ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ21

ಆತ್ಮಾನುಸಂಧಾನ

ವಿದ್ಯಾರ್ಥಿ ನಿಲಯದಲ್ಲಿ ಪ್ರಪ್ರಥಮ ರಂಗಪ್ರವೇಶ

In-School Productions Program | Maryland Ensemble Theatre

ಅಂಕೋಲೆಯ ಲಕ್ಷ್ಮೇಶ್ವರ ಭಾಗದ ವಿದ್ಯಾರ್ಥಿ ನಿಲಯದಲ್ಲಿ ಮೊದಲ ಮಳೆಗಾಲ ಕಳೆದಿತ್ತು. ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿ ನಿಲಯವು ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿದ್ದ ಎರಡಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ವಿಶಾಲವಾದ ಕಂಪೌಂಡಿನಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಸಾಕಷ್ಟು ವಿಶಾಲವಾದ ಕೋಣೆಗಳು, ಮೊದಲ ಮಹಡಿಯಲ್ಲಿಯೂ ಅಷ್ಟೇ ವಿಶಾಲ ಕೋಣೆಗಳು ತುಂಬಾ ಅನುಕೂಲಕರವಾಗಿದ್ದವು. ಈ ಕಟ್ಟಡದ ಮಾಲಿಕರು ಯಾರೋ ನಮಗೆ ತಿಳಿದಿರಲಿಲ್ಲ. ಆದರೆ ಬಹುಕಾಲದಿಂದ ಈ ಭವ್ಯ ಬಂಗಲೆ ಯಂಥ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಸುತ್ತ ಮುತ್ತಲ ಮನೆಯವರು ಇದು ‘ಭೂತ ಬಂಗಲೆ….. ಅಲ್ಲಿ ದೆವ್ವಗಳ ಕಾಟವಿದೆ…’ ಇತ್ಯಾದಿ ಮಾತನಾಡಿಕೊಳ್ಳುತ್ತಿದ್ದರು. ನಾವು ಬಂದು ನೆಲೆಸಿದ ಕೆಲದಿನಗಳವರೆಗೆ ನಮಗೂ ಅಂಥ ಭ್ರಮೆಯ ಅನುಭವಗಳೂ ಆದವು. ಮಧ್ಯರಾತ್ರಿಯ ನಂತರ ಯಾರೋ ಮಹಡಿಯ ಮೇಲೆ ನಡೆದಾಡಿದ… ಏನೋ ಮಾತಾಡಿದ ಸಪ್ಪಳ ಕೇಳಿ ಬಂತಾದರೂ ಕೆಲವೇ ದಿನಗಳಲ್ಲಿ ನಾವು ಅದಕ್ಕೆ ಹೊಂದಿಕೊಳ್ಳುತ್ತ ಕ್ರಮೇಣ ಮರೆತೇ ಬಿಟ್ಟೆವು. (ಈಗ ಅದೇ ಕಟ್ಟಡವನ್ನು ಬೇರೆ ಯಾರೋ ಕೊಂಡು ನವೀಕರಿಸಿ ‘ಹರ್ಷ ನಿವಾಸ’ ಎಂದು ಹೆಸರಿಟ್ಟು ವಾಸಿಸುತ್ತಿದ್ದಾರೆ).

ನಾವು ಈ ಕಟ್ಟಡಕ್ಕೆ ಬಂದು ನೆಲೆ ನಿಂತ ಕೆಲವೇ ದಿನಗಳಲ್ಲಿ ವಸತಿನಿಲಯದ ಮೊದಲಿನ ಮೇಲ್ವಿಚಾರಕರಾಗಿದ್ದ ‘ಮಾಜಾಳಿಕರ’ ಎಂಬುವವರು ವರ್ಗವಾಗಿ ಬೇರೆ ಮೇಲ್ವಿಚಾರಕರು ಆಗಮಿಸಿದರು. ಹೊಸದಾಗಿ ನಮ್ಮ ವಸತಿನಿಲಯದ ಮೇಲ್ವಿಚಾರಕರಾಗಿ ಆಗಮಿಸಿದ ಲಿಂಗು ಹುಲಸ್ವಾರ ಎಂಬುವವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಮೂಲತಃ ಕಾರವಾರದವರಾದ ಲಿಂಗು ಹುಲಸ್ವಾರ ತಮ್ಮ ಯುವ ಸ್ನೇಹಿತರ ಸಂಘಟನೆ ಮಾಡಿಕೊಂಡು ಕಾರವಾರದಲ್ಲಿ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಇದ್ದವರು. ಅವರು ನಮ್ಮ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಪ್ರೇರೆಪಿಸುವುದಕ್ಕಾಗಿ ಇಲ್ಲಿಯೂ ನಾಟಕವೊಂದನ್ನು ಆಡಿಸುವ ಆಸಕ್ತಿ ತೋರಿದರು. ಆದರೆ ಹಾಸ್ಟೆಲಿನ ಯಾವ ವಿದ್ಯಾರ್ಥಿಯೂ ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಲಿಲ್ಲ. ಆದರೂ ಲಿಂಗು ಹುಲಸ್ವಾರ ಅವರು ಅಲ್ಪಸ್ವಲ್ಪ ಪ್ರತಿಭೆ ಮತ್ತು ಅಭಿನಯದ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಆಯ್ದು ತರಬೇತಿ ನೀಡುವ ಸಂಕಲ್ಪ ಮಾಡಿದರು. ಕಾರವಾರದ ತಮ್ಮ ಪರಿಚಯದ ಕೆಲವು ಯುವಕರನ್ನು ಕರೆಸಿಕೊಂಡು ನಾಟಕ ನಿರ್ದೇಶನದ ನೆರವು ಪಡೆದರು. ಹಾಸ್ಟೆಲಿನ ಆಯ್ದ ವಿದ್ಯಾರ್ಥಿಗಳ ತಂಡ ‘ಸಂಸಾರ’ ಎಂಬ ಸಾಮಾಜಿಕ ನಾಟಕವೊಂದನ್ನು ಪ್ರಯೋಗಿಸುವುದೆಂದು ತೀರ್ಮಾನವಾಯಿತು.

ನನ್ನ ನೆನಪಿನಲ್ಲಿ ಉಳಿದಿರುವಂತೆ ಲಿಂಗು ಹುಲಸ್ವಾರ ಅವರೇ ನಾಟಕದ ಮುಖ್ಯ ಪಾತ್ರ ನಿರ್ವಹಿಸಿದ್ದರು. ಉಳಿದಂತೆ ನಾಗೇಶದೇವ ಅಂಕೋಲೆಕರ, ಲಕ್ಷ್ಮಣ ಹುಲಸ್ವಾರ, ಶಂಕರ ಹುಲಸ್ವಾರ, ಹುಲಿಯಪ್ಪ ನಾಯ್ಕ, ನಾರಾಯಣ ವೆಂಕಣ್ಣ ಆಗೇರ, ಲೋಕಪ್ಪ ಬರ‍್ಕರ್ ಮುಂತಾದವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು. ನನಗೆ ಒಂದು ಹಾಸ್ಯ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು.

ಮಾರುತೇಶ ಬಾಬು ಮಾಂಡ್ರೆ ಎಂಬುವವರು ಬರೆದ ‘ಸಂಸಾರ’ ಎಂಬ ಸಾಮಾಜಿಕ ನಾಟಕವನ್ನು ಬನವಾಸಿಯಲ್ಲಿ ನಾನು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ ಗಮನಿಸಿದ್ದೆ. ಬನವಾಸಿಯಲ್ಲಿ ನಮ್ಮ ಗುರುಗಳಾದ ಪಿ.ಜಿ. ಪಾತಃಕಾಲ ಎಂಬುವವರ ನಾಯಕತ್ವದಲ್ಲಿ ಪ್ರಯೋಗಗೊಂಡ ‘ಸಂಸಾರ’ ನಾಟಕದಲ್ಲಿ ನಮ್ಮ ತಂದೆಯವರು ಮುಖ್ಯ ಸ್ತ್ರೀ ಪಾತ್ರಧಾರಿಯಾಗಿದ್ದರು ಎಂಬುದನ್ನು ಹಿಂದೆ ಪ್ರಸ್ತಾಪಿಸಿದ್ದೇನೆ. ಈ ನಾಟಕವು ಅಲ್ಲಿ ಜನಾಗ್ರಹದ ಮೂಲಕ ಎರಡು-ಮೂರು ಬಾರಿ ಪ್ರಯೋಗಗೊಂಡಿತ್ತು. ಹೀಗಾಗಿ ಪ್ರಸ್ತುತ ನಾಟಕದ ಸ್ಥೂಲ ಚಿತ್ರಣವೊಂದು ನನ್ನ ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿತ್ತು.

ಇಷ್ಟಾಗಿಯೂ ನಾನು ಮೊಟ್ಟ ಮೊದಲ ಬಾರಿಯ ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಸಫಲನಾಗಲಿಲ್ಲ ಎಂಬುದು ನಿಜ. ಮೂಲಭೂತವಾಗಿ ನನ್ನೊಳಗಿರುವ ಸಭಾ ಕಂಪ ಮತ್ತು ಕೀಳರಿಮೆಯ ಕಾರಣದಿಂದ ಅಂಜುತ್ತಲೇ ರಂಗ ಪ್ರವೇಶಿಸಿದ ನಾನು ಸಂದರ್ಭಕ್ಕೆ ಸರಿಯಾಗಿ ಕಂಠಪಾಠ ಮಾಡಿದ ಸಂಭಾಷಣೆಗಳನ್ನು ಒಪ್ಪಿಸಿದ್ದಲ್ಲದೆ ಹಾಸ್ಯ ಪಾತ್ರಕ್ಕೆ ತಕ್ಕಂತೆ ನಟಿಸುವುದು ಸಾಧ್ಯವೇ ಆಗಿರಲಿಲ್ಲ. ಬಹುತೇಕ ನನ್ನ ಸ್ನೇಹಿತರು ಕೂಡ ನನ್ನಂತೆಯೇ ಅಳುಕಿನಿಂದಲೇ ರಂಗ ಪ್ರವೇಶದ ಮೊದಲ ಅನುಭವ ಪಡೆದರಲ್ಲದೆ ನಾಟಕದ ಪಠ್ಯಕ್ಕೆ ನ್ಯಾಯ ನೀಡಲಾಗದೆ ಒಟ್ಟಾರೆ ನಾಟಕವು ಸಾಮಾನ್ಯ ರಂಗ ಪ್ರಯೋಗವಾಗಿಯೇ ಪ್ರದರ್ಶನಗೊಂಡಿತು.

ವಿದ್ಯಾರ್ಥಿ ನಿಲಯದ ಎರಡು ವರ್ಷಗಳನ್ನು ಕಳೆಯುವಾಗ ನಾರಾಯಣ ವೆಂಕಣ್ಣ ಆಗೇರ ತನ್ನ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ಕಾರಣ ಊರಲ್ಲಿಯೇ ಉಳಿದ. ತನ್ನ ತಂದೆ ತೀರಿಕೊಂಡುದರಿಂದ ಊರಿಗೆ ಹೋದ ಕೃಷ್ಣ ಆಗೇರ ಮರಳಿ ವಿದ್ಯಾರ್ಥಿ ನಿಲಯಕ್ಕೆ ಬಾರದೆ ಹನೇಹಳ್ಳಿಯ ಹೈಸ್ಕೂಲು ಸೇರಿಕೊಂಡ. ಉಳಿದ ನಾವು ಕೂಡ ವಿದ್ಯಾರ್ಥಿ ನಿಲಯದ ಆಶ್ರಯದಿಂದ ಹೊರಬಂದು ಮತ್ತೆ ನಮ್ಮ ನಮ್ಮ ಮನೆ ಸೇರಿಕೊಂಡು ಅಲ್ಲಿಂದಲೇ ಓದು ಮುಂದುವರಿಸಿದೆವು.

******************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

3 thoughts on “

  1. ಎಲ್ಲ ಕಡೆಯೂ ಬರಿ struggle ಎದುರಿಸುತ್ತ ಬಂದಿದ್ದ ನಿಮಗೆ ಎಲ್ಲಿಯೂ ನೆಮ್ಮದಿ ಇರಲಿಲ್ಲ. ಒಬ್ಬ ಶಿಕ್ಷಕರ ಮಗನಾದ ನೀವು ಇದಕ್ಕೆಲ್ಲ ಕಾರಣ ನಿಮ್ಮ ಮನಸ್ಸಿನಲ್ಲಿದ್ದ ಕೀಳುತನದ ಭ್ರಮೆ. ನಾಟಕದ ಸ್ತ್ರೀ ಪಾತ್ರದ ಭಯ, ಒಟ್ಟಿನಲ್ಲಿ ವಿದ್ಯಾರ್ಥಿ ಜೀವನ ಗೊಂದಲದ ನಡುವೆ ಆಯಿತು.

    ಮುಂದುವರಿದ ಸಂಚಿಕೆ…..

Leave a Reply

Back To Top