ಅಂಕಣ ಬರಹ
ಹೂಕೊಂಡ
ಹೂಕೊಂಡ
ತಮಿಳು ಮೂಲ : ಪೆರುಮಾಳ್ ಮುರುಗನ್
ಅನುವಾದ : ನಲ್ಲತಂಬಿ
ಪ್ರ : ಲಂಕೇಶ್ ಪ್ರಕಾಶನ
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೧೨೫
ಪುಟಗಳು : ೧೪೪
ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçಯು ಶೋಷಣೆಗೊಳಗಾಗುವ ದುರಂತ ಕಥಾವಸ್ತುವನ್ನು ಹೊಂದಿದ ಕಾದಂಬರಿ ಇದು. ಜಾತಿ ಸಮಸ್ಯೆಯೂ ಇದರ ವಿನ್ಯಾಸದ ಇನ್ನೊಂದು ಮುಖ. ಅಲ್ಲದೆ ಸರಳ ಸ್ವಭಾವದ ಮಂದಿ ಎಂದು ಎಲ್ಲರೂ ಭಾವಿಸುವ ಗ್ರಾಮೀಣರಲ್ಲೂ ಎಂಥ ಕ್ರೌರ್ಯವಿರಬಹುದು ಎನ್ನುವ ಕಹಿ ಸತ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.
ಮದುವೆಯಾಗಿ ಕೇವಲ ಎರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಮಾರಾಯಿ ಕಡು ದಾರಿದ್ರö್ಯದ ಕಷ್ಟಗಳನ್ನೆದುರಿಸುತ್ತಲೇ ಮಗ ಕುಮರೇಶನನ್ನು ಬೆಳೆೆಸಿ ದೊಡ್ಡವನನ್ನಾಗಿಸುತ್ತಾಳೆ. ಉದ್ಯೋಗವನ್ನರಸಿ ಪಕ್ಕದ ತೋಲೂರಿಗೆ ಹೋಗುವ ಕುಮರೇಶ ಅಲ್ಲಿ ಸೋಡಾ ಉತ್ಪಾದನೆಯ ಕೆಲಸದಲ್ಲಿ ತೊಡಗುತ್ತಾನೆ. ಆ ಊರಿನಲ್ಲಿ ಪರಿಚಯವಾದ ಸರೋಜಳನ್ನು ಪ್ರೀತಿಸಿ ತನ್ನ ತಾಯಿಗಾಗಲಿ, ಅವಳ ಅಪ್ಪ-ಅಣ್ಣನಿಗಾಗಲಿ ತಿಳಿಸದೆ ದೇವಸ್ಥಾನದಲ್ಲಿ ಸರಳ ವಿವಾಹವಾಗಿ ಅವಳನ್ನು ಊರಿಗೆ ಕರೆತರುತ್ತಾನೆ. ಆದರೆ ಅಲ್ಲಿ ಕುಮರೇಶನ ತಾಯಿ ಸೊಸೆಯನ್ನು ಸ್ವೀಕರಿಸಲು ಸುತರಾಂ ಒಪ್ಪುವುದಿಲ್ಲ. ಹುಡುಗಿ ಸುಂದರಿಯಾದರೂ ಯಾವ ಜಾತಿಯವಳೋ ಎಂಬುದು ಅವಳ ಆತಂಕ. ಆದ್ದರಿಂದ ದಿನವಿಡೀ ಸೊಸೆಯನ್ನು ಬಾಯಿಗೆ ಬಂದAತೆ ಬೈಯುತ್ತ ಮನ ನೋಯಿಸುತ್ತ ಇರುತ್ತಾಳೆ. ಸರೋಜಳಿಗೆ ಹೊಸ ವಾತಾವರಣ ಭಯಾನಕವೆನ್ನಿಸುತ್ತದೆ. ಊರಿನ ಹೆಂಗಸರೆಲ್ಲರೂ ಆಗಾಗ ಬಂದು ಅವಳ ಕುಲ-ಗೋತ್ರಗಳನ್ನು ವಿಚಾರಿಸುತ್ತ, ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಇರುತ್ತಾರೆ. ತೋಲೂರಿನ ಪಟ್ಟಣದ ಜೀವನಕ್ಕೆ ಒಗ್ಗಿಕೊಂಡಿದ್ದ ಸರೋಜಳಿಗೆ ಹಳ್ಳಿಯ ಬಡ ಮನೆಯ ಸರಳ ಜೀವನಕ್ಕೆ ಹೊಂದಿಕೊಳ್ಳುವುದು ಮತ್ತು ಅವರೆಲ್ಲರ ನಿಂದನೆಗಳನ್ನು ಸಹಿಸಿಕೊಳ್ಳುವ ನರಕ ಯಾತ£ಗಳುÉ ಅಸಹನೀಯವೆನ್ನಿಸುತ್ತದೆ. ಅವಳು ಕುಮರೇಶನನ್ನು ವಶೀಕರಿಸಿಕೊಂಡ ಮಾಟಗಾತಿಯೆಂದು ಎಲ್ಲರೂ ವ್ಯಂಗ್ಯ ಮಾತನಾಡಿದಾಗ ಅಲ್ಲಿಂದ ಎಲ್ಲಾದರೂ ಓಡಿ ಹೋಗಬೇಕು ಅನ್ನಿಸುತ್ತದೆ.
ಒಮ್ಮೆ ಕುಮರೇಶ್ ಹೊಸದಾಗಿ ಸೋಡಾ ಫ್ಯಾಕ್ಟರಿ ಆರಂಭಿಸುವ ಬಗ್ಗೆ ಮಾತನಾಡಲು ಪಕ್ಕದ ಊರಿಗೆ ಹೋಗಿರುತ್ತಾನೆ. ಅವನು ಆ ರಾತ್ರಿ ಮನೆಗೆ ಬರುವುದಿಲ್ಲವೆಂದು ತಿಳಿದ ಅವನ ತಾಯಿ ಮಾರಾಯಿ ಊರಿನ ಕೆಲವು ಮಂದಿಯನ್ನು ಕೂಡಿಕೊಂಡು ಸರೋಜಳನ್ನು ಕೊಲ್ಲುವ ಯೋಜನೆ ಹಾಕುತ್ತಾಳೆ. ಆದರೆ ಆ ಸಂಚನ್ನು ಅಡಗಿ ಕೇಳಿದ ಸರೋಜ ಅಲ್ಲಿಂದೆದ್ದು ಮುಳ್ಳು ಪೊದೆಗಳ ಹಿಂದೆ ಅಡಗಲು ಹೋಗುತ್ತಾಳೆ. ಅಪಾಯಕಾರಿಯೂ ಭಯಾನಕವೂ ಆದ ಆ ಜಾಗದಲ್ಲಿ ಒಳಗೊಳಗೆ ಜಾರುವ ಸರೋಜಾಳ ಮೈಕೈಗಳಿಗೆ ಗಂಭೀರ ಗಾಯಗಳಾಗುತ್ತವೆ. ಕೊಲೆ ಪಾತಕಿಗಳು ಅವಳನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಗೆಳೆದು ಕೊಲ್ಲಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ಫಲಕಾರಿಯಾಗುವುದಿಲ್ಲ. ಸರೋಜಾ ಭಯದಿಂದ ತತ್ತರಿಸುತ್ತಿದ್ದಂತೆ ಕಿವಿಯ ಮೇಲೆ ಬಿದ್ದ ಕುಮರೇಶನ ಸೈಕಲ್ ಬೆಲ್ಲಿನ ಶಬ್ದ ಅವಳಿಗೆ ಮರುಜೀವ ಕೊಡುತ್ತದೆ. ಹೆಣ್ಣನ್ನು ವಿನಾಕಾರಣ ಪೀಡಿಸುವ ನಮ್ಮ ಸಮಾಜ ಎಂದು ಬದಲಾಗುತ್ತದೋ ಎಂಬ ಆತಂಕವನ್ನು ಈ ಕಾದಂಬರಿ ನಮ್ಮಲ್ಲಿ ಹುಟ್ಟಿಸುತ್ತದೆ. ನಲ್ಲತಂಬಿಯವರ ಅನುವಾದ ಆಡುಭಾಷೆಯ ಬಳಕೆಯಿಂದ ಆಪ್ತವಾಗುತ್ತದೆ.
*************************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ