ಅನ್ನದಗಳುಗಳ ಲೆಕ್ಕ..

ಕವಿತೆ

ಅನ್ನದಗಳುಗಳ ಲೆಕ್ಕ..

ವಸುಂದರಾ ಕದಲೂರು

ಕೈ ಚಾಚಿತು ಒಡಲ ಹಸಿವು, ಅನ್ನದ
ತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…
ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪು
ಅಚ್ಚಿನ ನಾಣ್ಯಗಳನು.

ಹಸಿದ ಉದರಕೆ ಓದಲು ಬಾರದು.
ತಟ್ಟೆಗೆ ಬಿದ್ದ ಕಹಳೆ ಮೊರೆತದ
ನಾಣ್ಯಗಳು ಕ್ರಾಂತಿಯ ಶ್ವೇತಪತ್ರ
ಓದಿಸಲು ಪೈಪೋಟಿಗೆ ಬಿದ್ದವು..

ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆ
ಬೀಳುವ ಅಗುಳಿನ ಸದ್ದಿಗೆ ಕಾದವರು;
ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂ
ಹೊಟ್ಟೆ ತುಂಬುವ ಅನ್ನದಗುಳುಗಳ ಕನಸು
ಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು.

ಕಿವುಡು ಕಿವಿಗಳಿಗೆ ಸಾಮಾಧಾನದ
ದನಿಯೊಂದು, ‘ಇಲ್ಲೀಗ ಮುಳುಗಿದ ಸೂರ್ಯ ಉದಯಿಸುತ್ತಾನೆ ಅಖಂಡ ಭೂಮಂಡಲದ ಇನ್ನೊಂದು ಭಾಗದಲ್ಲಿ’ ಸ್ವಪ್ನವೋ ಬದುಕೋ! ಪಿಸುಗುಡುತ್ತಿತ್ತು..

ಹಸಿದ ಹೊಟ್ಟೆಯನು ಅಂಗೈಲಿ ಹಿಡಿದು ಚಾಚಿದ ಕೈಗೆ ಸೂರ್ಯನನು ಕೊಟ್ಟುವರು, ಕಸಿದು ಮರೆಮಾಡುವ ದಟ್ಟ ಸಾಲು
ಮೋಡಗಳನು ಕಳಿಸಿ, ಅಕಾಲ ಅತಿವೃಷ್ಟಿ.. ಭೀಕರ ಅನಾವೃಷ್ಟಿ.. ತರುತ್ತಾರೆ.

ಕೈಗೂ ಬಾರದ, ಬಾಯಿಗೂ ಸೇರದ,
ವಿಕೋಪಗಳ ಸರಣಿಯಲಿ ಮಣ್ಣುಪಾಲಾದ ಅನ್ನದಗಳುಗಳು ಮರುಗುವ ಕಣ್ಣುಗಳಿಂದ ಉದುರುವ ನಷ್ಟದ ಕಣ್ಣೀರ ಹನಿಗಳಾಗಿ ಬೆಳ್ಳಗೆ ಹೊಳೆಯುತ್ತವೆ….

***********************************

One thought on “ಅನ್ನದಗಳುಗಳ ಲೆಕ್ಕ..

  1. ಮಣ್ಣು ಪಾಲಾಗುವ ಅನ್ನದಗುಳಿನ ಬವಣೆ…ಕಾಡುವ ಕವಿತೆ ವಸುಂಧರಾ

Leave a Reply

Back To Top