ಕಾದಂಬರಿ ಕುರಿತು
ಮಲೆಗಳಲ್ಲಿ ಮದುಮಗಳು
ಕುವೆಂಪು
ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು ತೂಗುತ್ತದೆ, ಈ ತಕ್ಕಡಿಗೆ ಏನಾಗಿದೆ? ಎಂದು ವಿದ್ಯಾರ್ಥಿಯಾಗಿದ್ದಾಗ ಕೇಳುತ್ತಿದ್ದೆ . ಈಗಲೂ ನೀವು ನನ್ನ ಪ್ರಬುದ್ಧ ಅಂದುಕೊಳ್ಳುವದಾದರೆ ತಕ್ಕಡಿಗೆ ಏನಾಗಿದೆ ? ಎಂದು ಅದೇ ಪ್ರಶ್ನೆ ಕೇಳುತ್ತೇನೆ.” ಎನ್ನುತ್ತಾರೆ ಹೆಸರಾಂತ ಮಾನವೀಯ ಸಾಹಿತಿ ದೇವನೂರು ಮಹಾದೇವ. ಬಹುಷಃ ಮಲೆಗಳಲ್ಲಿ ಮದುಮಗಳು ಓದಿದ ಎಲ್ಲರ ಎದೆಯಲ್ಲಿ ಎದ್ದುನಿಲ್ಲುವ ಪ್ರಶ್ನೆ ಇದು. ಬರೀ ಕಾದಂಬರಿಯಲ್ಲ ಇದು ಮಲೆನಾಡಿನ ಸಮಸ್ತವನ್ನೂ ಒಳಗೊಂಡ ಮಲೆನಾಡ ಜೀವಕೋಶ ಅಂದುಕೊಂಡರೆ ಒಳಿತು. ಮಲೆನಾಡ ಕಾನು ಕಾಡು ಬೆಟ್ಟ ಬಯಲು ಮಳೆ ನೀರು ನದಿ ಬದುಕು ಬವಣೆ ಏನುಂಟು ಏನಿಲ್ಲ ಇದರಲ್ಲಿ?. ಕಾಲೇಜು ದಿನಗಳಲ್ಲಿ ಲೈಬ್ರರಿಯಿಂದ ತಂದು ಅಲ್ಲಲ್ಲಿ ಗಿಬರಾಡಿ ಕುಡಿಮೀಸೆ ಕೆದರಿದ ಕ್ರಾಪು ಗುಳಿಗೆನ್ನೆ ನವಿರು ಸೀರೆಗಾಗಿ ಹುಡುಕಾಡಿ ಮದುಮಗಳಲ್ಲಿ ಅದೇನೂ ಕಣ್ಣಿಗೆ ಬೀಳದೇ ಅವಳ ಭಾರಕ್ಕೆ ಭಯಪಡುತ್ತಲೇ ಒಂದಷ್ಟು ಪುಟ ಮಗುಚಿ ಮರಳಿಸಿ ಬಂದಾದಮೇಲೆಯೂ ಪುರುಸೊತ್ತಾಗಿ ಒಮ್ಮೆ ಓದಬೇಕೆಂಬ ಕನಸಿದ್ದದ್ದಂತೂ ಸುಳ್ಳಲ್ಲ. ದಶಕಗಳು ಕಳೆದ ಮೇಲೆ ಕಾಲ ಕೂಡಿಬಂದು ಈಗಷ್ಟೇ ಓದಿಮುಗಿಸಿದಮೇಲೆ ಇಷ್ಟುದಿನ ಬರಿದೆ ಬರಿದೇ ಹೋಯ್ತು ಹೊತ್ತು ಅನ್ನಿಸ್ತಾ ಇದೆ.
ನನ್ನೊಳಗೆ ಇಷ್ಟೊಂದು ಒಳಸಂಚಲನೆಯನ್ನು ಹುಟ್ಟುಹಾಕಿದ ಕೃತಿ ಬೇರೊಂದಿಲ್ಲ ಅಂದುಕೊಂಡಿದ್ದೇನೆ. ನಾನೂ ಒಬ್ಬಳು ಹಸಿಬಿಸಿ ಬರಹಗಾರ್ತಿ ಎಂಬ ಒಣ ಹಮ್ಮಿನ ನೆತ್ತಿಕುಟ್ಟಿ ಪುಡಿಮಾಡಿ ಬರೆದದ್ದೆಲ್ಲ ಬಾಲಿಷ ಅನ್ನಿಸತೊಡಗಿದೆ ಅನ್ನೋಕೆ ಯಾವ ಸಂಕೋಚವೂ ಕಾಡುತ್ತಿಲ್ಲ. ಕೃತಿಯನ್ನ ಅತ್ಯಂತ ಪ್ರೀತಿಯ ತಿನಿಸನ್ನು ಬೇಗ ಮುಗಿದುಹೋಗುವ ಭಯದಲ್ಲಿ ಇಷ್ಟಿಷ್ಟೇ ತಿಂದು ಉಳಿಸಿಕೊಂಡಂತೆ ತಿಂಗಳು ಕಾಲ ನಿಧಾನವಾಗಿ ಕೂತು ಬಾಲಕಿಯಾಗಿ ಓದುವ ಸುಖ ವರ್ಣನೆಗೆ ನಿಲುಕದ್ದು.
ಕುವೆಂಪುರವರ ಮಾತುಗಳಲ್ಲಿ ಹೇಳುವದಾದರೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಕ್ಕಶ್ಚಿತವಲ್ಲ.” ಇಲ್ಲಿ ಗುತ್ತಿಯ ವ್ಯಕ್ತಿಚಿತ್ರಣದಷ್ಟೇ ಶೃದ್ಧೆಯಿಂದ ಅವನ ನಾಯಿ ಹುಲಿಯನನ್ನು ಕುರಿತು ಬರೆದಿದ್ದಾರೆ. ಹುಲಿಕಲ್ಲ್ ನೆತ್ತಿಯನ್ನು, ಮಲೆನಾಡಿನ ಮಳೆಗಾಲದ ರೌದ್ರ ರಮಣೀಯತೆಯನ್ನು ಕಡೆದಿಟ್ಟ ತನ್ಮಯತೆಯಲ್ಲೇ ಕಾಡಿನ ಇಂಬಳವನ್ನು ಸುಬ್ಬಣ್ಣ ಹೆಗ್ಗಡೆಯ ಹಂದಿದೊಡ್ಡಿಯನ್ನು ಕುರಿತೂ ಬರೆಯುತ್ತಾರೆ ಕುವೆಂಪು. ಚಿನ್ನಮ್ಮ ಮುಕುಂದಯ್ಯರ ನಡುವಿನ ಪ್ರೇಮದ ಸಂದರ್ಭದಲ್ಲಿ ಅವರ ಲೇಖನಿ ಬಾಗಿನಿಂತಂತೆ ಐತ-ಪೀಂಚಲು ಗುತ್ತಿ- ತಿಮ್ಮಿಯರ ಪ್ರೇಮಪ್ರಣಯಕ್ಕೂ ಅವರದು ಪ್ರೀತಿಯ ಪೂಜೆಯೇ…ಒಮ್ಮೆ ಓದಿ ಮುಗಿಸಿದಮೇಲೆ ಕೃತಿಯ ಕುರಿತಾಗಿ ಓದುಗರೆದೆಗೆ ದಕ್ಕಿದ ಹೊಳಹುಗಳನ್ನೊಮ್ಮೆ ತಿಳಿಯಲು ಪುಟ ತಿರುವಿಬಂದೆ. ಅವುಗಳನ್ನು ವಿಮರ್ಶೆಗಳೆನ್ನದೇ ಹೊಳಹುಗಳು ಎಂಬುದಕ್ಕೆ ಕಾರಣ ಮಲೆಗಳಲ್ಲಿ ಮದುಮಗಳು ವಿಮರ್ಶೆಗೆ ನಿಲುಕದಷ್ಟು ಎತ್ತರಕ್ಕೆ ಮೀರಿಬೆಳೆದ ಕೃತಿ. ಈ ಕೃತಿ ಕನ್ನಡವಲ್ಲದೇ ವಿಶ್ವದ ಬೇರಾವುದೇ ಭಾಷೆಯಲ್ಲಿದ್ದಿದ್ದರೆ ನೋಬಲ್ ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿತ್ತು ಎಂಬ ಮಾತಂತೂ ಸರ್ವಕಾಲಿಕ ಸತ್ಯವಾದರೂ ಕನ್ನಡದ ಈ ಶ್ರೇಷ್ಠ ಕೃತಿಗೆ ಪಾರಿತೋಷಕಗಳ ಹಂಗಿಲ್ಲ. ಕನ್ನಡಕ್ಕೆ ಈ ಕೃತಿಯೇ ಒಂದು ಸರ್ವಶ್ರೇಷ್ಠ ಪಾರಿತೋಷಕ. ಇಂಗ್ಲೀಷ್ ನಲ್ಲಿ ಬರೆಯುವಷ್ಟು ಭಾಷಾ ಪಾಂಡಿತ್ಯವಿದ್ದರೂ ಕೂಡ ಕನ್ನಡವನ್ನು ತಲೆಮೇಲಿಟ್ಟುಕೊಂಡು ಮೆರೆಸಿದ ರಸ ಋಷಿಗೆ ನಾಡಿಗರು ಸದಾ ಋಣಿಯಾಗಿರಲೇಬೇಕು. ಕೃತಿ ತನ್ನ ಕೇಂದ್ರವನ್ನು ಬಿಟ್ಟು ದೂರ ಸರಿದಿದ್ದನ್ನು ಉಲ್ಲೇಖಿಸಿದವರಿದ್ದಾರೆ. ಕುವೆಂಪು ಬರೀ ಕೇಂದ್ರದ ಸುತ್ತಲೇ ಸುತ್ತಿ ಕೃತಿಯನ್ನು ಸೀಮಿತಗೊಳಿಸದೇ’ ಅದು ಬರೀ ಕಾದಂಬರಿಯಾಗಿಯೇ ಉಳಿದು ಹೊಗುವದನ್ನು ತಪ್ಪಿಸಿ ಸರ್ವಕಾಲಕ್ಕೂ ಸಲ್ಲುವಂತಹ ಒಂದು ಅನನ್ಯ ಕೊಡುಗೆಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕನ್ನಡದ ಓದುಗರಮೇಲೆ ಋಣಭಾರ ಹೊರಿಸಿದ್ದಾರೆ. ಶೋಷಿತ ವರ್ಗ ಗಳ ಪರವಾಗಿ ಕೃತಿಕಾರ ನಿಂತಿದ್ದಾರೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳುವಂತಿಲ್ಲ. ಇದ್ದುದ ಇದ್ದಂತೆ ಕಂಡುದ ಕಂಡಂತೆ ಕೃತಿಯೇ ಕೃತಿಕಾರನ ಕೈಹಿಡಿದು ನಡೆಸಿದಂತೆ ಬರೆಯಬೇಕಾದ ಅಗತ್ಯಗಳನ್ನೆಲ್ಲ ಬರೆದಿದ್ದಾರೆ. ಮೇಲ್ವರ್ಗಗಳ ಕಪಿಮುಷ್ಠಿಗೆ ಸಿಕ್ಕು ತಳವರ್ಗಗಳು ನರಳುವ ಕಾಲಘಟ್ಟದಲ್ಲಿ ಸತ್ಯಕ್ಕೆ ಚ್ಯುತಿಯಾಗದಂತ ಕೃತಿಯ ನಡಿಗೆ ಬೊಟ್ಟಿಡಲಾಗದಷ್ಟು ಸಹಜ. ಪ್ರಕೃತಿ ಪ್ರಣಯ ವಿರಹ ಮಿಲನ ಅದಾವುದೇ ಇರಲಿ ವರ್ಣನೆಯಲ್ಲಂತೂ ಕುವೆಂಪು ಅವರದ್ದು ಬೇರಾರಿಗೂ ನಿಲುಕದ ತಪಸ್ಸಿದ್ಧಿ.
” ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆ ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪ್ರಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೇ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ , ಅಷ್ಟೆ . ” ಕುವೆಂಪು ನುಡಿಯಲ್ಲಿ ಕಾಡಿನ ಹಿರಿಮೆ.
” ಇಷ್ಟಪ್ರಿಯ ಕಂಠ ಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನಗರಿ ಹಗುರವಾಗಿ ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಆದರ ದಂಡವು ನೆಟ್ಟಗಾಗಿ ವಿರಾಮ ಭಂಗಿಯಲ್ಲಿ ಮಲಗುವಂತೆ ಒಂದೆರಡು ನಿಮಿಷಗಳಲ್ಲಿಯೇ ಆನಂದ ಮೂರ್ಛೆಯೋ ಎಂಬಂತಹ ಗಾಢ ನಿದ್ದೆಗೆ ಮುಳುಗಿ ಬಿಟ್ಟಳು . ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೋ ವಿರಹ ಮಿಲನ ನಾಟಕದಲ್ಲಿ.”
ಕಾವೇರಿ ಇಸ್ಕೂಲು ಬಾವಿಗೆ ಹಾರಿಕೊಂಡು ಸತ್ತಮೇಲೆ ಕುವೆಂಪು ಬರೆದ “ತನ್ನ ಮೈಯನು ಕೆಡಿಸಿದ್ದ ಕಡುಪಾಪಿಗಳಲ್ಲಿ ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೇ ಆಗಿತ್ತು. ಅದೇನಾದರೂ ಗೊತ್ತಾಗಿದ್ದರೆ ಭಗವಂತನೇ ಸತ್ತುಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನ ವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದ ಮೇಲೆ ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೇ ಇರುತ್ತಿತ್ತು ? ” ಇಂತಹ ಅದೆಷ್ಟೋ ಸಾಲುಗಳು ಮತ್ತೆಮತ್ತೆ ಮೆಲಕಿಗೆ ಸಿಕ್ಕು ಎದೆಯಲ್ಲಿ ಮಿಸುಗುತ್ತಲೇ ಇರುತ್ತವೆ.
ತುಂಗಾ ನದಿಯ ನೆರೆಯ ರಭಸಕ್ಕೆ ಗುತ್ತಿಯ ನಾಯಿ ಹುಲಿಯ ಕೊಚ್ಚಿಹೋದದ್ದು ಕಾಲಲ್ಲಿ ಮುಳ್ಳುಮುರಿದಂತ ನೋವು. ತಮ್ಮಲ್ಲಿ ಜೀತಮಾಡುವ ಕುಟುಂಬಗಳ ಗಂಡು ಹೆಣ್ಣುಗಳ ಮದುವೆಕೂಡ ತಮ್ಮ ಮೀಸೆಗಳಡಿಯಲ್ಲೇ ತಮ್ಮಿಷ್ಟದಂತೆ ನಡೆಯಬೇಕೆಂಬ ಜಮೀನ್ದಾರ ರೊತ್ತಿಗೆಯ ಮೀರಿ ತಾನು ಮೆಚ್ಚಿಕೊಂಡ ಗುತ್ತಿಯೊಂದಿಗೆ ಓಡಿಹೋಗಿ ಕಡುಬವಣೆಯುಂಡರೂ ಬಿಡದೇ ಅವನನ್ನೇ ನೆಚ್ಚಿ ನಂಬಿ ಜೊತೆಯಾದ ಹೊಲೆಯರ ತಿಮ್ಮಿ , ಪ್ರೀತಿಗಾಗಿ ತಾನು ಅತಿಯಾಗಿ ಪ್ರೀತಿಸುವ ಅದಕ್ಕಿಂತ ಹೆಚ್ಚು ಭಯಪಡುವ ಅಪ್ಪನಿಗೂ ಬೆನ್ನಾಗಿ ಸ್ವಂತ ಮದುವೆ ಚಪ್ಪರದಿಂದ ತಪ್ಪಿಸಿಕೊಂಡು ಕಾಡುಮೇಡಲೆದು ತನ್ನಪ್ರಿಯ ಮುಕುಂದಯ್ಯನ ಸೇರಿಕೊಂಡ ಚಿನ್ನಮ್ಮ ಈ ಎರಡೂ ಹೆಣ್ಣುಗಳು ಒಲ್ಲದ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಗೆದ್ದು ನಿಲ್ಲುವ ಕಥಾನಾಯಕಿಯರು. ಪೀಂಚಲು ಐತರ ನಡುವಿನ ದಾಂಪತ್ಯವಂತೂ ಪ್ರೀತಿ ಪ್ರಣಯವನ್ನೂ ಮೀರಿನಿಂತ ಅದರಾಚೆಯ ಮಾತಿಗೆ ನಿಲುಕದ ವಿಹಂಗಮ ಪ್ರೇಮ. ಇನ್ನು ನಾಗಕ್ಕನೆಂಬ ನಿಯತ್ತಿನ ಹೆಣ್ಣು ಪತಿಯ ಮರಣದ ನಂತರ ಪುರುಷ ಸಾಂಗತ್ಯವನ್ನು ಹೀಂಕರಿಸಿ ದೂರನಿಂತವಳು. ಉಳ್ಳವರ ಮನೆಯ ಗಂಡಿಗೆ ವಿಧವೆ ಸೊಸೆಯನ್ನು ಕೂಡಿಕೆ ಮಾಡಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಅತ್ತೆಯ ನೀಚ ಯೋಚನೆಗೆ ಸೆಡ್ಡು ಹೊಡೆದು ನಿಂತ ಹೆಣ್ಣು ತನ್ನಂತಹದ್ದೇ ಒಂದು ಪುಟ್ಟ ಹೆಣ್ಣುಜೀವಕ್ಕಾಗಿ ತನ್ನೊಳಗೇ ತಾನಿಟ್ಟುಕೊಂಡ ಕಟ್ಟಳೆಮೀರಿ ವೆಂಕಪ್ಪನಾಯಕನ ಒಪ್ಪಿಕೊಂಡಿದ್ದು ಹೆಣ್ತನದ ಪಾರಮ್ಯದ ಹೃದಯವೈಶಾಲ್ಯ.
ಗೊಬ್ಬೆ ಸೆರಗು ಹೊನ್ನಳ್ಳಿ ಹೊಡೆತ ಕಪ್ಪೆಗೋಲು ಕುಳವಾಡಿ ಚಿಟ್ಟಳಿಲು ಒಡೆಯರ ದಿಬ್ಬ ದೈಯ್ಯದ ಹರಕೆ ಕಿವಿಚಟ್ಟೆ ಹಂದಿಹಸಗೆ ಉಮ್ಮಿಡಬ್ಬಿ ಹರ್ಮಗಾಲ ಬೀಸಿಕಲ್ಲು ಮದೋಳಿಗ ಇಂತಹ ಅಸಂಖ್ಯ ದೇಸಿಶಬ್ದಗಳ ಸಾಂಗತ್ಯದಲ್ಲಿ ಹೂವಳ್ಳಿ ಕೋಣೂರು ಸಿಂಬಾವಿ ಕಲ್ಲೂರು ಬೆಟ್ಟಳ್ಳಿ ಕಾಗಿನಳ್ಳಿ ಲಕ್ಕುಂದ ಮೇಗರವಳ್ಳಿಗಳ ಸುತ್ತಸುತ್ತಿ ,ಹೆಗ್ಗಡೆಗಳ ಗೌಡರ ಹೊಲೆಯರ ಹಸಲರ ಹಳೆಪೈಕದವರ ಕಿಲಿಸ್ತಾನರ ಕೇರಿಗಳನ್ನೆಲ್ಲ ಹೊಕ್ಕು ಮಂಜಮ್ಮ ಜಟ್ಟಮ್ಮ ದೇವಮ್ಮ ಚಿನ್ನಮ್ಮ ಮಂಜಮ್ಮ ಅಂತಕ್ಕ ಕಾವೇರಿ ಅಕ್ಕಣಿ ಪೀಂಚಲು ನಾಗತ್ತೆ ನಾಗಕ್ಕ ಪೀಂಚಲು ತಿಮ್ಮಿ ಪುಟ್ಟಿ ದೇಯಿ ಹಿಂಡು ಹಿಂಡು ಹೆಣ್ಣುಗಳೊಟ್ಟಿಗೆ ನಿತ್ಯ ತಿಂಗಳುಗಟ್ಟಲೆ ಒಡನಾಡಿ ಕೊನೆಪುಟವ ಮೊಗಚುತ್ತಿದ್ದಂತೆ ಅಚಾನಕ್ ಒಂಟಿಯಾಗಿ ದೂರಕ್ಕೆ ಸಿಡಿದುಬಿದ್ದ
ತಳಮಳ ಎದೆಗೆ. ಅಂತಕ್ಕನ ಮಗಳು ಕಾವೇರಿ ದಟ್ಟಿರುಳಿನಲ್ಲೂ ಚೀಂಜ್ರ ಶೇರೇಗಾರನ ಕ್ರೌರ್ಯಜ್ಕೊಳಗಾಗಿ ಸತ್ತ ದೇಯಿ ಕನಸಿಗೆ ನುಗ್ಗಿ ನಿದ್ದೆಗೆಡಿದುತ್ತಿದ್ದಾರೆ……ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಎದುರಿಗೆ ಇದ್ದರೆ ನಾವು ನಾವಾಗಿರದೇ ಅದರದೇ ಒಂದು ಭಾಗವಾಗಿ ಪಾತ್ರವಾಗಿ ಕಥೆಯ ತುಂಬಾ ಕೃತಿಯ ತುಂಬಾ ಖುದ್ದು ಓಡಾಡಿ ಬಂದ ಧನ್ಯತೆ. ಸರ್ವಶ್ರೇಷ್ಠ ಗಾಯಕರ ಕಂಠದಲ್ಲೊಮ್ಮೆ ಕೆ ಎಸ್ ನರಸಿಂಹ ಸ್ವಾಮಿಯವರ “ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕೇಳುವಾಗಿನ ನಮ್ಮ ನಾವು ಮರೆತು ಹಾಡಿನಲ್ಲಿ ಒಂದಾಗುವ ಭಾವವೇ ಮಲೆಗಳಲ್ಲಿ ಮದುಮಗಳೆದುರು ಕೂತರೆ… ಅಂದುಕೊಂಡರೆ ಅತಿಶಯೋಕ್ತಿಯಲ್ಲ.
ಒಮ್ಮೆ ಮುಗಿಸಿದಮೇಲೆ ಮತ್ತೆ ಕೈಬಿಡಲಾಗದೇ ಮರುಓದಿಗೆ ಪುಟ ಮಗುಚುತ್ತಿದ್ದೇನೆ. ಮಲೆಗಳಲ್ಲಿ ಮದುಮಗಳ ಎದುರಿಗೆ ಕೂತು ಪುಟ ಮಗುಚುವದೇ ಒಂದರ್ಥದಲ್ಲಿ ಜನ್ಮಸಾರ್ಥಕ್ಯ.
*****************************
ಪ್ರೇಮಾ ಟಿ.ಎಂ.ಆರ್.