ಅಂಕಣ ಬರಹ

ಹೊಸ ದನಿ ಹೊಸ ಬನಿ – ೧೫.

ದೀರ್ಘ ಶೀರ್ಷಿಕೆಗಳ ಭಾರದಲ್ಲೂ

ಸರಳ ನಡಿಗೆಯ ಮಂಜುಳ. ಡಿ  ಕವಿತೆಗಳು

ಮಂಜುಳ ಡಿ ಈಗಾಗಲೇ ವಿಶ್ವವಾಣಿ ಪತ್ರಿಕೆಯ ಅಂಕಣ ಬರಹಗಾರರಾಗಿ ಕವಯತ್ರಿಯಾಗಿ ಖ್ಯಾತರಾದವರು. ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನವರು. ಅವರ ಫೇಸ್ಬುಕ್ ಬರಹಗಳಲ್ಲಿ ಗದ್ಯ ಪದ್ಯಗಳ ಮಿಶ್ರಣವನ್ನು ಕಾಣಬಹುದು. “ಆಸೆಯ ಕಂದೀಲು” ಕವನ ಸಂಕಲನಕ್ಕೆ ಕಾವ್ಯ ವ್ಯಾಮೋಹಿ ವಾಸುದೇವ ನಾಡಿಗರು ಮುನ್ನುಡಿ ಬರೆದಿರುವುದರಿಂದ ಸಂಕಲನದ ಗುಣ ನಿಷ್ಕರ್ಷೆ ಸುಲಭದ್ದೇ ಆಗಿದೆ.

ಈ ಸಂಕಲನ ಕುರಿತು ಈಗಾಗಲೇ ಎನ್.ಡಿ.ರಾಮಸ್ವಾಮಿ ಮುಖಪುಸ್ತಕದಲ್ಲಿ ಬರೆದಿದ್ದಾರೆ. ಅವರು ಹೇಳಿದ ಹಾಗೆ ಈ ಕವಿ ಉತ್ತಮ ಕವನಗಳನ್ನು ಉತ್ಸಾಹದಿಂದ ರಚಿಸಿದ್ದಾರೆ.ಕಾವ್ಯದ ಕಸುಬುದಾರಿಕೆಯನ್ನು ಇಂಗ್ಲೀಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಭಾಷೆ,ಭಾವ,ಬಂಧಗಳು ಕವನಗಳಲ್ಲಿ  ಉತ್ತಮವಾಗಿ ಮೂಡಿದೆ. ಕಾವ್ಯ ಶಿಲ್ಪದ ಕಸುಬುದಾರಿಕೆ ದಕ್ಕಿದೆ. ಅರ್ಥ ಪೂರ್ಣ ಕವನಗಳಲ್ಲಿ ಭಾವದ ಹೊಳೆ ಹರಿಸಿದ್ದಾರೆ. ಹೊಸತೇನೋ ಒಂದನ್ನು ಆತ್ಮದ ಬಾವಿಯಿಂದ ಕಾರಂಜಿಯಾಗಿಸಿದ್ದಾರೆ. ಕರುಳಿನ ಮಾತುಗಳಿಗೂ ದನಿಯಾಗಿದ್ದಾರೆ. ಅವರ ಚಿತ್ತ ಭಿತ್ತಿಯಲಿ ಸಾವಿರಾರು ಚಿಂತನೆಗಳಿವೆ. ಅವುಗಳಿಗೆ ನಿಜವಾದ ಕೈಮರ ಪೂರ್ವ ಸೂರಿಗಳ ಓದು. (ಇದು ಎನ್ಡಿಆರ್ ಮಾತು)

ಇದೇ ಸಂಕಲನ ಕುರಿತು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಹೆಗಡೆ ಹಡಿನಬಾಳ ತುಂಬು ಭರವಸೆಯ ಮಾತನ್ನು ಹೇಳಿದ್ದಾರೆ. “‘ನನ್ನನ್ನು ನೋಯಿಸಿದ್ದಾದರೂ  ಏನು” ಎನ್ನುತ್ತಲೇ ಮನಸ್ಸನ್ನು ಕದ್ದ ವ್ಯಕ್ತಿಯ ಕುರಿತು  

‘ಆಸೆಯ ಕಂದೀಲು’ ಕವನದಲ್ಲಿ  ಕಟ್ಟಿಕೊಂಡ ಆಸೆಗಳು ಕನಸುಗಳನ್ನು ತೆರೆದಿಡುವ  ರೀತಿ ಅದ್ಭುತವಾಗಿದೆ. ಊಟ  ಮಾಡುವಾಗ , ಹಾಸಿಗೆ ಬಿಟ್ಟು ಏಳುವಾಗ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತ  ಇನ್ನು ಎಲ್ಲೋ ಯಾರಿಗೋ ಏನೋ ತೊಂದರೆಯಾದಾಗ ತನ್ನ ಇನಿಯನಿಗೇನಾಯಿತೋ ಪರಿತಪಿಸುವ ರೀತಿ, ಒಲಿದ  ಹೃದಯದ ಸಲುವಾಗಿ ಮಿಡಿತವನ್ನು ಧ್ವನಿಸುವ ಸಾಲುಗಳು ಅದ್ಭುತ. ಪ್ರೀತಿಯ ತೀವ್ರತೆ ಹಂಬಲ ಕಳವಳ ಕನವರಿಕೆಯೇ ಮನದಾಳದ ನೋವಿಗೆ ಕಾರಣ ಎನ್ನುವುದರ ಮೂಲಕ ಪ್ರೀತಿಯ ಆಳ ಹರಹನ್ನು ಅತ್ಯಂತ ಸುಂದರವಾಗಿ  ಚಿತ್ರಿಸಿದ್ದಾರೆ. ಒಮ್ಮೆ ಮನಸ್ಸನ್ನು ಕೊಟ್ಟ ನಂತರ ಅವರ ನೆನಪಿನ ತೀವ್ರತೆ ಅಗಾಧ ಎನ್ನುವ ಸತ್ಯವನ್ನು ‘ತೀವ್ರತೆ ಎಷ್ಟಿತ್ತೆಂದರೆ’ ಕವನದ ಮೂಲಕ ತೆರೆದಿಟ್ಟಿದ್ದಾರೆ. ಇನಿಯನ ಸನಿಹ ತರುವ ಖುಷಿಯನ್ನು ಪ್ರಕೃತಿಯ ಆಗುಹೋಗುಗಳೊಂದಿಗೆ  ಸಮೀಕರಿಸಿ ‘ ಸುಮ್ಮನೆ ನಿನ್ನೊಂದು ಇರುವಿಕೆ ‘ ಕವನದ ಮೂಲಕ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಅಣಿಯಾಗದಿದ್ದ  ಗಳಿಗೆಯಲ್ಲಿ ಮಾಧುರ್ಯವನ್ನು ಪಸರಿಸಿ ಇದೀಗ ನಿನ್ನದೇ ಆದ ನೋವಿನ ಪ್ರಪಂಚದಲ್ಲಿ ನೀನಿರುವುದು ಸರಿಯೇ?’,   ‘ನಿರ್ಲಿಪ್ತತೆಯ ತೊಡೆದು ಹಾಕಿ ನೋವಿನಲ್ಲೂ ಸಪ್ತ ಸ್ವರ ಹೊಮ್ಮಲು ಸಾಧ್ಯವಿಲ್ಲವೇನು?’ ಎಂದು ‘ ಜಗತ್ತಿನ ನೋವೆಲ್ಲಾ ಒಂದಾದರೆ ನಿನ್ನ ನೋವೇ ಒಂದು’ ಕವನದ ಮೂಲಕ ಮೆಚ್ಚಿದ ಇನಿಯನನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವ ಪರಿ ಸೊಗಸಾಗಿ ಮೂಡಿಬಂದಿದೆ

.

ಮನೆಯನ್ನು  ಸುಂದರಗೊಳಿಸಿ ಗೋಡೆಗಳನ್ನು ಅದೆಷ್ಟೇ ಅಲಂಕಾರ ಗೊಳಿಸಲಿ ಯಾರಿಗೂ ಏನನ್ನೂ ಕೊಡದೆ ಕೃಪಣರಾಗಿ ತನ್ನವರಿಗಾಗಿ ಅದೆಷ್ಟೇ ಕೂಡಿ ಇಟ್ಟಿರಲಿ ಪ್ರಕೃತಿ ಮುಣಿಯಲು ಇವೆಲ್ಲವೂ ನೀರುಪಾಲಾಗಲು ಎಷ್ಟು ಹೊತ್ತು… ಯಾವ ತುಂಡು ಭೂಮಿಗಾಗಿ ಕಚ್ಚಾಡುತ್ತಿರುತ್ತೇವೆಯೋ ಅವು ಗುಡ್ಡ ಕುಸಿತದೊಂದಿಗೆ  ಮಣ್ಣುಗೂಡಲು ಎಷ್ಟು ಹೊತ್ತು ಎನ್ನುವುದನ್ನು ‘ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ’  ಎನ್ನುವ ಕವನದ ಮೂಲಕ ಚೆನ್ನಾಗಿ ಚಿತ್ರಿಸಿ ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು ಅರ್ಥವಿಲ್ಲದ ಹಗೆತನ ಜಿಪುಣತನ ಸರಿಯಲ್ಲ ಎನ್ನುವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

‘ನಿನ್ನನ್ನು ನೋಡಿದ ಮೇಲೆ ಈಗ ಇನ್ಯಾರನ್ನುನ್ನು ನೋಡಲಿ’, ‘ನಿನ್ನೊಳಗೆ ಕರಗಿ ನಿನ್ನದೇ ಬಣ್ಣ ತಳೆದದ್ದು ಅರಿವಿಗೇ ಬರಲಿಲ್ಲ’ ಸಾಲುಗಳು ಪ್ರೀತಿಯ ಪರಾಕಾಷ್ಟತೆಯನ್ನು  ಭಾವನೆಯ ತೀವ್ರತೆಯನ್ನು ಪ್ರತಿಬಿಂಬಿಸಿದರೆ, ವಿರಹಿ, ರಿಪೇರಿ, ಕಾವು ಅಗಲಿಕೆ ಧೋರಣೆ, ಬಿಂಬ.. ಪ್ರೀತಿಯಿಂದ ಘಾಸಿಗೊಂಡ ಮನದ ಅಂತರಾಳದ ಧ್ವನಿಯಂತೆ ಇವೆ.

“ಆಸೆಯ ಕಂದೀಲು” ಸಂಕಲನ ಕುರಿತ ಈ ಇಬ್ಬರ ಮಾತುಗಳನ್ನು ನಾನು ಸಂಕಲನ ನೋಡಿರದ ಕಾರಣ ಆ ಸಂಕಲನ ಕುರಿತಂತೆ ಮಹತ್ವದ್ದೆನಿಸಿದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಈ ಕವಿಯು ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ಕೆಲವು ಕವಿತೆಗಳನ್ನು ಪರಿಚಯಿಸುತ್ತಿದ್ದೇನೆ.

ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು

ಎನ್ನುವ ನಿಲುವು ಹಳೆಯದೇ ಆದರೂ ಹರಿಯುತ್ತಿರುವ ನೀರು ಹೊಸದೇ ಆಗಿರುತ್ತದೆ ಎನ್ನುವ ಆಲೋಚನೆಯನ್ನು ಸೊಗಸಾಗಿ ಹೇಳುವ ಈ ಕವಿ  “ಭೌತಿಕತೆಯ ಗೀಳು ಮಾನಸಿಕ ಹರಿವು‌‌…” ಎನ್ನುವ ದೀರ್ಘ ಶೀರ್ಷಿಕೆಯ ಗಪದ್ಯದಲ್ಲಿ ಹೇಳುತ್ತಾರೆ. “ಕೆಂಪು ಡಬ್ಬ ಮತ್ತು ಕಾಗದದ ದೋಣಿ…” ಕವಿತೆಯ ಶೀರ್ಷಿಕೆಯೇ ಕುತೂಹಲ ಹೆಚ್ಚಿಸಿ ಆಧುನಿಕ ಫೋನುಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಪತ್ರಗಳ ಮಹತ್ತನ್ನು ಹೇಳುತ್ತದೆ.

“ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ” ಎನ್ನುವ ಪದ್ಯದ ರೀತಿ ಸೊಗಸಾಗಿದ್ದರೂ ಭಾನು ಎನ್ನುವುದು ಸೂರ್ಯನಿಗೆ ಬಾನು ಎಂದರೆ ಆಕಾಶ ಎನ್ನುವ ವ್ಯತ್ಯಾಸದ ಅರಿವು ಬಾರದೇ ಇದ್ದರೆ ಪದ್ಯ ಗೆದ್ದುಬಿಡುತ್ತದೆ. ಆಕಾಶ ಭೂಮಿಗಳು ಪರಸ್ಪರ ಮುಟ್ಟಿದರೂ ಮುಟ್ಟದೆಯೇ ಉಳಿವ ಕ್ಷಿತಿಜದ ಅರಿವು ಕೂಡ ಕವಿಯಾದವರಿಗೆ ಇರಲೇ ಬೇಕಾಗುತ್ತದೆ.

“ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…” ಎನ್ನುವ ಹೆಸರಿನ ಕವಿತೆಗೆ ಷರಾ ಬರೆದು ಕೊಡಗಿನ ಬಿರುಮಳೆಗೆ ಕುಸಿದ ನೆಲ ಕುರಿತ ಪದ್ಯವೆಂದು ಕವಿ ಹೇಳಿದರೂ ಈ ಕವಿತೆಯ ಮೊದ ಮೊದಲ ಸಾಲುಗಳು ಪ್ರತಿಧ್ವನಿಸುವುದು ಕಳೆದುಕೊಂಡ ಕನಸುಗಳನ್ನು, ಪ್ರೀತಿಯಿಂದ ಕಾಪಿಟ್ಟಿದ್ದನ್ನು ಕಳಕೊಂಡ ನೋವನ್ನು.

“ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ

ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ” ಎನ್ನುವ ತಿಳುವಳಿಕೆ ಲೋಕಕ್ಕೆಲ್ಲ ತಿಳಿದರೆ ಅದೆಷ್ಟು ಸಲೀಸು ಈ ಬದುಕು! ಆದರೆ ವಾಸ್ತವ ಹಾಗಿಲ್ಲವಲ್ಲ!

“ಕುಸುಮಿತ ತೋಪಿನ ಹೂವಿನ ನವಿರು ಪರಿಮಳ,

ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ”

ಎನ್ನುವ ವಿವೇಕದೊಂದಿಗೆ “ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು…” ಎನ್ನುವ ಶೀರ್ಷಿಕೆಯ ಪದ್ಯ ಕೂಡ ಚಣಕಾಲ ಕಾಡದೇ ಇರದು.

ನವೋದಯದ ಕಾಲದಲ್ಲಿ ಪ್ರಾಸ,ಗೇಯತೆ,ರಮ್ಯತೆಗಳಿದ್ದರೆ ಪ್ರಗತಿಶೀಲರ ಕಾಲದಲ್ಲಿ ಕನಸುಗಳೇ ರಾಜ್ಯಭಾರ ಮಾಡುತ್ತ ನವ್ಯವು ಪ್ರತಿಮೆ ರೂಪಕಗಳಲ್ಲಿ ಭಾರವಾಗುತ್ತ ಸಾಗಿದ್ದು ಬಂಡಾಯದ ಬಿಸಿಯುಸಿರು ವ್ಯವಸ್ಥೆಯೊಂದಿಗೆ ಸೆಣಸಾಟ ಈ ಎಲ್ಲವೂ ಹೊಸ ಕಾಲದ ಪದ್ಯಗಳಲ್ಲಿ ಭಿನ್ನ ರೀತಿಯಲ್ಲಿ ಮಿಶ್ರಣಗೊಂಡು ಸುಲಭಕ್ಕೆ ದಕ್ಕದ ರೀತಿಗೆ ಚಾಚಿಕೊಳ್ಳುತ್ತ ಕಾವ್ಯದ ನಡಿಗೆಯನ್ನು ಸುಲಭಕ್ಕೆ ಒಲಿಸಿಕೊಳ್ಳಲಾಗದ ಕಾಲ ಇದು. ಆದರೂ ಹೊಸ ದನಿಯಲ್ಲಿ ಧಂಡಿಯಾಗಿ ಹಾಡುವರ ಕಾಲದ ಹಾಡುಗಳನ್ನು ಅಳೆಯುವ ಮಾಪಕಗಳೇ ಇರದ ಈ ಕಾಲದ ಕವಿಗಳು ಪರಂಪರೆಯಿಂದ ಅರ್ಥವಾದ ರೀತಿಗೆ ಹೊಸ ಟ್ಯೂನ್ ಕೊಡುತ್ತಲೇ ಇದ್ದಾರೆ. ಅಂಥವರ ಪೈಕಿ ಮಂಜುಳ ಡಿ ಕೂಡ ಒಬ್ಬರು. ಬರಿಯ ಚುಟುಕುಗಳಲ್ಲೇ ಹೇಳಬೇಕಾದುದನ್ನು ಹೇಳುತ್ತಿರುವವರ ನಡುವೆ ತಮ್ಮ ದೀರ್ಘವೂ ಸ್ವಾರಸ್ಯವೂ ಆದ ಶೀರ್ಷಿಕೆಗಳ ಮೂಲಕ ಕಾವ್ಯವನ್ನು ಪ್ರಸ್ತುತ ಪಡಿಸುವ ಶೈಲಿ ಬೇರೆಯದೇ ಆಗಿದೆ. ಆದರೆ ಹೇಳಿಕೆಗಳ ಭಾರದಲ್ಲಿ ಕವಿತೆ ನಲುಗಬಾರದೆನ್ನುವ ಕಾವ್ಯ ಮೀಮಾಂಸಕರ ಮಾತು ಯಾರೂ ಮರೆಯಲಾರದ್ದು ಭೇಟಿಯಾಗದ ಭೇಟಿಗಳ ಬಗ್ಗೆ ಪ್ರೀತಿ, ಹಳಹಳಿಕೆ, ನೆನಪು, ಸಂಕಟಗಳ ಒಟ್ಟೂ ಮೊತ್ತವನ್ನು ಅದ್ಭುತವಾಗಿ ಅಭಿವ್ಯಕ್ತಿಸಿದ ಕೆಲವು ಟಿಪ್ಪಣಿಗಳೇ ಇಲ್ಲಿ ಕವಿತೆಯಾದ ಘನಸ್ತಿಕೆಯೂ ಇದೆ.

ಬರಿಯ ಪ್ರೀತಿ ಪ್ರೇಮ ಕನಸುಗಳಿಗಷ್ಟೇ ತಮ್ಮ ಕವಿತೆಗಳ ಹರಹನ್ನು ಸೀಮಿತಗೊಳಿಸದೇ ಬದುಕಿನ ಹಲವು ವಿಸ್ತರಗಳ ಕಡೆಗೂ ಗಮನ ಸೆಳೆಯುವ ಈ ಕವಿಯ ಮುಂದಿನ ರಚನೆಗಳ ಬಗ್ಗೆ ಕುತೂಹಲ ಹೆಚ್ಚುತ್ತಲಿದೆ. ಘೋಷವಾಕ್ಯವು ಕವಿತೆಯಾಗುವುದಿಲ್ಲ‍ ಮತ್ತು ಕವಿತೆಯಾಗಿ ಗೆದ್ದವು ಅನುದಿನದ ಘೋಷ ವಾಕ್ಯಗಳೇ ಆಗಿ ಬದಲಾಗುತ್ತವೆ ಎನ್ನುವ ಕಿವಿಮಾತಿನೊಂದಿಗೆ ಈ ಕವಿಯ ಕೆಲವು ರಚನೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ.


೧. ಭೌತಿಕತೆಯ ಗೀಳು ಮಾನಸಿಕ ಹರಿವು‌‌…

ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು

ಅದೇ ಹಳೇ ಆಲದ ಮರ ಅದೇ ನೆರಳು ವಿಶಾಲತೆ ಚಿಗುರು ಟಿಸಿಲೊಡೆದು ಮೂಡಿದ ನವಿರು ಹಸಿರು

ಕಿರು ತೋಟದ ಅದೇ ರೋಜಾ ಗಿಡ ನೆನ್ನೆಯೂ ಹೂ ಬಿಟ್ಟಿತ್ತು ಇಂದೂ ಬಿಟ್ಟಿದೆ ಆದರೆ ದಳಗಳ ವಿನ್ಯಾಸ ಮಾತ್ರ ನೂತನ

ಅವೇ ಸ್ವರಗಳು ಹೊಸ ಹೊಸ ವಿನ್ಯಾಸ ಲಯದಲ್ಲಿ ಹೆಣೆದು ಹೊಮ್ಮುವ ರಾಗಗಳ ನವೀನ ವಿನ್ಯಾಸಗಳು

ಮರ ಗಿಡ ಹೂ ನದಿ ಕಡಲು ಎಲ್ಲಾ ಲೋಕಗಳಿಗೂ ಶೇಖರಣೆಯ ತೆವಲಿಲ್ಲ

ಅರೆಗಳಿಯಲ್ಲಿ ಮೊಬೈಲಿನಲ್ಲಿ ತೆಗೆದ ನೂರಾರು ಚಿತ್ರಗಳ ಭೌತಿಕತೆ ಒಂದೆರಡು ಸೃಷ್ಟಿಸುವಲ್ಲಿ  ವರ್ಣಚಿತ್ರ ಕಲಾವಿದನಿಗೆ ಅವಧಿಯ ಗಣನೆಯೆಲ್ಲಿ

ಇದು ಮಾನಸಿಕ ಹರಿವು

ಅದೇ ಕ್ಷಿತಿಜ ಅದೇ ಭೂಮಿ ಇಚ್ಛಿತ ಜೀವದೊಂದಿಗೆ

ಲಯಗೊಂಡರೆ ಹೊಸದೊಂದು ಬಣ್ಣ ಪಡೆವ ಹಾಗೆ

ಇಬ್ಬರ ನಡುವಿನ ಗೆರೆಯೂ ಅಳಿಸಿದ ತಾದಾತ್ಮ್ಯ ಭಾವ

ಇಷ್ಟಕ್ಕೂ ನವೀನ ಗಳಿಗೆಗಳು ನವ ಅನುಭವ ಅಂದರೆ ಹೊಸ ವಿವರಗಳಲ್ಲ

ಹಿಂದಿನ ಮುಂದಿನ ಅಡ್ಡ ಉದ್ದ ಹೆಸರುಗಳೆಲ್ಲಾ ಮರೆತು ಹೊಸ ಗಳಿಗೆಯೊಂದಕ್ಕೆ ಮನಸು ಹರಿಬಿಟ್ಟ ಗಳಿಗೆ ದಣಿವಿಲ್ಲದೇ ಹೊಸತನ ಚಲನಶೀಲತೆ ಮೂಡಿ ಆತ್ಮದ ಲಯದೊಂದಿಗೆ ಚೇತೋಹಾರಿಯಾಗಿ ಬೆಸೆಯುವ ಚೇತನ…

೨.  ಕೆಂಪು ಡಬ್ಬ ಮತ್ತು ಕಾಗದದ ದೋಣಿ…

ಬರಿಯ ಟಪಾಲುಗಳಿಲ್ಲ ಈ ಕೆಂಪು ಡಬ್ಬಿಯಲ್ಲಿ ನೂರಾರು ಕೈಗಳು ದಾಟಿ ನೂರಾರು ಗಾವುದ ತೆರಳಿ ಯಾರದೋ ಸ್ಪರ್ಶಕ್ಕೆ ಕಾದಿರುವ ಸ್ವಗತಗಳು

ಮುಖತಃ ಮಾತಾಗದ ಹೇಳಲೇಬೇಕಾದ ಎಷ್ಟೋ ಮಾತುಗಳಿಗೆ  ಕನಸು ಸಮಾಧಾನ ಎಚ್ಚರ ತಪ್ಪೊಪ್ಪಿಗೆ ನೆನಪು ಎಲ್ಲಾ ಸ್ವಗತಗಳು ಪದಗಳಲ್ಲಿ ಸ್ಪಷ್ಟಗೊಳ್ಳುವ ಹಾದಿ

ಎಷ್ಟೋ ದೂರ ಪಯಣಿಸಿ ಬಂದ ಕಾಗದ ಒಡೆಯುವ ಗಳಿಗೆಯ ಉಸಿರ ಕಂಪು ಆತ್ಮಿಕ‌ ಸಂವಾದವೊಂದರ ಹರವು ಜೀವಕ್ಕೆ ಉಣಿಸಬಹುದಾದ ಹಿತ

ಬರೀ ಫೋನುಗಳು ಪತ್ರದ ಹಂಗೆಲ್ಲಿ ಈಗ…!

ಭಾವ ಭೂಮಿಕೆಯ  ಹರಿಸಿ ನಿಂತ ಪತ್ರವನ್ನೊಮ್ಮೆ ಹಿತವಾಗಿ ನೇವರಿಸಿ ಅಕ್ಷರಗಳಾದ ಸ್ವಗತ  ಕಣ್ತುಂಬಿಕೊಳ್ಳುವ ವಿಸ್ಮಯದಲ್ಲಿ ವಿಹರಿಸುವ ತವಕ  ಕೆಂಪುಡಬ್ಬಿಯ ನೋಡಿದಾಗ ಮೂಡದಿರದೇ…

೩.ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ

ದೃಷ್ಟಿ ಹಾಯಿಸಿದಷ್ಟೂ ನಿನ್ನ ಹರವು ನೀಲಾಕಾಶದ

ಬಣ್ಣ ತಳೆದು ನೀಲೀ ತಟ್ಟೆಯಂತೆ ತಂಪಗಿದ್ದೆ

ದಣಿವಿಲ್ಲ ಮೋಡಗಳಿಗೆ ಅದೆಷ್ಟು ತಡೆದಿದ್ದವೋ

ಛಿದ್ರಗೊಂಡು ಅದೆಷ್ಟು  ಸುರಿದರೂ ತೀರದ ನೋವು

ಮಳೆಯ ಅಗಾಧತೆಗೆ ಉಲ್ಬಣಗೊಂಡ ಪರಿ

ಮಕ್ಕಳು ಕುಂಚ ಅದ್ದಿ ತೆಗೆದ ನೀರಿನಂತೆ  ವಿಹ್ವಲ ವರ್ಣಕ್ಕೆ

ಭಾನು ಇಳೆಗಿಳಿದಿದೋ ಕಡಲೇ ಭಾನುವಿನತ್ತ ಧಾವಿಸಿದೆಯೋ ದಿಕ್ಕುಗಳಾದರೂ ಎಲ್ಲಿ

ಎಲ್ಲಾ ನಾದಗಳೂ ಬಣ್ಣಗಳೂ ಹಂಗು ಹಮ್ಮುಗಳು ಲಯ ಕಳೆದುಕೊಂಡ ಈ ರುದ್ರಘೋಷ

ಅದೆಷ್ಟು ತಪನ ತನ್ಮಯತೆಯಿಂದ ಕಾದ ತವಕದ ತೀವ್ರತೆ

ಮಿತಿ‌ ಕಳೆದು ತೆರೆ ಅಪ್ಪಳಿಸುವ ಗಳಿಗೆ

ಜಲದಲ್ಲಿ ಜಲ ಒಂದಾಗುವ ಗಳಿಗೆ

ಭಾನು ಭೂಮಿಯಲ್ಲಿ ಲೀನ

೪. ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…

ನೆನ್ನೆಯಷ್ಟೇ  ಚಂದಗೊಳಿಸಿದ್ದ ಗೋಡೆಯ

ಬಣ್ಣಗಳು ಮುರಿದುಬಿದ್ದ

ಹೆಂಚುಗಳೊಂದಿಗೆ

ಬಣ್ಣ ಹಂಚಿಕೊಂಡಿವೆ

ಅದೆಷ್ಟೊ ಬೆಲೆಯಿತ್ತು ತಂದು ಅಷ್ಟೇ ಬೆಲೆಯ  ಫ್ರೇಮಿನಲಿ  ಸಿಕ್ಕಿಸಿಟ್ಟು

ಬೀಗಿದ ಜಲವರ್ಣ ಚಿತ್ರ

ಮಳೆಯಲ್ಲಿ ಕರಗಿದೆ

ಆಳು ಕಾಳಿಗೂ  ಬೇಡಿ ಕೇಳಿದವರಿಗೂ ನೀಡದೇ

ಮುಂದೆ ಬೇಕಾದಿತೆಂದು ಪೇರಿಸುತ್ತಲೇ ಇಟ್ಟ ಧವಸ ನೆನಸಿ ಬೇಯಿಸುವ ಗೋಜಿಲ್ಲ ಧುತ್ತೆಂದು ಇಂದು ತಾನೇ-ತಾನಾಗಿ  ಧಾರೆಯಲಿ ನೆನಸಿಕೊಂಡಿವೆ

ಯಾರದೋ ಬಂಗಲೆಯ ಮುಂದಿನ ಗಣಪ

ಪಕ್ಕದ ಬೀದಿಯ ಮೇರಿಯಮ್ಮನ ಗುಡಿಯ

 ಶಿಲುಬೆ ಅಲ್ಲಾನ ಗೋಡೆಯ ಚೂರು

ಮೂರಕ್ಕೂ ನಿನ್ನಲ್ಲಿ ಒಂದೇ ಹರಿವು

ಸುತ್ತಲೂ ನಿನ್ನ ಹರಿವೇ ಮತ್ತು

ಹಿಂದೆಂದಿಗಿಂತಲೂ ಹೆಚ್ಚಾಗಿದೆ

ನಿನ್ನ ಇರವುಆದರೂ

ದಾಹ ನೀಗಿಸಲು ಮಾತ್ರ ನೀನಿಲ್ಲ

ಕಣ್ಣೆವೆಯ ಮೇಲೆ ಅನೂಹ್ಯ ಖಂಡಗಳ ನೆರಳು

ಬೆಳೆದದ್ದು ಭಿತ್ತಿದ್ದು ಕೂಡಿಟ್ಟ

ಎಲ್ಲವೂ ಈಗ ನಿನ್ನದೇ

ಕಣ್ಣಿನಲಿ ಬಿದ್ದ ಜಗವೀಗ ಒದ್ದೆ

ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ

ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ

ಇಲ್ಲಿ ಹಣತೆ ಹಚ್ಚಿ  ಇನ್ನೆನು ಮದ್ದು – ಪಟಾಕಿ ಸಿಡಿಸಬೇಕು ಮನದ ಭಿತ್ತಿಯ ಮೇಲಿನ ಕೈಚಾಚಿ ಪಡೆದ ತುತ್ತಿನ ಪೊಟ್ಟಣಗಳಿಗೂ ನಿನ್ನ  ಧಾರೆಯ ಹನಿಗಳು ಬಿದ್ದುದು ಮನದಲ್ಲಿ ಇಂಗುತ್ತಿಲ್ಲ…

********************************************************************

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

Leave a Reply

Back To Top