ಅಂಕಣ ಬರಹ
ಮೆಹಬೂಬ್ ಮುಲ್ತಾನಿ
ಪರಿಚಯ:
ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕನದಿಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ
ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆ
ನಾಗರಾಜ ಹರಪನಹಳ್ಳಿ
” ನನ್ನ ಕವಿತೆಯ ವಸ್ತು ಪ್ರೀತಿ ಮತ್ತು ಧರ್ಮ “
“ ದೇವರು -ಧರ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ “
ಕವಿತೆಗಳನ್ನು ಯಾಕೆ ಬರೆಯುತ್ತೀರಿ ?
ಕವಿತೆ ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಹೇಳಲಾಗದು. ಮನಸ್ಸಿನ ಬೇಗುದಿ ಹೊರಹಾಕಲು ನಾನು ಕವಿತೆಯ ಮೊರೆ ಹೋಗುತ್ತೇನೆ.
ಕವಿತೆ ಹುಟ್ಟುವ ಕ್ಷಣ ಯಾವುದು ?
ನಿರ್ದಿಷ್ಟ ಸಮಯ ಅಂತೆನೂ ಇಲ್ಲ .ಯಾವುದೋ ಒಂದು ಕ್ಷಣದಲ್ಲಿ ಹೊಳೆದ ಸಾಲುಗಳು ಆಗಾಗ ಕವಿತೆಯ ರೂಪ ತಾಳುತ್ತವೆ
ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?
ಪ್ರೀತಿ ಮತ್ತು ಧರ್ಮ
ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?
ಹಾ..ಬಾಲ್ಯಕ್ಕೆ ಅಷ್ಟು ಅವಕಾಶವಿಲ್ಲ , ಹರೆಯ ಕವಿತೆಗಳಲ್ಲಿ ಆವರಿಸಿದೆ.
ಪ್ರಸ್ತುತ ರಾಜಕೀಯ
ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ತಲ್ಲಣದ ದಿನಗಳಿವು. ಕಾಯಬೇಕಾದವರೆ ಕೊಲ್ಲುವವರಾಗಿರುವ ಸನ್ನಿವೇಶ ಇದೆ. ಸಮಚಿತ್ತದಿಂದ ಇರುವುದು ಈ ಕ್ಷಣದ ಅವಶ್ಯಕತೆ.
ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ಇವೆರಡರಲ್ಲೂ ನನಗೆ ಅಷ್ಟಾಗಿ ನಂಬಿಕೆಯಿಲ್ಲ.
ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?
ಸಾಂಸ್ಕೃತಿಕ ವಾತಾವರಣ ಹದೆಗೆಟ್ಟಿದೆ. ಇಸಂಗಳು ಸಾಂಸ್ಕೃತಿಕ ಲೋಕವನ್ನು ಆಳುತ್ತಿವೆ.
ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
ಇದು ಸಾಹಿತ್ಯದ ಎಲ್ಲರಿಗೂ ತಿಳಿದಿರು ವಿಷಯ. ಬಾಲ ಬಡಿಯುವವರು ಮುಂದಿದ್ದಾರೆ.
ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?
ಅತೃಪ್ತಿ ಇದೆ ಅಷ್ಟೇ..
ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಬೇರೆ ಬೇರೆ ದೇಶದ,ಭಾಷೆಯ ಭಿನ್ನ ಸಂವೇದನೆಯ ಸಾಹಿತ್ಯಿಕ ಕೃತಿಗಳನ್ನು ಅನುವಾದಿಸುವುದು..
ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?
ಕನ್ನಡದಲ್ಲಿ ಎಚ್ ಎಸ್ ಶಿವಪ್ರಕಾಶ ನನ್ನಿಷ್ಟದ ಕವಿ.
ಆಂಗ್ಲಭಾಷೆಯಲ್ಲಿ ರೈನರ್ ಮಾರಿಯಾ ರಿಲ್ಕ ನನ್ನ ಪ್ರೀತಿಯ ಕವಿ
.
ಈಚೆಗೆ ಓದಿದ ಕೃತಿಗಳಾವವು?
ಕೆಂಪು ಮುಡಿಯ ಹೆಣ್ಣು, ಪದ ಕುಸಿಯೆ ನೆಲವಿಲ್ಲ, ಬದುಕು ಮಾಯೆಯ ಆಟ, ಚಿಲಿ ಕೆ ಜಂಗಲೊಸೆ( ಹಿಂದಿ), ಖುಷಿಯೊಂಕೆ ಗುಪ್ತಚರ ( ಹಿಂದಿ),
ನಿಮಗೆ ಇಷ್ಟವಾದ ಕೆಲಸ ಯಾವುದು?
ಶಿಕ್ಷಕ ವೃತ್ತಿ
ನಿಮಗೆ ಇಷ್ಟವಾದ ಸ್ಥಳ ಯಾವುದು ?
ನಮ್ಮ ಮನೆ ಮತ್ತು ಶಾಲೆ
ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು?
ಮಿಲನ( ಕನ್ನಡ), ರಬ್ ನೇ ಬನಾ ದಿ ಜೋಡಿ( ಹಿಂದಿ)
ನೀವು ಮರೆಯಲಾರದ ಘಟನೆ ಯಾವುದು?
ಒಮ್ಮೆ ನಮ್ಮ ಮೇಲೆ ಹೆಜ್ಜೆನು ದಾಳಿ ಮಾಡಿದವು. ಇನ್ನೆನೂ ಸಾಯುತ್ತೇವೆ ಎನ್ನುವಾಗ ಭಾಷೆ,ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ವ್ಯಕ್ತಿ ಯೊಬ್ಬ ನಮಗೆ ಸಹಾಯ ಮಾಡಿದ. ಅವತ್ತು ನನಗೆ ಪ್ರೀತಿ ಮತ್ತು ಮಾನವೀಯತೆಯ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವು ಮೂಡಿತು. ಇದು ನನ್ನ ಜೀವನದ ಮರೆಯಲಾರದ ಘಟನೆ.
**************************************************
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಭಿನಂದನೆಗಳು ಮೆಹಬೂಬ್ ಮುಲ್ತಾನಿ ಸರ್.
ಧನ್ಯವಾದಗಳು ‘ಸಂಗಾತಿ’.
Congratulations