ಗಿರಗಿಟ್ಟಿ

ಪುಸ್ತಕ ಪರಿಚಯ

ಗಿರಗಿಟ್ಟಿ

ಲೇಖಕರು: ತಮ್ಮಣ್ಣ ಬೀಗಾರ. ‌
ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.
ಮೊಬೈಲ ನಂ: ೯೮೮೬೦೨೬೦೮೫
ಪುಟ: ೧೦೦.
ಬೆಲೆ:೯೦ ರೂ.
ಪ್ರಕಟಣೆ:೨೦೨೦

ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ ಪ್ರಶ್ನೆಗೆ ಹಿಂಸೆಯ ಆಚೆಗೂ ಇರುವ ಬಹಳಷ್ಟು ವರ್ತನೆಗಳನ್ನು ಕಾಣಿಸುವುದು ಮುಖ್ಯವಾಗಿದೆ ಎನ್ನುವುದರ ಮೂಲಕ ನನಗೆ ತುಂಬಾ ಅಚ್ಚರಿ ಮೂಡಿಸಿದವರು. ಕಲೆ ಮತ್ತು ಸಾಹಿತ್ಯಗಳೆರಡನ್ನು ಸಮ ಸಮವಾಗಿ ದುಡಿಸಿಕೊಂಡ ಕ್ರಿಯಾಶೀಲ ಸ್ನೇಹ ಜೀವಿಗಳು. ಇತ್ತೀಚೆಗೆ ಪ್ರಕಟವಾದ ಉಲ್ಟಾ ಅಂಗಿಯ ನಂತರ ಇದೀಗ “ಗಿರಗಿಟ್ಟಿ” ಎನ್ನುವ ೧೫ ಕತೆಗಳನ್ನು ಹೊಂದಿರುವ ಸಂಕಲನದ ಮೂಲಕ ನಮ್ಮ ಮುಂದಿದ್ದಾರೆ. ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆ ಈ ಕತೆಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದ್ದರೂ ಈ ಬಾರಿ ಭಾವನಾತ್ಮಕ ಅಂಶಗಳೊಂದಿಗೆ ಪುಳಕಿತಗೊಳಿಸುತ್ತಾರೆ. ಇದಕ್ಕೆ ‘ಹಸಿವಾಗಿಲ್ವಾ’ ಕತೆಯಲ್ಲಿ ಹಸಿವನ್ನು ಕುರಿತು ತಾಯಿ ಆಡುವ ಮಾತು ನಡೆದುಕೊಳ್ಳುವ ರೀತಿಯ ಮೂಲಕ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳು ಅವರ ಮತ್ತು ಓದುಗರ ಅಂತರಂಗವನ್ನು ಕಲಕುತ್ತವೆ. ನನ್ನ ಒಂದು ಅವಲೋಕನದ ಮೂಲಕ ಕಪ್ಪೆ ಇವರ ಬರವಣಿಗೆಯಲ್ಲಿ ಬಹು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಳ್ಳುವ ಬತ್ತದ ಒರತೆಯಾಗಿದೆ. ಇದಕ್ಕೆ “ಕಪ್ಪೆಯ ಕಣ್ಣು” ಕಥೆ ಉದಾಹರಣೆಯಾಗಿದೆ.


ಮಕ್ಕಳು ಮತ್ತು ದೊಡ್ಡವರ ನಡುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ತೌಲನಿಕವೆಂಬಂತೆ “ಕತ್ತಲು” ಕತೆಯ ಮೂಲಕ ಚಿತ್ರಿಸುವ ಇವರು ಮಕ್ಕಳ ಬೆರಗುಗಣ್ಣನ್ನು ಅರವತ್ತೊಂದರ ಹರಯದಲ್ಲೂ ಉಳಿಸಿಕೊಂಡಿದ್ದಾರೆ. “ರೋಹನ ಗಣಪು ಮತ್ತು ನಾನು” ಕತೆ ಆಧುನಿಕತೆಯಿಂದ ದೂರ ಇರುವ ಮಕ್ಕಳಲ್ಲಿ ಪ್ರತಿಭೆ ಹುದುಗಿರುವುದನ್ನು ಅನಾವರಣ ಮಾಡಿದರೆ, “ದೆವ್ವದ ಮರ” ಕತೆಯ ಮೂಲಕ ಮಕ್ಕಳ ಕಲಿಕೆಯ ಹೊಸ ಬಗೆಯ ಪ್ರಯೋಗವನ್ನು ಸೂಚ್ಯವಾಗಿ ಹೇಳುತ್ತಾರೆ. ಅಜ್ಞಾನವು ಭಯ ಹುಟ್ಟಿಸಿದರೆ ವಿಜ್ಞಾನವು ಜ್ಞಾನವನ್ನು ಹೆಚ್ಚಿಸುವುದಲ್ಲದೆ ಧೈರ್ಯವನ್ನೂ ಹೆಚ್ಚಿಸುವುದೆಂಬುದಕ್ಕೆ ಸಾಕ್ಷಿಯಾಗಿದೆ. ಓಇತಿ ರಾಜತಿರಾಜ ಕತೆಯಲ್ಲಿ ಮಕ್ಕಳ ಕುತೂಹಲ ಸೊಗಸಾಗಿ ಚಿತ್ರಿತವಾಗಿದ್ದರೆ ಹಣ್ಣು ತಿನ್ನೋ ಆಸೆ ಕತೆಯಲ್ಲಿ ಮಕ್ಕಳ ಸ್ವಭಾವಗಳ ಬಣ್ಣಗಳು ಪರಿಚಯವಾಗುತ್ತವೆ. “ಅಲ್ಲಿ ಕಂಡಿದ್ದೇನು” ಕತೆಯಲ್ಲಿ ಮಕ್ಕಳ ತುಂಟತನದ ಜೊತೆಗೆ ಹಾವಿನ ಪ್ರಸಂಗದಿಂದ ವಿಚಲಿತರಾಗಿ ಮನೆಗೆ ಬಂದಾಗ ಮನೆಯವರ ಎಲ್ಲ ಮುಖಗಳಲ್ಲಿಯೂ ಹಾವನ್ನೇ ಕಾಣುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಮಕ್ಕಳು ಸೂತ್ರ ಹರಿದ ಗಾಳಿ ಪಟದಂತೆ ಎಲ್ಲೆಂದರಲ್ಲಿ ಗಿರಕಿ ಹೊಡೆವ ಹುಮ್ಮಸ್ಸಿನ ಬುಗ್ಗೆಗಳಾಗಿರುತ್ತಾರೆ. ಇಂತಹ ಮುಕ್ತ ವಾತಾವರಣದ ಹಕ್ಕುದಾರರಿಗೆ ಪಾಲಕರು ಹಾಕುವ ಚೌಕಟ್ಟುಗಳು ವ್ಯಕ್ತಿತ್ವ ನಿರ್ಮಾಣದ ತೊಡಕುಗಳಾಗಬಲ್ಲವೆಂಬುದನ್ನು ಸೂಚ್ಯವಾಗಿ ಸೆರೆಹಿಡಿದಿದ್ದಾರೆ. ಮಣ್ಣಿನ ವಾಸನೆ ಕತೆಯಲ್ಲಿ ನಮ್ಮದಲ್ಲದ ವಸ್ತುವನ್ನು ನಮ್ಮದೆಂದುಕೊಂಡು ಬೀಗುವವರ ಗರ್ವ ಭಂಗ ನೈಜವಾಗಿ ನೈಸರ್ಗಿಕವಾಗಿಯೇ ಆಗುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಂತೆ ರಚಿಸಿದ್ದರೆ, ಹೆಗಲ ಮೇಲೆ ಕುಳಿತು ಕತೆಯ ಮೂಲಕ ಇಡೀ ಸಮಾಜದ ಚಿತ್ರಣವನ್ನೇ ಕಣ್ಣಿಗೆ ಕಟ್ಟುತ್ತಾರೆ. ಹೆಣ್ಣು ನಾಯಿ ಮರಿಯೊಂದು ಬೆಳೆದ ಮೇಲೆ ಸಾಕಷ್ಟು ಮರಿ ಹಾಕುತ್ತದೆ ಎಂಬ ಕಾರಣಕ್ಕೆ ತಾಯಿಯಿಂದ ಅಗಲಿಸುವುದು ಆ ಚಿಕ್ಕ ವಯಸ್ಸಿನಲ್ಲಿಯೇ ಆ ನಾಯಿ ಮರಿ ಹಸಿವೆಯಿಂದ ಬಳಲುವುದು ವೃದ್ಧರ ಮತ್ತು ಮಕ್ಕಳಲ್ಲಿ ಉಳಿದಿರುವ ಅಷ್ಟಿಷ್ಟು ಅಂತಃಕ್ಕರಣದಿಂದ ಜೀವ ಉಳಿಸಿಕೊಳ್ಳುವುದು ಕರುಣಾಜನಕವಾಗಿ ಮೂಡಿಬಂದಿದೆ. ಹೀಗೆ ಇಲ್ಲಿರುವ ಹದಿನೈದು ಕತೆಗಳೂ ವಸ್ತು ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತವೆ . ಒಂದು ಚಂದದ ಮಕ್ಕಳ ಪುಸ್ತಕಕ್ಕೆ ಎಷ್ಟು ಹುಡಕಬೇಕೆಂದು ಪ್ರತಿಷ್ಟಿತ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟವರಿಗೇ ಗೊತ್ತು. ಇಂತಹ ಸೊಗಸಾದ ಪುಸ್ತಕವನ್ನು ಮನೆಗೆ ತಲುಪಿಸಿದ ತಮ್ಮಣ್ಣ ಬೀಗಾರ ಅವರು ಸಾಂಪ್ರದಾಯಕ ಚೌಕಟ್ಟನ್ನು ಮರಿದು ಸೊಗಸಾದ ಮಕ್ಕಳ ಕತೆ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.ಮತ್ತು ಇದರಲ್ಲಿ ಯಶಸ್ಸನ್ನು ಕಂಡವರು. ನೀತಿಯನ್ನು ಹೇಳುವುದೇ ಮಕ್ಕಳ ಸಾಹಿತ್ಯವೆಂಬ ತುಂಬಾ ಬಾಲಿಶವಾದ ಹಾಗೂ ನೀರಸವಾದ ಬರವಣಿಗೆ ಕ್ರಮವನ್ನು ಅಲ್ಲಗಳೆದು ನೈಜತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಬಲ್ಲವರಾಗಿದ್ದಾರೆ. ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ ಗಿರಿಗಿಟ್ಟಗೆ ಶುಭಕೋರುತ್ತೇನೆ. ಗಿರಿಗಿಟ್ಟಿ ಟೈಟಲ್ ಕತೆ ಅದ್ಭುತ ರಮ್ಯ ಸ್ವರೂಪದ್ದು ಅದನ್ನು ಓದುಗರು ಓದಿಯೇ ಆನಂದಿಸಬೇಕು. ಶುಭವಾಗಲಿ.

***************************************

ವಿನಾಯಕ ಕಮತದ.

6 thoughts on “ಗಿರಗಿಟ್ಟಿ

  1. ಆಪ್ತವಾಗಿ ಬರೆದಿದ್ದೀರಿ.ಧನ್ಯವಾದಗಳು ಸರ್

  2. ಚೆನ್ನಾಗಿ ಪರಿಚಯಿಸಿದ್ದಾರೆ..ಅಭಿನಂದನೆಗಳು ಸರ್

  3. ತಮ್ಮಣ್ಣ ಬೀಗಾರ್ ರವರ ಗಿರಿಗಿಟ್ಲೆ ಕುರಿತು ಮಾಹಿತಿ ಬಹಳ ಆಪ್ತವಾಗಿ ಮೂಡಿ ಬಂದಿದೆ.ಧನ್ಯವಾದಗಳು

Leave a Reply

Back To Top