“ಬೊಪ್ಪ ನನ್ನನ್ನು ಕ್ಷಮಿಸು”

ಪುಸ್ತಕ ಸಂಗಾತಿ

“ಬೊಪ್ಪ ನನ್ನನ್ನು ಕ್ಷಮಿಸು”

ಸಮೃದ್ಧ ಬಾಲ್ಯದ ಅಂತರಂಗ

“ಬೊಪ್ಪ ನನ್ನನ್ನು ಕ್ಷಮಿಸು”
ಲೇಖಕರು: ಉದಯಕುಮಾರ್ ಹಬ್ಬು
ಪ್ರಕಟಣೆ: 2020
ಪುಟಗಳು: 340
ಬೆಲೆ: 300 ರೂ.
ಪ್ರಕಾಶಕರು: ಅಪರಂಜಿ ಪ್ರಕಾಶನ
‘ನಿರುತ್ತರ’ #ಬಿ 155 2ನೇ ಕ್ರಾಸ್, 3ನೇ ಹಂತ, ಕಲ್ಯಾಣ ನಗರ. ಚಿಕ್ಕಮಗಳೂರು- 577102. 9844767859

ನಾವು ಮಕ್ಕಳಾಗಿದ್ದೆವು ಎನ್ನುವುದೇ ಹಿರಿಯರಿಗೆಲ್ಲ ಒಂದು ಖುಷಿ ಕೊಡುವ ಸಂಗತಿ. ಮಕ್ಕಳಾಗಿದ್ದಾಗಿನ ಸಂಗತಿಗಳೆಲ್ಲ ಯಾವು ಯಾವುದೋ ಸಂಗತಿಗಳೊಂದಿಗೆ ಬೆರೆಯುತ್ತ… ಬೆಳೆಯುತ್ತ… ಒಂದಿಷ್ಟು ನೋವು, ಒಂದಿಷ್ಟು ಖುಷಿಯೊಂದಿಗೆ ನಮ್ಮ ಬದುಕಿನ ಉದ್ದಕ್ಕೂ ಒಳ ಆವರಣದಲ್ಲಿ ಆವರಿಸಿಕೊಂಡೇ ಇರುತ್ತದೆ ಎಂದು ನನಗೆ ಅನಿಸುತ್ತದೆ. ಮಕ್ಕಳಿಗೆ ಏನೂ ತಿಳಿಯದು ಅವರು ಮಣ್ಣಿನ ಮುದ್ದೆ ಎಂದೆಲ್ಲಾ ಹೇಳುವವರಿಗೆ ಮಕ್ಕಳಲ್ಲಿ ಏನೆಲ್ಲಾ ತುಂಬಿಕೊಂಡಿರುತ್ತದೆ ಎನ್ನುವುದಕ್ಕೆ ‘ಬೊಪ್ಪ ನನ್ನನ್ನು ಕ್ಷಮಿಸು’ ಪುಸ್ತಕ ದಾಖಲೆಯಾಗುತ್ತದೆ. ಉದಯ ಕುಮಾರ ಹಬ್ಬು ಅವರ ಬಾಲ್ಯದ ಆತ್ಮ ಕಥನವಾಗಿರುವ ಈ ಕೃತಿ ಮಕ್ಕಳು ದುಃಖದಲ್ಲಿ ಮುಳುಗಿ ಜಡತ್ವ ಹೊಂದುವುದಿಲ್ಲ, ಕಷ್ಟಕ್ಕೆ ಅಂಜಿ ಓಡುವುದೂ ಇಲ್ಲ… ಅವರು ಒಂದಿಷ್ಟುಹೊತ್ತು ಅತ್ತು ಮರೆತು ಬಿಡುತ್ತಾರೆ, ನಿದ್ರಿಸುತ್ತಾರೆ, ಆಡುತ್ತಾರೆ. ಅದೇ ಸಂದರ್ಭದಲ್ಲಿ ತನ್ನ ಯಾವುದೋ ಗುರಿಯತ್ತ ಸಾಗಲು ತನ್ನ ಪರಿಸರವನ್ನೇ ಸ್ವಾಭಾವಿಕವಾಗಿ ಪೂರಕವಾಗಿಸಿಕೊಳ್ಳಲು ಅಂತರ್ಯದಿಂದ ಹವಣಿಸುತ್ತಾ ಇರುತ್ತಾರೆ… ಎನ್ನುವುದನ್ನೂ ಈ ಕೃತಿ ಎತ್ತಿ ಹೇಳುತ್ತದೆ.

  ಮಲೆನಾಡಿನ ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯಲ್ಲಿ ಬೆಳೆದ ಹುಡುಗನು ಅನುಭವಿಸಿದ ಬಾಲ್ಯದ ಕಣ್ಣೋಟಗಳು ನಮ್ಮನ್ನು ಐವತ್ತು ಅರವತ್ತು ವರ್ಷಗಳ ಹಿಂದಿನ ಇಲ್ಲಿನ ಹವ್ಯಕ ಸಮಾಜದ ಬದುಕು, ಸಂಪ್ರದಾಯ, ಹಬ್ಬಗಳು ಅವರು ಇತರ ಸಮಾಜದೊಂದಿಗೆ ಇಟ್ಟುಕೊಂಡ ಸಂಬಂಧ, ಅಲ್ಲಿ ಬರುವ ಹಾಲಕ್ಕಿಗಳು, ಸಿದ್ದಿಗಳು, ಮುಸ್ಲೀಮರು, ಶಾಲಾ ಶಿಕ್ಷಕರು ಮುಂತಾದ ಎಲ್ಲರನ್ನೂ ನಮಗೆ ಮುಖಾಮುಖಿಯಾಗಿಸುತ್ತದೆ. ಅಪ್ಪಟ ಗಾಂಧೀವಾದಿಯಾಗಿದ್ದ ಹಬ್ಬು ಶಾನಭೋಗರು ಅವರ ಕುಟುಂಬದೊಂದಿಗೆ ಮಂಚಿಕೇರಿಯಲ್ಲಿ ನೆಲೆಸಿದ್ದು, ಅವರ ಪ್ರಾಮಾಣಿಕ ಬದುಕೇ ಒಂದು ರೀತಿ ಅವರನ್ನು ಅಸಹಾಯಕರನ್ನಾಗಿಸಿದ್ದು ಕಾಣುತ್ತೇವೆ. ಶಾನುಭೋಗರ ಆರುಜನ ಮಕ್ಕಳಲ್ಲಿ ಒಬ್ಬರಾದ ಉದಯಕುಮಾರರು ಸ್ವಗತದಲ್ಲಿ ಹೇಳಿಕೊಂಡಂತೆ ಇಲ್ಲಿನ ಚಿತ್ರವನ್ನು ಚಿತ್ರಿಸಿದ್ದಾರೆ. ಅವರ ಆತ್ಮಕಥೆ ಇದಾಗಿದ್ದರೂ… ಅನೇಕ ಬಾಲಕರ ಸಂಕಟ ಹಾಗೂ ಸಂತಸದ ಸಂಗತಿಳೇ ಇವೆಲ್ಲ ಅಗಿರುವುದರಿಂದ ನಮ್ಮೆಲ್ಲರನ್ನೂ ಕಥೆ ನಡೆಯುವ ಸ್ಥಳಗಳಲ್ಲೆಲ್ಲಾ ಓಡಾಡಿಸುತ್ತ, ಪಾತ್ರವಾಗಿಸುತ್ತ ಆಪ್ತ ಓದನ್ನು ಉಂಟು ಮಾಡುತ್ತದೆ ಎಂದು ಅನಿಸುತ್ತದೆ.

 ಬಡ ಮಕ್ಕಳ ಬಟ್ಟೆ ಹರಿದು ಹೋದಾಗ ಅವರಿಗಾಗಿಯೇ ಬಟ್ಟೆಗಳನ್ನು ಹೊಲಿಸಿಟ್ಟು ಪೆಟ್ಟಿಗೆಯಿಂದ ತೆಗೆದು ಕೊಡುವ ಪ್ರಯಾಗಿ ಬಾಯಿಯಂತಹ ಶಿಕ್ಷಕರು, ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುವ ಪಟೇಲ ರಾಮ ಭಟ್ಟರ ಮನೆಯವರು, ಐದುನೂರು ರೂಪಾಯಿ ಕೊಟ್ಟು ಕಳಿಸುವ ಗೋಪಾಲಕೃಷ್ಣ ಭಟ್ಟರವರಂಥವರದ್ದು ಪ್ರೀತಿಯ ನಡೆಯಾದರೆ… ಹೆರಪ್ಪ, ಅಮ್ಮ, ಪ್ರಯಾಗಿ ಬಾಯಿ, ಅಜ್ಜಿ, ಮಾವ ಮುಂತಾದವರೆಲ್ಲ ಪ್ರೀತಿ ಬೊಗಸೆ ತುಂಬಿ ಕೊಡುತ್ತ ಹುಡುಗನ ಮೇಲೆ ಹೆಚ್ಚು ಆವರಿಸಿರುವುದು ಕಾಣುತ್ತದೆ. ನರಸಿಂಹ ಭಂಡಾರಿಯೊಂದಿಗೆ ಹೂವಿನ ಕೋಲಿನ ಕುಣಿತ, ಸುಗ್ಗಿಯ ಕುಣಿತದ ಆಕರ್ಷಣೆ, ಚವತಿ ಮುಂತಾದ ಹಬ್ಬಗಳು, ಆಲೆಮನೆಯ ಸಂಭ್ರಮ, ಅರ್ಧ ಕಿಲೋಮೀಟರಷ್ಟು ಉದ್ದದ ಮನೆಗಳ ಚಾಳು, ಹಿರಿಯರು ಹೇಳುವ ಕಥೆ, ಪೇಟೆಯಲ್ಲಿ ಸೈಕಲ್ ಹೊಡೆಯಲು ಹೋಗಿ ಹುಸೇನಿ ಅಂಗಡಿ ಹೊಕ್ಕಿದ್ದು, ಜಾತ್ರೆಗೆ ಹೋಗಲು ಬಸ್ ಹತ್ತಿದವ ಪೋಲೀಸ್ ಕಂಡು ಹೆದರಿ ಬಸ್ ಇಳಿದು ಓಡಿದ್ದು ಎಲ್ಲ ಬಾಲ್ಯದ ಕಣ್ಣೋಟದಲ್ಲಿ ಆಪ್ತವಾಗುತ್ತವೆ.

      ಅಪ್ಪ ದನಗಳನ್ನೆಲ್ಲ ಮಾರಿಬಿಟ್ಟಿದ್ದು, ವಿಶಾಲಿ ಉಂಗುರ ಕಳೆದ ಪ್ರಸಂಗ, ಬಟ್ಟೆ ಕೊಳೆ ಮಾಡಿಕೊಂಡ ಬಡ ಮಕ್ಕಳಿಗೆ ಶಿಕ್ಷಕಿ ಪ್ರಯಾಗಿ ಬಾಯಿ ಪೆಟ್ಟಿಗೆಯಿಂದ ಹೊಸ ಬಟ್ಟೆ ತೆಗೆದು ಕೊಡುವುದು, ಅಕ್ಕನ ಮನೆಯ ಪ್ರಸಂಗ, ತಂದೆ ತೀರಿಕೊಂಡಾಗಿನ ಸಂಗತಿಗಳೆಲ್ಲ ನಮ್ಮನ್ನು ಆದೃಗೊಳಿಸಿ… ಹೃದಯಕ್ಕಿಳಿಯುತ್ತದೆ.

ಪುಸ್ತಕವು ಆಗಿನ ಕಾಲದ ಬದುಕಿನ ಚಿತ್ರಣವನ್ನು ನೀಡುತ್ತ ಹಬ್ಬು ಶಾನಭೋಗರ ಮಕ್ಕಳ ಯಶಸ್ಸನ್ನು ದಾಖಲಿಸುತ್ತದೆಯಾದರೂ… ಆ ಯಶಸ್ಸಿನ ಹಾದಿ ಹೇಗೆಲ್ಲಾ ಕಷ್ಟಗಳ ನಡಿಗೆ ಆಗಿತ್ತು ಎನ್ನುವುದನ್ನೂ ತಿಳಿಸುತ್ತದೆ. ಉದಯಕುಮಾರ ಹಬ್ಬು ಅವರು ತಮ್ಮ ಬಾಲ್ಯವನ್ನು ಯಾವ ಪೂರ್ವಾಗ್ರಹವಿಲ್ಲದೆ ನೆನಪಿಸಿಕೊಂಡು ಬರೆದ ರೀತಿ ಅವರ ವ್ಯಕ್ತಿತ್ವವನ್ನೂ ಪರಿಚಯಿಸುತ್ತವೆ. ತಾವು ನೋವುಂಡ ಪ್ರಸಂಗಗಳಾಗಲಿ, ಖುಷಿಕೊಡುವ ಸಂಗತಿಗಳಾಗಲಿ ಅವರು ಪ್ರಾಮಾಣಿಕವಾಗಿ ಇದ್ದಂತೆ ಚಿತ್ರಿಸಿರುವುದು ನಮಗೆ ಕಾಣುತ್ತದೆ. ಹಾಗಾಗಿಯೇ ಅವರು ಚಿತ್ರವನ್ನು ನಮ್ಮ ಮುಂದಿಡುತ್ತಾರೆಯೇ ಹೊರತು ಅತಿಯಾಗಿ ಎತ್ತುವ ಅಥವಾ ದೂರುವ ಯಾವುದೇ ಕ್ರಿಯೆಗೆ ಇಳಿಯದೆಯದೆ ಸಮ ಚಿತ್ತದ ಬರವಣಿಗೆ ಮಾಡಿದ್ದಾರೆ ಅನಿಸುತ್ತದೆ. ತಮ್ಮ ಕೃತಿಯಲ್ಲಿ ಬಂದ ವಿವರಗಳನ್ನು ನೂರಾ ಮೂವತ್ತೆಂಟು ಭಾಗಗಳಲ್ಲಿ ಹೇಳಿದ್ದಾರಾದರೂ ಇದನ್ನು ಒಟ್ಟಾಗಿ ಒಂದು ಕಾದಂಬರಿ ಓದಿದಂತೆಯೂ ಓದಿಕೊಳ್ಳಬಹುದಾಗಿದೆ.

 ಉದಯ ಕುಮಾರ ಹಬ್ಬು ಅವರು ಈ ಆತ್ಮ ಕಥನದ ಮೂಲಕ ಒಂದು ಸಮೃದ್ಧ ಬಾಲ್ಯದ ಅಂತರಂಗವನ್ನು ಆ ಮೂಲಕ ಸಮಾಜದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿತ್ರಣದ ಉಣಿಸನ್ನೂ ನೀಡಿರುವುದು ಓದುಗರಿಗೆ ಪ್ರಿಯವಾಗುವ ಸಂಗತಿ. ಇಂತಹ ಒಂದು ಪ್ರೀತಿಯ ಹಂಚಿಕೆಗಾಗಿ ಹಬ್ಬುರವರನ್ನು ಅಭಿನಂದಿಸುತ್ತ… ತಮ್ಮನ್ನೆಲ್ಲ ಈ ಮಹತ್ವದ ಕೃತಿಯನ್ನು ಓದಿ ನೋಡಿ ಎಂದು ವಿನಂತಿಸುತ್ತೇನೆ.

**********************************************

ತಮ್ಮಣ್ಣ ಬೀಗಾರ.

5 thoughts on ““ಬೊಪ್ಪ ನನ್ನನ್ನು ಕ್ಷಮಿಸು”

  1. ಕೃತಿ ಪರಿಚಯ ಸರಳವಾಗಿ ಸಮರ್ಥವಾಗಿ ಬಂದಿದೆ.ಕೃತಿಯನ್ನ ಓದುವ ಆಸೆ ಮೂಡಿಸಿದೆ.ಬಾಲ್ಯದ ನೆನಪುಗಳ ಮಹತ್ವವು ಮನದಟ್ಟಾಗುತ್ತದೆ.ಹಬ್ಬು ಅವರಿಗೆ,ಬೀಗಾರ ರಿಗೆ ಅಭಿನಂದನೆಗಳು
    ಟಿ.ಎಸ್.ನಾಗರಾಜ ಶೆಟ್ಟಿ,ತಿಪಟೂರು.

  2. ಪುಸ್ತಕದ ಪರಿಚಯ ತುಂಬಾ ಚೆನ್ನಾಗಿದೆ ಸರ್. ಪುಸ್ತಕ ಓದುವ ಆಸೆಯಾಗಿದೆ.

Leave a Reply

Back To Top