ಡಿಯರ್-ಟೈಗರ್!

ಕಥೆ

ಡಿಯರ್-ಟೈಗರ್!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಹೆಣ್ಣು ಅಂದರೆ ಪ್ರಬಲವಾದ ಶಿಸ್ತು ಮತ್ತು ಕಬಂಧ ಬಾಹುಬಲದ  ಚೌಕಟ್ಟಿನಲ್ಲಿ ಬೆಳೆಯಬೇಕು; ಅಷ್ಟೇ ಕಟ್ಟುನಿಟ್ಟಿನ ಬೇಲಿಯೊಳಗೆ ಬದುಕಬೇಕು ಎಂಬ ಬಂಧಿಯಲ್ಲ. ಅವಳಿಗೂ ಸರ್ವಸ್ವತಂತ್ರದ ಬದುಕು ಇಷ್ಟ. ಖಂಡಿತ! ಇದು ಬಹುಶಃ ಎಲ್ಲರ  ಪಾಲಿನ ಸತ್ಯ.  ಆದರೆ, ಅನೇಕರಿಗೆ ಅಂಥ ಜೀವನ ಇರಲಿ, ಆ ರೀತಿಯ ಮುಕ್ತ ಯೋಚನೆ ಕೂಡ ಅಸಾಧ್ಯ, ಅನ್ನಿಸುವಷ್ಟು ‘ಸರಳುಗಳ ಹಿಂದಿನ ಬಾಳು!’. ವಾಸ್ತವವಾಗಿ, ಅವರಿಗೆ ಆ ಸರಳುಗಳನ್ನು ಎಣಿಸುವ ಧೈರ್ಯ ಸಹ ಇರಲಾರದು…

ಕಲ್ಯಾಣಿ ಶಾಲೆಯಿಂದ ಬಂದವಳು, ಶಾಲೆಗೆ ಅಂತ ಅಲ್ಲಿಯ ಕಾಯಿದೆಯಂತೆ ತೊಟ್ಟಿದ್ದ ಸಮವಸ್ತ್ರ ಬಿಚ್ಚಿ ‘ಹೋಂ ಮೇಡ್ ಥರ ಬದಲಾಗಿ’, ಫ್ರೆಶ್ ಆಗಿ, ಕಾಫಿ ಮಾಡಿಕೊಂಡು ಹಜಾರದಲ್ಲಿ ಈಸಿ ಛೇರ್ ಆವರಿಸಿ, ಒಂದೊಂದೇ ಸಿಪ್ ಹೀರುತ್ತಾ, ಅದರೊಟ್ಟಿಗೆಯೇ  ಅಂತರ್ಮುಖಿಯಾದಂತೆ ಮೆದುಳ ತರಂಗಗಳಲಿ ತೇಲುತ್ತಿದ್ದಳು! ‘ಟೈಗರ್’ ಬರುವ ಸಮಯ ಹೀಗೆ ಅಂತ ಹೇಳುವ ಹಾಗಿರಲಿಲ್ಲ. ಹೌದು, ತನ್ನ ಗಂಡನನ್ನು ಅವಳು ‘ಟೈಗರ್’ ಎಂದು ಕರೆಯುತ್ತಿದ್ದಳು – ಅದು ಅವರಿಬ್ಬರೇ  ಇದ್ದಾಗ ಮಾತ್ರ. ಪಬ್ಲಿಕ್ಕಾಗಿ ಅವನು ಇವಳಿಗೆ ಸೂರ್ಯ. ವಾಸ್ತವವಾಗಿ ಅವನು  ಸೂರ್ಯತೇಜ್ – ಇದು ಪೂರ್ತಿ ಪಬ್ಲಿಕ್ಕಿಗಾಗಿ; ಹೊರ ಜಗತ್ತಿಗಾಗಿ.

ಹೌದು, ಎಷ್ಟು ಜನ ಹೆಂಗಸರು ತನ್ನಂತೆ ಸಂಪೂರ್ಣ ಮುಕ್ತವಾಗಿ, ಸಡನ್ನಾಗಿ ಗಿಜಗುಟ್ಟುವ ರಸ್ತೆಯಲ್ಲಿ  ಬರ್ತ್ ಸೂಟ್ ನಲ್ಲೇ   ಓಡಾಡಿದ   ಆರ್ಕಿಮಿಡೀಸ್ ಥರ ಯೋಚಿಸಬಲ್ಲರು! ಹ್ಞಾ,ಹೌದಲ್ಲವೇ…? ಅಷ್ಟರಲ್ಲಿ ಯಾರೋ ಬೆಲ್ ಮಾಡಿದರು. ಹೋಗಿ ಬಾಗಿಲ ಪಕ್ಕದ ಕಳ್ಳ ಕಿಟಕಿ ತೆರೆದರೆ, ಮನೆ ಕೆಲಸದ ಬಾಯಮ್ಮ. ಕಿಟಕಿ ತೆರೆದದ್ದೇ, ನಿಂತಲ್ಲೇ ಸಂಕೋಚ ಇವರಿಗೆ. ‘ಈ ‘ಬಾಯಮ್ಮ’ನಿಗೆ ಪಾಪ ಮಾತಾಡೋ ಬಾಯೇ ಇಲ್ಲ. ಏನೇ ಕೇಳಿದರೂ, ಹ್ಞೂ,ಹ್ಞಾ; ಅಥವ ಇಲ್ಲ; ಅಥವ  ಎರಡು ಮೂರು ಅಕ್ಷರ ಅಷ್ಟೇ. ಆದರೂ, ಬಾಯಮ್ಮ! ಈ ಹುಟ್ಟು  ಹೆಸರುಗಳದ್ದೇ ಸೋಜಿಗದ ಸಂಗತಿ. ಅಂತ ಮನಸ್ಸಿನಲ್ಲೇ ಅಂದುಕೊಂಡು ಬಾಗಿಲು ತೆರೆದಳು, ಕಲ್ಯಾಣಿ. ಬಾಯಮ್ಮ ಒಳ ಬಂದು ಪಿಸು ಮತ್ತು ಗಡಸು ಮಿಶ್ರಣ ಅನ್ನಿಸುವಂಥ ದನಿಯಲ್ಲಿ ‘ಸ್ವಲ್ಪ ಕಾಸು ಬೇಕಾಗಿತ್ತು ಅಮ್ಮೋರೆ’ ಅಂತ ದೈನ್ಯದಲ್ಲಿ ಅನ್ನೋಥರ ಕೇಳಿದರು. ಅಯ್ಯೋ ಪಾಪ ಅನ್ನಿಸಿತು ಕಲ್ಯಾಣಿಗೆ. ಇದು ಇವರ ಬೆವರಿನ ಕಾಸಲ್ಲವೇ… ಒಂದು ತಿಂಗಳ ಸಂಬಳ ಒಟ್ಟಿಗೇ ಕೊಟ್ಟು ಕಳಿಸಿದಳು. ಏಣಿಯ ಮೇಲಿಂದ ರಪ್ಪಂತ ಒದ್ದಂತೆ ಕೆಳಗೆ ಬಿದ್ದರೂ ಸಹ ಸೊಲ್ಲಿಲ್ಲದಂತೆ ತೆವಳುವ  ಬಾಳು ಕೆಲವರದ್ದು… ಹೌದಲ್ಲವೇ!

ನೋಡೋಣ, ನನ್ನ ಟೈಗರ್ ಈಗ, ಈ ಬೆಂಗಳೂರಿನ ನಿರಂತರ  ತುಂಬುಗರ್ಭದ ರಸ್ತೆಗಳಲ್ಲಿ ಎಲ್ಲಿ ಪ್ರಸವಕ್ಕಾಗಿ ಕಾಯುತ್ತ ಇರುವರೋ ಅಥವಾ ಇಂಚಿಂಚೇ ಹೊಟ್ಟೆಯೊಳಗಿಂದ ನೂಕಿಸಿಕೊಂಡಂತೆ ಬರುತ್ತಿರುವರೋ… ಎಂದು ಕಲ್ಯಾಣಿ ಮೊಬೈಲ್ ನಲ್ಲಿ ಟೈಗರ್ ಬಾಲ ಎಳೆದು ಕಾಲ್ ಮಾಡಿದಳು. ಆ ಕಡೆಯಿಂದ “ಹಲೋ”- ಪ್ರೇಮ ಘರ್ಜನೆ! ” ಇನ್ನೂ ಹೊರಟೇ ಇಲ್ಲ ಮೈ ಡಿಯರ್ ಡಿಯರ್; ಹೊರಟಾಗ ನಾನೇ ಫೋನ್ಮಾಡಿ ಘರ್ಜಿಸ್ತೀನಿ…”

ಸಂಕ್ಷಿಪ್ತ ಅಷ್ಟೆ. ಈ ಐಟಿ ಆಫೀಸೇ ಹಾಗೆ; ಒಂದು ರೀತಿ ಅರಣ್ಯ ಇದ್ದ  ಹಾಗೆ! ಅಲ್ಲಿ, ಅರಣ್ಯದಲ್ಲಿ ಒಂದರ ಹಿಂದೆ ಇನ್ನೊಂದರ ತದೇಕ ಮಿಂಚಿನ ಓಟದ ಬೇಟೆ. ಇಲ್ಲಿ, ತಲೆಯ ಮೇಲೆ ಅದಕಿದ ಅಥವ ಅದಕಿಸಿಕೊಂಡಂಥ  ಕೆಲಸ…! ಅಂದಹಾಗೆ, ಈ ಎರಡು ಡಿಯರ್ ಗಳು ಏಕೆಂದರೆ, ಒಂದು ಎಲ್ಲರಂತೆ ಪ್ರೀತಿಯ ಸಂಕೇತ; ಇನ್ನೊಂದು ಜಿಂಕೆ! ಹೌದು, ಅವರು ನನಗೆ ಟೈಗರ್ ಆದಮೇಲೆ, ನಾನು ಅವರ ಜಿಂಕೆ ತಾನೆ! ಇದೇ ಥರ ಇನ್ನೂ ಯಾವ ಯಾವ ಮನೆಗಳಲ್ಲಿ ಬೇರೆ ಯಾವ ಯಾವ ಥರ ಪ್ರಾಣಿಗಳ  ಮೃಗಾಲಯಗಳೇ ಇರಬಹುದೋ ಏನೋ…!

ಟೈಗರ್ ಘರ್ಜನೆ  ಮುಗಿದದ್ದೇ, ಮತ್ತೆ ನನ್ನ  ಮೊಬೈಲ್  ಪಿಟೀಲು…ಈಗ ಅಮ್ಮ. “ಹಲೋ ಅಮ್ಮ, ಎಲ್ಲ ಹೇಗಿದ್ದೀರಾ..?” ಅಮ್ಮ ಕಾತರದಲ್ಲಿ,  “ನಮ್ದಿರ್ಲಿ, ಈವತ್ತಿನ್ ರಿಸಲ್ಟ್ ಏನಾಯ್ತೇಳು..?” ನಾನು ಈ ಬೆಳಿಗ್ಗೆ ಮೆಡಿಕಲ್ ಟೆಸ್ಟ್ ಗಳಿಗೆ ಹೋಗಿದ್ದೆ; ಅದರ ಬಗ್ಗೆ ಕೇಳಿದ್ದರು. “ಸಂಜೆ ಸ್ಕೂಲಿಂದ ಬರುವಾಗ ಲ್ಯಾಬ್ ಕಡೆ ಹೋಗಿದ್ದೆ ಅಮ್ಮ; ಇನ್ನೂ ಒಂದೆರಡು ರಿಸಲ್ಟ್  ಬಂದಿಲ್ಲವಂತೆ, ಒಟ್ಟಿಗೇ ನಾಳೆ ಕೊಡ್ತಾರಂತೆ…” ನನ್ನ ಮಾತು ಕೇಳಿ ಅಮ್ಮನ ದುಗುಡ ಕಮ್ಮಿ ಆದ ಹಾಗೆ ಅನ್ನಿಸಲಿಲ್ಲ. ಹಾಗೇ ಅದೂ ಇದೂ ಮಾತಾಡ್ತಾ, “ನಿನ್ ಗಂಡನ್ನ ಕೇಳ್ದೆ ಅಂತೇಳು, ಈಗ ಇಡ್ತೀನಿ, ನನಗೂ ಕೆಲಸ ಇದೆ…” ಅಮ್ಮ ಡಿಸಪಾಯಿಂಟ್ ಆದಂತೆ ಅನ್ನಿಸಿತು. ಎಷ್ಟೇ ಆಗಲಿ, ತಾಯಿ ತಾನೆ; ಮಗಳಿಗೆ ಮದುವೆ ಆಗಿ, ಐದು ವರ್ಷಗಳೇ ಆಗಿದ್ದರೂ ಮಕ್ಕಳೇ ಇಲ್ಲ ಅಂದರೆ…

ಹೌದು, ಟೈಗರ್ ಮತ್ತು ಡಿಯರ್ ಇಬ್ಬರೂ, ಇನ್ನೂ ‘ಸ್ಕೋರ್’ ಮಾಡಿರಲಿಲ್ಲ. ‘ಸೊನ್ನೆ-ಸವಾರಿ’ ಮಾಡ್ತಾ ಇದ್ದರು! ಅಂದರೆ,  ಅಪ್ಪ ಅಮ್ಮ ಆಗಿರಲಿಲ್ಲ…

ನಾನೊಮ್ಮೆ ಬೇಡ ಅಂದರೆ, ಅವರೊಮ್ಮೆ ಬೇಡ ಅನ್ನೋರು… ಹೀಗೆ ಮೂರು ವರ್ಷ ಜೀಕು-ಜೀಕಾಟ ಆಡುತ್ತಾ ಉರುಳಿಸಿದ್ದೆವು… ಹಾಗಂತ, ಈ ಏರಿಳಿತದ ಆಟದ ನಡುವೆಯೂ, ನನ್ನ ಟೈಗರ್ ಏನೂ ಕಮ್ಮಿ ಇರಲಿಲ್ಲ! ಎಲ್ಲ ನಮೂನೆಯ ‘ಬೆಡ್ ರೂಂ ಯೋಗಾಸನ’ಗಳನ್ನೂ ಅರೆದು ಕುಡಿದಿದ್ದರು! ಅದರಿಂದ ನಾನು, ಒಮ್ಮೊಮ್ಮೆ ಅವರನ್ನ ತಿವಿದ ಹಾಗೆ, “ನೀವು ಒಂಥರಾ ‘ವಾತ್ಸಾಯನಾಸುರ’ ಇದ್ದಂತೆ” ಅಲ್ಲವಾ, ಅಂತ ರೇಗಿಸ್ತಿದ್ದೆ. ಅವರು, “ಹೌದ್ಹೌದು” ಅಂದು, ತುಂಟ ನಗು ಬೀರಿ, ಖುಷಿಯಲ್ಲಿ ತಿವಿದು ಬಿಡ್ತಿದ್ದರು!                       

ಅಷ್ಟರಲ್ಲಿ, ನನ್ನ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ, ಟೈಗರ್ ನನ್ನು ಹೆತ್ತು  ಹೊರಬಿಟ್ಟಿದ್ದ ಅತ್ತೆ ಮಾವ ತುಂಬಾ  ಬಲವಂತ ಹೇರುತ್ತಾ, ವರಾತ ಮಾಡೀ ಮಾಡಿ, ಕೊನೆಗೆ ಇವರಿಗೇ ಬೇಜಾರಾಗಿತ್ತು. ಹಾಗಾಗಿ, ನಮ್ಮಿಬ್ಬರ ನಡುವೆ, ಅದುವರೆಗೆ, ರಾತ್ರಿಹೊತ್ತಿನ ಸ್ವಚ್ಛಂದದ ಬ್ರೇಕ್  ಒತ್ತಲು ಇಡುತ್ತಿದ್ದ ಎಲ್ಲ ಥರ ‘ನಾಕಾಬಂದಿ’ಗಳನ್ನೂ ಕಿತ್ತೆಸೆದಿದ್ದವು! ಆದರೂ, ಊಹ್ಞೂ…ಮಕ್ಕಳ ಫ್ಯಾಕ್ಟರಿಗಳೇ  ಭೋರ್ಗರೆವ ನಮ್ಮ ಈ ಪುಣ್ಯ ನೆಲದ ಮಹಾಸಾಗರದಲ್ಲೂ, ನನ್ನಂತಹ ‘ಸುಕೃತೆ’ ಹಾಗೆಯೇ, ‘ಬಂಜೆ’ಯೋ ಎನಿಸುವಂತೆ  ಉಳಿದುಬಿಟ್ಟಿದ್ದೆ! ಅದು ನನಗಂತೂ ಹೆಮ್ಮೆ ಹಾಗೂ ಖುಷಿಯೇ ಆಗಿತ್ತು; ಏಕೆಂದರೆ ನನಗೆ ಮಾತ್ರ ಅಲ್ಲದೆ, ಟೈಗರ್ ಗೂ ಸಹ ಮಕ್ಕಳು ಅಂದರೆ ಬಿಲ್ಕುಲ್ ಬೇಕಾಗಿರಲಿಲ್ಲ! ಯಾವುದೇ ಥರದ ಎನ್ಕಂಬರೆನ್ಸಸ್ ಇಲ್ಲದೆ ಇಡೀ ಬದುಕನ್ನು ಬದುಕಬೇಕು ಅನ್ನುವ ಮಹದಾಸೆ ನಮ್ಮಿಬ್ಬರದು. ಆದರೆ, ಮೊಮ್ಮಕ್ಕಳು ಬೇಕು ಅಂತ ಹಂಬಲ ಇರುವವರು… ಅತ್ತೆ-ಮಾವ…? ಆಮೇಲೆ, ನನ್ನ ಅಮ್ಮ…

ನನ್ನತ್ತೆ ಮಾವನವರಿಗೆ ಟೈಗರ್ ಆದಮೇಲೆ ಹುಟ್ಟಿದ್ದು ಇಬ್ಬರು ತಂಗಿಯರು. ಪಾಪ, ಇಬ್ಬರೂ, ಹೆಣ್ಣು ಹುಲಿಗಳ ಥರ ಇರಲಿಲ್ಲ. ತುಂಬಾ ಮೃದು! ಇಬ್ಬರೂ ಮದುವೆ ಆಗಿ  ಮಕ್ಕಳನ್ನೂ ಹಡೆದಿದ್ದಾರೆ. ಹಾಗಾಗಿ ನನ್ನ ಅತ್ತೆ ಮಾವನವರಿಗೆ  ಮೊಮ್ಮಕ್ಕಳೇನೂ ಇರಲಿಲ್ಲ ಅಂತಲ್ಲ. ಆದರೆ ನಮ್ಮತ್ತೆ ಪ್ರಕಾರ ಮಗನ ಮಕ್ಕಳು ಮಾತ್ರ ತಮ್ಮ ವಂಶೋದ್ಧಾರಕರು!…

ಈ ರೀತಿ ಉದ್ಧಾರಕರಿಂದ ಮಾನವ ಇತಿಹಾಸದಲ್ಲಿ ಅದೆಷ್ಟು ವಂಶಗಳು ಎಂಥೆಂಥಾ ಏಣಿ ಹತ್ತಿವೆಯೋ ನಾ ಕಾಣೆ. ನೂರರ ಸೈನ್ಯವೇ ಇದ್ದೂ ಧೃತರಾಷ್ಟ್ರನ ವಂಶೋದ್ಧರ ಹೇಗಾಯಿತೆಂಬ ಭಯಂಕರ ನಿದರ್ಶನವೇ ಇಲ್ಲವೇ… ಅಂಥ ಕೆಟ್ಟ ದಾಯಾದಿ ಸಂತತಿ ಆಗಿಬಿಟ್ಟರೆ?

ವಾಸ್ತವವಾಗಿ, ನಮ್ಮ ಮಾವನವರ ಮನಸ್ಸಿನಲ್ಲಿ ಮಕ್ಕಳ ಬಗ್ಗೆಯ ವಾಂಛೆ ಏನೋ ಹೇಗೋ ನಾನರಿಯೆ.

ನನ್ನ ಮತ್ತು ನನ್ನ ಟೈಗರ್ ಅವರ ಹೃನ್ಮನಗಳ ವೇವ್ ಲೆಂಗ್ತ್ ಅದ್ಭುತ. ಇದೇ ಬಹುಷಃ, ನಮ್ಮಿಬ್ಬರ ಬದುಕಿನ ಬೆಳಕು!…ಕಹಿ ಸತ್ಯ ಏನೆಂದರೆ, ಪ್ರೇಮಪಾಶದಲ್ಲಿ ವಿವಾಹ ಬಂಧನ ಅಂತ ಆಗಿಬಿಟ್ಟರೆ…ಹೌದು, ಆಗಿಬಿಟ್ಟರೆ, ಎಷ್ಟು ಚಂದ, ಅನಿಸುತ್ತೆ ಅಲ್ಲವೇ? ಆದರೆ ನೈಜತೆ  ಬೇರೆ… ಪ್ರೇಮ ಬಂಧನವಾಗುವುದು ಮತ್ತು ಆಗಿ ಉಳಿಯುವುದು, ಎಲ್ಲ ಲಾಟರಿ ಆಟ! ಹಾಗಾಗಿ ಮದುವೆಗೆ ಮುನ್ನ ಅರ್ಥ ಮಾಡಿಕೊಳ್ಳಬೇಕು ಅಥವಾ ಮಾಡಿಕೊಂಡೇಬಿಟ್ಟೆವು ಅನ್ನುವುದು ಕಠೋರ ಅನರ್ಥ!

ಎಲ್ಲರ ಬಾಳ್ವೆಯಲ್ಲೂ ಅಷ್ಟೆ… ಬದುಕ ಬಂಡಿ ಓಡುತ್ತಾ, ಓಡಿಸುತ್ತಾ ಅರ್ಥ ಹಿಗ್ಗುತ್ತಾ ಹಿಗ್ಗುತ್ತಾ,  ಓಡುತ್ತದೆ…ಹಾಗಂತ, ನಾನು ಪ್ರೇಮವಿವಾಹ ವಿರೋಧಿ ಖಂಡಿತ ಅಲ್ಲ… ಗೆಲುವಿಗೆ ತನ್ನದೇ ಆದ ಪ್ರಖರ ಕಿರಣಕಾಂತಿ ಇರುತ್ತದೆ… ಗೆಲುವಾದರೆ ಮಾತ್ರ!

ಮತ್ತೆ ಮೊಬೈಲ್ ಗುಟುರು. ಹಲೋ…ಹಲೋ…ಕಟ್. ಮೊಬೈಲ್ ನಲ್ಲಿ ಸಹ ರಾಂಗ್ ನಂಬರ್! ಅಥವಾ ಈ ಕುಲಗೆಟ್ಟ ನೆಟ್ವರ್ಕ್ ಸಂತತಿಯೋ. ಮನುಷ್ಯನ ವಿಕಾಸ ಯಾವತ್ತೂ ಪರಿಪೂರ್ಣ ಅಲ್ಲವೇ ಅಲ್ಲ… ಜ್ಞಾನ-ವಿಜ್ಞಾನ ಅಗಾಧ ಇದ್ದೂ ಸಹ.

ನನ್ನ ಬ್ಯಾಚಲರ್ ಡಿಗ್ರಿ ಸಹಪಾಠಿ ಮತ್ತು ಇಂದಿಗೂ ಓಕೆ ಎನಿಸುವಂಥ ಗೆಳತಿ, ಕ್ಷಮಾ. ಅವಳಿಗೂ ನನಗೂ ಒಳ್ಳೆಯ ಹೊಂದಾಣಿಕೆ. ಅಕಸ್ಮಾತ್ ಅಂಥ ಸಾಹಸೀ ಕಾಯಿದೆ ನಮ್ಮಲ್ಲೂ ಇದ್ದಿದ್ದರೆ, ಬಹುಶಃ ನಾವಿಬ್ಬರೂ ಏಕಲಿಂಗ ವಿವಾಹ ಆಗ್ತಿದ್ದೆವೋ ಏನೋ! ಇಬ್ಬರೂ ಕೂಡ ಅಷ್ಟೇ ‘ಬಿಡುಗಡೆ’ಯ ಮಾನಸಿಕ ಸ್ಥಿತಿ ಇದ್ದವರು. ಅವಳೀಗ ಇರುವುದು, ಮಸ್ಕಟ್ ನಲ್ಲಿ. ಎಲ್ಲ ರೀತಿಯ ಬಾರ್ಡರ್ ಗಳನ್ನೂ ಬಿಟ್ಟು ಬದುಕುವ ಮಹಿಳೆ, ಕ್ಷಮಾ; ಅಂಥವಳು ಈಗ ದೂರದ ಅರಬ್ಬರ ನಾಡಲ್ಲಿ!…ನಿಜ, ಅಂತಹ ಸೈಯಾಮೀಸ್ ಟ್ವಿನ್ ಗಳಂಥ ಗೆಳತಿ ಅಲ್ಲದೆ ಇರಬಹುದು ನಾವು; ಹಾಗಾದರೆ, ಹೇಗೆ ಅಂಥ ಮದುವೆ ಬಗ್ಗೆ ಮಾತಾಡಿದೆ? ಸಹಜ, ಹೌದಲ್ಲವೇ? ಹಾಗಾದರೆ ಗಂಡು ಹೆಣ್ಣು ಮದುವೆಯ ದಿನದ ಹೊತ್ತಿಗೆ ವಜ್ರಗಾರೆ ಥರ ಅಂಟಿದ ಆತ್ಮೀಯರೇ ಆಗಿರುವರೇ…? ಖಂಡಿತ ಇಲ್ಲವಲ್ಲ… ನೀವು ಹೇಗೇ ಇದ್ದು, ಹೇಗೇ ಮದುವೆ ಅಂತ ಆದರೂ ಸಹ ಅಂತ್ಯಕ್ಕೆ ಆಗುವುದೆಲ್ಲ ಅದೇ ಆದ್ದರಿಂದ  ತಾನೇ… ಒಂದೊಮ್ಮೆ ಅರಿವೆ ಕಾಣದ ಆದಿ ಮಾನವ ಹಗಲಿರುಳು ಬರೀ ಬೆತ್ತಲೆ; ಈಗ ಏಕಾಂತದಲ್ಲಿ ‘ನಾಗರಿಕ’ ಬೆತ್ತಲೆ…! ಇದರಿಂದಲೇ ತಾನೆ, ಕೊನೆಗೂ ಅನ್ಯೋನ್ನತೆ  ಅಂತ ಬಂದು, ಗಂಡನ  ಜೊತೆ ಹೆಂಡತಿಗೆ ಆತ್ಮೀಯತೆ ಬರೋದು…! ಹ್ಞಾ,..ಹೌದು, ಎಷ್ಟು ಜನ ಈ ನಗ್ನಸತ್ಯ ಒಪ್ಪುತ್ತಾರೆ…ಅದೂ ಒಂದು ಹೆಣ್ಣಿನ ಮೆದುಳಲ್ಲಿ ಬಂದ ಸತ್ಯಚಿಂತನೆಯಿಂದ…!

ಕಾಲೇಜಿನಲ್ಲಿ ಇದ್ದಾಗಲೂ ನಾವಿಬ್ಬರೂ ಬೇರೆ ಹುಡುಗಿಯರ ಥರ ಇರಲಿಲ್ಲ — ಪೂರ್ತಿ ಗೌರಮ್ಮನೂ ಅಲ್ಲ ಅಥವ ಅರ್ಧ ಗೌರಿ ಇನ್ನರ್ಧ ಮಾಡರ್ನ್ ಅನ್ನೋ ಥರ ಕೂಡ ಅಲ್ಲ. ನಮ್ಮ ಸ್ಟೈಲೇ ಬೇರೆ; ಮಾಡರ್ನಿಟಿ ಎದ್ದು ಬಂದ ಹಾಗೆ! ಹುಡುಗರ ರೀತಿ ಡ್ರೆಸ್ ಮಾಡ್ತಾ, ಅವರ ಥರಾನೇ ಯಾರಾದರೂ ನೋಡಿದರೆ, ನಾವೂ ಎಗ್ಗಿಲ್ಲದೆ ಅವರನ್ನೇ ದುರುಗುಟ್ಟಿ ನೋಡೋದು, ವಿಶಲ್ ಹೊಡೆದರೆ ನಾವೂ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ಮಾಡೋದು, ಹೀಗೆಲ್ಲ!  ಯಾರಾದರೂ ಕಣ್ಣು ಹೊಡೆದರೆ ನಮ್ಮ ಕಣ್ಣೂ ಸುಮ್ಮನೆ ಇರಬಹುದಾ, ಖಂಡಿತ ಇಲ್ಲ. ಆ  ಕಡೆ   ಈಕಡೆ ನೋಡಿ, ಸಮಯ ಸರಿಯಾಗಿದ್ದರೆ!…ಆಗ ಹಾಗಿದ್ದೆವು ಅಂತ ಈಗಲೂ, ಮದುವೆ ಮುಂಜಿ ಆದಮೇಲೂ ಹಾಗೇ ಮಾಡಬಹುದಾ? ನನ್ನ ವಿಷಯ ಏನೋ ಬೇರೆ – ಯಾಕಂದರೆ ನನ್ನ ಗಂಡ ಹಾಗೇ ಇರೋದರಿಂದ. ಅದನ್ನ ನಾನು ಎಂದೂ ದುರುಪಯೋಗ ಮಾಡಿಕೊಂಡಿಲ್ಲ; ಅದೂ ಸತ್ಯ.

ಹೌದು, ನಾಳೆ ಲ್ಯಾಬ್ ರಿಪೋರ್ಟ್ ಏನು ಬರಬಹುದು…ನನಲ್ಲೇ ಡಿಫೆಕ್ಟ್ ಇದ್ದರೆ? ಟೈಗರ್ ಏನು ಹೇಳಬಹುದು; ನಮ್ಮತ್ತೇಗೆ ಹೇಗನ್ನಿಸಬಹುದು? ಮಗನಿಗೆ  ಇನ್ನೊಂದು ಮದುವೆ ಆಗು ಅಂತ ಹೇಳಿ ಒತ್ತಾಯ ಮಾಡಬಹುದಾ? ಸಾಧ್ಯ ಇಲ್ಲ ಅನ್ನೋ ಹಾಗಿಲ್ಲ; ಅವರು ಅಂಥವರೇ. ಇನ್ನು ನಮ್ಮ ಮಾವನವರು; ಅವರಿಗೆ ನನ್ನ ಮೇಲೆ ಕನಿಕರ ಆಗಬಹುದು… ಈ ಯೋಚನಾಗುಂಗಿಗೆ ಕತ್ತರಿ ಹಾಕಿದ್ದು ಕಾಲಿಂಗ್ ಬೆಲ್.

ಇದು ಗ್ಯಾರಂಟಿ ಟೈಗರ್ರೇ ಅನ್ನಿಸಿತು. ಹೌದು, ಜಿಂಕೆ ಬೇಟೆ ಆಡೋ ನನ್ನ  ಟೈಗರ್ ಬಂದರು.

“ಸಾರಿ ರೀ, ಲೇಟಾಯ್ತು. ಇವತ್ತು ಹೆವಿ ವರ್ಕ್”. ನನ್ನ ಟೈಗರ್ ಯಾವಾಗಲೂ ಏಕ ವಚನದಲ್ಲಿ ಕರೆಯೋದೇ ಇಲ್ಲ. ನನ್ನನ್ನ ಮಾತ್ರ ಅಲ್ಲ. ಅವರ ಆಫೀಸಿನ ಜಾನಿಟರ್ ಆಗಲೀ, ಇನ್ನಾವ ಥರದ ಕೆಲಸದವರೇ ಆದರೂ, ಅವರನ್ನೂ ಬಹುವಚನದಲ್ಲೇ, ಹೋಗಿ- ಬನ್ನಿ, ಹೀಗೇ ಮಾತಾಡಿಸುವುದು. ಅವರು ಸಾರಿ ಅಂದಾಗ ಟೈಂ ನೋಡಿದೆ. ಓ, ಆಗಲೇ ಎಂಟು ಗಂಟೆ ಹತ್ತಿರ!

ಇವರಿಗೆ ಹೇಗೆ ಮತ್ತು ಏಕೆ ಹೀಗೆ ಎಲ್ಲರನ್ನೂ, ಒಂದು ಸಣ್ಣ ಮಗುವನ್ನೂ ಸಹ, ಮರ್ಯಾದೆ ಭಾಷೆಯಲ್ಲೇ ಸಂಬೋಧಿಸುವುದು ಆರಂಭ ಆಯಿತೋ ತಿಳಿಯದು. ಕೇಳಿದರೆ ಅವರೂ ಕೂಡ ಗೊತ್ತಿಲ್ಲ ಎಂತಲೇ ಹೇಳುವುದು. ಅವರಿಂದ ನನಗೂ ಅದೇ ಅಭ್ಯಾಸ ಆಗಿ ಬಿಟ್ಟಿದೆ. ರಾತ್ರಿ ಹೊತ್ತು, ಅವರಿಗೆ ಎರಡು-ನನಗೆ ಎರಡು ಚಪಾತಿ ಅಥವ ಎರಡೆರಡು ದೋಸೆ ಇಲ್ಲ ಚಿಕ್ಕ ರೊಟ್ಟಿ, ಅಕ್ಕಿ ಇಲ್ಲ ರಾಗಿ; ಇದು ನಮ್ಮ ರೂಢಿ. ಊಟ ಅಂತ ಮಾಡುವಾಗ, “ಕಲ್ಯಾಣಿ, ಏನಾಯ್ತು, ನಿಮ್ಮ ರಿಪೋರ್ಟ್; ಎಲ್ಲ ಓಕೆ ತಾನೆ?” ಟೈಗರ್ ಕೇಳಿದ್ದು ಪಾಪ ಸುಸ್ತಾದ ಟೈಗರ್ ಥರ ಇತ್ತು. ಅಮ್ಮನಿಗೆ ಕುಯ್ದಿದ್ದನ್ನೇ ಕುಯ್ದೆ. ಓಕೆ ಅಂತ ಸುಮ್ಮನಾಗಿ, ತಿಂದು ಎದ್ದರು. ಸುಸ್ತಾದಂತೆ ಸೀದಾ ಬೆಡ್ ರೂಮ್ ಕಡೆ ಹೊರಟರು. ನನಗಿನ್ನೂ ತೊಳೆಯುವುದು, ನಾಳೆಗಾಗಿ ತಿಂಡಿ, ಅಡುಗೆಗಾಗಿ ಬೇಕಾದದ್ದನ್ನೆಲ್ಲಾ ತೆಗೆದು ತಯಾರಿಮಾಡುವುದು ಎಲ್ಲ ಇತ್ತು.

ಆ ಪೆಂಡಿಂಗ್ ಮುಗಿದರೆ, ನನ್ನ ರಾತ್ರಿ ಕೆಲಸ ಆದಂತೆ. ಆಮೇಲೆ ನಿದ್ದೆ. ಈಹೊತ್ತು ಟೈಗರ್ ಬೇರೆ ಟೈಯರ್ಡ್. ಹಾಗಾಗಿ, ನನಗೂ ಗಾಢ ನಿದ್ದೆ; ತಕ್ಷಣ ಹತ್ತಿದರೆ…

ಬೆಳಿಗ್ಗೆ ಪ್ರಿನ್ಸಿಪಾಲರ ಕೊಠಡಿಯಲ್ಲಿ ಮೀಟಿಂಗ್ ನಲ್ಲಿದ್ದಾಗ ಲ್ಯಾಬ್ ರಿಪೋರ್ಟ್ ಬಂದಿದೆ ಅನಿಸಿತ್ತು. ಮೊಬೈಲ್ ಕೂಗಿನಿಂದ; ಆದರೆ ಅಲ್ಲಿ ನೋಡೋ ಹಾಗಿರಲಿಲ್ಲ ಎಷ್ಟೇ ಕ್ಯೂರಿಯಾಸಿಟಿ ಇದ್ದರೂ ಸಹ. ಕ್ಲಾಸ್ ನಲ್ಲಿ ಕೂತಾಗ, ಮಕ್ಕಳಿಗಾಗಿ ಸಣ್ಣ ಕ್ಲಾಸ್ ವರ್ಕಂತ ಕೊಟ್ಟು, ಹೆಚ್ಚೂಕಮ್ಮಿ ನಡುಗುವ ಬೆರಳುಗಳಲ್ಲೇ ನೋಡಿದರೆ, ಆಶ್ಚರ್ಯ ಕಾದಿತ್ತು. ಎಲ್ಲ ನಾರ್ಮಲ್! ಖುಷಿಯಂತೂ ಆಯ್ತು. ಹಾಗಾದರೆ ಇಶ್ಯೂಗಳೇ ಇಲ್ಲದ್ದಕ್ಕೆ ಕಾರಣ…? ಬೈ ಛಾನ್ಸ್… ಟೈಗರ್ ಇರಬಹುದಾ…ಛೆ,ಛೆ; ಈಗ ಯಾಕೆ ಅಂಥ ಚಿಂತೆ… ಅಕಸ್ಮಾತ್ ಅವರೇ ಆದರೂ, ನನಗೇನು; ಹೇಗಿದ್ದರೂ ನನಗೆ ಮಕ್ಕಳು ಬೇಕೇ ಬೇಕು ಅಂತ ಇಲ್ಲವಲ್ಲ…ಅವರಿಗೂ ಆಲ್ಮೋಸ್ಟ್ ಹಾಗೇ ಅಲ್ಲವೇ…? ದಿಢೀರನೆ ಶಾಲೆಯ ಬೆಲ್ ಬಡಿತ…ಯೋಚನೆ ಕಟ್, ಹೊರಡುವ ಹೊತ್ತು.

ಮನೆಗೆ ಹೋಗುವ ಮುನ್ನ, ಫಿಸಿಕಲ್ ಕಾಪಿ ಅಂತ ಒಂದಿದ್ದರೆ ಒಳ್ಳೆಯದು ಅನ್ನಿಸಿ, ಲ್ಯಾಬ್ ನಲ್ಲಿ ಅದನ್ನ ತಗೊಂಡೆ. ಮುಂದೆ ಏನು ಎತ್ತ ಅಂತ ಇನ್ನೂ ಗೊತ್ತಿಲ್ಲದೆ, ಬೇಕೋ ಬೇಡವೋ ಅನ್ನಿಸಿದರೂ, ಸ್ವಲ್ಪ ಸ್ವೀಟ್ ಕೊಂಡುಕೊಂಡೆ.

ಮನೆಯಲ್ಲಿ  ಫ್ರೆಶ್-ಅಪ್; ಕಾಫಿ, ಮತ್ತೆ ಈಸಿ ಛೇರ್ ಆಕ್ಯುಪೇಷನ್… ಅಮ್ಮನಿಗೇ ಕಾಯೋದು ಬೇಡ, ನಾನೇ ಕಾಲ್ ಮಾಡ್ಬೇಕು…”ಹಲೋ, ಅಮ್ಮ; ಗುಡ್ ನ್ಯೂಸ್…ನನ್ನ ರಿಪೋರ್ಟ್ ಎಲ್ಲ ನಾರ್ಮಲ್…” ಅವರು ಹೇಳಿಕೆಗೆ  ಕಾಯದೆ ಹೇಳಿದೆ. “ಹೌದಾ…ಆ ದೇವ್ರು ದೊಡ್ಡೋನು ಬಿಡು… ಸರೀ… ಹಂಗಾದ್ರೆ ಮಕ್ಕಳು?” ಅಮ್ಮನ ಸ್ವಾಭಾವಿಕ ಕುತೂಹಲ! “ಹಿಂಗ್ ಕೇಳ್ತೀನಿ ಅಂತ ಬೇಜಾರ್ ಮಾಡ್ಕೋಬೇಡ, ಅಕಸ್ಮಾತ್ತಾಗಿ ನಿನ್  ಗಂಡನ್ನೂ ಟೆಸ್ಟ್ ಮಾಡಿಸ್ಬೇಕೋ  ಹೆಂಗೆ…” ಅಂತೂ ಕೇಳೇ ಬಿಟ್ಟರು. ಸಹಜ ತಾನೇ. ನೋಡ್ತೀನಮ್ಮ, ಟೈಗರ್ ಬಂದ್ ಮೇಲೆ, ಮಾತಾಡ್ತೀನಿ…ನಾಳೆ ನಾನೇ ನಿನಗೆ ಹೇಳ್ತೀನಿ…” ಅಂದೆ. ಜೋಪಾನ ಕಣೇ, ಸೂರ್ಯನ್ ಜೊತೆ ಮಾತಾಡ್ಬೇಕಾದ್ರೆ ಸ್ವಲ್ಪ ನಿಗಾ ಇರಲಿ…ಯಾಕಂದ್ರೆ ವಿಷ್ಯಾನೇ ಸೂಕ್ಷ್ಮ ಅಲ್ವ…” ಅಮ್ಮ ತಾನೆ, ಎಷ್ಟಾದರೂ.

ಯಾರದೋ ಬೇರೆ ಕಾಲ್ ಬರ್ತಿದೆ ಅಮ್ಮ, ನಾನು ನಾಳೆ ಮಾತಾಡ್ತೀನಿ”…”ಆಯ್ತುಮ್ಮ”…  ಅಮ್ಮ ಮಾತನ್ನ ನಿಲ್ಲಿಸಿದರು. ಈ ಕಡೆ ಟೈಗರ್, “ರೀ ಕಲ್ಯಾಣಿ, ಏನ್ರೀ ಇದು ಇವತ್ತು ಇಷ್ಟ್ ಬೇಗ ಹೊಟ್ಟೆ  ಹಸಿವು…ನಾನೀಗ ಆನ್ ದ ವೇ…ಏನಾದರೂ ಲೈಟಾಗಿ ‘ಹುಲಿಮೇವು’ ಮಾಡಿಡಿ, ಪ್ಲೀಸ್ ” ಅಷ್ಟು ಹೇಳಿದ ಟೈಗರ್ ಕಾಲ್ ಕಟ್ ಮಾಡಿದರು. ಈಗ ನನ್ನ ಸರದಿ. ‘ಅಡಿಗೆಖಾನೆ’ ಕಡೆ ಹೊರಟೆ. ಆಶ್ಚರ್ಯ, ಇವತ್ತೇನು ಇಷ್ಟು ಬೇಗ? ಅನ್ನಿಸಿತು.ಟೈಗರ್ ಸಾಹೇಬರಿಗೆ ಹೋಟೆಲ್ ಅಂದರೆ ಅಷ್ಟೊಂದು ಇಷ್ಟ ಇಲ್ಲ. ಎಲ್ಲೋ ಒಮ್ಮೊಮ್ಮೆ, ಅಷ್ಟೆ. ಅದೂ ಸ್ಪೆಷಲ್ ಅಂತ ಇದ್ದರೆ.

ಬಂದವರೇ, ಕೈ ತೊಳೆದು, ನೇರ ಪ್ಲೇಟ್ ಹಿಡಿದರು. ತಿಂದಾದ ನಂತರ, ಸಾವಕಾಶವಾಗಿ ಅವರೇ ಅವರ ಅಮ್ಮನಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದೂ ಅಲ್ಲದೆ, ನಾನೂ ಟೆಸ್ಟ್ ಮಾಡಿಸ್ತೀನಿ, ಅಂತಲೂ ಹೇಳಿದರು. ಸದ್ಯ ಅವರಮ್ಮ ನಿನಗ್ಯಾಕೋ ಟೆಸ್ಟು ಗಿಷ್ಟು, ನಿನಗೇನು ಧಾಡಿ ಅಂತ ಕೇಳದೆ ಸುಮ್ಮನಾಗಿದ್ದರು. ಎದೆಯಲ್ಲಿ ಮೊಮ್ಮಗು ಡಾನ್ಸ್ ಮಾಡ್ತಾ ಇರಲಿಲ್ಲವೇ ಮತ್ತೆ!

ಒಂದು ವಾರದ ನಂತರ, ಒಂದು ದಿನ ಇಬ್ಬರು ರಜಾ ಹಾಕಿ, ಡಾಕ್ಟರ್ ಕನ್ಸಲ್ಟೇಶನ್ ಮತ್ತು ಎಲ್ಲ ಥರದ ಟೆಸ್ಟ್ ಗಳನ್ನೂ ಮಾಡಿಸಿದ್ದಾಯ್ತು.

ಅಂತೂ ಅಂತಿಮವಾಗಿ, ನನ್ನ ಟೈಗರ್ ಅವರಿಗೇ ತೊಂದರೆ ಅಂತ ಗೊತ್ತಾಯ್ತು. ‘ಅಜೂಸ್ಪರ್ಮಿಯ’ ಅಂದರೆ, ವೀರ್ಯಾಣುಗಳೇ ಇಲ್ಲದ ಅವಸ್ಥೆ! ಇನ್ನು ಇವರಿಂದ ಮಕ್ಕಳು ಅಂತ ಎಲ್ಲಿ? ಒಂದು ಕ್ಷಣ ನನಗೆ ಅಯ್ಯೋ ಅನ್ನಿಸಿದರೂ, ಸದ್ಯ ಹೆರುವ ಶಿಕ್ಷೆ ಇಲ್ಲವಲ್ಲ…ರೋಗಿ ಬಯಕೆಯನ್ನೇ ಆ ದೇವರೂ ಸಹ  ತಥಾಸ್ತು ಅಂದ ಹಾಗೆ.

ಆದರೆ ನಮ್ಮ ಅತ್ತೆಗೆ ಅರ್ಥ ಮಾಡಿಸೋದು ಹೇಗೆ. ಮಾವ ಏನನ್ನಬಹುದು. ಇದೊಂದು ಸಮಸ್ಯೆಯಲ್ಲಿ, ಅವರೂ ಸಹ       ನಮ್ಮತ್ತೆಗೆ ಕೈ ಜೋಡಿಸದೇ ಇರ್ತಾರ? ಇನ್ನು ಇವರುಗಳಾಚೆ,  ಬೆಟ್ಟದಾಚೆ ಹಾಗೆ, ನಮ್ಮಮ್ಮ, ಅಪ್ಪ, ಅಣ್ಣ ಎಲ್ಲ ಹೇಗೆ…

ಏಕೋ ಏನೋ ಸುಮಾರು ಒಂದು ವಾರದ ಮೇಲೆ ಯಾವ ಸದ್ದಿಯೂ ಯಾರಿಂದಲೂ ಇರಲಿಲ್ಲ; ಇದೂ ಸಹ ಆಶ್ಚರ್ಯ! ಬಹುಶಃ ‘ಮುಂದೆ ಏನು’ ಅನ್ನೋದನ್ನ ಎಲ್ಲರೂ ಅವರವರ ಶೈಲಿಗಳಲ್ಲಿ ಅಳೆದೂ ಸುರಿದೂ, ಹೇಗೆ ಇಂಥ ಸೂಕ್ಷ್ಮ ವಿಷಯ ಕೆದಕುವುದು ಅನ್ನುವ ಚಿಂತೆಯಲ್ಲಿ ಮುಳುಗಿದಾರಾ…? ಇದೇ ಸಂದರ್ಭದಲ್ಲಿ, ಟೈಗರ್ ಮತ್ತು  ನಾನು ಅಡಾಪ್ಶನ್ ಮತ್ತು ಇನ್ನಿತರ ಭವಿತವ್ಯಗಳ ಬಗ್ಗೆ, ಉಯ್ಯಾಲೆ ಏರಿ ತೂಗುತ್ತಾ ಇರುವಾಗ…

ಒಂದು ಭಾನುವಾರ ನಮ್ಮತ್ತೆಯ  ಬುಲಾವ್, ಟೈಗರ್ ಒಬ್ಬರೇ ಬರುವಂತೆ. ವಿಧಿಯಿಲ್ಲ, ಹೋದರು.

ಸುಮಾರು ಸಮಯದ ನಂತರ,”ರೀ,ಕಲ್ಯಾಣಿ, ಸಾರಿ ಕಣ್ರೀ, ಮಧ್ಯಾಹ್ನ ಇಲ್ಲೇ ಊಟ ಮಾಡ್ಕೊಂಡು ಬರ್ತೀನಿ. ನೀವು ಊಟ ಮಾಡ್ಬಿಡಿ ಪ್ಲೀಸ್” ಫೋನ್ ಮಾಡಿ ಅಷ್ಟೇ ಹೇಳಿದರು. ಇದೂ ಆಶ್ಚರ್ಯ. ಯಾವಾಗಲೂ ಹೀಗೆ ಒಬ್ಬರೇ ಊಟಕ್ಕೆ ಎಲ್ಲೂ ಇದ್ದವರಲ್ಲ; ಕೆಲಸದ ಮೇಲೆ ಬೇರೆ ಊರಿಗೆ ಹೋದಾಗ ಅಲ್ಲದೆ. ಅಂತೂ ಈ ಸಂಡೆ ಟೈಗರ್ ಇಲ್ಲದ ‘ಸ್ಪೆಷಲ್!’ ಅಂದುಕೊಂಡು ಏನೋ ಒಂದು ಚೂರು ತಿಂದ ಶಾಸ್ತ್ರ ಮಾಡಿ  ಆಯಿತು.

ಮಧ್ಯಾಹ್ನ ಸಾಮಾನ್ಯ ನಾನು ಮಲಗಿದವಳೇ ಅಲ್ಲ. ಸ್ಕೂಲ್ ನಲ್ಲೇ  ಬೆಳಗಿನಿಂದ ಸಂಜೆವರೆಗೂ ಇರುವ ನಮ್ಮಂಥವರಿಗೆ ಎಂಥ ನಿದ್ದೆ. ಆದರೆ,  ಈಹೊತ್ತು, ಬಿಸಿಲ ಝಳಕ್ಕೋ ಏನೋ ಮಂಪರು. ಟಿವಿ ಸ್ವಿಚ್ ಆಫ್ ಮಾಡಿ ಮಲಗಿದ್ದಷ್ಟೇ ಗೊತ್ತು.

ದಢಕ್ಕನೆ ಎಚ್ಚರ ಆದಾಗ ಬೆಲ್ ಇನ್ನೂ ಬಡಿದುಕೊಳ್ಳುತ್ತಲೇ ಇತ್ತು. ಬಾಗಿಲು ತೆಗೆದೆ; ಟೈಗರ್. ಸ್ವಲ್ಪ ರೆಸ್ಟ್ ಬೇಕು ಅಂತ ಬೆಡ್ ರೂಮ್ ಕಡೆ ಹೋದರು. ನಾನೂ ಡಿಸ್ಟರ್ಬ್ ಮಾಡಲಿಲ್ಲ. ಎದ್ದೇಳಲಿ ಅಂತ ಸುಮ್ಮನೆ ನನ್ನ ಕೆಲಸದ ಕಡೆ ಗಮನ ಹರಿಸಿದೆ. ಟೈಗರ್ ಮನೆಗೆ ಬಂದಾಗ ಐದೂವರೆ ಘಂಟೆ. ಎದ್ದು ಮೈಮುರೀತಾ ಬೆಡ್ ರೂಮಿಂದ ಹೊರಗೆ ಬಂದಾಗ, ಏಳೂ ಐವತ್ತು. ಭಾನುವಾರ ಸ್ವಲ್ಪ ದೀರ್ಘ ರೆಸ್ಟ್ ಮಾಡೋದು ಟೈಗರ್ ರೂಢಿ. ಆಲ್ಮೋಸ್ಟ್ ಎಲ್ಲ ಐಟಿ ಜನರೂ ಹಾಗೆ ಅಂತೆ.

ಕಾಫಿ ಕೊಟ್ಟು, ನಾನು ನನ್ನ ರಾತ್ರಿ ಮತ್ತು ನಾಳೆ ತಯಾರಿಗಾಗಿ ಕಿಚನ್ ಕಡೆ ಹೊರಟೆ. ನನ್ನ ಮನಸ್ಸಿನಲ್ಲಿ ಅತ್ತೆ ಮನೆ (ಅತ್ತೆ ಮನೆ ಅಂತಲೇ ಬಾಯಿಗೆ ಬರುತ್ತೆ; ಅಷ್ಟು ಡಾಮಿನೆಂಟ್ ಅವರು. ಮಾವ, ಪಾಪ ಅನ್ನಿಸಿತು) ಏನೋ ನಡೆದಿದೆ, ಹಾಗಾಗಿ ಟೈಗರ್ ನನಗೆ ಹೇಳೋದು ಹೇಗೆ ಅಂತ ಕಷ್ಟ ಪಡುತ್ತಾ ಇದಾರೆ ಅಂದುಕೊಂಡೆ.

ರಾತ್ರಿ ಊಟದ ನಂತರ, ಏನೋ ಓದುತ್ತಾ ಕೂತಿದ್ದರು, “ಕಲ್ಯಾಣಿ, ಬನ್ರೀ ಇಲ್ಲಿ” ಅಂದರು. ನಾನು ಸುಮ್ಮನೆ ಹೋಗಿ ಏನೂ ಮಾತಾಡದೆ ಪಕ್ಕದಲ್ಲೇ ಕೂತೆ. ಕಷ್ಟದಿಂದ ಒಂದು ಸಣ್ಣ ಮುಗುಳುನಗೆ ಬಿತ್ತರಿಸಿ, “ಏನ್ ಮಾಡ್ತೀರಿ ಮುಂದೆ” ಅಂದರು. “ಅಂದರೆ?” ನಾನಂದೆ. “ನಮ್ಮಮ್ಮ ಬಿಲ್ಕುಲ್ ನಂಬ್ತಿಲ್ಲ”. ನಮ್ಮ ವಂಶದಲ್ಲೇ ಯಾರಿಗೂ ಇಲ್ಲದಂಥ ರೋಗ ನನಗೆ ಹೇಗೆ ಬರಬೇಕು ಅಂತ, ಅವರ ಆರ್ಗ್ಯೂಮೆಂಟು…

ಸ್ವಲ್ಪ ನಿಲ್ಲಿಸಿದರು. “ಹಾಗಾದರೆ ಮುಂದೇನಂತೆ” ನಾನು ಕೇಳಿದೆ. ಮತ್ತೆ ಸ್ವಲ್ಪ ಮೌನ.

“ಅವರದ್ದು ಎರಡು ಸಲಹೆ; ಹೇಳ್ತೀನಿ ನಿಮಗೆ ಬೇಜಾರಿಲ್ಲ ಅಂದರೆ” ಅಂತ ಮತ್ತೆ ನಿಲ್ಲಿಸಿದರು. “ರೀ, ಟೈಗರ್, ನನ್ನ ಬಗ್ಗೆ ನಿಮ್ಗೇನೂ ಗೊತ್ತಿಲ್ಲ ಅಲ್ವಾ” ಅಂದೆ. ನನ್ನ ಮೆಂಟಾಲಿಟಿ ಏನು ಎತ್ತ ಅಂತ ಅವರಿಗೆ ಚೆನ್ನಾಗೇ ಗೊತ್ತು. ನಿಜವಾದ ಟೈಗರ್ರೇ ಎದುರಾದರೂ ನಾನು ಜಗ್ಗುವವಳಲ್ಲ ಅನ್ನೋದು… “ಅವರಿಗೆ ಅಡಾಪ್ಶನ್ ಸುತರಾಂ ಇಷ್ಟ ಇಲ್ಲವಂತೆ ಅಂತಲೂ, ಯಾರೋ ಹೆತ್ತ ಮಗು ತಂದು ನಾವ್ಯಾಕೆ ಸಾಕಬೇಕು ಅಂತಾನೂ ಕಡ್ಡಿ ತುಂಡಾದಂತೆ ಹೇಳಿದ್ದರು’ ಅಂತ ವರದಿ ಒಪ್ಪಿಸಿ, ಸ್ವಲ್ಪ ಸುಧಾರಿಸಿಕೊಂಡಂತೆ, ಎರಡು ಸೆಕೆಂಡ್ ತಡೆದ ನಂತರ…”ಒಂದು ನನಗೆ ಇನ್ನೂ ಒಂದು ಮದುವೆ. ಎರಡು, ನಿಮಗೆ ಡೈವೋರ್ಸ್…” ಅಂದು, ನನ್ನ ರಿಯಾಕ್ಷನ್ ಗಾಗಿ ಮುಖಾನೇ ದಿಟ್ಟಿಸಿದರು; ಈಗ ಅವರ ಮುಖದಲ್ಲಿ ಮೊದಲ ಥರ ಹಿಂಸೆ ಇಲ್ಲದೆ, ಬದಲಿಗೆ ಒಂದು ರೀತಿ ತುಂಟು ನಗೆ ಹೊಮ್ಮಿದ ಹಾಗೆ… “ನೀವೇನ್ ತೀರ್ಮಾನ ತಿಳಿಸಿ ಬಂದ್ರಿ” ಅಂದೆ. “ನನ್ನದೇನ್ರಿ ಇದೆ  ಇದರಲ್ಲಿ, ಇಲ್ಲ ಮೊದಲನೇ ಹೆಂಡತಿ ಪಟ್ಟಕ್ಕೆ ಒಪ್ಪೋದೋ ಅಥವಾ ನನ್ನನ್ನ ಬಿಟ್ಬಿಡೋದಕ್ಕೋ ನೀವೇ ತಾನೇ ತೀರ್ಮಾನ ತಗೋಬೇಕು…” ಅಂತ ಅನ್ನುತ್ತಲೇ… ನನ್ನನ್ನ ಭದ್ರ, ಅಂದರೆ ಬಹಳ ಸುಖ ಅನ್ನಿಸುವಷ್ಟು ಸುಭದ್ರವಾಗಿ ತಬ್ಬಿದರು…ತಬ್ಬಿ ತುಟಿಗಾಗಿ ಮುಂದಾದರು…ಆ ಕ್ಷಣದಲ್ಲಿ ನನ್ನ ಟೈಗರ್ ಏನು ಅನ್ನೋದು ನನಗೆ ಮತ್ತೆ ಅರಿವಾಯಿತು…

*****************************

8 thoughts on “ಡಿಯರ್-ಟೈಗರ್!

  1. ಭಾಷಾ ಪ್ರೌಢಿಮೆ ಉತ್ಕೃಷ್ಟವಾಗಿದೆ ಸರ್. ಕಥಾವಸ್ತು ಚೆನ್ನಾಗಿದೆ.

  2. ರಮೇಶ್, ನಿಖಿತ, ಲಕ್ಷ್ಮೀಶ್ – ನಿಮ್ಮೆಲ್ಲರಿಗೂ ಧನ್ಯವಾದಗಳು.

  3. ಕಥೆ ಗೆ logical end ಅಂತರಲ್ಲ, ಹಾಗೆ ಆಗಿದೆ ಅಂತ ಅನ್ನಿಸಲಿಲ್ಲ. ಕಥೆಯ ಓಟದಲ್ಲಿ ಏಕ ತಾನ ಎಂದು ಅನ್ನಿಸಿತು. ಪ್ರಯತ್ನ ತುಂಬಾ ಚೆನ್ನಾಗಿದೆ. ಒಳ್ಳೆಯ ಕಥೆಗಾರ ಆಗುವ ಲಕ್ಷಣಗಳು ಹೇರಳವಾಗಿದೆ.
    Hearty congrats Neelakanta Murthy.

  4. ಅನಾನಿಮಸ್ ಎಂದು ಬರೆದವರಿಗೆ, ಡ್ರೀಮ್ ಎ.ಎಸ್ ಅವರಿಗೆ ಮತ್ತು ವೆಂಕಟೇಶ ರಾವ್ ಅವರೆಲ್ಲರಿಗೂ ಅನಂತ ಧನ್ಯವಾದಗಳು.

Leave a Reply

Back To Top