ವಿರಹಿ ದಂಡೆ

ಪುಸ್ತಕ ಪರಿಚಯ

ವಿರಹಿ ದಂಡೆ

ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು

ವಿರಹಿ ದಂಡೆ
ಕವನ ಸಂಕಲನ
ಲೇಖಕ : ನಾಗರಾಜ ಹರಪನಹಳ್ಳಿ
ಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.
ಬೆಲೆ : ೮೦/-

ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ.

ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ ತುಟಿಗಳ, ಮುತ್ತಿನ ಮತ್ತಿನ ಬಯಕೆಯಲ್ಲಿ ಸದಾ ತೇಲಾಡುವುದಕ್ಕಾಗಿಯೇ ಅನಿಸುತ್ತದೆ. ಅವರ `ವಿರಹಿ ದಂಡೆ’ಯ ಕವಿತೆಗಳನ್ನು ಓದಿದಾಗ ಖಂಡಿತಾ ಅನಿಸುತ್ತದೆ. ನನಗೆ ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆಯಲು ಅವಕಾಶ ಕಲ್ಪಿಸಿದ್ದರು. ಈ `ವಿರಹಿ ದಂಡೆ’ ಅವರ ಎರಡನೇ ಸಂಕಲನ ವಾಗಿದೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಬಂಡಾಯ ಸಾಹಿತ್ಯ ಸಂಘಟನೆ, ಸಾಹಿತ್ಯ ಪರಿಷತ್ತು ಎಲ್ಲವನ್ನು ಎದೆಗೆ ಹಚ್ಚಿಕೊಂಡು ಸದಾ ಕ್ರಿಯಾಶೀಲವಾಗಿ ಓಡಾಡಿಕೊಳ್ಳುತ್ತಲೇ ಕಥೆ, ಕವಿತೆ, ವಿಮರ್ಶೆ ಅಂತೆಲ್ಲಾ ಬರೆಯುತ್ತಲೇ ಕುವೆಂಪು, ಬೇಂದ್ರೆ, ಲಂಕೇಶ್, ನರೋಡ, ಬೋದಿಲೇರ್, ಅಲ್ಲಮ, ಬಸವಣ್ಣ, ದೇವನೂರು, ನೀಲು ಎಲ್ಲವನ್ನೂ ಓದುತ್ತಲೇ ದೇವರು ದಿಂಡರು ಬಗೆಗಿನ ಮೌಡ್ಯವನ್ನು ಪ್ರಶ್ನಿಸುತ್ತ ವೈಚಾರಿಕ ನೆಲೆಯ ಮನಸ್ಸನ್ನು ಬರಹಗಳ ಮೂಲಕ ಪ್ರಕಟಿಸುತ್ತ, ತಣ್ಣಗೆ ಪ್ರತಿಭಟಿಸುತ್ತ ತನ್ನದೇ ಆದ ಹಾದಿಯನ್ನು ತುಳಿದವರು.

ಮಳೆ ಸುರಿಯುತ್ತಲೇ ಇದೆ

ದಾಹ ಮಾತ್ರ ಹಿಂಗಿಲ್ಲ

(ಎಷ್ಟು ನೀರು ಕುಡಿದರೂ)

ಎನ್ನುವ ಕವಿ ಪ್ರೀತಿಯ ನಿರಂತರತೆ, ಚಲನಶೀಲತೆ, ಚಿರಂತನತೆಯನ್ನು ಪ್ರಕಟಿಸುತ್ತಾರೆ. ಈ ಮೇಲೆ `ಮಹೋದಕ ಎಂದದ್ದು ಈ   ಹಿನ್ನಲೆಯಲ್ಲಿಯೇ.’ ಪ್ರೀತಿ, ಕೆಮ್ಮು ಮುಚ್ಚಿಡಲಾಗೊಲ್ಲ’ ಎಂಬ ಮಾತಿನಂತೆ, ಎದೆ ತೆರೆದಂತೆ ಅವರು ಪ್ರೀತಿಯ ಮಜಲುಗಳನ್ನು ತೆರೆದಿಡುತ್ತಾರೆ. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ತರ ಎಲ್ಲಾ ಕಾಲಕ್ಕೂ ಇವರು ಪ್ರೀತಿಯ ಬಗ್ಗೆಯೇ ಬರೆಯ ಬಹುದೆಂಬುದು ಅವರ ಕವಿತೆಗಳನ್ನು ಓದಿದಾಗ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುತ್ತಲೇ ಪ್ರಬುದ್ಧತೆಯನ್ನು ಮೆರೆಯುವ ಹರಪನಹಳ್ಳಿಯವರು ತಮ್ಮ ಕವಿತೆಗಳಲ್ಲಿ ಹೊಸತನ ಪ್ರಕಟಿಸುತ್ತಾರೆ. ‘ ದಂಡೆಯ ಕೈಯಲ್ಲಿ ಚಂದ್ರನಿಟ್ಟು ಬರೋಣ’ ಎನ್ನುವ ಕವಿ ಸಂಜೆಯ ಮುದಗೊಂಡ ಗಾಳಿಯ ಸ್ಪರ್ಶಕ್ಕೆ ನಲುಗುವ ಹಳದಿ ಹೂಗಳ ಫಲುಕಿಗೆ ಬೆರಗಾಗುತ್ತಾರೆ.

“ಕಣ್ಣು ಕಣ್ಣು ಬೆರೆತವು

ಪ್ರೀತಿ ನಿರಾಕರಿಸಲಾಗಲಿಲ್ಲ’’

“ಬೀದಿಗಳಲ್ಲಿ ಎಷ್ಟೇ ತಿರುಗಿದರೂ

ನಿನ್ನ ಜೊತೆ ನಡೆದಾಗ ಸಿಕ್ಕ

ಸಂಭ್ರಮ ಸಿಗಲಿಲ್ಲ’’

“ಜಗತ್ತು ಹರಾಮಿ

ಹಗಲು ದುಡಿಯುತ್ತದೆ

ರಾತ್ರಿ ಕಾಮಿಸುತ್ತದೆ’’

“ಚಂದ್ರ ನಕ್ಕ

ಆಕಾಶವೂ ಬಾಹುಗಳ ತೆರೆದು

ಆಲಂಗಿಸಿತು’’

ಇಲ್ಲೆಲ್ಲ ಕವಿ ತನ್ನನ್ನು `ಪೋಲಿ’ ಎಂದು ಕರೆದುಕೊಂಡರೂ ಅದು ಪೋಲಿತನವಲ್ಲ. ಅಂತರಂಗದ ಭಾವ ಸಹಜತೆಯಾಗಿದೆ.ಅವರ ಕವಿತೆಗಳಲ್ಲಿ ಬರುವ ಚಂದ್ರ, ಆಕಾಶ, ದಂಡೆ, ಬಯಲುಗಳೆಲ್ಲವನ್ನೂ ಮನುಷ್ಯ ಸದೃಶ ಚಿತ್ರವಾಗಿ ಕವಿತೆಗಳಲ್ಲಿ ನಿಲ್ಲಿಸುತ್ತಾರೆ. ಪ್ರಕೃತಿಯ ಭಾಗಗಳನ್ನು ಮನುಷ್ಯ ಲೋಕಕ್ಕೆ ತರುವುದು ಹೊಸತನದ ರೂಪಕಗಳಾಗಿವೆ. ಇಂಗ್ಲೀಷಿನ flying kiss ಎನ್ನುವ ಮಾತನ್ನು ಕವಿತೆಯ ಸಾಲಾಗಿಸುವ ಕವಿ

“ದೂರದಿಂದ ಕಳಿಸಿದ

ಮುತ್ತು

ಬಾಯಾರಿಕೆ ಹೆಚ್ಚಿಸಿದವು’’

                  (ಪ್ರೇಮದ ಹನಿಗಳು)

ನೀರ ಹನಿ ಬಿದ್ದಾಗ ಮುಟ್ಟಿದರೆ ಮುನಿ ( ನಾಚಿಕೆ ಮುಳ್ಳಿನ ) ಎಲೆ ನಾಚುವಂತೆ `ಹಠಾತ್ ಬಿದ್ದ ಮಳೆಗೆ ದಂಡೆ ನಾಚುತ್ತದೆ’ ಎನ್ನುತ್ತಾರೆ.

ಪ್ರೊ.ವಿ.ಕೆ.ಗೋಕಾಕ್ ತಮ್ಮ ಕವಿತೆಯೊಂದರಲ್ಲಿ

“ಇಲ್ಲಿ ಬಾಳಿಗೆ ಸಂತಸವೇ ಗುರಿ

ಇಲ್ಲಿ ಭೋಗವೇ ಯೋಗವು’’ ಎಂದಂತೆ ಈ ಕವಿಯೂ ಕೂಡ

“ಸೆರಗ ನೆರಳಲ್ಲಿ ಬಚ್ಚಿಟ್ಟು ಕೊಳ್ಳಬೇಕೊಮ್ಮೆ’’ ಎನ್ನುವ ಕವಿತೆಯಲ್ಲಿ

“ಸೆರಗ ನೆರಳಲ್ಲಿ ಪ್ರೀತಿ ಪಲ್ಲವಿಯ ಹಾಡಬೇಕೊಮ್ಮೆ

ನಶ್ವರತೆಗೂ ಮುನ್ನ ಬದುಕ ಮೋಹಿಸಬೇಕೊಮ್ಮೆ’’ ಎನ್ನುತ್ತ ಅದಮ್ಯ ಪ್ರೀತಿಯ ಜೊತೆ ಬದುಕನ್ನು ಸುಂದರಗೊಳಿಸುತ್ತಾರೆ.

“ಈಗ

ಬಿರು ಬೇಸಿಗೆ

ನೀ ಹೋದ ಮೇಲೆ’’ ( ಹನಿಗಳು)

ಯಾರೇ ಕೈ ಹಿಡಿದುಕೊಂಡು ನಡೆಯಲಿ

ದಂಡೆ ಪುಳಕಗೊಳ್ಳುತ್ತದೆ

ಪ್ರೇಮ ಎಂದರೆ

ಅದಕೆ ರೋಮಾಂಚನ’’ (ಹನಿಗಳು)

ಇಲ್ಲಿ ದಂಡೆಯನ್ನು ತನ್ನ ಪ್ರೀತಿಯ ಭಾಗವಾಗಿಸುತ್ತಾರೆ ಮತ್ತು ದಂಡೆಯ ಆಹ್ಲಾದಕರ ಸಂಜೆ ಕವಿತೆಯಾಗಿಸುವುದಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸಂಕಲನದ ಬಹುತೇಕ ಕವಿತೆಗಳು `ಹನಿ’ಗಳನ್ನು ಒಳಗೊಂಡಿವೆ.ಹನಿಗಳನ್ನು  `ಇಬ್ಬನಿ’ ಎನ್ನುವ ಕವಿ ಹನಿಗಳನ್ನೂ ಕವಿತೆಯಾಗಿಸಿದ್ದಾರೆ.

ಸಂಕಲನದ ಬಹುತೇಕ ಕವಿತೆಗಳು ವಿಪ್ರಲಂಭ ಶ್ರಂಗಾರದ ವಿಪ್ರ ಯೋಗದಲ್ಲಿ ಮಿಂದು ಭೋಗದ ಕಲ್ಪನೆಯನ್ನು, ಭಾವ ಸಮಾಧಿಯನ್ನು ಅರಸುವ ಆ ಮೂಲಕ ಪ್ರೀತಿಯ, ಪ್ರಣಯದ ಭಾವಗಳನ್ನು ವ್ಯಕ್ತಪಡಿಸುವ ಕ್ರಮ ವಿಶಿಷ್ಠವಾದುದಾಗಿದೆ. ಈ ಕೆಳಗಿನ ಕವಿತೆಯನ್ನು ನೋಡಿ..

“ಕಣಿವೆ ನಿತಂಬಗಳು ಮತ್ತೇರಿವೆ

ಬಾ ಸ್ವರ್ಗವೇ

ಒಮ್ಮೆ ಬಂದುಬಿಡು ಮತ್ತೆ

ಕನಸಿನರಮನೆಯ ಮತ್ತೆ ಕಟ್ಟೋಣ (ಕೆನ್ನೆಗಳು ಏಕಾಂತ ಅನುಭವಿಸುತ್ತಿವೆ)

ಕಣಿವೆಗಳ ಶೃಂಗಾರ ಮಾಡೋಣ’’

“ಭೂಮಿಯ ಬಿರುಕಿಗೆ ಬೆರಳಿಟ್ಟ ಕ್ಷಣ

ಗಾಢ ಉನ್ಮಾದ,ಕಡಲು,ನದಿ ಉಲ್ಲಾಸಗೊಂಡ ಘಳಿಗೆ’’

ಎನ್ನುವ ಕವಿತೆ ಶ್ರಂಗಾರದ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಲಂಕೇಶ್ `ನೀಲು’ ಪದ್ಯಗಳನ್ನು ನೆನಪಿಸುತ್ತವೆ. ಅವುಗಳ ಪ್ರಭಾವ ಕೂಡ ಇಲ್ಲದಿಲ್ಲ!

“ ಒಂದು ಹಣತೆ ಹಚ್ಚಿದೆ

ಕತ್ತಲು ಬೆದರಿತು’’

“ಎಷ್ಟೊಂದು ದೀಪ

ಹಚ್ಚಿಟ್ಟೆ

ಪ್ರೀತಿ ಅರಳಿತು’’

“ಹಣತೆ ಹಚ್ಚಿದೆ

ಹೊಸಿಲು ನಕ್ಕಿತು’’

ಈ ಸಾಲುಗಳು ಒಂದು ಕ್ಷಣ `ವಾಹ್’ ಎನಿಸಿ ನಿಲ್ಲಿಸಿಬಿಡುತ್ತವೆ.

“ಬುದ್ಧನಾಗಲಾರೆ’’ ಎಂಬ ಕವಿತೆಯೂ ಸಹ ಸದಾ ಶ್ರಂಗಾರ ಭಾವದಲ್ಲಿ ಉಳಿಯುವೆ ಎನ್ನುವಂತೆ ಸಾರುತ್ತಾರೆ.

“ಬೋದಿಲೇರ್ ಮತ್ತೆ ಮತ್ತೆ ನೆನಪಾದ’’ ಎನ್ನುವ ಕವಿತೆ ಗಮನ ಸೆಳೆಯುವುದಷ್ಟೇ ಅಲ್ಲಿ ಬೋದಿಲೇರ್‌ನ ಪ್ರಭಾವ ಕೂಡ ಇರುವುದು ಸ್ಪಷ್ಟ.

“ಸದಾ ಏನನ್ನಾದರೂ ಕುಡಿದಿರು

ಎಂದ

ಕಡು ವ್ಯಾಮೋಹಿ ಮನುಷ್ಯ ಕವಿ

ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು’’

ಎನ್ನುವ ಕವಿ ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸುವ,ಆರಾಧಿಸುವ ಮನಸ್ಸನ್ನು ಸ್ವಚ್ಛಂದ ಗಾಳಿಯಲಿ ಹರಿಬಿಡುವ ಬೋದಿಲೇರ್ ಈ ಕವಿಯ ಆರಾಧ್ಯ ದೈವವಾಗಿದ್ದಾನೆ.

“ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆ ಹೋಗಿದೆ‘’ ಎಂಬ ದೀರ್ಘ ತಲೆಬರಹದ ಈ ಕವಿತೆ ಮದೋನ್ಮತ್ತ ಕಾಮವನ್ನು ಪ್ರತಿನಿಧಿಸುತ್ತದೆ. ನವ್ಯದ ಆರಂಭದಲ್ಲಿ ರಾರಾಜಿಸಿದ ಲೈಂಗಿಕ ಪ್ರಜ್ಞೆ ಭೂಮಿ, ಮಳೆಯಲ್ಲಿ ಏಕೀಭವಿಸಿ ಬದುಕಿನ ಸೂತ್ರದಲ್ಲಿ ಪ್ರತ್ಯೇಕಗೊಳಿಸಲಾರದಷ್ಟು ಹದವಾಗಿ ಬೆರೆತಿದೆ. ಶೃಂಗಾರದ ಮಡುವಲ್ಲಿ ಭೂಮಿ ಮೂರು ಬಾರಿ ಮಿಂದು ಇರಳಿಡೀ ಅನುಭವಿಸಿದ ಸುಖದ ಪರಾಕಾಷ್ಠೆಯ ಪರಮಾವಧಿಯಾಗಿದೆ. ಈ ಕವಿತೆ, ಕವಿ ಬರೀ ಪ್ರೀತಿಯ ಕಡುಮೋಹಿ ಅಷ್ಟೇ ಅಲ್ಲ, ಪ್ರಣಯದ ಕಡುಮೋಹಿಯೂ ಹೌದು ಎಂಬುದನ್ನು ನಿರೂಪಿಸುತ್ತದೆ.

ಉಳಿದಂತೆ, ಭೂಮಿತಾಯಿ ತಲೆ ಬಾಚಿಕೊಳ್ಳುವ ಸಮಯ, ಉಳಿದದ್ದು ದಂಡೆ ವಿರಹ, ದಂಡೆಯ ಜೊತೆ ಮಾತುಬಿಟ್ಟೆ, ಶರಧಿ ಸಾಕ್ಷಿ, ದಂಡೆಯಲ್ಲಿನ ಹಕ್ಕಿ ನಾಚಿತು, ಎದೆಗೆ ಬಿದ್ದ ಅಕ್ಷರವ ಹೊತ್ತು, ಮುಂತಾದ ಕವಿತೆಗಳು ಅವುಗಳ ಭಾಷಾ ಪ್ರಯೋಗದಿಂದ ಗಮನ ಸೆಳೆಯುತ್ತವೆ. ಬದುಕನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುವ’ ನೀರಲಿ ಹೊಳೆ ಹೊಳೆವ ನಿರಿಗೆ ನೆರಳ ಹಿಡಿದಂತೆ’ ಎನ್ನುವ ಕವಿತೆಯಲ್ಲಿ ಕಾಣುತ್ತೇವೆ.

`ಬದುಕನ್ನು ಹೇಗೆಂದರೆ ಹಾಗೆ ವಿವರಿಸಲಾಗದು’ ಎನ್ನುವ ಕವಿ, ದಕ್ಕುವ ದಕ್ಕದೇ ಇರುವ ಸಂದರ್ಭಗಳ ನಡುವೆ ಕವಿತೆಯನ್ನು ಹುಡುಕುತ್ತಾರೆ.

“ನಡೆದಷ್ಟೇ ದಾರಿ ತೆರೆದುಕೊಂಡಿತು

ನಿಂತಲ್ಲೇ ನಿಂತು

ಕಲ್ಪಿಸಿ ಭಾವಿಸಿ ಬಯಸುವುದಲ್ಲ

ಬದುಕು’’

“ಪಿತೂರಿಯಲ್ಲಿ ದಿನವಿಡೀ ಕಳೆವ

ಹುಲು ಮಾನವರ ಕಂಡು

ಕಡಲು ಬಯಲು ನಗುತ್ತಿತ್ತು’’

“ಆಕೆ ಸಿಕ್ಕಿದ್ದಳು

ಬೆಳಕಿನ ಜೊತೆ ಮಾತಾಡಿದಂತಾಯಿತು’’

“ಮಗು ಮಲಗಿತ್ತು ಅದರ

ಮುಖ ಮುದ್ರೆಯಲ್ಲಿ

ಬುದ್ಧ ಕಂಡ’’

“ಮುಗಿಲ ದುಃಖ ಭೂಮಿಯ ಬಾಯಾರಿಕೆ

ಮುಗಿಯುವಂತದ್ದಲ್ಲ’’

“ಭೂಮಿ ಮಳೆ ಮಧ್ಯೆ ಗಾಳಿ ಸುಳಿಯಿತು

ಗಿಡಮರ ಹಕ್ಕಿಗಳು ಆಡಿಕೊಂಡವು’’

“ಶಬ್ದಗಳು ಕರಗುತ್ತಿವೆ ತಣ್ಣಗೆ

ಸುರಿವ ಮಳೆಯಲ್ಲಿ’’

“ಮಳೆ ನೆಲದೊಂದಿಗೆ ಪಿಸುಮಾತನಾಡುತ್ತ ಶೃಂಗಾರದ ಮತ್ತಿನಲ್ಲಿರುವಾಗ

ಭೂಮಿಯು ನಗ್ನ ನಾನೂ ನಗ್ನ’’

“ಮಾತಿಗೆ ಮಾತು ಬೆಸುಗೆಯಾದವು

ಹೃದಯ ಹೂವಾಯಿತು’’

“ಒಮ್ಮೆ ಗುಡುಗಿದಳು

ಭೂಮಿ ನಡುಗಿತು

ಕ್ಷಮೆ ಕೋರಿದೆ

ಕರುಣೆಯ ಸಾಗರವಾದಳು’’

ಈ ಎಲ್ಲಾ ಸಾಲುಗಳನ್ನು ಗಮನಿಸಿದರೆ ಕವಿ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಸಾಲು ವಾಚ್ಯವಾಗದ ಹಾಗೆ ಭಾಷೆಯ ಬಳಕೆಯಾಗಿದೆ. ಸಣ್ಣ ಸಣ್ಣ ಚಿತ್ರಗಳಿಂದ ಮನಸ್ಸನ್ನಾವರಿಸುವ `ಸುಳಿವ ಶಬ್ದವ ಹಿಡಿದು’ ಕವಿತೆ ಕೊನೆಗೆ ಪ್ರೀತಿಯ ಅಗಾಧತೆಯನ್ನು ಸೂಚಿಸುತ್ತದೆ. ಸಂಕಲನದ ಕೊನೆಯ ಕವಿತೆ  “ಈಗೀಗ..’’ ಭಾಷೆಯ ಚಂದ ಸಾರುತ್ತದೆ.

“ತಣ್ಣಗೆ ಬೀಸುವ ಗಾಳಿಯಲಿ

ನಿಟ್ಟುಸಿರದ್ದೇ ಕಾರುಬಾರು’’

“ಬಟಾ ಬಯಲು ಬಿದ್ದಿರುವ ಆಕಾಶದಲಿ

ಕಂಗಾಲಾದ ಕನಸುಗಳು’’

“ಗಹಗಹಿಸಿ ನಗುವ ಬೆಂಕಿಯಲಿ

ನಿನ್ನದೇ ಅನುರಾಗದ ನೆನಪುಗಳು’’

ಈ ಸಾಲುಗಳು ಕೊಡುವ ಸಣ್ಣ ಸಣ್ಣ ಚಿತ್ರಗಳು ಅರ್ತಗರ್ಭಿತವಾಗಿವೆ. ಒಟ್ಟಾರೆ “ವಿರಹಿ ದಂಡೆ’’ಯ ಕವಿತೆಗಳು ಕವಿಯ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ.ಕಥೆಗಾರರಾಗಿ ಗುರುತಿಸಿಕೊಂಡ ಹರಪನಹಳ್ಳಿಯವರು ಕೊನೆಗೆ ಕಾವ್ಯದ ಕಡೆಗೆ ಹೊರಳಿ ಬದುಕಿನ ಚಿರಂತನ ಪ್ರೀತಿಯನ್ನು ಮೊಗೆ ಮೊಗೆದು ಕೊಡುತ್ತ, ಎಲ್ಲಿಯೂ ವಾಚ್ಯವಾಗದ ಹಾಗೆ ಬರೆಯುತ್ತ ;  ಪ್ರೀತಿಯ ಬಗೆಗಿನ ಕಡು ಮೋಹವನ್ನು ಪ್ರಕಟಿಸುತ್ತಾರೆ. ಹರಪನಹಳ್ಳಿಯಿಂದ ಉದ್ಯೋಗ ಅರಸಿ ಕಡಲ ದಂಡೆಗೆ ಬಂದು ಉತ್ತರ ಕನ್ನಡದವರೇ ಆಗಿದ್ದಾರೆ. ಮುನ್ನುಡಿ ಬರೆದಿರುವ ಹಿರಿಯ ಕವಿ ಬಿ.ಎ.ಸನದಿ,ಮೋಹನ್ ಹಬ್ಬು, ಎಂ.ಆರ್. ಕಮಲ ಕವಿಯ ಕಾವ್ಯ ಪ್ರಜ್ಞೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಈ ಕವಿಯಿಂದ ಇನ್ನಷ್ಟು ಸಂಕಲನಗಳು ಬರಲಿ. ಪ್ರೀತಿಯ ಮೇರೆ ದಾಟಿ ಬದುಕನ್ನು ಗಂಭೀರವಾಗಿ ಚಿಂತಿಸುವ, ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದಿಸುವ ಕವಿತೆಗಳನ್ನು ಬರೆಯಲೆಂದು ಎದೆಯ ಹಾರೈಕೆ.

*********************************************************

 – ಫಾಲ್ಗುಣ ಗೌಡ ಅಚವೆ.

ಚಂದ್ರ ಮತ್ತು ನಾನು…

One thought on “ವಿರಹಿ ದಂಡೆ

Leave a Reply

Back To Top