಡ್ಡ ಕೊಂಬಿದೆ, ಅದರಿಂದ ನೆಲ ಅಗೆಯುತ್ತದೆ’ ಎಂದು ವಿಜಿ ಕಲ್ಪಿಸಿಕೊಂಡಿದ್ದಳು. ಆದರೆ ಮತ್ತೆ ಗೊತ್ತಾಯಿತು; ಕೊಂಬಲ್ಲ, ಅದಕ್ಕಿರುವುದು ಬಾಯಿಂದ ಹೊರಹೊರಟ ಬಲಿಷ್ಠ ಹಲ್ಲು ಎಂದು. ಕೆಲವೊಮ್ಮೆ ಸುಮ್ಮ ಸುಮ್ಮನೆ ಗದ್ದೆಯಕಂಟ(ಬದು)ಗಳನ್ನೆಲ್ಲ ಅಗೆದುಹಾಕಿ ಹೋಗುತ್ತಿತ್ತು. ಅಲ್ಲಿ ಹುಳಗಳನ್ನು ಹುಡುಕುತ್ತಿತ್ತೋ ಏನೋ! “ಈ ಹಂದಿಯಿಂದ ಇರಸ್ತಿಕೆ ಇಲ್ಲ” ಎಂದು ಅಜ್ಜಿ ಗೊಣಗುತ್ತಿದ್ದರು. ಇಂತಹ ಹಂದಿ ಮತ್ತು ಇತರ ಪ್ರಾಣಿಗಳ ಬೇಟೆಗಾಗಿ ಅವರೂರಿನ ಜನ ವರ್ಷಕ್ಕೊಂದು ಸಲ ಹೋಗುತ್ತಿದ್ದರು. ನಾಯಿಗಳನ್ನು ಕರೆದುಕೊಂಡು ವಿವಿಧ ರೀತಿಯ ಬಲೆಗಳನ್ನೆಲ್ಲ ಹಿಡಿದು ಹುರುಪಿನಿಂದ ಅವರೆಲ್ಲ ಬೇಟೆಗೆ ಹೋಗುವುದನ್ನು ನೋಡಿ ಅದೇನೋ ಸಂಭ್ರಮವಿರಬೇಕು ಎಂದು ವಿಜಿ ಮೊದಮೊದಲು ಊಹಿಸಿದ್ದಳು. ನಾಯಿಗಳಂತೂ ಕಿವಿಗೆ ಗಾಳಿ ಹೊಗ್ಗಿದಂತೆ ಹತ್ತು ದಿಕ್ಕಿಗೆ ಮೂಗುಗಾಳಿ ಹಿಡಿಯುತ್ತಾ ನೆಗೆದು ಬಿಡುತ್ತಿದ್ದವು. ಅವುಗಳ ಕಾತುರ, ಉದ್ವೇಗ, ಚುರುಕುತನ ವರ್ಣಿಸಲಸಾಧ್ಯ. ಆದರೆ ಬೇಟೆ ಎಂದರೆ ಹೇಗಿರುತ್ತದೆಂದು ವಿಜಿಗೆ ಗೊತ್ತಿರಲಿಲ್ಲ. ಕ್ರಮೇಣ, ಜನರು ಹೆಗಲ ಮೇಲೆ ತೂಗುಹಾಕಿಕೊಂಡು ಬರುವ ಮೊಲ, ಹಂದಿ ಮತ್ತಿತರ ಸತ್ತ ಪ್ರಾಣಿಗಳನ್ನು ನೋಡಿ ಬೇಟೆಯೆಂದರೆ ಏನೆಂದು ತಿಳಿಯಿತು.
ವಿಜಿಯ ಮನೆ ಮೆಟ್ಟಿಲಿನಿಂದ ಮುಂದಿನ ಹೆಜ್ಜೆ ಇಟ್ಟರೆ ಅದೇ ಗದ್ದೆ! ಮಳೆಗಾಲದಲ್ಲಂತೂ ನೀರು, ಕೆಸರು ಅಥವಾ ಬತ್ತದ ಸಸಿಗಳನ್ನು ಒಳಗೊಂಡ ಈ ಗದ್ದೆ ಹಲವು ರೂಪಗಳಲ್ಲಿ ಕಾಣಿಸುತ್ತಿತ್ತು. ಗದ್ದೆಯಲ್ಲಿದ್ದ ಕಪ್ಪೆಗಳೆಲ್ಲ ಮಳೆಗಾಲದ ರಾತ್ರಿ ಕೂಗುತ್ತಾ ಅದೇ ಒಂದು ದೊಡ್ಡ ಶ್ರುತಿ ಹಿಡಿದ ಸಂಗೀತ ಸಭೆಯಂತೆ ಕೇಳುತ್ತಿತ್ತು. ಈ ಕಪ್ಪೆಗಳಿಗೂ ವಿಜಿಯ ಮನೆ ಸದಸ್ಯರಿಗೂ ಹತ್ತಿರದ ಸಂಬಂಧ! ‘ಗೋಂಕ್ರಕಪ್ಪೆ’ ಎಂದು ಕರೆಯುವ ದೊಡ್ಡ ಕಪ್ಪೆಯನ್ನು ಕಂಡರಂತೂ ವಿಜಿಯಂತಹ ಮಕ್ಕಳು ಎರಡು ಹೆಜ್ಜೆ ಹಿಂದೆ ಹಾರಿ ಹೆದರಿಕೊಳ್ಳುತ್ತಿದ್ದವು. ದೊಡ್ಡ, ಉರುಟು ಕಣ್ಣಿನ ಗ್ವಾಂಕ್ರ ಕಪ್ಪೆಗಳು ತೆಂಗಿನಕಟ್ಟೆಯಲ್ಲಿ, ಹೂವಿನ ಗಿಡಗಳ ಅಡಿಯಲ್ಲಿ ಹುಲ್‌ಕುತ್ರೆಯ ಅಡಿಯಲ್ಲಿ ಎಲ್ಲೆಲ್ಲೋ ಕುಳಿತುಕೊಳ್ಳುತ್ತಿದ್ದವು. ಕೆಸರಿನ ಬಣ್ಣಕ್ಕಿರುವ ಅವು ಫಕ್ಕನೆ ಕಾಣುತ್ತಿರಲಿಲ್ಲ. ಹತ್ತಿರ ಹೋದಾಗ ಚಂಗನೆ ಹಾರಿ ಹೆದರಿಸುತ್ತಿದ್ದವು! ಅವು ಕೂಗುವುದೂ ‘ಗ್ವಾಂಕ್ರ್ ಗ್ವಾಂಕ್ರ್ ‘ ಎಂಬ ದೊಡ್ಡ ಶಬ್ದದಲ್ಲಿ! ಬೇಸಗೆ ಕಳೆದು ಮೊದಲ ಮಳೆ ಬೀಳುವ ಸಮಯದಲ್ಲಿ ಸೂಚನೆ ಕೊಡುವುದು ಈ ಗ್ವಾಂಕ್ರ ಕಪ್ಪೆಗಳೇ! ಎಲ್ಲೋ ದೂರದಲ್ಲಿ ಮಳೆ ಬರುವಾಗಲೇ ಅಥವಾ ಮಳೆ ಬರುವ ವಾತಾವರಣ ಉಂಟಾದಾಗಲೇ ಇವುಗಳಿಗೆ ಗೊತ್ತಾಗುತ್ತೆಂದು ಕಾಣುತ್ತದೆ. ಒಂದೇ ಸಮನೆ ಕೂಗಲು ಶುರು ಮಾಡುತ್ತಿದ್ದವು. ಹಾಗೆ ಕಪ್ಪೆಗಳು ಕೂಗಿದಾಗ ‘ಹೋ ಮಳೆ ಬರುತ್ತದೆ’ ಎಂಬ ಖುಷಿ ಜನರಲ್ಲಿ ಮೂಡುತ್ತಿತ್ತು. ಇವಲ್ಲದೆ ಇತರ ಸಣ್ಣ ಸಣ್ಣ ಕಪ್ಪೆಗಳೂ ಇದ್ದವು. ಇವು ಆಗಾಗ ನೇರ ಮನೆಯೊಳಗೇ ಪ್ರವೇಶಿಸುತ್ತಿದ್ದವು. ಹಿಡಿಕಟ್ಟಿನಲ್ಲಿ ಓಡಿಸಿ ಹೊರಹಾಕಲು ಪ್ರಯತ್ನಿಸಿದರೆ ಛಲಬಿಡದೆ ಜಗಲಿಯಿಂದ ಚಾವಡಿಗೆ, ಪಡಸಾಲೆಗೆ, ಅಲ್ಲಿಂದ ಒಳಕೋಣೆಗೆ ಹೀಗೆ ಮನೆಯೊಳಗೇ ಹಾರುತ್ತ ಪಜೀತಿ ಮಾಡುತ್ತಿದ್ದವು. ಹಾಗಾಗಿ ರಾತ್ರಿ ಇವು ಒಳಗೆ ಬಂದಾಗ ಹಾರದಂತೆ ಒಂದು ಪಾತ್ರೆ ಮುಚ್ಚಿಟ್ಟು ಮರುದಿನ ಬೆಳಿಗ್ಗೆ ಹೊರಗೆ ಓಡಿಸುತ್ತಿದ್ದುದೂ ಇದೆ. ಈ ಕಪ್ಪೆಗಳ ಒಂದು ದುರ್ಗುಣವೆಂದರೆ ಉಚ್ಚೆ ಹಾರಿಸುವುದು. ಓಡಿಸಲು ಹೋದ ಕೂಡಲೇ ಉಚ್ಚೆ ಹಾರಿಸಿ ತಪ್ಪಿಸಿಕೊಳ್ಳುತ್ತಿದ್ದವು! ಬೆಕ್ಕು ನಾಯಿಗಳು ಇವನ್ನು ಮುಟ್ಟಲು ಹೋದರೆ ಕಣ್ಣಿಗೋ, ಮೂಗಿಗೋ, ಬಾಯಿಗೋ ಇವು ಹಾರಿಸಿದ ಉಚ್ಚೆ ಕುಡಿದುಕೊಂಡು ಸಪ್ಪೆ ಮುಖ ಹಾಕಿ ವಾಪಸ್ಸು ಬರುತ್ತಿದ್ದವು! ಆದರೆ ಇವು ಎಷ್ಟೇ ಉಪದ್ರ ಕೊಟ್ಟರೂ ಯಾರೂ ಕೊಲ್ಲುತ್ತಿರಲಿಲ್ಲ. “ಕಪ್ಪೆಕೊಂದ್ರೆ ಪಾಪ” ಎಂಬ ಆಡುಮಾತನ್ನುಎಲ್ಲರೂ ನಂಬುತ್ತಿದ್ದರು. ವಿಜಿಯ ಮನೆಯಲ್ಲಿ ಯಾರೂ ಯಾವತ್ತೂ ಒಂದೇ ಒಂದು ಕಪ್ಪೆಯನ್ನು ಹೊಡೆದದ್ದು, ಕೊಂದದ್ದನ್ನು ಅವಳು ನೋಡಿಲ್ಲ, ಇನ್ನು ಮರಕಪ್ಪೆಗಳೆಂದರೆ ವಿಜಿಗೆ ಭಾರೀ ಹೆದರಿಕೆ. ಇವು ಒಳಗೆ ಬಂದರೆ ಹೊರಹಾಕಲು ಸಾಧ್ಯವೇ ಇಲ್ಲ! ಕಡ್ಡಿಯಲ್ಲಿ ಮುಟ್ಟಲು ಹೋದರೆ ತಿರುಗಿ ಮುಖದ ಕಡೆಗೇ ಹಾರುತ್ತವೆ. ಇವುಗಳಿಗೆ ಮನುಷ್ಯರಂತೆ ಬುದ್ಧಿ ಗಿದ್ದಿ ಇದೆಯೇನೋ ಎಂದು ಸಂಶಯವಾಗುತ್ತಿತ್ತು ಅವಳಿಗೆ! ವಿಚಿತ್ರವಾಗಿ ವರ್ತಿಸುವ ಇವುಗಳು ಮೈಮೇಲೆ ಹಾರಿ ಕುಳಿತುಕೊಳ್ಳಲು ಮನುಷ್ಯನ ಕಡೆಗೇ ಹಾರುತ್ತವೆ. ಅದಲ್ಲದೆ ಮನೆಯ ಆಯಕಟ್ಟಿನ ಯಾವುದಾದರೂ ಜಾಗದಲ್ಲಿ ಕುಳಿತು ಅಶರೀರವಾಣಿ ಹೊರಡಿಸುತ್ತವೆ. ಮನೆಯೊಳಗೇ ಅವಿತುಕೊಂಡಿದ್ದರೂ ಇವುಗಳನ್ನು ಹುಡುಕುವುದು ಕಷ್ಟ. ಕಾಲುಗಳನ್ನು ಅಗಲವಾಗಿ ಹರಡಿಕೊಂಡು ಗೋಡೆಯ ಮೇಲೆ ಚಲಿಸುವ ಮರಕಪ್ಪೆಯನ್ನು ಕಂಡರೆ ಭಯವಾಗಿ ಆ ಜಾಗದಿಂದಲೇ ದೂರ ಓಡಿಹೋಗುತ್ತಿದ್ದಳು ವಿಜಿ. ಒಮ್ಮೊಮ್ಮೆ ಬಚ್ಚಲು ಮನೆಯೊಳಗೆ, ಕೋಣೆಯೊಳಗೆ ಕುಳಿತು ಇವು ಅಣಕಿಸುವಾಗ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ! ಆವಾಗೆಲ್ಲ ಎಷ್ಟೊಂದು ಗ್ವಾಂಕ್ರ ಕಪ್ಪೆ, ಮರಕಪ್ಪೆ, ಸಣ್ಣ ಚಿಲ್ಟಾರಿ ಕಪ್ಪೆಗಳು ಇದ್ದವು! ವಿಜಿ ಹೈಸ್ಕೂಲಿಗೆ ಹೋಗುತ್ತಿದ್ದ ಎಂಬತ್ತು-ತೊಂಬತ್ತರ ದಶಕದಲ್ಲಿ ಹಾವು-ಕಪ್ಪೆ ಹಿಡಿಯುವವರು ಬರಲಾರಂಭಿಸಿದರು. ಗದ್ದೆ ಬದಿ, ತೋಡಿನ ಬದಿ ಚೀಲಗಳನ್ನು ಹಿಡಿದುಕೊಂಡು ಅವರು ತಿರುಗಾಡುತ್ತಿದ್ದರು. `ಗೋಂಕ್ರಕಪ್ಪೆ ಮತ್ತು ಹಾವಿನ ಚರ್ಮಕ್ಕಾಗಿ ಅವುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಯಾವುದೋ ಕಂಪನಿಯವರು ಇದನ್ನೆಲ್ಲ ಮಾಡಿಸುತ್ತಾರೆ’ ಎಂದು ಅಣ್ಣ ಹೇಳುತ್ತಿದ್ದ. ಹಳ್ಳಿಯ ಜನ ಎಷ್ಟು ಅಮಾಯಕರಾಗಿದ್ದರೆ, ತಮ್ಮಗದ್ದೆ ಬಯಲುಗಳಿಂದ ಅವುಗಳನ್ನು ಹಿಡಿದೊಯ್ಯಬಾರದೆಂದು ಗುರುತು ಪರಿಚಯವಿಲ್ಲದ ಆ ಮನುಷ್ಯರಿಗೆ ತಾಕೀತು ಮಾಡಬೇಕೆಂದೂ ಅವರಿಗೆ ತಿಳಿದಿರಲಿಲ್ಲ…! ಹೀಗೆ ಹಾವು, ಕಪ್ಪೆಗಳನ್ನು ಹಿಡಿದು ಕೊಂದ ಅಂದಿನ ಆ ಕೆಲಸ ಪರಿಸರಕ್ಕೆ ದೊಡ್ಡ ನಷ್ಟ. ಆಮೇಲೆ ಗ್ವಾಂಕ್ರ ಕಪ್ಪೆಗಳು ಮೊದಲಿನಷ್ಟು ಕಾಣ ಸಿಗಲೇ ಇಲ್ಲ!
ಓತಿಕ್ಯಾತಕ್ಕೆ ವಿಜಿಯ ಊರಿನಲ್ಲಿ ‘ಕಾಯ್ಕಳ್ಳ’ ಎಂದು ಕರೆಯುತ್ತಿದ್ದರು. ಈ ಹೆಸರು ಕೇಳಿದರೆ ‘ತೆಂಗಿನಕಾಯಿಯನ್ನು ಓತಿಕ್ಯಾತ ಕದಿಯುತ್ತಿತ್ತಾ?’ ಎಂಬ ಪ್ರಶ್ನೆಯೇಳಬಹುದು! ಆದರೆ ಕಾಯ್ಕಳ್ಳ ಹಾಗೇನೂ ಮಾಡುವುದಿಲ್ಲ. ಹಾಗಾಗಿ ಈ ಹೆಸರು ಬರಲು ಬೇರೆ ಏನಾದರೂ ಕಾರಣವಿದ್ದೀತು! ಕಾಯ್ಕಳ್ಳದ ಕುರಿತು ಮಕ್ಕಳಿಗೆ ಕುತೂಹಲವಿತ್ತು. ಆದರೆ ಅದನ್ನು ‘ಕೆಟ್ಟಕುತೂಹಲ’ ಎಂದು ಕರೆಯಬಹುದು. ಯಾಕೆಂದರೆ ಮಕ್ಕಳ ನಂಬಿಕೆ ಹೇಗಿತ್ತೆಂದರೆ ‘ಕಾಯ್ಕಳ್ಳವನ್ನು ಕೊಂದು ಗುಂಡಿಗೆ ಹಾಕಿದರೆ ದುಡ್ಡು ಸಿಗುತ್ತದೆ’ ಎಂದು! ಅದು ನಿಜವಾಗಿಯೂ ಕೆಟ್ಟ ನಂಬಿಕೆ ಅಂದರೆ ಮೂಢನಂಬಿಕೆ. ಇದನ್ನು ವಿಜಿ, ನೀಲಿಮಾ ಮತ್ತು ಅವರ ಗುಂಪಿನ ಮಕ್ಕಳೆಲ್ಲ ನಂಬಿದ್ದರು. ಓತಿಕ್ಯಾತ ಯಾರ ತಳ್ಳಿಗೂ (ವಿಷಯಕ್ಕೂ) ಹೋಗುವ ಪ್ರಾಣಿಯಲ್ಲ. ಬೇಲಿ ಮೇಲೆ ತಲೆ ಕುಣಿಸಿಕೊಂಡು ಸರಸರನೆ ಓಡಾಡುತ್ತಾ ಆಹಾರ ಹುಡುಕಿಕೊಂಡು ತನ್ನಷ್ಟಕ್ಕೆಇರುವ ಜೀವಿ. ಅದರ ಕಣ್ಣು ಕೆಂಪಾಗಿರುವುದರಿಂದಲೋ ಏನೋ, ‘ಅದುರಕ್ತ ಹೀರುತ್ತದೆ’ ಎಂಬ ನಂಬಿಕೆಯೂ ಕೆಲವು ಕಡೆಗಳಲ್ಲಿ ಇದೆ. ಓತಿಕ್ಯಾತವನ್ನು ಕೊಂದು ಯಾವುದಾದರೂ ಗುಂಡಿ ಅಥವಾ ದರಲೆ (ತರಗೆಲೆ)ಯ ಮಧ್ಯೆ ಮುಚ್ಚಿಹಾಕಿದರೆ ದುಡ್ಡು ಸಿಗುತ್ತದೆ ಎಂಬ ಕೆಟ್ಟ ಮಾತು ನಂಬಿಕೊಂಡು ಅವರ ಗುಂಪಿನ ಕೆಲವು ಮಕ್ಕಳು ಒಮ್ಮೆ ಹಾಗೆ ಮಾಡಿದ್ದರು ಎಂದು ಮಾತಾಡಿಕೊಳ್ಳುತ್ತಿದ್ದರು. ಆಮೇಲೆ ದುಡ್ಡು-ದುಗ್ಗಾಣಿ ಎಂತದೂ ಸಿಗಲಿಲ್ಲವಂತೆ. ಹಾಗಾಗಿ ಮತ್ತೆ ಈ ಉಸಾಬರಿಗೆ ಅವರು ಕೈಹಾಕಲಿಲ್ಲವಂತೆ! ಮನೆಯ ಹತ್ತಿರದ ತೆಂಗಿನಕಟ್ಟೆಯಲ್ಲಿ, ತೆಂಗಿನ ಮರದಕಾಂಡದಲ್ಲಿ, ಬೇಲಿಯಂಚಲ್ಲಿ, ದರಲೆಯ ಮೇಲೆ ಓಡಾಡಿಕೊಂಡಿರುವ ಕಾಯ್ಕಳ್ಳ ವಿಜಿಗೆ ನಿಜಕ್ಕೂ ಇಷ್ಟ. ಇದೇ ತರದ ಹರಣೆ (ಹಾವ್ರಾಣಿ), ಸ್ವಲ್ಪ ದೊಡ್ಡದಾದ ಉಡವನ್ನು ಅವಳು ನೋಡಿದ್ದಳು. ಹರಣೆಯಂತೂ ಅವರ ಮನೆಯ ಸುತ್ತಮುತ್ತವೇ ನಾಲಿಗೆ ಚಾಚುತ್ತಾ ಓಡಾಡಿಕೊಂಡಿರುತ್ತಿತ್ತು. ವಿಜಿ, `ಕರ್ವಾಲೋ’ ಪುಸ್ತಕ ಓದಿದ ನಂತರ ಅಲ್ಲಿ ಬರುವ ‘ಹಾರುವ ಓತಿ’ಯ ಧ್ಯಾನದಲ್ಲಿದ್ದಾಗ ಓತಿಕ್ಯಾತದ ತರದ್ದೇ ಮರದಿಂದ ಮರಕ್ಕೆ ಹಾರುವ ಒಂದು ಓತಿಯನ್ನು ಮನೆ ಹತ್ತಿರ ನೋಡಿದ್ದಳು. ಆದರೆ ಅದರ ಹೆಸರೇನು ಎನ್ನುವುದು ಅವಳಿಗೆ ತಿಳಿಯಲಿಲ್ಲ. ಕರ್ವಾಲೊ ಪುಸ್ತಕದಲ್ಲಿ ಬರುವ ಹಾರುವ ಓತಿ ಅದೇ ಇರಬಹುದು ಅಂದುಕೊಂಡು ಅವಳು ಖುಷಿ ಪಡುತ್ತಿದ್ದಳು!
ವಿಜಿ, ಅವಳ ಮನೆಯ ಸುತ್ತಮುತ್ತ ಮಳೆಕೋಗಿಲ(ಹಾರ್ನ್ ಬಿಲ್ )ಹಕ್ಕಿಯೂ ಸೇರಿದಂತೆ ವಿವಿಧ ಹಕ್ಕಿಗಳನ್ನು ನೋಡಿದ್ದಳು. ಕೆಲವದರ ಹೆಸರುಗೊತ್ತಿತ್ತು. ಉಳಿದವುಗಳ ಕುರಿತು ಏನೂ ತಿಳಿದಿರಲಿಲ್ಲ. ಮಿಂಚುಳ್ಳಿ, ಹಲಸಿನಹಕ್ಕಿ (ಕಾಡುಪಾರಿವಾಳ), ಗಿಳಿ, ಗೋಲ್ಡನ್ ಓರಿಯಲ್ (ಹಳದಿ ಬೆನ್ನಿನ ಹಕ್ಕಿ), ಸೂರಕ್ಕಿ, ಪಿಕಳಾರ, ದರಲೆ ಹಕ್ಕಿ, ಮೈನಾ, ಕೊಕ್ಕರೆ, ಹುಂಡುಕೋಳಿ, ಕುಂಡೆಕುಸ್ಕ, ಮಡಿವಾಳಹಕ್ಕಿ, ಗುಟುರ್‌ಗುಮ್ಮ, ಕಾಜಾಣ, ಚಿಟ್ಟ್ ಕೋಳಿ ಮುಂತಾದವು ಮನೆಯ ಆಸುಪಾಸಿನಲ್ಲಿ, ಕಾಡಿನಲ್ಲಿ ಸಿಗುತ್ತಿದ್ದವು. ಒಮ್ಮೊಮ್ಮೆ ಕಾಡುಮೊಲಗಳನ್ನು ನೋಡಿದ್ದಳು. ಅಳಿಲುಗಳಂತೂ ತೋಟಕ್ಕೆ ಬಾಳೆತುಪ್ಪ ಕದಿಯಲು ಬಂದೇ ಬರುತ್ತಿದ್ದವು! ಗುಮ್ಮಗಳು ಮಳೆಗಾಲದಲ್ಲಿ ಕೂಗುತ್ತಾ ರಾತ್ರಿಗಳಿಗೆ ನಿಗೂಢತೆ ಬೆರೆಸುತ್ತಿದ್ದವು. ಪ್ರಾಣಿ-ಪಕ್ಷಿಗಳ ನಡುವಿನ ಆ ಬದುಕುಖುಷಿಯಾಗಿತ್ತು… ಆಪ್ತವಾಗಿತ್ತು.
*************************************
ಚನ್ನಾಗಿದೆ ಅಭಿನಂದನೆಗಳು
ಅಂದಿನ ಮಲೆನಾಡ ಬದುಕಿನ ಸುಂದರ ಚಿತ್ರಣ.