ನಂಟು

ಮಹಿಳಾ ದಿನದ ವಿಶೇಷ ಕವಿತೆ

ನಂಟು

ಶ್ವೇತಾ ಮಂಡ್ಯ

ಭಾರತನಾಳಿದ ಈ ನಾಡು
ಭಾರತಾಂಬೆಯ ಮಾಡಿಲಾಯಿತು ನೋಡಿ
ಅವಳ ಬಂಧನದ ಪರ್ವ
ಮೊದಲಾಯಿತು

ಭೂಮಿ ವಸುಂಧರೆಯಾದಳು ನೋಡಿ
ಅವಳ ಬಂಗಾರದೊಡಲ ಬಗೆದು
ಬರಿದು ಮಾಡಲಾಯಿತು

ಜನನಿ ಜನ್ಮಭೂಮಿ
ಸ್ವರ್ಗ ಸಮಾನವೆಂದರು ನೋಡಿ
ಗಡಿಯ ಗೆರೆಯೆಳೆದು ವೈಷಮ್ಯದ
ಬೆಂಕಿ ಹಚ್ಚಲಾಯಿತು

ಕಾಡು ಗಿಡ ಗಂಟೆಗಳ ನಡುವೆ
ಕೋಗಿಲೆಯ ಉಲಿ ಪಲ್ಲವಿಸುವುದನು
ವನದೇವತೆ ಎಂದರು ನೋಡಿ
ಹುಡುಕಿ ಹುಡುಕಿ ಬುಡಕ್ಕೆ ಕೊಡಲಿ ಹಾಕಿ
ಹಸಿರ ನೆತ್ತರ ಹರಿಸುವಂತಾಯಿತು

ಅದೆಲ್ಲೋ ಹಿಮರಾಶಿಯ ನೆತ್ತಿಯಲಿ
ಭೋಮ್ಯಾಂತರಾಳದಲಿ ನರ್ತನಗೈಯುತ್ತಿದ್ದ
ಜಲರಾಶಿಗೆಗಂಗಾಮಾತೆ
ಪುಣ್ಯಪ್ರದಾತೆ ಎಂದರು ನೋಡಿ
ಶವವ ಎಸೆದೆಸೆದು ವಿಷವ ಬೆರಸಿ
ಪರಮ ಮಾಲಿನ್ಯಗೊಳಿಸಲಾಯಿತು

ಹೆಣ್ಣು ಕ್ಷಮಯಾಧರಿತ್ರಿ ಎಂದಾಗಲೇ
ಕಂಬನಿ ಕರಗಿಸಿ
ಎಗ್ಗಿಲ್ಲದ ನೋವ ಅವುಡುಗಚ್ಚಿ
ಬಚ್ಚಿಡುವಂತಾಯಿತು

ಇದೆಂತಹಾ ನಂಟು
ಹೆಣ್ಣಿಗೂ ನೋವಿಗೂ..??
ಪುಣ್ಯದ ಎಳೆಎಳೆಗೊ
ಪ್ರೀತಿಯ ಕಣಕಣಕ್ಕೂ
ಅಭಿಮಾನದ ಹೊಳೆಹೊಳೆಗೂ
ಹೆಣ್ಣ ರೂಪ ನೀಡಿದರೂ ನೋಡಿ
ಅವಳಿಗೂ ನೋವಿಗೋ ಆಗಲೇ
ಅವಿನಾಭಾವ ನಂಟು
ಸೃಷ್ಟಿಯಾಯಿತು

*********************************************

2 thoughts on “ನಂಟು

  1. ನೋವು ….ಮತ್ತು ಹೆಣ್ಣಿಗೆ ಕಟ್ಟಿದ ವಿಶೇಷಣಗಳ ಪುರುಷ ಪ್ರಧಾನ ಮುಖವಾಡಗಳ ಕೊಡವಿದ ಕವಿತೆ ..

Leave a Reply

Back To Top