ಕೊನೆಯ ಬೇಡಿಕೆ

ಕತೆ

ಕೊನೆಯ ಬೇಡಿಕೆ

ನಾಗರಾಜ ಹರಪನಹಳ್ಳಿ

ಮನೆಗೆ ಬರುವಾಗ ಟಮೋಟೋ, ಈರುಳ್ಳಿ ಇಡ್ಕೊಂಡು ಬಾ…ಸಾಂಬಾರು ಮಾಡಲು ಏನು ಇಲ್ಲ. ಬಂಗ್ಡೆ ಇದ್ದರೆ ತಗಂಬಾ. ಫ್ರೈ  ಮಾಡಿದ್ರಾಯ್ತು . ದೂರವಾಣಿ ಕರೆಯಲ್ಲಿ ಹೆಂಡ್ತಿ ಆದೇಶಿಸಿದ್ದಳು. ಮಧ್ಯಾಹ್ನ ಡಿ.ಸಿ. ಕಚೇರಿ ಬಳಿ ಇದ್ದ ಪ್ರೋಟೆಸ್ಟ್ ನ್ಯೂಸ್ ಕವರ್ ಮಾಡಿಕೊಂಡು ಸೀದಾ ಬೈಕ್ ಹತ್ತಿದೆ. ಗ್ರೀನ್ ಸ್ಟ್ರೀಟ್ ನಲ್ಲಿ ಮಧ್ಯಾಹ್ನ ರಶ್ ಹೆಚ್ಚು. ಮೀನು ತಗೊಳ್ಳೋರು, ಊಟಕ್ಕಂತ ಮನೆಗೆ ಹೋಗೋ ಶಾಲಾ ಮಕ್ಕಳು, ನಾನಾ ನಮೂನಿ ವೆಹಿಕಲ್ಸ್ ಎಲ್ಲಾ ಸೇರಿ ಇಡೀ ರಸ್ತೆ ತುಂಬಿಕೊಂಡು ಬಿಡುತ್ತೆ. ಅದನ್ನ ನೋಡೋದೇ ಒಂದು ಚೆಂದ್. ನಂಗೂ ಅವಸರವಿತ್ತು. ವೆಹಿಕಲ್ ಪಾರ್ಕ ಮಾಡೋಕೋ ಜಾಗ ಇರಲಿಲ್ಲ. ದೇಸಾಯಿ ಡಾಕ್ಟರ್ ಮನೆ ಎದುರು ನಿಲ್ಲಿಸೋಣ ಅಂದ್ರೆ ಅವ್ರು ವೆಹಿಕಲ್ ಹವಾ ತೆಗಿತಾರೆ ಅನ್ನೋ ಭಯ ಬೇರೆ. ಅವರ ಮನೆ ಎದುರು ಇದ್ದ ನೋ ಪಾರ್ಕಿಂಗ್ ಬೋರ್ಡ ಎದುರು ಯಾರಾದ್ರೂ ವೆಹಿಕಲ್ ಪಾರ್ಕ ಮಾಡಿದ್ರೆ, ಅದು ಕಾಲು ಮುರಿದುಕೊಂಡಂತೆಯೇ. ಅಷ್ಟು ಪ್ರಸಿದ್ಧಿ ಆಗಿದ್ದರು ಅವ್ರು. ಅವರ ಮನೆ ಎದುರು ಇದ್ದ ಜಾಗದಲ್ಲಿ ಯಾರಾದ್ರೂ ವೆಹಿಕಲ್ ಪಾರ್ಕ ಮಾಡಿದ್ರೆ ಆ ವಾಹನದ ಕತೆ ಮುಗಿದಂತೆ. ಅಬ್ಬೆಪಾರಿ ಯಾವನಾದ್ರೂ ವೆಹಿಕಲ್ ಪಾರ್ಕ ಮಾಡಿದ್ರೆ, ಸೀದಾ ವಾಹನದ ಬಳಿ ಬರುತ್ತಿದ್ದ ದೇಸಾಯಿ ಡಾಕ್ಟರ್ ವೆಹಿಕಲ್ ವೀಲ್‌ನ ಹವಾ ತೆಗೆದು ಬಿಡುತ್ತಿದ್ದರು. ಯಾರಾದ್ರೂ ಹೊಸಬರು ಜಾಗ ಇದೆ ಅಂತಾ ವಾಹನ ನಿಲ್ಲಿಸಲು ಬಂದ್ರೆ ` ವಾರ್ ಕಡ್ತಾರೇ’ ಅಂತಾ ಆಟೋ ಚಾಲಕರು ಎಚ್ಚರಿಸಿ ಬಿಡ್ತಿದ್ರು. ಒಟ್ನಲ್ಲಿ ಡಾಕ್ಟರ್ ದೇಸಾಯಿ ಕಿರಿಕ್ ದೇಸಾಯಿ ಅಂತಲೇ ಹೆಸರಾಗಿದ್ರು. ರಸ್ತೆಗೆ ಹೊಂದಿಕೊಂಡಿರುವ ಆಟೋ ಸ್ಟ್ಯಾಂಡ್ ಡ್‌ನ ಪಕ್ಕದಲ್ಲೇ ಇದ್ದ ಇಕ್ಕಟ್ಟು ಜಾಗದಲ್ಲಿ ಬೈಕ್ ನುಗ್ಗಿಸಿ, ಸ್ಟ್ಯಾಂಡ್ಹಾಕಿ ,ನಗರದ ಗ್ರಾಮೀಣ ಪೊಲೀಸ್ ಠಾಣೆಯ ಪಕ್ಕದಲ್ಲಿರೋ ವೆಜಿಟಬಲ್ ಮಾರ್ಕೆಟ್ ನುಗ್ಗಿದೆ. ಅಲ್ಲಿ ಪರಿಚಿತ ಮುಖವೇ ಆಗಿದ್ದ ಮಮ್ತಾಜ್ `ಆವೋ ಸಾಬ್ ಬಹುತ್ ದಿನ್ ಹೋಗಯಾ’ ಅಂತಾ ನಗುತ್ತಲೇ ಕರೆದ್ಲು. ಒಂದು ಕಿಲೋ ಈರುಳ್ಳಿ, ಅರ್ದ ಕಿಲೋ ಟಮೆಟೋ ಕೊಡು ಅಂದೆ. ಏನೋ ನೆನಪಾದಂತಾಗಿ, ಮಗ್ಳು ಟೇಲರಿಂಗ್ ಮಾಡ್ತಾಳೆ ಅಲ್ವಾ? ಅಂದೆ. `ಅವ್ಳು ನನ್ನ ಅಕ್ಕನ ಮಗಳು ಸಾರ್’ ನನಗೆ ಆ ಭಾಗ್ಯ ಇಲ್ಲ ಸಾರ್. ಅದೊಂದು ದೊಡ್ಡ ಕತೆ ಸಾರ್ ಎಂದು ಏನೋ ಹೇಳಿಕೊಳ್ಳೋಕೆ ಪೀಠಿಕೆ ಹಾಕಿದ್ಲು ಮಮ್ತಾಜ್. ಈರುಳ್ಳೀ ತೋಗುತ್ತಿದ್ದಾಗ ಮಮ್ತಾಜ್‌ಳ ಅಂಗೈ ಯಿಂದ ಮೊಣಕೈತನಕ ಬಿದ್ದ ಉದ್ದನೆಯ ಮಾರ್ಕ ಗಮನಿಸಿದ ನಾನು `ಏನು ಮಾಡಿಕೊಂಡ್ರಿ ಕೈಗೆ’ ಅಂದೆ. `ಮುಂಜಾವು ಪತ್ರಿಕೆಯಲ್ಲಿ ಬಂದಿತ್ತಲ್ಲಾ ಸಾರ್, ಹೊಡೆದಾಟದ ಸುದ್ದಿ ಆ ಮಮ್ತಾಜ್ ನಾನೇ. ಇಲ್ಲಿ ಒಂದು ಕಟಿಂಗ್ ಶಾಪ್ ಇತ್ತು ನೆನಪಿದೆಯಾ ನಿಮ್ಗೆ? ನೀವು ಹತ್ತು ವರ್ಷದ ಹಿಂದೆ ಇಲ್ಲೇ

ಬರ‍್ತಿದ್ದಿರಿ. ಹೇರ್ ಕಟಿಂಗ್ ಮಾಡ್ಸಿಕೊಳ್ಳೋಕೆ.

“ಅವ್ನು ಇದ್ದನ್ನಲ್ಲಾ ಸಾರ್ ಕುಳ್ಳಕೆ, ಉದ್ದ ಮೂಗಿನ  ಗಿರೀಶ್ ಹಡಪದ ಅಂತ. ಗಿರಿ  ಅಂತಿದ್ರು  ಅವ್ನಗೆ ಎಲ್ಲರೂ  ಎಂದು ಉದ್ಘಾರ ಎಳೆದ್ಲು.  ಏನೋ ಎಳೆಯೊಂದು ನೇಯ್ಗೆ ಆಗತೊಡಗಿತು. ನಾನು ನಿಂತಲ್ಲೇ ಏಕಾಗ್ರತೆಯಿಂದ ಮಾತುಗಳನ್ನು ಮನದಲ್ಲೇ ಧ್ಯಾನಿಸತೊಡಗಿದೆ.

 `ಒಹೋ ಗೊತ್ತಾಯ್ತಿತು. ಬಿಡಿ. ಗಿರೀಶ್  ಗೊತ್ತು. ನಂಗೆ. ಎಲ್ಲಿ ಅವ್ನು ಕಾಣೋದೇ ಇಲ್ಲಪ ಈಗ’ ಅಂದೆ.

 `ಇದಾನೇ ಸಾರ್ , ನಂದನಗದ್ದಾದಲ್ಲಿ ಶಾಪ್ ಹಾಕೋಂಡಿದಾನೆ. ಅದು ನಾನೇ ದುಡ್ಡ ಹಾಕಿ ಮಾಡಿಕೊಟ್ಟ ಶಾಪ್. ಮೋಸ ಮಾಡ್ದಾ ಸಾರ್ ನಂಗೆ. ನಂಮ್ ಜಾತಿಯವರನ್ನ ಎದುರಾಕ್ಕೋಂಡು, ಮನೆಯಲ್ಲಿ ರಂಪಾ ಮಾಡ್ಕೋಂಡು ಹಾರ ಬದಲ್ಸಿಕೊಂಡಿದ್ವೀ. ನಾಲ್ಕು ವರ್ಷ ಚಲೋನು ಇದ್ದ ಸಾರ್. ಆದ್ರ ಅಣ್ಣತಮ್ಮಂದಿರ ಮಾತು ಕೇಳಿ ಕೆಟ್ಟ. ಜಾತಿಯವರ ಬೆಂಬಲ ತಗೊಂಡು ಹೊಡಿಬಡಿ ಮಾಡ್ದ. ಅಂಗಂತಾ ಅವ್ನು ಪ್ರೀತಿ ಮಾಡ್ಲಿಲ್ಲ ಅಂತ ಅಲ್ಲ. ಮೊದಲರೆಡು ವರ್ಷ ಭಾಳಾ ಪ್ರೀತಿ ಮಾಡ್ದ. ನಾನ್ ಎಷ್ಟು ಹೇಳ್ದೆ. ಇದೆಲ್ಲಾ ಬ್ಯಾಡ. ನಾವು ಮುಸಲ್ರು. ನಿಮ್ಮ ಧರ‍್ಮನಾ ಬ್ಯಾರೆ. ನಮ್ದ ಬ್ಯಾರೆ. ದೊಡ್ಡ ರಂಪಾ ಆಗೊದು ಬ್ಯಾಡ ಅಂದೆ. ಆದ್ರೂ ನಂಬಿಸಿದ ಸಾರ್ ಅವ್ನು ನನ್ನ. ಪಿರುತಿ ಮುಂದೆ ಯಾವ ಜಾತಿ ಧರ‍್ಮ ಇಲ್ಲ ಅಂದ. ಹಗಲು ರಾತ್ರಿ ಹಿಂದ ಬಿದ್ದ. ಒಂದಿನಾ ಅಲ್ಲ ಎರಡು ದಿನಾ ಅಲ್ಲ ರ‍್ಡು ವರ್ಷ. ನಾ ನಂಬಿದೆ. ಕೇಳಿದ್ಗಾಲೆಲ್ಲಾ ರೊಕ್ಕ ಕೊಟ್ಟೆ. ಜೊತಿಗೆ ಉಣತಿದ್ದಿವಿ, ತಿಂನತ್ತಿದ್ವಿ. ನನ್ನ ರೊಕ್ಕ ಅವ್ನು ಮನಿ ಬೆಳಗ್ತು. ತಾಯಿಗೆ ಅರಾಮ್ ಇಲ್ಲಂತಾ,  ತಂಗಿ ಮದ್ವಿ ಅಂತಾ ಸಾವ್ರ ಸಾವ್ರ  ಹಣ ಕೊಟ್ಟೆ. ಅವ್ನು ಪ್ರೀತಿ ಮುಂದೆ ನಂಗ ದುಡ್ಡು ಕಾಣಲಿಲ್ಲ. ತರ್ಕಾರಿ ಅಂಗಡಿಯಂತೂ ಚೆಂದ್ ನಡಿತಿತ್ತು. ರೊಕ್ಕಕ್ಕ ಕಡ್ಮಿ ಅಂತಾ ರ‍್ಲಿಲ್ಲ.  ಅವ್ರ ಮನಿಯವ್ರಿಗೂ ಗೊತ್ತಿತ್ತು. ರಾತ್ರಿ ನನ್  ಜೊತಿ ಇರಕತ್ತಿದ. ಬ್ಯಾರೆ ರೂಂ ಮಾಡ್ಕೊಂಡು ಇದ್ವಿ. ಎರ‍್ಡು ವರ್ಷ ಆದ ಮ್ಯಾಲೆ ಮದ್ವಿ ಆಗೋಣ ಅಂದ. ಅವ್ನ  ತಂಗಿ ಮದ್ವಿನೂ ಆಗಿತ್ತು ಅಂತ ಹೂಂ ಅಂದೆ. ನಂಗೂ ಅವ್ನ ಬಿಟ್ಟರೆ ಬ್ಯಾರೆ ರ‍್ಲಿಲ್ಲ. ಇವ್ನ ನೆವದಿಂದ ಅಕ್ಕ ಮನಿಗೆ  ಬರ‍್ಬ್ಯಾಡ ಅಂದಿದ್ಲು.  ಶಿರವಾಡ ದೇವಸ್ತಾನದಲ್ಲಿ ಮದ್ವಿ ಆದ್ವಿ. ಅಂವ್ನ ಕಟಿಂಗ್ ಶಾಪ್ ದೋಸ್ತರು ಬಂದಿದ್ರು. ಮದ್ವಿ ಆದ ಮ್ಯಾಲಂತೂ

 ಚಲೋ ಇದ್ದ. ಮತ್ತೆ ನಾಲ್ಕು ವರ್ಷ ಹಂಗಾ ನಡದಿತ್ತು. ಸಂಜೆ ಆಗುತ್ತಿದ್ದಂತೆ ನಾವು ಸುತ್ತದ ಜಾಗನಾ ರ‍್ಲಿಲ್ಲ. ನೋಡದ ಪಿಚ್ಚರ್ ರ‍್ಲಿಲ್ಲ.  ಆದ್ರ ಅವ್ನ ಸಂಬಂಧಿಕರು ತಲಿಕೆಡಿಸಿದ್ರು ಅವನ್ದ. ಅವ್ರ ಮಾತ್ ಕೇಳಿ ಹೊಟ್ಟಿಲಿದ್ದದ್ದನ್ನು ತೊಳಿಸ್ದ. ಅಪರೇಶನ್ ಮಾಡೊ ಹೊತ್ತಿಗೆ ಸಹಿ ಮಾಡಕಾ ಬರಲಿಲ್ಲ. ಆಗ್ಲೆ ಅನಿಸ್ತು ಸಾರ್ ನಂಗೆ. ಇಂವ್ಹ ಜೀವಕ್ಕೆ ಆಗೋನಲ್ಲ ಅಂತ. ಆದ್ರು ನಂಬಿಕೊಂಡಿದ್ದೆ. ಸಣ್ಣಕ್ ಜಗಳ ತೆಗೆಯೋಕೆ ಚಾಲು ಮಾಡ್ದ. ಮತ್ತೊಂದು ಮದ್ವಿ ಆಗ್ತಿನಿ. ಮಕ್ಕಳಾಗಲಿಲ್ಲ ಅಂತ ಕುಡಿಯೋಕ ಶುರು ಮಾಡ್ದ. ಜಾತಿಯಲ್ಲದ ಜಾತಿಯವ್ಳ ಜೊತೆ ಎಷ್ಟು ದಿನ ಅಂತ ಇರ‍್ತಿ ಅಂದ್ರಂತ ಹಚ್ಚಿಕೊಟ್ರು ಸಾರ್. ನಿಧಾನಕ್ಕ ಮನಿಗೆ ಬರೋದು ನಿಲ್ಲಿಸಿದ. ಕದ್ದು ಮುಚ್ಚಿ ರ‍್ತಿದ್ದ. ಹಗಲು ಜಗ್ಳ ಮಾಡ್ತಿದ್ದ. ಕಡೀಕ್ ಕೋರ್ಟನಲ್ಲಿ ಮಮ್ತಾಜ್ ನನ್ ಹೆಂಡ್ತೀನೇ ಅಲ್ಲ ಅಂತಾ ಡಿವೋರ್ಸಗೆ ಅರ್ಜಿ ಹಾಕಿದಾನೇ. ಕೋರ್ಟನಲ್ಲಿ  ಕೇಸ್ ನಡಿಲಕ್ಕ ಹತ್ತಿ ಮೂರು ವರ್ಷ ಆಗೈತಿ. ನಾನು ಗಟ್ಟಿ ಆಗೀನಿ. ನಾನು `ಅಂವ ನನ್ನ ಮದ್ವಿ ಆಗಿದ್ದು ಖರೇ ಐತಿ ಅಂತ ಸಾಧಿಸ್ತಿದ್ದೀನಿ. ಅಂವಾ ಮದ್ವಿನ ಆಗಿರಲಿಲ್ಲ ಅನ್ನಕತ್ಯಾನ. ದೇವ್ರು ಅಂತ ಒಬ್ಬೋನು ಅದನಲ್ಲಾ ನೋಡ್ತಾನೆ ಬುಡಿ ಸಾರ್. `ಗಿರಿ’ ದೋಖಾ ಮಾಡಿದ್ದನ್ನ ಎಳೆ ಎಳೆಯಾಗಿ ಬಿಡಿಸ ತೊಡಗಿದ್ಳು ಮಮ್ತಾಜ್. ಈ ಮಧ್ಯೆ ಮಧ್ಯೆ ತರಕಾರಿ ತಗೋಳೋಕೆ ಅಂತಾ ನಾಲ್ಕಾರು ಜನ ಬಂದು ಹೋದ್ರು. ಅವರನ್ನ  ನಿಬಾಯಿಸುತ್ತಲೇ ಮಮ್ತಾಜ್ ಆತ್ಮಕತೆಗೆ ಅಲ್ಲಲ್ಲಿ ಚಿಕ್ಕ ಚಿಕ್ಕ ಬ್ರೇಕ್ ನೀಡುತ್ತಿದ್ದಳು. ಆದರೂ ತನ್ನ ಒಳಮನಸ್ಸಿನ ತಾಕಲಾಟ ಪೂರ್ಣಗೊಳಿಸಿಕೊಳ್ಳಬೇಕಿತ್ತು ಎಂಬ ಹಂಬಲ ಆಕೆಯ ಕಣ್ಣಲ್ಲಿತ್ತು. ನನಗೂ ಅಲ್ಲಿಂದ ಹೊರಡಬೇಕು ಅನ್ನಿಸಲಿಲ್ಲ. ಮನೆಗೆ ಹೋಗುವುದು ತಡವಾಗುತ್ತಿದೆ ಎಂದೆನಿಸಿದ್ರೂ ಅಲ್ಲಿಂದ ಹೊರಡಬೇಕು ಅನ್ನಿಸಲಿಲ್ಲ. ಆಕೆ ಪೂರ್ಣವಾಗಿಬಿಡಲಿ ಎಂದುಕೊಳ್ಳುತ್ತಲೇ ಕಿವಿಗೊಟ್ಟೆ. ಯಾವ ಮತೀಯರಾದರೇನು ಹೆಣ್ಣೊಬ್ಬಳ ಹೋರಾಟ ನಿರಂತರವಾದುದುದೇನೋ. ಎಲ್ಲ ಕಡೆಗೂ ವಂಚನೆ ಮನುಷ್ಯನಲ್ಲಿ ನುಗ್ಗಿಕೊಂಡು ಬಂದು ಬಿಡುತ್ತೇನೋ ಎಂದುಕೊಳ್ಳತೊಡಗಿದೆ. ಗಂಡು ಹೆಣ್ಣಿನ ಸಂಬಂಧವನ್ನು  ಹರಿದುಕೊಳ್ಳಲು ಸಣ್ಣ ನೆಪ ಸಾಕೇನೋ….ಇಂಥ ನೂರಾರು ಮಮ್ತಾಜ್‌ರು ಪ್ರತಿ ಊರಿಗೂ ಸಿಗಬಹುದೇನೋ. ಕಾರಣಗಳು ಸಂದರ್ಭಗಳು ಸ್ವಲ್ಪ ಭಿನ್ನವಾಗಿರಬಹುದು ಎಂದು ಕೊಳ್ಳುತ್ತಲೇ ತರಕಾರಿ ಚೀಲವನ್ನು ಸರಿ ಪಡಿಸಿಕೊಂಡೆ. ಸಾರ್ ನಿಮ್ಮಿಂದ ಒಂದು ಸಾಯವಾಗ್ಬೇಕು ಅಂದ್ಲು ಮಮ್ತಾಜ್. ಏನ್ ಹೇಳಮ್ಮ ಅಂದೆ.

 `ನನ್ನ ಕೇಸ್ ನಡೆಸುವ ಹಯಗ್ರೀವ ವಕೀಲರು ಗೊತ್ತಲ್ಲಾ ನಿಮ್ಗೆ’.

 `ಹೌದು’ಅಂದೆ.

 `ಅವರನ್ನ ಒಂದು ಮಾತು ಕೇಳ್ತೀರಾ. ಈ ಕೇಸ್ ಏನಾಗ್ಬಹುದು ಅಂತಾ’

 `ಆಯಿತು ಬಿಡಮ್ಮ ಕೇಳ್ತೀನಿ’ ಅಂದೆ.

 `ಯಾಕಿಲ್ಲಾ ಸಾರ್, ನನ್ನ ಕೇಸ್ ನಡೆಸ್ತಿನಿ ಅಂದ ಇಬ್ರು ವಕೀಲರು ಕೈಕೊಟ್ಟರು’ ಈಗ ಹಯಗ್ರೀವ್ ರಾಯರು ಚಲೋ ಅಂತಾ ಹೇಳಿದ್ರು. ಅವರ ಮ್ಯಾಲೆ ವಿಶ್ವಾಸ ಇಟ್ಟೀನಿ.

 ` ಒಳ್ಳೇ ಮನುಷ್ಯ. ಅವ್ರು ನಿಂಗೆ ಅನ್ಯಾಯ ಮಾಡಲ್ಲ’ ಅಂದೆ.

 ` ಆದ್ರೂ ನೀವು ಹೀಗೆ ಒಮ್ಮೆ ವಿಚಾರಿಸಿ ಸಾರ್. ಈ ಕೇಸ್ ಏನ್ಗಾಬಹುದಂತಾ’

 ` ಆಯ್ತು. ಖಂಡಿತಾ ವಿಚಾರಿಸ್ತೀನಿ’ ಅಂತ ಮಾತುಕೊಟ್ಟೆ.

  ನಾನು ಹೊರಡಲು ಅನುವಾಗುತ್ತಿದ್ದಂತೆ ಕೊನೆಗೆ ಮಮ್ತಾಜ್ ಒಂದು ಮಾತು ಹೇಳಿದ್ಲು. ಸಾರ್ `ಅವ್ನು ನನ್ನತ್ರ ಒಂದಿಬ್ಬರನ್ನ ಕಳಿಸಿದ್ದ. ಎರಡು ಲಕ್ಷ ಕೊಡ್ತಿನಿ. ಒಪ್ಪಂದ ಮಾಡ್ಕೋಳ್ಳೋಣ ಅಂತ’.    `ನನ್ನ ಪ್ರಾಣ ಹೋದ್ರು ಸರಿ. ಒಪ್ಪಂದ ಮಾಡಿಕೆಳ್ಳಲ್ಲಾ. ಕೋರ್ಟನಲ್ಲಿ ಸಾಹೇಬ್ರ ಮುಂದಾ ಮಮ್ತಾಜ್ ನನ್ನ ಹಂಡತಿ ಅಂತಾ ಒಪ್ಪಿಕೊಳ್ಳಲಿ. ಸಾಕು’ ನಾನೇ ನಿಂತಿದ್ದು ಮತ್ತೊಂದು ಮದ್ವಿ ಮಾಡಸ್ತೀನಿ ಅಂತಾ ಜಾಡಿಸಿಬಿಟ್ಟೆ.

ಮಮ್ತಾಜ್‌ಳಿಗೆ ಇರುವ ಕೊನೆಯ ಆಸೆಯೂ ಅದಾಗಿತ್ತು. ಗಿರೀಶ  ಪ್ರೀತಿಸಿ ಮದ್ವೆ ಆದದ್ದು ನಿಜ. ನಂತ್ರ  ಆತ ಮೋಸ ಮಾಡಿದ್ದು ನಿಜ. ಯಾವುದೇ ಜವಾಬ್ದಾರಿ ಹೊರದಿದ್ದರೂ ಸರಿ. ಮದ್ವಿ ಆಗಿಯೂ ಹೆಂಡ್ತಿ ಅಲ್ಲಾ ಅಂತ ಸಾಧಿಸ್ತಾನಲ್ಲ ; ಅದೇ ಆಕೆಗೆ ದೊಡ್ಡ ಅಘಾತವಾಗಿತ್ತು. ಮಮ್ತಾಜ್‌ಳ ಸಾವಿನ ನಂತ್ರ ಷಹಾವಜಹಾನ್ ತಾಜ್ ಮಹಲ್ ಕಟ್ಟಿಸಿದ. ಆದರೆ ಈ ಮಮ್ತಾಜ್‌ಗೆ ಬೇಕಿದ್ದುದು ಕೇವಲ `ಪತ್ನಿ’ ಎಂದು ಒಪ್ಪಿಕೊಂಡರೆ ಸಾಕಾಗಿತ್ತು. ಹಾಗಂತ  ಅದಕ್ಕಾಗಿ ಆಕೆ ಕೊರಗುತ್ತಾ ಅಸಹಾಯಕಳಾಗಿ ಕುಳಿತಿರಲಿಲ್ಲ. ಮೂರು ತಿಂಗಳಿಗೊಮ್ಮೆ ಬರುವ ಕೋರ್ಟ ನ್ಯಾಯ ಕಲಾಪಕ್ಕೆ ಹಾಜರಾಗುತ್ತಲೇ ಇದ್ದಳು.

ಬೈಕ್ ಹತ್ತಿ ಹೊರಟೆ. ಮನದ ತುಂಬಾ ಮಮ್ತಾಜ್ ಬದುಕಿನ ಚಿತ್ರಗಳು ಕಾಡತೊಡಗಿದವು. ಖಾದಿ ಭಂಡಾರ ಪಕ್ಕದ ಶೆಟ್ರ  ಅಂಗಡಿ ಮುಂದೆ ನಿಂತೆ. ಇಡೀ ಬೀದಿಯಲ್ಲಿ ಮಂಗ್ಳೂರು ಹೆಂಚಿನ ಹಳೆಯ ಅಂಗಡಿ ಅದು. ಆ ಮುಖ್ಯ ಬೀದಿಯಲ್ಲಿ ಹಳೆಯ ರೇಡಿಯೋ ತರಹ ನೆನಪುಗಳನ್ನ ಮೆಲುಕು ಹಾಕಲು ಇರೋದು ಆ ಅಂಗಡಿ ಮಾತ್ರ. ಅಕ್ಕಪಕ್ಕದ ಝಲಕ್ ಫಲಕ್ ಶಾಪ್‌ಗಳ ಸಾಲಿನಲ್ಲಿ ಈ ಅಂಗಡಿ ವಿಶೇಷ ಅಂದ್ರೆ ಶಂಕರ್ ಶೆಟ್ರು ತಮ್ಮ ಹಳೆಯ ಅಂಗಡಿಯಲ್ಲಿ ಏನು ಸಾಮಾನು ಇಡಲ್ಲ. ಆದ್ರೆ ಅಂಗಡಿಯನ್ನ ಬೆಳಿಗ್ಗೆ ಹತ್ತಕ್ಕೆ ತೆರೆದು ಮಧ್ಯಾಹ್ನ ಒಂದ ಗಂಟೆಗೆ ಮುಚ್ಚತಾರೆ. ಮತ್ತೆ ಸಂಜೆ ನಾಲ್ಕಕ್ಕೆ ತೆರೆದು ರಾತ್ರಿ ಎಂಟುವೊರೆ ಒಂಬತ್ತಕ್ಕೆ ಮುಚ್ಚತಾರ. ಪೇಟೆಗೆ ಬಂದ ತಮ್ಮ ಗೆಳೆಯರ ಜೊತೆ ಕುಳಿತು ಹೊಸ ಹಳೆಯ ನೆನಪುಗಳನ್ನ ಹರಟುತ್ತಾರೆ. ಯಾವುದೇ ಕಾರಣಕ್ಕೂ ವ್ಯಾಪಾರ ಮಾಡಲ್ಲ. ಯಾರಿಗೂ ಹಳೆಯ ಗೂಡನ್ನು ಬಾಡಿಗೆ ಸಹ ಕೊಡಲ್ಲ. ಯರ‍್ಯಾದ್ರು ಬಾಡಿಗೆ ಕೇಳಾಕ ಬಂದ್ರ ಸಿಡಿಮಿಡಿಗೊಳ್ಳತರಾ. ಒಂದು ಕಾಲದ ಭರ್ಜರಿ ಕಿರಾಣಿ ವ್ಯಾಪಾರದ ಅಂಗಡಿಯಾಗಿದ್ದ  ಗೂಡು ಈಗ ಹಿಂದಿನ ನೆನಪುಗಳನ್ನು ಕಾಯ್ದಿಟ್ಟುಕೊಂಡ ಗೂಡಾಗಿ ಉಳಿದಿದೆ. ನಾನು ಅಲ್ಲಿ ಯಾಕೆ ನಿಂತೆ. ಗೊತ್ತಿಲ್ಲ. ಹಳೆಯ ಹೆಂಚಿನ ಗೂಡಿನಲ್ಲಿ ಕುಳಿತ ಶೆಟ್ರನ್ನ ಒಂದು ಸಲ ಕಣ್ಣರಳಿಸಿ ನೋಡ್ಕೊಂಡು ಹೋಗೋದು ರೂಢಿಯಾಗಿಬಿಟ್ಟಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಶೆಟ್ರು ತಮ್ಮ ಮಾಮೂಲಿ ಶೈಲಿಯಲ್ಲಿ ಕುಳಿತ್ಕೋತಾರೆ. ಒಮ್ಮೊಮ್ಮೆ  ಬೈಕ್ ನಿಲ್ಲಿಸಿ ಇಲ್ಲವೆ ನಿಧಾನ ಮಾಡಿ ಅವ್ರನ್ನ ನೋಡಿಕೊಂಡು ಹೋಗಿಬಿಡ್ತೇನೆ. ಇವತ್ತು ಹಂಗ ಮಾಡ್ದೆ. ಹೋಟೆಲ್ ಪೂರ್ಣಿಯಲ್ಲಿ ದಿನ ಹಗಲು ದುಡಿದು ರಾತ್ರಿ ಆದೊಡನೆ  ಮಿಲನ್ ಕ್ಲಾತ್ ಶಾಪ್ ಕಟ್ಟೆಯ ಹರ‍್ಗ ಗೋಣಿಚೀಲ ಹಾಸಿಹೊದ್ದು ಮಲಗೋ ಅಜ್ಜ, ಮುದಿತನ ಹೊತ್ತ  ಶೆಟ್ರ ಗೂಡು ಅದ್ರ ಪಕ್ಕದ ಮಳ್ಹಸಾ ಮೊಬೈಲ್ ಶಾಪ್ ಮತ್ತು  ತರಕಾರಿ ಅಂಗಡಿಯ ಮಮ್ತಾಜ್ ಹಾಗೆ ಮುಂದೆ ಸಾಗಿದರೆ  ಪಂಚತಾರಾ ಮಹಲ್ ಅದರ ಪಕ್ಕ ಇಡೀ ನಗರದ ಕೊಳಕು ಹೊತ್ತು ಮಳೆಗಾಲದಲ್ಲಿ ನಗುವ , ಬೇಸಿಗೆಯಲ್ಲಿ ಮುಖ ಕಹಿ ಮಾಡಿಕೊಳ್ಳುವ  ಕೋಣೆನಾಲಾ, ಬಾಲ್ಕಾನಿಯಲ್ಲೂ  ಕುಂಡಿ ಒತ್ತುವ ಸೀಟು ಹೊಟ್ಟೆಯಲ್ಲಿಟ್ಟುಕೊಂಡಿರುವ ಗೀತಾಂಜಲಿ ಚಿತ್ರಮಂದಿರ ಎಲ್ಲವೂ ಸಾಲು ಸಾಲು ಪ್ರತಿಮೆಗಳಾಗಿ ನಿಲ್ಲತೊಡಗಿದವು. ಬೈಕ್ ಚಲಿಸುತ್ತಲೇ ಇತ್ತು. ಚಿತ್ತ ಎಲ್ಲವನ್ನು ದಾಖಲಿಸಿಕೊಳ್ಳತೊಡಗಿತ್ತು. ಮಮ್ತಾಜ್‌ಳ ಹಠ ಕಾಡತೊಡಗಿತು. ಮಮ್ತಾಜ್‌ಳನ್ನ ಪ್ರೇಮಿಸಿ ಕೈಬಿಟ್ಟು , ಹೆಣ್ತಿನೇ ಅಲ್ಲ ಎಂದು ಸಾಧಿಸುತ್ತಿರುವ ಗಿರೀಶ್ , ನ್ಯಾಯಾಲಯದೊಳಗೆ  ಕಣ್ಣಿಗೆ ಬಟ್ಟೆಕಟ್ಟಿಕೊಂಡಿರುವ ನ್ಯಾಯಾದೇವತೆ, ನ್ಯಾಯ ಕೊಡ್ಸತ್ನೆ  ಅಂತಿರುವ ಹಯಗ್ರೀವ ರಾರ‍್ರು ಸ್ಪರ್ಧೆಗೆ ಇಳಿದವರಂತೆ ಓಡತೊಡಗಿದ್ರು. ಯಾರು ಮೊದಲು ಗುರಿ ಮುಟ್ಟಿದ್ರು ಎಂಬ ಫಲಿತಾಂಶ ಬಂದಿಲ್ಲ. ಪೂರ್ಣಿ ಹೋಟೆಲ್‌ನಿಂದ ಹೊರಬಂದಂತೆ ಕಂಡ  ಅಜ್ಜ ಕತ್ತಲ ಕಾಲದ ಜೊತೆ ಮಲಗಿ ಮಿಲನ್ ಕ್ಲಾತ್ ಶಾಪ್ ಕಟ್ಟಿ ಹೊರಗ ನಿದ್ದೆ ಹೋಗಿದ್ದ.

******************************************************************

.

Leave a Reply

Back To Top