ಮೂರನೇ ಆಯಾಮ

ಅಂಕಣ ಬರಹ

ಹಾಡುವ ತೊರೆಗೆ ಹಾದಿ ತೋರುವ

ಕವಿತೆಗಳು

ಸಂಕಲನ-ತೊರೆ ಹರಿವ ಹಾದಿ
ಕವಿ- ವಿನಯಚಂದ್ರ
ಬೆಲೆ-೧೨೦
ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ

 

ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ ಕವಿತೆಯೋ ಕೆಟ್ಟ ಕವಿತೆಯೋ ಎಂದು ತೀರ್ಪುಕೊಡುವಲ್ಲಿ ನಿರತರಾಗಬೇಕೋ? ಇದಾವುದರ ಹಂಗಿಲ್ಲದೇ ಓದಿ ಆಸ್ವಾದಿಸುವ ಕವನಗಳು ನಮ್ಮ ಮುಂದಿವೆ. ಕವಿ ವಿನಯಚಂದ್ರ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆಗೆಂದು ಕರೆದಾಗ ನನಗೆ ಹುಟ್ಟಿದ ಪ್ರಶ್ನೆಗಳು ಇವೆಲ್ಲ. ಒಂದಿಷ್ಟು ಸ್ನೇಹಿತರು ಸೇರಿ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದೆವು.


   ಹಾಗೆ ನೊಡಿದರೆ ವಿನಯಚಂದ್ರ ಕಾವ್ಯಲೋಕಕ್ಕೆ ಹೊಸಬರೇನಲ್ಲ. ಈಗಾಗಲೇ ಒಂದು ಕವನಸಂಕಲನ ಬಿಡುಗಡೆಯಾಗಿದೆ. ಈಗಾಗಲೇ ಅವರ ಮೌನಗೀತ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಸಾಹಿತ್ಯಾಸಕ್ತರಿಗೆ ಹಾಗೂ ಸಹೃದಯರಿಗೆ ಫೇಸ್‌ಬುಕ್ ಮುಂತಾದ ಕಡೆಗಳಲ್ಲಿ ತಮ್ಮ ಕವನವನ್ನು ಉಣಬಡಿಸಿದ್ದಾರೆ.  ಇವರ ಎರಡನೆ ಸಂಕಲನ ತೊರೆ ಹರಿವ ಹಾದಿ ಈಗ ನಿಮ್ಮ ಮುಂದಿದೆ.


ಇಲ್ಲಿ ಉಳಿಸಿದರಲ್ಲವೇ
ಅಲ್ಲಿ ಸಮನಾಗುವುದು?


ಎನ್ನುತ್ತ ಉಳಿಕೆ ಗಳಿಕೆ ಹಾಗು ಲಯದ ಕುರಿತು ನಮ್ಮ ಗಮನ ಸೆಳೆಯುವ ಕವನದ ಇವೆರಡೇ ಸಾಲುಗಳನ್ನಿಟ್ಟು ಓದಿನೋಡಿ. ಅದೆಷ್ಟೆಲ್ಲ ಅರ್ಥ ಹೊಮ್ಮಿಸುತ್ತದೆ. ಎಲ್ಲಿ ಉಳಿಸಬೇಕು ಮತ್ತು ಎಲ್ಲಿ ಸಮನಾಗಿಸಬೇಕು ಎನ್ನುವುದನ್ನು ಜೀವನದಲ್ಲಿ ಕಲಿಯಬೇಕಾದುದು ಬಹು ಮುಖ್ಯ. ಉಳಿಸಬೇಕಾದಲ್ಲಿ ಉಳಿಸಿ, ಖರ್ಚು ಮಾಡುವಲ್ಲಿ ಮಾಡಿದರೆ ಮಾತ್ರ ಜೀವನಕ್ಕೆ ಬೆಲೆ. ಜೀವನದಲ್ಲಿ ಕೊಡಬೇಕಾದ ಪರೀತಿಯನ್ನು ಧಾರಾಳವಾಗಿ ಕೊಟ್ಟುಬಿಡಬೇಕು. ಪ್ರೀತಿಯನ್ನು ಉಳಿಸಿಕೊಂಡರೆ ಅದು ಎಲ್ಲಿಯೂ ಸಮನಾಗುವುದಿಲ್ಲ. ತಂದೆ ತಾಯಿಗೆ ಕೊಡಬೇಕಾದ ಪ್ರೀತಿ, ಸಹೋದರ ಸಹೋದರಿಯರಿಗೆ ನೀಡಬೇಕಾದ ವಾತ್ಸಲ್ಯ, ಸ್ನೇಹಿತರಿಗೆ ಕೊಡುವ ಆತ್ಮೀಯತೆ ಹಾಗೂ ಪ್ರೇಮಿಗೆ ಮತ್ತು ಜೀವನ ಸಂಗಾತಿಗೆ ನೀಡಬೇಕಾದ ಪ್ರೇಮ, ಮಕ್ಕಳಿಗೆ ನೀಡುವ ಮಮತೆ ಎಲ್ಲವೂ ಬೇರೆ ಬೇರೆಯದ್ದೇ. ಆದರೆ ನಾವು ಅದನ್ನೆಲ್ಲ ಒಂದಾಗಿಸಿ ನಮ್ಮೊಳಗೇ ಒಂದು ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಯಾವುದನ್ನು ಕೊಡಬೇಕು ಎಂಬ ವಿಭ್ರಾಂತಿಯಲ್ಲಿ ಯಾರಿಗೂ ಸರಿಯಾಗಿ ನೀಡದೇ ಉಳಿಸುವ ಪ್ರಯತ್ನ ಮಾಡುತ್ತಲೇ ಎಲ್ಲ ಕಡೆಯೂ ಸೋಲುತ್ತೇವೆ. ಹಾಗಾದರೆ ಕೊಡುವುದೆಲ್ಲಿ ಸಮನಾಗುವುದೆಲ್ಲಿ? ಕೊಡುವ ಮತ್ತು ಸಮನಾಗುವ ನಮ್ಮ ಪ್ರಯತ್ನ ಹಣಕಾಸಿನ ವ್ಯವಹಾರದಲ್ಲಿ ತುಂಬ ಚೆನ್ನಾಗಿ ನಿರೂಪಿತವಾಗುತ್ತದೆ. ಎಲ್ಲೆಲ್ಲೋ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಅನಾವಶ್ಯಕ ಎನ್ನಿಸಿದಲ್ಲಿ ಉಳಿಸಿಕೊಂಡು ಖರ್ಚು ಮಾಡಲೇ ಬೇಕಾದಲ್ಲಿ ಧಾರಾಳವಾಗಬೇಕು. ಆದರೆ ಕವಿ


ಸಂತೆಯ ದಿನ ಮುಂಜಾನೆಗೆದ್ದು
ಮುಂಡಾಸು ಬಿಗಿದ ರೈತನಿಗೆ ರೇಗುತ್ತೇನೆ
ದರ ಹೆಚ್ಚಿತೆಂದು ಮುನಿಯುತ್ತೇನೆ
ಚೌಕಾಸಿಗಿಳಿದು ಚಿಲ್ಲರೆಯ ಜೇಬಿಗಿಳಿಸುತ್ತೇನೆ


ಎಂಬ ಸಾಲಿನ ಮುಂದೆ ಈ ಮೊದಲೆ ಹೇಳಿದ ಎರಡು ಸಾಲುಗಳನ್ನು ಸೇರಿಸುತ್ತಾರೆ. ಅಂದರೆ ಅದಕ್ಕೂ ಹಿಂದೆ ಅದೆಲ್ಲೋ ಸೌತೆಕಾಯಿಗೆ ಉಪ್ಪು ಹಾಕಿಕೊಟ್ಟಿದ್ದಕ್ಕೆ ಕೇಳಿದ್ದಷ್ಟು ಬೆಲೆ ತೆರುವ, ಸುಮ್ಮನೆ ಡೊಗ್ಗು ಸಲಾಮು ಹೊಡೆಯುವವನಿಗೆ ಗರಿಗರಿ ನೋಟುಗಳನ್ನು ನೀಡಿ ಹೀಗೆ ಬಡ ರೈತನ ಎದುರು ಚಿಲ್ಲರೆಗಾಗಿ ಚೌಕಾಶಿ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿ, ಹಣ ಉಳಿಸಿಕೊಂಡ ಆತ್ಮತೃಪ್ತಿಯಲ್ಲಿ ಮೆರೆಯುತ್ತೇವೆ. ಯಾಕೆಂದರೆ ನಮ್ಮ ರೋಷಾವೇಶಗಳನ್ನು ತೋರಿಸಬಹುದಾದದ್ದು ಕೇವಲ ಬಡ ರೈತನ ಎದುರಿಗೆ ಮಾತ್ರ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಾಗಿಲು ಕಾಯುವವನೂ ನಮ್ಮ ಕೋಪಕ್ಕೆ ಹೆದರಲಾರ. ಆದರೆ ನಾವು ಅವನಿಗೆ ಟಿಪ್ಸ್ ಕೊಟ್ಟು ಅವನನ್ನು ಸಂತೃಪ್ತಿಗೊಳಿಸುತ್ತೇವೆಯೇ ಹೊರತೂ ಅವನ ಬಳಿ ಚೌಕಾಶಿ ಮಾಡುವುದಿಲ್ಲ ಎಂಬ ನೋವು ಕವಿಗಿದೆ. ಅದು ಈ ಕವಿತೆಯಲ್ಲಿ ತುಂಬ ಸುಂದರವಾಗಿ ಬಿಂಬಿತವಾಗಿದೆ.


ಬಿಟ್ಟರೆ  ಗೊಮ್ಮಟನನ್ನೂ ಕುಟ್ಟಿ
ಜಲ್ಲಿ ಮಾಡಿ ಲೋಡು ಮಾಡಲು
ಕಾದಿದ್ದಾರೆ ಜನ
ಮರಳು ಮರಳಾಗಳೂ ಕಾಯದೆ
ಮಣ್ಣ ಸೋಸಿಯೇ ಒಡೆಯುತ್ತಿದ್ದಾರೆ
ಗಾಂಧಾರಿ ಪಿಂಡ


ಎಂತಹ ಮಾರ್ಮಿಕ ಸಾಲುಗಳು ಇವು. ನಮ್ಮ ಜನ ನಿಸರ್ಗದ ಯಾವುದನ್ನು ಇದ್ದಂತೆಯೇ ಇರಲು ಬಿಟ್ಟಿದ್ದೇವೆ ಹೇಳಿ? ಅದಂದೆಂದೋ ಬೆಟ್ಟವಾಗಿದ್ದ ಕಲ್ಲನ್ನು ಒಡೆದು ಕೆತ್ತಿ ಗೊಮ್ಮಟನನ್ನಾಗಿ ಮಾಡಿದರು. ಈಗ ನಮಗೆ ಅವಕಾಶ ಸಿಕ್ಕರೆ ಆ ಗೊಮ್ಮಟನನ್ನೂ ಒಡೆದು ಜಲ್ಲಿ ಮಾಡಿ ಮನೆ ಕಟ್ಟಲೋ, ರಸ್ತೆಗೋ ಹಾಕಿ ದಮಾಸು ಹಾಕಿ ನುಣುಪು ಮಾಡಿಬಿಡುತ್ತೇವೆ. ಯಾಕೆಂದರೆ ಮರಳಿನ ಹೆಸರಲ್ಲಿ ನದಿಯ ಒಡಲನ್ನು ಬಗೆದು ಬರಿದಾಗಿಸಿ ನದಿಯ ಪಾತ್ರವೇ ಬದಲಾಗುವಂತೆ ಮಾಡುವುದರಲ್ಲಿ ನಾವು ನಿಸ್ಸಿಮರು. ಇನ್ನು ಕಡಲ ತೀರದಲ್ಲಂತೂ ಸಮುದ್ರ ದಮಡೆಯ ಮರಳನ್ನೂ ಬಗೆದು ಹೊತ್ತೊಯ್ಯುತ್ತಿದ್ದೇವೆ. ಕೆಲವೊಮ್ಮೆ ಮರಳು ಎನ್ನುವ ಹೆಸರಿನಲ್ಲಿ ಮಣ್ಣನ್ನೂ ಹೊತ್ತೊಯ್ದು ಮಾರಾಟ ಮಾಡಿ ಹಣಗಳಿಸುತ್ತಿದ್ದೇವೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಗರ್ಭವನ್ನು ಉದರದಿಮದ ಹೊರತೆಗೆದು ಹೊರಗೇ ಕಟ್ಟಿ, ಹುಂಜದ ವೀರ್‍ಯ ತಾಗಿ ಮೊಟ್ಟೆಯಾದ ತಕ್ಷಣ ಕಿತ್ತುಕೊಳ್ಳುವ ಮನುಷ್ಯ ಸಮಾಜದ ನೀಚ ಹುನ್ನಾರಗಳ ಕುರಿತಾಗಿ ಕವಿಯಲ್ಲಿ ಬೇಸರವಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಕವಿ ತನ್ನನ್ನು ತಾನು ವ್ಯಂಗ್ಯವಾಡಿಕೊಳ್ಳುವುದನ್ನು ಇಲ್ಲಿ ಕಾನುತ್ತೇವೆ. ತನಗೂ ಎರಡು ಮಕ್ಕಳಿವೆ, ನಾನೂ ಇಷ್ಟೆಲ್ಲ ಮಂತ್ರ ಹೇಳಿ ಕಾರಿನಲ್ಲೇ ಓಡಾಡುತ್ತೇನೆ ಎಂಬ ಅಪರಾಧಿಭಾವವನ್ನು ತೋರಿಸುತ್ತಾರೆ.


   ವಿನಯಚಂದ್ರರ ಕವಿತೆಗಳು ಇಷ್ಟವಾಗುವುದೇ ಅಲ್ಲಿರುವ ಸಾಮಾಜಿಕ ಪ್ರಜ್ಞೆಯಿಂದಾಗಿ. ಭವಿಷ್ಯ ಎನ್ನುವ ಕವಿತೆಯಲ್ಲಿ ಅವರು ಅಂತಹ ಸಾಮಾಜಿಕ ಕಳಕಳಿಯಿಂದಲೇ ನಮ್ಮನ್ನು ಅಲ್ಲಾಡಿಸಿಬಿಡುತ್ತಾರೆ. ಇರಾಕಿನಲ್ಲಿ ಗೋಲಿಯಾಡಬೇಕಾಗಿದ್ದ, ಚಿನ್ನಿ ದಾಂಡು ಆಡಬೇಕಾಗಿದ್ದ ಮಕ್ಕಳ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ, ಚಿಕ್ಕವರಿರುವಾಗ ನಮ್ಮ ಕುತ್ತಿಗೆಯಲ್ಲಿ ರಕ್ಷಾ ಕವಚದಂತೆ ಇರುತ್ತಿದ್ದ ತಾಯಿತದ ಜಾಗದಲ್ಲಿ ಸೈನೈಡ್ ಕಟ್ಟಿ ಆಟದ ಮೈದಾನದಲ್ಲಿ ಬಾಂಬುಗಳೊಂದಿಗೆ ಆಟವಾಡುವುದನ್ನು ಕಂಡಾಗ ಮಕ್ಕಳ ಬಾಲ್ಯವನ್ನು ಕಿತ್ತುಕೊಂಡವರ ಕುರಿತು ಆಕ್ರೋಶ ಉಕ್ಕುತ್ತದೆ. ಸೋಮಾಲಿಯಾದಲ್ಲಿ ಮೂಳೆ ಚಕ್ಕಳವಾಗಿದ್ದ ಮಕ್ಕಳ ಅಸ್ತಿಪಂಜರದಂತಹ ದೇಹ, ಹಾಲು ಕೊಡಬೇಕಾಗಿದ್ದ ಅಮ್ಮನ ಮೊಲೆಯಲ್ಲಿ ಜಿನುಗುವ ರಕ್ತ ನಮ್ಮನ್ನು ಅಧೀರಗೊಳಿಸುತ್ತದೆ. ಚೀನಾದಲ್ಲಂತೂ ಬ್ರೂಣ ಹತ್ಯೆ ಸಾಮಾನ್ಯ. ಹುಟ್ಟಲಾರದ ಮಕ್ಕಳು ಶೌಚಾಲಯದ ಗುಂಡಿಗಳಲ್ಲಿ ನರಳಿದರೆ, ಹುಟ್ಟಿದ ಮಕ್ಕಳು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿ, ಸರಕಾರದ ಅಣತಿಯಂತೆ ಬಾಲ್ಯ ಕಳೆದುಕೊಳ್ಳುವುದನ್ನು ಕಂಡರೆ ಆಧುನಿಕ ಸಮಾಜದ ಕುರಿತಾಗಿಯೇ ಅಸಹ್ಯ ಹುಟ್ಟುತ್ತದೆ. ಚಂದ್ರ ಲೋಕಕ್ಕೆ, ಮಂಗಳ ಗ್ರಹಕ್ಕೆ ಹೋಗುವ ಆತುರದಲ್ಲಿ ನಾವು ನಮ್ಮ ಭೂಮಿಯನ್ನು ಹಾಳುಗೆಡವುದನ್ನು ಕಂಡು ಕವಿ ಮಮ್ಮಲ ಮರಗುವುದು ಈ ಕವಿತೆಯಲ್ಲಿ ಕಾಣುತ್ತದೆ.


           ಅಸಹಾಯಕ ಕವಿತೆಯಲ್ಲಿ ದೇಶದ ತುಂಬ ನಡೆಯುತ್ತಿರುವ ಜಲಪ್ರವಾಹವನ್ನು ಉಲ್ಲೇಖಿಸುತ್ತಾರೆ. ಕೇರಳದಲ್ಲಿ, ಕೊಡಗಿನಲ್ಲಿ, ಶಿರಾಡಿಯಲ್ಲಿ, ಎಡಕುಮರಿಯಲ್ಲಿ ಹೀಗೆ ಸುತ್ತಮುತ್ತ ಎತ್ತ ನೋಡಿದರೂ ಜಲಪ್ರವಾಹ. ಗುಡ್ಡಗುಡ್ಡಗಳೇ ಕುಸಿದು, ನೀರು ಎಲ್ಲೆಡೆಯಿಂದ ಜನವಸತಿ ಪ್ರದೇಶದ ಮೇಲೆ ಜಾರಿ, ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವಾಗ ಎಲ್ಲರ ಮನದಲ್ಲೂ ಅದೆಷ್ಟು ನೋವು, ಅದೆಷ್ಟು ವಿಷಾದ. ಆಗೆಲ್ಲ ಉಣ್ಣಲು, ತಿನ್ನಲು ಇಲ್ಲದವರಿಗೆ ಸಹಾಯ ಮಾಡುತ್ತೇನೆಂದು ಹೊರಟವರು ಅದೆಷ್ಟೋ ಮಂದಿ. ಕೆಲವರಂದು ಸಹಾಯ ಮಾಡುವ ನೆಪದಲ್ಲಿ ಆಹಾರ, ವಸ್ತ್ರ, ಹಣವನ್ನು ನೆಪ ಮಾತ್ರಕ್ಕೆ ನಿರಾಶ್ರಿತರಿಗೆ ನೀಡಿ, ಉಳಿದ್ದ್ದ್ನ್ನು ತಾವೇ ಹಂಚಿಕೊಂಡವರೂ ಇದ್ದರು. ಆದರೂ ಹೀಗೆ ಜನಜಾನುವಾರುಗಳ ಅಸಹಾಯಕತೆಗೆ ಹೆಚ್ಚಿನವರು ಮಾಡಿದ್ದೇನು? ಒಂದು ವಿಷಾದದ ಇಮೋಜಿ ಒತ್ತಿ, ಬೇಸರವಾಯಿತೆಂಬಂತೆ ಮೆಸೇಜು ಕುಟ್ಟಿ, ಹಣ ಕೊಡಲೇ, ಸಹಾಯಕ್ಕೆ ಹೊರಟು ಬಿಡಲೇ ಎಂದು ಯೋಚಿಸುತ್ತ ಕೊನೆಗೆ ಏನೂ ಮಾಡಲಾಗದೇ ಸುಮ್ಮನಿದ್ದವರೇ ಹೆಚ್ಚು, ಇದನ್ನು ಕವಿ ಅಜ್ಜಿಯ ಸಾವಿನೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅಜ್ಜಿ ಸತ್ತ ಸುದ್ದಿ ಕೇಳಿ ಬೋರಾಡಿ ಅತ್ತು, ಏನೂ ಮಾಡಲಾಗದ ಅಸಹಾಯಕತೆಗೆ ಚೀರಿ, ಕಣ್ಣೀರಾಗಿ ಅಳುವಿಗೆ ನೆರೆಹೊರೆಯವರ ಸಾಂತ್ವಾನ ಕೇಳಿ, ನಂತರ ಕೆಲವೇ ದಿನಗಳಲ್ಲಿ ಅಜ್ಜಿ ಇದ್ದಳೆಂಬುದನ್ನೇ  ಮರೆತಿದ್ದೆ ಎನ್ನುತ್ತಾರೆ. ನಮ್ಮೆಲ್ಲರ ಬದುಕೂ ಇಷ್ಟೇ. ಘಟನೆ ನಡೆದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಏನೂ ಮಾಡಲಾಗದೆ ಆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುತ್ತೇವೆ. ಹಿಂದಿನ ಎಲ್ಲ ನೋವುಗಳನ್ನು ಮರೆತು ಮತ್ತೆ ಸಲೀಸಾದ ಬದುಕಿನಲ್ಲಿ ಕರಗಿ ಹೋಗುತ್ತೇವೆ.




ಜೀವವಿದಕೊಳ್ಳಿ ಎನ್ನುವ ಕವಿತೆಯು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.  ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ ಎನ್ನುವ ಪುಣ್ಯಕೋಟಿಯ ಕಥೆಯನ್ನು ನೆನಪಿಸುವ ಶೀರ್ಷಿಕೆಯ ಈ ಕವನ ಸಾವನ್ನು ಕೊಟ್ಟು ಜೀವವನ್ನು ತೆಗೆದು ಕೊಳ್ಳಿ ಎನ್ನುವ ಮಾತನ್ನು ಮಾರ್ಮಿಕವಾಗಿ ಹೇಳುತ್ತದೆ. ಗಿಡಕ್ಕೆ ಹೂವು ಮೊಗ್ಗು ಭಾರವಾದರೆ ಆ ಜೀವ ಇದ್ದೇನು ಪ್ರಯೋಜನ? ಮಾನವೀಯತೆಯನು ಮರೆತು ಅಧಿಕಾರ ದಾಹಿಯಾಗುವ ಬದಲು ಪ್ರಾಣ ಹೋದರೆ ತಪ್ಪೇನಲ್ಲ ಎನ್ನುತ್ತಾರೆ ಕವಿ. ಕವಿತೆಯು ಪ್ರಸ್ತುತ ಪಡಿಸುವ ರೀತಿಯಿಂದಲೂ, ಅದರ ಆಶಯದಿಂದಲೂ ಗೆಲ್ಲುತ್ತದೆ.





ನಮ್ಮೆಲ್ಲರ ಬದುಕು ಅದೆಷ್ಟು ಅರ್ಥಹೀನ. ನಾವೇನು ಮಾಡಬೇಕೆಂದುಕೊಂಡಿದ್ದವೋ ಅದನ್ನು ಮಾಡಲಾಗುವುದಿಲ್ಲ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆವೋ ಅದನ್ನು ಸಾಧಿಸಲು ನಮ್ಮ ಸುತ್ತಲಿನ ಸಮಾಜ ಬಿಡುವುದಿಲ್ಲ. ಪ್ರಖ್ಯಾತ ಹಾಡುಗಾರನಾಗಬೇಕು, ಅದ್ಭುತ ನೃತ್ಯಪಟುವಾಗಬೇಕು, ಸೋಲಿರದ ಆಟಗಾರನಾಗಬೇಕು ಎಂದೆಲ್ಲ ಆಸೆ ಇಟ್ಟುಕೊಂಡ ಮಕ್ಕಳಿಗೆ ಅದನ್ನು ಮಾಡಲು ಪ್ರೋತ್ಸಾಹಿಸದೇ, ‘ಹೊಟ್ಟೇಗೇನು ಮಾಡ್ತಿ’ ಎಂದು ಕೇಳುತ್ತೇವೆ. ಹೊಟ್ಟೆಗೆ ಸಂಪಾದಿಸಿಕೊಳ್ಳಬೇಕಾದ ಆತುರದಲ್ಲಿ ಮಗು ತನ್ನ ಇಷ್ಟದ ಎಲ್ಲವನ್ನೂ ಮರೆಯುತ್ತದೆ. ಬದುಕು ಎಂದರೆ ಹೊಟ್ಟೆ ಬಟ್ಟೆ ಹಾಗೂ ಹಣ ಮಾತ್ರ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆದರೆ ಹೊಟ್ಟೆ ತುಂಬಾ ಉಂಡು, ಕೈ ತುಂಬ ಹಣ ಸಂಪಾದಿಸಿ, ಐಶಾರಾಮಿ ಮನೆಯಲ್ಲಿ, ನಮ್ಮದೇ ಅದ್ಭುತವಾದ ವಾಹನದಲ್ಲಿ ಓಡಾಡುತ್ತೇವೆ. ಆದರೆ ಇವೆಲ್ಲವೂ ಬದುಕಿಗೆ ಸಂತಸ ಕೊಡಬಲ್ಲದೇ?


ಅಪ್ಪನ ಮಾತಿನಂತೇ ನಡೆದೆ
ಹೊಟ್ಟೆಗೇನೋ ಒಂದು ಮಾಡಿಕೊಂಡಿದ್ದೇನೆ
ಬದುಕು ಮಾತ್ರ ನಿಸ್ಸಾರ, ಶೂನ್ಯ
ಪ್ರಶ್ನೆ ಎತ್ತೋಣವೆಂದರೆ
ಉತ್ತರಿಸಲು ಈಗ ಅಪ್ಪನಿಲ್ಲ


ಎಲ್ಲವೂ ಇದ್ದು ನಿಸ್ಸಾರ ಬದುಕನ್ನು ಸಾಗಿಸುವಾಗ ನಮ್ಮನ್ನು ನಾವು ಸಾಧಿಸುವ ಖುಷಿಯಿಂದ ಹಿಮ್ಮೆಟಿಸಿದವರನ್ನು  ಕೇಳೋಣವೆಂದರೆ ಅವರು ನಮ್ಮೆದುರಿಗೆ ಇರುವುದಿಲ್ಲ. ಇಲ್ಲಿ ಹೊಟ್ಟೆಗೇನು ಮಾಡುತ್ತಿ ಎಂದು ಕೇಳುವ ಕವಿಯ ಅಪ್ಪ ಒಂದು ಹೆಸರು ಮಾತ್ರ. ನಾವೆಲ್ಲರೂ ಮಾಡುತ್ತಿರುವುದು ಅದೇ ಕೆಲಸ. ನಮ್ಮ ಬಾಲ್ಯದಲ್ಲಿ ನಮ್ಮ ಇಷ್ಟವನ್ನು ಕಿತ್ತುಕೊಂಡ ಅಪ್ಪ- ಅಮ್ಮ, ಹಿತೈಷಿಗಳು ಎನ್ನಿಸಿಕೊಂಡ ಸಂಬಂಧಿಕರು ಮಾಡಿದ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಆಟ ಇಷ್ಟ ಎನ್ನುವ, ಚಿತ್ರ ಬಿಡಿಸುವುದರಲ್ಲಿ ಪ್ರಪಂಚವನ್ನೇ ಮರೆಯುವ, ಹಾಡುತ್ತ ಹಾಡುತ್ತ ಅದ್ಭುತ ಗಂಧರ್ವ ಲೋಕವನ್ನೇ ಸೃಷ್ಟಿಸುವ ಹತ್ತಾರು ಪ್ರತಿಭೆಗಳನ್ನು ಒಡಲಲ್ಲಿ ಇಟ್ಟುಕೊಂಡ ನಮ್ಮ ಮಕ್ಕಳಿಗೆ ಅವರಿಷ್ಟದ್ದನ್ನು ಮಾಡಲು ಬಿಡುತ್ತಿದ್ದೇವೆಯೇ? ‘ಮೊದಲು ಓದು, ಒಂದು ನೌಕರಿ ಹಿಡಿ. ನಂತರ ಬೇಕಾದ್ದು ಮಾಡಿಕೊ’ ಎಂದು ಉಪದೇಶ ಕೊಡುತ್ತಿದ್ದೇವೆ. ಇದು ಜನರೇಶನ್ ಗ್ಯಾಪ್ ಅಲ್ಲ. ಬದುಕು ಎಂದರೇನು ಎನ್ನುವುದು ಅರ್ಥವಾದ ಕಾರಣಕ್ಕೆ ಹೀಗೆ ಮಾಡುತ್ತೇವೆಯೇ? ಅಥವಾ ಬೆಳೆದಂತೆಲ್ಲ ನಮಗೆ ಹಣ ಹಾಗೂ ಒಂದು ಕಂಫರ್ಟ ಲೈಫ್ ಮಾತ್ರ ಸರಿಯಾದದ್ದು ಎನ್ನಿಸಲು ಪ್ರಾರಂಭವಾಗುತ್ತದೆಯೇ? ಅಥವಾ ಹಾಗೆ ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳದೇ ಕೊನೆಗೆ ಅಸಹಾಯಕರಾಗಿ, ತಮ್ಮೆಲ್ಲ ಸಂಬಂಧಿಗಳಿಗೆ, ಆಪ್ತರಿಗೆ, ಮಿತ್ರರಿಗೆ ಹೊರೆಯಾಗಿ ನಿಂತವರನ್ನು ಕಂಡು ಇಂತಹ ಭಾವ ಮೂಡುತ್ತದೆಯೇ? ಯಾವುದು ಸರಿ? ಮಕ್ಕಳ ಇಷ್ಟದಂತೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಬಿಡುವುದೇ ಅಥವಾ ಅವರ ಓದು ಬರೆಹಕ್ಕೆ ಆದ್ಯತೆ ನೀಡಿ, ಅವರಿಗೊಂದು ಉದ್ಯೋಗ ದೊರೆತು, ಅವರ ಬದುಕು ಒಂದು ಹಂತಕ್ಕೆ ತಲುಪುವುದೇ? ಕವಿ ಕೊನೆಯಲ್ಲಿ ಇಂತಹುದ್ದೊಂದು ಪ್ರಶ್ನೆಯನ್ನು ಹಾಗೇ ಓದುಗರಿಗೆ ಬಿಟ್ಟುಬಿಟ್ಟಿದ್ದಾರೆ.


            ವಿನಯಚಂದ್ರರಿಗೆ ಆಂಗ್ಲ ಸಾಹಿತ್ಯದ ಅಪಾರವಾದ ಓದು ಬೆನ್ನಿಗಿದೆ. ಶ್ರೇಷ್ಠ ಆಂಗ್ಲ ಸಾಹಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತೊಮದು ಅನುಕೂಲತೆ ಇದೆ. ಅದು ಆಂಗ್ಲ ಸಾಹಿತ್ಯದ ಹೆಸರಿನಲ್ಲಿ ಜಗತ್ತಿನ ಎಲ್ಲ ದೇಶದ ಶ್ರೇಷ್ಠ ಸಾಹಿತ್ಯವನ್ನು ಓದುವ ಅವಕಾಶ ಇವರಿಗಿರುತ್ತದೆ ಪ್ರಾಚೀನ ಲ್ಯಾಟಿನ್ ಸಾಹಿತ್ಯದಿಮದ ಹಿಡಿದು ರೋಮ್ ಸಾಹಿತ್ಯ, ಮಧ್ಯ ಯುಗದ ಆಂಗ್ಲೋ ಸಾಕ್ಸನ್ ಸಾಹಿತ್ಯ, ಅಮೇರಿಕನ್ ಸಾಹಿತ್ಯ, ಹಾಗೂ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಆಫ್ರಿಕನ್ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯವನ್ನು ಆಂಗ್ಲ ಸಾಹಿತ್ಯದಡಿ ಓದಬಹುದು. ಹೀಗಾಗಿ ಜಗತ್ತಿನ ಎಲ್ಲಾ ಭಾಷೆಗಳ, ಎಲ್ಲ ಶ್ರೇಷಠ ಬರಹಗಾರರ ಛಾಪು ಇವರ ಮೇಲಿರುತ್ತದೆ. ವಿನಯಚಂದ್ರರ ಕವನಗಳನ್ನು ಓದಿದಾಗ ಅನ್ನಿಸುವುದು ಇದೇ. ಇಡೀ ಕವನವನ್ನು ಒಂದು ಓಘದಲ್ಲಿ ತೆಗೆದುಕೊಂಡು ಹೋಗುವ ಕವಿ ಕವಿತೆಯ ಕೊನೆಯಲ್ಲಿ ಒಮ್ಮೆಲೆ ತಿರುವು ನೀಡುತ್ತಾರೆ. ಶೇಕ್ಸ್‌ಫಿಯರ್‌ನ ಸಾನೆಟ್‌ಗಳಂತೆ ಕೊನೆಯ ಎರಡು ಸಾಲುಗಳು ಇಡೀ ಕವನದ ಸಾರವನ್ನು ಕಟ್ಟಿಕೊಡುವ ಕವಿತೆಗಳಿಲ್ಲಿವೆ. ಕೀಟ್ಸ್‌ನಂತೆ ಸಾಮಾಜಿಕತೆಯ ಕುರಿತೂ ಬರೆಯುವ ಎದೆಗಾರಿಕೆಯಿದೆ.


          ಆದರೆ ಇಲ್ಲಿನ ಹೆಚ್ಚಿನ ಕವಿತೆಗಳು ಗಪದ್ಯಗಳಾಗಿವೆ. ಗದ್ಯವನ್ನು ಕವನಕ್ಕೆ ಭಾಷಾಂತರಿಸಿದಂತೆ ಅಲ್ಲಲ್ಲಿ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಪದ್ಯ ಬರೆಯುವವರ ಸಂಖ್ಯೆ ತೀರಾ ಹೆಚ್ಚಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬಹಳಷ್ಟು ಯುವ ಕವಿಗಳು, ಕವಯತ್ರಿಯರು ಕವಿತೆಯನ್ನು ಗದ್ಯದ ಇನ್ನೊಂದು ರೂಪವೆಂಬಷ್ಟು ತಿದ್ದುಪಡಿ ಮಾಡಿದ್ದಾರೆ. ಆದರೆ ಇಂತಗ ಗದ್ಯ ರೂಪದ ಕವಿತೆಗಳಿಗೂ ಅದರದ್ದೇ ಆದ ಮಾರ್ಧವತೆಯನ್ನು ತರಬಹುದು, ಕಥಾನಕಗಳನ್ನು ಕವಿತೆಗೆ ಅಳವಡಿಸುವಾಗ ಅದರಲ್ಲಿ ಗೇಯತೆಯನ್ನು ಅಳವಡಿಸುವಂತೆ ಇಂತಹ ಗಪದ್ಯಗಳಿಗೂ ಸುಲಲೀತ ಓಘವನ್ನು ನೀಡಬಹುದು. ಕವಿ ಆ ನಿಟ್ಟಿನಲ್ಲಿ ಒಂದಿಷ್ಟು ಹೆಚ್ಚು ಗಮನವಹಿಸಿ, ಮಾರ್ಪಡಿಸುವ ಶಬ್ಧಗಳ ಜೋಡಣೆಯನ್ನು ಅಚ್ಚುಕಟ್ಟಾಗಿ ಮಾಡಿದರೆ ಉತ್ತಮ ಕವಿತೆ ದಕ್ಕಿದಂತೆಯೇ ಸರಿ.


    ಅಪಾರವಾದ ಆಂಗ್ಲ ಸಾಹಿತ್ಯದ ಓದು ಮತ್ತು ಅದರ ಪ್ರಭಾವ ಕವಿ ವಿನಯಚಂದ್ರರಿಗೆ ಗಟ್ಟಿಯಾದ ತಳಪಾಯವನ್ನು ನಿರ್ಮಿಸಿಕೊಟ್ಟಂತೆ, ಕನ್ನಡ ಸಾಹಿತ್ಯವೂ ಬಲಿಷ್ಟವಾದ ಗೋಡೆಯನ್ನು ಕಟ್ಟಿ, ಬಿರುಕಾಗದ ಮೇಲ್ಛಾವಣಿಯನ್ನೇರಿಸಲು ಸಹಾಯ ಮಾಡಲಿ. ಹಾಡುಗಾರಿಕೆಯ ಗುಣ ಹೊಂದಿರುವ ಇವರ ಕವಿತೆಗಳಿಗೆ ಮತ್ತಿಷ್ಟು ಬಲ ದೊರೆಯಲಿ. ಕಾವ್ಯ ಹಾಡಾಗುವ ಹಾದಿಯಲ್ಲಿದೆ. ತೊರೆಗೆ ದನಿಗೂಡಿಸಿ ಸಂಗೀತವಾಗಲಿ.

******************************
                   ಶ್ರೀದೇವಿ ಕೆರೆಮನೆ

ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
 

4 thoughts on “ಮೂರನೇ ಆಯಾಮ

  1. ಶ್ರೀದೇವಿ ಕೆರೆಮನೆ ಅವರೇ,
    ಕವನ ಸಂಕಲನವನ್ನು ವರ್ತಮಾನ ಕಾವ್ಯದ ಕೊಲಾಜ್ ಹಿನ್ನೆಲೆಯಲ್ಲಿಟ್ಟು ತೆರೆ ತೆರೆಯಾಗಿ ತೆರೆದಿದ್ದೀರಿ. ಕವಿತೆಯೊಳಗಿನ ಸಮಾಜದ ಪ್ರತಿಫಲನದ ಚಿತ್ರ ದರ್ಶಿಸಿದ್ದೀರಿ. ಕವಿಹೃದಯ ಮತ್ತು ಕಾವ್ಯಗಮ್ಯದ ಬಗ್ಗೆ ನಿಮ್ಮ ಒಳನೋಟ ಅನನ್ಯ.

  2. ತುಂಬ ಚೆನ್ನಾದ ವಿಮರ್ಶೆ. ವಿನಯಚಂದ್ರನ ಕವನಗಳೆಲ್ಲವೂ ಅನುಭವ ಜನ್ಯ. ಪೋಣಿಸಬೇಕು ಎಂದು ಕುಳಿತು ಕಟ್ಟಿದ ಮಾಲೆಗಳಲ್ಲ ಎನ್ನುವ ಅಂಶ ನಿಮ್ಮ ಮಾತುಗಳಿಂದ ದೃಢವಾಯಿತು.

  3. ಧನ್ಯವಾದಗಳು ಹಾಗೂ ಕೃತಜ್ಞತೆಗಳು ಶ್ರೀದೇವಿ ಅವರಿಗೆ

Leave a Reply

Back To Top