‘ಶಾಂತಿ ಮಾನವ’ ಶಾಸ್ತ್ರಿ

ಲೇಖನ

ಶಾಂತಿ ಮಾನವ’ ಶಾಸ್ತ್ರಿ

ಚವೀಶ್ ಜೈನ್ ಚಪ್ಪರಿಕೆ

Lal Bahadur Shastri Birth Anniversary Know ten big points related to life  of Shastri Ji

ಭಾರತ ಎಂಬ ಈ ದೇಶ ಸಾವಿರಾರು ಮಹಾಪುರುಷರನ್ನು ಕಂಡಿದೆ. ಅಂತಹ ಮಹಾನ್ ನಾಯಕರನ್ನೂ ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಎರಡೂ ವರ್ಗಗಳು ಸಾಮಾನ್ಯವಾಗಿ ಸಮಾಜದಲ್ಲಿ ಇರುತ್ತವೆ. ಆದರೆ ಕೆಲವು ವ್ಯಕ್ತಿಗಳಿದ್ದಾರೆ, ಅವರನ್ನು ಎಲ್ಲಾ ವರ್ಗದವರು, ಎಲ್ಲಾ ಜಾತಿ – ಮತದವರು, ಬಲಪಂಥೀಯರು, ಎಡಪಂಥೀಯರು, ಎಲ್ಲಾ ಪಕ್ಷಗಳು ಒಟ್ಟಾರೆ ಸಮಸ್ತ ದೇಶ ಒಪ್ಪಿಕೊಳ್ಳುತ್ತದೆ ಮತ್ತು ಗೌರವಿಸುತ್ತೆ. ಅಂತಹ ಮಹಾತ್ಮರಲ್ಲಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳುವವರು, ಈ ದೇಶದ ಶಾಂತಿ ಮಾನವ ಲಾಲ್ ಬಹದ್ದೂರ್ ಶಾಸ್ತ್ರಿ. ಅಂತಹ ನಾಯಕರು ಇತಿಹಾಸದ ಎಲ್ಲಾ ಪುಟಗಳಲ್ಲಿ ಆವರಿಸಿಕೊಂಡಿರುವಾಗ, ವಿಪರ್ಯಾಸ ಎಂಬಂತೆ ಶಾಸ್ತ್ರೀಜೀ ಮಾತ್ರ ಇತಿಹಾಸ ಪುಟದಲ್ಲಿ ಮರೆಯಾಗಿದ್ದಾರೆ.  ಯಾವ ಇತಿಹಾಸದಲ್ಲೂ ಇಂತಹ ಮೇರು ನಾಯಕನನ್ನು ಅಷ್ಟಾಗಿ ಓದುವುದಿಲ್ಲ.

     ಆದ್ದರಿಂದ ಈ ಸಂದರ್ಭದಲ್ಲಿ ಶಾಸ್ತ್ರೀಜೀಯವರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಇವರು ಹುಟ್ಟಿದ್ದು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಿಯಲ್ಲಿ. ಅಂದರೆ ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೆ ಇವರ ಜನ್ಮದಿನ. ಆದರೆ ಸಹಜವಾಗಿ ಅಕ್ಟೋಬರ್ 2 ಅಂದಾಕ್ಷಣ ಗಾಂಧೀಜಿ ಮತ್ತು ಗಾಂಧಿ ಜಯಂತಿ ಮಾತ್ರ ನೆನಪಾಗುತ್ತದೆ ವಿನಃ ಶಾಸ್ತ್ರೀಜೀ ನೆನಪಾಗುವುದಿಲ್ಲ. ಹಾಗಂತ ಗಾಂಧಿ ಜಯಂತಿಯ ನೆಪದಲ್ಲಿ ಶಾಸ್ತ್ರೀಯನ್ನು ಮರೆಯುತ್ತೇವೆ ಅಥವಾ ಗಾಂಧಿ ಹೆಸರಲ್ಲಿ ಶಾಸ್ತ್ರಿ ಮರೆಯಾಗಿದ್ದಾರೆ ಎಂದು ಅರ್ಥವಲ್ಲ. ಬಹುಶಃ ಬೇರೆ ಯಾವುದಾದರೂ ದಿನ ಶಾಸ್ತ್ರೀ ಹುಟ್ಟಿದ್ದರೆ ಅವರ ಜನ್ಮಜಯಂತಿಯೇ ಇರುತ್ತಿರಲಿಲ್ಲವೆನೋ!  ಆದರೆ ಈ ದಿನ ಜನಿಸಿದ್ದಕ್ಕೆ ಗಾಂಧಿ ಜೊತೆಗೆ ಇವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುತ್ತೇವೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದಂತವರು. ಇವರ ತಂದೆ ಶಿಕ್ಷಕರಾಗಿದ್ದರು, ಆದರೆ ಶಾಸ್ತ್ರಿ ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ನಂತರ ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡಿದ್ದ ಇವರು 16ನೇ ವಯಸ್ಸಿಗೆ ಶಿಕ್ಷಣ ನಿಲ್ಲಿಸಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ನಂತರ ರಾಷ್ಟ್ರೀಯ ಹೋರಾಟಗಳಲ್ಲಿ ತಮ್ಮನ್ನು ತಾವು  ಸಕ್ರೀಯವಾಗಿ ತೊಡಗಿಸಿಕೊಂಡು, ಹಲವಾರು ಬಾರಿ ಸೆರೆವಾಸ ಅನುಭವಿಸಿದರು.

  ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಪೋಲೀಸ್ ಖಾತೆಯನ್ನು ವಹಿಸಿಕೊಂಡರು. 1951ರಲ್ಲಿ  ಲೋಕಸಭೆಗೆ ಆಯ್ಕೆಯಾಗಿ ರೈಲ್ವೆ ಖಾತೆಯನ್ನು ವಹಿಸಿಕೊಂಡರು. ಆದರೆ ಅವರ ಅವಧಿಯಲ್ಲಿ ಆದ ಒಂದು ರೈಲು ಅಪಘಾತಕ್ಕೆ ವೈಯಕ್ತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದರು. ಹತ್ತಾರು ಹಗರಣ, ಭ್ರಷ್ಟಾಚಾರ ಪ್ರಕರಣಗಳಿದ್ದರು ಅಧಿಕಾರದಲ್ಲೇ ಮುಂದುವರೆಯುವ ಇವತ್ತಿನ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಸ್ತ್ರೀಜೀಯವರ ವ್ಯಕ್ತಿತ್ವ ಅರಿಯಬೇಕು. ನಂತರ ಮತ್ತೆ ಕ್ಯಾಬಿನೆಟ್ ಪ್ರವೇಶಿಸಿದ ಇವರು ಸಾರಿಗೆ ಮಂತ್ರಿಯಾಗಿ, ನಂತರ 1961ರಲ್ಲಿ ಗೃಹ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

   ನೆಹರು ನಿಧನದ ನಂತರ 1964 ಜೂನ್ 9 ರಂದು ಭಾರತದ 2ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾಗಿ 17 ತಿಂಗಳ ಅವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ ಅಪೂರ್ವವಾದುದು. ಅವರು ಪ್ರಧಾನಿಯಾದಾಗಲು ಕೂಡ ಅವರ ಬಳಿ ಸ್ವಂತ ಕಾರಿರಲಿಲ್ಲ. ನಂತರ ಮನೆಯವರ ಒತ್ತಾಯದ ಮೇರೆಗೆ 12,000 ರೂಪಾಯಿಗಳ ಫಿಯಟ್ ಕಾರೊಂದನ್ನು ಖರೀದಿಸಿದರು. ಆಗ ಅವರ ಬಳಿ ಅಷ್ಟು ಹಣವಿಲ್ಲದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 5,000 ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಶಾಸ್ತ್ರೀ ಸಾವಿನ ನಂತರ ಬ್ಯಾಂಕ್ ಅವರ ಸಾಲವನ್ನು ಮನ್ನಾ ಮಾಡಿತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಸಾಲವನ್ನು ಮರುಪಾವತಿಸಿದರು. ಇದು ಈ ದೇಶ ಮತ್ತು ಶಾಸ್ತ್ರೀ ಕುಟುಂಬದ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ.

   ನಿಜವಾಗಿಯೂ ಸ್ವಾಭಿಮಾನ ಎಂಬ ಪದಕ್ಕೆ ಅರ್ಥವೇ ಶಾಸ್ತ್ರೀಜೀ. ಸವಾಲುಗಳಿಂದ ಕೂಡಿದ್ದ ಅಂತಹ ಕಠಿಣ ಸಂದರ್ಭದಲ್ಲೂ ದೇಶದ ಗೌರವ ಉಳಿಸಿದ್ದರು. ಸ್ವಾವಲಂಬಿ ರಾಷ್ಟವನ್ನು ಕಟ್ಟುವ ಉದ್ದೇಶ ಅವರದ್ದು. ಇವತ್ತು ನಾವು ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಿದ್ದೇವಲ್ಲ, ಈ ಚಿಂತನೆಯನ್ನು ಶಾಸ್ತ್ರೀಜೀ ಆವತ್ತೇ ಮಾಡಿದ್ದರು. ಕೈಗಾರಿಕೆ, ಕೃಷಿ, ಸೈನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ‘ಕ್ಷೀರ ಕ್ರಾಂತಿ’  ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಗೆ ಕಾರಣರಾದರು.

       ಶಾಸ್ತ್ರೀ ಜೀವನದುದ್ದಕ್ಕೂ ಸರಳತೆ ಎಂಬ ಅಂಶವನ್ನು ಎಲ್ಲೂ ಮರೆಯಲಿಲ್ಲ. ಯಾವತ್ತೂ VVIP ಎಂಬ ಕಾರ್ಡನ್ನು  ತೋರಿಸಲಿಲ್ಲ. ಮಗನನ್ನು ಕಾಲೇಜಿಗೆ ಸೇರಿಸುವಾಗ  ಎಲ್ಲರಂತೆ ತಾವು ಸಹ  ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ದೇಶದ ಸಾಮಾನ್ಯ ಜನರೊಂದಿಗೆ ಅತಿಸಾಮಾನ್ಯರಾಗಿ ಶಾಸ್ತ್ರೀ ಬದುಕುತ್ತಿದ್ದರು.

    ಶಾಸ್ತ್ರೀಜೀ ಪ್ರಧಾನಿಯಾದಾಗ ದೇಶದಲ್ಲಿ ನೂರಾರು ಸಮಸ್ಯೆಗಳಿದ್ದವು. ಅದನ್ನು ಅತ್ಯಂತ ಸಮರ್ಥವಾಗಿ ಎದುರಿಸಿದರು. ಒಂದೆಡೆ ಬಡತನ ಮತ್ತೊಂದೆಡೆ ಪಾಕಿಸ್ತಾನದ ಉಪಟಳ. ಪಾಕಿಸ್ತಾನ ಮತ್ತೆ 1965ರಲ್ಲಿ ಭಾರತದ ಮೇಲೆ ಯುದ್ಧ ಸಾರಿತು. ಕಠಿಣ ಪರಿಸ್ಥಿತಿಯಲ್ಲಿ ದೇಶದ ಸೈನಿಕರ ಜೊತೆ ನಿಂತ ಶಾಸ್ತ್ರೀ “ಜೈ ಜವಾನ್, ಜೈ ಕಿಸಾನ್” ಘೋಷಣೆ ಮೊಳಗಿಸಿದರು.  ಇದು ಭಾರತೀಯ ಸೈನಿಕರಲ್ಲಿ ಹೊಸ ಉತ್ಸಾಹ ತುಂಬಿತು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಮಾಡಲು ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟರು. ಆವಾಗಲೇ ಈ ದೇಶಕ್ಕೆ ಮತ್ತು ಹೊರ ಜಗತ್ತಿಗೆ ಶಾಂತಿ ಮಾನವನ ದಿಟ್ಟತನದ ಅರಿವಾಗಿದ್ದು. ಶಾಂತಿಗೆ ಭಂಗವಾದಾಗ ಶಾಸ್ತ್ರಿ ಸುಮ್ಮನೆ ಕೂರಲಿಲ್ಲ. ಬಹುಶಃ ಶಾಸ್ತ್ರಿ, ‘ಅಹಿಂಸೆ’ ಎಂಬ ಪದದ ಸ್ಪಷ್ಟವಾದ ಅರ್ಥವನ್ನು ಅರಿತಿದ್ದರು. ಅಹಿಂಸೆ ಎಂದರೆ ‘ಹಿಂಸಾ ನ ಕರೋ, ಹಿಂಸಾ ನ ಸಹೋ’ ಅಂದರೆ ಹಿಂಸೆಯನ್ನು ಮಾಡಬಾರದು ಮತ್ತು ಹಿಂಸೆಯನ್ನು ಸಹಿಸಿಕೊಳ್ಳಬಾರದು ಎಂದು. ಭಾರತದ ಈ ಅಹಿಂಸಾ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿದರು. ಪರಿಣಾಮ ಭಾರತೀಯ ಸೈನ್ಯ ಲಾಹೋರ್ ವರೆಗೂ ನುಗ್ಗಿ ಪಾಕಿಸ್ತಾನಕ್ಕೆ ಉತ್ತರ ನೀಡಿತ್ತು. ಆದರೆ ನಾವು ಈ ಯುದ್ಧದ ಗೆಲುವನ್ನು ಮರೆತೇಬಿಟ್ಟಿದ್ದೇವೆ.

    ಯುದ್ಧದ ಮಧ್ಯೆ ಅಮೇರಿಕಾ ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯ ಮಾಡಿತು. ಯುದ್ಧ ಮುಂದುವರೆಸಿದರೆ, ಭಾರತಕ್ಕೆ ಗೋಧಿಯ ರಫ್ತನ್ನು ನಿಲ್ಲಿಸುವುದಾಗಿ ಹೇಳಿತು. ಅದರೆ ಶಾಸ್ತ್ರೀ ಅಮೇರಿಕಾದ ಬೆದರಿಕೆಗೆ ಬಗ್ಗಲಿಲ್ಲ. ನಿಮ್ಮ ದೇಶ ಕಳಿಸುವ ಗೋಧಿಯನ್ನು ನಮ್ಮ ದೇಶದಲ್ಲಿ ಪ್ರಾಣಿಗಳು ಮೂಸಿ ನೋಡುವುದಿಲ್ಲ ಎಂದು ಉತ್ತರಿಸಿದರು. ಶಾಸ್ತ್ರಿ  ದೇಶಕ್ಕೋಸ್ಕರ ಪ್ರತಿನಿತ್ಯ ತಮ್ಮ ರಾತ್ರಿ ಊಟವನ್ನು ತ್ಯಜಿಸಿದರು. ನಂತರ ದೇಶದ ಜನರಲ್ಲಿ ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸುವಂತೆ ಮನವಿ ಮಾಡಿಕೊಂಡರು. ಇದು ‘ಸೋಮವಾರದ ಉಪವಾಸ’ ಎಂದು ಪ್ರಸಿದ್ಧವಾಯಿತು. ದೇಶದ ಜನ ಶಾಸ್ತ್ರೀ ಮಾತಿಗೆ ಸಹಕರಿಸಿದರು.

  ಭಾರತೀಯ ಸೈನ್ಯ ಲಾಹೋರ್ ಗೆ ನುಗ್ಗುತ್ತಿದ್ದಂತೆ ರಷ್ಯಾದ ನೇತ್ರತ್ವದಲ್ಲಿ, ತಾಷ್ಕೆಂಟ್ ನಲ್ಲಿ ಒಪ್ಪಂದ ಏರ್ಪಡಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕ್ ಪ್ರಧಾನಿ ಅಯ್ಯುಬ್ ಖಾನ್ ಒಪ್ಪಂದಕ್ಕೆ ಸಹಿ ಹಾಕಿದರು. ಮೊದಲೇ ತಯಾರಾಗಿದ್ದ ಒಡಂಬಡಿಕೆಗಳನ್ನು ನೋಡಿ ಶಾಸ್ತ್ರೀಜೀ ಸಹಿ ಹಾಕಲು ನಿರಾಕರಿಸಿದರೂ ಕೂಡ, ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಭಾರತೀಯ ಸೈನ್ಯ ಪ್ರಾಣ ಪಣಕ್ಕಿಟ್ಟು ಹೋರಾಡಿ ಗೆದ್ದ ಭಾಗವನ್ನೇ ಬಿಟ್ಟುಕೊಡಬೇಕಾಗಿ ಬಂತು. ಭಾರತೀಯ ಸೈನ್ಯ ಯುದ್ಧವನ್ನು ಗೆದ್ದರೂ ಕೂಡ, ಗೆಲುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅದೇ ರಾತ್ರಿ, 11 ಜನವರಿ 1966 ರಂದು  ತಾಷ್ಕೆಂಟ್ ನಲ್ಲೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅಸ್ತಂಗತರಾದರು. ಸರ್ಕಾರಿ ಮೂಲಗಳು ಶಾಸ್ತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದವು. ಆದರೆ ದೇಶದ ಜನ ಮತ್ತು ಶಾಸ್ತ್ರಿ ಕುಟುಂಬ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ನೇತಾಜಿಯಂತೆ ಶಾಸ್ತ್ರೀಜೀಯವರ ಸಾವು ನಿಗೂಢವಾಯಿತು. ಸರ್ಕಾರ ಈ ಕುರಿತಂತೆ ಸರಿಯಾದ ತನಿಖೆ ನಡೆಸಲೇ ಇಲ್ಲ. ಖ್ಯಾತ ಲೇಖಕ ಅನೂಜ್ ಧರ್ ‘YOUR PRIME MINISTER IS DEAD’  ಎಂಬ ತಮ್ಮ ಪುಸ್ತಕದಲ್ಲಿ ಶಾಸ್ತ್ರೀ ಸಾವಿನ ಸಂಶಯಗಳ ಕುರಿತಂತೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಟ್ಟಾರೆ ದೇಶ ಸತ್ಯವನ್ನು ಅರಿಯಬೇಕಿದೆ. ಶಾಸ್ತ್ರೀಜೀ ಅಂತ್ಯಕ್ಕೆ ನ್ಯಾಯ ಸಿಗಬೇಕಿದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ 17 ತಿಂಗಳ ಅಧಿಕಾರ, ಅವರ ವ್ಯಕ್ತಿತ್ವ, ಈ ದೇಶ ಎಂದಿಗೂ ಸ್ಮರಿಸಿಕೊಳ್ಳುವಂತದ್ದು.

************************************

Leave a Reply

Back To Top