ಲಲಿತ ಪ್ರಬಂಧ
ಪಾತ್ರೆಗಳ ಲೋಕದಲ್ಲಿ..
ಜ್ಯೋತಿ ಡಿ.ಬೊಮ್ಮಾ.
ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ.
ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ ಪಾತ್ರೆಗಳನ್ನು ತೊಳೆಯುವಲ್ಲಿ ವ್ಯಸ್ತರಾದರೆ , ಚಿಕ್ಕವರು ಕೈ ಕಾಲಿಗೆ ತೊಡರುವ ಪಾತ್ರೆಗಳ ನಡುವೆ ಸಂಭ್ರಮ ದಿಂದ ಓಡಾಡುತ್ತ ಎನೋ ಖುಷಿ ಅನುಭವಿಸುತ್ತಿದ್ದೆವು.ತಮ್ಮ ಮುರಿದ ಹೋದ ಆಟಿಕೆಗಳು ಹಳೆ ಪುಸ್ತಕಗಳು ಎಂದೋ ಕಳೆದು ಹೋದ ಪೆನ್ನು ಪೆನ್ಸಿಲ್ ಗಳು ಸಿಕ್ಕಾಗ ಅವನ್ನು ಹೆಕ್ಕಿ ತೆಗೆದು ಜೋಪಾನವಾಗಿ ಎತ್ತಿಕ್ಕಿಕೊಂಡು ಸಂಭ್ರಮಿಸುತಿದ್ದೆವು.ಆಗ ಆ ಹಳೆಯ ಮುರಿದ ವಸ್ತುಗಳಲ್ಲಿ ಕಂಡುಕೊಳ್ಳುತ್ತಿದ್ದ ಖುಷಿ ಈಗಿನ ಯಾವ ವಸ್ತುವಿನಲ್ಲು ದೊರಕದು.
ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವವರೆ.ಕೆಲಸದ ಒತ್ತಡದ ನಡುವೆಯೂ ಏನೋ ಸಂಭ್ರಮ. ಮನೆಯ ಮೂಲೆ ಮೂಲೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಗೆ ಸುಣ್ಣದ ಬಿಳಿಯ ಹೊಳಪು ಕೊಟ್ಟಾಗ ಮನೆಯೊಂದಿಗೆ ಮನೆಯವರಲ್ಲೂ ಹೊಸತನದ ಅನುಭೂತಿ ಮೂಡುತಿತ್ತು.
ಅಟ್ಟದ ಮೇಲಿನ ಬಳಸದೆ ಇರುವ ತಾಮ್ರ ಹಿತ್ತಾಳೆ ಪಾತ್ರೆಗಳನ್ನೆಲ್ಲ ತೆಗೆದು , ಉಪ್ಪು ಹುಣಸೆಹಣ್ಣಿನಿಂದ ತಿಕ್ಕಿ ಹೊಳಪು ಬರಿಸಿ ಬಿಸಿಲಿಗೆ ಒಣಗಿಸಿ ಮತ್ತೆ ಅಟ್ಟದಲ್ಲೆ ವಿರಾಜಮಾನವಾಗಿಸುವದು ಒಂದು ಮಹತ್ಕಾರ್ಯವೆ .ಮನೆಯೊಳಗಿನ ಹೊಸ ಹಳೆ ಪಾತ್ರೆಗಳನ್ನು ತಿಕ್ಕುತ್ತ ಅಮ್ಮ ಅಜ್ಜಿಯರು ತಮ್ಮ ಜೀವಮಾನದೊಂದಿಗೆ ಸಾಗಿ ಬಂದ ಪಾತ್ರೆಗಳ ಲೋಕದಲ್ಲಿ ವಿಹರಿಸುತಿದ್ದರು. ಎಷ್ಟೊ ವರ್ಷದಿಂದ ಬಳಸಿ ಸವಕಲಾದ , ಹಿಡಿಕೆ ಮುರಿದ ,ನೆಗ್ಗು ಬಡಿದ ಪಾತ್ರೆಗಳು ಉಪಯೋಗಕ್ಕೆ ಬರದಿದ್ದರು ಬಿಸಾಡುವ ಮನಸ್ಸಾಗದೆ ಒಂದು ದೊಡ್ಡ ಡಬ್ಬದಲ್ಲಿ ತುಂಬಿಡಲಾಗುತಿತ್ತು.ಜೀವಮಾನದ ಇಡುಗಂಟಿನಂತೆ. ನನಗೆ ತಿಳುವಳಿಕೆ ಬಂದ ನಂತರ ಮನೆಯ ಅನುಪಯುಕ್ತ ಪಾತ್ರೆಗಳನ್ನೆಲ್ಲ ಗುಜರಿಗೆ ವರ್ಗಾಯಿಸಿದಾಗ ನನಗೂ ಅಮ್ಮನಿಗೂ ರಂಪಾಟವೆ ಆಗಿತ್ತು.ಹಳೆತನವೆಂದರೆ ಹಾಗೆ ಎನೋ ,ಇಟ್ಟುಕೊಳ್ಳಲು ಆಗದೆ ಬಿಸಾಡಲು ಆಗದೆ ಇಬ್ಬಂದಿತನ.ಆದರೂ ವಸ್ತುಗಳೆ ಆಗಲಿ ವ್ಯಕ್ತಿಯೆ ಆಗಲಿ ಹಳತಾದಂತೆ ನಮ್ಮೊಂದಿಗೆ ಬೆಸೆದು ಬಿಡುತ್ತವೆ.ನಮ್ಮೊಂದಿಗೆ ಒಂದಾಗಿ ಬಿಡುತ್ತವೆ.
ನಿರ್ಜೀವ ಪಾತ್ರೆಗಳು ಒಂದೊಂದು ಪದಾರ್ಥಗಳ ಹೆಸರಿನಿಂದ ಕರೆಸಿಕೊಳ್ಳುತ್ತವೆ.ಹಾಲಿನ ಪಾತ್ರೆ ಮೊಸರಿನ ಗಿಂಡಿ ,ಮಜ್ಜಿಗೆ ಗ್ಲಾಸ್ , ಅನ್ನದ ತಪ್ಪಲೆ ,ಸಾರಿನ ಬೋಗುಣಿ ,ಪಲ್ಯದ ಕಡಾಯಿ ಇನ್ನೂ ಅನೇಕ..ಪ್ರತಿ ಮನೆಯಲ್ಲೂ ಪಾತ್ರೆಗಳು ಕೇವಲ ಪಾತ್ರೆಗಳಾಗಿರದೆ ಆ ಮನೆಯ ಗೃಹಿಣಿಯರ ಒಡನಾಡಿಗಳಾಗಿರುತ್ತವೆ.ಮನೆಯವರ ಹಸಿವು ತಣಿಸುವ ಅಕ್ಷಯ ಪಾತ್ರೆಗಳಾಗಿರುತ್ತವೆ.
ಮನೆಯಲ್ಲಿರುವ ಹಣ ಒಡವೆಯ ನಿಖರವಾದ ಸಂಖ್ಯೆಯ ನೆನಪು ಇರದಿರಬಹುದು.ಆದರೆ ತಮ್ಮ ಮನೆಯಲ್ಲಿರುವ ಪಾತ್ರೆಗಳ ತಟ್ಟೆ ಲೋಟಗಳು ಎಷ್ಟಿವೆ ಎಂದು ನೆನಪಿರದ ಗೃಹಿಣಿ ಇರಲಿಕ್ಕಿಲ್ಲ.ಸಾಕಷ್ಟು ಪಾತ್ರೆಗಳಿದ್ದರು ಅದರಲ್ಲಿ ಒಂದು ಕಾಣೆಯಾದರು ಅಥವಾ ಪಕ್ಕದ ಮನೆಯವರಿಗೆ ಕೊಟ್ಟಿದ್ದರು ಅವರು ವಾಪಸು ಕೊಡುವದು ಸ್ವಲ್ಪ ತಡವಾದರು ನೆನಪಿಸಿ ಪಡೆದುಕೊಳ್ಳುವದರಲ್ಲಿ ಮುಜುಗುರ ಪಟ್ಟುಕೊಳ್ಳಲಾರೆವು.
ನಾಗರಿಕತೆ ಬದಲಾದಂತೆಲ್ಲ ಪಾತ್ರೆಗಳು ಬದಲಾದವು.ಈಗ ಇರುವ ನಾನ್ ಸ್ಟಿಕ್ ಪಾತ್ರೆಗಳು ಮುಟ್ಟಿದರೆ ಜರುಗುವಂತಹವು.ನನಗೆ ಸ್ಟೀಲ್ ಮತ್ತು ಅಲೂಮಿನಿಯಮ್ ಪಾತ್ರೆಗಳ ಮೇಲೆ ಇರುವ ಮಮತೆ ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಮೂಡಲೆ ಇಲ್ಲ. ಈಗ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಹೊರಗಿನಿಂದ ಕಟ್ಟಿಸಿಕೊಂಡು ಬಂದು ಬಿಚ್ಚಿ ಅದರಲ್ಲೆ ಊಟ ಮಾಡುವ ಧಾವಂತದ ಜನರಿಗೆ ಪಾತ್ರೆಗಳ ಅವಶ್ಯಕತೆಯು ಅಷ್ಟಾಗಿ ಕಾಣದು.
ಹಿಂದಿನವರಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬೇಯಿಸುವ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ .ಇಬ್ಬರು ನಾಲ್ವರು ಇರುವ ಮನೆಗಳಲ್ಲಿ ಇರುವ ಪಾತ್ರೆಗಳು ಅವರ ಎರಡರಷ್ಟೆ.
ಕೆಲವರು ಪಾತ್ರೆಗಳನ್ನು ತೊಳೆಯುವ ತಾಪತ್ರಯ ತಪ್ಪಿಸಿಕೊಳ್ಳಲು ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನೆ ದಿನಾಲು ಉಪಯೋಗಿಸುವರು. ಕೆಲಸದ ಹೊರೆ ಕಡಿಮೆಯಾದಷ್ಟೂ ಮಾಲಿನ್ಯ ಹೆಚ್ಚುತ್ತಲೆ ಇದೆ.
ಮಹಿಳೆಯರಿಗೂ ಮತ್ತು ಪಾತ್ರೆಗಳಿಗೂ ಇರುವ ನಂಟು ನಿರಂತರ ಬೆಸೆದಿರುವದು.ಬೆಳಗಾದರೆ ಗೃಹಿಣಿಯರ ಕೈಯಲ್ಲಾಡುವ ಪಾತ್ರೆಗಳ ಟಿನ್ ಟಿನಿ ನಾದ ಪ್ರತಿ ಮನೆಯ ಸುಪ್ರಭಾತ.ಅದರೊಂದಿಗೆ ಮನೆಯವರ ಮತ್ತೊಂದು ಭರವಸೆಯ ಬೆಳಕಿನ ಉದಯ.
******************************************************