ಕಥಾ ಸಂಗಾತಿ
ಎನ್.ಆರ್.ರೂಪಶ್ರೀ
“ಹೊಸ ತಾಯಿ”

ಆಕೆ ಆ ಕಡೆ ಈ ಕಡೆ ಕುರ್ಚಿಯಲ್ಲಿ ಕುಳಿತೆ ಹೊರಳಾಡುತ್ತಿದ್ದಳು.ಕುಂತಲ್ಲಿ ಕೂರಲಾಗುತ್ತಿರಲಿಲ್ಲ.ಆದರೂ ಏಳುವಂತಿರಲಿಲ್ಲ.ಮುಖದಲ್ಲಿ ನಿರಾಸೆಯ ಕಾರ್ಮೊಡವಿತ್ತು.ಅನಿವರ‍್ಯತೆಯ ಸುಳಿವೊಂದು ಕಾಣುತ್ತಿತ್ತು.ಆಕೆಯ ಅವಸ್ಥೆ ನೋಡಿದರೆ ಎಂಥವರಿಗೂ ಕನಿಕರ ಬರುವಂತಿತ್ತು.ಆದರೆ ಯಾರೂ ಕನಿಕರ ತೋರಿಸುತ್ತಿರಲಿಲ್ಲ.ಆಕೆಯ
ಹೊಟ್ಟೆ ನೋಡಿದರೆ ನಾಲ್ಕು ತಿಂಗಳೇನೋ ಅನಿಸುತ್ತಿತ್ತು.ಆಫೀಸಿನ ಸಮಯ ಮುಕ್ತಾಯವಾಗುತ್ತಿದ್ದಂತೆ ನಿಧಾನವಾಗಿ ಹೊರಡಲನುವಾದಳು.ಬಿದ್ದ ಮನೆಯ ಕೀಲಿಕೈ ಬಗ್ಗಿ ಎತ್ತಿಕೊಳ್ಳಲಾಗದೆ ಒದ್ದಾಡಿದಳು.ಅಮ್ಮಾ…ಎಂದು ಕರೆಯುತ್ತಲೇ ಸಿಟಿಬಸ್ಸಿನ ದಾರಿ ಹಿಡಿದಳು.ಮನೆಗೆ ಬಂದರೆ ಯಾರೂ ಇಲ್ಲ ಆಕೆಗೆ.ನಾಲ್ಕು ಗೋಡೆ ಮಾತ್ರ.ಜೋರಾಗಿ ಗಹಗಹಿಸಿ ನಕ್ಕರೂ ಕೇಳುವವರಿಲ್ಲ.ಬಿಕ್ಕಿ ಬಿಕ್ಕಿ ಅತ್ತರೂ ಸಂತೈಸುವವರಿಲ್ಲ.ನಿನ್ನ ಜೊತೆ ನಾನಿರುತ್ತೇನೆ ಎಂದು ಹೇಳಿ ಕೈ ಹಿಡಿದವನು ಗೊತ್ತಿಲ್ಲದಂತೆ ಎದ್ದು ಹೋಗಿದ್ದಾನೆ.ಅವನು ಬರುವುದಿಲ್ಲ ಎಂದು ಗೊತ್ತಿದ್ದರೂ ಅವನ ನಿರೀಕ್ಷೆಯಲ್ಲೇ ಆಕೆ ಕಾಲ ದೂಡುತ್ತಿದ್ದಾಳೆ.ತವರಿನ ಬಾಗಿಲು ಮುಚ್ಚಿದೆ.ಅಣ್ಣ ತಂಗಿಯೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಬದುಕುತ್ತಿದ್ದಾನೆ.ಅಣ್ಣನಿಗೆ ಭಾರವಾಗುವುದು ಆಕೆಗೆ ಇಷ್ಟವಿಲ್ಲ.ಮರೀಚಿಕೆಯಾದ ಪ್ರೀತಿಗೆ ಹಂಬಲಿಸುತ್ತಲೇ ಇದ್ದಾಳೆ ಆಕೆ.
ಆಫೀಸಿಗೆ ಹೋಗಲು ಮನಸ್ಸಿಲ್ಲದಿದ್ದರು ಹೊಟ್ಟೆಪಾಡಿಗಾಗಿ ನಿಧಾನವಾಗಿ ಕಾಲೆಳೆದುಕೊಂಡು ಬರುತ್ತಿದ್ದಾಳೆ.ಗಂಡ ಬಿಟ್ಟವಳೆಂಬ ಹಣೆಪಟ್ಟಿಯೊಂದಿಗೆ. ದಿನದಿಂದ ದಿನಕ್ಕೆ ಒಂಟಿಯಾಗುತ್ತಿದ್ದಾಳೆ ಆಕೆ.ಈ ಬಸಿರ ಹೊತ್ತು ಆಫೀಸಿನ ಕೆಲಸ ಸಾಧ್ಯವಿಲ್ಲವೆಂದು ಕೊಸರಾಡುತ್ತಲೇ ಅನಿವಾರ್ಯತೆಗೆ ಅಮರಿಕೊಳ್ಳುತ್ತಿದ್ದಾಳೆ.ಆರನೇ ತಿಂಗಳಿನಿಂದ ರಜೆ ಪಡೆದು ಬಿಡಬೇಕೆಂಬ ನಿರ್ಧಾರದಲ್ಲಿದ್ದಾಳೆ ಆಕೆ.ಬಾಸ್ ಕರೀತಿದ್ದಾರೆ ಎಂದು ಜವಾನ ನುಡಿದಾಗ ಭಾರವಾದ ಮನಸ್ಸಿನಿಂದ ಹೆಜ್ಜೆ ಇಟ್ಟ ಆಕೆಗೆ ಸಿಕ್ಕಿದ್ದು ಬೈಗುಳಗಳ ಸುರಿಮಳೆ.ಕೈಲಾಗದಿದ್ದರೆ ಮನೆಯಲ್ಲಿ ಕೂರಿ ಆಫೀಸಿಗೆ ಬಂದು ಕೆಲಸ ಮಾಡದಿದ್ದರೆ ಹೇಗೆ?ಬಾಸಿನ ಖಾರವಾದ ನುಡಿಗೆ ಆಕೆಯ ಕಣ್ಣಿನಿಂದ ನೀರಿಳಿಯಿತು.ಈ ಸಮಯದಲ್ಲಿ ಅಳಬಾರದಮ್ಮ ಎಂದು ಜವಾನ ಹೇಳಿದ ಮಾತಿಗೆ ಮತ್ತು ಜೋರಾಗಿ ಅಳು ಬಂದಿತು.ಆಕೆಗೆ ನಾನು ಕಣ್ಣೀರಿನ ಜೊತೆಗೆ ಹುಟ್ಟಿದೆನೊ,ಕಣ್ಣೀರು ನನ್ನ ಜೊತೆ ಹುಟ್ಟಿತೋ ಗೊತ್ತಿಲ್ಲ ಎಂದು ಬಿಕ್ಕುತ್ತಲೇ ಜವಾನನಿಗೆ ಹೇಳಿ ಆಕೆ ಹೊರ ಬಂದಳು.ಜವಾನನ ಕಣ್ಣು ಹನಿಗೂಡಿತ್ತು.
ಆಕೆಗೆ ಒಂದೇ ಒಂದು ಆಸೆ.ಇನ್ನು ಕೆಲವು ತಿಂಗಳಲ್ಲಿ ಪುಟ್ಟ ಜೀವವೊಂದು ಜೊತೆಯಲ್ಲಿರುತ್ತದೆ.ತಾನು ಒಂಟಿಯಲ್ಲ ಎನ್ನುವ ಭರವಸೆ.ಅದಕ್ಕಾಗಿಯೇ ಆಕೆ ಬಾಸ್ ಬೈಗಳ,ಗಂಡ ಬಿಟ್ಟವಳೆಂಬ ಪಟ್ಟ, ಎಲ್ಲವನ್ನು ಸಹಿಸಲು ಸಿದ್ದವಾಗಿದ್ದಾಳೆ.ಆಕೆ ಗೆಳತಿ ಶಾಂಭವಿಯ ಮಾತು ಕೇಳಿದ್ದರೆ ಇಷ್ಟು ಹೊತ್ತಿಗೆ ಅಬಾರ್ಷನ್ ಮಾಡಿಸಿಕೊಂಡು ಹಾಯಾಗಿರಬಹುದಿತ್ತು.ಆದರೆ ಆಕೆಗೆ ಅದು ಇಷ್ಟವಿಲ್ಲ.ಕಷ್ಟಪಟ್ಟಾದರು ಸರಿಯೆ ಪುಟ್ಟ ಜೀವಕ್ಕೆ ಜನ್ಮ ನೀಡಬೇಕು.ಶಾಂಭವಿಯ ಮಾತನ್ನು ಆಕೆ ಸಾರಾಸಗಟಾಗಿ ತಿರಸ್ಕರಿಸಿದ್ದಳು.ಹೊಟ್ಟೆ ದೊಡ್ಡದಾದಂತೆ ಸುಸ್ತು ಹೆಚ್ಚಾಯಿತು ಆಕೆಗೆ.ಆಫೀಸಿಗೆ ಹೋಗಲು ಸಾಧ್ಯವಿಲ್ಲ ಎನಿಸಿತು.ಮನೆಯಲ್ಲಿದ್ದರೂ ಆಕೆಗೆ ಆರೈಕೆ ಮಾಡುವವರು ಯಾರೂ ಇಲ್ಲ.ಇದ್ದೊಬ್ಬ ಗೆಳತಿ ಶಾಂಭವಿ ಗಂಡನ ಜೊತೆಯಲ್ಲಿ ಅಮೇರಿಕಕ್ಕೆ ಹಾರಿದ್ದಾಳೆ.ಏನು ಮಾಡುವುದು ಎಂದು ಯೋಚಿಸುತ್ತಲೇ ಇದ್ದ ಆಕೆಗೆ ತಕ್ಷಣ ಹೊಟ್ಟೆಯಲ್ಲಿ ಒದೆಯುವ ಅನುಭವ.ಆಕೆಗೆ ಸುಮಂಗಲಾಶ್ರಮ ನೆನಪಿಗೆ ಬಂದಿತು.ಆಕೆ ಅಲ್ಲಿಗೆ ಹೆಜ್ಜೆ ಇಟ್ಟಳು.ಅನಾಥರಿಗಾಗಿ ಎಂದು ಬರೆದಿತ್ತು.ಪುಟ್ಟ ಜೀವ ಹೊರ ಬರುವ ತನಕ ಮಾತ್ರ ನಾನು ಅನಾಥೆ ಕೊನೆಗಲ್ಲ ಎಂದು ಮನಸ್ಸಿನಲ್ಲೆ ಅಂದುಕೊಂಡು ಆಕೆ ಪ್ರವೇಶಿಸಿದಳು.
ಆಫೀಸಿನ ಜವಾನನ ಹತ್ತಿರ ಬಾಸ್ಗೆ ಕೊಡು ಎಂದು ದೀರ್ಘಾವಧಿ ರಜೆ ಚೀಟಿ ಕೊಟ್ಟು ಹೊರಟಾಗ ಆಕೆಯ ಮನಸ್ಸು ನಿರಾಳವಾಗಿತ್ತು.ಸುಮಂಗಲಾಶ್ರಮ ಆಕೆಗೆ ಹೊಸ ಶಕ್ತಿ ನೀಡಿತ್ತು.ಆಶ್ರಮದ ಕಮಲಕ್ಕ ಕೈ ಹಿಡಿದವನು ಎಲ್ಲಿ?ಎಂದು ಕೇಳಿದರು.ಆಕೆ ಮಾತನಾಡಲು ಹಿಂಜರಿದರೂ ಕೇಳುವ ಜೀವವೊಂದಿದೆಯಲ್ಲಾ ಎನ್ನುವ ಸಂತೋಷದಿಂದ ಎಲ್ಲವನ್ನು ಹೇಳಿದಳು.ಮನೆಯವರ ಒತ್ತಾಯಕ್ಕೆ ಮದುವೆಯಾಗಿದ್ದ ಅವನಿಗೆ ನಾನೆಂದೂ ಇಷ್ಟವಾಗಿರಲೇ ಇಲ್ಲ.ಸ್ವಲ್ಪ ದಿವಸ ಜೊತೆಯಲ್ಲಿದ್ದ.ಕೊನೆಗೊಂದು ದಿನ ನಾನು ಬೇರೆಯವಳನ್ನು ಪ್ರೀತಿಸುತ್ತಿದ್ದೆ ಒತ್ತಾಯಕ್ಕೆ ಮದುವೆಯಾದೆ.ಈಗ ಅವಳ ಜೊತೆಯೆ ಹೋಗುತ್ತೇನೆ ಎಂದು ಹೇಳಿ ಹೊರಟು ಬಿಟ್ಟ.ಮುಂಚೆಯೇ ಹೇಳಬಾರದಿತ್ತಾ?ಈಗ ನಾನೆಲ್ಲಿಗೆ ಹೋಗಲಿ?ಅಗ್ನಿಸಾಕ್ಷಿಗೆ ಬೆಲೆಯಿಲ್ಲವೇ?ಎಂದಿದ್ದಕ್ಕೆ ಮಾರುತ್ತರವನ್ನು ನೀಡದೆ ಹೊರಟುಬಿಟ್ಟ.ನಿಮ್ಮ ಕೂಸಿಗೆ ತಾಯಿಯಾಗುತ್ತಿದ್ದೇನೆ ಎಂದು ಚೀರಿ ಹೇಳಿದರೂ ಬೇಡದ ಬಸಿರು ಎಂದು ನುಡಿದು ಹೋಗಿಬಿಟ್ಟ.ಕಮಲಕ್ಕ ನಾನು ಏನು ಮಾಡಬೇಕಾಗಿತ್ತು?ಹೋಗುವ ಅವನನ್ನು ತಡೆಯಲು ಸಾಧ್ಯವೇ? ಮನಸ್ಸು ಮುದುಡಿ ಹೋಗಿತ್ತು.ನನ್ನ ಯಾವ ತಪ್ಪಿಗೆ ಈ ಶಿಕ್ಷೆ?ಕೈ ಹಿಡಿದವನ ಪ್ರೀತಿ ಬಯಸಿದ್ದು ತಪ್ಪೆ?ಬದುಕಿನ ಒಂದು ಯಾತ್ರೆ ಮುಗಿಯಿತು ಎಂದು ಕುಳಿತಿದ್ದೆ.ದಾರಿ ಇಲ್ಲವಾಗಿತ್ತು.ಹಗಲು ಕತ್ತಲಾಗೆ ಕಾಣುತ್ತಿತ್ತು.ಎಂದೋ ಮಾಡಿಕೊಂಡ ಡಿಪ್ಲೂಮಾ ಕೆಲಸವೊಂದು ಸಿಗುವಂತೆ ಮಾಡಿತು.ಮತ್ತೆ ಬದುಕುತ್ತೇನೆ ಎನ್ನುವ ಆಸೆ ಚಿಗುರಿತು.ಕಮಲಕ್ಕ ಪುಟ್ಟ ಜೀವಕ್ಕಾಗಿ ಜೀವ ಹಿಡಿದುಕೊಂಡು ನಿಂತಿದ್ದೇನೆ ಎಂದಾಗ ಕಮಲಕ್ಕನ ಮುಖದಲ್ಲಿ ನೋವಿನ ಎಳೆಯೊಂದು ಕಾಣುತ್ತಿತ್ತು.

ನೋವು ಶುರುವಾದಾಗ ಆಕೆಗೆ ಸಂತೋಷದಿಂದ ಮುಖ ಅರಳಿದಂತಾಗಿತ್ತು.ಡಾಕ್ಟರೇ ಆಶ್ಚರ್ಯ ಪಡತೊಡಗಿದ್ದರು.ಮೊದಲ ತಾಯಿ ನೀನು ನೋವಿನಲ್ಲೂ ನಗುತ್ತಿರುವೆ ಎಂದರು.ಅಂತೂ ಆಕೆಯ ಪುಟ್ಟ ಜೀವ ಹೊರ ಬಂದಿತ್ತು.ಮುದ್ದಾದ ಗಂಡು ಮಗು ಆಕೆಯ ಮಡಿಲೇರಿತ್ತು.ಎಲ್ಲೋ ಅವನ ಛಾಯೆಯೇ ರಾಚಿದಂತಾಗುತ್ತಿತ್ತು.ಅದನ್ನು ಅನಿವಾರ‍್ಯವಾದರೂ ಒಪ್ಪಿಕೊಳ್ಳಲೇ ಬೇಕಿತ್ತು.ಸುಮಂಗಲಾಶ್ರಮದವರು ಆಕೆಯನ್ನು ಚೆನ್ನಾಗಿ ನೋಡಿಕೊಂಡರು.ಆಕೆ ಜನ್ಮ ನೀಡಿ ಹದಿನೈದು ದಿನಗಳಾಗಿತ್ತು.ಅರುಣ ಎಂದು ನಾಮಕರಣವೂ ಆಗಿತ್ತು.ಆಕೆಗೆ ಬೇರೆ ಲೋಕವೇ ಇರಲಿಲ್ಲ.ಎಲ್ಲವೂ ಅರುಣನೇ ಆಗಿದ್ದ.ಒಂದು ರಾತ್ರಿ ಇದ್ದಕ್ಕಿದ್ದಂತೆ ಅರುಣ ಜೋರಾಗಿ ಅಳತೊಡಗಿದ.ಆಕೆಗೆ ಏನಾಯಿತೆಂದು ತೋಚಲಿಲ್ಲ.ಸುಮ್ಮನಿರಿಸುವ ನಾನಾ ಪ್ರಯತ್ನ ಮಾಡಿದಳು.ಇಲ್ಲ…ಅರುಣ ಸುಮ್ಮನಾಗುತ್ತಿರಲಿಲ್ಲ.ಆಕೆ ಹೆದರ ತೊಡಗಿದಳು.ಕಮಲಕ್ಕನ ಕರೆದಳು.ಅರುಣ ಅಳುತ್ತಲೇ ಇದ್ದ.ಕಮಲಕ್ಕ ಡಾಕ್ಟರ್ ಕರೆಯಲು ಹೋದರು.ಆಕೆ ಅರುಣನನ್ನು ಎದೆಗವಚಿಕೊಂಡು ಕುಳಿತಿದ್ದಳು.ಇದ್ದಕ್ಕಿದ್ದಂತೆ ಅರುಣ ಸುಮ್ಮನಾದ.ಪಾಪು…ಏನಾಗಿತ್ತೋ?ಅಷ್ಟು ಜೋರಾಗಿ ಅತ್ತೆ.ಈಗ ಸುಮ್ಮನಾಗಿಬಿಟ್ಟೆ ಎಂದು ಆಕೆ ಹೇಳುತ್ತಲೇ ಇದ್ದಳು.ಅರುಣ ಕಣ್ಣು ಮುಚ್ಚಿದ್ದ.ಅಷ್ಟೊತ್ತಿಗೆ ಕಮಲಕ್ಕ ಡಾಕ್ಟರ್ ಸಮೇತ ಬಂದಳು.ಆಕೆ ನನ್ನ ಮಗನಿಗೆ ಏನೂ ಆಗಿಲ್ಲ ಸುಮ್ಮನಾಗಿದ್ದಾನೆ ಎಂದಳು.ಆದರೂ ಡಾಕ್ಟರ್ ಒಮ್ಮೆ ನೋಡುತ್ತೇನೆ ಎಂದು ಎತ್ತಿಕೊಂಡರು.ಮತ್ತೆ ಮತ್ತೆ ನೋಡಿದರು.ಅರುಣ ಉಸಿರಾಡುತ್ತಿರಲಿಲ್ಲ.ಹೊರಳಿಸಿದರೂ,ಬಡಿದರೂ ಇಲ್ಲ ಅರುಣ ಉಸಿರಾಡುತ್ತಿಲ್ಲ.ಆಕೆ ಎದುರಿಗೆ ಹಾಗೆ ನಿಂತಿದ್ದಳು.ಡಾಕ್ಟರ್ ಮಗು ಬದುಕಿಲ್ಲ ಎಂದರು.ಕಮಲಕ್ಕ ಏನು ಹೇಳ್ತಾ ಇದೀರಾ ಎಂದು ಚೀರಿದರು.ಆಕೆ ನಿಂತೇ ಇದ್ದಳು.ಡಾಕ್ಟರ್ ಪರೀಕ್ಷಿಸಿ ಮಗುವಿಗೆ ಕರುಳಲ್ಲಿ ಸಮಸ್ಯೆಯಿತ್ತು ತಿಳಿಯಲೇ ಇಲ್ಲ ಎಂದರು.ಆಕೆ ಹಾಗೆ ಕುಸಿದು ಕುಳಿತಳು.ಕಮಲಕ್ಕ ಹತ್ತಿರ ಹೋದರೆ ಆಕೆ ಶೂನ್ಯದತ್ತ ದೃಷ್ಟಿ ಹರಿಸಿದ್ದಳು.ಕೊನೆಗೆ ಇದ್ದಕ್ಕಿದ್ದಂತೆ ಮಗುವನ್ನು ಅವುಚಿಕೊಂಡು ಸ್ಮಶಾನದತ್ತ ಹೊರಟಳು.ತಾನೊಬ್ಬಳೇ ಮಣ್ಣು ಮಾಡಿ ಸುಮಂಗಲೀ ಆಶ್ರಮದತ್ತಲೇ ಹೆಜ್ಜೆ ಇಟ್ಟಳು.ಕಮಲಕ್ಕ ಸಮಾಧಾನ ಮಾಡಿಕೋ ಎಂದಾಗ…ಆಕೆಗೆ ದು:ಖ ತಡೆಯಲಾಗಲಿಲ್ಲ.ತನ್ನ ಕೈಯನ್ನು ತಾನೇ ತಿರುಗಿಸಿದಳು.ಕಮಲಕ್ಕ ಇದೇ ಕೈಯಲ್ಲಿ ಎತ್ತಿ ಆಡಿಸಿದ ಜೀವವನ್ನು ಮಣ್ಣು ಮಾಡಿಬಿಟ್ಟೆ ಎಂದು ರೋದಿಸುತ್ತ ಹೊರಳಾಡಿದಳು.ಮತ್ತೆ ಒಂಟಿಯಾಗಿ ಬಿಟ್ಟೆ ಎಂದು ಬಡಬಡಿಸಿದಳು.ಹೊಸ ಜೀವ ಹೋಗಿ ಬಿಟ್ಟಿತು ಎಂದು ಕೂಗಿದಳು.ಸುಮಂಗಲಿ ಆಶ್ರಮ ಅವೆಲ್ಲದ್ದಕ್ಕೆ ಮೂಕ ಸಾಕ್ಷಿಯಾಗಿ ನಿಂತಿತ್ತು.ತನ್ನೆಲ್ಲ ಸಾಮಾನಿನೊಂದಿಗೆ ಆಕೆ ಹೊರಡಲನುವಾದಳು.ಕಮಲಕ್ಕ ಎಲ್ಲಿಗೆ?ಎಂದರು.ಮತ್ತದೆ ನಾಲ್ಕು ಗೋಡೆಗೆ ಎಂದಳು.ಕಮಲಕ್ಕ ತಡೆಯಲಿಲ್ಲ.ಆಕೆ ಹೆಜ್ಜೆಯಿಡುತ್ತಲೇ ಇದ್ದಳು.ದೂರದಲ್ಲಿ ಅಳುವ ಸದ್ದು.ಆಕೆಯ ಕಾಲು ಆ ಕಡೆ ಸರಿಯಿತು.ತೊಟ್ಟಿಯ ಪಕ್ಕದಲ್ಲೊಂದು ಮಗು ಅಳುತ್ತಿತ್ತು.ಹತ್ತಾರು ಜನ ಸುತ್ತುವರಿದು ನಿಂತಿದ್ದರು.ಅವರನ್ನೆಲ್ಲ ಸರಿಸಿ ಹೋದವಳೇ ಆ ಮಗುವನ್ನು ಎದೆಗವಚಿಕೊಂಡಳು.ಜನರೆಲ್ಲ ಮರೆಯಾಗಿದ್ದರು.ಆಕೆ ಮತ್ತೆ ಸುಮಂಗಲೀ ಆಶ್ರಮದತ್ತ ಹೆಜ್ಜೆ ಇಟ್ಟಿದ್ದಳು.ಕಮಲಕ್ಕನಿಗೆ ಆಕೆಯ ಕೈಯಲ್ಲಿದ್ದ ಮಗು ನೋಡಿ ಆಶ್ಚರ್ಯ. ಆಕೆಯಿಂದ ವಿಷಯ ತಿಳಿದ ಕಮಲಕ್ಕ ಸಂತಸಗೊಂಡಿದ್ದರು. ಕಮಲಕ್ಕ ಹೊಸ ಜೀವ ಮತ್ತೆ ಬಂದಿದೆ ಎಂದರು. ಹೊಸಜೀವವೊಂದೇ ಅಲ್ಲಮ್ಮಾ ಹೊಸ ತಾಯಿ ಆಗಿದ್ದೀಯಾ ನೀನು ಎಂದು ಹೇಳಿದರು.ಆಕೆಯ ಕಣ್ಣಲ್ಲಿ ಆನಂದ ಭಾಷ್ಫವಿತ್ತು.ಕಮಲಕ್ಕನಿಗೆ ನಮಸ್ಕರಿಸಿ ಆಕೆ ಹೊರಟಾಗ ಸುಮಂಗಲಿ ಆಶ್ರಮದಲ್ಲಿ ಕಲರವವೊಂದು ಕೇಳುತ್ತಿತ್ತು.ಆಕೆಯ ಮನೆಯ ನಾಲ್ಕು ಗೋಡೆಯ ಮಧ್ಯದಲ್ಲಿ ಸಂತಸದ ಚಿಲುಮೆಯೊಂದು ಚಿಮ್ಮಿತ್ತು.ಆಕೆಗೆ ಅನಾಥ ಭಾವ ಮರೆಯಾಗಿತ್ತು.ಹೊಸ ತಾಯಿಯ ಹೊಂಗಿರಣದ ಹೊನಲು ಹರಿಯುತ್ತಿತ್ತು.ಹೊಸ ಜೀವದ ಮುಖದ ಮೇಲೆ ಅವನ ನೆರಳಿರಲಿಲ್ಲ.ಆಕೆ ಹೊಸ ಜೀವದ ಹೊಚ್ಚ ಹೊಸ ತಾಯಿಯಾಗಿದ್ದಳು.
ಎನ್.ಆರ್.ರೂಪಶ್ರೀ





ಕಥೆಯ ವಸ್ತು ಮತ್ತು ನಿರೂಪಣೆ ಚೆನ್ನಾಗಿದೆ. ಒಂದು ವಾಕ್ಯ ಮುಗಿದು, ಪೂರ್ಣ ವಿರಾಮ ಹಾಕಿದ ನಂತರ ಇನ್ನೊಂದು ವಾಕ್ಯ ಮೊದಲಾಗುವ ಮುನ್ನ ಒಂದು ಅಕ್ಷರದಷ್ಟು ಅಂತರ ಬಿಡಬೇಕು. ಅಷ್ಟೇ ಅಲ್ಲದೆ, ಸಂಭಾಷಣೆಗಳನ್ನು ” ” ಗಳ ಒಳಗೆ ಇರುಕಿಸಬೇಕು.
ನಿಜ. ಪಳಗಿದ ಬರಹಗಾರರು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದಾರೆ.