ನನ್ನ-ಅವಳು
ಸಿದ್ಧರಾಮ ಕೂಡ್ಲಿಗಿ
ನನ್ನ ಅವಳು
ನನ್ನೆದೆಯೊಳಗಿನ
ಪುಟ್ಟ ಹಣತೆ
ನೋವು, ನಿರಾಸೆ, ದು:ಖಗಳಾದಾಗಲೆಲ್ಲ
ಪಟ್ಟನೆ ಬೆಳಗಿ
ಕತ್ತಲೆಯ ದೂಡುವ
ಒಳಬೆಳಕು
–
ನನ್ನ ಅವಳು
ಸಾಗರದ ಅಲೆಗಳನ್ನೆಲ್ಲ
ತನ್ನ ಹೆರಳೊಳಗೆ
ಸುರುಳಿಯಾಗಿಸಿಕೊಂಡು
ನನ್ನೆದೆಯ ತೀರಕೆ
ಒಲವಿನ ಮುತ್ತಿಕ್ಕುವ
ತಣ್ಣನೆಯ ಸಿಂಚನ
–
ನನ್ನ ಅವಳು
ಪ್ರೇಮದ ಹಸಿರ ಮೇಲೆ
ಒರಗಿ
ಆಗಸವ ನೋಡಿದಾಗಲೆಲ್ಲ
ಕಾಣಸಿಗುವ
ಬೆಳ್ಮೋಡದ ಸುಂದರ ನಗೆ
–
ನನ್ನ ಅವಳು
ದಣಿವಾದಾಗಲೆಲ್ಲ
ಮೈಮನದ ತುಂಬ
ಜುಳುಜುಳುನೆ ಹರಿದು
ಪ್ರೀತಿಯ ಕಚಗುಳಿಯಿರಿಸಿ
ನಕ್ಕುನಲಿಸುವ
ಜೀವ-ನದಿ
–
ನನ್ನ ಅವಳು
ನನ್ನೆದೆಯ ಭಾವಗಳ
ಗಿರಿಶಿಖರದ
ಉತ್ತುಂಗಕ್ಕೇರಿ
ನಿಂತಾಗ
ಪ್ರೀತಿಯ ಅಗಾಧತೆಯ
ತೋರಿ
ಬೆನ್ನ ಹುರಿಗುಂಟ
ಹರಿವ ತಣ್ಣನೆಯ ಪುಳಕ
–
ನನ್ನ ಅವಳು
ಎದೆಯ ಕಿಟಕಿಯಿಂದ
ಇಣುಕಿದಾಗಲೊಮ್ಮೆ
ಕಣ್ಣೋಟದಗುಂಟ
ಹರಿದುಬಂದು
ಮೈದಳೆದು ನಿಲುವ
ಪ್ರೇಮವನೇ ಹೊತ್ತ
ಬೆಳದಿಂಗಳ ಬಾಲೆ
***********************************
–
Very nice
Very nice Anna