ಅಂಕಣ ಬರಹ

ನಿರ್ಮಲಾ‌ ಶೆಟ್ಟರ್

ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ

ಅದರ ವ್ಯಾಪ್ತಿ ಜಗದಗಲ

ಪರಿಚಯ:


ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕಾವ್ಯಸಂಕಲನ ಬಿಡುಗಡೆಗೊಳ್ಳಲಿದೆ. ೨೦೧೭ರಲ್ಲಿ ಅನುಪಮಾ ನಿರಂಜನ ಕಥಾಬಹುಮಾನ, ೨೦೧೯ರ ಪ್ರಜಾವಾಣಿ ಸಂಕ್ರಾಂತಿ ಲಲಿತಪ್ರಬಂಧ ಬಹುಮಾನ ಪಡೆದಿರುತ್ತಾರೆ.

ಕಥೆ ಮತ್ತು ಕವಿತೆಗಳನ್ನು ಯಾಕೆ ಬರೆಯುತ್ತೀರಿ?

ಉತ್ತರ ತುಸು ಕಷ್ಟ ಆದರೂ ಹೇಳಬೇಕೆಂದರೆ, ಹೇಳಲಾಗದ ನೋವುಗಳನ್ನು, ಬಿಚ್ಚಿಡಲಾಗದ ಗುಟ್ಟುಗಳನ್ನು ಹೇಳಲು ಕವಿತೆ ಮತ್ತು ಕಥೆ ಒಳ್ಳೆಯ ಮಾಧ್ಯಮ. ಎಲ್ಲ ನೋವುಗಳಿಗೆ ಧ್ವನಿಯಾಗಿ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತೇನೆ.

ಕಥೆ,ಕವಿತೆ ಹುಟ್ಟುವ ಕ್ಷಣ ಯಾವುದು?

ಇಂಥದೇ ಘಳಿಗೆ ಅಥವಾ ಸಮಯ ಅದಕ್ಕಾಗಿ ನಿಗದಿಯಾಗಿರುವುದಿಲ್ಲ. ಒಮ್ಮೊಮ್ಮೆ ಕಾಡಿದ ಮತ್ತು ಕಾಡಿಸಿಕೊಂಡ ವಿಷಯ, ಘಟನೆಗಳು, ಚಿತ್ರಗಳು ಸರೋರಾತ್ರಿಯಲ್ಲಿ ಬರೆಯಲು ಹಚ್ಚುತ್ತವೆ.

ನಿಮ್ಮ ಕಥೆ/ಕವಿತೆಯ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೆ-ಪದೆ ಕಾಡುವ ವಿಷಯ ಯಾವುದು?

ಕವಿತೆ, ಕಥೆಗೆ ಇಂಥವೇ ವಸ್ತುವಾಗಬೇಕೆಂದು ನನಗನಿಸುವುದಿಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಮುಖ್ಯ ಆದರೆ, ಎದುರಿರುವ ವಸ್ತು,ವ್ಯಕ್ತಿ ನನ್ನೊಳಗೆ ಇಳಿದು ಬರೆಯಲು ಪ್ರೇರೇಪಿಸಿ ವಿಸ್ತಾರಗೊಳ್ಳುತ್ತಾ ಹೋದಂತೆ ಕಥೆ/ಕವಿತೆಯಾಗುತ್ತದೆ. ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ. ಪದೇ ಪದೇ ಕಾಡುವ ವಿಷಯ ಯಾವುದೇ ಆಗಿರಲಿ, ಅದು ಕೊನೆಗೆ ಕನೆಕ್ಟ್ ಆಗುವುದು ಮಾತ್ರ ಸಾಮಾಜಿಕ ಆಗುಹೋಗುಗಳೊಂದಿಗೆ ಎನ್ನುವುದಂತೂ ಸತ್ಯ.
ಕಥೆ/ಕವಿತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯೆ?
ಅರೆ, ಅವುಗಳಿಲ್ಲದ ಕಥೆ/ಕವಿತೆ ಬಾಲಂಗೋಚಿ ಇಲ್ಲದ ಪಟಗಳಂತೆ. ಆ ದಟ್ಟ ಅನುಭವ ಬೇರೆ-ಬೇರೆ ರೂಪಗಳಲ್ಲಿ ಬರವಣಿಗೆಯನ್ನು ಸಮೃದ್ಧಗೊಳಿಸುತ್ತವೆ.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ರಾಜಕೀಯ ತನ್ನ ಮೂಲ ಆಶೋತ್ತರಗಳನ್ನು ಗಾಳಿಗೆ ತೂರಿದೆ. ಹಾಗಾಗಿ ನಮ್ಮಂಥವರು ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ಲೇಸು ಎಂಬಲ್ಲಿಗೆ ಬಂದು ತಲುಪಿದ್ದೇವೆ. ಇತ್ತೀಚೆಗಂತೂ ರಾಜಕೀಯ ಸನ್ನಿವೇಶ ಅಸಹ್ಯಕರ ಎನ್ನಿಸುವಷ್ಟು ಬೇಸರ ಹುಟ್ಟಿಸಿದೆ.

ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು?

ಮಾನವತೆಯೆ ಧರ್ಮ. ಅದನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ ಸಾಮಾಜಿಕ ಸ್ವಾಸ್ಥö್ಯವನ್ನು ಮತ್ತು ಸಾಮರಸ್ಯವನ್ನು ಉಂಟುಮಾಡುವ ಅರಿವೆ ದೇವರು.
ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಮನುಷ್ಯನಲ್ಲಿರುವ ಸೃಜನಶೀಲತೆಯ ಸಂಕೇತವೆ ಆತನೊಳಗಿನ ಸಾಂಸ್ಕೃತಿಕ ಪ್ರಜ್ಞೆ. ಅದು ಅವನನ್ನು ಹೊಸ-ಹೊಸ ಅನ್ವೇಷಣೆಯತ್ತ ಚಲಿಸುವಂತೆ ಮಾಡುತ್ತದೆ. ಆ ಮುಖಾಂತರ ಸಾಮಾಜಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ. ಆದರೆ, ಅಲ್ಲಿ ಜಾತಿ ಮತಗಳು ರಾಜ್ಯಬಾರ ನಡೆಸಿ ಎಲ್ಲವನ್ನು ಕುಂಠಿತಗೊಳಿಸುತ್ತಿದೆ.

ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವುರು?

ಸಾಹಿತ್ಯ ಮತ್ತು ರಾಜಕಾರಣ ವಿಭಿನ್ನ ವಿಚಾರಗಳಿಂದ ಕೂಡಿವೆ. ಅಲ್ಲದೆ ಎರಡೂ ಬೇರೆ ಬೇರೆ ಕ್ಷೇತ್ರಗಳು. ಅವೆರಡು ಪೂರಕವಾಗಿರಬೇಕು. ಹಾಗಾದಾಗ ಮಾತ್ರ ಸಮಾಜದ ಬೇಡಿಕೆ ಹಾಗೂ ಸ್ವಸ್ಥತೆಯನ್ನು ಪೂರ್ಣಗೊಳಿಸಲು ಸಾಧ್ಯ. ಆದರೆ, ಇಂದಿನ ರಾಜಕಾರಣ ತನ್ನ ಹಸ್ತಕ್ಷೇಪವನ್ನು ಸಾಹಿತ್ಯವಲಯದಲ್ಲಿ ಯಾವ ಮಟ್ಟದಲ್ಲಿ ಮಾಡುತ್ತಿದೆ ಎಂದರೆ, ಸರಿಯಾದ ನ್ಯಾಯವನ್ನು ಸಾಹಿತ್ಯಕ್ಷೇತ್ರದಿಂದ ಸಮಾಜಕ್ಕೆ ಒದಗಿಸಲಾಗುತ್ತಿಲ್ಲ. ಇದರಿಂದ ಓದುಗರ ವಲಯವು ದಾರಿ ತಪ್ಪುತ್ತಿದೆ ಎಂದೆನಿಸುತ್ತಿದೆ.

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ?

ದೇಶದ ಚಲನೆ ಎನ್ನುವುದು, ವಿಸ್ತಾರವಾದ ವಿಷಯ. ಕೇವಲ ಯಾವುದೋ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿರ್ಧರಿಸಲಾಗದು. ಆದಾಗ್ಯೂ ನಾವು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ನಮ್ಮ ನಾಡು-ನುಡಿಯ ಹರವು ದೊಡ್ಡದು. ಅದು ದೇಶದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದೆ. ಅಲ್ಲದೇ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಹೀಗೆ ಇನ್ನೂ ಅನೇಕ ವಿಚಾರಗಳಲ್ಲಿ ನೀಡಿದ ಕೊಡುಗೆ ಅಪಾರ. ಅದರಿಂದ ದೇಶವು ತನ್ನನ್ನು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ದೇಶವನ್ನು ಸಮೃದ್ಧವಾಗಿ ಮುನ್ನೆಡೆಸುತ್ತಿದೆ.

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?

ಸಾಹಿತ್ಯದ ಯಾವುದೇ ಪ್ರಕಾರದ ರಚನೆಗೆ ಸಂಬಂಧಿಸಿದ ವಿಷಯ ಬಂದಿತೆಂದರೆ, ಅಲ್ಲಿ ಪ್ರಥಮ ಆದ್ಯತೆ ರಚನಾಕಾರನ ಓದಾಗಿರಬೇಕು.ಇದರಿಂದ ಸತ್ವಯುತ ಬರವಣಿಗೆ ಸಾಧ್ಯ. ಮತ್ತೆ ಅಂತಹ ಬರವಣಿಗೆ ಬರಹಗಾರ ಹಾಗೂ ಓದುಗನ ನಡುವೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಒಂದು ಓದುಗವಲಯವೇ ನಿರ್ಮಾಣ ಆಗುತ್ತದೆ. ಅಂತಹ ವಾತಾವರಣವು ರಾಜಕೀಯ, ದಾರ್ಮಿಕ, ಸಂಕುಚಿತತೆಯನ್ನು ದೂರಮಾಡಿ ಸಾಹಿತ್ಯವನ್ನು ವಿಶ್ವವ್ಯಾಪಿಯನ್ನಾಗಿಸುತ್ತದೆ.

ಕನ್ನಡ ಹಾಗೂ ಆಂಗ್ಲಭಾಷಾ
ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಮತ್ತು ನಿಮ್ಮನ್ನು ಕಾಡಿದ ಸಾಹಿತಿ ಯಾರು?

ಕನ್ನಡದಲ್ಲಿ ಇಷ್ಟವಾದ ಕವಿಗಳೆಂದರೆ, ಪ್ರತಿಭಾ ನಂದಕುಮಾರ ಹಾಗೂ ವಾಸುದೇವ ನಾಡಿಗ. ನನ್ನದು ಹಿಂದಿ ಸಾಹಿತ್ಯದ ಓದಾಗಿರುವುದರಿಂದ, ನಿರಾಲಾ ಮತ್ತು ಮಹಾದೇವಿ ವರ್ಮಾ ನನ್ನ ನೆಚ್ಚಿನ ಕವಿಗಳು. ಕತೆಯ ವಿಚಾರಕ್ಕೆ ಬಂದರೆ, ಲಂಕೇಶ, ಕೇಶವರೆಡ್ಡಿ ಹಂದ್ರಾಳ, ಸುನಂದಾ ಕಡಮೆ ಅನೇಕ ಹಿರಿಯರ ಕತೆಗಳು ನನಗಿಷ್ಟ.

ಇತ್ತೀಚೆಗೆ ಓದಿದ ಕೃತಿಗಳಾವುವು?

ಶಶಿಕಲಾ ವಸ್ತ್ರದ ರವರ ಆತ್ಮಕತೆಯಾದ, ‘ಇದ್ದೆನಯ್ಯಾ ಇಲ್ಲದಂತೆ’ ಮತ್ತು
ಲಕ್ಷ್ಮಣ ಕೊಡಸೆ ಅವರು ಬರೆದ ‘ನಾರಾಯಣ ಗುರುಗಳ ಆಪ್ತ ಪದ್ಮನಾಭನ್ ಪಲ್ಪು’ ಇತ್ತೀಚೆಗೆ ಓದಿದ ಪುಸ್ತಕಗಳು.

ನಿಮಗೆ ಇಷ್ಟವಾದ ಕೆಲಸಗಳಾವುವು?

ಓದುವುದು, ಬರೆಯುವುದು.

ನಿಮಗೆ ಇಷ್ಟವಾದ ಸ್ಥಳ ಯಾವುದು?

ಪ್ರಕ್ರತಿಯ ಯಾವುದಾದರೂ ಸ್ಥಳವಿರಲಿ, ಇಷ್ಟವಾಗುತ್ತದೆ. ವಿಶೇಷವಾಗಿ ಲಕ್ಷ್ಮೀಶ್ವರದ ಸೋಮನಾಥ ದೇವಸ್ಥಾನದ ಪ್ರಾಂಗಣ.

ನಿಮ್ಮ ಪ್ರೀತಿಯ, ತುಂಬಾ ಇಷ್ಟಪಡುವ ಸಿನಿಮಾ ಯಾವುದು?

ಗುರು-ಶಿಷ್ಯರು

ನೀವು ಮರೆಯಲಾರದ ಘಟನೆ ಯಾವುದು?

ಸಹೋದರನ ಅಕಾಲಿಕ ಸಾವು ಮರೆಯಲಾರದ ಘಟನೆ. ಬಹುಷಃ ಬದುಕಿನ ಕೊನೆಯವರೆಗೂ ಅವನನ್ನು ಯಾರಾರಲ್ಲೋ ಹುಡುಕುತ್ತಿರುತ್ತೇನೆ.
ಇನ್ನು ಕೆಲ ಹೇಳಲೇಬೇಕಾದ ಸಂಗತಿಗಳಿದ್ದರೆ, ಹೇಳಿ…
ಯಾರೋ ಗೊತ್ತಿರದ, ಪರಿಚಯವಿರದ ವ್ಯಕ್ತಿಗೆ ನೋವಾಗುವುದನ್ನು ಕಂಡರೆ, ಸಹಿಸಲಾಗುವುದಿಲ್ಲ. ಬಹುಷಃ ಅದೇ ನನ್ನೊಳಗಿನ ಮಾನವತೆ ಅನಿಸುತ್ತದೆ. ಹಾಗಾಗಿ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಸುಂದರವಾಗಿಸಬಹುದು ಎಂದು ನಂಬಿರುವವಳು ನಾನು. ಆದರೆ, ಮಾನವನಿಂದ ಮಾನವಪ್ರೀತಿ ಸಾಧ್ಯವಾಗದಷ್ಟು ನಾಗರೀಕತೆಯ ಹಮ್ಮಿನಲ್ಲಿರುವ ನಾವು ತುಸುವಾದರೂ ಮಾನವರಾಗಬೇಕಾದ ತುರ್ತಿನಲ್ಲಿದ್ದೇವೆ. ನಡೆಯಂತೆ ನುಡಿಯಿರದ, ನುಡಿದಂತೆ ನಡೆಯದ ವಾತಾವರಣವು ಕೊನೆಯಾಗುವುದನ್ನು ಯಾವಾಗಲೂ ಹಂಬಲಿಸುತ್ತೇನೆ.

*******************************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Leave a Reply

Back To Top