ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

ಪ್ರವಾಸ ಕಥನ

ಸಿದ್ಧಿಸಿತೆನಗೆ  -ಸಿದ್ಧರ ಬೆಟ್ಟ

ಯಾನ

ಚಂದ್ರಮತಿ ಪುರುಷೋತ್ತಮ್ ಭಟ್






    ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ.



ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. ತುಂಬಾ ದಿನದಿಂದ ಅಂದು ಕೊಂಡ ಈ ಬೆಟ್ಟ ನೋಡುವ ಭಾಗ್ಯಬಂದೊದಗಿಯೇ ಬಿಟ್ಟಿತು.


ಸೂರ್ಯೋದಯಕ್ಕೂ ಮುಂಚೆ ಸುಮಾರು 4.45 ರ ಸಮಯಕ್ಕೆ ಶುರುವಾಯ್ತು ನಮ್ಮ ಪಯಣ. ಜನಸಂದಣಿ ಇರದ ಈ ಸಮಯದಲ್ಲಿ ನಮ್ಮ ಬೆಂದಕಾಳೂ ಕೂಡ ಸುಂದರ ಹಾಗೂ ಸುಖಕರವೆನಿಸುವುದು.



ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಸಿದ್ದರ ಬೆಟ್ಟಕ್ಕೆ ಐದು ಮಂದಿಯನ್ನು ಹೊತ್ತು ಡಸ್ಟರ್ ಶರವೇಗದಲ್ಲಿ ನಗರವನ್ನು ದಾಟಿ ಇನ್ನೇನು ಸಿದ್ಧರ ಬೆಟ್ಟದ ದಾರಿ ತಲುಪಿದ್ದಂತೆಯೆ ನಮ್ಮನ್ನು ಸೆಳೆದದ್ದು ಆ ಊರಿನ ರುಚಿಕರವಾದ ತಟ್ಟೆ ಇಡ್ಲಿ .  ಅಲ್ಲಿಂದ 8 ರಿಂದ 10 ಕಿ.ಮೀ ದೂರದಲ್ಲಿ ಈ ಬೆಟ್ಟ . ತಲುಪಿದಾಗ ಸುಮಾರು ಮುಂಜಾನೆ 6.30 ಸಮಯ. ಸದ್ದು ಗದ್ದಲ ಇಲ್ಲದ ನಿರ್ಜನ ಪ್ರಶಾಂತ ತಾಣ. ಸಿಲಿಕಾನ್ ಸಿಟಿಯಿಂದ ಬರುವ ಯಾತ್ರಿಕರಿಗೆ ಒಮ್ಮೆ ಯಾದರೂ ಹಾಯ್ ಎನಿಸದೇ ಇರದು.ಈ ಬೆಟ್ಟವು ಸುಮಾರು 6 ಕಿಲೋಮೀಟರ್ ಚಾರಣ. 1700ಅಡಿ ಎತ್ತರದಲ್ಲಿರುವ ಈ ಬೆಟ್ಟವು ಔಷಧೀಯ ಸಸ್ಯಗಳ ಬೀಡು. ೨೦೦೦ ಕ್ಕೂ ಹೆಚ್ಚು ಸಸ್ಯಗಳಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕೆ.ಫ್.ಡಿ ಗೆ ಧನ್ಯವಾದ ಹೇಳಲೇ ಬೇಕು


  ಶುರುವಾಯ್ತು ಸೆಲ್ಫಿಯಿಂದಲೇ ನಮ್ಮ ಉತ್ಸಾಹದ ಆರೋಹಣ ಚಾರಣ. ಹಸಿರಿನ ಔಷಧೀಯ ಮರಗಿಡಗಳ ನಡುವೆ ಹಕ್ಕಿಗಳ ಕಲರವ ಹಾಗೂ ತುಂತುರು ಮಳೆಯಲ್ಲಿ ಹತ್ತಿದ ಕ್ಷಣ ಅದ್ಬುತ ! ನೂರಾರು ಮೆಟ್ಟಿಲುಗಳ ನಂತರ ಕಡಿದಾದ ಬೆಟ್ಟದಲ್ಲಿ ಮುಂದಕ್ಕೆ ಹತ್ತಲು ಗಟ್ಟಿ ಕಲ್ಲುಗಳೇ ನಮಗೆ ಆಸರೆಯಾದವು. ಅಂತು ಇಂತೂ ಅಸಾಧ್ಯ ಎನಿಸಿದರೂ ಅಲ್ಲಲ್ಲಿ ತಂಗುದಾಣ ನಮ್ಮನ್ನು ಪ್ರೋತ್ಸಾಹಿಸಿತು. ಕ್ಷಣಕಾಲ ನಿಬ್ಬೆರಗಾದೆವು ! ನೋಡಿದರೆ ದೊಡ್ಡ ಕಲ್ಲು ಬಂಡೆಯನ್ನೇ ಕೊರೆದು ಮಾಡಿದ ಕಿರಿದಾದ ಮೆಟ್ಟಿಲುಗಳು. ಜಿನುಜಿನುಗುವ ಮಳೆಯಲ್ಲಿ ಹತ್ತುತ್ತಾ ಕಾಲು ಜಾರಿದರೆ ಎನ್ನುವ ಆತಂಕದಲ್ಲಿ ಮುಂದೆ ಮುಂದೆ ಹೆಜ್ಜೆ ಇಟ್ಟೆವು. ಹತ್ತಿದಾಕ್ಷಣ ಜಯಶಾಲಿಯದೆವಾ ? ಅನ್ನೋ ಅನಿಸಿಕೆಯ ಜೊತೆ ಜೊತೆಗೆಮಂಜು ಮುಸುಕಿದ ತುದಿಬೆಟ್ಟವು ‘  ಮಾನವ ನೀನೆಷ್ಟು ಅಲ್ಪ ! ಎಂದು ನಗುವುದೇನೋ ಎನ್ನಿಸಿತು.  ಸೌಂದರ್ಯ , ಪ್ರಶಾಂತತೆ  ನಮ್ಮನ್ನು ಮೂಖವಿಸ್ಮಿತಗೊಳಿಸಿತು. ಅಚ್ಚರಿ ! ಆ ತುತ್ತತುದಿಯಲ್ಲಿ ಕಲ್ಲು ಬಂಡೆಯಲ್ಲೂ ಸದಾಕಾಲ ಎಳಿನೀರಿನಂತಹ ತಣ್ಣೀರು ಕಾಣಸಿಗುವುದು.  ಸಿದ್ಧರು ಸಿದ್ಧಿ ಫಡೆದಂತಹ ಸ್ಥಳ ಆಗಿರೋದರಿಂದ ಆಸ್ತಿಕರಿಗೆ ಹೇಳಿಸಿದ ಸ್ಥಳ ಕೂಡ . ಅಲ್ಲಿ ಈಗಲೂ ಬಂದವರೆಲ್ಲರಿಗೂ ಆಶೀರ್ವದಿಸಲು ಒಬ್ಬರು ಸಿದ್ಧರು ದೊಡ್ಡ ಕಲ್ಲು ಬಂಡೆಯ ಒಳಗಡೆ ತಪಸ್ಸು ಮಾಡುತ್ತಾ ಕುಳಿತಿರುತ್ತಾರೆ. ಆಶೀರ್ವಾದ ಪಡೆದ ನಾವು ಕೊಂಚ ಹೊತ್ತು ಅಲ್ಲೇ ಧ್ಯಾನ ಮಗ್ನರಾದೆವು. ಇನ್ನೂ ಬೆಟ್ಟದ ತುದಿ ನೋಡುವ ಬಯಕೆ ಹೊತ್ತು ಬಂದ ನಾವು ತುಸು ವಿಶ್ರಮಿಸಿ ಮುಂದಿನ ಹೆಜ್ಜೆ ಬೆಳೆಸಿದೆವು.

ಅಲ್ಲಿಂದ ಮುಂದೆ ದೊಡ್ಡ ಬಂಡೆಯೊಳಗಿಂದ ಹತ್ತುತ್ತಾ ಹತ್ತುತ್ತಾ ಹೊರಬಂದು ನೋಡಿದರೆ ಅಲ್ಲಿರುವ  ಮನಮೋಹಕ ಪ್ರಕೃತಿಯ ವೈಚಿತ್ರ್ಯ ! ಮಂಜಿನ ಸಹಿತ ಬೀಸುತ್ತಿರುವ ಶೀತಗಾಳಿಯು ಹಾಗೂ ಮುಂಜಾನೆಯ ಹೊಂಗಿರಣದಿಂದ ಫಳ ಫಳಿಸುತ್ತಿರುವ  ಆ ಬೆಟ್ಟವು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ಹನ್ನೆರೆಡು ಗಂಟೆಯವರೆಗೂ ಹಿಮಾವೃತ ಬೆಟ್ಟವನ್ನು ನೋಡಿದನುಭವ ಅವರ್ಣನೀಯ ! ನಮ್ಮ ಕರ್ನಾಟಕ ಆಹಾ ಎಷ್ಟು ಅದ್ಭುತ ! ಎಂದೆನಿಸಿತು. ವಾರೆ ವಾವ್ ! ಈ ಸಿದ್ಧರ ಬೆಟ್ಟ ನೋಡುವಾವಕಾಶ ಎಲ್ಲರಿಗೂ ಸಿದ್ಧಿಸಲಿ ಸಿದ್ಧರ ಆಶೀರ್ವಾದ ಪಡೆಯಲಿ . ಎನ್ನುತ್ತಾ
ಮತ್ತೊಂದಿಷ್ಟು ಸೆಲ್ಫಿ ಒಂದಿಷ್ಟು ಮಸ್ತಿ ಮಾಡುತ್ತಾ ಬೆಟ್ಟದಿಂದ ನಿಧಾನವಾಗಿ ಅವರೋಹಣ ಮಾಡಿದೆವು.



ಏರಿಳಿತಗಳ ರೋಚಕ ಅನುಭವವನ್ನು ಮೆಲುಕು ಹಾಕುತ್ತಾ ನಗರಿಗೆ  ಹಿಂತಿರುಗಿ ಪ್ರಯಾಣ ಬೆಳೆಸಿದೆವು.

———


ಮಾರ್ಗ :
ಬೆಂಗಳೂರು – ತುಮಕೂರು -ತೋವಿನಕೆರೆ – ತುಂಬಾಡಿ – ಸಿದ್ಧರಬೆಟ್ಟ
ಸರಿಯಾದ ಸಮಯ : ಜೂನ್-ಜುಲೈ-ಆಗಸ್ಟ್
ಚಾರಣದ ಸಮಯ : ಒಂದು ಗಂಟೆ
ಸಾಧ್ಯ : ಚಾರಣಾಸಕ್ತರು ಹಾಗೂ ಪ್ರಕೃತಿ ಪ್ರಿಯರಿಗೆ ಮಾತ್ರ

ನಿಷೇಧ : ಪ್ಲಾಸ್ಟಿಕ್
ಸಲಹೆ : ಒಂಟಿ  ಪಯಣ ಬೇಡ. ಗುಂಪಿನ ಜೊತೆ ಯೋಗ್ಯ
          “ಪ್ರಕೃತಿಯನ್ನು ಉಳಿಸಿ ಪ್ರೀತಿಸಿ ಆದರಿಸಿ ಆನಂದಿಸಿ “

*********************************


3 thoughts on “ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

  1. ನಿಮ್ಮ ಸಿದ್ದರ ಬೆಟ್ಟದ ವರ್ಣನೆ ರಮಣೀಯ. ನಾನು ಈ ಬೆಟ್ಟಕ್ಕೆ ಹೋಗಿಬಂದರೆ ಅದರ credit ನಿಮಗೆ!!

Leave a Reply

Back To Top