ನಿರುತ್ತರ

ಪುಸ್ತಕ ಸಂಗಾತಿ

ನಿರುತ್ತರ

ನಿರುತ್ತರ-ಕವನ ಸಂಕಲನ
ಪ್ರಕಾಶಕರು-ದೀಪ್ತಿ ಬುಕ್ ಹೌಸ್ ಮೈಸೂರು
ಪುಟಗಳು-೧೧೨
ಬೆಲೆ-೧೦೦ರೂ

ಅದೇ ಹಳೆಯ ಒಲೆಗೆ

ಹೊಸ ಉರಿಯ ಹಾಕಿ

ಪ್ರತಿದಿನ ನಾವೀನ್ಯದ ಬೆಳಕು

ತೆರೆದಿದೆ ಬೆಳಕಿನ ಬದುಕು.

ಕವಿತೆ ಹುಟ್ಟುವುದೇ ಒತ್ತಡದಿಂದ ಎನ್ನುವುದು ನನ್ನ ನಂಬಿಕೆ.

ಎಲ್ಲಾ ಸಾಂಗವಾಗಿ ಸಾಗುತ್ತಿದ್ದಾಗ ಸಾಲೊಂದೂ ಹೊಳೆಯದೆ

ಕವಿತೆಯೆಂಬ ಈ ಚಂಚಲೆಯನ್ಮು ಹುಡುಕಿ ಗಾಬರಿಯಾಗುವುದು ನನಗೆ ಆಗಾಗ ಘಟಿಸುವ ಸಂಗತಿ.

ಈ ಒತ್ತಡದಿಂದ ಹುಟ್ಟಿದ್ದನ್ನು ಪ್ರಮಾಣಬದ್ದವಾಗಿ ಬೆಳೆಸಿ ಅಕ್ಷರಗಳಲ್ಲಿ ಬೆಳೆಯಗೊಟ್ಟರೆ ಕವಿಯಾಗಿ ಗೆದ್ದಂತೆ.

ಒಲಿದಂತೆ ಹಾಡುವೆ ಎನ್ನುವ ನನ್ನ ಮೊಂಡುವಾದಕ್ಕೆ ಹಿರಿಯರೊಬ್ಬರು ಏನನ್ನೇ ಮಾಡಿದರೂ ವೃತ್ತಿಪರಳಂತೆ ಮಾಡು.ಪ್ರೋಫೆಶನಲಿಸಮ್ ರೂಢಿಸಿಕೊ ಎನ್ನುವಾಗೆಲ್ಲ ಕವಿತೆಯಂತಹ ಮೆದು ಮೃದುಭಾವಕ್ಕೆ ವೃತ್ತಿಯೆಂಬ ಒರಟುತನವನ್ನು ಎಂದಾದರೂ ಹೊಂದಿಸಬಹುದೇ ಎನಿಸಿ ಅವರೆದುರುಗೆ ಹುಹು ಅಂತಂದು ಮತ್ತದೆ ಒಲಿಯುವ ಹಾಡುವ ಅಕ್ಷರ ಗಳಿಗಾಗಿ ಕಾಯುತ್ತಿದ್ದೆ.

ಈಗ ಐದು ವರ್ಷಗಳ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಪರಿಚಿತರಾದ ಪುಟ್ಟ ಸುಂದರಿ ಸಂಗೀತಾ ರವಿರಾಜ್ ತನ್ನ  ಕವನ ಸಂಕಲನ ನಿರುತ್ತರವನ್ನು ನನಗೆ ಕಳಿಸಿದ್ದಾರೆ.

ಇಲ್ಲಿನ ಕವಿತೆಗಳ ಕುರಿತು ಬರೆಯಬೇಕೆಂದರೆ ನನಗೆ ಆ ವೃತ್ತಿಪರತೆಯ ನೆನಪಾಯಿತು.

ಇಲ್ಲಿನ ಎಲ್ಲ ಕವಿತೆಗಳೂ ಸಾಧು,ಮೃದು.

ಎಲ್ಲೂ ಘೋಷವಿಲ್ಲ.ರೋಷವಿಲ್ಲ ಕ್ರಾಂತಿಯಿಲ್ಲ,ಭೀತಿಯೂ ಈ ಕವಿತೆಗಳಿಗಿಲ್ಲ.

ಇದೇನಿದ್ದರೂ ಪ್ರಳಯ ಸ್ವರೂಪಿ‌ಮಳೆ ಬಂದ ಮೇಲೆ  ಮೆಟ್ಟಿಲೇರುವ ಪುಟ್ಟ ಗುಬ್ಬಿಯಂತವು.

ಇಲ್ಲಿನ ಮೊದಲ ಪದ್ಯ ನೇಪಥ್ಯ ಬಹುಶಃ ತರಂಗದಲ್ಲಿ ಓದಿದ್ದೆ ಅನಿಸಿತು.

ಕತ್ತರಿಸಿ ಉತ್ತರಿಸಿ ಅರೆದು ತುರಿದು ಬಾಡಿಸಿ ಬೇಯಿಸಿ ಕುದಿಸಿ ಉಣ್ಣುವ ಅಡುಗೆ ಬರೀ ಅಷ್ಟರಿಂದಲೇ ರುಚಿಯಾಗ್ತದೆಯಾ.

ಇಲ್ಲ.

ಅದಕ್ಕೆ ಚಿಟಿಕೆ ಇಂಗು ಸಾಸಿವೆ ಕರಿಬೇವಿನ‌ ಒಗ್ಗರಣೆ ಬೇಕು.ಹೀಗೆ ಥರೆವಾರಿ ವಿಧಾನಗಳಲ್ಲಿ ತಯಾರಾದ ಅಡುಗೆ ಮುಗಿಯುವುದು ಕೊನೆಯ ಒಗ್ಗರಣೆಯಿಂದ.

ಆದರೆ  ಒಗ್ಗರಣೆಯ ಆ ಕರಿಬೇವು ಮೆಣಸು ಸಾಸಿವೆ ಗಳು ಊಟದಲ್ಲಿ ಮೈಲಿಗೆ.

ಅವನ್ನು ಎತ್ತಿಟ್ಟೇ ಉಣ್ಣುವುದು.

‘ತುರ್ತಿನ ದಾರಿಯಲ್ಲಿ ಹೊರಟವರಿಗೆ

ಗಮ್ಯ ತಿಳಿಯಲೇ ಇಲ್ಲ. ‘

ಈ ಸಾಲುಗಳು ಅದನ್ನು ಧ್ವನಿಸುತ್ತವೆ.

ಆದರೆ ಅದಕ್ಕೆ ಒಗ್ಗರಣೆ ಬೇಸರಿಸಿಕೊಂಡಿದೆಯೇ.

ಇಲ್ಲ.

‘ತನ್ನ ಬೆಲೆ ನೆಲೆಯ

ತಾನೇ ಭದ್ರಪಡಿಸಿಕೊಂಡಿದೆ

ನಮ್ಮ ಕುಬ್ಜರಾಗಿಸಿದೆ.’

ನನ್ನ ದೇವರ ಮನೆಯಲ್ಲೊಂದು ಡುಮ್ಮಣ್ಣ ಜೇಡ ಪ್ರತಿ ದಿನವೂ ಫೋಟೋ ಹಿಂದೆ ಅವುಚಿರುತ್ತದೆ.

ಅದೆಷ್ಟೋ ದೊಡ್ಡದಾದ ಬಾಗಿಲು ಹಿಡಿಕೆ ಫೋಟೋ ಎಲ್ಲವನ್ನೂ ತನ್ನ ಎಳೆಯಿಂದ ಬಂಧಿಸಿ ಎಲ್ಲವನ್ನೂ ಒಂದಾಗಿಸಿ ತನ್ನ ಹಸಿವಿಗೆ ಸಿಗಬಹುದಾದನ್ನು ಕಾಯುತ್ತದೆ.ಆದರೆ ನಾನು

ಪ್ರತಿದಿನವೂ ಮೆಲ್ಲಗೆ ಅದನ್ನು ಪೊರಕೆಯೊಳಗೆ ಸೇರಿಸಿ ಆಚೆಕಡೆ ಬಿಟ್ಟು ಬರ್ತಿನಿ.ಮಾರನೆ ಬೆಳಗು ಅದಲ್ಲೇ ಪ್ರತ್ಯಕ್ಷ.

ಸಂಗೀತ ಜೇಡನ ಸ್ವಗತ ಆಲಿಸಿದ್ದಾರೆ.

‘ನಿಮ್ಮ ಗೋಡೆಯ ತುಂಬಾ

ನನ್ನ ಬಲೆಯ ಹಾಕಿ

ಗಲೀಜು‌ಮಾಡುವ

 ಉಮೇದಿಲ್ಲ ನನಗೆ’

ಅನ್ನುತ್ತಿದೆ ಅವರ ಜೇಡ.

‘ಮೂಲೆಮೂಲೆಯಲ್ಲೂ ನನ್ನ ಕರಾಮತ್ತು

ಬೇಕಿದೆ ನನಗೆ ಈ ದಿನದ ತುತ್ತು’

ಆದರೆ ನಾವು ಹಾಗೇ ಬಿಡ್ತೀವಾ.ಗುಡಿಸಿ ಸೆಲಿಬೆ ತೆಗೆದು ಅದರ ಅರಮನೆಯನ್ನು  ನಿಮಿಷ ಮಾತ್ರದಲ್ಲಿ ಇಲ್ಲವಾಗಿಸುತ್ತೇವೆ.ಅದು ನಮ್ಮ ಅರ್ಜು.

ಅವರ ಜೇಡ ಕೊನೆಯಲ್ಲಿ ಹೇಳುತ್ತಿದೆ.

“ಬದುಕು ಸುಮ್ಮನೆ ಅಲ್ಲ

ನೇಯಬೇಕು

ತದನಂತರ ನೋಯಬೇಕು”

ಇದು ಬಹುಶಃ ಆ ಜೇಡದ ಮನೆಯನ್ನು ಗುಡಿಸಿ ತೆಗೆದ ಹೆಣ್ಣಿನ ಮಾತೂ ಅಲ್ಲವೇ.?

ಇದು ಬೆಸ್ಟು ಪದ್ಯ ಈ ಸಂಕಲನದಲ್ಲಿ.

ನಾನು ಬದುಕಿಸುತ್ತೇನೆ  ಎನ್ನುತ್ತಾ ದಿನವೂ ಆಚೆ ಬಿಡುವ ಆ ಜೇಡಕ್ಕೆ ನಾನು ಉಪಕರಿಸುತ್ತಿದ್ದೇನೆಯೇ.?

ಯಾಕೋ ನನ್ನ ಬಗ್ಗೆ ನನಗೇ ಅಸಮಧಾನ ಎನಿಸುತ್ತಿದೆ.

‘ಬಡವಿಯ ಸ್ವಗತ’ದ ಆರಂಭ ಬಹಳ ಸಾಧಾರಣ ಅನಿಸಿ ಇದು ಕವಿತೆಯಾಗಬಾರದಿತ್ತು ಎಂದುಕೊಳ್ಳುವಾಗಲೇ ಕೊನೆಯಲ್ಲಿ ಛಕ್ಕನೆ ಕಣ್ಣು ತುಂಬುವಂತಹ ಸಾಲುಗಳನ್ನಿಟ್ಟು ಗೆಲ್ಲುತ್ತಾರೆ ಕವಯಿತ್ರಿ.

ಮಗು ಬಹಳ ಹೊತ್ತಿಂದ ಮಲಗಿದೆ.ಕೂಲಿಯಿಂದ ಓಡೋಡಿ ಬಂದ ಅಮ್ಮ ಅಯ್ಯೋ ಹಸಿವಾಯ್ತೇನೋ ಅಂತ ಎಬ್ಬಿಸ ಹೊರಟವಳು ಕ್ಷಣ ಕಾಲ ತಡೆಯುತ್ತಾಳೆ.

“ಹಾಲಿಲ್ಲದ ಮನೆಯಲ್ಲಿ

ನಿನ್ನನೇಳಿಸಿ ಏನು ಮಾಡಲಿ ಕಂದಾ

ಮತ್ತೆ ಮಲಗು ಮಗುವೇ

ಜೋ ಜೋಜೋ ಜೋ’

ಸಂಗೀತ ನಿತ್ಯವನ್ನೂ, ದಿನಚರಿಯನ್ನು ಕವಿತೆಯಾಗಿಸಿದ್ದಾರೆ.ಇಲ್ಲಿನ ಹೆಚ್ಚು ಕವಿತೆಗಳು ಮಳೆಯನ್ನೇ ಹಾಡಿವೆ.ಮಗುವನ್ನು ತೂಗಿವೆ.

ಮನೆ ಮಲಗಿದ್ದಾಗ ತಾನೆದ್ದು ಒಲೆಗೆ ಬೆಂಕಿ ಮಾಡುತ್ತಾ ಮೆಲ್ಲಗೆ ಹೊಗೆಯಾಡಿ ಉರಿದಿವೆ.

ಮುಟ್ಟಿದರೆ ಮುನಿ ಯನ್ನು ಮುಟ್ಟಿ ತಾನೂ ಹೀಗೇ ಅಲ್ಲವೇ ಅಂದುಕೊಂಡು ಸುಮ್ಮನೆ ಒಂದು ಘಳಿಗೆ ಮೌನವಾಗಿವೆ.

ಯಾರ ಉಸಾಬರಿ ಇಲ್ಲದೆ ನೆಲದಲ್ಲಿ ಮಲಗಿರುವ ಈ ಮುದ್ದು ಮುಳ್ಳುಗಿಡ ಇವರಕ್ಕರೆಗೆ ಬಿದ್ದು

‘ಒಂದು ಕ್ಷಣ ಹಿಂತಿರುಗಿ ನೋಡುವ ಚಿತ್ತ

ಮುಟ್ಟದೆ ಮುಂದೆ ಹೋಗಲು ಬಿಡದ ಸಂತ’

ಆಗಿದೆ.

ಪತ್ತೆ ಇಲ್ಲದೇ ಇವರೊಟ್ಟಿಗೆ ಠು ಬಿಟ್ಟ ಕವಿತೆ ಮತ್ತೆ ವೈಯಾರವಾಡಿಕೊಂಡು ಇವರ ಬಳಿ ಬಂದಿದೆಯಂತೆ.

‘ಅಗಣಿತ ಪ್ರೀತಿ ತಾರೆ ಈ ಕವಿತೆ’ ಎನ್ನುವ ಸಂಗೀತ ಕೊರೊನಾ ಕಾಲದ ದುರ್ಭರ ಗಳನ್ನು ಕವಿತೆಯಾಗಿಸಿ ನೊಂದಿದ್ದಾರೆ.

ಸಮಕಾಲೀನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರ ಮುನ್ನುಡಿಯಿರುವ ಈ ಸಂಕಲವನ್ನು ದೀಪ್ತಿ ಬುಕ್ ಹೌಸ್ ಮೈಸೂರು ಹೊರತಂದಿದೆ.

ಒಟ್ಟು ಐವತ್ತು ಕವಿತೆಗಳು, ನೂರಹನ್ನೆರಡು ಪುಟಗಳಿರುವ ಈ ಸಂಕಲನದ ಮುಖಬೆಲೆ ನೂರು ರೂಪಾಯಿ.

ತನ್ನ ವ್ಯಾಪ್ತಿಯಲ್ಲಿ ದಕ್ಕಿದ್ದನ್ನೂ ಸಿಕ್ಕಿದಷ್ಟನ್ನು ಅಕ್ಷರವಾಗಿಸಿ ಅಭಿವ್ಯಕ್ತಿಸಿ ನಿರಾಳವಾಗಿದ್ದಾರೆ ಸಂಗೀತ.

ಮುಗ್ಧ ಭಾವದ ಈ ಪದ್ಯಗಳು ಓದುಗರ ಮನಸ್ಸನ್ನೂ ಮೃದುವಾಗಿಸುವುದರಲ್ಲಿ ಸಂದೇಹವಿಲ್ಲ.

*****************************************

ನಂದಿನಿ ಹೆದ್ದುರ್ಗ

3 thoughts on “ನಿರುತ್ತರ

  1. ಕವಿತೆಗಳ ಬಗ್ಗೆ ಪ್ರೀತಿ ತುಂಬಿದ ಮಾತುಗಳು, ಎಷ್ಟೊಂದು ಅಪ್ಯಾಯಮಾನವಾಗಿದೆ
    ಧನ್ಯವಾದಗಳು ಅಕ್ಕ ನಂದಿನಿ

  2. ಸಂಗೀತ ಅಭಿನಂದನೆಗಳು. ಕಾವ್ಯಾನ ಹೀಗೇ ಸಾಗಲಿ. ನಂದಿನಿ ಚೆನ್ನಾಗಿ ಬರೆದಿರುವಿರಿ. ಅಭಿನಂದನೆಗಳು

Leave a Reply

Back To Top