ಕಳೆದವರು

ಕವಿತೆ

ಕಳೆದವರು

ಅಬ್ಳಿ ಹೆಗಡೆ.

ಕಳೆದವರು ನಾವು
ಕಳೆದವರು.
ಉಳಿದಿಹ ಗಳಿಕೆಯ
ನಿತ್ಯವೂ ಎಣಿಸುತ್ತ
ಬೆಳೆಸಲಾಗದ್ದಕ್ಕೆ
ಅಳುವವರು.
ಘಾಢಕತ್ತಲಿನಲ್ಲಿ
ಕಪ್ಪುಪಟ್ಟಿಯು ಕಣ್ಗೆ
ಎಲ್ಲೆಲ್ಲೊ ಗುದ್ದುತ್ತ
ಒದ್ದಾಡುವವರು.
ಚೆಲುವ ನಂದನದಲ್ಲಿ
ಎಂದೆಂದೂ ನಿಂತಿದ್ದು
ಕಣ್ಣಹಸಿವಿಂಗದಲೆ
ಸಾಯುವವರು.
ಪ್ರೀತಿಯಮ್ರತದ ಕಲಶ
ಎದೆ ನೆಲದಿ ಹೂತಿಟ್ಟು
ಪ್ರೀತಿಯಾ ಬರದಲ್ಲೆ
ಬದುಕಿ ಸತ್ತವರು.
ದೀಪವಾರಿದ ಕೋಣೆ
ಕತ್ತಲಲೆ ಕುಳಿತಿದ್ದು
ಕಪ್ಪು ಶಾಯಲಿ ಬೆಳಕ
ಗೆರೆಯೆಳೆವರು.
ನಡೆವ ಹಾದಿಯ ಬದಿಗೆ
ಆಲದ ನೆರಳಿದ್ದೂ
ಬಿಸಿಲಲ್ಲೆ ಮಲಗಿದ್ದು
ದಣಿವ ಕಳೆವವರು.
ತನ್ನೊಳಗೇ ಅನಂತ
ಶಾಂತಿಯ ಕಡಲಿದ್ದು
ಶಾಂತಿಯ ಹುಡುಕುತ್ತ
ಸಂತೆಯಾದವರು.
ಕಳೆದವರು ನಾವು
ಕಳೆದವರು.
ಎಷ್ಟುಕಳೆದರೂ ಸ್ವಲ್ಪ
ಉಳಿದವರು.

**********************

One thought on “ಕಳೆದವರು

  1. ಹೌದು, ಎಷ್ಟು ಇದ್ದರೂ ಇಲ್ಲದಂತೆ ಇರುವವರು, ಸುಂದರವಾಗಿದೆ.

Leave a Reply

Back To Top