ಜಾಲತಾಣಗಳಿಂದ ಮಹಿಳೆಯರಿಗೆ

ಹೆಚ್ಚಿದ ಅವಕಾಶ

ನಾ ಮೆಚ್ಚಿದ ನಾಟಕ

ಮಾಲಾ ಅಕ್ಕಿಶೆಟ್ಟಿ

Indian woman selfie on white background — Stock Photo © eskaylim #78832470

  ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ. 

         ಮೊದಲೆಲ್ಲಾ ಇಂಥ ಸೌಲಭ್ಯಗಳು ಅಂದರೆ ಮೊಬೈಲ್, ಇಂಟರ್ನೆಟ್ ಹಾಗೂ ಆ್ಯಪ್ಗಳನ್ನು ಜಾಸ್ತಿಯಾಗಿ ಪುರುಷರೇ ಬಳಸುತ್ತಿದ್ದರು.ದಿನಗಳು ಸರಿದಂತೆ ಮಹಿಳೆಯರೂ ಬಳಸಲು ಪ್ರಾರಂಭಿಸಿದರು. ಒಬ್ಬ ಹೆಣ್ಣು ಮಗಳು ಕಲಿತು ನೌಕರಿ ಹಿಡಿದರೆ ಅದೊಂದು ಸಾಧನೆ ಎಂಬಂತೆ ಪರಿಗಣಿಸಿ, ಮನೆಯಲ್ಲಿರುವವರಿಗೆ ಅಂಥ ಗೌರವ ಸಿಕ್ಕಿರಲಿಲ್ಲ. ಆದರೆ ಈ ಜಾಲತಾಣಗಳ ಸಹಾಯದಿಂದ ಹೊಸ ಉಪಾಯಗಳು ಹೊಳೆದು ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಷ್ಟೋ ಮಹಿಳೆಯರು ಮನೆಯಿಂದಲೇ ಉದ್ಯೋಗ ಅಥವಾ ಹಣವನ್ನು ಸಂಪಾದಿಸುತ್ತಿದ್ದಾರೆ. 

          ಅಡುಗೆ ಮಾಡುವುದೆಂದರೆ ಬರೀ ಹೆಣ್ಣಿನ ಆಸ್ತಿಯಂತೆ ಬಿಂಬಿಸಿದ್ದು ಈ ಸಮಾಜ. ರುಚಿಕಟ್ಟಾದ ಆಹಾರದ ತಯಾರಿಕೆಗೆ ಒಂದು ವೇದಿಕೆಯ ಅವಶ್ಯಕತೆಯಿತ್ತು.ಅಂತಹ ವೇದಿಕೆಯನ್ನು ಮಹಿಳೆಯರು ಯೂಟ್ಯೂಬ್ ಮುಖಾಂತರ ಸಾಧಿಸಿದ್ದಾರೆ. ಒಮ್ಮೆ ಯೂಟ್ಯೂಬ್ ಅನ್ನು ಜಾಲಾಡಿಸಿದರೆ, ಹೆಚ್ಚಿನ ಅಡಿಗೆ ಸಂಬಂಧಿಸಿದ ವಿಡಿಯೊಗಳು ಹೆಣ್ಮಕ್ಕಳಿಗೆ ಸಂಬಂಧಿಸಿವೆ.ಬರೀ ಅಡಿಗೆ ಮಾಡಿ ಸಂಸಾರ ನೋಡಿಕೊಂಡು ಹೋಗುವ ಏಕತಾನತೆಯಿಂದ ಬೇಸತ್ತ ಮಹಿಳೆಯರಿಗೆ ಇದು ವರವಾಗಿದೆ. ತಮಗೆ ಗೊತ್ತಿರುವ ವಿವಿಧ ಆಹಾರದ ರೆಸಿಪಿಗಳನ್ನು ಅಪ್ಲೋಡ್ ಮಾಡಿ, ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಾನೊಬ್ಬ ಹಳ್ಳಿ ಮಹಿಳೆಯ ವಿಡಿಯೋ ನೋಡುತ್ತಿದ್ದೆ. ಹಳ್ಳಿ ಜೀವನ ಹೇಗೆ ಎಂಬುದನ್ನು ದಿನಾಲು ವಿಡಿಯೋ ಮಾಡಿ ಹಾಕುತ್ತಾಳೆ. ವಿಚಿತ್ರ ಎಂದರೆ ಆಕೆ ಕಲಿತದ್ದು ಕೇವಲ ಎಸ್ಸೆಸ್ಸೆಲ್ಸಿ. ಹೇಗೋ ಮೊಬೈಲ್ನ ಫೀಚರ್ಸ್, ಇಂಟರ್ನೆಟ್ ಬಳಕೆ ಜೊತೆಗೆ ಈ ವಿಡಿಯೋ ಹೇಗೆ ಮಾಡುವುದನ್ನು ಕಲಿತು ಅಪ್ಲೋಡ್ ಮಾಡುತ್ತಿದ್ದಾಳೆ. ಆಕೆಯೇ ಹೇಳುವಂತೆ ಗಂಡನ ಸಹಾಯ ಸಹಕಾರ ಇದೆ. ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ತಿಂಡಿ, ಮಧ್ಯಾಹ್ನದ ಊಟದ ವಿಶೇಷ, ಸಂಜೆ ತಿಂಡಿಗಳು, ದನ ಮೇಯಿಸುವುದು, ಹಾಲು ಹಿಂಡುವುದು, ಬೆಣ್ಣೆ ತೆಗೆಯುವುದು, ಹಳ್ಳಿ ಶೈಲಿಯಲ್ಲಿ ಕಾಯಿ ಪಲ್ಯಗಳನ್ನು ಮಾಡುವುದು ಹೀಗೆ ಹಳ್ಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆಕೆ ವಿಡಿಯೋದಲ್ಲಿ ಸಂಗ್ರಹಿಸುತ್ತಾಳೆ. ನಿಜವಾಗಲೂ ಆಕೆಯನ್ನು ನೋಡಿದರೆ ಸಂತೋಷ. ಒಬ್ಬ ಹಳ್ಳಿಯ ಹೆಣ್ಣುಮಗಳು ಅಷ್ಟಷ್ಟೇ ಕಲಿತು ವಿಡಿಯೋ ಮಾಡಿ ಜನರಿಂದ ಸಾಕಾಗುವಷ್ಟು ಲೈಕ್ಸ್, ಕಾಮೆಂಟ್ಸ್ ಪಡೆಯುತ್ತಾಳೆ. ಜನರು ತಮಗೆ ಯಾವ ವಿಷಯ ಬೇಕು ಅನ್ನೋದನ್ನು ಅವಳಿಗೆ ಹೇಳುತ್ತಾರೆ. ಇದು ಹೆಣ್ಮಕ್ಕಳು ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೀದ್ದಾರೆ ಅನ್ನುವುದಕ್ಕೆ ಉದಾಹರಣೆ.    

ಫೇಸ್ ಬುಕ್ ನಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದವರ ಫ್ರೆಂಡ್ಶಿಪ್ ಮಾಡಿಕೊಂಡು, ಜೊತೆಗೆ ತಮಗನಿಸಿದ್ದನ್ನು ಚುಟುಕಾಗಿ ತಮ್ಮ ವಾಲ್ ಮೇಲೆ ಬರೆಯುತ್ತಾ ಜನರಿಂದ ಪ್ರೇರಣೆ ಸಿಕ್ಕಾಗ ಲೇಖನ, ಕವಿತೆ, ಕತೆಗಳನ್ನು ಬರೆದವರು ಹಲವರು. ಎಷ್ಟೋ ಹೆಣ್ಮಕ್ಕಳು ಸಂಗೀತದ ಆಸಕ್ತಿಯಿಂದ ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಹಾಕಿ, ಜನರಿಂದ ಮನ್ನಣೆಯನ್ನು ಪಡೆದು, ಸಂಗೀತ ಲೋಕದ ಗಣ್ಯರಿಗೆ ಅದು ತಲುಪಿದಾಗ ಅವಕಾಶಗಳನ್ನು ಪಡೆದು ಉತ್ತಮ ಹಾಡುಗಾರರಿದ್ದಾರೆ. ರಾಣು ಮಂಡಲ್ ಎಂಬ ನಿರ್ಗತಿಕ ಮಹಿಳೆ ರೈಲ್ವೆ ಸ್ಟೇಷನ್ನಲ್ಲಿ ಹಾಡುವುದನ್ನು ವಿಡಿಯೊ ಮಾಡಿಕೊಂಡವ ಫೇಸ್ಬುಕ್ನಲ್ಲಿ ಹಾಕಿದಾಗ ಕ್ರಾಂತಿಯೇ ಆಗಿ ಹೋಗಿತ್ತು. ರಾತೋರಾತ್ರಿ ರಾಣು ಮಂಡಾಲ್ ಪ್ರಸಿದ್ಧರಾದಳು. ಹಿಮೇಶ್ ರೆಷಮಿಯಾ ಆಕೆಯನ್ನು ಕರೆಯಿಸಿಕೊಂಡು ತನ್ನ ಜೊತೆ ಹಾಡಲು ಅವಕಾಶ ಕೊಟ್ಟ. ಎಲ್ಲೋ ಇದ್ದವಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದು ಈ ಫೇಸ್ಬುಕ್. ಇತ್ತೀಚೆಗಷ್ಟೇ ಮಾನಸಿ ಸುಧೀರ್ ಹಾಡಿದ ಹಾಡುಗಳು ವೈರಲ್ ಆದವು. ಕೊರೊನಾದಿಂದ ಲಾಕ್ ಡೌನ್ ದೇಶಾದ್ಯಂತ ಘೋಷಣೆಯಾದಾಗ, ದಿನದ ಬೇಸರದ ಜೊತೆಗೆ ತನ್ನ ಕಲೆಯ ಪ್ರದರ್ಶನದ ಕಂಟಿನ್ಯೂಟಿಯನ್ನು ಫೇಸ್ ಬುಕ್ ಮುಖಾಂತರ ಮಾಡಿ, ಜನರ ಪ್ರಶಂಸೆಗೆ ಪಾತ್ರರಾದರು.ಅದೊಂದು ಪ್ರೇರಣೆಯಾಗಿ ಹಲವು ಹಾಡುಗಳನ್ನು ಹಾಡಿ, ಇತರರಿಗೂ ಪ್ರೇರಣೆಯಾದರು. ಇನ್ಸ್ಟಾಗ್ರಾಮ್ನಲ್ಲಿ ವಿವಿಧ ಬಗೆಯ ಫೋಟೊಗಳನ್ನು ಹಾಕಿಯೇ ಮನಸ್ಸಿನ ಖುಷಿಯನ್ನು ಪಡೆದವರು ಕೆಲವರು. ಮಹಿಳೆಯರು ಅದೇ ಬೇಸರದಿಂದ ಹೊರಬರಲು ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬ ಸಮೇತ ಎಲ್ಲೋ ಸುತ್ತಾಡಿದ ಸ್ಥಳಗಳನ್ನು, ಭೇಟಿಕೊಟ್ಟ ಕಟ್ಟಡಗಳನ್ನು ಫೋಟೋಗಳ ಮುಖಾಂತರ ಹಂಚಿಕೊಂಡು, ಖುಷಿ ಪಡೆದವರಿದ್ದಾರೆ. ಏನೂ ಲಾಭವಿರದಿದ್ದರೂ ಮನಸ್ಸಿನ ಖುಷಿಯ ಮುಂದೆ ಯಾವುದೂ ಇಲ್ಲ ಎನ್ನುವುದಂತೂ ಅಷ್ಟೇ ನಿಜ.

 ಇನ್ನು ವಾಟ್ಸಪ್ಪಿಗೆ ಬಂದರಂತೂ ಮಹಿಳೆಯರು ತಮಗೆ ಬೇಕಾದ ಗ್ರೂಪ್ಗಳನ್ನು ಮಾಡಿಕೊಂಡು ಮನದಾಳದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರಿಂದ ಹಿಡಿದು ಪಿಜಿ ಸಹಪಾಠಿಗಳ ವರೆಗೆ ಗ್ರೂಪ್ ಹೊಂದಿದ್ದಾರೆ. ಕುಟುಂಬದವರ, ನೆರೆಹೊರೆಯವರ ಗ್ರೂಪುಗಳು ಬೇರೆ.ಇಲ್ಲೂ ಕೂಡ ತಮ್ಮಿಚ್ಛೆಯಂತೆ ಗ್ರೂಪ್ಗಳಿಗೆ ಆಹಾರ, ವಿಹಾರ, ಫೋಟೋ, ಸಾಹಿತ್ಯಿಕ ಚಟುವಟಿಕೆ, ನಾಟಕ, ನೃತ್ಯ, ಸಂಗೀತ ಹೀಗೆ ಹಲವು ವಿಷಯಗಳ ಗ್ರೂಪ್ಗಳಲ್ಲಿ ಭಾಗಿಯಾಗಿ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಬಿತ್ತರಿಸಿದ್ದಾರೆ.ಮಹಿಳೆ ಉದ್ಯೋಗಿಯಾಗಿದ್ದರೆ ಉದ್ಯೋಗಕ್ಕೆ ಸಂಬಂಧಿಸಿದ ಗ್ರೂಪ್ ಗಳಿವೆ. ತನಗನಿಸಿದ್ದನ್ನು ತನ್ನ ಆತ್ಮೀಯರಿಗೆ ಹಂಚುವ ಮತ್ತು ಚಾಟಿಂಗ್ ಮಾಡುವ ಮೂಲಕ ಆನಂದಿಸುತ್ತಿದ್ದಾಳೆ. ಎಷ್ಟೋ ಮಾನಸಿಕ ನೋವುಗಳು ಸಮಾನ ಮನಸ್ಕರಿಗೆ ಹೇಳಿದಾಗ ಸಾಂತ್ವನವನ್ನು ಪಡೆದಿದ್ದಾಳೆ. ಆಸಕ್ತಿದಾಯಕ ವಿಷಯಗಳಿಗೆ ಸ್ಫೂರ್ತಿ ಸಿಕ್ಕಾಗ ಜಗತ್ತನ್ನೇ ಗೆದ್ದಷ್ಟು ಖುಷಿ. ಮನೆಯಲ್ಲೇ ಕುಳಿತು ಇಷ್ಟವಾದ ಕೋರ್ಸುಗಳಿಗೆ ಉದ್ಯೋಗದ ಸಂದರ್ಶನಗಳಿಗೆ ಹಾಜರಾಗಿದ್ದಾಳೆ. ಆನ್ ಲೈನ್ ಶಾಪಿಂಗ್ ಎನ್ನುವುದು ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಸಿಕ್ಕಾಪಟ್ಟೆ ಅವಕಾಶ ನೀಡಿದೆ. ಮನೆಯಿಂದ ಹೊರಬರಲಾರದ ಅನಿವಾರ್ಯತೆಯಲ್ಲಿರುವ ಮಹಿಳೆಯರು ಆನ್ ಲೈನ್ ಕ್ಲಾಸಸ್ ಗಳನ್ನು ತೆಗೆದುಕೊಂಡು ಇದ್ದಲ್ಲಿಂದಲೇ ಹಣವನ್ನು ಗಳಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಜನರನ್ನು ಸಮಾಜದ ಏಳ್ಗೆಗಾಗಿ ಸಂಘಟಿಸುವಲ್ಲಿ ಸಾಮಾಜಿಕ ಆಪ್ ಗಳ ಬಳಕೆ ಉಪಯೋಗಿಯಾಗಿದೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ನಿರತರಾದ ಮಹಿಳೆಯರೆಷ್ಟೋ ಜನರಿದ್ದಾರೆ. ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರ ಕೊರತೆಯಿದ್ದಾಗ ತಮ್ಮದೇ ಬ್ಲಾಗ್ಗಳನ್ನು ತೆರೆದು ಜನಪ್ರಿಯರಾದವರೂ ಇದ್ದಾರೆ.ಮುದ್ರಣ ಕ್ಷೇತ್ರ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ಮ್ಯಾಗಜೀನ್ ಗಳು ಹುಟ್ಟಿಕೊಂಡಿವೆ.ಒಟ್ಟಿನಲ್ಲಿ ಮಹಿಳೆಯರು ಆಧುನಿಕತೆಗೆ ಒಗ್ಗಿಕೊಂಡು, ಜಾಲತಾಣಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಷಯದ ಮಂಡನೆ, ವಿಚಾರಗಳ ಹಂಚಿಕೆ, ಉದ್ಯೋಗ ಕೊಡುವ-ಪಡೆಯುವ, ಹಣ ಗಳಿಸುವ ಸಮಾಜಮುಖಿ ಕಾರ್ಯಗಳಿಗೆ ಜಾಲತಾಣಗಳು ಮಹಿಳೆಯರಿಗೆ ಸಹಾಯಕಾರಿಯಾಗಿವೆ. ಜೊತೆಗೆ ಅವುಗಳಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಜಾಕಚಕ್ಯತೆಯೂ ಮಹಿಳೆಯರಿಗೆ ಇರಬೇಕು. ಇದನ್ನೊಂದು ಹೊರತುಪಡಿಸಿದರೆ ಜಾಲತಾಣಗಳು ತುಂಬಾನೇ ಸಹಕಾರಿ.

************************************************************

Leave a Reply

Back To Top