ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ವಾರದ ಕವಿತೆ

ವಾರದ ಕವಿತೆ

ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ

ಬೈ ಟು ಕಾಫಿ

ಕಾಫಿ ಕುಡಿಯುವುದೆಂದರೆ
ಹೇಳಲಾರದ ಪ್ರೀತಿಯನ್ನು
ಕಣ್ಣಲ್ಲಿ ಕುದಿಸಿ ಕುದಿಸಿ ಉಕ್ಕಿಸಿದ
ಭಾವನೆಗಳ ನವಿರಾದ ಘಮಲು…

ತುಟಿಗಿಟ್ಟ ಕಾಫಿ ಬಟ್ಟಲಿನ ಅಂಚು
ಕಚ್ಚಿ ಕಚ್ಚಿ ಬಿಸಿಯುಸಿರ
ಬೇಗೆಗೊಂದಿಷ್ಟು ಹಿತದ
ಸಿಹಿಮುತ್ತಿನ ಅಮಲು…

ಕಣ್ಸನ್ನೆಯಲ್ಲಿ ಸಾವಿರದ ಮಾತು
ನವಿಲ ಗರಿ ಬಿಚ್ಚಿದಂತೆ ಮೈ ಕೊಡವಿ
ಯಾರಿಗೂ ಕಾಣದಂತೆ ಕಾಲಿಗೆ ಕಾಲು
ತಾಕಿಸಿ ಅನುರಾಗದ ತಂತಿ ಮೀಟಿದ ತಾಲು..

ಕೂತು ಕಾಫಿ ಕುಡಿಯೋಣ
ಎಂದಾಗಲೊಮ್ಮೆ ಎದೆಯ ನಾದ
ನೆಯ್ದ ನೂರು ಕನಸುಗಳಿಗೆ
ಚಿತ್ರಮಂದಿರವೀಗ ನಿನ್ನ ಹೆಗಲು..

ಮಬ್ಬುಗತ್ತಲಿನಲಿ ಕಾಫಿ ಪರಿಮಳ
ಆಸ್ವಾದಿಸಿದಷ್ಟು ಕಿವಿಯಲ್ಲಿ ಜೇನಗಾನ
ನಿನ್ನ ಕಣ್ಣ ಕಡಲ ಆಳಕ್ಕಿಳಿದು
ಹಿರಿದಷ್ಟು ಹಿಂಗದ ಬಯಲು…….

ಭೆಟ್ಟಿ ಆಗಲೇ ಬೇಕೆಂದಾಗಲೊಮ್ಮೆ
ಕಾಫಿ ಕುಡಿಯೋಣವೆಂಬ ಮತ್ತದೆ
ನಿನ್ನ ಮಾತು ಹಗಲಗನಸಿಗೊಂದು
ಜೋಗುಳದಿ ಕಚಗುಳಿಯಿಡುವ ಉಯಿಲು…

ನನ್ನ ಮುದ್ದು ಕರಡಿಯ ಎದೆಗೊಮ್ಮೆ
ತಲೆಯಾನಿಸಿದಾಗ
ಹುಚ್ಚುಕೋಡಿ ಮನಸಿಗೆ
ಬಿಡಿಸಿದ ಹಸೆಯ ಚಿತ್ತಾರದ
ರಂಗೋಲಿಗೆ ಬಣ್ಣ ತುಂಬುವ ಹಗಲುಗನಸು..

ನಿನ್ನೊಡನೆ ಕಾಫಿ ಕುಡಿಯುವ ಕಾಲ ಬರಲೇ ಇಲ್ಲ
ಅದು ಪ್ರೀತಿಯೋ ಅಥವಾ ಆಶೆಗಳನ್ನು ಹೀಗೆ
ಸಾಗಿ ಹಾಕುವ ಖಯಾಲಿಯೋ
ಅಂತು ನೆಪಕಾದರೂ ಸುರಿಸಿದೆ ಬೆವರಹನಿ ಮುಂಜಾನೆಯ ಹೂ ಬಿಸಿಲು…

ಸದ್ಯ ನೀಲಿ ಆಕಾಶದ ತುಂಬಾ
ಕರಿಮೋಡಗಳೇ ಗುಳೆ ಹೊರಟಂತಿವೆ
ಕಾಫಿ ಕುಡಿಯಬೇಕೆಂಬ
ಬೆಚ್ಚಗಿನ ಹಂಬಲವೀಗಿಲ್ಲ
ಆರಿದ ಬೆಂಕಿಗೆ ಮತ್ತೆ ಕಿಡಿ ಹೊತ್ತಿಸಲಾರೆ.

ನಾವು ಕುಳಿತು ಕನಸು ಹೆಣೆಯಬೇಕೆಂಬ
ಕಾಫಿ ಅಡ್ಡಾದ ಬೆಂಚಿನಮೇಲೆ
ಅದ್ಯಾರೋ ಪ್ರೇಮಿಗಳು ಒಂದಾಗಿದ್ದಾರೆ
ಅವರಾದರೂ ಹಂಚಿಕೊಳ್ಳಲಿ ಬೀಡು ಬೈ ಟು

ಮೊದಲ ಮಳೆಹನಿಯ ಭೂಮಿಗಂಧ
ಕಾಫಿ ಹಬೆಯೊಡನೆ ಸೇರಿ
ಕೋಲ್ಮಿಂಚಿಗಾಗಿ ಕಾಯುತಿದೆ
ಅದೊ ಬರಿದಾಗಿದೆ ಮುಗಿಲು…..

ಕಡು ಕಾಫಿಯ ಅಮಲು
ನಶೆ ಏರಿಸಿ ನನ್ನನ್ನು
ಮುಮ್ತಾಜ್ ಳನ್ನಾಗಿಸುವ ಮೊದಲು
ನೀ ಕಟ್ಟಿದ ಗೋರಿಯಲ್ಲಿ ನಾನೇ ಮಲಗಿರುವೆ.

ನೀನೀಗ ನಿರಾಳ ಗುಡುಗು
ಸುರಿದ ಮಳೆ ಹರಿದು ಹೊಳೆಯಾಗಿದೆ.
ಯಾವ ತಾಜ್ ಕಟ್ಟಿಸಬೇಕಾದ
ಹೊರೆ ನೀನಗಿಲ್ಲ ಕಾರಣ ,
ಹೆಸರಿಲ್ಲದ ನಮ್ಮ ಪ್ರೀತಿ
ಕಾಫಿ ಹಬೆಯೊಂದಿಗೆ
ಮುಸ್ಸಂಜೆ ಮಂಜಿನಲಿ ಕರಗಿದೆ ಬೆರೆತಿದೆ.

ನಿನ್ನ ಚಿದಂಬರ ರಹಸ್ಯದ ಪ್ರೀತಿಗೆ ಪ್ರಶ್ನೆಗಳೇ ಇಲ್ಲ
ಹಾಗೆಯೇ ಉತ್ತರಿಸುವ ಪ್ರಮೇಯವು ಇಲ್ಲ
ಕಾಫಿ ತೋಟದ ತುಂಬೆಲ್ಲಾ
ತಬ್ಬಿದ ಮಂಜುಹನಿಗಳು ಕಣ್ಣಿರು ಸುರಿಸುತ್ತಿವೆ.


ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ

3 thoughts on “ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ವಾರದ ಕವಿತೆ

  1. ನಿಜಕ್ಕೂ ಒಂದು ಒಳ್ಳೆಯ ಕವನ. ರೂಪಕ ಮತ್ತು ಪ್ರತಿಮೆಗಳಿಂದ ಸಂಪನ್ನ ಬೈ ಟು ಕಾಫಿ. ಯಾವುದೇ ಕವನವಾಗಲಿ ಅಂತ್ಯ ಮುಖ್ಯ. ಈ ಕವನದ ಯಶಸ್ಸು ಇರುವುದು ಹೇಗೆ ಕೊನೆಗೊಂಡಿದೆ ಮತ್ತು ಹೇಗೆ ಪರಿಣಾಮ ಬೀರಿದೆ ಎಂದು.
    ಅಭಿನಂದನೆ
    ಡಾ ರುದ್ರೇಶ್ ಅದರಂಗಿ

    1. ಕಾಫಿಯ ಘಮಲಿನಮಲು ಕುಡಿಯದಿದ್ದರೂ ಉಯಿಲಿಡುತಿದೆ ಕವಿತೆಯೊಳಗಿಂದ ನೆತ್ತಿಯ ಸುಳಿಗೇರಿ ಅದೇ ಅಮಲಿನಲಿ ತೆಲಿಸುತಿದೆ

  2. ಕವಿತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ

Leave a Reply

Back To Top