ಒಲವಾಗಿ ಬಿಡೋಣ
ನಳಿನ ಡಿ.
ಎಲ್ಲದರಂತಲ್ಲದ ಈ ರೋಸು
ಆತ್ಮಕೆ ಅಂಟಿಸಿದವರ್ಯಾರು?
ಗುಡಿಸಿದಷ್ಟೂ ಕಾಮದ ಕಸ,
ತೊಳೆದಷ್ಟೂ ಪ್ರೇಮದ ನೊರೆ,
ಉಳಿ ಪಿಡಿದು ಕೆತ್ತಿಸಿದವರ್ಯಾರು?
ನಿನ್ನೆದೆಯಲಿ ನನ್ನ?
ಬಹು ಜೋಕೆ ಹುಡುಗಾ,
ನೀ ನಡೆಯುತಿರುವುದು
ಕತ್ತಿಯಂಚಿನ ಮೇಲೆ..
ಸೀರೆಯ ಸೆರಗ ಮೇಲೆಲ್ಲಾ,
ನಿನ್ನ ಹೆಸರಿನ ಕಸೂತಿ
ಉಟ್ಟ ಮೈ ಜುಂ ಅಂದಾಗ
ನಿನ್ನಲ್ಲೂ ತಲ್ಲಣ
ಬುದ್ದ ಇದಿರಾದಂತೆ,
ತೆವಲಿನ ಜಗತಿಗೆ
ಪ್ರೇಮ ತೆರೆದಿದೆ
ಕಾಮದ ಕೊರಳಿಗೆ..
ಎಲ್ಲೆಲ್ಲೂ ಜಯಿಸಿದ
ಬುದ್ದನಂತೆ,
ಪ್ರೇಯ ಜಯಿಸಿರಲು
ನೀನೂ
ಸುಮ್ಮನೇ ಕಾರಣ ಹೇಳದೆ
ಬಂದುಬಿಡಬಹುದು
ಕಾದವಳ ಅಗ್ನಿಪರೀಕ್ಷೆಗೆ
ವರವಾಗಿ..
ಬಲ್ಲಂಥವರ ಮಾತಲ್ಲ
ಪ್ರೇಮ?
ಮೂಗನ ಹಾಡಿನಂತೆ..
ಬಾ ದೂರದ ಮರಳುನಾಡಿನ
ಪಯಣಕೆ ಓಯಸಿಸ್ ನಂತೆ
ನಿಂತ ಜಲವಾಗಿ
ಒಲವಾಗಿ ಬಿಡೋಣ..
**********************************************