ಗಝಲ್

ಗಝಲ್

ಎ.ಹೇಮಗಂಗಾ

purple flower buds in tilt shift lens

ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆ
ಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ

ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿ
ಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ

ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲ
ಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ

ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳು
ಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ

ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?
ಕೊನೆ ಉಸಿರು ದೇಹ ತೊರೆವ ಮೊದಲು ಮರಳಿಬಿಡು ನನ್ನೆಡೆಗೆ

**********************

Leave a Reply

Back To Top