ಅಂಕಣ ಬರಹ
ರಂಗ ರಂಗೋಲಿ-06
ಅಜ್ಜಿಯ ಗೂಡಲಿ ಹಾರಲು
ಕಲಿತ ಗುಬ್ಬಿ ಮರಿ
ಆ ಹಳೇ ಮನೆಯಲ್ಲಿ ತೆಂಗಿನ ಹಸಿ ಮಡಲಿನಿಂದ ಒಂದೊಂದು ಒಲಿಯನ್ನು ತನ್ನ ಚಿಕ್ಕಕತ್ತಿಯಿಂದ ಸರ್ರೆಂದು ಎಳೆದು ನನ್ನ ಆಟಕ್ಕೆ ಹಾವು ,ಬುಟ್ಟಿ, ವಾಚ್,ಕಾಲ್ಗೆಜ್ಜೆ, ಕನ್ನಡಕ ಎಷ್ಟು ಪರಿಕರಗಳು ತಯಾರಾಗುತ್ತಿದ್ದವು. ಮಿದುಳಲ್ಲಿ ಚಿತ್ರವಾದ ಕಲ್ಪನೆಗಳೆಲ್ಲಾ, ಅದ್ಭುತ ಆಟಿಗೆಯಾಗಿ, ಕಲಾಪರಿಕರಗಳಾಗಿ ತಯಾರಾಗುವ ಕಲೆಯ ಕುಲುಮೆಯೇ ಅವರಾಗಿದ್ದರು.
ಕಾಡಿಗೆ ಹೋಗಿ ಅದೆಂತದೋ ಕಡ್ಡಿಯಂತಹ ಬಳ್ಳಿ ಎಳಕೊಂಡು ಬರುತ್ತಿದ್ದಳು. ಅದರ ಸಿಪ್ಪೆ ತೆಗೆದು ಹೂ ಬುಟ್ಟಿ,ಅನ್ನ ಬಸಿಯುವ ತಟ್ಟೆ, ದೋಸೆ ಹಾಕುವ ಪಾತ್ರೆ,ಅನ್ನ ಹಾಕಿಡುವ ಪಾತ್ರೆ ತಯಾರಿಸುತ್ತಿದ್ದಳು. ತಾನು ತಾಂಬೂಲ ಹಾಕಿಕೊಳ್ಳುವದಲ್ಲದೆ ಅದಕ್ಕೆಂದೇ ಪುಟ್ಟ ಪರಿಕರ ಈ ಬಳ್ಳಿಯಿಂದ ಮಾಡಿಕೊಂಡಿದ್ದಳು.
ಬಿದಿರನ ರೀತಿಯ ವಾಂಟೆ ಎನ್ನುವ ಗಿಡದಿದ
ಗೊರಬು, ಕುಡ್ಪು, ಈಂಚಿಲ ಗಿಡದ ಚಾಪೆ,ಮುಂಡುಗೆಯ ಚಾಪೆ..ಇದಕ್ಕೆ ಎಲೆ,ಗಿಡ ತಂದು ಕೊಡುವ ಕಾಯಕ ನನ್ನ ಬಾಬನದ್ದು(ಅಜ್ಜ) . ಮನೆಯ ಹಿತ್ತಲಿನನಲ್ಲಿ ಅಂಗಳದಲ್ಲಿ ಬಗೆಬಗೆಯ ಹೂವಿನ ಗಿಡಗಳು ಅದಕ್ಕೆ ಪಾತಿ ಮಾಡಿ ನೆಟ್ಟು ಗಿಡಗಳೊಂದಿಗೆ ಸಂಭಾಷಿಸಿ ಹೂವ ಕೊಯ್ದು ದಾರದಲ್ಲಿ ಮಾಲೆಯಾಗಿಸುವ ಸೂತ್ರಧಾರೆ ಅವಳು.
ಸಾಮಾನ್ಯ ಕಚ್ಛಾವಸ್ತುಗಳು ಅದ್ಭುತ ಕಲಾಪಾತ್ರಗಳಾಗುವ ಈ ಬೆರಗನ್ನು ನೋಡುತ್ತಾ, ಬೆಳೆದ ದಿನಗಳವು. ರಂಗಸ್ಥಳದ ಹಿನ್ನೆಲೆಯಲ್ಲಿ, ಚೌಕಿಯೊಳಗೆ ಪಾತ್ರಗಳ ಭಾವರೂಪಕಗಳು, ಅತಿ ಸಾಮಾನ್ಯ ವ್ಯಕ್ತಿಯೂ ನಾಟಕದ ಅಪೂರ್ವ ಪಾತ್ರಾಭಿವ್ಯಕ್ತಿಯಾಗಿ ತಯಾರಾಗುವ ಕ್ರಿಯೇಟಿವಿಟಿಯ ಮೂಲ ಹುಡುಕುತ್ತಾ ಹೋದರೆ ಬಂದು ನಿಲ್ಲುವುದು ಇಲ್ಲೇ.
ಇವಳೊಂದು ಕಡಲು. ಅವಳ ದಂಡೆಯಲ್ಲಿ ಬೆಪ್ಪಾಗಿ ನಿಂತ ಪ್ರವಾಸಿಗಳು ನಾನು. ಕರೆಯುತ್ತಾಳೆ. ಎಷ್ಟು ಮೊಗೆದರೂ ಅಷ್ಟು ಬೊಗಸೆಗೆ ತುಂಬುತ್ತಾಳೆ. ನಾನೇ ಅದರೊಳಗೆ ಮುಳುಗಿ ಮುತ್ತು ರತ್ನ ಆಯಬಹುದು.ನಾನಂತೂ ಮನಸಃ ಈಜಿರುವೆ. ಅವಳ ಬಾಳ ಅಚ್ಚಿನ ಪಾತ್ರೆಯಲ್ಲಿ ತಯಾರಾಗಿ ಬಂದ ಬದುಕು ನಾಟಕದ ಪಾತ್ರ ನಾನು.
ಅವಳು ದಾರ ಹಿಡಿದು ಬೊಂಬೆಯ ಕುಣಿತ ಕಲಿಸಿದಳು. ಬಹಿರಂಗದಲ್ಲಿ ಮೊಣಕಾಲೂರಿ ಬಾಗಿ ಪ್ರತಿಯೊಂದರಲ್ಲೂ ಪ್ರೀತಿ ಕಲಿಕೆಯ, ಪಾತ್ರದೊಳಗೆ ತನ್ಮಯತೆಯ ಮಹಾಮಂತ್ರ ಬೋಧಿಸಿದಳು. ಅವಳ ದೃಷ್ಟಿಯಲ್ಲಿ ಯಾವುದೂ ನಿರುಪಯೋಗಿ ವಸ್ತುವಿಲ್ಲ. ಪ್ರತಿಯೊಂದಕ್ಕೂ ಚೌಕಟ್ಟು ಕಟ್ಟಿ ಚೌಕಿಯೊಳಗೆ ಚೆಂದವಾಗಿಸುವುದನ್ನು ತೋರಿಕೊಟ್ಟವಳು.
ಯಕ್ಷಗಾನ ನೋಡಿ ಬಂದ ಮರುದಿನದ ಕತ್ತಲಿಗೆ ಆ ಕಥೆಯ ಉತ್ತರಾರ್ಧ ಚಿಮುಟಿ ದೀಪದ ಬೆಳಕಿನಲ್ಲಿ ಮುಂದುವರೆಸುತ್ತಿದ್ದಳು. ದೀಪದಿಂದ ಬರುವ ಹೊಗೆ ನನಗೆ ಯಾವಾಗಲೂ ಕಥೆ ಕೇಳುವಲ್ಲಿ ಅಡ್ಡಿಯಾಗಲಿಲ್ಲ. ಹೇಳಿದ ಕಥೆ ಮತ್ತೆ ಪುನರಾವರ್ತನೆ ಆಗುವುದು ಬಹಳ ಕಡಿಮೆ.
ಈಕೆಗೆ ಕೇವಲ ರಾಮಾಯಣ, ಮಹಾಭಾರತ ಮಾತ್ರವಲ್ಲ ಇತಿಹಾಸದ ಕಥೆಗಳನ್ನೂ ರೋಚಕವಾಗಿ ಹೇಳ ಬಲ್ಲಳು.ಚಂದ್ರಗುಪ್ತ ಮೌರ್ಯ,ಹಕ್ಕಬುಕ್ಕರು ಅವಳಿಗೆ ತೀರ ಪರಿಚಿತರು. ಹಗಲು ದುಡಿತ,ಮನೆಕೆಲಸ, ನನಗೆ ಕಥೆ..ಇವೆಲ್ಲದರ ಜೊತೆಗೆ ಸ್ವಲ್ಪವಾದರೂ ಕಥೆಗಳನ್ನು ಓದದೆ ಅವಳು ಅಡ್ಡವಾದ ನೆನಪಿಲ್ಲ. ನಾನು ಬೆಳೆದ ನಂತರ ನನ್ನ ಓದಿನ ಹಸಿವು ಹೆಚ್ಚಿದಂತೆ ಆಕೆ ನನ್ನ ಮಗುವಾಗುತ್ತಿದ್ದಳು.
” ಏನೆಲ್ಲ ಓದಿದ್ದೀ..ಅದರಲ್ಲಿ ನಿನಗಿಷ್ಟದ ಚೆಂದದ ಒಂದು ಕಥೆ ಹೇಳು ನೋಡುವ”.
ನಾನು ಕಥೆ ಹೇಳುವ ಸಂದರ್ಭ ಬಂದಾಗಲೆಲ್ಲ ಅವಳ ಚರ್ಯೆ ನೆನಪಿಸಿ ಅನುಕರಿಸುತ್ತಿದ್ದೆ. ಕಥೆ ಮತ್ತಷ್ಟು ಅಲಂಕಾರಗೊಂಡು ನನಗಾದ ಆ ಅನುಭೂತಿಯೇ ಅವಳಿಗೂ ಉಣಿಸಬೇಕೆಂಬ ಆಸೆ. ಕೆಲವೊಮ್ಮೆ ಪುಸ್ತಕ ಕೊಟ್ಟು
“ಇದರಲ್ಲಿ ಚೆಂದದ ಇಂದು ಕಥೆ ಓದು. ಕೇಳುತ್ತೇನೆ “, ಎನ್ನುತ್ತಿದ್ದಳು.
ನನ್ನ ಓದು ನಿಧಾನಗೊಂಡರೆ..
” ನನಗೆ ಅರ್ಥ ಆಗುತ್ತಿದೆ. ಗಾಡಿ ಸ್ವಲ್ಲ ಬೇಗ ಹೋಗಲಿ” ಅನ್ನುತ್ತಿದ್ದರು.
ಹೇಳುವ ವೇಗ ಹೆಚ್ಚಿದರೆ,
“ಎಂತ ಅದು ಕಥೆಯಾ..ಓದಬೇಕೂಂತ ಓದುವುದಾ..ಸರಿ ಮಾಡಿ ಮೊದಲಿಂದ ಓದು”
ಎನ್ನುವ ಅಪ್ಪಣೆ.
ಮುಂದೆ ನಾಟಕವೊಂದು ರಂಗದ ಮೇಲೆ ಬರುವ ಪ್ರಕ್ರಿಯೆಗೆ ಪೂರ್ವಭಾವಿ ಕಾರ್ಯಗಳಲ್ಲಿ ಅದರ ಓದು ಎಷ್ಟೊಂದು ಪ್ರಮುಖ ಪಾತ್ರ ಎಂದು ಅರಿವಿಗೆ ಬಂದಾಗ ನನ್ನ ಕಣ್ಣೆದುರು ಕಥೆ ಓದಿಸುತ್ತಿದ್ದ ನನ್ನ ಮೊದಲ ನಿರ್ದೇಶಕಿ ಬರುತ್ತಾಳೆ.
ಹಗಲಿಡೀ ದುಡಿದು ದಣಿದ ಆಕೆ ನನ್ನ ಪುಟ್ಟ ಕರಗಳನ್ನು ತನ್ನ ಅಂಗೈಯೊಳಗಿರಿಸಿ ಮನೆಯ ಹೊರಗೆ ಸಗಣಿ ಸಾರಿಸಿದ ಅಂಗಳಕ್ಕೆ, ಆ ತೆರೆದ ರಂಗ ಮಂಟಪಕ್ಕೆ ಕರೆತರುತ್ತಿದ್ದಳು. ಎದುರು ಗಗನಚುಂಬನಕ್ಕೆ ಹೊರಟ ತೆಂಗಿನ ಮರ. ಆಕಾಶ ಭಿತ್ತಿಯಲ್ಲಿ ಚಂದಿರ, ನಕ್ಷತ್ರ, ಚೆಲ್ಲುವ ಬೆಳದಿಂಗಳು. ಆ ತಂಪು.
ಅಮ್ಮ ನಕ್ಷತ್ರದ ಕಥೆ ಎಂದರೆ ಧ್ರುವ ಮಹಾರಾಜ,ಸವತಿ ಮಾತ್ಸರ್ಯ, ಸಪ್ತ ಋಷಿಗಳ ಕಥೆ, ನಚಿಕೇತ, ಉಲೂಪಿ,ಯಕ್ಷ,ಗಂದರ್ವರು, ನಾಗದೇವತೆಗಳು, ಜನಮೇಜಯನ ಸರ್ಪಯಾಗ ಇವೆಲ್ಲವೂ ಸಾಕ್ಷಾತ್ಕಾರಗೊಳ್ಖುವುದು ಅಲ್ಲೇ. ಚಂದಿರನ ಬೆಳಕು , ತೆಂಗಿನ ಗರಿಗಳ ರಂಗ ವಿನ್ಯಾಸ. ಆಕೆಯ ಮುಖದ ಮೇಲೆ ಕಥೆಯ ಭಾವಕ್ಕೆ ತಕ್ಕಂತೆ ಗಾಳಿಯ ಓಟಕ್ಕೆ ಹರಿದಾಡುವ ನೆರಳು ಬೆಳಕಿನ ಲೈಟಿಂಗ್ ತಂತ್ರಜ್ಞಾನ. ನಾನು ಪ್ರೇಕ್ಷಕಳು. ಆಕೆಯದು ಆ ಅಭಿನಯ ಜಗಲಿಯಲ್ಲಿ ಏಕವ್ಯಕ್ತಿ ಪ್ರಸ್ತುತಿ.
ನೂರಾರು ಪ್ರೇಕ್ಷಕರ ಕಣ್ಣೊಳಗೆ ಬಿಂಬವಾಗಿ ಮೂಡುವ, ನಾಟಕದ ಪಾತ್ರವಾಗಲು ಎಂಟೆದೆಯ ಧೈರ್ಯ ಬೇಕು. ಭಾವ, ಅಭಿನಯ, ಮಾತುಗಳು, ರಂಗಚಲನೆ ಇವೆಲ್ಲ ದೇಹದೊಳಗೆ ಹೊಕ್ಕು ವೇಷವಾಗಿ,ಆವೇಶವಾಗಿ ಅಭಿವ್ಯಕ್ತಿಯಾಗಲು, ಒಂದಿಷ್ಟೂ ಹಿಂಜರಿಕೆ, ಭಯ, ಸ್ವಂತಶಕ್ತಿಯ ಮೇಲೆ ಸಂಶಯ ಇರಲೇ ಬಾರದು. ಬಾಲ್ಯದಲ್ಲಿ, ನಾನು ಗುಬ್ಬಿ ಮರಿ. ಗೂಡು ಮಾತ್ರ ಬೆಚ್ಚಗೆ, ಹೊರಗೆಲ್ಲಾ ಅಭದ್ರತೆಯ ಭಾವ.
ಅಂಜಿಕೆ, ನಾಚಿಕೆ,ಹೆದರಿಕೆ ಧರಿಸಿಕೊಂಡ ಬಾಲ್ಯದ ನನ್ನ ಚಿತ್ತ ಚಿತ್ರವು ಹಲವಾರು ಸಲ ಭಯದ ಕುಲುಮೆಗೆ ದೂಡಿದಂತಾಗಿ ಚಡಪಡಿಸುತ್ತಿದ್ದೆ. ನಾಲ್ಕು ಜನಗಳಿದ್ದರೆ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದೆ. ಇದಕ್ಕೆ ಹಿನ್ನೆಲೆಯಾಗಿ ಕಾರಣಗಳೇನೇ ಇದ್ದರೂ ಅದು ನನ್ನ ವ್ಯಕ್ತಿತ್ವದ ಭಾಗವಾಗಿ ನಾನೇ ಅದಾಗಿ ಚಡಪಡಿಸುತ್ತಿದ್ದೆ.
ಯಾರ ಎದುರೂ ಬರಲಾರದ, ಮಾತನಾಡಲಾರದ ಪುಕ್ಕಲುತನ. ಆಗೆಲ್ಲ ಬಡಕಲು ಪುಟ್ಟ ದೇಹದ ನನಗೆ ಶಾಲೆಯಲ್ಲಿ ಮೊದಲ ಬೆಂಚ್ ನಲ್ಲಿ ಸ್ಥಳ ಖಾಯಂ. ಅದೂ ಬಹಳಷ್ಟು ಸಲ ಮೊದಲ ಸಾಲಿನ ಮೊದಲ ಜಾಗ. ವಿಪರೀತ ಚಡಪಡಿಕೆ,ಅಸ್ಯವ್ಯಸ್ತಗೊಂಡು ಕುಂಯ್ಯ್ ಗುಡುವ ಮನ. ಟೀಚರ್ ನನ್ನನ್ನೇ ನೋಡುವರು..ಹೊರ ಒಳಗೆ ಹೋಗಿ ಬರುವಾಗ ನನ್ನ ಸಹಪಾಠಿ ಗಳ ದೃಷ್ಟಿಯೂ ನನ್ನ ಮೇಲೆ. ಪ್ರಶ್ನೆಯೂ ಬಾಣದಂತೆ ನನಗೆ. ಶಾಲೆಯಿಂದ ತಪ್ಪಿಸಿಕೊಂಡು ಮನೆಯ ಆ ಕತ್ತಲೆ ಕೊಠಡಿಯಲ್ಲಿ ಕೂತರೇ..ಅನ್ನಿಸುತ್ತಿತ್ತು. ಅಂತಹ ಸಂದರ್ಭದಲ್ಲೆ ಮನಸ್ಸಿನ ಗಾಯಗಳಿಗೆ ಮುಲಾಮು ಹಚ್ಚುವಂತೆ ಅಜ್ಜಿ ನುಡಿದಿದ್ದಳು.
“ಕೇವಲ ಸೈನಿಕನಾದರೆ ಸಾಲದು. ದಂಡನಾಯಕನಾಗುವ ಬಗ್ಗೆ ಯೋಚಿಸಬೇಕು”
ಒಮ್ಮೆಯಲ್ಲ! ಬಾರಿಬಾರಿ. ನಾನು ಕುಸಿದಾಗಲೆಲ್ಲ..ನಾಯಕತ್ವ ನಿನ್ನ ಕೈಗೆ ತೆಗೆದುಕೋ ಅನ್ನುವುದನ್ನೇ ಅದೆಷ್ಟು ಬಡಿದೆಬ್ಬಿಸುವಂತೆ ಹೇಳುತ್ತಾ ಇದ್ದಳು.
“ನಾನು ಉದ್ದ ಇರಬೇಕಿತ್ತು ಅಮ್ಮ” ಎಂದು ನಾನಂದರೆ,
“ಪುಟ್ಟ ದೇಹ ಇರುವುದರಿಂದಲೇ ಸಾಧನೆ. ನೋಡುವ ನಾಳೆಯಿಂದ ಟೀಚರ್ ಹಿಂದೆ ಕುಳಿತುಕೊಳ್ಳಲು ಹೇಳಿದರೂ ನೀನು ಎದುರಿರಬೇಕು. ನಾಳೆ ನೀನು ದಂಡನಾಯಕಿ. ಸೈನ್ಯವನ್ನು ಮುನ್ನಡೆಸಬೇಕು.
ನಿನಗೆ ಯಾವುದು ಸಾಧ್ಯವಿಲ್ಲ ಎಂಬ ಭಯ ಇದೆಯೋ, ಅದೇ ಸಾಧ್ಯ ಮಾಡಬೇಕು. ಗೊತ್ತಿಲ್ಲದೆ ಇರುವುದನ್ನು ಗೊತ್ತು ಮಾಡುವ ಬಗ್ಗೆ ಯೋಚಿನೆ,ಯೋಜನೆ ಇರಬೇಕು.”
ಅನ್ನುತ್ತಾ ಕಥೆ, ಕಲ್ಪನೆ, ಕಲೆಯನೆಲೆ, ಧೈರ್ಯ ಎಲ್ಲವನ್ನೂ ಈ ಗುಬ್ಬಿ ಮರಿಯ ದೇಹದಲ್ಲಿ ತುಂಬಿ, ಹಾರಲು ಕಲಿಸಿದರು,
*******************************
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ
ಸೂಪರ್
ಧನ್ಯವಾದಗಳು
ಗುಬ್ಬಚ್ಚಿ ಅಜ್ಜಿಯಿಂದ ಹಾರಲು ಕಲಿತದ್ದು ಚಂದ. ಗಮನಿಸಬೇಕಾದದ್ದು, ಅಜ್ಜಿ ಮಗುವಿಗೆ ರೆಕ್ಕೆ ಕಟ್ಟಲಿಲ್ಲ. ಮಗುವೇ ರೆಕ್ಕೆ ಪುಕ್ಕ ಒಳಗಿಂದಲೇ ಬೆಳೆಸಿಕೊಂಡು ಹಾರಲು ಅನುವು ಮಾಡಿ ಕೊಟ್ಟಿದ್ದಾರೆ.
ಎಲ್ಲಾ ಮಕ್ಕಳಿಗೂ ಇಂತಹ ಅಜ್ಜಿ ಸಿಗಲಿ.
ನಮ್ಮ ನಡುವಿನ ಎಲ್ಲ ಕಂದಮ್ಮಗಳಿಗೂ ಹಾರುವ ಶಕ್ತಿ ತುಂಬುವುದಕ್ಕೆಂದೇ ಇಂಥ ಅಜ್ಜಿಯೊಬ್ಬರಿರಲಿ
ಶಮಾ..ನಿನ್ನ ಪ್ರೀತಿಗೆ ವಂದನೆಗಳು