ಕವಿತೆ
ಆತ್ಮ ಚೈತನ್ಯ
ವಸುಂಧರಾ ಕದಲೂರು
ಹೌದು,
ಸದಾ ಚೈತನ್ಯಶೀಲರಾಗಿರುವ
ನಾವು ಆಗಾಗ್ಗೆ ಮಂಕಾಗುತ್ತೇವೆ.
ಚೈತನ್ಯವು ಬೇರುಬಿಟ್ಟ ಆಲದ
ಮರದ ಬಿಳಲುಗಳೇನಲ್ಲ!
ಆಗಸದ ವಿಸ್ತಾರದ ಕ್ಯಾನ್ವಸ್ಸಿನ
ಹಿನ್ನೆಲೆಯಲಿ ರಂಗು ರಂಗಿನೋಕುಳಿ
ಆಡುವ ಚಿತ್ತಾರದ ಮೇಘಮಾಲೆ;
ಕ್ಷಣ ಕ್ಷಣವೂ ಬದಲಾಗುವ
ಗಡಿಯಾರದ ಮುಳ್ಳಿನ ಚಲನೆ;
ಹಕ್ಕಿ ಗೂಡೊಳಗಿನ ಜೀವಂತಿಕೆಯ
ಕಾವಿಗೆ ಕಾದು ಕೂತ ಪುಟ್ಟ ಮೊಟ್ಟೆ.
ರೆಕ್ಕೆ ಬಲಿತ ಮೇಲೆ ಗಗನ ಗಾಮಿ.
ಚೈತನ್ಯವು ನಿತ್ಯ ನೂತನವೂ ನಿರಂತರ
ತಾರುಣ್ಯಪೂರ್ಣವೂ ಆಗಿರಲು
ಸಾಧ್ಯವಿಲ್ಲ. ಸತ್ಯದ ಒಳ ಹೂರಣದ
ಮೇಲೆ ಹುಸಿ ಸುಳ್ಳಿನ ಹೊರಕವಚ.
ಚೈತನ್ಯದ ವಾಸ್ತವತೆ ಸಾವಿನಂತೆ.
ಮರುಹುಟ್ಟಿನ ನಿರೀಕ್ಷಣೆಯಲ್ಲಿ
ಅಲೆವ ಆತ್ಮಜ್ಯೋತಿ! ಜನ್ಮಾಂತರ
ಗರ್ಭದೊಳಗಿನ ಭ್ರೂಣ ಪ್ರಣತಿ!
******************************************
Very nice.
Congratulations madam.