ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

ಲೇಖನ

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

ಶ್ರೀಮತಿ ಡಿ. ಸುಂದರಿ,

White Dandelion Flower Shallow Focus Photography

ಅದೇಕೋ ಅಂದು ಅದೇನನೋ ಕೇಳಲೆಂದು  ನನ್ನ ಹಿತೈಷಿಗಳು, ಸಲಹೆಗಾರರು, ಮಾರ್ಗದರ್ಶಕರೂ, ಸನ್ಮಿತ್ರರೂ, ಮನೋವೈದ್ಯರಂತೆ ಶುಶ್ರೂಷೆ ಮಾಡುವಲ್ಲಿ ನಿಪುಣರೂ, ನೊರೆಹಾಲಿನಂತ ಶುಭ್ರಮನಸ್ಕರೂ ಮತ್ತು ಆತ್ಮಬಂಧುವೆಂದು ಕರೆಸಿಕೊಳಲು ಬೇಕಾದ ಎಲ್ಲಾ ಮಾನದಂಡಗಳನೂ ಮೀರಿಯೇ ನಿಲುವ ಎತ್ತರದ ವ್ಯಕ್ತಿತ್ವ ಮತ್ತು ನಿಲುವಿನಿಂದಲೂ ಗುರುತಿಸಿಕೊಳುವ ಪ್ರಸಾದ್ ಅವರಿಗೆ ನಾನು ನನ್ನ ಗೆಳತಿಯ ಮನೆಯಲ್ಲಿದ್ದಾಗ  ಫೋನಾಯಿಸಿದೆ. ಅದೇನನೋ ಕೇಳಿ ತಿಳಿವ ಮಾತಿನ ನಡುವೆ ಕುಶಲೋಪರಿಯ ಮಾತುಗಳು ಆತ್ಮ ಬಂಧುವಿನೊಡನೆ ಬಂದು ಹೋದವು. ಹೀಗೇ ಮಾತು ಮುಂದುವರೆದು ಇಷ್ಟಗಳ ಕಡೆ ಹೊರಳಿದವು “……ಮನುಷ್ಯ ಏನೋ ಕಳೆದುಕೊಂಡಂತೆ ಬದುಕುವ ಬದಲು ತಮ್ಮ ಇಷ್ಟದಂತೆ, ತಮಗೆ ಖುಷಿಯಾಗುವಂತೆ ತನ್ನ ಬದುಕನ್ನು ಬದುಕಬೇಕು” ಎಂದು ಮಾತಿನ ನಡುವೆ ಸಲಹೆಯಿತ್ತರು. ಅವರೊಂದಿಗಿನ ಆ ದಿನದ ಮಾತು ಅಲ್ಲಿಗೆ, ಅದೇನನೋ ಸಲಹೆ ಪಡೆಯುವಲ್ಲಿಗೆ ಪೂರ್ಣವಾಯಿತು.

   ದೇವಾಲಯಗಳಲಿ ಬಹು ದೊಡ್ಡ ಗಂಟೆಗಳನು ತುಸು ಜೋರಾಗಿಯೇ ಜಗ್ಗಿ ಬಾರಿಸಿದಾಗ ಕೇಳಿಸುವ ಶಬ್ದವು ಅಲ್ಲಿಗೇ ನಿಲ್ಲದೇ ಬಹುಕಾಲದವರೆಗೆ ಕಿವಿಯಲಿ, ಮನದಲಿ ಮಾರ್ದನಿಸುವಂತೆ ಪ್ರಸಾದ್ ಅವರ ಮಾತಿನ ನಡುವೆ ಸಾಂದರ್ಭಿಕವಾಗಿಯೇ ಬಂದುಹೋದ  ನಮ್ಮಿಷ್ಟದಂತೆ ಬದುಕಬೇಕೆಂಬ ಮಾತಿನಲ್ಲಿನ “ನಮ್ಮ ಇಷ್ಟ”  ಎಂಬ ಮಾತು ಗೆಳತಿಯ ಮನೆಯಿಂದ ಬರುವ ದಾರಿಯುದ್ದಕೂ ನನ್ನ ಮನಃಪಟಲದಲಿ ಕೇಬಲ್ ಕನೆಕ್ಷನ್ ತೆಗೆದ ಟಿ.ವಿ ಯಲಿ ಯಾವುದೇ ಚಾನೆಲ್ ಬದಲಾಯಿಸಿದರೂ ಗೊರ್ ಎಂದು ಬರುವ ಒಂದೇ ಶಬ್ದದಂತೆ “  ನಮ್ಮ ಇಷ್ಟ”  ಎಂಬ ಮಾತು ಮಾತ್ರವೇ ನನ್ನ ಮೆದುಳನು ಇನ್ನಿಲ್ಲದಂತೆ ಆಕ್ರಮಿಸಿಕೊಂಡಿತು.

     ಗೆಳತಿಯ ಮನೆಯಿಂದ ತುಸು ದೀರ್ಘವೇ ಆದ ದಾರಿ ಕ್ರಮಿಸಲು ನನ್ನ ಗಾಡಿಯನೇರಿದೆ ಅದು ಕ್ರಮಿಸಿದ ದಾರಿಯ ದೂರ ನನಗರಿವಿಲ್ಲ.. ನನ್ನ ಗಾಡಿ ವಸ್ತುವಾದರೂ ಅದನ್ನು ʼಅದುʼ ಎಂದು ಸಂಬೋಧಿಸುವುದೇ! ಛೆ! ಅದು ಎನ್ನಬಾರದು ವ್ಯಕ್ತಿಗಳು ಯಾರಾದರೂ ನನ್ನನ್ನು ಸದಾ ಜೊತೆಗಿದ್ದು ಕಾಪಲು ಸಾಧ್ಯವೇ? ಏಕೆಂದರೇ ಪ್ರತಿಯೊಬ್ಬರಿಗೂ ಅವರದೇ ಗೊಡವೆಗಳಿಲ್ಲವೇ? ಅಂತಾದ್ದರಲ್ಲಿ ನನ್ನ ದ್ವಿಚಕ್ರವಾಹನವಾದ ಆಕ್ಟಿವಾ ಸದಾ ನಾನು ಆಕ್ಟೀವ್ ಆಗಿರಲು ಸಹಕರಿಸಿರುವ ನನ್ನೊಡನಿರುವ ಒಡನಾಡಿ ಹಾಗಾಗಿ ಒಂದರ್ಥದಲ್ಲಿ ಅದು ನನ್ನ ಸಖನೇ ಹೌದು. ಏಕೆಂದರೆ  ಕಳೆದ ಏಳು ವರ್ಷಗಳಿಂದ ನನ್ನನ್ನು ಸದಾ ಕಾಳಜಿಯಿಂದಲೇ ಕಾಪಿಕೊಳುತಲೇ ತನ್ನ ಸಾರಥಿಯ ಬದಲಿಸಲು ಒಂದವಕಾಶವನೂ ನೀಡದ, ನನ್ನ ಓಡಾಟದಲಿ ಸದಾ ಜೊತೆಯಾಗಿರುವ, ಮನವೇನೇ ಚಿಂತಿಸಿದರೂ ಹೋಗಬೇಕಾದಲ್ಲಿಗೇ ಕರೆದುಕೊಂಡು ಹೋಗಿ ನಿಲಿಸುವ ಈ ನನ್ನ ಸಖ ಅಂದು ಹಲವು ತಿರುವುಗಳು, ಹಲವು ಕೆಂಪುದೀಪಗಳ ಮೌನಘೋಷಣೆಯನ್ನು ಕಡ್ಡಾಯವಾಗಿ ಪಾಲಿಸುತ್ತಲೇ ಹಲವು ನಿಲುಗಡೆಗಳನೂ ದಾಟಿ ಬಂದು ನನ್ನ ಗುಬ್ಬಿಗೂಡು ತಲುಪಿದರೂ ಆ ಮಾತು  ನನ್ನ ಮನಃಪಟಲದಿಂದ ಸರಿದಿರಲಿಲ್ಲವೆಂದರೆ ಆ ಮಾತು ಅದಾವ ಮಟ್ಟದಲಿ ನನ್ನನ್ನ ಕಾಡಿತೆಂದು ಊಹಿಸಬಹುದೆನಿಸುತ್ತದೆ.

ನಮ್ಮೊಡನೆ ನಾವು ಸಂಭಾಷಿಸುವುದ ಕಲಿಯಬೇಕು. ಅದು ನಮ್ಮನ್ನು ನಾವು ಅರಿಯಲು, ಪರೀಕ್ಷಿಸಿಕೊಳಲು, ತಿದ್ದಿಕೊಳಲು, ಸರಿಪಡಿಸಿಕೊಳಲು ಇರುವ ಟೂಲ್ಸ್ ಎನಿಸುತ್ತದೆ. ಹಾಗಾಗಿ ನನ್ನೊಳಗೆ ನಾನು ಸಂಭಾಷಿಸಲು ಅಣಿಯಾದೆ. ನನ್ನನ್ನು ಕಾಡಿದ ಆ ಮಾತು …. ಅದೇ  ಮಾತು. ʼನನ್ನಿಷ್ಟʼ ಎಂಬ ಮಾತು ನನ್ನ ಮನದಲಿ ಹಲವು ಪ್ರಶ್ನೆಗಳ ಸರಪಳಿಯನೇ ಹೆಣೆಯತೊಡಗಿತು. ನನ್ನ ಇಷ್ಟ ಏನು? ನನಗೇನೇನಿಷ್ಟ? ಎಂದು ನನ್ನನ್ನು ನಾನೇ ಕೇಳಿಕೊಂಡೆ. ಕೇಳಿದೊಡನೆ ನನ್ನ ಮನ ಹೇಳಲು ತಡಕಾಡಿತು, ಹುಡುಕಾಡಿತು, ಪರದಾಡಿತು!

            ಪ್ರತೀ ಮನುಷ್ಯನಿಗೂ ನೂರೆಂಟು ಇಷ್ಟಗಳಿರುತ್ತವೆ. ಹೀಗಿರುವಾಗ ಇಷ್ಟಗಳ ರಾಶಿಗಳಲಿ ಯಾವುದೆಂದು ಹೇಳಿಯಾರು? ತಿರುಪತಿಯ ದೇವರ ದರ್ಶನಕೆ ಸರತಿ ಸಾಲಲಿ ನಿಂತ ಭಕ್ತಾದಿಗಳ ಸರತಿಗಳಂತಿರುವ ಇಷ್ಡಗಳ ಸಾಲಿನಲಿ ಅರಿವಿಲ್ಲದವರಂತೆಯೇ ಮುಂದಿನವರನು ಹಿಂದಿಕ್ಕಿ ಮುನ್ನುಗ್ಗುವ ಚಾಣಾಕ್ಷತನವುಳ್ಳ ಭಕ್ತರಂತೆ ಕೆಲ ಇಷ್ಡಗಳು ತಮ್ಮ ಸ್ಥಾನ, ಸಾಲುಗಳನು ಪ್ರತಿಕ್ಷಣಕೊಂದು ಬಿಲಿಯನ್ಗಟ್ಟಲೆ ಬದಲಿಸುತ್ತಿರಲು ಅದಾವ ಇಷ್ಟಗಳನು ಇವರು ಆದ್ಯತೆಯ ಮೇರೆಗೆ ಹೇಳಿಯಾರು? ಕೈಗಳಲಿ ನಿಲಲೊಲ್ಲದ  ಮಣಿಮುತ್ತುಗಳಲಿ ಇಷ್ಟವೆಂದು ಅದಾವುದನು ಎತ್ತಿ ತೋರಿಯಾರು? ಎಂದೆಣಿಸದಿರಿ. ಏಕೆಂದರೇ ಆ ದಾರಿಯುದ್ದಕ್ಕೂ ನನ್ನ ಇಷ್ಟವೇನೆಂದು ಅರೆಕ್ಷಣ ವಿರಮಿಸದೇ ನನ್ನೊಳಗೆಲ್ಲಾ ಇಣುಕಿದರೂ ನನಗೆ ನನ್ನಿಷ್ಟಗಳಿರಲಿ ನನ್ನ  ಒಂದಾದರೂ ಇಷ್ಟ ಹೊಳೆಯಲೇ ಇಲ್ಲ ಹಾಗಾಗಿ ನನ್ನ ಮನಕೆ ಹೇಳಲಾಗಲೂ ಇಲ್ಲ. ಇದೇ ಸತ್ಯ.

            ಆಗಲೇ ನನಗನಿಸಿತು ಅಪ್ಪ-ಅಮ್ಮ, ಅಕ್ಕ-ತಮ್ಮ, ಗಂಡ-ಮಕ್ಕಳು, ಅತ್ತೆ-ಮಾವ, ಸ್ನೇಹಿತರು-ನೆರೆಹೊರೆಯವರ ಇಷ್ಟಗಳ ಪಟ್ಟಿ ಕೊಡಲು ನಮ್ಮ ಮನಸ್ಸು ಸಿದ್ಧವಿರುತ್ತದೆ. ಆದರೆ ಅದೇಕೋ ನಮ್ಮ ಅದರಲ್ಲೂ ನನ್ನದೇ ಇಷ್ಟ ಏನೆಂದು ಕೇಳಿಕೊಳ್ಳುವ ಗೊಡವೆಗೂ ಹೆಣ್ಣುಮಕ್ಖಳು ಹೋಗುವುದೇ ಇಲ್ಲ ಎಂದು. ಇದು ಪ್ರತೀ ಹೆಣ್ಣಿನ ಮಾನಸಿಕ ಸ್ಥಿತಿಯೂ ಹೌದು. ನನ್ನಮ್ಮ ನನ್ನಿಷ್ಟದ ಅಡುಗೆ ದುಡುಗಿ ಬಡಿಸಿ ಖುಷಿಯುಂಡಳೇ ಹೊರತು ತನ್ನಿಷ್ಟವೆಂದು ಯಾವುದನೂ ಹೇಳಲಿಲ್ಲ. ಇನ್ನು ತನ್ನಿಷ್ಟವ ಬೇರೆಯವರ ಮೇಲೆ ಹೇರುವುದೆಲ್ಲಿ! ಅವಳಿಗೆ ಇಷ್ಟಗಳೇ ಇಲ್ಲವೇ ಎಂದು ಬೆದಕಿದರೋ ಮುಗಿಯಿತು ನಾನು ಚಿಕ್ಕವಳಿದ್ದಾಗ ಅದು ಇಲ್ಲದೇ ಇರುತ್ತಿರಲಿಲ್ಲ, ಇದು ಬೇಕೇ ಬೇಕಿತ್ತು. ಅದಕ್ಕಾಗಿ ಕಾಯ್ದು ಕುಳಿತಿರುತ್ತಿದ್ದೆ. ಇದಕ್ಕಾಗಿ ಉಪವಾಸವಿದ್ದೆ, ಅದು ಇದು, ಉದು ಎಂದರೆ ಪಂಚಪ್ರಾಣ ಎಂದು ಹೇಳುವ ಆಕೆಗೆ ಈಗ ಯಾವುದು ಇಷ್ಟವೆಂದರೆ ಆಕೆಯ ಇಷ್ಟಗಳಲಿ ಗಂಡ, ಮಕ್ಕಳು ಮತ್ತು ಹೊಂದಾಣಿಕೆಗಳೇ ಆವರಿಸಿವೆ ಎನಿಸುತ್ತದೆ. ಹಾಗಾದರೆ ಆಕೆಯ ಇಷ್ಟಗಳು ಏನಾದವೆಂದರೇ ಅವೆಲ್ಲಾ ಅವಳ ಸುತ್ತಲಿನವರ ಇಷ್ಟಗಳ ಪೂರೈಸುವ ಜರೂರಿನಲ್ಲಿ ತೆರೆಯ ಮರೆಗೆ ಸಣ್ಣಗೆ, ತಣ್ಣಗೆ, ಮೆಲ್ಲಗೆ-ತುಸು ಮೆಲ್ಲಗೆ ಅದೆಲ್ಲಿಗೋ ನುಣ್ಣಗೆ ಸರಿದುಹೋಗಿವೆ. ಇದು ಕೇವಲ  ನನ್ನಮ್ಮಳ ಮನೋಸ್ಥಿತಿಯಲ್ಲ ನನ್ನ ಮತ್ತು ಪ್ರತೀ ಹೆಣ್ಣಿನ ಸ್ಥಿತಿ ಎಂಬುದೂ ಸತ್ಯ.

            ಬಿಸಿ-ಬಿಸಿ ರೊಟ್ಟಿಯ ಸವಿಯಲು ಇಚ್ಛಿಸುತ್ತಿದ್ದಾಕೆ ಈಗ ತಾನು ಇಚ್ಛಿಸುತ್ತಿದ್ದಂತೆ ಗಂಡ-ಮಕ್ಕಳಿಗೆ ಮತ್ತು ಬಂದು ಹೋಗುವ ಬಂಧುಗಳಿಗೆ ಬಡಿಸಿ ಆ ನಡುವೆ ಅರೆ-ಬರೆ ಬೆಂದ, ಸೀದ, ತಣ್ಣಗಾದುದರಲೇ ತೃಪ್ತಿಹೊಂದುವಾಕೆ ಅವಳು. ಇದಕ್ಕೆ ಯಾವ ಹೆಣ್ಣೂ ಹೊರತಲ್ಲ. ಬರಿಯ ತಿನ್ನುವಿಕೆಗೆ ಇದು ಸೀಮಿತವಲ್ಲ. ಇದು ಉಡುವ, ತೊಡುವ, ಹೋಗುವ-ಬರುವ, ಮಾತಾಡುವ, ನಗುವ, ತನಗಾಗಿಯೇ ಸಮಯ ಹೊಂದಿಸಿಕೊಳುವ ಹೀಗೆ ತನ್ನ ಎಲ್ಲಾ ಇಷ್ಟಗಳನೂ ಮರೆಗೆ ಸರಿಸಿ ಅವುಗಳನು ಅಪರೂಪಕ್ಕೆ ತೊಳೆಯಲೆಂದೇ ತೆಗೆದಿಡುವ ಹಿತ್ತಾಳೆ, ಕಂಚಿನ ಪಾತ್ರೆಗಳಂತೆ ಆಗಾಗ ತೊಳೆದು, ಕೆಲದಿನಗಳ ಹೊಳಪನೇ ಸಂಭ್ರಮಿಸಿ ಮತ್ತೆ ಮೂಲೆಗಿಡುವಂತೆ ತನ್ನೆಲ್ಲಾ ಬಯಕೆಗಳ ಮರೆತು ತನ್ನವರಿಗಾಗಿಯೇ ಮೀಸಲಾದ ನಮ್ಮ ಬದುಕಿನಲಿ ತುಸು ನಮಗಾಗಿಯೇ ಸಮಯ ಹೊಂದಿಸಿಕೊಳ್ಳಬೇಕಿದೆ. ಆ ನಡುವೆ ನನ್ನ ಇಷ್ಟದಂತೆ ಕೆಲ ಕ್ಷಣಗಳನೋ, ಕೆಲ ಹೊತ್ತನ್ನೋ ಕಳೆದು ಸಂಭ್ರಮಿಸಬೇಕಿದೆ. ಏಕೆಂದರೆ ನಾನು ನನಗಾಗಿಯೂ ಬದುಕಬೇಕಲ್ಲವೇ.

            ದ್ವಿಚಕ್ರವಾಹನ ಚಾಲನೆಯ ಸಮಯದಲ್ಲಿ ಕೆಳಗೆ ಕುಸಿಯಲು ಹವಣಿಸುತಿರುವ ಸೆರಗನೋ, ದುಪ್ಪಟವನೋ ಸರಿಪಡಿಸಿಕೊಳಲೂ ಆಗದೇ, ಬೀಳಲೂ ಅನುವೀಯದೇ ಹಾಗೇ ಹೇಗೋ ಸರಿದೂಗಿಸುವ ಪರಿ ಗಾಡಿ ಓಡಿಸುವ ಎಲ್ಲ ಹೆಣ್ಣುಮಕ್ಕಳಿಗೂ ಗೊತ್ತಿದೆ. (ಪುರುಷರಿಗೂ ಇಂತಹ ತಾಕಲಾಟಗಳು ಇರುತ್ತವೆ. ಅವು ಅವರಿಗೇ ಗೊತ್ತು) ಹಾಗೆಯೇ ಕನ್ನಡಕಧಾರಿಗಳಾದರೋ ಮುಗಿಯಿತು ಹೆಲ್ಮೆಟ್ನ ಗಾಜಿನ ಒಳಗೊಂದು ಕಣ್ಣಿಗೆ ಧರಿಸಿದ ಗಾಜು ನಿಧಾನವಾಗಿ ದಾರಿಯಲ್ಲಿನ ಉಬ್ಬು-ತಗ್ಗುಗಳ ಕಾರಣದಿಂದಾಗಿ ಜಾರುವಾಗ, ಹೆಲ್ಮೆಟ್ ಧರಿಸಿರುವಾಗ ಕಿವಿಯೋಲೆಯ ಒತ್ತುವಿಕೆಯಿಂದ ಆಗುವ ಹೇಳಿಕೊಳಲಾಗದ ಬೇನೆಯನು ಹೆಣ್ಣು-ಗಂಡುಗಳ ಬೇಧವಿಲ್ಲದೇ ಕನ್ನಡಕ, ಓಲೆ ಧರಿಸುವ ಎಲ್ಲರ ಅನುಭವಕ್ಕೂ ದಕ್ಕಿರುತ್ತದೆ.  ಹೆಲ್ಮೆಟ್ನ ಒಳಗೆ ಕೈಹಾಕಿ ಸರಿಪಡಿಸಿಕೊಳಲಾಗದೇ ಚಡಪಡಿಸುವ ಇಂತಹ ಸಮಯದಲಿ ಸಿಗುವ ಸಿಗ್ನಲ್ ನಿಜಕ್ಕೂ ನೆಮ್ಮದಿಯ ತಾಣವೇ ಆಗಿರುತ್ತದೆ .ಹಾಗೆಯೇ  ನಾವು ಮನೆಗೆಲಸಗಳನು ತುಂಬಾ ಸ್ಮಾರ್ಟ್ ಆಗಿಯೇ ನಿರ್ವಹಿಸುವಲ್ಲಿ ನಿಪುಣರಾಗಿದ್ದರೂ ಎರಡು ಪಾದಗಳ ಒಂದೆಡೆ ಇಡಲು ಅನುವಾಗದೇ  ದುಡಿಮೆಗೆಂದು ಗಾಡಿಯಲೋ, ಅಥವಾ ಬಸ್ಸು ಹಿಡಿಯುವ ಹವಣಿಕೆಗಾಗಿಯೋ ಹೊರಟಾಗ ಸಿಗುವ ಸಿಗ್ನಲ್ ನನಗೆ ನಿರಾಳವೇ ಅನಿಸುತ್ತದೆ. (ತಡವಾಗಿರಕೂಡದಷ್ಟೇ) ಅಲ್ಲಿಗೆ ಅಲ್ಲಿ ಸಿಕ್ಕ ಒಂದು ಸ್ಪೇಸ್ ನನ್ನದೇ ಆಗಿರುತ್ತದೆ,  ಬದುಕಲೂ ಹಾಗೆಯೇ ನನಗಾಗಿ ನನ್ನದೇ ಒಂದು ಸ್ಪೇಸ್ ಬೇಕಿರುತ್ತದೆ, ಆ ಸ್ಪೇಸ್ ನಮ್ಮದೇ ಕೇವಲ ನಮಗೆ ಮಾತ್ರ ಮೀಸಲಾದುದಾಗಿರಬೇಕೆನಿಸುತ್ತದೆ. ಏಕೆಂದರೆ ಹೆಣ್ಣುಮಕ್ಕಳಿಗೆ ಎದ್ದಾಗಿನಿಂದ ಮಲಗುವವರೆಗೂ ಒಂದಿಲ್ಲೊಂದು ಕಾರಣಕ್ಕಾಗಿ, ಒಬ್ಬರಲ್ಲ ಒಬ್ಬರಿಗಾಗಿ ಓಗೊಡುವ ಕೆಲಸ ಮತ್ತು ವೈಯುಕ್ತಿಕ ಕೆಲಸಗಳ ನಡುವೆಯೂ ಸಮಯ ಹೊಂದಿಸಿಕೊಳಬೇಕಾಗುತ್ತದೆ. ಇನ್ನು ಪುಟ್ಟ ಮಕ್ಕಳಿದ್ದರೋ ಮುಗಿಯಿತು ತಡರಾತ್ರಿಯಲೂ ಹೆಣ್ಣು ಕಾಯಕಜೀವಿಯೇ ಹೌದು. ಹೀಗೆ ಎಲ್ಲರ ಕೆಲಸಗಳ ಮುಗಿಸಿ ಕೊನೆಗೆ ಬಿಡುವ ನಿಡಿದಾದ ನಿಟ್ಟುಸಿರು ಕೆಲವೊಮ್ಮೆ ಅಸಹನೀಯವಾದ ಕಂಬನಿಯೂ ಆಗಿರುತ್ತದೆ. ಇದರ ನಡುವೆಯೂ ನಾವು ನಮಗಾಗಿ ನಮ್ಮದೇ ಸಮಯವ ಆಗುಮಾಡಿಕೊಳ್ಳಬೇಕಾಗುತ್ತದೆ.

            ಸಿಗ್ನಲ್ನಲ್ಲಿ ನನ್ನ ಮುಂದೆ ನಿಂತ ಒಂದು ಬಸ್ಸು ಮತ್ತು ಕಾರು, ಎರಡು ದ್ವಿಚಕ್ರವಾಹನಗಳು ಇದ್ದಕ್ಕಿದ್ದಂತೆ ಬಲಬದಿಯ ವಾಹನ ಚಲಾಯಿಸುವವರ ಸರದಿಯನು ಮುರಿದು ತಾವೇ ಮುನ್ನುಗ್ಗಿದವು. ನನಗೆ ಬಣ್ಣಗುರುಡು ಆವರಿಸಿತೇ ಎಂದು ಕೊಂಚ ಅನುಮಾನವೇ ಆಯಿತು. ಏಕೆಂದರೇ ನಾನು ಕೆಂಪು ದೀಪವ ನೋಡುತ್ತಲೇ ಇದ್ದೇನೆ ಹೀಗಿರಲು ನನ್ನ ಮುಂದಿನ ವಾಹನಗಳು ಹೇಗೆ ಮುಂದುರುಳಿಯಾವು! ಆದರೆ ಅವು ನನ್ನ ಎಡಬದಿಯಲಿ ಕೆಂಪು ಗೂಟವ ತಲೆಯಮೇಲಿರಿಸಿ ಸುತ್ತುತ್ತಲೇ ಬಂದ ಆಂಬುಲೆನ್ಸ್ಗಾಗಿ  ಮುಂದಿದ್ದ ವಾಹನಗಳು  ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದವು. ಆಗ ನನಗನಿಸಿತು  ಇಂತಹ  ಜೀವಪರ ಉಲ್ಲಂಘನೆಗಳು ನಮ್ಮ ಬದುಕಿಗೂ ಕೆಲವೊಮ್ಮೆ ಬೇಕೆಂದು.

            ಪ್ರತಿಯೊಂದು ಜೀವಕ್ಕೂ ತನ್ನದೇ ಆದ ಮತ್ತು ತನಗೇ ಮಾತ್ರವೇ ಮೀಸಲಾದ ಒಂದು ಸ್ಪೇಸ್ ಬೇಕಿರುತ್ತದೆ. ತನಗಾಗಿ ತನ್ನ ಇಡೀ ದಿನದ ಸಮಯವನ್ನಲ್ಲವಾದರೂ ಕೆಲಹೊತ್ತನ್ನು ಕಳೆಯಬೇಕಿದೆ. ತನ್ನದೇ ಶರೀರ-ಶಾರಿರಕ್ಕೂ, ಬಯಕೆಗಳಿಗೂ, ಇಷ್ಟದ ತಿನಿಸುಗಳಿಗೂ,  ಕಾಡುವ ಸ್ನೇಹಿತರಿಗಾಗಿಯೂ, ಮೂಡುವ ಚಂದಿರನ, ಮುಳುಗುವ ಸೂರ್ಯನಿಗೂ ಮೈಯ್ಯೊಡ್ಡಿ ಗಂಟಲು ಪೂರ್ತಿ ತೆರೆದು ಒಮ್ಮೆ ಕೂಗಬೇಕಿದೆ. ಈಗಲೂ ಒಂದು ರೂಪಾಯಿಯ ಆಲ್ಕೋ ತಿನ್ನಲು, ಜೆಜ್ಜಿದ ಹುಣಸೇ ಹಣ್ಣು, ಮಾವಿನಕಾಯಿಯ ಕಂಡೊಡನೇ ನೀರೂರಿಸುವ ನಾಲಿಗೆ ವಯಸ್ಸು, ಪರಿಸರವ ಕಂಡು ತನ್ನ ಕಾಯಕವ ನಿಲಿಸಿಲ್ಲ ಹಾಗಾಗಿ ನಾವೂ ಮನುಷ್ಯರು ನಮ್ಮ ಬಯಕೆಗಳ ಮೂಲೆಗಿಟ್ಟು ಬೇಡವಾದುದನೆಲ್ಲಾ ನಮ್ಮಮೇಲೆ ಹೇರಿಕೊಂಡು ನನ್ನಾಸೆ ಖುಷಿಗಳ ಮರೆತುಬಿಡುವ ಬದಲು ನಮ್ಮವರಿಗಾಗಿಯೇ ಬದುಕುವ ನಾವು ನಮಗಾಗಿ ಅಲ್ಲ ಕೇವಲ ನನಗಾಗಿಯೂ ಕೆಲ ಹೊತ್ತನ್ನು ಮೀಸಲಿಡೋಣ ಮತ್ತು ನನ್ನಿಷ್ಟವನ್ನೂ ಆಗಾಗ ಕೇಳಿಕೊಳೋಣ. ಏಕೆಂದರೆ ಈ ಜೀವ ನನ್ನದು ಅದು ಕೇವಲ ಇತರರಿಗಾಗಿ ಮಾತ್ರವಿಲ್ಲ ನನಗಾಗಿಯೂ ಇದೆ ಕೂಡ.

            ಈ ಸಂದರ್ಭದಲಿ ನಾನು ಗೌರವಿಸುವ ಮತ್ತು ನನ್ನ ಮಾರ್ಗದರ್ಶಕರೆಂದೇ ತಿಳಿದು ಮುನ್ನಡೆಯುತಿರುವ ಸ್ನೇಹಿತರೊಬ್ಬರು ತಾವು ತಮ್ಮ ಹಿರಿಯ ಬಂಧುಗಳೊಬ್ಬರು ಹೇಳಿದ ಮಾತೊಂದನು ನನ್ನ ಗಮನಕೆ ತಂದರು. “ನೋಡು! ನಮ್ಮ ಕಾಲ ಮುಗಿಯಿತು, ವಯಸ್ಸಾಯಿತು, ಇನ್ನೇನಿದ್ದರೂ ನಮ್ಮ ಮಕ್ಕಳದು” ಅಂತ ಹೇಳಬಾರದು. ಯಾರೆಲ್ಲ ಪ್ರೀತಿವಂತರು ಜೊತೆಗಿದ್ದರೂ ಅಂತಿಮವಾಗಿ ನಮ್ಮ ಬದುಕು ನಮ್ಮದೇ. ಒಮ್ಮೊಮ್ಮೆ ನಾವಷ್ಟೇ ಇರುವುದರಿಂದ, ನಮಗಷ್ಟೇ ಇಷ್ಟವಾಗುವ ಕೆಲಸ ಮಾಡುವುದರಿಂದ ಲಭಿಸುವ ಖುಷಿಯನು ಆಸ್ವಾದಿಸಬೇಕು. ಯಾರೂ ಕೊನೆವರೆಗೂ ನಮ್ಮ ಜೊತೆಯೇ ನಮಗಂಟಿಕೊಂಡಂತೆಯೇ ಬದುಕಲಿ ಇರಲು ಸಾಧ್ಯವಿಲ್ಲ”

            ಹೌದಲ್ಲವೇ? ನಂನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಭಾಯಿಸಿದ ಮೇಲೂ ಉಳಿಯುವ ಅತೃಪ್ತಿ ಮತ್ತು ಅಸಹನೆಗೆ ಮೂಲ ಕಾರಣ: ನಮ್ಮನು ನಾವು ನಮಗೆಂದೇ ಏನು ಬೇಕೆಂದು ಕೇಳಿಕೊಳ್ಳದಿರುವುದು ಮತ್ತು ಆತ್ಮಾವಲೋಕನದಂತೆಯೇ ಜೀವಾತ್ಮದ ದನಿಗೆ ಓಗೊಡದಿರುವುದು ಎಂದೇ ನನಗನಿಸುತ್ತದೆ. “ಎಲ್ಲ ತತ್ತ್ವದೆಲ್ಲೆ ಮೀರಿ ಆಗು ನೀ ಅನಿಕೇತನ” ಎಂದು ರಸಋಷಿ ಕುವೆಂಪು ಅವರು ದಾರ್ಶನಿಕ ಆಯಾಮದಲಿ ಹೇಳಿದರೂ ನನಗೆ ಒಮ್ಮೊಮ್ಮೆ ಎಲ್ಲ ತತ್ತ್ವ, ನೇಮ, ಕಟ್ಟುಪಾಡುಗಳನು ಮೀರಿ ಜೀವಕೆ ಹಿತವೆನಿಸುವ ಭಾವಗಳತ್ತ ದೃಷ್ಟಿ ಹಾಯಿಸೋಣ, ಅದರ ಲಯಬದ್ಧ ಗೀತಕೆ ಗುನುಗುತಿರೋಣ, ಅದರ ಪರಿಮಳದ ಪಯಣದಲಿ ಹೆಜ್ಜೆ ಹಾಕುತ ಹಾಗೇ ಕಳೆದು ಹೋಗೋಣ ಅಂತನಿಸುತ್ತದೆ.

            ಹಾಗೆಂದು ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಂಡು ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯಕ್ಕೆ ಧಕ್ಕೆ ತರುವಂಥ ವರ್ತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದಲ್ಲ! ಇಂದಿನ ಕಾಲದಲ್ಲಿ ಸಿರಿವಂತರ ಮಕ್ಕಳು ಬದುಕುವ (ಎಲ್ಲರೂ ಅಲ್ಲ) ಹೊಣೆಗೇಡಿ ಮತ್ತು ಹಣಗೇಡಿ ದುರಭ್ಯಾಸಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡಬೇಕು ಎಂದೂ ಅಲ್ಲ! ನಮ್ಮ ಜೀವಿತದಲ್ಲಿ ನಿರ್ಧಾರಿತಗೊಂಡ ಚೌಕಟ್ಟಿನಾಚೆ ಅಥವಾ ಅದರ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ ಯಾರಿಗೂ ತೊಂದರೆ ಆಗದಂತೆ ನಾವೇ ಹಾಕಿಕೊಂಡಿರುವ ರೂಲ್ಸು ರೆಗ್ಯುಲೇಷನ್ಗಳನ್ನು ಒಂಚೂರು ಸಡಿಲಗೊಳಿಸಿದರೆ ಅಷ್ಟೇ ಸಾಕು: ಬದುಕಿನ ಯಾಂತ್ರಿಕತೆ ಮತ್ತು ಏಕತಾನತೆಗಳಿಂದ ಒಂದಷ್ಟು ಕಾಲ ಹೊರ ಬಂದು ಆತ್ಮಸಂತಸದಲಿ ಹಾಯಾಗಿದ್ದು, ಮತ್ತೆ ನಂನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬೇಕಾದ ಎನರ್ಜಿಯನು ಪಡೆಯಬಹುದು; ಕಂಪ್ಯೂಟರನು ರೆಫ್ರೆಶ್ ಮಾಡಿದಂತೆ! ದೂರದ ಊರಿಗೆ ಹೋಗುತಿರುವಾಗ ರಸ್ತೆಯ ಇಕ್ಕೆಲಗಳಲಿ ಕಂಡ ಹೂವಿನ, ಹಣ್ಣಿನ, ತೆಂಗಿನ ತೋಟಗಳನು ಕಂಡು ವಾಹನ ನಿಲ್ಲಿಸಿ, ಕೆಳಗಿಳಿದು ಸ್ವಲ್ಪ ಸುತ್ತಾಡಿ, ನೆನಪಿಗೆಂದು ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡಂತೆ!!

            ಹದ್ದು ಮೀರದೇ, ಕುಗ್ಗಿ ಕೂರದೇ ಹೀಗೆ ಒಮ್ಮೊಮ್ಮೆ ನಮಗನಿಸಿದ ಕೆಲಸಗಳಲೋ ಭಾವಗಳ ಮೇಘವಿಲಾಸದಲಿ ಮನವನಿಟ್ಟು ವಿಹರಿಸುತಲೋ ಆನಂದಿಸೋಣ; ನಗುತ ನಂದದ ದೀಪವನು ಹಚ್ಚಿಟ್ಟು ಇರುವಷ್ಟು ಹೊತ್ತು ಸುತ್ತಲೂ ಬೆಳಕ ಬೀರೋಣ. ಅಲ್ಲವೆ?

            ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಆಸೆಯಿಂದ……..”

                                          **********

12 thoughts on “ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

  1. ಲೇಖನ ತುಂಬಾ ಚೆನ್ನಾಗಿದೆ. ಶುಭವಾಗಲಿ

  2. ಅಹುದು…ಏಕಾಂತವನೂ ಲೋಕಾಂತವನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆಯನು ಕುರಿತು ಲೇಖಕಿ ನಿರಾಯಾಸ ಶೈಲಿಯಲಿ ವೈನಾಗಿ ಬರೆದಿರುವರು.

    ಓದುಗರು ತಮಗನಿಸಿದುದನೂ ಸೇರಿಸಿಕೊಂಡು ಓದಿಕೊಳುವಂತಿದೆ….

  3. ತುಂಬಾ ಚೆನ್ನಾಗಿದೆ. ಇಂತಹ ಬರವಣಿಗೆಯನ್ನು ಇನ್ನೂ ಹೆಚ್ಚು ಮುದೂವರೆಸಿ.

Leave a Reply

Back To Top