ಸಿನಿಮಾ ಅಲ್ಲ… ಜೀವನ
ಮಧುರಾ ಕರ್ಣಮ್
ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಸ್ನಾನ ಮಾಡಿ ನನ್ನ ರಾಜರಥವನ್ನು ಎತ್ತಿಕೊಂಡು ಹೊರಬಿದ್ದು ಯಶವಂತಪುರದ ಸ್ಟೇಷನ್ ಬಳಿ ಬಂದರೆ ಬೇಕಾದಷ್ಟು ಬಾಡಿಗೆಗಳು. ತಿಂಡಿಗೆ ಕಾಯ್ದರೆ ಮನೆಯಲ್ಲೇ ಹತ್ತಾಗುತ್ತದೆ. ಅಲ್ದೇ ಪಾಪ.. ಅಮ್ಮ ಬೇಗ ಬೆಳಿಗ್ಗೆ ಎದ್ದು ಮಾಡಬೇಕು. ಮನೆಯ ಯೋಚನೆ ಕೊಡವಿ ನನ್ನ ರಾಜರಥವನ್ನು ಪ್ರೀತಿ..ಅಭಿಮಾನದಿಂದ ನೋಡಿದೆ. ಹೌದು..ನನ್ನ ರಾಜರಥ..ಕುದುರೆ ..ವಾಹನ ಎಲ್ಲ ಈ ಆಟೋ ಆಗಿತ್ತು. ನನ್ನ ಜೀವನಾಧಾರ ಎಂದರೂ ತಪ್ಪಿಲ್ಲ. ಹಿಂದೆ ಶಂಕರನಾಗ್‌ರ ‘ಆಟೋರಾಜ’ಚಿತ್ರದ ಪೋಸ್ಟರ್ ಸಣ್ಣದಾಗಿ ರಾರಾಜಿಸುತ್ತಿತ್ತು. ಆಟೊ ಚಾಲಕರೆಲ್ಲ ಇಷ್ಟ ಪಡುವ ಹೆಮ್ಮೆಯ ಚಿತ್ರವದು. ಪಾಪ..ಸದಾ ಟ್ರಾಫಿಕ್‌ನಲ್ಲೇ ಇರುವುದರಿಂದ ಮೇಲೆಲ್ಲ ದೂಳು ಹರಡಿತ್ತು. ತುಸು ದೂರ ಕ್ರಾಸ್ ರೋಡಿನಲ್ಲಿ ತಂದು ನಿಲ್ಲಿಸಿ ಹಳೆಯ ಬಟ್ಟೆಯಿಂದ ಒರೆಸಲಾರಂಭಿಸಿದೆ. ಆಗಲೇ ಅವಳು “ಅಮ್ಮಾ..”ಎಂದು ಕೂಗಿಕೊಂಡು ಅತ್ತಲಿಂದ ಓಡಿ ಬಂದದ್ದು. ನಾನೂ ಗಾಬರಿಯಿಂದ “ಏನು..ಏನಾಯ್ತು?”ಎಂದು ಕೇಳಿದೆ. ಉತ್ತರಿಸಲಾರದೆ ಕೈ ತೋರಿದಳು. ಪುಟ್ಟ ಹಾವೊಂದು ಅವಳಿಗಿಂತ ಹೆಚ್ಚು ಹೆದರಿಕೊಂಡು ಸರಸರನೆ ಸರಿದು ಹೋಗುತ್ತಿತ್ತು. ‘ಒಹ್! ಇದಕ್ಕಾ.. ಇವಳು ಇಷ್ಟು ಹೆದರಿ ಕೂಗಿಕೊಂಡದ್ದು..’ಎಂದುಕೊಂಡೆ. ದಾರಿಯಲ್ಲಿ ಜನರಾರೂ ಇರಲಿಲ್ಲ. ಸೀದಾ ಬಂದವಳು ನನ್ನ ಆಟೋ ಏರಿ ಕುಳಿತಳು. ಒಂದು ನಿಮಿಷ ಸುಮ್ಮನಿದ್ದು ನಾನು “ಅದು ಹೋಯಿತಮ್ಮ”ಎಂದೆ. ಅತ್ತಲಿಂದ ಉತ್ತರವಿಲ್ಲ. ಸೂಕ್ಷ್ಮವಾಗಿ ಅವಳನ್ನು ಗಮನಿಸಿದೆ. ಸೌಂರ‍್ಯದ ಖನಿ ಎಂದು ಹೇಳಲಾಗದಿದ್ದರೂ ಅಂದವಾಗಿದ್ದಳು. ಹಾಲು ಬಣ್ಣ, ನೀಳ ಮೂಗು, ಅರಳು ಕಂಗಳಲ್ಲಿ ಮಡುಗಟ್ಟಿದ್ದ ನೀರು, ಅಗಲ ಬಾಯಿಯಲ್ಲಿ ಅದರುತ್ತಿದ್ದ ಕೆಂಪು ತುಟಿಗಳು, ಹಣೆಯ ಮೇಲೆ ಸಾಲುಗಟ್ಟಿದ್ದ ಬೆವರ ಹನಿಗಳು.. ಅವಳಿನ್ನೂ ಕಂಪಿಸುತ್ತಿದ್ದಳು.
ತುಸು ಮೃದುವಾಗಿ “ಮೇಡಮ್.. ಹೆದರಬೇಡಿ. ಅದು ಹೊರಟು ಹೋಯಿತು. ಇಳಿಯಿರಿ”ಎಂದೆ. ಅವಳು ನಡಗುತ್ತಲೇ “ಉಹ್ಞೂಂ.. ಹೆಬ್ಬಾಳಕ್ಕೆ ನಡೀರಿ” ಎಂದಳು. “ನಾನಲ್ಲಿಗೆ ಬರಲ್ಲ ಮೇಡಮ್. ಏರಿಯಾ ಸರಿಯಾಗಿ ಗೊತ್ತಿಲ್ಲ”ಎಂದೆ. ಚಿಕ್ಕ ಮಗು ರಚ್ಚೆ ಹಿಡಿದು ಕೇಳುವಂತೆ “ನಾನೀಗ ಇಳಿಯಲ್ಲ. ಕೆಳಗೆ ಕಾಲಿಡಲೂ ಹೆದರಿಕೆ ನಂಗೆ. ನಡೀರಿ.. ಪ್ಲೀಸ್..”ಎಂದು ಅಂಗಲಾಚಿದಳು. ಛೆ! ಇಂದು ಬೆಳಿಗ್ಗೆ ಯಾರ ಮುಖ ನೋಡಿದ್ದೆನೋ ಎನಿಸಿದರೂ ಅವಳ ಸ್ಥಿತಿ ಕಂಡು ಅಯ್ಯೋ.. ಎನಿಸದಿರಲಿಲ್ಲ. ಸುಮ್ಮನೆ ಒಳಗೆ ಕುಳಿತು ಮೀಟರ್ ಹಾಕಿ ಗಾಡಿ ಶುರು ಮಾಡಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿತ್ತು. ಸ್ವತಂತ್ರವಾಗಿ ಹಾರಾಡಲು ಬಿಟ್ಟ ಕೂದಲು, ಕೈಗೆ ದುಬಾರಿ ವಾಚು, ಬೆಲೆ ಬಾಳುವ ಕ್ಲಚ್ ರೂಪದ ಪರ್ಸು.. ಸ್ಥಿತಿವಂತರ ಮನೆಯ ಹುಡುಗಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಳಾಸ ಹೇಳಲು ತಡವರಿಸುತ್ತಿದ್ದವಳನ್ನು “ಸಣ್ಣ ಪುಟ್ಟದ್ದಕ್ಕೆಲ್ಲಾ ಇಷ್ಟು ಹೆದರಬಾರದು ಮೇಡಮ್. ಮುಂದೆ ಜೀವನದಲ್ಲಿ ಎಂಥೆಂಥದ್ದಕ್ಕೆಲ್ಲಾ ತಲೆ ಕೊಡಬೇಕಾಗುತ್ತೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧರ‍್ಯ ತಂದುಕೊಳ್ಳಿ” ಎಂದು ಸಾಂತ್ವನಿಸಿದಾಗ ಕೊಂಚ ತಹಬಂದಿಗೆ ಬಂದಿದ್ದಳು. ‘ಭರ್‌ರ್..’ಎಂದು ಓಡಿದ ನನ್ನ ರಥ ‘ವೀರಪ್ಪನ ಪಾಳ್ಯ’ಎಂದು ಬರೆದ ಕಮಾನಿನ ಮೂಲಕ ಹಾದು ತಿರುವುಗಳಲ್ಲಿ ತಿರುಗಿ ಅವಳು ತೋರಿಸಿದ ಭವ್ಯ ಬಂಗಲೆಯ ಮುಂದೆ ನಿಂತುಕೊಂಡಿತು. ಇಳಿದವಳು ಮೀಟರ್‌ನತ್ತ ನೋಡುವ ಗೊಡವೆಗೂ ಹೋಗದೇ ಐನೂರರ ನೋಟೊಂದನ್ನು ಕೊಟ್ಟು “ಥ್ಯಾಂಕ್ಸ.. ತುಂಬಾ ಥ್ಯಾಂಕ್ಸ”ಎಂದು ಹೊರಟು ಬಿಟ್ಟಳು. ರ‍್ರೀ.ಮೇಡಮ್, ಚಿಲ್ಲರೆನಾರೂ ತೊಗೊಳ್ಳಿ”ಎಂದು ಕೂಗಿದೆ. ತೆಗೆದುಕೊಂಡವಳು ಮನೆಯತ್ತ ನಾಲ್ಕು ಹೆಜ್ಜೆ ಹಾಕಿ ತಿರುಗಿ ನನ್ನತ್ತ ನೋಡಿ ಹೂನಗು ಬೀರಿದಳು. ಮೋಡ ಕರಗಿ ಮಳೆಯಲ್ಲಿ ಮಿಂದ ಹೂ ಶುಭ್ರವಾಗಿ ನಗುವಂತೆ.. ಹಾವು ನೋಡಿ ಹೆದರಿ ಕಂಪಿಸಿ ಕಣ್ತುಂಬಿದ ಕುರುಹೂ ಇರದಂತೆ.. ನನಗೆ ಅಚ್ಚರಿಯೊಂದಿಗೆ ಯಾವುದೋ ಪುಳಕದಲ್ಲಿ ಮಿಂದ ಭಾವ. ಒಂದೊಂದೇ ಹೆಜ್ಜೆಯನ್ನಿಡುತ್ತ ಮನೆಯೊಳಗೆ ನಡೆಯುವಾಗ ಮತ್ತೊಮ್ಮೆ ತಿರುಗಿ ಕೈ ಮಾಡಿದಳು. ನಾನೂ ಮುಗುಳ್ನಕ್ಕು ಕೈ ಮಾಡಿದೆ. ಮನಸ್ಸಿಗೆ ಎಂದೂ ಇಲ್ಲದ ವಿಚಿತ್ರ ಸಿಹಿ ಅನುಭವ. ಅದೆಂಥ ಆಕರ್ಷಣೆಯೋ.. ಗೊತ್ತಿಲ್ಲ.
ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿದ್ದರೆ ಬೆಳೆದು ಕಥೆಯಾಗುತ್ತಿರಲಿಲ್ಲ. ನಾನು ನಿಮಗೆ ಹೇಳಬೇಕಾಗೂ ಇರಲಿಲ್ಲ. ಮರುದಿನ ನಾನು ಮಹಾಲಕ್ಷ್ಮಿಲೇಔಟಿನ ಪಂಚಮುಖಿ ಆಂಜನೇಯನಿಗೆ ನಮಿಸಿ ಮೂಲೆಯಲ್ಲಿದ್ದ ಅಂಗಡಿಯಲ್ಲಿ ಚಿತ್ರಾನ್ನ ತಿಂದು.. ಕಾಫಿ ಕುಡಿದು ನನ್ನ ರಥದ ಬಳಿ ಬಂದೆ. ತುಸುದೂರದಲ್ಲಿ ಕಾಯುತ್ತ ನಿಂತವಳು ಹೂನಗು ಬೀರುತ್ತ ಹತ್ತಿರ ಬಂದಳು. ನಿನ್ನೆ ಕಂಡ ಜಾಗ.. ಅದೇ ಹುಡುಗಿ..ಎಂದು ಖಚಿತಪಡಿಸಿಕೊಂಡೆ. “ಈವತ್ತೇನು.. ತಿಂಡಿ ಲೇಟಾ?”ಎಂದು ತುಂಬಾ ಪರಿಚಯವಿರುವಂತೆ ಕುಶಲೋಪರಿ ಆರಂಭಿಸಿದಳು. “ಹ್ಞೂಂ, ಏಳಲು ತಡವಾಯ್ತು”ಎಂದೆ. ತಟಕ್ಕನೆ ಆಟೋ ಏರಿ ಕುಳಿತು “ನಡೀರಿ ಹೆಬ್ಬಾಳಕ್ಕೆ..”ಎಂದಳು. ನಾನು ನುಸುಗೋಪದಿಂದ “ಆಗಲ್ಲ ಮೇಡಮ್.. ನಾನಲ್ಲಿಗೆ ಬರೋದೇ ಇಲ್ಲ. ನಿನ್ನೆ ನೀವು ತುಂಬಾ ಹೆದರಿಕೊಂಡಿದ್ರೀಂತ ಬಂದದ್ದಷ್ಟೇ.. ಬೇರೆ ಆಟೋ ನೋಡ್ಕೊಳಿ”ಎಂದೆ ಮಾಮೂಲಿ ಧಾಟಿಯಲ್ಲಿ. ಅವಳೂ ಭಂಡತನ ತೋರುತ್ತ “ನಾನಂತೂ ಇಳಿಯಲ್ಲ. ನನ್ನ ಬಿಟ್ಟು ಮುಂದೆ ಹೋಗಿ”ಎಂದಳು. ಕೋಪವೇರಿ “ಏನಂದುಕೊಂಡಿದ್ದೀರಿ ನನ್ನನ್ನ..?” ಎಂದು ಕೇಳಿದೆ. “ಒಬ್ಬ ಒಳ್ಳೆಯ ಸ್ನೇಹಿತ..ಹಿತೈಷಿ..” ಎಂದು ಮುದ್ದಾಗಿ ಉಲಿದಳು. ಹಾಳು ಮನಸ್ಸು ಮತ್ತೆ ಮೃದುವಾಯಿತು. ಮತ್ತೆ ಈ ಹುಡುಗಿ ಕಣ್ತುಂಬಿಕೊಂಡು ಹನಿ ಪಟಪಟನೆ ಉದುರಿಸಿದರೆ ಕಷ್ಟವೆನಿಸಿ ಸೀದಾ ಓಡಿಸಿದೆ. ಮಾಮೂಲು ದಾರಿಯಲ್ಲಿ ಓಡಿದೊಡನೆ ಹಸನ್ಮ್ಮಖಿಯಾದವಳು ದಾರಿಯಲ್ಲಿ ಪ್ರವರ ಆರಂಭಿಸಿದಳು.
ಅವಳ ಹೆಸರು ಮಾನ್ಯ. ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳು ಮುಗಿದರೂ ಕೆಲವು ವಿಷಯಗಳು ಉಳಿದುಕೊಂಡಿವೆಯಂತೆ. ಅದಕ್ಕೇ ಟ್ಯೂಟರ್ ಹತ್ತಿರ ಹೇಳಿಸಿಕೊಳ್ಳಲು ಮಹಾಲಕ್ಷ್ಮಿಲೇಔಟಿಗೆ ಬರುತ್ತಾಳೆ. ಬೆಳಿಗ್ಗೆ ಏಳು ಗಂಟೆಗೆಲ್ಲ ಅಪ್ಪನ ಡ್ರೆöÊವರ್ ಬಿಟ್ಟು ಹೋಗುತ್ತಾನೆ. ಅಪ್ಪ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡುತ್ತಾರೆ. ಹೀಗಾಗಿ ಮನೆ ಸೇರಲು ನನ್ನ ಬೆನ್ನು ಬಿದ್ದಿದ್ದಾಳೆ. ಅಪ್ಪ ಆದಾಯ ತೆರಿಗೆ ಅಧಿಕಾರಿ. ಭವ್ಯ ಬಂಗಲೆ ನೋಡಿಯೇ ‘ಭಾರೀ ಕುಳ’ಎನ್ನಬಹುದು. ಅಮ್ಮ ಮಹಿಳಾ ಸಮಾಜ, ಕ್ಲಬ್‌ಗಳ ಮೆಂಬರ್. ಅಣ್ಣ ಅಮೆರಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ಯಾದಿ..ಇತ್ಯಾದಿಗಳನ್ನು ಹೇಳಿಕೊಳ್ಳುತ್ತ ತಟಕ್ಕನೇ ಅವಳು “ಇನ್ನು ಮುಂದೆ ನಿತ್ಯ ನಾನು ಟ್ಯೂಷನ್‌ಗೆ ಬರುವಷ್ಟು ದಿನ ನೀವೇ ನನ್ನನ್ನು ಮನೆಗೆ ಬಿಟ್ಟುಬಿಡಿ”ಎಂದಳು. “ಆಗಲ್ಲ ಮೇಡಮ್.. ಈ ರೂಟು ತುಂಬಾ ಬಿಝಿ ಇರುತ್ತೆ. ಟ್ರಾಫಿಕ್‌ನಲ್ಲಿ ತುಂಬಾ ಟೈಮ್ ಹಾಳಾಗುತ್ತೆ. ನೀವು ಓಲಾ..ಊಬರ್ .. ಬುಕ್ ಮಾಡಿದ್ರೆ ಬರ್ತಾರೆ”ಎಂದೆ. “ಅದೆಲ್ಲಾ ನನಗೆ ಗೊತ್ತು. ಅವರು ಬೇಡ. ನೀವೇ ಒಪ್ಕೊಳ್ಳಿ. ದುಡ್ಡು ಎಷ್ಟಾದ್ರೂ ಕೇಳಿ. ನಮ್ಮ ಏರಿಯಾದ ಶಾಪಿಂಗ ಕಾಂಪ್ಲೆಕ್ಸನಿಂದ ನಿಮಗೆ ಬೇಕಾದಷ್ಟು ಬಾಡಿಗೆಗಳೂ ಸಿಗುತ್ವೆ”ಎಂದು ಪಟ್ಟು ಹಿಡಿದಳು. ನಾನು ದ್ವಂದ್ವದಲ್ಲಿ ಮುಳುಗಿದರೂ ಯೋಚಿಸಿದೆ. ಒಳ್ಳೆ ಅವಕಾಶ. ಇಲ್ಲಿ ಕಾಯೋ ಬದಲು ಅಲ್ಲೇ ಹೊಡೀಬಹುದು. ಒಂದು ಲಾಂಗ್ ರೂಟ್ ಬಾಡಿಗೆಯಂತೂ ಫಿಕ್ಸು ಎನಿಸಿ ಒಪ್ಪಿಕೊಂಡೆ. ಹುಡುಗಿ ಫುಲ್ ಖುಷಿಯಾಗಿ“ಹರ‍್ರೇ..”ಎಂದಳು. ನನಗೋ.. ಒಮ್ಮೆ ಅಚ್ಚರಿ.. ಮತ್ತೊಮ್ಮೆ ನಗು..ಅದೇಕೆ ಈ ಹುಡುಗಿ ನನ್ನನ್ನು ಹಚ್ಚಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ.
ದಿನಗಳು ಓಡುತ್ತಿದ್ದವು. ಬಿಡುವೇ ಇರದಂತೆ.. ಆಟೋ ಕೂಡ ಹಾಗೇ ಹೆಬ್ಬಾಳಕ್ಕೆ ಓಡುತ್ತಿತ್ತು. ಅವಳು ತನ್ನ ತಾಯಿ, ತಂದೆ, ಗೆಳತಿಯರ ಬಗ್ಗೆ ನಿತ್ಯವೂ ಹೇಳುತ್ತಿದ್ದಳು. ಒಬ್ಬ ಆಪ್ತ ಸ್ನೇಹಿತೆಗೆ.. ಹಿತಚಿಂತಕರಿಗೆ ಹೇಳುವಂತೆ.. “ಅಪ್ಪ ತುಂಬಾ ಸ್ಟಿçಕ್ಟ. ಮೊದಲು ಮಾಮೂಲಿಯಾಗಿದ್ದರು. ನನ್ನನ್ನು, ಅಣ್ಣನನ್ನು ಚೆನ್ನಾಗಿ ಮಾತನಾಡಿಸುತ್ತ ಪಿಕ್ಚರ್, ಪಾರ್ಕುಗಳಿಗೆಲ್ಲ ಕರೆದೊಯ್ಯುತ್ತಿದ್ದರು. ನಮ್ಮದೊಂದು ಮಧ್ಯಮ ವರ್ಗದ ಕುಟುಂಬವಾಗಿರುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಮ್ಮ ನಮ್ಮ ಬೇಕುಬೇಡಗಳನ್ನು ಪೂರೈಸುತ್ತ ಮನೆಗೆ ಆಧಾರವಾಗಿದ್ದಳು. ವಾರವಾರವೂ ಹೊಸ ತಿಂಡಿ, ಅಡಿಗೆ ಮಾಡೋಳು. ನಾವು ಅವಳಿಗೆ ಸಹಾಯ ಮಾಡುತ್ತಿದ್ದೆವು. ನಾನೂ ಸ್ನೇಹಿತೆಯರೊಂದಿಗೆ ಆಟ, ಓದು.. ಪಿಕ್ಚರ್ ಎಂದೆಲ್ಲ ಹಾಯಾಗಿದ್ದೆ. ಅಪ್ಪನಿಗೆ ಪ್ರಮೋಷನ್ ಆಗಿ ಇನ್‌ಕಮ್‌ಟ್ಯಾಕ್ಸ ಆಫೀಸರ್ ಆದ ಮೇಲೆ ಮನೆಯ ಚಿತ್ರವೇ ಬದಲಾಯಿತು. ಬಂಗಲೆ ದೊಡ್ಡದಾದಷ್ಟೂ ನಾವೆಲ್ಲ ದೂರವಾದೆವು. ನಮ್ಮೊಂದಿಗೆ ಮಾತನಾಡಲು ಅಪ್ಪನಿಗೆ ಸಮಯವೇ ಇರುವುದಿಲ್ಲ. ವಿಪರೀತ ಮೂಡಿಯಾಗಿ ಸದಾ ವ್ಯವಹಾರಗಳಲ್ಲೇ ಮುಳುಗಿ ಎಲ್ಲ ಮರೆತುಬಿಡುತ್ತಾರೆ. ನನ್ನ ಅಕೌಂಟಿಗೆ ದುಡ್ಡು ಹಾಕುವುದನ್ನು ಬಿಟ್ಟು.. .. ಎಲ್ಲವನ್ನೂ. ಅಮ್ಮ ಸದಾ ಕ್ಲಬ್‌ನ ಮೀಟಿಂಗಿನಲ್ಲೋ.. ಮಹಿಳಾ ಸಮಾಜದ ಸೋಷಿಯಲ್ ವರ್ಕಿನ ಹೆಸರಿನ ಫಂಕ್ಷನ್‌ಗಳಲ್ಲೋ ಲೀಡರ್ ಆಗಿ ಮಿಂಚುತ್ತಾರೆ. ಅದಕ್ಕೆ ಬ್ಯೂಟಿ ಪಾರ್ಲರ್‌ಗೆ ಹೆಚ್ಚು ಟೈಮು, ದುಡ್ಡು ಹಾಕ್ತಾರೆ. ನನಗೋಸ್ಕರ ಯಾರ ಬಳಿಯೂ ಸಮಯವಿಲ್ಲ.”ಎಂದಾಗ ನನಗಾಗಿ ಊಟ, ತಿಂಡಿ ಸಿದ್ಧ ಮಾಡಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ “ನಾಗಾ.. ಒಂತುತ್ತು ತಿಂದು ಹೋಗೋ.. ಹಸಿದುಕೊಂಡು ಕೆಲಸ ಮಾಡ್ಬಾರ್ದು ಮಗಾ”ಎಂದು ಅಲವತ್ತುಕೊಳ್ಳುವ ನನ್ನಮ್ಮನ ನೆನಪಾಗಿತ್ತು. ಈ ರೀತಿಯ ಬಡ ಸಿರಿವಂತಿಕೆಗಿಂತ ನನ್ನಂಥವರ ಹೊಟ್ಟೆ ತುಂಬಿದ..ಪ್ರೀತಿ ತುಂಬಿದ ಶ್ರೀಮಂತ ಬಡತನವೇ ಲೇಸು ಎನಿಸಿತು.
“ಅಣ್ಣ ಅಮೆರಿಕದಿಂದ ಆಗಾಗ ಫೋನ್ ಮಾಡ್ತಿರ್ತಾನೆ. ಅವನಿಗೆ ಇಲ್ಲಿ ಬರಲು ಇಷ್ಟವೇ ಇಲ್ಲ. ಇಲ್ಲಿನ ರೀತಿ, ನೀತಿಗಳೊಂದಿಗೆ ಅಪ್ಪನ ಲಂಚಗುಳಿತನ, ಭ್ರಷ್ಟಾಚಾರ, ಅಮ್ಮನ ಬೂಟಾಟಿಕೆ, ಆಡಂಬರ.. ಯಾವುದೂ ಇಷ್ಟವಾಗಲ್ಲ” ಇತ್ಯಾದಿ ವಿವರಗಳು ನಾನು ಕೇಳದೆಯೇ ನನಗೆ ದೊರಕಿದ್ದವು. ನಾನು ಬರೀ ‘ಹ್ಞೂಂ..’ಗುಡುವ ಯಂತ್ರವಾಗಿದ್ದೆ. ಆದರೆ ಮನದ ಮೂಲೆಯಲ್ಲಿ ತಟ್ಟನೆ ‘ಹಾಗಾದರೆ ಕಾಳು ಹಾಕಿದವರಿಗೆ ದೊಡ್ಡ ಸಾಮ್ರಾಜ್ಯವೇ ದೊರಕುವುದುಂಟು’ಎನಿಸಿದ್ದು ಸುಳ್ಳಲ್ಲ. “ಮನೇಲಿ ಅಡಿಗೆಯವಳು, ಕೆಲಸದವಳು, ಮಾಲಿ.. ಬಿಟ್ಟರೆ ಯಾರಿರುವುದಿಲ್ಲ. ದೊಡ್ಡ ಸುಂದರ ಮನೆಯನ್ನು ಅವರೇ ಎಂಜಾಯ್ ಮಾಡ್ತಾರೆ. ಎಲ್ಲರೂ ರಾತ್ರಿಯೇ ಬರುವುದು. ಅದಕ್ಕೇ ಸಿ.ಸಿ.ಟಿವಿ. ಬೇರೆ ಹಾಕಿಸಿದ್ದಾರೆ”ಎಂದು ನಕ್ಕಳು. ವಿಷಾದಭರಿತ ನಗೆ. ‘ತುಂಬಾ ಮುಗ್ಧೆ’ಎನಿಸಿತು. ಶ್ರೀಮಂತಿಕೆಯ ಮೆಟ್ಟಿಲೇರುವ ಹುಚ್ಚಿನಲ್ಲಿ ಅಮಾಯಕ ಮನವನ್ನು ಮರೆತಿದ್ದಾರೆ ಎಂಬ ಬೇಜಾರೂ ಸೇರಿಕೊಂಡಿತು. ಯಾರ ಅಕ್ಕರೆಯೂ ಸಿಗದ ಶ್ರೀಮಂತ ಸಕ್ಕರೆಯ ಗೊಂಬೆ ಪ್ರೀತಿಗೆ.. ವಿಶ್ವಾಸಕ್ಕೆ ಹಂಬಲಿಸುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಯಾವ ವಿಷಯ ಹೇಳಬೇಕು.. ಹೇಳಬಾರದೆಂಬ ಅರಿವಿಲ್ಲದೇ ಮನೆಯ ಚಿತ್ರವನ್ನೆಲ್ಲ ಬಿಡಿಸಿಡುತ್ತಿದ್ದಾಳೆ. ಮಧ್ಯಾಹ್ನ ಹೋಗಿ ಕೊಳ್ಳೆ ಹೊಡೆಯಬಹುದು ಎನಿಸಿ ನಗು ಬಂತು.
ಮಳೆಗಾಲ ಆರಂಭವಾಗಿತ್ತು. ತುಂತುರಾಗಿ ನೀರ ಧಾರೆ ಸುರಿಯತೊಡಗಿತ್ತು. ಆಟೋ ಹೆಬ್ಬಾಳಕ್ಕೆ ನಿತ್ಯವೂ ಓಡುತ್ತಿತ್ತು. “ಮಳೆಗಾಲ.. ಕಾರಲ್ಲೇ ಓಡಿಯಾಡಬಹುದಲ್ಲ..”ಎಂದೆ. ಅದಕ್ಕೆ ಅವಳು “ಹ್ಞಾಂ, ಅಪ್ಪ ಕೂಡ ಅದನ್ನೇ ಹೇಳಿದರು. ಡ್ರೈವರ್‌ನ ಕಳಿಸ್ತೀನಿ ಅಂದ್ರು. ನಾನೇ ಕ್ಯಾಬ್ ಬುಕ್ ಮಾಡ್ಕೋತೀನಿ ಅಂದೆ. ನಾನು ಆಟೋದಲ್ಲಿ ಓಡಿಯಾಡುವುದು ಅವರ ಅಂತಸ್ತಿಗೆ ಕಡಿಮೆ ಅಂತಾರೆ. ಈಗ ನಿತ್ಯ ನಾನು ಮನೆಗೆ ಹಿಂತಿರುಗುವಾಗ ಮನೇಲಿ ಯಾರೂ ಇರಲ್ಲ. ನೋಡಲ್ಲ..” ಎಂದಳು. “ಫ್ರೆಂಡ್ಸ ಜೊತೆ ಕ್ಯಾಬ್‌ನಲ್ಲೂ ಹೋಗಬಹುದು”ಎಂದೆ. “ಫ್ರೆಂಡ್ಸಾ.. ಶಬ್ದಾನೇ ಮರೆತು ಎಷ್ಟೋ ದಿನ ಆದಂಗಾಗಿದೆ. ಮೊದಲು ನಾವು ಚಿಕ್ಕ ಮನೇಲಿದ್ದಾಗ ತುಂಬಾ ಜನ ಫ್ರೆಂಡ್ಸ ಇದ್ದರು. ನಾವೆಲ್ಲ ಸಿನಿಮಾ, ಮಾಲ್, ಶಾಪಿಂಗ್ ಅಂತ ಓಡಾಡ್ತಿದ್ವಿ. ಎಲ್ಲರೂ ಕೊಳ್ಳೋದು ಜಾಸ್ತಿ ಇರಲಿಲ್ಲವಾದರೂ ವಿಂಡೋ ಶಾಪಿಂಗ್ ಮಾಡಿದ್ದೇ ಹೆಚ್ಚು. ಸಿನಿಮಾ ಅಂತೂ ಒಂದೂ ಬಿಡದೇ ನೋಡ್ತಿದ್ದೆವು. ಕನ್ನಡ, ಹಿಂದಿ, ತೆಲಗು, ತಮಿಳು, ಇಂಗ್ಲಿಷ್.. ನೋಡಿ ಮಜಾ ಮಾಡ್ತಿದ್ದೆವು. ಕನ್ನಡ ಸಿನಿಮಾದ ಡೈಲಾಗ್‌ಗಳನ್ನ ಉರು ಹೊಡೆದು ಹೇಳಿದ್ದೇ ಹೇಳಿದ್ದು. ದೊಡ್ಡ ಮನೆಗೆ ಬಂದ ಮೇಲೆ ಅವರು ಅಮ್ಮ, ಅಪ್ಪನಿಗೆ ಇಷ್ಟವಾಗಲಿಲ್ಲ. ಬಿಡಿಸಿಬಿಟ್ರು. ಅಮ್ಮ ತೋರಿಸಿದ ಹೈಕ್ಲಾಸ್ ಒಣ ಡಂಭಾಚಾರದ ಫ್ರೆಂಡ್ಸ ನನಗಿಷ್ಟವಾಗಲಿಲ್ಲ. ಅದಕ್ಕೇ ಈಗ ನಾನು ಒಬ್ಬಂಟಿ”ಎಂದದ್ದು ಅದೇ ವಿಷಾದಭರಿತ ಛಾಯೆಯಲ್ಲಿ.. ನನ್ನಲ್ಲೂ ಕನಿಕರ ಮೂಡಿತು. ಅನುಕಂಪವೋ.. ಆಕರ್ಷಣೆಯೋ ಗೊತ್ತಿಲ್ಲ. ಆಟೋಕ್ಕೆ ಎರಡೂ ಕಡೆಗೂ ಬಾಗಿಲಿನಂತೆ ಟಾರ್ಪಾಲು ಹಾಕಿಸಿದೆ. ಇಷ್ಟಕ್ಕೇ ಮುಗಿದು ಹೋಗಿದ್ದರೆ ತೊಂದರೆ ಇರಲಿಲ್ಲ. ಅದೊಂದು ದಿನ ಸೋನೆ ಮಳೆ ಸುರಿಯುವಾಗ ಅವಳು “ಅಪ್ಪ, ಅಮ್ಮ ನನಗೆ ಹುಡುಗನ್ನ ಹುಡುಕಿದ್ದಾರೆ. ಅವರ ಅಂತಸ್ತಿಗೆ ತಕ್ಕನಾಗಿ..”ಎಂದು ಭಾರವಾದ ಧ್ವನಿಯಲ್ಲಿ ಹೇಳಿದಳು. ನನಗೆ ಗಂಟಲಲ್ಲೇನೋ ಸಿಕ್ಕಿದಂತಾದರೂ ತಡವರಿಸುತ್ತ “ಒಳ್ಳೇದಾಯ್ತಲ್ಲ..”ಎಂದೆ. “ಉಹ್ಞೂಂ.. ನಾನೊಬ್ಬರನ್ನ ಇಷ್ಟಪಟ್ಟಿದೀನಿ. ಅವರನ್ನೇ ಮದುವೆಯಾಗ್ತೀನಿ”ಎಂದು ನಾಚುತ್ತಲೇ ಹೇಳಿದಳು. “ಓಹ್! ಲವ್ವಾ..”ಎಂದು ಛೇಡಿಸಿದೆ. “ಹ್ಞೂಂ..”ಎಂದು ಕೆನ್ನೆ ಕೆಂಪಾಗಿಸಿಕೊಂಡವಳು “ಯಾರೂಂತ ಕೇಳ್ಲೇ ಇಲ್ಲ”ಎಂದಳು. ನನಗೇನೋ ನಿರಾಸೆ ಕವಿದ ಭಾಸ. “ಹೇಳಿ”ಎಂದು ಆಟೋ ತಿರುಗಿಸಿ ಅವಳ ಮನೆ ಮುಂದೆ ನಿಲ್ಲಿಸಿದೆ. ಇಳಿದವಳು “ನೀವೇ.. ಐ ಲವ್ ಯು”ಎಂದದ್ದೇ ಓಡಿಬಿಟ್ಟಳು. ನನಗೋ..ದೇಹದಾದ್ಯಂತ ಕಂಪನ. ನಾನು ಕನಸಲ್ಲೂ ಯೋಚಿಸದಿದ್ದದ್ದು ನಡೆದು ಹೋಗಿತ್ತು.
ನಿಜ.. ಅವಳ ಮಾತಿನಿಂದ ಶಾಂತವಾಗಿದ್ದ ಮನದ ಕೊಳದಲ್ಲಿ ಕಲ್ಲೆಸೆದಂತಾಗಿತ್ತು. ಜೀವನದಲ್ಲಿ ಮೊದಲ ಬಾರಿ ಹುಡುಗಿಯೊಬ್ಬಳು ..ಅದೂ ಶ್ರೀಮಂತೆ, ಸುಂದರಿ.. ಪ್ರೀತಿ ತೋಡಿಕೊಂಡಿದ್ದಳು. ಏನೋ ಉತ್ಸಾಹ.. ಹೇಳಲಾಗದ ನೋವು.. ತಲೆಯಲ್ಲಿ ಹುಳ ಬಿಟ್ಟಂತಾಗಿ ಎಂದು ಬರದವನು ಮನೆಗೆ ಬಂದು ತಲೆನೋವಿನ ನೆಪ ಮಾಡಿ ಮಲಗಿದೆ. ನನ್ನ ಬದುಕಿನ ಚಿತ್ರಣವೆಲ್ಲ ಬಿಡಿಬಿಡಿಯಾಗಿ ಸ್ಮರಣೆಗೆ ಬಂದು ಕೊಲಾಜ್ ಆಗುತ್ತಿತ್ತು. ಆಟೋ ಓಡಿಸುತ್ತ ಕುಡಿದು ಕುಡಿದೇ ತೀರಿಹೋದ ಅಪ್ಪ, ಒದ್ದಾಡುತ್ತಲೇ ಬದುಕಿನ ಬಂಡಿ ಎಳೆದ ಅಮ್ಮ. ಹೌದು..ಅಮ್ಮ ನಿಜಕ್ಕೂ ಗಟ್ಟಿಗಿತ್ತಿ. ಉನ್ನತ ವ್ಯಕ್ತಿತ್ವದವಳು. ಅಪ್ಪನನ್ನು ತಿದ್ದಲು ಭೂಮಿ ಆಕಾಶ ಒಂದು ಮಾಡಿದಳು. ಅಪ್ಪ ಸುಧಾರಿಸಲೇ ಇಲ್ಲ. ದುಡಿದದ್ದೆಲ್ಲ ಕುಡಿತಕ್ಕಿಡುವುದಲ್ಲದೇ..ಮನೆಯಲ್ಲಿದ್ದ ಪುಡಿಗಾಸನ್ನೂ ಉಳಿಸುತ್ತಿರಲಿಲ್ಲ. ಅಮ್ಮ ಊರವರ ಬಟ್ಟೆ ಹೊಲೆಯುತ್ತಿದ್ದಳು. ನಾನು ಕಾಜಾ, ಬಟನ್ ಮಾಡಿಕೊಡುತ್ತಿದ್ದೆ. ಅದೂ ಸಾಲದೇ ಊರಿನಲ್ಲಿ ಯಾರ ಮನೆಯಲ್ಲಿ ಹೆಚ್ಚುವರಿ ಕೆಲಸಗಳಿಗೆ ಕರೆದರೂ ಹೋಗುತ್ತಿದ್ದಳು. ನಾನೂ ಚಾಕೋಲೆಟ್‌ಗಳಿಗೆ ರ‍್ಯಾಪರ್ ಸುತ್ತುತ್ತಿದ್ದೆ. ಅಂಗಡಿಯಲ್ಲಿ.. ಹೋಟಲ್‌ನಲ್ಲಿ ಹೇಳಿದ ಕೆಲಸ ಮಾಡುತ್ತಿದ್ದೆ. ಸಂಪಾದಿಸಿದ ಕಾಸನ್ನೆಲ್ಲ ಪಕ್ಕದ ಮನೆಯ ಬೂಬಮ್ಮ ಆಂಟಿಯ ಮನೆಯಲ್ಲಿಡುತ್ತಿದ್ದೆವು. ಬೂಬಮ್ಮ ಘಟವಾಣಿ ಹೆಂಗಸು. ಆದರೆ ಒಳ್ಳೆಯವಳು. ಅಪ್ಪ ಅವಳ ಮನೆಯತ್ತ ಸುಳಿಯುತ್ತಿರಲಿಲ್ಲ. ಇಂತಹ ವಿಪರೀತ ಪರಿಸ್ಥಿತಿಗಳ ಮಧ್ಯೆ ನಾನು ಎಸ್.ಎಸ್.ಎಲ್.ಸಿ. ಪಾಸಾಗಿದ್ದೆ. ಜೀವನಾಂಶದೊಂದಿಗೆ.. ಪಾಸಾಗಿದ್ದೇ ಹೆಚ್ಚು ಎನ್ನುವಂತಾಗಿತ್ತು. ಅಮ್ಮ ಸಂತಸದಿಂದ ಸುತ್ತಿದ್ದ ಚಾಕೋಲೇಟ್‌ಗಳನ್ನೇ ಹಂಚಿದ್ದಳು. ಆಗಲೇ ಅಪ್ಪ ತೀರಿಹೋದದ್ದು.. ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನ ನೆರಳಿದವ ಮೂರನೇ ದಿನ ಇಲ್ಲವಾಗಿದ್ದ. ಬಂಧುಗಳೆಲ್ಲ ಬಂದು ಅವನನ್ನು ಮಣ್ಣು ಮಾಡಿದ ಮೇಲೆಯೇ ನಮಗೆ ನಿಜವಾದ ನೆರಳು ದೊರೆತಿತ್ತು. ಅಪ್ಪ ಸೇರಿಸಿಕೊಳ್ಳದ ಸೋದರಮಾವ.. ಅಮ್ಮನ ಅಣ್ಣ ನಮಗೆ ಆಧಾರವಾದ. ಒತ್ತಾಯದಿಂದ ನನ್ನನ್ನು ಕಾಲೇಜಿಗೆ ಸೇರಿಸಿದ. ಹಳ್ಳಿಯಿಂದ ದವಸ ಧಾನ್ಯ ತಂದು ಹಾಕುತ್ತಿದ್ದ. ತನ್ನ ಮಗ, ಮಗಳಿಬ್ಬರನ್ನೂ ಓದಲು ಇಲ್ಲಿಯೇ ತಂದಿಟ್ಟ. ಪರಿಹಾರಾರ್ಥವಾಗಿ ಕೈಬಿಟ್ಟು ಖರ್ಚು ಮಾಡುತ್ತಿದ್ದ. ಅವನೇನು ಸಾಹುಕಾರನಲ್ಲ. ಒಂದಷ್ಟು ಹೊಲ,ಗದ್ದೆಗಳೊಡನೆ ಬೇರೆಯವರ ಹೊಲಗಳಲ್ಲಿ ಕೆಲಸಕ್ಕೂ ಹೋಗುತ್ತಿದ್ದ. ಒಟ್ಟಿನಲ್ಲಿ ನಮಗಿಂತಲೂ ಗಟ್ಟಿ ಕುಳ ಎನ್ನಬಹುದು. ಮನೆಯ ಪರಿಸ್ಥಿತಿ ಈಗ ತುಸು ಸುಧಾರಿಸಿತು. ಅಮ್ಮ ಕೂಡ ಬರೀ ಹೊಲಿಗೆಯಷ್ಟೇ ನೋಡಿಕೊಳ್ಳುತ್ತಿದ್ದಳು. ಉಳಿದವಕ್ಕೆ ಒದ್ದಾಡುತ್ತಿರಲಿಲ್ಲ.
ನಾನು ಕಷ್ಟಪಟ್ಟೇ ಬಿ.ಎ. ಮುಗಿಸಿದೆ. ಅರ್ಜಿ ಹಿಡಿದು ಕೆಲಸಕ್ಕಾಗಿ ಅಲೆದೆ. ಒಳ್ಳೆಯ ಕೆಲಸ ದೊರೆಯಲಿಲ್ಲ. ದೊರೆತ ಕೆಲಸ ನನಗೆ ಒಗ್ಗಲಿಲ್ಲ. ಅವರು ಕೊಡುವ ಕಾಸು ಯಾವುದಿಕ್ಕೂ ಸಾಲುತ್ತಿರಲಿಲ್ಲ. ಮೆಲ್ಲನೆ ಅಮ್ಮನ ಬಳಿ ಮಾತು ತೆಗೆದೆ. “ನಾನು ಓದಿದ ಬಿ.ಎ.ಗೆ ಕೆಲಸ ಸಿಗೋದು ಅಷ್ಟರಲ್ಲೇ ಇದೆ. ಸುಮ್ಮನೆ ಆಟೋ ಓಡುಸ್ತೀನಿ”ಎಂದೆ. ಸೋದರಮಾವನೂ ಬೇಡವೆನ್ನಲಿಲ್ಲ. “ಹಾಗೇ ಮಾಡು..ನಿಯತ್ತಿನಿಂದ ದುಡಿಮೆ ಮಾಡಿ ಕುಡಿತದ ಚಟಕ್ಕೆ ಬೀಳದೇ ಮಾನವಾಗಿ ಬದುಕಿದರೆ ಸಾಕು” ಎಂದಿದ್ದ. ಬಂಡವಾಳ ಹೂಡಿ ಆಟೋ ತೆಗೆದುಕೊಟ್ಟ. ನನಗೆ ಡ್ರೈವಿಂಗ್ ಬರುತ್ತಿದ್ದುದೂ ಅನುಕೂಲವೇ ಆಯ್ತು. ಅವನ ಮಗನೂ ಐ.ಟಿ.ಐ. ಮುಗಿಸಿಕೊಂಡು ತುಮಕೂರಲ್ಲಿ ಫಿಟ್ಟರ್ ಕೆಲಸಕ್ಕೆ ಸೇರಿದ. ಮಗಳು ನೀಲಾ ಕಾಲೇಜು ಮೆಟ್ಟಿಲು ತುಳಿದಿದ್ದಳು. ಇಂಗ್ಲೀಷು ಸೊನ್ನೆ. “ಅದ್ನ ಹೇಳ್ಕೊಡು ಮಾವ. ಇದು ಹೇಗೆ ಬರೆಯೋದು..”ಎಂದು ಹಿಂದೆ ಮುಂದೆ ಸುತ್ತುತ್ತ ದುಂಬಾಲು ಬೀಳುತ್ತಿದ್ದಳು. ನಾನೇ ದಂಡಯಾತ್ರೆಯಲ್ಲಿ ಪಾಸು ಮಾಡಿದ್ದು. ಇವಳಿಗೇನು ಹೇಳೋದು..? ನೋಡಲು ಮಹಾ ಸುಂದರಿಯೇನಲ್ಲ. “ಗಲೀಜಾಯ್ತದೆ”ಎನ್ನುತ್ತ ಗಿಡ್ಡ ಲಂಗವೋ..ಸೀರೆಯೋ ತೊಟ್ಟು ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತ ಓಡಾಡೋಳು. “ಅಣ್ಣ ದೂರದ ಯೋಚನೆ ಇಟ್ಟುಕೊಂಡೇ ಆಟೋ ಕೊಡಿಸಿದ್ದಾನೆ”ಎಂದು ಅಮ್ಮ ಸೂಕ್ಷ್ಮವಾಗಿ ನೀಲಾಳತ್ತ ಬೆರಳು ತೋರಿದಾಗ ಮನಸ್ಸು ಒಪ್ಪಿರಲಿಲ್ಲ. ದುಂಡು ಮೊಗ, ಎಣ್ಣೆಗೆಂಪು ಬಣ್ಣ, ತುಸು ಮೊಂಡು ಮೂಗು.. ಆದರೆ ಎಲ್ಲಕ್ಕೂ ಕಲಶವಿಟ್ಟಂತೆ ನೀಳ ಕೇಶರಾಶಿ. ಅದಕ್ಕೆ ಸದಾ ಧಾರಾಳವಾಗಿ ಎಣ್ಣೆ ಮೆತ್ತಿರುತ್ತಿದ್ದುದರಿಂದ ತೊಪ್ಪೆಯಾಗಿ ತೆಪ್ಪಗೆ ಕುಳಿತಿರುತ್ತಿತ್ತು. ಎಂದೂ ಹಾರಾಡಿದ್ದೇ ನೋಡಿಲ್ಲ. ನಾನು ಆಗಾಗ “ನಿನ್ನ ಕಟ್ಕೊಂಡೋನು ತನ್ನ ಎಣ್ಣೆ ಬಿಟ್ಟು ನಿನ್ನ ಕೂದಲಿನ ಎಣ್ಣೆಗೇ ದುಡ್ಡು ಸುರೀಬೇಕು”ಎಂದು ಛೇಡಿಸುತ್ತಿದ್ದೆ. “ನೋಡು ಅತ್ತೇ..”ಎಂದು ಕೂಗುತ್ತ ಓಡುತ್ತಿದ್ದಳು. ಅಮ್ಮ “ಕಣ್ಣು ಹಾಕಬೇಡ..ಸುಮ್ನಿರೋ..”ಎಂದು ಬೈದರೆ ಸುಮ್ಮನಿರಬೇಕಾಗುತ್ತಿತ್ತು.
ವಾರಕ್ಕೊಮ್ಮೆ ಭಾನುವಾರ ಅಮ್ಮ “ಬರೀ ಕತ್ತೆ ದುಡಿತವೇ ಆಯ್ತದೆ”ಎನ್ನುತ್ತ ಮೈಗೆಲ್ಲ ಎಣ್ಣೆಯಿಂದ ಮಾಲೀಶ ಮಾಡಿ, ಬೆನ್ನುಜ್ಜಿ ನೀರು ಹಾಕುತ್ತಿದ್ದಳು. ಅಂಗೈ ಅಗಲದ ಬಚ್ಚಲಲ್ಲಿ ಅಮ್ಮ ಹೊರಗೆ ನಿಂತೇ ಹಾಕಬೇಕಾಗುತ್ತಿತ್ತು. ನೀಲಾ ಕಳ್ಳನೋಟದಲ್ಲಿ ನೋಡುತ್ತ “ಅತ್ತೇ.. ನಾ ಬೆನ್ನು ಉಜ್ಜಲಾ..”ಎಂದು ಕೇಳಿದಾಗ ನಾನು ಒಳಗಿನಿಂದಲೇ “ಲೇಯ್.. ಓಡ್ತೀಯಾ..ಇಲ್ವಾ..?”ಎಂದು ಕೂಗುತ್ತಿದ್ದೆ. ಅವಳು ಓಡಿದಾಗ ಅಮ್ಮ ನಗುತ್ತ “ಇರ್ಲಿ ಬಿಡೊ..ಏನೋ ಆಸೆ. ಕೇಳ್ತವ್ಳೆ”ಎಂದು ವಕಾಲತ್ತು ವಹಿಸುತ್ತಿದ್ದಳು. ವಾರಕ್ಕೊಮ್ಮೆ ಅಮ್ಮನ ಕೈನ ಬಾಡೂಟ. ರಾತ್ರಿ ಮುದ್ದೆ, ಬಸ್ಸಾರು ಉಂಡು ಅವಳ ತೊಡೆಯ ಮೇಲೆ ತಲೆ ಇಟ್ಟಾಗ ಕೂದಲು ಒಪ್ಪ ಮಾಡುತ್ತ ಅವಳು “ಬೇಗ ಒಂದು ಮದುವೆ ಅಂತ ಆಗಿಬಿಡ್ಲಾ ನಾಗ. ನನ್ನ ಮೊಮ್ಮಕ್ಕಳನ್ನ ನೋಡಿ ನಾ ಮೇಲಕ್ಕೋಯ್ತೀನಿ”ಎನ್ನುತ್ತಿದ್ದಳು. ನೀಲಾ ಬಾಗಿಲ ಮರೆಯಿಂದ ಇಣುಕಿ ಓರೆನೋಟ ಬೀರುವಳು. “ಓಹೋ.. ಏನ ಟಿಕೆಟ್ ರಿಸರ್ವ ಮಾಡ್ಸಿದೀಯಾ.. ಅದಕ್ಕೇ ನಾ ಬೇಗ ಮದ್ವೆ ಆಗಾಕಿಲ್ಲ. ಆದ್ರೆ ನೀ ಹೊರಡ್ತೀಯಲ್ಲ..”ಎನ್ನುತ್ತಿದ್ದೆ. “ಹಂಗಲ್ಲ ಕಣಪ್ಪಾ..”ಎಂದು ಅಮ್ಮ ಪುರಾಣ ಶುರು ಮಾಡುತ್ತಿದ್ದಂತೆ ನಾನು ನಿದ್ದೆ ಹೋಗುವಂತೆ ನಟಿಸುತ್ತಿದ್ದೆ. ಈ ಸುಖ ಯಾವ ಶ್ರೀಮಂತಿಕೇಲೂ ಸಿಗಲ್ಲ. “ಮತ್ತೆ ಯಾವಾಗ ಮಾಡ್ಕೊಂತಾನಂತೆ ಕೇಳತ್ತೆ..”ಎಂದು ನೀಲಾ ಒಳಗಿನಿಂದ ಮೆತ್ತಗೆ ಕೂಗುತ್ತಿದ್ದಳು. “ಅಯ್ಯೋ. ನನ್ನ ಕರ್ಮವೇ..”ಎಂದು ನಾನು ತಲೆ ಚಚ್ಚಿಕೊಂಡರೆ ಅಮ್ಮ ನಗುತ್ತಿದ್ದಳು. ಇವಳ ಗೊಡವೆಯೇ ಬೇಡವೆಂದು ಮಾವನಿಗೆ “ಮಾವ..ಆಟೊದ ದುಡ್ಡು ಕಂತಿನಲ್ಲಿ ವಾಪಸ್ ಕೊಡ್ತೀನಿ. ನನ್ನ ಕೈಲಿ ಕಾಸು ನಿಲ್ಲಲ್ಲ. ಎಲ್ಲಾ ಖರ್ಚಾಯ್ತದೆ”ಎಂದಿದ್ದೆ. ನನ್ನ ಆಂತರ್ಯ ತಿಳಿಯದ ಮಾವ “ಹಂಗೇ ಮಾಡು..”ಎಂದಿದ್ದ. ಒಂದಷ್ಟು ದುಡ್ಡು ಮಾಡ್ಕೊಂಡು ಆಮೇಲೆ ಮದುವೆ..ಗಿದುವೆ ನೋಡಿದ್ರಾಯ್ತು.. ಅನ್ಕೊಂಡ್ರೆ ಈಗ ಈ ಹುಡುಗಿ.. ಮಾನ್ಯ.. ಲವ್ವು.. ಗಿವ್ವು.. ತಲೆ ‘ದಿಮ್’ ಎನ್ನುತ್ತಿತ್ತು.
ಹುಚ್ಚೆದ್ದು ಕುಣಿಯುವ ಹರಯದ ಬಯಕೆಗಳು ದೇಹದಲ್ಲಿ ಬಿಸಿಯೇರಿಸಿದ್ದವು. ಪದೇ ಪದೇ ಅವಳ ಹಾಲು ಬಣ್ಣದ ಕಟೆದಿಟ್ಟ ಶಿಲೆಯಂಥ ರೂಪ ಕಣ್ಮುಂದೆ ಬರುತ್ತಿತ್ತು. ‘ಯಾಕಾಗಬಾರದು.. ನಾನೂ ಯುವಕನಲ್ಲವೇ?’ಎನಿಸಿದರೂ ಅಗಾಧವಾದ ಸಾಮಾಜಿಕ ಅಂತರದ ವಾಸ್ತವತೆ ಮುಳ್ಳಾಗಿ ಚುಚ್ಚುತ್ತಿತ್ತು. ಆಪ್ತರಾರಿಲ್ಲದೇ..ಸಹೃದಯರ ಸಂಗವಿಲ್ಲದೇ ಹುಡುಗಿ ನನ್ನ ಆಕರ್ಷಣೆಗೆ ಸಿಲುಕಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಅವಳು ನೋಡಿದ ನೂರಾರು ಸಿನಿಮಾಗಳ ಪ್ರಭಾವವೆಂದರೂ ಸರಿಯೇ. ಆದರೆ ಇವಳ ಮಾತಿಗೆ ಮಣಿದು ಪ್ರೀತಿ..ಪ್ರೇಮ ಎಂದು ಸುತ್ತಿ ಮದುವೆಯಾಗಿ ಕರೆತಂದರೆ ಗುಬ್ಬಿಗೂಡಿನಲ್ಲಿ ವಾಸ ಮಾಡಿಯಾಳೇ? ಆಟೋದಲ್ಲಿ ಸಾಗುವಾಗಲೇ ಪಕ್ಕ ಮೋರಿ ಬಂದರೆ ಮೂಗು ಮುಚ್ಚಿಕೊಳ್ಳುವಳು.. ಇಲ್ಲಿ ಬಂದು ಮೋರಿ ಪಕ್ಕ ಜೀವನ ಮಾಡುತ್ತಾಳಾ? ರಸ್ತೆಯಲ್ಲಿ ಗಲೀಜು ಕಂಡರೆ ‘ಥೂ’ಎಂದು ಉಗಿಯುವವಳು ಇಲ್ಲಿ ಸುತ್ತಮುತ್ತೆಲ್ಲ ಗಲೀಜಿನಲ್ಲೇ ವಾಸ ಮಾಡುತ್ತಾಳಾ? ನಮ್ಮ ಮನೆಯೆಂಬ ಗುಬ್ಬಿಗೂಡು ಇರುವುದು ಕೃಷ್ಣಾನಂದ ನಗರದಲ್ಲಿ. ಅಲ್ಲೆಲ್ಲ ನವ್ಮ್ಮಂಥವರೇ. ಒಂದಕ್ಕೊಂದು ಒತ್ತಾಗಿದ್ದ ಚಿಕ್ಕ ಮನೆಗಳು. ಮನೆಯೊಳಗೊಂದು ಕೋಣೆ ಇದ್ದರೆ ಅದೇ ದೊಡ್ಡ ‘ಲಕ್ಸುರಿ’. ಇಲ್ಲವಾದರೆ ಇರುವ ಒಂದು ಹಾಲಲ್ಲೇ ಎಲ್ಲ ಆಗಬೇಕು. ಹಿಂದೆ ಬಾಡಿಗೆಯವರಿಗೆಂದು ಸಾಲಾಗಿದ್ದ ಕಕ್ಕಸ್ಸುಗಳು.. ಆಗಾಗ ಕುಡಿದು ಜಗಳವಾಡುತ್ತ ಬೀದಿರಂಪ ಮಾಡುವ ಜನ.. ಹುಡುಗಿಯನ್ನು ಇಲ್ಲಿ ಕರೆತಂದರೆ ಬಾಳಿಯಾಳೇ? ವಿವೇಚನೆಯಿಂದ ಯೋಚಿಸಿ ಅವಳಿಗೂ ತಿಳಿಹೇಳಬೇಕು ಎಂದು ನಿರ್ಧರಿಸಿದೆ.
ಮರುದಿನ ಆಟೋ ಎತ್ತಿಕೊಂಡು ಬಾಡಿಗೆಗೆ ಹೊರಡುವಾಗ ದ್ವಂದ್ವ ಕಾಡಿತು. ಬೇರೆ ಏರಿಯಾದಲ್ಲಿ ಓಡಿಸಿ ತಪ್ಪಿಸಿಕೊಂಡರಾಯಿತು ಎನಿಸಿದರೂ ಆ ಮುಗ್ಧ ಕಣ್ಣುಗಳ ಸೆಳೆತ ಜೋರಾಗಿತ್ತು. ಅವಳಿಗೆ ವಾಸ್ತವದ ಬಗ್ಗೆ ಯೋಚಿಸಲು ಹೇಳಿ ನಾನೇ ಜಾರಿದರೆ..ಎಂಬ ಹೆದರಿಕೆ. ಏನಾದರಾಗಲಿ..ಅವಳಿಗೆ ತಿಳುವಳಿಕೆ ಹೇಳಿಯೇ ಸಿದ್ಧ ಎನ್ನುತ್ತ ಮಾಮೂಲಿನಂತೆ ಆಟೋ ಎತ್ತಿಕೊಂಡು ಹೊರಟೆ. ನನಗರಿವಿಲ್ಲದೇ ಒಳ್ಳೆಯ ಬಟ್ಟೆ ತೊಟ್ಟು ನೀಟಾಗಿ ಡ್ರೆಸ್ ಮಾಡಿದ್ದೆ. ಅವಳು ಎಂದಿಗಿಂತಲೂ ಹೆಚ್ಚು ಕಾತರದಿಂದ ಕಾಯುತ್ತಿದ್ದ ಹಾಗಿತ್ತು. ನೋಡಿದಾಕ್ಷಣ ಸರಸರನೇ ಬಂದು ಕುಳಿತವಳು “ನೋಡಿ.. ನೀಟಾಗಿ ಸಿದ್ಧವಾದರೆ ನೀವು ಯಾವ ಹೀರೋಗೂ ಕಡಿಮೆಯಿಲ್ಲ. ಅಷ್ಟು ಅಂದವಾಗಿ.. ಕಟ್ಟುಮಸ್ತಾಗಿದ್ದೀರಾ” ಎಂದಳು. ಹೊಗಳಿಕೆ ಆಪ್ಯಾಯಮಾನವಾಗಿತ್ತು. ಅಮ್ಮನಂತೆಯೇ ನೀಳವಾದ ಚೂಪು ಮೂಗು, ಅಗಲ ಕಂಗಳು ಹೊಂದಿದ ಲಕ್ಷಣವಂತ ನಾನೆಂದು ಗೊತ್ತಿತ್ತು. ಯೌವನದ ಹುರುಪಿನಲ್ಲಿ ರಾತ್ರಿ ಶಂಕರನಗರದ ಜಿಮ್‌ನಲ್ಲಿ ವರ್ಕೌಟ್ ಮಾಡಿ ದೇಹವನ್ನು ಹುರಿಗಟ್ಟಿಸಿದ್ದೆ. ಚೆನ್ನಾಗೇ ಕಾಣುತ್ತಿದ್ದೆ. ಆದರೆ ಇವಳ ತಲೆಯಲ್ಲಿನ ಹುಚ್ಚು ಕಳೆಯಬೇಕಲ್ಲ.. ಹೇಗೆ ಹೇಳುವುದು?..ಎಂದು ಯೋಚಿಸಿದೆ. ಆಟೋ ಓಡುತ್ತಿದ್ದಂತೆ ಅವಳೇ ಆರಂಭಿಸಿ “ನಿನ್ನೆ ನಾನು ಹೇಳಿದ ವಿಷಯಕ್ಕೆ ನೀವು ಉತ್ತರಿಸಲೇ ಇಲ್ಲ..”ಎಂದು ನಾಚಿದಳು.
ಆಟೋ ಮರದ ನೆರಳಿಗೆ ನಿಲ್ಲಿಸಿ ಹಿಂದೆ ತಿರುಗಿ “ನೋಡಿ.. ನಿಮಗಾಗಿರೋದು ಲವ್ ಅಲ್ಲ. ಜಸ್ಟ ಕ್ರಶ್.. ಆಕರ್ಷಣೆಯಷ್ಟೇ. ಈ ವಯಸ್ಸಿನಲ್ಲಿ.. ಹರಯದಲ್ಲಿ ಅದೆಲ್ಲ ಮಾಮೂಲು. ನನ್ನಲ್ಲಿ ಅಂಥ ಯಾವ ಆಲೋಚನೆಗಳೂ ಇಲ್ಲ. ನಮ್ಮಿಬ್ಬರ ಅಂತಸ್ತುಗಳ ಮಧ್ಯೆ ಅಜಗಜಾಂತರವಿದೆ. ನಾವು ಮದುವೆಯಾದರೆ.. ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿದ್ದೀರಾ? ಒಂದೇ ರೂಮಿನ ಗೂಡು ನಮ್ಮದು. ದಿನಕ್ಕೆ ನನ್ನ ಗಳಿಕೆ ಎಷ್ಟು ಗೊತ್ತೇ? ನಿಮ್ಮ ನಿತ್ಯದ ಪಾಕೆಟ್ ಮನಿಯ ಅರ್ಧದಷ್ಟೂ ಇಲ್ಲ…..” ಎನ್ನುತ್ತಿದ್ದ ನನ್ನ ಮಾತಿನ ಪ್ರವಾಹವನ್ನು ತುಂಡರಿಸುತ್ತ ಅವಳು “ಪ್ರೀತಿ..ಪ್ರೇಮ ಅದನ್ನೆಲ್ಲ ನೋಡಲ್ಲ. ಜಾತಿ, ಧರ್ಮ, ಅಂತಸ್ತುಗಳಲ್ಲಿ ಅಂತರವಿರುವವರೆಷ್ಟು ಜನ ಪ್ರೀತಿಸಿ, ಮದುವೆಯಾಗಿ ಸುಖವಾಗಿಲ್ಲ ಹೇಳಿ. ಅದೆಷ್ಟೊಂದು ಸಿನಿಮಾಗಳಲ್ಲಿ ತೋರಿಸ್ತಾರೆ. ಆಟೋರಾಜ ನೋಡಿದ್ದೀರಾ.. ಶಂಕರನಾಗ್, ಅಣ್ಣಾವ್ರು, ವಿಷ್ಣುವರ್ಧನ, ರವಿಚಂದ್ರನ್..”ಎನ್ನುವ ಲಿಸ್ಟನ್ನು ಈ ಬಾರಿ ನಾನು ತುಂಡರಿಸಿದೆ. “ಇದು ಸಿನಿಮಾ ಅಲ್ಲ ಮೇಡಮ್.. ಜೀವನ. ಇಲ್ಲಿ ಯಾವ ಡೈರೆಕ್ಟರೂ ಇರಲ್ಲ. ಯಾವ ಶಾಟಿಗೂ ಕಟ್ ಇಲ್ಲ. ರೀಟೇಕ್‌ಗಳಿಲ್ಲ. ನಡೆಯುವುದೆಲ್ಲ ಒಂದೇ ಬಾರಿ. ಆಟೋ ಓಡಿದಂತೆ ಚಕ್ರ ತಿರುಗ್ತಾ ಇರುತ್ತೆ. ಹುಚ್ಚು ಯೋಚನೆಗಳು ಆ್ಯಕ್ಸಿಡೆಂಟ್ ಮಾಡುತ್ವೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಜೀವಮಾನವಿಡೀ ಅನುಭವಿಸಬೇಕು”ಎಂದು ಗಂಭೀರವಾಗಿ ಹೇಳಿದೆ. ತಿರುಗಿ ಆಟೋ ಶುರು ಮಾಡಿದೆ. ಅವಳ ಮುಖ ಚಿಕ್ಕದಾಗಿತ್ತು. ಇಬ್ಬರ ನಡುವೆ ಮೌನ ತಾಂಡವವಾಡುತ್ತಿತ್ತು. ಮನೆಯ ಮುಂದೆ ನಿಲ್ಲಿಸಿದಾಗ ಇಳಿದು “ನಿಮ್ಮ ಜೊತೆ ಬಂದು ಜೀವಮಾನವಿಡೀ ಅನುಭವಿಸಲು ಸಿದ್ಧ”ಎಂದವಳು ಕೈ ಎಳೆದುಕೊಂಡು ಮುತ್ತಿಟ್ಟಳು. ಕೆನ್ನೆ ತಟ್ಟಿ ಕಣ್ತುಂಬ ನಾಚಿಕೆ ತುಂಬಿಕೊಂಡು ಓಡಿದಳು. ರೂಮಿನ ಕಿಟಕಿಯಿಂದ ಒಂದು ಜೊತೆ ಕಣ್ಗಳು ಇದನ್ನು ಗಮನಿಸಿದ ಹಾಗಿತ್ತು.
ನನ್ನಲ್ಲೂ ರೋಮಾಂಚನ. ಭಾವನೆಗಳೆದ್ದು ಕುಣಿದವು. ಆಟೋ ತಿರುಗಿ ರ‍್ರನೆ ಓಡುತ್ತಿದ್ದರೆ ವಿಮಾನ ಏರಿದ ಹಾಗಿತ್ತು. ಅದೇ ಪ್ರಶ್ನೆ..ಯಾಕಾಗಬಾರದು. ಮಾನ್ಯಳಂಥ ಅಂದವಾದ, ವಿದ್ಯಾವಂತ, ಮಾಡರ್ನ ಹುಡುಗಿಯೊಡನೆ ಬಾಳು..ಅದೆಷ್ಟು ಸುಂದರವಾಗಿರಬಹುದು.. ಆದರೆ ಅಮ್ಮ ಒಪ್ಪಿಯಾಳೇ? ಕೋಪಗೊಂಡು ಮಾತು ಬಿಟ್ಟು ಗೋಳಾಡಬಹುದು. ಮಾತೃಹೃದಯ ಕ್ರಮೇಣ ಬಾಗುತ್ತದೆ. ಸೋದರಮಾವನಿಗೇನು ಹೇಳಲಿ? ಆಟೋದ ಸಾಲವೇನೋ ತೀರಿದೆ. ಆದರೆ ಇಷ್ಟು ದಿನಗಳ ಕಾಲ ಆಧಾರವಾಗಿ ನಿಂತವ ಕೋಪಗೊಳ್ಳಬಹುದು. ಗಲಾಟೆ ಮಾಡಿ ಮಗಳನ್ನು ಕರೆದೊಯ್ಯಬಹುದು. ಮೊದಮೊದಲೆಲ್ಲ ನಮ್ಮ ಬದುಕು ಚೆನ್ನ ಎನಿಸಿದರೂ ಸತತವಾಗಿ ಹಾಗೇ ಇರಲಾಗದಲ್ಲ. ಮುಂದೆ.. ನನಗೆ ಬರುವ ಪುಡಿಗಾಸು ಅವಳಿಗೆ ಚಿನ್ನವಿರಲಿ..ಚಪ್ಪಲಿ ಕೊಡಿಸಲೂ ಸಾಲದು. ನಂತರ ನಾಯಿ, ಬೆಕ್ಕುಗಳಂತೆ ಕಾದಾಡಿ ವಿಚ್ಛೇದನ ತೆಗೆದುಕೊಳ್ಳುವ ಪರಿ..ಯಾವ ಶತ್ರುವಿಗೂ ಬೇಡ. ಅಲ್ಲದೇ ಅವಳ ತಾಯಿ, ತಂದೆ ಸುಮ್ಮನೆ ಬಿಟ್ಟಾರೇ.. ಗಲಾಟೆ ಮಾಡುತ್ತಾರೆ. ನನಗೋ..ಅಮ್ಮನಿಗೋ ಏನಾದರೂ ತೊಂದರೆ ಮಾಡಿದರೂ ಮಾಡಬಹುದು. ಬರೀ ಯೌವನದ ಹುರುಪಿನಲ್ಲಿ ಮುನ್ನುಗ್ಗಿದರಲ್ಲ. ಸಾಧಕ..ಬಾಧಕಗಳ ಬಗ್ಗೆ ಯೋಚಿಸಬೇಕಲ್ಲ. ಏಕೆಂದರೆ ಇದು ಮೂರು ಗಂಟೆಗಳಲ್ಲಿ ಮುಗಿಯುವ ಸಿನಿಮಾ ಅಲ್ಲವಲ್ಲ. ಇಂಟರ್‌ವಲ್ ಇರುವುದಿಲ್ಲ. ಮುಕ್ತಾಯವಂತೂ ಬದುಕಿನಿಂದ ಮುಕ್ತವಾದಾಗಲೇ..
ಹಾಗೆಂದು ಪ್ರೇಮಿಸಿ ಮದುವೆಯಾಗಿ ಸುಖವಾಗಿರುವವರು ಇಲ್ಲವೆಂದಿಲ್ಲ. ಹಿಂದಿನ ಬೀದಿಯ ಸುರೇಶ, ಲಕ್ಷ್ಮಿ ಚೆನ್ನಾಗೇ ಇದ್ದಾರೆ. ಆಗಾಗ ಜಗಳವಾಡ್ತಾರೆ ಎನ್ನುವುದನ್ನು ಬಿಟ್ಟು.. ಮೊದಲೆಲ್ಲ ಶ್ರೀಮಂತರ ಮನೆ ಹುಡುಗಿಯಾಗಿ ತುಂಬಾ ಗಂಭೀರವಾಗಿ ವರ್ತಿಸುತ್ತಿದ್ದ ಲಕ್ಷ್ಮಿ ಈಗ ಸುರೇಶ ಕುಡಿದು ಬಂದರೆ ಬೀದಿಯಲ್ಲೇ ಮಾನ ಹರಾಜು ಹಾಕ್ತಾಳೆ. ಪೊರಕೆ ತೆಗೆದುಕೊಂಡು ಚಚ್ತಾಳೆ. ಆದರೆ ಪ್ರೇಮವಿವಾಹವೆಂದರೆ ಮೊದಲು ನೆನಪಾಗುವುದು ಕಾಸೀಮನದೇ. ಎರಡು ವರ್ಷಗಳ ಕೆಳಗೆ ಇದೇ ಬೀದಿಯಲ್ಲಿದ್ದ ಕಾಸೀಮನಿಗೂ ರೀತಾಳಿಗೂ ಲವ್ ಆಯ್ತು. ಯಾರು ಯಾರಿಗೆ ಕಾಳು ಹಾಕಿದರೆನ್ನುವುದು ಮುಖ್ಯವಲ್ಲ. ಪ್ರೇಮ ಗಟ್ಟಿಯಾಗಿ ಮದುವೆಯಾಗುವ ನಿರ್ಧಾರವನ್ನೂ ಮಾಡಿದರು. ಅವಳ ಮನೆಯವರು ದೊಡ್ಡ ಕುಳವಷ್ಟೇ ಅಲ್ಲ..ರಾಜಕೀಯವಾಗಿಯೂ ಪ್ರಭಾವವುಳ್ಳವರು. ಆಗ ಸ್ನೇಹಿತರು ನಾವೆಲ್ಲ ಅವನಿಗೆ ಸಪೋರ್ಟ ಮಾಡಿದ್ದಷ್ಟೇ ಅಲ್ಲದೇ ಇದೇ ಆಟೋದಲ್ಲಿ ಅವರನ್ನು ಗುಟ್ಟಾಗಿ ಎಲ್ಲೆಂದರಲ್ಲಿ ಓಡಾಡಿಸಿ ದೊಡ್ಡಬಳ್ಳಾಪುರಕ್ಕೆ ಕರೆದೊಯ್ದು ರಜಿಸ್ಟರ್ ಮದುವೆ ಮಾಡಿದೆವು. ಕಾಸೀಮ ಖುಷಿಯಾಗಿ ನಮಗಾಗಿ ಕೋಳಿ ಕತ್ತರಿಸಿದ್ದ. ಮೂರೇ ತಿಂಗಳಿನಲ್ಲಿ ನಡೆದ ಆ್ಯಕ್ಸಿಡೆಂಟಿನಲ್ಲಿ ಛಿದ್ರಛಿದ್ರವಾಗಿದ್ದ. ಅವಳ ತವರಿನವರೇ ಮಾಡಿಸಿದ್ದು..ಎಂಬ ಪುಕಾರು ಹಬ್ಬಿತು. ಅವನ ಪರವಾಗಿ ಮಾತನಾಡುವವರು ಯಾರಿಲ್ಲದೇ ಮುಚ್ಚಿಹೋಯಿತು. ಇದ್ದೊಬ್ಬ ತಾಯಿ ಅತ್ತು ಅತ್ತು ಸತ್ತು ಹೋದಳು. ರೀತಾ ಈಗ ಮತ್ತೊಂದು ಮದುವೆಯಾಗಿ ಸಿಂಗಾಪೂರಿನಲ್ಲಿದಾಳೆ. ಇದೆಲ್ಲ ನೆನಪಾದರೆ ಇನ್ನೂ ಮೈಮೇಲೆ ಮುಳ್ಳು ಬರುತ್ತದೆ.
ಮುಖ ಸಪ್ಪಗಿದ್ದುದನ್ನು ನೋಡಿ ಅಮ್ಮ “ಯಾಕೋ ಮಗಾ..ಎಂದಿನಂತಿಲ್ಲ. ಹುಶಾರಿಲ್ಲವಾ?” ಎಂದು ಕೇಳಿಯೇಬಿಟ್ಟಳು. “ತಲೆನೋವು.. ಹೊಟ್ಟೆ ಅಪ್ಸೆಟ್..”ಎಂದೇನೋ ಹೇಳಿದೆ. “ದಿನಾ ತಿಂಡಿ..ಊಟ..ಹೊರಗೆ ತಿಂದರೆ ಇನ್ನೇನಾಗುತ್ತೆ? ನಾಳೆಯಿಂದ ಮನೇಲೇ ತಿಂದು ಹೋಗು”ಎಂದು ಜೋರು ಮಾಡಿದಳು. ಹೇಳಿದಂತೆ ಮಾಡಿಯೂ ಬಿಟ್ಟಳು. ಮರುದಿನ ತಿಂದು ಹೆದರುತ್ತಲೇ ಹೊರಟೆ. ಪುಣ್ಯಕ್ಕೆ ಈ ವಿಷಯವನ್ನು ಯಾವ ಸ್ನೇಹಿತರ ಹತ್ತಿರವೂ ಬಾಯಿ ಬಿಟ್ಟಿರಲಿಲ್ಲ. ಗೊತ್ತಾಗಿದ್ದರೆ ಗಲಾಟೆ ಎಬ್ಬಿಸಿರೋರು. ಮದುವೆ ಮಾಡಿಸಿ ಮುಗುಸ್ತಿದ್ರು. ಇದೇ ಅವಕಾಶ ಜಗದೀಶ, ಅನ್ವರ್‌ಗೇನಾದರೂ ಸಿಕ್ಕಿಬಿಟ್ಟಿದ್ದರೆ ಬರೀ ಹುಡುಗೀನಲ್ಲ.. ಪೂರ್ತಿ ಮನೇನೆ ಬುಟ್ಟಿಗಾಕ್ಕೊಂಡು ನುಂಗಿ ನೀರು ಕುಡಿಯೋರು.. ಆದರೆ ನನಗೆ ನಿಯತ್ತು ಮುಖ್ಯ. ನಾವು ದುಡಿದದ್ದೇ ನಮಗೆ ದಕ್ಕಲ್ಲ. ಮೋಸ ಮಾಡಿ ನುಂಗಿದ್ರೆ ಡಬಲ್ ಕಕ್ಕಬೇಕಾಗುತ್ತೆ ಎಂದು ನಂಬಿದೋನು ನಾನು. ಈಗ ಈ ಮುಗ್ಧ ಹುಡುಗಿಯ ಪ್ರಣಯದ ಆಹ್ವಾನವನ್ನು ನಿಭಾಯಿಸುವ ಪರಿ ಹೇಗೆಂದು ಚಿಂತಿಸುತ್ತ ಮಾಮೂಲಿ ಸ್ಥಳಕ್ಕೆ ಬಂದೆ. ಸಮಯ ಮೀರಿದರೂ ಅವಳ ಸುಳಿವೇ ಇಲ್ಲ. ಕೊಂಚ ಹೊತ್ತು ಕಾಯ್ದದ್ದಾಯಿತು. ನಂತರ ಬೇರೆ ಬಾಡಿಗೆ ಹಿಡಿದು ಆಟೋ ಓಡಿತು. ಆದರೂ ಮನದಲ್ಲಿ ಕಳವಳ.. ಏನಾಯಿತೋ.. ಏಕೆ ಬರಲಿಲ್ಲವೆಂಬ ಆತಂಕ. ಅವಳ ಮನೆಗೊಮ್ಮೆ ಹೋಗಿ ಕೇಳಿ ಬರಲೇ? ಎಂದುಕೊಂಡವ ‘ಬೇಡ’ವೆಂದು ಗಟ್ಟಿ ನಿರ್ಧಾರ ಮಾಡಿದೆ. ಆದರೆ ನಿತ್ಯ ಅದೇ ಸಮಯದಲ್ಲಿ.. ಅದೇ ಸ್ಥಳದಲ್ಲಿ.. ಅವಳಿಗಾಗಿ ಕಾಯುವುದು ತಪ್ಪಲಿಲ್ಲ. ವಾರ ಕಳೆದರೂ ಅವಳ ಸುಳಿವಿಲ್ಲ. ಗೊಂದಲದ ಗೂಡಾದ ಮನದೊಂದಿಗೇ ಕೆಲಸ ಸಾಗಿತು.
ಎಂಟನೇ ದಿನ ಶಂಕರಮಠದ ಸ್ಟ್ಯಾಂಡಿನಲ್ಲಿ ನಿಂತಿದ್ದಾಗ ಹೊಚ್ಚಹೊಸ ಉಡುಗೆಯಲ್ಲಿ ಕಾಣಿಸಿದಳು. ಜೊತೆಗೊಬ್ಬ ಸ್ಫುರದ್ರೂಪಿ ಯುವಕನಿದ್ದ. ನನ್ನ ಆಟೋ ಕಂಡದ್ದೇ ಎಂದಿನಂತೆ ಬಂದು ಹತ್ತಿ ಕುಳಿತು “ಚಿಕ್ಕಪೇಟೆ”ಎಂದಳು. ಮುಖ ಕೊಂಚ ಸಪ್ಪಗಾಗಿತ್ತು. ಹಿಂದಿನಿಂದ ಬಂದ ಯುವಕ “ಹಾಗೆ ಹೇಳದೇ ಕೇಳದೇ.. ಮೀಟರ್ ಹಾಕಿಸದೇ ಆಟೋದಲ್ಲಿ ಕುಳಿತುಬಿಡಬಾರದು ಮಾನ್ಯ”ಎಂದು ಅನುನಯಿಸುವ ಧ್ವನಿಯಲ್ಲಿ ಹೇಳಿದ. ಅವಳೂ ಅಷ್ಟೇ ವೇಗವಾಗಿ “ಚಿಕ್ಕಪೇಟೆಯೊಳಗೆ ನಿನ್ನ ದೊಡ್ಡ ಕಾರು ಹೋಗುವುದೇ ಕಷ್ಟ. ಅದಕ್ಕೇ..”ಎಂದಳು. “ಇಂದಿನ ದಿನಗಳಲ್ಲಿ ಮಾತನಾಡದೇ..ಪರಾಮರ್ಶಿಸದೇ ಯಾರನ್ನೂ ನಂಬಬಾರದು. ಅದರಲ್ಲೂ.. ಕೆಲಸದವರನ್ನು, ಆಟೋದವರನ್ನು..”ಎಂದವ ನನ್ನನ್ನು ನೋಡಿ ನಾಲಿಗೆ ಕಚ್ಚಿಕೊಂಡ. ‘ಮಗನೇ.. ನಾನು ಬಿಟ್ಟದ್ದಕ್ಕೇ ನಿನಗೆ ಹುಡುಗಿ ಸಿಕ್ಕಿರೋದು..’ಎಂದುಕೊಂಡೆ. ಆದರೂ ಅವನತ್ತ ತಿರುಗಿ “ಹೌದು ಸರ್, ಎಲ್ಲರೂ ಒಳ್ಳೆಯವರಿರಲ್ಲ. ಹಾಗೆಂದು ಎಲ್ಲರೂ ಕೆಟ್ಟವರೂ ಆಗಿರಲ್ಲ. ಸ್ವಲ್ಪ ಸಲಿಗೆ ಕೊಟ್ಟರೆ ಸಾಕು..ಯಾಮಾರಿಸಿ ಹೊತ್ಕೊಂಡು ಹೋಗೋರೂ ಇರ್ತಾರೆ. ಹಾಗೆ ತಿಳಿಹೇಳಿ ಸರಿದಾರಿಗೆ ಮರಳಿಸೋರೂ ಇರ್ತಾರೆ. ಯಾಕೇಂದ್ರೆ ಇದು ಸಿನಿಮಾ ಅಲ್ಲ.. ಜೀವನ ಸಾರ್. ಯಾವುದೇ ಕಟ್, ರೀಟೇಕ್‌ಗಳಿಲ್ಲದೇ ಸಾಗಬೇಕು. ಹೇಳ್ಕೊಡೋರಿಲ್ಲ.. ಮಾಡಿ ತೋರಿಸೋರಿಲ್ಲ. ಮ್ಯಾಲಿರೋ ಡೈರೆಕ್ಟ್ರು ನಿರ್ಧಾರ ನಮಗೆ ಬಿಟ್ಟಿದಾನೆ. ಒಮ್ಮೆ ತಪ್ಪು ಮಾಡಿದ್ರೂ.. ಕಾಲು ಜಾರಿದ್ರೂ ಬಾಳು ಮೂರಾಬಟ್ಟೆ ಆಗೋಯ್ತದೆ. ಅದಕ್ಕೆ ಹತ್ತು ಸರ್ತಿ ಯೋಚನೆ ಮಾಡಿ ನಮ್ಮನ್ನ ನಂಬ್ಕೊಂಡಿರೋರನ್ನ.. ಹೆತ್ತವರನ್ನ ನೋಯಿಸದಂತೆ ವಿವೇಚನೆಯಿಂದ ನಿರ್ಧಾರ ತಗಂಬೇಕಲ್ಲವಾ ಸಾರ್..”ಎನ್ನುತ್ತ ತಿರುಗಿ ಆಟೋ ಓಡಿಸಿದೆ.
ಅಚ್ಚರಿಯಾದಂತೆ..ಖುಷಿಯಾದಂತೆ ಕಂಡ ಯುವಕ “ಭೇಷ್ ಕಣಪ್ಪ. ಆಟೋ ನಡೆಸೋರು ಕೂಡಾ ಇಷ್ಟು ಯೋಚಿಸಿ ವಿವೇಚನೆಯಿಂದ ಮಾತಾಡ್ತಾರೆ ಅಂದ್ರೆ ದೇಶಕ್ಕೆ.. ನಿಮಗೆ ಒಳ್ಳೆಯ ಭವಿಷ್ಯವಿದೆ. ಎಲ್ಲ ಯುವಕರಿಗೂ ಇಷ್ಟು ಬುದ್ಧಿ ಬಂದ್ಬಿಟ್ರೆ ಉದ್ಧಾರ ಆಗ್ತಾರೆ. ನಾನು ಮಾನ್ಯಂಗೆ ಸುಮ್ಸುಮ್ನೆ ಹೇಳ್ತಿಲ್ಲ. ಇವಳನ್ನ ಮದುವೆಯಾಗೋ ಹುಡುಗ ನಾನು. ಇವಳಣ್ಣನ ಸ್ನೇಹಿತ. ಮುಂದಿನ ತಿಂಗಳೇ ಮದುವೆ. ಇವಳ ಅಣ್ಣನೂ ಬರ್ತಾ ಇದಾನೆ. ಮದುವೆಗೆ ಬಟ್ಟೆ ತೆಗೀಬೇಕು. ರುಕ್ಮಿಣಿ ಸಿಲ್ಕ ಹೌಸ್‌ನೋನು ಇವಳ ತಂದೆಯ ಕ್ಲೆಂಟು. ಹೀಗಾಗಿ ದೊಡ್ಡೋರೆಲ್ಲ ಅಲ್ಲಿಗೆ ಹೋಗಿದಾರೆ. ನಾವೂ ಹೋಗ್ತಾ ಇದೀವಿ. ನಿಂಜೊತೆ ಮಾತಾಡಿ ತುಂಬಾ ಸಂತೋಷ ಆಯ್ತು ಕಣಪ್ಪ”ಎಂದ. “ಸಂತೋಷ ಸರ್, ಹ್ಯಾಪಿ ಮ್ಯಾರೀಡ್ ಲೈಫ್ ಅಂತ ಮುಂಚಿತವಾಗೇ ಹೇಳ್ತಿದೀನಿ”ಎನ್ನುತ್ತ ಚಿಕ್ಕಪೇಟೆ ಸರ್ಕಲ್ ಬಳಿ ಆಟೋ ನಿಲ್ಲಿಸಿದೆ. ಅವಳು ಇಳಿಯುವದರಲ್ಲಿ ಮಗ್ನಳಾದಂತೆ ಕಂಡರೂ ಮುಖ ಚಿಕ್ಕದಾಗಿತ್ತು. ಇನ್ನೂರರ ನೋಟಿಗೆ ಚಿಲ್ಲರೆ ಕೊಡುತ್ತ “ಮೇಡಮ್, ಹುಡುಗ ನಿಜವಾಗ್ಲೂ ಚೆನ್ನಾಗಿದಾರೆ. ನಿಮ್ಮ ಅಂತಸ್ತಿಗೆ ತಕ್ಕನಾಗಿದಾರೆ. ನಿಮ್ಮನ್ನು ಪ್ರೀತಿಯಿಂದ.. ಕಾಳಜಿಯಿಂದ ನೋಡ್ಕೋತಾರೆ..”ಎಂದೆ. ತಲೆ ಎತ್ತಿ ಮೆಲ್ಲನೆ ಮುಗುಳ್ನಕ್ಕಾಗ ಕಂಗಳಲ್ಲಿ ಬೆಳಕು ತೂರಿ ಬಂತು. “ಹೌದೇ?”ಎಂದು ಅವನತ್ತ ನೋಡುತ್ತ ಕೇಳಿದಳು. ಯಾರೋ ಅತ್ಯಾಪ್ತರ…ಆತ್ಮೀಯ ಸ್ನೇಹಿತರ.. ಅಭಿಪ್ರಾಯ ಕೇಳುವ ಪರಿ ಅಲ್ಲಿತ್ತು. ನಾನು “ಖಂಡಿತವಾಗಿಯೂ ನಿಜ ಮೇಡಮ್. ಜೋಡಿ ತುಂಬ ಮುದ್ದಾಗಿದೆ. ಒಳ್ಳೆ ಸಿನಿಮಾ ಹೀರೊ..ಹೀರೋಯಿನ್ ಥರಾ. ಈ ಸಿನಿಮಾ ಹಿಟ್ ಆಗಿ ನೂರಾರು ವರ್ಷ ಬಾಳಲಿ”ಎಂದೆ. ಅವಳ ಕಂಗಳ ಬೆಳಕು ನೂರ್ಮಡಿಸಿ ವಿಶ್ವಾಸದಿಂದ ಅವನ ಕೈ ಹಿಡಿದಳು. ಅವನೂ ಪ್ರೀತಿಯಿಂದ ನನ್ನತ್ತ ನೋಡುತ್ತ “ನಿನಗೂ ಬೇಗ ಒಳ್ಳೆಯ ಹೀರೋಯಿನ್ ಸಿಗಲಿ. ಚೆನ್ನಾಗಿ ಬಾಳಿ”ಎಂದ. ಕೈ ಮಾಡುತ್ತ ಇಬ್ಬರೂ ಹೊರಟರು. ಟ್ರಾಫಿಕ್ ಪೋಲಿಸ್ ಆಗಲೇ ಅವಸರಿಸುತ್ತ ಸೀಟಿ ಹೊಡೆಯುತ್ತಿದ್ದ. ಅವಳ ಕಂಗಳಲ್ಲಿ ತೆಳುವಾದ ನೀರಿನ ಪಸೆ ಇತ್ತೇನೋ..ಎಂಬ ಭ್ರಮೆ ನನಗೆ. ಅಂದು ಅವಳು ನನ್ನ ಕೈಗೆ ಮುತ್ತಿಟ್ಟು ಕೆನ್ನೆ ತಟ್ಟಿದ್ದನ್ನು ಜ್ಞಾಪಿಸಿಕೊಳ್ಳುತ್ತಾ.. ಇಂದು ಅವನೊಡನೆ ನಗುತ್ತ ಹೊರಟದ್ದನ್ನು ನೋಡಿ.. ಇವಳ ಪ್ರೀತಿ ನಿಜವಾಗಿತ್ತೋ ಇಲ್ಲಾ ಬರೀ ಆಕರ್ಷಣೆಯೋ ಎಂಬ ಸಂಶಯ ಕಾಡಿತು.
ಹೋಗಲಿ ಸುಖಾಂತ್ಯವಾಯಿತಲ್ಲ ..ಎಂಬ ಸಮಾಧಾನದೊಂದಿಗೆ ತಿರುಗಿದೆ. ತಲೆಯೆಲ್ಲ ಹಗುರಾದಂತೆ.. ಯಾವುದೋ ಬಂಧನದಿಂದ ಕಳಚಿ ಕೊಂಡಂತೆ ಭಾಸವಾಯಿತು. ಮಹಾಲಕ್ಷ್ಮಿ ಲೇಔಟಿನ ಬಾಡಿಗೆಯೊಂದು ಸಿಕ್ಕಿತು. “ರ‍್ರ..”ಎಂದು ಹೊರಟಾಗ ಹಿಂದೆ ಕುಳಿತಿದ್ದ ಅಜ್ಜಿ “ನನಗೆ ಸೊಂಟ ನೋವು. ವಸಿ ನಿಧಾನಕ್ಕೆ ಓಡ್ಸು ಮಗಾ..ಒಳ್ಳೆ ಹೆಂಡ್ತಿ ಸಿಗ್ತಾಳೆ”ಎಂದಳು. ಮುಗುಳ್ನುತ್ತ ಮೆಲ್ಲನೆ ಓಡಿಸುವಾಗ ಅವನ ಹರಕೆಯೂ ಜ್ಞಾಪಕಕ್ಕೆ ಬಂತು. ಹೌದೂ.. ನನ್ನ ಹೀರೋಯಿನ್ ಹೇಗಿರಬೇಕು? ಮಾನ್ಯನಂಥ ಆಧುನಿಕ ಹುಡುಗಿ ಬೇಡ. ಅಮ್ಮನಿಗೆ.. ನಮ್ಮ ಏರಿಯಾಕ್ಕೆ ಒಗ್ಗುವಂತಿರಬೇಕು ಎನಿಸಿದಾಗ ನೂರಾರು ಮುಖಗಳು ಮನದಲ್ಲಿ ಪರೇಡ್ ಮಾಡಿದರೂ ಸ್ಥಿರವಾಗಿ ನಿಂತದ್ದು ಒಂದೇ ಮುಖ. ಹೌದು ನೀಲಾ.. ಅಷ್ಟು ಕೆಟ್ಟದಾಗೇನೂ ಇಲ್ಲ. ಅಮ್ಮನಿಗೆ ತಕ್ಕಂತಿದಾಳೆ. ಅತ್ತೆ..ಸೊಸೆ ಜೋಡಿ ಹೊಂದುತ್ತೆ. ಜಗಳವಾಡಿದರೂ ‘ನೀನೇ ಆರಿಸಿದ ಸೊಸೆ’ ಎಂದು ಹೇಳಿಬಿಡಬಹುದು. ಬಾಡಿಗೆ ಇಳಿಸಿ ಮನೆಯ ಮುಂದೆ ಬಂದಾಗ ಅತ್ತೆ, ಸೊಸೆ ಸೇರಿ ಅಕ್ಕಿ ಆರಿಸುತ್ತಿದ್ದರು. “ಮಧ್ಯಾಹ್ನ ಊಟಕ್ಕೆ ಮನೆಗೇ ಬರ್ತೀನಮ್ಮ. ಬಸ್ಸಾರು ಮಾಡಿಡು. ಹಾಗೇ.. ಸೀರೆ ಕೊಂಚ ಕೆಳಗೆ ಉಟ್ಕೊಂಡ್ರೆ ಚೆನ್ನಾಗಿರುತ್ತೆ ಅಂತ್ಹೇಳು ನಿನ್ನ ಸೊಸೆಗೆ. ಎಣ್ಣೆ ಸ್ವಲ್ಪ ಕಡಿಮೆ ಹಾಕ್ಕೊಂಡ್ರೆ ಕೂದಲು ಹಾರಾಡ್ತಾ ಚೆನ್ನಾಗಿ ಕಾಣುತ್ತೆ ಅನ್ನು. ನಿಮ್ಮಣ್ಣಂಗೆ ಫೋನ್ ಮಾಡಿ ಮದ್ವೆ ವಿಷ್ಯ ಮಾತಾಡಕ್ಕೆ ಕರೆಸು”ಎನ್ನುತ್ತ ಅವಳತ್ತ ಕುಡಿನೋಟವನ್ನೆಸೆದೆ. ಕೈಯಲ್ಲಿದ್ದ ಅಕ್ಕಿ ತುಂಬಿದ ಮರವನ್ನು ಎತ್ತಿ ಕುಕ್ಕಿದವಳೇ “ಹೋ..ಗ್ ಮಾಮಾ” ಎನ್ನುತ್ತ ನಾಚಿ ಕೆಂಪಾಗಿ ಒಳಗೋಡಿದಳು. ಮೀಸೆಯ ಮರೆಯಲ್ಲೇ ನಕ್ಕೆ. ಅಮ್ಮನ ಮುಖ ಅರಳಿ ಹೂವಾಗಿತ್ತು.
****************************************
ಸುಂದರವಾದ ನಿರೂಪಣೆಯ ಶೈಲಿ, ಕಥಾವಸ್ತು ವಾಸ್ತವ್ಯಕ್ಕೆ ಹತ್ತಿರವಿದೆ. ಮುಕ್ತಾಯ ಭಲೇ,ಓಪ್ಪುವಂಥದ್ದು, ಇದು ನನ್ನ ಅನಿಸಿಕೆ
ಧನ್ಯವಾದಗಳು.. ವಿಭಾ
ಮಧುರಾ ಕರ್ಣಮ್.