ಗಝಲ್
ಪ್ರತಿಮಾ ಕೋಮಾರ


ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡು
ನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು
ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡು
ಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು
ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನು
ನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು
ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣ
ಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು
“ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನ
ಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು
********************************