ಅನುವಾದ ಸಂಗಾತಿ
ಪೃಥು ಪ್ರತಾಪ
ತೆಲುಗು ಮೂಲ :ಜಿ.ವಿ.ಶ್ರೀನಿವಾಸ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್



ನಳಂದಾ ನಾಶದ ಹಿಂದೆ ಇದ್ದ ಹಿಂದಿನ ಭಯಾನಕ ಆಲೋಚನೆ ಕೇಳಿದ ಕೂಡಲೇ ಎಲ್ಲರಿಗೂ ರಕ್ತ ಕುದಿಯುತ್ತಿತ್ತು.
“ಎರಡು ವರ್ಷಗಳ ಹಿಂದೆ ಭಕ್ತಿಯಾರ್ ಖಿಲ್ಜಿ ಬಂಗಾಳದ ನವದ್ವೀಪದ ಮೇಲೆ ದಾಳಿ ಮಾಡಿದ್ದ. ಹನ್ನೆರಡು ಸಾವಿರ ಕುದುರೆಗಳೊಂದಿಗೆ ಖಿಲ್ಜಿ ದಾಳಿಗೆ ಬರುತ್ತಿದ್ದಾನೆ ಎಂದು ಕೇಳಿದ ಕೂಡಲೇ ಹೇಡಿ ರಾಜ ಲಕ್ಷ್ಮಣ ಸೇನ್ ಓಡಿಹೋದುದು ನನಗಿನ್ನೂ ಆಶ್ಚರ್ಯವನ್ನುಂಟು ಮಾಡುತ್ತದೆ. ತನ್ನ ರಾಜ್ಯವನ್ನು, ತನ್ನನ್ನೇ ನಂಬಿದ ಜನರನ್ನು, ಅವರ ಪ್ರಾಣ-ಮಾನವನ್ನು ಗಾಳಿಗೆ ತೂರಿ, ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಯುದ್ಧ ಮಾಡದೆ ಓಡಿಹೋಗುವುದಕ್ಕಿಂತ, ಪ್ರಾಣತ್ಯಾಗ ಎಷ್ಟೋ ಶ್ರೇಷ್ಠವಾದುದು”
ಸಭೆಯಲ್ಲಿ ಗಾಢ ಮೌನ. ಪೃಥು ಮಹಾರಾಜರ ದುಃಖಿತ ಹೃದಯದ ಮಾತುಗಳನ್ನು ಕೇಳಿ ಎಲ್ಲರೂ ಕಲ್ಲುಗಳಂತಾದರು. ಆಗ ನಗರದ ಒಬ್ಬ ವ್ಯಾಪಾರಿ ಪ್ರಮುಖನಿಂದ ಒಂದು ಪ್ರಶ್ನೆ ಕೇಳಿಸಿತು.
“ಆ ಭೀಕರ ಮೃಗವು ನಮ್ಮ ರಾಜ್ಯದ ಮೇಲೆ ಯಾವ ಕಡೆಯಿಂದ ಬರುತ್ತಿದೆ? ನಾವು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮಹಾರಾಜ?” ತನ್ನ ಗೋದಾಮುಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿರುವ ತನ್ನ ಸರಕುಗಳನ್ನು ನೆನೆಸಿಕೊಳ್ಳುತ್ತಾ ಅವನು ಕೇಳಿದ.
“ಆ ವಿವರಗಳೆಲ್ಲವನ್ನೂ ನಮ್ಮ ಮಂತ್ರಿವರ್ಯರು ವಿವರಿಸುತ್ತಾರೆ” ಎಂದು ಮಂದಹಾಸದಿಂದ ಮಂತ್ರಿಯತ್ತ ನೋಡಿದರು ಪೃಥು ಮಹಾರಾಜರು.
ಆಸನದಿಂದ ಎದ್ದು ನಿಂತು, ಪ್ರಭುಗಳಿಗೆ ಪ್ರಣಾಮಗಳನ್ನು ಸಲ್ಲಿಸಿ, “ಖಿಲ್ಜಿ ಟಿಬೆಟ್‌ನಿಂದ ನಮ್ಮ ರಾಜ್ಯದ ಕಡೆಗೆ ಬರುತ್ತಿದ್ದಾನೆ.”
ಆ ಮಾತುಗಳನ್ನು ಕೇಳಿದ ಕೂಡಲೇ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಬಿಹಾರದಲ್ಲಿದ್ದ ಖಿಲ್ಜಿ ಟಿಬೆಟ್‌ಗೆ ಯಾವಾಗ ಹೋದ? ನಮ್ಮ ರಾಜ್ಯದಿಂದಲೇ ತಾನೆ ಟಿಬೆಟ್‌ಗೆ ದಾರಿ? ಹೀಗೆ ಬಂದಿಲ್ಲ. ಹಾಗಾದರೆ ಹೇಗೆ ಹೋಗಿರಬಹುದು? ಅಲ್ಲಿ ಏನು ನರಮೇಧ ಮಾಡಿದ್ದಾನೋ?
ಸಭಿಕರ ಪಿಸುಮಾತುಗಳನ್ನು ಕೇಳುತ್ತಿದ್ದ ಮಂತ್ರಿವರ್ಯರು ಮಂದಹಾಸದಿಂದ ತಮ್ಮ ಬಲಗೈಯನ್ನು ಮೇಲಕ್ಕೆತ್ತಿದಾಗ, ಎಲ್ಲರೂ ಮೌನವಹಿಸಿದರು.
“ಅದೇ ಹೇಳಲು ಹೊರಟಿದ್ದೇನೆ..” ಎಂದು ಹೇಳಲು ಪ್ರಾರಂಭಿಸಿದರು.
* * *
“ಯಾ ಅಲ್ಲಾ! ಭಾರತದೆಲ್ಲವೂ ನಮ್ಮ ಕೈಯಲ್ಲಿದೆ. ಬಂಗಾಳ, ಬಿಹಾರದಲ್ಲಿ ನಮ್ಮ ಆಡಳಿತ ಮುಂದುವರಿಯುತ್ತದೆ. ಇನ್ನು ನನಗಿರುವ ಒಂದೇ ಆಸೆ.”
ಬಯಸಿದ್ದನ್ನು ತಕ್ಷಣವೇ ಪಡೆದುಕೊಳ್ಳುವ ಭಕ್ತಿಯಾರ್ ಖಿಲ್ಜಿಗೂ ತೀರದ ಆಸೆಗಳಿರುತ್ತವೆಯೇ? ಸುತ್ತಲಿದ್ದ ಸೇನಾನಿಗಳು ಆಶ್ಚರ್ಯಪಟ್ಟರು.
ಅವರ ಮುಖಭಾವಗಳನ್ನು ಗಮನಿಸುತ್ತಾ “ಪ್ರಪಂಚಕ್ಕೆ ಮೇಲ್ಛಾವಣಿ ಎಂದು ಕರೆಯಲ್ಪಡುವ ಒಂದು ಸ್ಥಳವಿದೆ. ಅಲ್ಲಿ ನಾವು ಕಾಲಿಟ್ಟರೆ ಪ್ರಪಂಚದ ತಲೆಯ ಮೇಲೆ ಪಾದವಿಟ್ಟು ನಿಂತಂತೆ” ಎಂದು ದೊಡ್ಡದಾಗಿ ನಕ್ಕನು.
“ಟಿ.. ಬೆ.. ಟ್” ಅಸ್ಪಷ್ಟವಾಗಿ ಗೊಣಗಿದ ಒಬ್ಬ ಸೇನಾನಿ.
“ಹೌದು! ಅದೇ.. ಅದೇ.. ಟಿಬೆಟ್ ನಮ್ಮ ಕಾಲ ಕೆಳಗೆ ಬರಬೇಕು. ಏರ್ಪಾಡುಗಳನ್ನು ಮಾಡಿ” ಎಂದು ಖಿಲ್ಜಿ ಆಜ್ಞೆ ಹೊರಡಿಸಿದನು.
“ನಮಗೆ ಟಿಬೆಟ್ ತಲುಪಲು ಸರಿಯಾದ ಮಾರ್ಗದರ್ಶಕ ಬೇಕು. ದಾರಿಗಳು, ಬೆಟ್ಟಗಳು, ಕಾಡುಗಳು, ನದಿಗಳ ಸಂಪೂರ್ಣ ವಿವರಗಳು ತಿಳಿದಿರುವ ವ್ಯಕ್ತಿ ಬೇಕು. ಹಾಗಾದರೆ..” ಎಂದು ಒಬ್ಬನು ಸಂದೇಹ ವ್ಯಕ್ತಪಡಿಸಿದ.
ಆಸನದಿಂದ ಎದ್ದು ವಿಕಟವಾಗಿ ನಕ್ಕನು ಖಿಲ್ಜಿ.
“ನಾವು ಟಿಬೆಟ್ ತಲುಪಲು ಸುಲಭವಾದ ಮಾರ್ಗ ಕಾಮರೂಪ ರಾಜ್ಯದ ಮೂಲಕ ಬ್ರಹ್ಮಪುತ್ರ ನದಿಯ ದಡ. ನಾಳೆಯೇ ನಮ್ಮ ಪ್ರಯಾಣ.. ವಿಶ್ವ ಶಿಖರದ ಮೇಲೆ ಕಾಲಿಡಲು” ಮತ್ತೊಮ್ಮೆ ಗಟ್ಟಿಯಾಗಿ ನಕ್ಕ ಖಿಲ್ಜಿ.
ಹತ್ತು ಸಾವಿರ ಸೈನಿಕರು, ಬಲಿಷ್ಠ ಅಶ್ವಗಳು, ಶಸ್ತ್ರಾಸ್ತ್ರಗಳೊಂದಿಗೆ ಕಾಮರೂಪ ರಾಜ್ಯದ ಕಡೆಗೆ ಪ್ರಯಾಣ ಆರಂಭಿಸಿದರು.
ಕಾಮರೂಪ ಗಡಿಯಲ್ಲಿ ಖಿಲ್ಜಿ ಇಳುಕೊಂಡನು. ಎಲ್ಲಿ ನೋಡಿದರೂ ಪರಧರ್ಮದ ಆಡಳಿತವೇ ನಡೆದಿತ್ತು. ಇಂತಹ ವಿಪತ್ಕರ ಪರಿಸ್ಥಿತಿಯಲ್ಲಿ ತಮಗೆ ದಾರಿ ತೋರಿಸಬೇಕಾದರೆ ತಮ್ಮವನಾಗಿರಬೇಕು. ದೂರಾಲೋಚನೆ ಮಾಡಿದ ಖಿಲ್ಜಿ ಆ ಪ್ರದೇಶದಲ್ಲಿದ್ದ ಸ್ಥಳೀಯ ಗಿರಿಜನ ನಾಯಕನನ್ನು ಒಲಿಸಿಕೊಂಡು, ಹಲವು ರೀತಿಯಲ್ಲಿ ಬೋಧನೆಗಳನ್ನು ಮಾಡಿ, ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿ “ಅಲಿಮೆಚ್” ಆಗಿ ರೂಪಾಂತರಗೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾದನು.
ಅಲಿಗೆ ಟಿಬೆಟ್‌ವರೆಗಿನ ಮಾರ್ಗಗಳೆಲ್ಲವೂ ಕರಗತವಾಗಿದ್ದವು.
“ನಮ್ಮ ರಾಜ್ಯದ ಕಡೆಯಿಂದ ಹೋದರೆ ನಮಗೆ ಪ್ರತಿದಾಳಿ ನಡೆಯಬಹುದು, ಸ್ವಲ್ಪ ಕಷ್ಟವಾದರೂ ಸಿಕ್ಕಿಂ ಬೆಟ್ಟಗಳ ಮೂಲಕ ಪ್ರಯಾಣಿಸಿದರೆ ಯಾವುದೇ ನಷ್ಟವಿಲ್ಲದೆ ಟಿಬೆಟ್ ತಲುಪಬಹುದು.”
ಅಲಿಯ ಸಲಹೆಯನ್ನು ಅನುಸರಿಸಿ ಭಕ್ತಿಯಾರ್ ಖಿಲ್ಜಿ ಸೇನೆಯು ಟಿಬೆಟ್ ತಲುಪಿತು.
ಹೋಗುತ್ತಿದ್ದಂತೆಯೇ ಗ್ರಾಮಗಳ ಮೇಲೆ ಬಿದ್ದು ಮನೆಗಳನ್ನು ಸುಡಲು, ಸಿಕ್ಕವರನ್ನು ಸಿಕ್ಕಂತೆ ಕೊಲ್ಲಲು ಪ್ರಾರಂಭಿಸಿದರು. ಸ್ತ್ರೀಯರನ್ನು ದೋಚಲು ಪ್ರಾರಂಭಿಸಿದರು.
ಆದರೆ ಕೆಲವೇ ಕ್ಷಣಗಳಲ್ಲಿ ಟಿಬೆಟ್ ಸೇನೆಗಳು, ಸ್ಥಳೀಯ ಬುಡಕಟ್ಟು ಜನರು ತಮ್ಮದೇ ಶೈಲಿಯಲ್ಲಿ ಯುದ್ಧವನ್ನು ಪ್ರಾರಂಭಿಸಿದರು. ಬಯಲು ಪ್ರದೇಶದ ಯುದ್ಧಗಳನ್ನು ಹೊರತುಪಡಿಸಿ ಬೆಟ್ಟಗಳಲ್ಲಿ ಯುದ್ಧದ ಅನುಭವವಿಲ್ಲದಿರುವುದು ಖಿಲ್ಜಿ ಸೇನೆಗೆ ತೀವ್ರ ನಷ್ಟವನ್ನುಂಟು ಮಾಡಿತು.
ಮಂಜುಗಡ್ಡೆಯ ಬೆಟ್ಟಗಳಲ್ಲಿ ಯುದ್ಧಕ್ಕೆ ಒಗ್ಗಿಕೊಳ್ಳದಿರುವುದು, ಅಪರಿಚಿತ ತಂತ್ರಗಳು ಖಿಲ್ಜಿ ಸೇನೆಯನ್ನು ಗೊಂದಲಕ್ಕೀಡುಮಾಡಿದವು. ಗಲಿಬಿಲಿಗೊಂಡ ಖಿಲ್ಜಿಗೆ ಅರ್ಥವಾಯಿತು. ಸಮಯ ಕಳೆದಂತೆ ತಮ್ಮ ಸೈನ್ಯದ ಪ್ರಾಣಗಳು ನಷ್ಟವಾಗುತ್ತವೆ ಎಂದು. ಇಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದು. ಮತ್ತೊಮ್ಮೆ ನೋಡಿಕೊಳ್ಳಬಹುದು ಎಂದು ಬಂದ ದಾರಿಯ ಕಡೆಗೆ ಸೈನ್ಯದೊಂದಿಗೆ ಓಡಿಹೋಗಲು ಪ್ರಾರಂಭಿಸಿದನು.
ಖಿಲ್ಜಿಯ ಪಲಾಯನವನ್ನು ಮೊದಲೇ ಅರಿತ ಟಿಬೆಟ್ ಸೇನೆಗಳು ಆ ದಾರಿಯನ್ನು ಮುಚ್ಚಿದವು.
ಗತಿಯಿಲ್ಲದ ಪರಿಸ್ಥಿತಿಯಲ್ಲಿ ಅಲಿಯ ಸೂಚನೆಯನ್ನು ಅನುಸರಿಸಿ ಕಾಮರೂಪ ರಾಜ್ಯದ ಕಡೆಗೆ ಪ್ರಯಾಣ ಮಾಡಿದನು.
* * *
“ಇದುವರೆಗೂ ನಡೆದದ್ದು ಇದು. ಟಿಬೆಟ್‌ನಲ್ಲಿ ಅನುಭವಿಸಿದ ಅವಮಾನದಿಂದ ಕ್ರೋಧಗೊಂಡ ಖಿಲ್ಜಿ ನಮ್ಮ ರಾಜ್ಯವನ್ನು ಗೆದ್ದು, ಇಸ್ಲಾಂ ಧ್ವಜವನ್ನು ಹಾರಿಸಲು ಆಶಿಸುತ್ತಿದ್ದಾನೆ. ಅವನು ಇದುವರೆಗೂ ಎಷ್ಟೋ ರಾಜ್ಯಗಳನ್ನು ಗೆದ್ದಿರಬಹುದು. ಆದರೆ ಈ ಪೃಥು ಮಹಾರಾಜರ ತಂತ್ರಗಳ ಮುಂದೆ ಕುಸಿದು ಬೀಳದೆ ವಿಧಿಯಿಲ್ಲ.”
ಅಲ್ಲಿಯವರೆಗೂ ಕೇಳರಿಯದ ತಂತ್ರವನ್ನು ಪೃಥು ಮಹಾರಾಜರು ವಿವರಿಸಿದರು.
“ನಮ್ಮ ರಾಜ್ಯದ ಕಡೆಗೆ ಬರುತ್ತಿರುವ ಖಿಲ್ಜಿ ಸೇನೆಗೆ ಎಲ್ಲೂ ನಿಲ್ಲಿಸಬೇಡಿ ” ಕೇಳಿದ ಕೂಡಲೇ ಸಭೆಗೆ ಬುದ್ಧಿ ತಪ್ಪಿದಂತಾಯಿತು. ಶತ್ರುಗಳನ್ನು ರಾಜ್ಯಕ್ಕೆ ಸ್ವಾಗತಿಸಲು ಹೇಳುತ್ತಿದ್ದಾರಾ ಪ್ರಭುಗಳು? ಏನೆಂದು?
“ಖಿಲ್ಜಿ ಸೇನೆಯು ಬ್ರಹ್ಮಪುತ್ರ ನದಿಯ ದಡದವರೆಗೆ ಬರುವವರೆಗೂ ಕಾಯಿರಿ” …ಎಂದು ಹೇಳಿ ಎಲ್ಲರ ಮುಖಗಳನ್ನು ನೋಡಿ ನಗುತ್ತಾ “ನನಗರ್ಥವಾಯಿತು, ಆ ದುಷ್ಟರು ಗ್ರಾಮಗಳನ್ನು ದೋಚುತ್ತಾರೆ ಅಂತಾನೆ ತಾನೆ. ಖಿಲ್ಜಿ ಸೇನೆ ಬರುವ ಮಾರ್ಗದಲ್ಲಿರುವ ಪ್ರತಿಯೊಂದು ಗ್ರಾಮವನ್ನೂ ಖಾಲಿ ಮಾಡಿಸಿ. ಆಹಾರ ಧಾನ್ಯಗಳನ್ನು ಅಲ್ಲಿಂದ ಸ್ಥಳಾಂತರಿಸಿ. ಪಶುಪಕ್ಷಿಗಳನ್ನು ಅಲ್ಲಿಂದ ತೆಗೆದುಕೊಳ್ಳಿ.. ಹಾಗೆಯೇ ಅಲ್ಲಿರುವ ಜಲಸಂಪನ್ಮೂಲಗಳನ್ನು ಹಾಳು ಮಾಡಿ. ಕುಡಿಯಲು ಸಾಧ್ಯವಿಲ್ಲದಂತೆ, ಕನಿಷ್ಠ ಮುಖ ತೊಳೆಯಲೂ ಬಾರದಂತೆ ಮಾಡಿ. ಅವರನ್ನು ಹಾಗೆಯೇ ನಮ್ಮ ನಿರ್ದಿಷ್ಟ ಪ್ರದೇಶದವರೆಗೆ ಬರಲು ಬಿಡಿ”
ಸಭಿಕರೆಲ್ಲರೂ ಉಸಿರು ಬಿಗಿಹಿಡಿದು ಪೃಥು ಮಹಾರಾಜರ ಅದ್ಭುತ ತಂತ್ರವನ್ನು ಕೇಳಿದರು.
ಮರುಕ್ಷಣವೇ ತಂಡಗಳಾಗಿ ವಿಭಜಿತವಾದ ಪೃಥು ಸೇನಾಪಡೆ ಆ ಗ್ರಾಮಕ್ಕೆ ಖಿಲ್ಜಿ ಸೇನೆ ತಲುಪುವ ಮೊದಲೇ ಪೃಥು ಮಹಾರಾಜರ ತಂತ್ರವನ್ನು ಜಾರಿಗೆ ತರಲು ಪ್ರಾರಂಭಿಸಿತು.
ಕೆಲವು ದಿನಗಳ ನಂತರ ಕಾಮರೂಪ ಗಡಿಯನ್ನು ತಲುಪಿದ ಕೂಡಲೇ
” ಊ.. ನಡೆಯಿರಿ. ಟಿಬೆಟ್‌ನಲ್ಲಿ ನಮಗೆ ನಡೆದದ್ದಕ್ಕೆ ಇಲ್ಲಿ ಪ್ರತೀಕಾರ ತೀರಿಸಿಕೊಳ್ಳಬೇಕು. ಕಂಡವರನ್ನೆಲ್ಲಾ ಖಡ್ಗದಿಂದಲೇ ಮಾತನಾಡಿಸಿ. ಮುದುಕ-ಮುದುಕಿ, ಹೆಣ್ಣು-ಗಂಡು, ಮಗು ಮರಿ ಯಾರನ್ನೂ ಬಿಡಬೇಡಿ. ನಾವೆಂದರೆ ಏನು ಎಂದು ಮತ್ತೊಮ್ಮೆ ಜಗತ್ತಿಗೆ ತಿಳಿಯಬೇಕು” ಎಂದು ಖಿಲ್ಜಿ ಆಜ್ಞೆ ಹೊರಡಿಸಿದನು.
ಕತ್ತಿಗಳನ್ನು ತಿರುಗಿಸುತ್ತಾ ಗ್ರಾಮಕ್ಕೆ ಕಾಲಿಟ್ಟ ಸೇನೆಯು ಆಶ್ಚರ್ಯಗೊಂಡಿತು. ಖಾಲಿಯಾದ ಗ್ರಾಮವನ್ನು ನೋಡಿ. ಮನೆಗಳಿಗೆ ಬೆಂಕಿ ಹಚ್ಚಿದರು.
“ನೋಡಿದಿರಾ! ನಮ್ಮ ಪ್ರತಾಪ ತಿಳಿದು ಗ್ರಾಮವನ್ನು ಖಾಲಿ ಮಾಡಿ ಓಡಿಹೋಗಿದ್ದಾರೆ. ಇನ್ನು ನಮಗೆ ಹಿನ್ನಡೆಯಿಲ್ಲ, ಕಾಮರೂಪ ರಾಜ್ಯ ನಮ್ಮದೇ” ಕುದುರೆಯ ಮೇಲೆ ಕುಳಿತು ಗಡ್ಡವನ್ನು ಸವರಿಕೊಳ್ಳುತ್ತಾ ಖಿಲ್ಜಿ ಹೆಮ್ಮೆಯಿಂದ ನುಡಿದನು. ಕಾಮರೂಪ ರಾಜ್ಯವನ್ನು ಪ್ರವೇಶಿಸುತ್ತಿದ್ದಂತೆ ಅವನಿಗೆ ಅರ್ಥವಾಯಿತು – ಎಲ್ಲಾ ಗ್ರಾಮಗಳು, ಆಹಾರ ಧಾನ್ಯಗಳು ಖಾಲಿಯಾಗಿವೆ ಎಂದು, ತಿನ್ನಲು ಅನ್ನವಿಲ್ಲದೆ ಖಿಲ್ಜಿ ಸೇನೆಯು ತತ್ತರಿಸಿ ಹೋಯಿತು. ಕುಡಿಯಲು ಒಂದು ಗುಟುಕು ನೀರೂ ಇರಲಿಲ್ಲ. ಹಸಿವನ್ನು ತಾಳಲಾರದ ಸೇನೆಯು ತಮ್ಮ ಕುದುರೆಗಳನ್ನು ಕೊಂದು, ಕಚ್ಚಾ ಮಾಂಸವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಬೀಳುತ್ತಾ ಏಳುತ್ತಾ ಕಾಮರೂಪ ರಾಜಧಾನಿಯ ಗಡಿಗಳನ್ನು ತಲುಪಿದರು. ಗೋಮು ನದಿಯ ಮೇಲಿದ್ದ ಅತಿ ಪುರಾತನ ಕಲ್ಲಿನ ಸೇತುವೆಯನ್ನು ದಾಟಿ ಕಣಿವೆಯೊಳಗೆ ಕಾಲಿಟ್ಟರು. ಪೃಥು ಮಹಾರಾಜರು ಈಗಾಗಲೇ ಸ್ಥಳೀಯ ಬೋಡೋ, ಕೋಚ್ ರಾಜ್ ಬಾಂಗಜಿ, ಕೊಯೋಟ್ ಜನಜಾತಿಗಳನ್ನು ಒಗ್ಗೂಡಿಸಿ, ತಮ್ಮ ಸೇನೆಯೊಂದಿಗೆ ಯುದ್ಧಕ್ಕೆ ಸಿದ್ಧವಾಗಿ ನಿಲ್ಲಿಸಿದ್ದರು. ಎತ್ತರದ ದಿಬ್ಬಗಳು, ಮರಗಳ ಮೇಲೆ ಕಾಯುತ್ತಿದ್ದ ಪೃಥು ಸೇನೆಯು ಬಿದಿರಿನ ಬಾಣಗಳನ್ನು ಒಮ್ಮೆಲೇ ಆಕಾಶದಿಂದ ಸುರಿಯುವ ಮಳೆಯಂತೆ ಸುರಿಸಿತು. ತಗ್ಗು ಪ್ರದೇಶದಲ್ಲಿ ನಿಂತಿದ್ದ ಖಿಲ್ಜಿ ಸೇನೆಯು ಶತ್ರುವಿನ ದಾಳಿಯನ್ನು ನೋಡಿ ಬೆರಗಾಯಿತು.
ಆಗ ಖಿಲ್ಜಿಗೆ ಅರ್ಥವಾಯಿತು, ಗ್ರಾಮಗಳು ಏಕೆ ಖಾಲಿಯಾಗಿದ್ದವು, ತುಂಬಾ ದೂರ ಪ್ರಯಾಣ ಮಾಡಿಸಿ, ಆಹಾರ ಲಭ್ಯವಿಲ್ಲದಂತೆ ಮಾಡಿ ದಣಿವುಂಟುಮಾಡುವುದೇ ಪೃಥು ಮಹಾರಾಜರ ತಂತ್ರ ಎಂದು ಅರಿತು ಒಮ್ಮೆಲೇ ಭಯಭೀತನಾದನು.
ಒಮ್ಮೆಲೇ ಸಮುದ್ರದ ಅಲಗಳಂತೆ ಮುನ್ನುಗ್ಗಿ, ಎದುರಾಳಿಗಳನ್ನು ಗೊಂದಲಕ್ಕೀಡು ಮಾಡುವುದಷ್ಟೇ ತಿಳಿದಿದ್ದ ತಮಗೆ ಅದೇ ತಂತ್ರದಿಂದ ನಡುಕ ಹುಟ್ಟಿಸುತ್ತಿರುವ ಪೃಥು ಮಹಾರಾಜರ ಹೆಸರನ್ನು ಹೇಳಲು ಕೂಡ ಭಯಪಟ್ಟನು.
ಯಾವ ಕಡೆಯಿಂದ ವೇಗವಾಗಿ ಬಾಣಗಳು ಬರುತ್ತಿವೆಯೋ ತಿಳಿಯುವ ಮೊದಲೇ, ಪ್ರಾಣಗಳು ಗಾಳಿಯಲ್ಲಿ ಲೀನವಾಗುತ್ತಿದ್ದವು. ಗಾಯಗೊಂಡ ಕುದುರೆಗಳು ಕೆರಳುತ್ತಾ ತಮ್ಮ ಸವಾರರನ್ನೇ ಕೆಡವಿ, ತುಳಿದುಹಾಕುತ್ತಿದ್ದವು. ನೋಡ ನೋಡುತ್ತಲೇ ಅರ್ಧ ಸೇನೆಯು ಹತವಾಗುವುದನ್ನು ನೋಡಿ, ತನ್ನ ಕುದುರೆಯನ್ನು ವೇಗವಾಗಿ ಪುರಾತನ ಸೇತುವೆಯ ಕಡೆಗೆ ಓಡಿಸಿದನು ಖಿಲ್ಜಿ ಪ್ರಾಣ ಭಯದಿಂದ. ಅವನ ಹಿಂಬಾಲಿಯೇ ಅವನ ಸೇನೆಯೂ ಕೂಡ.
ಪುರಾತನ ಕಲ್ಲಿನ ಸೇತುವೆಯನ್ನು ದಾಟಿ, ಕಾಮರೂಪ ಗಡಿಗಳನ್ನು ದಾಟಿ ಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎಂದುಕೊಂಡ ಖಿಲ್ಜಿ ಸೇತುವೆಯ ಹತ್ತಿರ ತಲುಪಿದ ಕೂಡಲೇ ಒಮ್ಮೆಲೇ ಆಘಾತಗೊಂಡನು.
ಅದಕ್ಕೂ ಮೊದಲು ಇದ್ದ ಸೇತುವೆ ಸಂಪೂರ್ಣವಾಗಿ ನಾಶವಾಗಿತ್ತು. ತಾವೂ ಓಡಿಹೋಗಲು ಸಾಧ್ಯವಿಲ್ಲದಂತೆ ತನ್ನ ರಾಜ್ಯದ ಸೇತುವೆಯನ್ನು ತಾನೇ ನಾಶಪಡಿಸಿದ ಪೃಥು ಮಹಾರಾಜರ ಯೋಚನೆಯನ್ನು ನೆನೆದ ಕೂಡಲೇ ಖಿಲ್ಜಿಗೆ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿತು.
ಅಷ್ಟರಲ್ಲಿ ಪೃಥು ಮಹಾರಾಜರ ಸೇನೆಯು ಮೂರು ಕಡೆಯಿಂದ ಸುತ್ತುವರಿದು ಚಕ್ರಬಂಧ ಮಾಡಿತು. ಒಂದು ಕಡೆ ನೋಡಿದರೆ ವೇಗವಾಗಿ ಹರಿಯುತ್ತಾ ಭಯ ಹುಟ್ಟಿಸುತ್ತಿರುವ ಬ್ರಹ್ಮಪುತ್ರ ನದಿ. ಇತ್ತ ನೋಡಿದರೆ ಪ್ರಾಣಗಳನ್ನು ಕೀಳಾಗಿ ಪರಿಗಣಿಸುವ ಪೃಥು ಸೇನೆ. ಉಸಿರುಗಟ್ಟಿ ಹೋಯಿತು ಖಿಲ್ಜಿ ಸೇನೆ.
ಎತ್ತಿದ ಕತ್ತಿಯನ್ನು ಕೆಳಗಿಳಿಸದೆ ಖಿಲ್ಜಿ ಸೇನೆಯ ತಲೆಗಳನ್ನು ಕಡಿಯುತ್ತಿದ್ದ ಪೃಥು ಮಹಾರಾಜರನ್ನು ನೋಡಲು ಯಾರಿಗೂ ಧೈರ್ಯ ಸಾಲಲಿಲ್ಲ. ಮಹಾರಾಜರ ಸೇನೆಯು ಬಿದಿರಿನ ಬಾಣಗಳಿಂದ, ಕತ್ತಿಗಳಿಂದ ಶತ್ರುಗಳನ್ನು ಖಂಡ ಖಂಡಗಳಾಗಿ ಕಡಿಯುತ್ತಿತ್ತು. ಪರಿಸ್ಥಿತಿಯನ್ನು ನೋಡುತ್ತಿದ್ದ ಖಿಲ್ಜಿ ಸೇನೆಯಲ್ಲಿದ್ದ ಧೈರ್ಯವೂ ಜಾರಿಹೋಯಿತು.
ಧೈರ್ಯ ಮಾಡಿ ಕೆಲವರು ನದಿಗೆ ಹಾರಿದರು. ಸುಳಿಗಳ ನೀರಿನಲ್ಲಿ ಬಲಿಯಾದರು. ತನ್ನ ಉಳಿದಿದ್ದ ಸೇನೆಯೊಂದಿಗೆ ನದಿಯ ದಡದ ಉದ್ದಕ್ಕೂ ಓಡಿದನು ಖಿಲ್ಜಿ. ಆದರೆ ಪಟ್ಟು ಬಿಡದ ಮಹಾರಾಜರ ಸೇನೆಯು ಬೆನ್ನಟ್ಟಿ ಬೆನ್ನಟ್ಟಿ ಕೊಂದಿತು. ಸಿಕ್ಕವರಿಗೆ ಓಡಲು, ದಣಿಯಲು ಅವಕಾಶ ನೀಡದೆ ಪರಲೋಕದ ಕಡೆಗೆ ದಾರಿ ತೋರಿಸುತ್ತಿತ್ತು.
ಪ್ರಾಣಭಯದಿಂದ, ದೇಹವೆಲ್ಲಾ ಬೆವರಿನಿಂದ ತೊಯ್ದು ಓಡುತ್ತಿದ್ದ ಖಿಲ್ಜಿಗೆ ಎದುರಿಗೆ ಮದನ ಕಾಮದೇವ ದೇವಾಲಯ ಕಾಣಿಸಿತು. ಒಮ್ಮೆಲೇ ಖಿಲ್ಜಿಯಲ್ಲಿ ಶಕ್ತಿ ಪ್ರವೇಶಿಸಿತು.
ಹಿಂದೂ ಧರ್ಮದ ಆಡಳಿತಗಾರನಾದ ಪೃಥು ಮಹಾರಾಜರು ಯಾವುದೇ ಪರಿಸ್ಥಿತಿಯಲ್ಲಿ ದೇವಾಲಯದಲ್ಲಿ ಹತ್ಯಾಕಾಂಡ ಮಾಡುವುದಿಲ್ಲ, ಆಯುಧದೊಂದಿಗೆ ದೇವಾಲಯಕ್ಕೆ ಪ್ರವೇಶಿಸುವುದಿಲ್ಲ ಎಂದು ತಿಳಿದ ಖಿಲ್ಜಿ ದೇವಾಲಯಕ್ಕೆ ಪ್ರವೇಶಿಸಿ, ಬಾಗಿಲುಗಳನ್ನು ಮುಚ್ಚಿಕೊಂಡನು.
ಖಿಲ್ಜಿಯ ತಂತ್ರವನ್ನು ಅರಿತ ಪೃಥು ದೇವಾಲಯದ ಸುತ್ತಲೂ ಮೊನಚಾದ ಬಿದಿರಿನ ಕೋಲುಗಳನ್ನು ಪ್ರತಿ ಇಂಚಿಗೂ ನೆಟ್ಟನು.
ಆಲೋಚನೆಯಿಂದ ಹೊರಬಂದು ಸುತ್ತಲೂ ನೋಡಿದ ಖಿಲ್ಜಿ. ಎಲ್ಲಿಯೂ ಸಪ್ಪಳವಿರಲಿಲ್ಲ. ಹಸಿವು, ದಣಿವು ಪ್ರಾಣ ಹಿಂಡುತ್ತಿದ್ದವು. ನಿಧಾನವಾಗಿ ದೇವಾಲಯದ ಗೋಡೆಗಳನ್ನು ಹಿಡಿದು, ಬಿದಿರಿನ ಬೇಲೆಯಿಂದ ಹೊರಬಂದು, ಜೀವ ಉಳಿಯಿತೆಂದು ಓಡಿದನು.
ದಾರಿಯಲ್ಲಿ ಬದುಕುಳಿದ ತನ್ನ ಉಳಿದ ನೂರು ಸೈನಿಕರನ್ನು ಭೇಟಿಯಾದನು. ಎಲ್ಲರೂ ಒಟ್ಟಾಗಿ, ಕಾಲುಗಳಿಗೆ ಬುದ್ಧಿ ಹೇಳುತ್ತಾ ಓಡಿದರು. ಕಾಲಪ್ರವಾಹದಲ್ಲಿ ಅವಮಾನಭಾರದಿಂದ ಬದುಕಿ ದಯನೀಯವಾದ ಸಾವನ್ನು ಕಂಡನು ಖಿಲ್ಜಿ.
ಈಶಾನ್ಯ ಭಾರತವು ಪರಧರ್ಮದ ಅಧೀನಕ್ಕೆ ಹೋಗದಂತೆ ಯಾರಿಗೂ ತಲುಪದ ತಂತ್ರಗಳನ್ನು ಜಾರಿಗೆ ತಂದು, ಅತ್ಯುತ್ತಮ ಹೋರಾಟ ನಡೆಸಿ, ನರರೂಪಿ ರಾಕ್ಷಸನಿಗೇ ಪ್ರಾಣ ಭಯ ಹುಟ್ಟಿಸಿದ ಪೃಥು ಮಹಾರಾಜರು ಸದಾ ಚಿರಸ್ಮರಣೀಯರು.
(ಕಾಮರೂಪ ರಾಜ್ಯ ಎಂದರೆ ಇಂದಿನ ಅಸ್ಸಾಂ, ಅಂದಿನ ಪ್ರಾಗ್ಜ್ಯೋತಿಷ. ಉತ್ತರ ಗುವಾಹಟಿಯ ಕನ್ಹೆ ಬೊರೊಕ್ಸಿ ಬೋಯಾಕ್ಸಿಲ್ ಶಿಲಾಶಾಸನದ ಪ್ರಕಾರ ಮಾರ್ಚ್ 28 ರಂದು ಪೃಥು ಮಹಾರಾಜರ ವಿಜಯವನ್ನು ಆಚರಿಸಲು ‘ಮಹಾ ವಿಜಯ ದಿವಸ್’ ಎಂದು ಆಚರಿಸಲಾಗುತ್ತಿದೆ.)
ತೆಲುಗು ಮೂಲ :ಜಿ.ವಿ.ಶ್ರೀನಿವಾಸ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್




ಇತಿಹಾಸದ ಜೊತೆ ಒಂದು ವೀರೋಚಿತ ಕತೆಯನ್ನು ಕನ್ನಡ ಓದುಗರಿಗೆ ಪರಿಚಯಿಸಿದಿರಿ.ಅಭಿನಂದನೆ ನಿಮಗೆ.
ಧನ್ಯವಾದಗಳು