ಅನುಭವ ಕಥನ
ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!
ವಿಜಯಶ್ರೀ ಹಾಲಾಡಿ
ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. ಅವರ ಕುಂದಾಪುರ ತಾಲ್ಲೂಕಿನಲ್ಲಿ ಕುಡುಬಿಯರು ಬಹುಸಂಖ್ಯೆಯಲ್ಲಿದ್ದಾರೆ. ವಿಜಿಯ ಬಾಲ್ಯಕಾಲದಲ್ಲಿ ಕುಡುಬಿಯರ ದಿನನಿತ್ಯದ ವೇಷಭೂಷಣಕೂಡಾ ವಿಶಿಷ್ಟವಾಗಿತ್ತು. ಹೆಂಗಸರು ಸೀರೆ ಉಡುವ ರೀತಿಯೇ ಬೇರೆ. ‘ಗೇಂಟಿ’ ಹಾಕಿ ಸೀರೆಯುಟ್ಟು ಕೊರಳಿಗೆ ಹತ್ತಾರು ಮಣಿಸರಗಳನ್ನು ಹಾಕಿಕೊಳ್ಳುತ್ತಿದ್ದರು. ತಲೆತುಂಬ ಅಬ್ಬಲಿಗೆ ಹೂ ಮುಡಿದು ಮೂಗಿಗೆ ದೊಡ್ಡ ಹರಳಿನ ಮೂಗುತಿ, ಕಿವಿಗೆ ಬೆಂಡೋಲೆ, ಬುಗುಡಿ, ಕೈತುಂಬ ಗಾಜಿನ ಬಳೆಗಳನ್ನಿಟ್ಟು ಖುಷಿ ಖುಷಿಯಾಗಿ ಅವರು ನಡೆದುಬರುವುದೇ ಒಂದು ಜಾಪು!
ಕುಡುಬಿಯರು ಪ್ರತಿವರ್ಷ ಆಚರಿಸುತ್ತಿದ್ದ ಹೋಳಿಹಬ್ಬವಂತೂ ವಿಶೇಷ. ವಿಜಿ ಮತ್ತು ಗೆಳತಿಯರು ಆ ಸಮಯದ ಹೋಳಿ ಕುಣಿತವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸರಿಸುಮಾರು ಹತ್ತು-ಹದಿನೈದು ದಿನದ ಹಬ್ಬವಿದು. ಅಮಾವಾಸ್ಯೆಯ ನಂತರ ಶುರುವಾಗಿ ಹುಣ್ಣಿಮೆಯವರೆಗೆ ಇರುವ ಹಬ್ಬ. ಕುಡುಬಿಯರು ತಮ್ಮಲ್ಲೇ ನಾಲ್ಕೈದು ಮೇಳಗಳನ್ನು ಮಾಡಿಕೊಳ್ಳುತ್ತಿದ್ದರು. ಮನೆಮನೆಗೆ ಹೋಗಿ ನೃತ್ಯ, ಕೋಲಾಟವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಗಂಡಸರು ಮತ್ತು ಚಿಕ್ಕ ಗಂಡುಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ಮಣಿಸರಗಳಿಂದ ತಲೆಗೆ ಮುಂಡಾಸು, ಹೂಗಳು, ಹಕ್ಕಿ ಗರಿಗಳಿಂದ ಅಲಂಕರಿಸಿ ಕೊಂಡಿರುತ್ತಿದ್ದರು. ಭುಜಕ್ಕೆ ಗುಮ್ಟಿ(ಗುಮ್ಮಟೆ) ಎಂಬ ವಾದ್ಯವನ್ನು ಹಾಕಿಕೊಂಡು, ಕಾಲುಗಳಲ್ಲಿ ದೊಡ್ಡ ದೊಡ್ಡ ಗೆಜ್ಜೆ ಧರಿಸಿ ಉದ್ದಾನುದ್ದಕ್ಕೆ ಅವರು ನಡೆದು ಬರುವಾಗ ಇಡೀ ಗದ್ದೆ ಬಯಲೇ ಸಂಗೀತ, ಬಣ್ಣಗಳಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು.
ವಿಜಿಗೆ ಆಶ್ರ‍್ಯವಾಗುತ್ತಿದ್ದ ವಿಷಯವೆಂದರೆ ಬೇರೆ ದಿನಗಳಲ್ಲಿ ಗದ್ದೆ, ಹೊಲಗಳಲ್ಲಿ ತುಂಡು ಬಟ್ಟೆಯುಟ್ಟು ದುಡಿಯುತ್ತಿದ್ದ ಆ ಪರಿಚಿತ ಜನರೆಲ್ಲ ಆವತ್ತು ಗುರ್ತವೇ ಸಿಗದಂತೆ ಕಾಣುತ್ತಿದ್ದುದು! ಅಬ್ಬ, ಆ ಹೊಸ ವೇಷದಲ್ಲಿ ಅವರೆಲ್ಲ ‘ಅವರೇಅಲ್ಲ’ ಎಂಬಷ್ಟು ಚಂದ ಕಾಣುತ್ತಿದ್ದರು. ಕೆಲವು ಸಲ ರಾತ್ರಿ ಹೊತ್ತುಕುಣಿಯಲು ಬಂದರಂತೂ ಲಾಟೀನು ಬೆಳಕಲ್ಲಿ ಅವರ ಕುಡುಬಿ ಭಾಷೆಯ ಹಾಡು ಮತ್ತು ನೃತ್ಯ ನಕ್ಷತ್ರಲೋಕಕ್ಕೆ ಕರೆದೊಯ್ಯುತ್ತಿತ್ತು! ಅವರು ತಲೆಗೆ ಸಿಂಗರಿಸಿದ್ದ ಸುರಗಿ ಹೂಗಳ ಮಾಲೆ ಪರಿಮಳಿಸುತ್ತಿದ್ದವು. ಗುಮ್ಮಟೆ ಬಡಿಬಡಿದು ಕುಣಿಯುವಾಗ, ಕೋಲಾಟ ಆಡುವಾಗ ಅವರೆಲ್ಲ ಎಷ್ಟು ಚುರುಕು! ಆ ವೇಷದಲ್ಲಿದ್ದಾಗಲೂ ಗಿಡ್ಡ, ಹೆರಿಯ, ಬಾಗ್ಡು, ಬುತ್ಯ ಮುಂತಾದವರು “ಪುಟ್ಟಮ್ಮ ಎಂತಾ ಮಾಡ್ತೆ?” ಎಂದು ಮಾತಾಡಿಸಿದಾಗ ಪುಟ್ಟ ವಿಜಿಗೆ ಏನೋ ಭಯಮಿಶ್ರಿತ ಸಂತೋಷ! ತನ್ನದೇ ವಯಸ್ಸಿನ ಕೆಲವು ಮಕ್ಕಳೂ ವೇಷ ಹಾಕಿಕೊಂಡು ಬಂದದ್ದನ್ನು ನಿಬ್ಬೆರಗಾಗಿ ನೋಡುತ್ತಿದ್ದಳು. ಅವರ ಊರಲ್ಲಿ ನೆಲೆಸಿದ್ದ ಕೆಲ ಮರಾಠರೂ ಹೋಳಿ ಕುಣಿತವನ್ನು ಮಾಡುತ್ತಿದ್ದರು. ಇವರ ಉಡುಪಿನಲ್ಲಿ ಬಣ್ಣಗಳು ತುಸು ಕಡಿಮೆ. ಆದರೆ ಇವರ ಕೋಲಾಟ ಮಾತ್ರ ಅದ್ಭುತ. ಮರಾಠಿ ಭಾಷೆಯ ಹಾಡುಗಳಂತೂ ಬೇರೆಯೇ ತರಹ. ಮತ್ತೊಂದು ವಿಶೇಷವೆಂದರೆ ಇವರ ಮೇಳದಲ್ಲಿ ಒಬ್ಬ ‘ಅಜ್ಜ’ ಇರುತ್ತಾನೆ! ಅಂದರೆ; ಒಬ್ಬ ಹುಡುಗನಿಗೆ ದೊಡ್ಡದಾದ ಬಿಳಿಗಡ್ಡ, ಕಣ್ಣಿಗೆ ಕಪ್ಪುಕನ್ನಡಕ, ಕೈಗೆ ಕೋಲು, ಗಂಟೆ ಕೊಟ್ಟು ವಿಶೇಷವಾಗಿ ‘ಹೋಳಿ ಅಜ್ಜನ ವೇಷ’ ಹಾಕಿಸುತ್ತಾರೆ. ಯಾಕೆಂದು ಇವತ್ತಿಗೂ ಗೊತ್ತಿಲ್ಲ; ಆ ಅಜ್ಜನನ್ನು ಕಂಡರೆ ವಿಜಿಗೆ ವಿಪರೀತ ಭಯವಾಗುತ್ತಿತ್ತು. ಕೊನೆಯಲ್ಲಿ ಅಕ್ಕಿ, ಕಾಯಿ, ದುಡ್ಡಿನ ಸಂಭಾವನೆಯನ್ನು ಆ ‘ಅಜ್ಜ’ನ ಕೈಯ್ಯಲ್ಲೇ ಕೊಡುವುದಾಗಿತ್ತು. ಆ ಅಜ್ಜನೋ ಕೀಟಲೆ ಮಾಡಿ, ಕುಮ್ಬೆಟ್ ಹಾರಿ ಎಲ್ಲರನ್ನೂ ನಗಿಸುತ್ತಿದ್ದ. ಹಾಗೇ ಮಕ್ಕಳನ್ನು ಹೆದರಿಸುತ್ತಲೂ ಇದ್ದ. ಅಜ್ಜ ಸಂಭಾವನೆ ಪಡೆಯುವುದು ಕುಣಿತದ ಕೊನೆಯ ಹಂತ. ಆಮೇಲೆ ಬಾಯಾರಿಕೆ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೊಂದು ಮನೆಗೆ ಮೇಳ ಹೊರಟುಬಿಡುತ್ತಿತ್ತು.
ವಿಜಿಯ ಊರಿನಲ್ಲಿ ಅವತ್ತೆಲ್ಲ ಹೋಳಿಹುಣ್ಣಿಮೆಯ ಆಸುಪಾಸಿನ ಆ ಕೆಲವು ದಿನಗಳು ಕಳೆದದ್ದೇ ತಿಳಿಯುತ್ತಿರಲಿಲ್ಲ. ಬಂದು ಹೋಗುವ ಹೋಳಿಮೇಳಗಳ ಕುಣಿತ ನೋಡುವುದರಲ್ಲಿ ಹೊರ ಪ್ರಪಂಚವೇ ಮರೆತುಹೋಗುತ್ತಿತ್ತು. ಆ ಸಮಯದಲ್ಲಿ ಶಾಲೆಯಲ್ಲಿ ಬೇಸಿಗೆ ರಜೆಕೊಡುವ ದಿನಗಳು ಹತ್ತಿರವಾಗುತ್ತಿತ್ತು. ಪರೀಕ್ಷೆಗಳು ಮುಗಿದಿರುತ್ತಿದ್ದವು. ಶಾಲೆಯಲ್ಲೂ ಈ ಹೋಳಿಹಬ್ಬದ ಕುರಿತು ಮಕ್ಕಳು ಚರ್ಚಿಸುತ್ತಿದ್ದರು. ಹಾಗೇ ಮನೆಯ ಸುತ್ತಮುತ್ತ ಗೆಳತಿಯರು ಸೇರಿದರೂ ಅದೇ ಮಾತು. ಹೋಳಿ ಮೇಳ ಬಂದಾಗ ಅವರ ಬೀಚುಬೆಕ್ಕು ಹೆದರಿ ಎಲ್ಲೋ ಅಟ್ಟದ ಸಂದಿಯಲ್ಲಿ ಅಡಗಿ ಕೂರುತ್ತಿದ್ದುದನ್ನು ಆಡಿಕೊಂಡು ನಗುತ್ತಿದ್ದರು. ವಿಜಿ, ನೀಲಿಮಾ, ಮಾಣಿಕ್ಯಳಿಗೆ ವಿಚಿತ್ರ ಕಾಣುತ್ತಿದ್ದುದು ಹೋಳಿ ಜನರು ತಲೆಗೆ ಸಿಕ್ಕಿಸಿಕೊಳ್ಳುತ್ತಿದ್ದ ಹಕ್ಕಿ ಗರಿಗಳು! ಮನೆಯ ಹತ್ತಿರದ ತೋಟದಲ್ಲಿ, ಕಾಡಿನಲ್ಲಿ ಹಾರಾಡುವ ‘ಬಾಲದ ಹಕ್ಕಿ’ಯಿಂದ ಆ ಉದ್ದನೆ ಗರಿಗಳನ್ನು ಕದಿಯುತ್ತಿದ್ದರು ಎಂದು ಅವರಿಗೆ ಗೊತ್ತು. ಕೊಂಬೆಗಳಿಗೆ ಮೇಣ ಹಚ್ಚಿಟ್ಟು, ಹಕ್ಕಿ ಬಂದು ಕುಳಿತಾಗ ಉದ್ದ ಗರಿಗಳನ್ನು ಕಿತ್ತುಕೊಂಡು ಮತ್ತೆ ಕಾಡಿಗೆ ಬಿಡುತ್ತಾರಂತೆ. “ಪಾಪದ್ದು ಆ ಬಾಲದ ಹಕ್ಕಿ, ಅದಕ್ಕೆ ಎಷ್ಟು ಹೆದರಿಕೆಯಾಗುತ್ತದೋ, ಏನೋ” ಎಂದು ಮಾತಾಡಿಕೊಳ್ಳುತ್ತಿದ್ದರು. `ಅಂತಹ ಹಕ್ಕಿಗಳು ಪುನಃ ಕಾಡಿಗೆ ಹೋದಾಗ ಉಳಿದ ಹಕ್ಕಿಗಳು ಅವನ್ನು ಸೇರಿಸಿಕೊಳ್ಳುತ್ತಾವಾ?’ ಮುಂತಾಗಿ ಯೋಚಿಸುತ್ತಿದ್ದರು. ಏಕೆಂದರೆ ಒಮ್ಮೆ ಮನುಷ್ಯರು ಮುಟ್ಟಿದರೆ ಅಂತಹ ಹಕ್ಕಿ, ಅಳಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಪುನಹ ಅವುಗಳ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಪುಸ್ತಕದಲ್ಲಿ ಓದಿ ತಿಳಿದುಕೊಂಡಿದ್ದರು. “ಕಾಡಿಗೆ ಬಿಟ್ಟ ಹಕ್ಕಿಗೆ ಪುನಃ ಬಾಲ ಬೆಳೆಯುತ್ತದಾ?” ವಿಜಿ ಕೇಳುತ್ತಿದ್ದಳು. “ಹೂಂ, ಮತ್ತೆ ಬಾಲ ಬಂದಾಗ, ಮುಂದಿನ ವರ್ಷದ ಹಬ್ಬಕ್ಕೆ ಕಿತ್ತುಕೊಳ್ಳುತ್ತಾರೆ” ಎಂದು ನೀಲಿಮಾ ಹೇಳುತ್ತಿದ್ದಳು. “ಹಾಗಾದರೆ ಈ ಬಾಲದ ಹಕ್ಕಿಗೆ ಬಾಲವೇ ಇರಬಾರದಿತ್ತು, ಪಾಪ” ಎಂದುಕೊಳ್ಳುತ್ತಿದ್ದಳು ವಿಜಿ.
ಮನರಂಜನೆಗಳೇ ಕಮ್ಮಿಯಿದ್ದ ವಿಜಿಯ ಊರಿನಲ್ಲಿ ಹೋಳಿಹಬ್ಬ ಒಂದು ದೊಡ್ಡ ಕುತೂಹಲಕಾರಿ ವಿಷಯವಾಗಿತ್ತು; ಹೌದು ವರ್ಷಕ್ಕೊಮ್ಮೆಅದು ಮರಳುತ್ತಿತ್ತು!
******************************************************