ಮೋಹದ ಬೆನ್ನು ಹತ್ತಿದರೆ . . . . .

ಲೇಖನ

ಮೋಹದ ಬೆನ್ನು ಹತ್ತಿದರೆ

ಜಯಶ್ರೀ.ಜೆ. ಅಬ್ಬಿಗೇರಿ

Discovering women artists of the past to support artists of present

 ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ ಇರುತ್ತಿರಲಿಲ್ಲ. ಹೊಳೆಯ ಆಚೆ ಪತ್ನಿಯ ಮನೆ ಹೊಳೆಯ ಈಚೆ ತುಳಸಿದಾಸರ ಮನೆ. ಒಂದು ದಿನ ಮಡದಿ ಅವಸರದಲ್ಲಿ ಅವರಿಗೆ ಹೇಳದೇ ತನ್ನ ತವರಮನೆಗೆ ಹೋದಳು. ಸತಿಯನ್ನು ಮನೆಯಲ್ಲಿ ಕಾಣದ ತುಳಸಿದಾಸರಿಗೆ ಚಡಪಡಿಕೆ ಶುರುವಾಯಿತು. ಇವತ್ತು ರಾತ್ರಿ ಎಷ್ಟೊತ್ತಾದರೂ ಸರಿ ಹೊಳೆ ದಾಟಿ ಸತಿಯ ಮನೆಯನ್ನು ತಲುಪಲೇ ಬೇಕೆಂದು ನಿರ್ಧರಿಸಿದರು. ಅದೇ ದಿನ ಹೊಳೆಗೆ ಮಹಾಪೂರ ಬಂದಿತ್ತು. ಮಹಾಪೂರ ಎಂದ ಮೇಲೆ ಕೇಳಬೇಕೆ? ಅದು ತನ್ನೊಡಲಿನಲ್ಲಿ ಊರಿನಲ್ಲಿರುವ ಕಸವನ್ನು ತಂದು ಹೊಳೆಗೆ ಚೆಲ್ಲಿತ್ತು. ಹೊಳೆ ಊರಿನ ಕೊಳೆಯಿಂದಲೇ ತುಂಬಿತ್ತು. ತುಳಸಿದಾಸನಿಗೆ ಮಾತ್ರ ಇದಾವುದೂ ಕಾಣಲೇ ಇಲ್ಲ. ಅವರ ಕಣ್ಣಲ್ಲಿ ಮಡದಿಯ ರೂಪ ಅಚ್ಚೊತ್ತಿತ್ತು. ಮನದಲ್ಲಿ ಆಕೆಯ ಸವಿನೆನಪು. ಸತಿಯ ಮೇಲಿನ ಮೋಹ ಅವರಲ್ಲಿ ಶಕ್ತಿಯನ್ನು ನೂರ್ಮಡಿಗೊಳಿಸಿತ್ತು. ಹಿಂದೆ ಮುಂದೆ ನೋಡದೇ ಹೊಳೆಗೆ ಧುಮುಕಿಯೇ ಬಿಟ್ಟರು. ನೋಡು ನೋಡುತ್ತಿದ್ದಂತೆಯೇ ಆಚೆ ದಡ ತಲುಪಿದ್ದರು. ತಮ್ಮೊಂದಿಗೆ ಹೊಳೆಯ ಕೊಳೆಯನ್ನು ಹೊತ್ತು ತಂದಿದ್ದರು.

     ಅದೇ ಆವಸ್ಥೆಯಲ್ಲಿ ಮಡದಿ ಮನೆಯ ಕದ ತಟ್ಟಿದರು. ಮಡದಿ ಹೊರ ಬಂದು ನೋಡಿದಳು. ಮೈಯೆಲ್ಲಾ ಕೊಳೆ ತುಂಬಿತ್ತು. ಕಂಗಳಲ್ಲಿ ಮೋಹ ತುಂಬಿತ್ತು. ‘ಇದೇನಿದು ಇಷ್ಟು ರಾತ್ರಿ ಹೊತ್ತಿನಲ್ಲಿ ಹೀಗೆ ಬಂದಿದ್ದೀರಿ?’ ಎಂದಳು. ಹೌದು ಕಾಣದೇ ಇರಲಾಗಲಿಲ್ಲ ಅದಕ್ಕೆ ಬಂದೆ ಎಂದ ಪತಿ. ಪತಿಯ ಮೋಹ ಕಂಡ ಜಾಣ ಸತಿ ಹೀಗೆ ಹೇಳಿದಳು. ‘ನೀವು ಇಷ್ಟು ಪ್ರೇಮವನ್ನು ದೇವರ ಮೇಲೆ ಇಟ್ಟಿದ್ದರೆ ನಿಮಗೆ ದೇವರ ದರ್ಶನವಾಗುತ್ತಿಲ್ಲ!’ ಮಡದಿಯ ಮಾತು ಕೇಳಿದ ತುಳಸಿದಾಸರಿಗೆ ಒಮ್ಮೆಲೇ ಸತ್ಯ ಹೊಳೆಯಿತು.ಮೋಹವೆಂಬ ಕತ್ತಲೆ ಕಳೆದು ಜ್ಞಾನ ಜ್ಯೋತಿಯ ಹೊತ್ತಿಸಿದೆ. ನನ್ನ ಪಾಲಿನ ಗುರು ನೀನು. ಕಣ್ತೆರೆಸಿದ ದೇವತೆಯೂ ನೀನು. ಎನ್ನುತ್ತ ಮಡದಿಯ ಮನೆಯಿಂದ ಹೊರ ಬಂದ. ಮೈ ಮನವೆಲ್ಲ ಸುತ್ತಿದ್ದ ಮೋಹದ ಪೊರೆ ಕಳಚಿಕೊಂಡ. ಸತ್ಯದರ್ಶನ ಪಡೆದು ಮಹಾ ಸಂತನಾದ. 

    ಇದು ಜನ ನಾಲಿಗೆಯ ಮೇಲೆ ನಲಿದಾಡುವ ಕಥೆ.ಪುರಾಣ ಇತಿಹಾಸಗಳಲ್ಲಿ ಇಂತಹ ಕಣ್ತೆರೆಸಿದ ಕಥೆಗಳು ಹೇರಳವಾಗಿ ಲಭ್ಯ. ಹೀಗಿದ್ದಾಗ್ಯೂ ನಾವು ನಮ್ಮದೇ ಮೋಹ ಲೋಕದಲ್ಲಿ ಮೇಲೇಳದಂತೆ ಮುಳುಗಿದ್ದೇವೆ. ಒಬ್ಬೊಬ್ಬರಿಗೆ ಒಂದೊಂದು ಮೋಹ. ಹೆಣ್ಣು ಹೊನ್ನು ಮಣ್ಣಿನ ಹಿಂದೆ ಬಿದ್ದು ಜೀವನದಾನಂದವನ್ನು ಕಳೆದುಕೊಂಡು ದಿಕ್ಕು ತಪ್ಪಿದವರಂತೆ ತಿರುಗುತ್ತಿದ್ದೇವೆ. ಜ್ಞಾನವೆಂಬ ಕಣ್ಣಗಲಿಸಿ ನೋಡಿದರೆ ಎಲ್ಲೆಲ್ಲೂ ನಿರ್ಮೋಹದ ಬೆಳಕು ಕಣ್ತುಂಬಿಸಿಕೊಳ್ಳುವ ಸುದೈವ ದೊರೆಯದೇ ಇರದು.  ಮುಂಜಾನೆದ್ದು ಕಿವಿಗೆ ಬೀಳುವ ಹಕ್ಕಿಗಳ ಕಲರವ, ಬಾನಿಗೆ ಬಂಗಾರದ ಬಣ್ಣ ಬಳಿಯುತ್ತ ಉದಯಿಸುವ ಸೂರ್ಯ, ಕತ್ತಲಲ್ಲಿ ಮಿನುಗಿ ನಗುವ ನಭದ ತಾರೆಗಳು, ಸದಾ ಉತ್ಸಾಹದಲ್ಲಿರುವ ಚಿಕ್ಕ ಮಕ್ಕಳನ್ನು ಕಂಡರೆ ನಮ್ಮಲ್ಲೂ ಸಂತಸದ ಕಾರಂಜಿ ಚಿಮ್ಮುವುದು. ಆಡುವ ಮಕ್ಕಳು ಆಟಿಕೆಯಲ್ಲಿ ಮುಳುಗಿ ಚಿಮ್ಮಿಸುವ ಬೊಚ್ಚ ಬಾಯಿಯ ನಗು ಎಂಥವರನ್ನು ಆನಂದದ ಬುಗ್ಗೆಯಲ್ಲಿ ಮುಳುಗಿಸುತ್ತದೆ. ಕಡಲನ್ನು ನೋಡುತ್ತ ಅದರ ಅಲೆಗಳ ಅಬ್ಬರದಲ್ಲಿ ಕಳೆದು ಹೋಗುವುದು ಎಲ್ಲಿಲ್ಲದ ಸಂತಸ ನೀಡುವುದು.ಜೀವನವೇ ಆನಂದ ಧಾರೆ ಎನ್ನಿಸದೇ ಇರದು.  ಜೀವನದ ಮೂಲಧಾರೆ ಯಾವುದಿರಬಹುದು? ಎಲ್ಲಿಂದ ಆರಂಭವಾಗಿರಬಹುದು ಎಂದು ತಿಳಿಯುವುದು ಸುಲಭದ ಸಂಗತಿಯಲ್ಲ.ಬಹಳಷ್ಟು ಅರಿತವರಿಗೂ ವಿದ್ವಾಂಸರಿಗೂ ಪ್ರಾಯಶಃ ಬಹಳ ಬಹಳ ಸಮಯದವರೆಗೂ ಚರ್ಚಿತ ವಿಷಯವಾಗಿದೆ ಎಂದೆನಿಸುತ್ತದೆ. ಮನುಷ್ಯನ ಅಂತರಂಗದತ್ತ ಮನಸ್ಸನ್ನು ಕೇಂದ್ರೀಕರಿಸಿದರೆ ಹೊಳೆಯುವ ಸೀದಾ ಸರಳ ಉತ್ತರ ಮೋಹವನ್ನು ತೊರಯುವುದು. ಪ್ರತಿ ದಿನವನ್ನು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವುದೇ ಬದುಕಿನ ಪರಮೋಚ್ಛ ಧ್ಯೇಯ. ಇದಕ್ಕಾಗಿಯೇ ಕಬ್ಬಿಣದ ಕಡಲೆಯಂತಿರುವ ಬದುಕನ್ನು ತಿಳಿದುಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಹಾಗೆ ನೋಡಿದರೆ ಜೀವನ ತುಂಬಾ ಸರಳ ಇದೆ. ಅದನ್ನು ಸಂಕೀರ್ಣ ಮಾಡಿಕೊಂಡವರೇ ನಾವು. ನಮ್ಮ ವಿಚಾರಗಳು ನಮ್ಮ ಪ್ರಪಂಚವನ್ನು ರೂಪಿಸುತ್ತವೆ ಎಂದು ಗೊತ್ತಿದ್ದೂ ಅವುಗಳ ಮೇಲೆ ಹತೋಟಿ ಸಾಧಿಸದೇ ಮೋಹದ ಬಲೆಯಲ್ಲಿ ಬಿದ್ದಿದ್ದೇವೆ. ಕಣ್ಣು ಕಾಣದ ಗಾವಿಲರಂತೆ ಆಡುತ್ತಿದ್ದೇವೆ. ಯಾವುದರ ಬಗ್ಗೆ ಗಮನ ಹರಿಸುತ್ತೇವೆಯೋ ಅದು ಬೆಳೆಯುತ್ತದೆ. ನಾನು ನನ್ನದೆಂಬ ಮೋಹದ ಬೆನ್ನು ಹತ್ತಿದರೆ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತದೆ ಬದುಕು ಕತ್ತಲಲ್ಲಿ ಮುಳುಗಿ ನರಳುತ್ತದೆ. ನಿರ್ಮಲ ಮನಸ್ಸಿನಿಂದ ನಿರ್ಮೋಹದತ್ತ ಮುಖ ಮಾಡಿದರೆ ಹೋದ ದಿಕ್ಕು ದಿಕ್ಕಿನಲ್ಲೂ ಬದುಕಿನ ಪರಮ ಸತ್ಯದ ಕಾಮನ ಬಿಲ್ಲು ಕಮಾನು ಕಟ್ಟಿ ಕರೆಯುತ್ತದೆ. ಮೋಹ ನಾಚಿ ನೀರಾಗಿ ದೂರ ಸರಿಯುತ್ತದೆ.

Leave a Reply

Back To Top