ಪುಸ್ತಕ ಪರಿಚಯ
ಅಂತರಂಗದ ಆಲಾಪ ಕವಿತೆಗಳು
ಅಂತರಂಗದ ಆಲಾಪ ಕವಿತೆಗಳು
ಸುಜಾತಾ ಎನ್
” ಬೆಚ್ಚನೆಯ ಕೌದಿಯ ತುಂಡುಗಳು”
ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ
ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ
ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ ಓದುಗರನ್ನು ಕಲೆಹಾಕಿ , ಸಂಘಟಿಸಿ ಸ್ಪರ್ಧೆ , ಬಹುಮಾನಗಳ ಮೂಲಕ ತಾವೂ ಬರೆದರು ತಮ್ಮ ಸುತ್ತಮುತ್ತಲಿನವರನ್ನೂ ಬರಹಕೆ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಕೊಂಡ ಎಂ.ಕಾಂ. ಪಧವೀಧರೆಯಾದ ಇವರಿಗೆ ಈಗ ಕನ್ನಡ ಸಾಹಿತ್ಯವೇ ಉಸಿರಾಗಿದೆ.
ಬೆಂಗಳೂರಿನ ಹೆಚ್.ಎಸ್.ಆರ್.ಎ ಪ್ರಕಾಶನ ಪ್ರಕಟಿಸಿದ ಸುಜಾತಾ ಅವರ ಮೊದಲಿನ ಸಂಕಲನವಾದ ಈ ” ಅಂತರಂಗದ ಆಲಾಪ ” ದ ನೂರು ಪುಟಗಳಲ್ಲಿ 76 ಕವಿತೆಗಳಿವೆ. ತನ್ನ ಮುತ್ತಮುತ್ತಲಿನ ಸಾಮಾನ್ಯ ಜನರು ಕಂಡುಂಡ ಸಂಗತಿಗಳೇ ಇವರ ಕವನಕ್ಕೆ ಸ್ಪೂರ್ತಿಯಾಗಿದೆ. ಹೊಸ ಹುಡುಗ, ಹೊಸ ಕ್ಯಾಮರಾ ಕೊಂಡಾಗ ಕಂಡದ್ದೆಲ್ಲಾ ಕ್ಲಿಕ್ಕಿಸುವಂತೆ ಸುಜಾತಾ ತಮ್ಮ ಅಕ್ಷರಗಳ ಮೂಲಕ ಉತ್ಸಾಹದಲ್ಲಿ ಕಂಡುಕಂಡದ್ದೆಲ್ಲಾ ಮನನ ಮಾಡಿ ಕವಿತೆಯ ರೂಪ ನೀಡಿರುವರು. ಸಂಸಾರ , ಕಛೇರಿಯ ಕೆಲಸದ ಒತ್ತಡದ ನಡುವೆಯೂ ಸದಾ ಕ್ರಿಯಾಶೀಲರಾದ ಇವರು ಕನ್ನಡ ಪ್ರೀತಿಗೆ ಅಭಿನಂದನಾರ್ಹರು
ಮನೆ ಮನಗಳಲಿ ತುಂಬಿರಲು ಸ್ನೇಹ ಸೌಹಾರ್ದ
ಸಂತೃಪ್ತಿಯ ಅನುಭೂತಿ ತುಂಬಿರುವ ಮನ ಆರ್ದ
ಪರಸ್ಪರ ಸಹಕಾರದ ಸಹಬಾಳ್ವೆಯದೇ ಆನಂದ
ವಿಶ್ವಕುಟುಂಬದೀ ಪರಿಕಲ್ಪನೆಯ ನಾ ಇಷ್ಟ ಪಟ್ಟೆ.
” ನಾ ಇಷ್ಟಪಟ್ಟೆ ” ಕವಿತೆಯಲಿ ಮಾನವೀಯ ಮೌಲ್ಯಗಳ ಕುರಿತು ಬರೆಯುತ್ತಾ , ಸ್ನೇಹ ಸೌಹಾರ್ದತೆ
ಸಂತೃಪ್ತಿ , ಸಹಕಾರದ ಬಾಳ್ವೆಯಿಂದ ನಾವು ವಿಶ್ವಕುಟುಂಬದ ಪರಿಕಲ್ಪನೆಯಲಿ ಬದುಕಬೇಕು.
ದ್ವೇಷ , ದುರಹಂಕಾರದಿಂದ ಬದುಕಿ ಏನು ಪ್ರಯೋಜನ. ಕಂದನ ಮುಗ್ಧ ನಗು , ಬಣ್ಣ ಬಣ್ಣದ ಹೂವು , ಜುಳುಜುಳು ನಿನಾದದ ನದಿ ಇವುಗಳಂತರಂಗವ ಕಂಡು
ನಾವು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವದೇ ತನಗೆ ಇಷ್ಟ ಎಂದು ಕವಿ ತಮ್ಮ ಮನದಾಳದ ಇಂಗಿತವನ್ನು ಅಕ್ಷರಗಳಾಗಿಸಿರುವರು.
” ಅಭಿನೇತ್ರಿ ” ಕವಿತೆಯಲಿ
ಜೀವನದ ರಂಗಭೂಮಿಯಲಿ ಭೂಮಿಕೆಗಳ
ನಿರ್ವಹಿಸುತ್ತಾ
ಅಸ್ಮಿತೆಯಾಗಿ ತನ್ನ ಅಸ್ತಿತ್ವದ ಸುಳಿವ ಹೊಳಹಿಸುತ್ತಾ
ಬಾಳ ಗಮ್ಯದ ಕಡೆಗೆ ಪಯಣಿಸುತಿಹ ಯಾತ್ರಿ
ಓ ಹೆಣ್ಣೆ ನಿಜ ಅರ್ಥದಲಿ ನೀನು ಶ್ರೇಷ್ಠ ಅಭಿನೇತ್ರಿ.
ಎಂದು ಹೆಣ್ಣಿನ ಅಸ್ಮಿತೆಗಾಗಿ ಮನದ ಮಾತನಾಡಿರುವರು. ಹೆಣ್ಣು ಈ ಭೂಮಿಗೆ ಬರುವ ಮೊದಲೇ ಸಾಕಷ್ಟು ಅವಮಾನವನ್ನು ಸ್ವಾಗತಿಸಬೇಕಿದೆ. ಅವಳು ಮುಂದೆ ನಿರ್ವಹಣೆ ಮಾಡಬೇಕಾದ ಪಾತ್ರಗಳು ಕಣ್ಮುಂದೆ ಬರುವದು. ಮಗಳು / ಸಹೋದರಿ/ ಸಂಗಾತಿ/ ತಾಯಿ…. ಹೀಗೆ ಎಲ್ಲವೂ ಆಗಿರುವಳು ಹೆಣ್ಣು. ಆದರೂ ಅವಳಿಗೆ ಅವಮಾನ ಅನುಮಾನಗಳು ಸದಾ ಕಟ್ಟಿಟ್ಟ ಬುತ್ತಿ. ಹೆಣ್ಣೆಂದರೆ ಎಲ್ಲಾ ಪಾತ್ರಗಳನ್ನೂ ನಿರ್ವಹಿಸುವ ಅಭಿನೇತ್ರಿ ಎಂದಿರುವರು.
ಹವ್ಯಾಸಿ ಬರಹಗಾರರಾದ ಮೈಸೂರು ನಾಗೇಶ , ಈ ಪುಸ್ತಕಕೆ ಮುನ್ನುಡಿ ಬರೆಯುತ್ತಾ ….. ” ನಿರಂತರ ಕಾವ್ಯ
ಸೇವೆಯಲ್ಲಿ ತೊಡಗಿಕೊಂಡಿರುವ ಸುಜಾತಾರವರದು
ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ
ಕಾಣಿಸುವ ಹೆಸರು. ದುಡಿಯುವ ನಡುವಿನ ಬಿಡುವಲ್ಲಿ ಬರೆದ ಕವನಗಳನ್ನು ಪ್ರಕಟಿಸುತ್ತಲೋ, ಹಲವಾರು ಗುಂಪಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಲೋ, ಬರೆಯುವ
ಇತರ ಬರಹಗಾರರನ್ನು ಪ್ರೋತ್ಸಾಹಿಸುತ್ತಲೋ, ಒಂದಲ್ಲ
ಒಂದು ರೀತಿಯಲ್ಲಿ ಸಕ್ರಿಯವಾದ ವ್ಯಕ್ತಿತ್ವ ಇವರದು.ಹೆಣ್ಣಿನ ಅಂತಃಕರಣ, ಮನಃಸತ್ವಗಳ ಕ್ಯಾನ್ವಾಸಿನಲ್ಲಿ ಬಿತ್ತನೆಯಾಗುವ ವೈವಿಧ್ಯಮಯ ಸಂಗತಿಗಳೆಲ್ಲದ್ದಕ್ಕೂ ಕವನದ ದಿರಿಸುಡಿಸಿ ನಲಿವಿನ ರಮ್ಯೋದ್ಯಾನವಾಗಿಸುವ ಪ್ರಯತ್ನ ಇಲ್ಲಿ ಸಾಕಾರ. ವಸ್ತು, ವಿಷಯದ ಪರಿಮಿತಿ ಇಲ್ಲದೇ ದೈನಂದಿನವೆಲ್ಲದರ ಪ್ರಭಾವವನ್ನೇ ಸರಕಾಗಿಸಿಕೊಂಡ ಕವಿತೆಗಳಿವು ” ಎಂದಿರುವರು.
ಹೆಣ್ಣು ತ್ಯಾಗಮಯಿ ಸಹನಶೀಲೆಎಂತೆಲ್ಲಾ ಹೊಗಳಿಕೆಯ ಪದವಿಯಿತ್ತವರು.ದುರಂತವೆಂದರೆ ಕಾಣದ್ದು ಆ ಹೊನ್ನಶೂಲದಡಿ ಭಾವನೆಗಳಿಗಾಗುತ್ತಿಹ ಶೋಷಣೆಯ ಅರ್ಧಸತ್ಯ. ಎನ್ನುತ್ತಾ “ಅರ್ಧಸತ್ಯ ” ಕವಿತೆಯಲ್ಲಿ ಹೆಣ್ಣಿನ
ನೋವನ್ನು ಅರ್ಧಸತ್ಯದಲಿ ಬಿಚ್ಚಿಡುತ್ತಾ ಹೋಗುವರು.
ಈ ಸಮಯ ಸಾಧಕರದು ಬರೀ ಹೊಗಳಿಕೆಯೆ.ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖವಾಡಿಗರು
ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ನಂತರ ಪ್ರಪಾತಕ್ಕೆ ನೂಕಿಬಿಡುವರು. ಬೂದಿ ಮುಚ್ಚಿದ ಕೆಂಡದಂತೆ
ಕಾಣುವದೆಲ್ಲಾ ಅರೆಸತ್ಯವೇ ! ಇವೆಲ್ಲವೂ ಸುಳ್ಳಿನ ಕವಚದಲಿ ಹುದುಗಿರುವುದೇ ಆಗಿರುತ್ತದೆ. ಯಾವುದೇ ದೇಶವಿರಲಿ , ಭಾಷೆಯಿರಲಿ , ಧರ್ಮವಿರಲಿ ಅಲ್ಲೆಲ್ಲಾ ಹೆಣ್ಣಿನ ಶೋಷಣೆಗಳು ನಿತ್ಯನಿರಂತರವೇ .
ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಅರಿತ ಸುಜಾತಾರವರ ಸಹೋದರಿ ವೈಶಾಲಿ ರಾವ್ ಅಕ್ಕನ
ಕವಿತೆಗಳ ಕುರಿತು ಬರೆಯುತ್ತಾ…..ಹೆಸರಿಗೆ ತಕ್ಕಂತೆ ಎಲ್ಲಾ ಕವನಗಳೂ ಈ ಕವಯತ್ರಿಯ ಅಂತರಂಗದ ಆಲಾಪವಾಗಿದೆ. ಸಂಗೀತದಲ್ಲಿ, ರಾಗಾಲಾಪನೆಯಿಂದ ಆಯಾ ರಾಗದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ
ಮೂಡಿಸುವದು ಹೇಗೆ ಮುಖ್ಯವೋ, ಅದೇ ರೀತಿ ಸುಜಾತಾರವರು ತಮ್ಮ ಅಂತರಂಗದ ಆಲಾಪನೆಯಿಂದ
ಪ್ರತಿಯೊಂದು ಕವಿತೆಗೂ ನಿರ್ದಿಷ್ಟ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಬದುಕಿನ ನಾಗಾಲೋಟದಲ್ಲಿ ಸಂಬಂಧಗಳು ಕಾಣೆಯಾಗುತ್ತಿದೆ ; ಆದರೆ ದುರದೃಷ್ಟವೆಂದರೆ ಸಂಬಂಧಗಳಿರಲಿ, ನಮ್ಮನ್ನು ನಾವೇ
ಕಾಣದಂತಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾವನೆಗಳಿಗೆ ಅಕ್ಷರ ರೂಪ ನೀಡುವದರೊಂದಿಗೆ,
ಪದಗಳ ಮಧ್ಯೆ ಪದಪುಂಜಗಳ ಲಾಲಿತ್ಯವನ್ನೂ ಸೇರಿಸಿದರೆ ಮಾತ್ರ ಅದು ಕವಿತೆ ಎನಿಸಿಕೊಳ್ಳುವದು.
ಆ ಜಾಣ್ಮೆಯನ್ನು ಸುಜಾತಾ ಸಾಬೀತು ಪಡಿಸಿರುವರು….
ಎಂದಿರುವರು.
” ಅನ್ನದಾತ ” ಕವಿತೆಯಲ್ಲಿ ದೇಶದ ಬೆನ್ನೆಲುಬಾದ
ರೈತರ ಕುರಿತಾಗಿ ಬರೆಯುತ್ತಾ…
ಆ ಪ್ರಕೃತಿ ಮಾತೆಗೂ ನಿನ್ನ ಮೇಲೆ ಕೋಪ
ಆಗಾಗ ತೋರುವಳು ತನ್ನ ಪ್ರತಾಪ
ಅತಿವೃಷ್ಟಿ ಅನಾವೃಷ್ಟಿ ಪ್ರವಾಹಗಳ ಪ್ರಕೋಪ
ಯಾವುದೇ ಇರಲಿ ಹೆಚ್ಚಿಸುವದು ಮನದ ತಾಪ
ಎನ್ನುತ್ತಾ…..
ನೀನು ಪಟ್ಟ ಶ್ರಮಕ್ಕೆ ತಕ್ಕ ಬೆಲೆ
ನಿನ್ನ ಅಸ್ತಿತ್ವಕ್ಕೆ ಸೂಕ್ತ ನೆಲೆ
ಸಿಕ್ಕಾಗ ಮಾತ್ರ ದೇಶದ ಉನ್ನತಿ
ಇದಿಲ್ಲದಿದ್ದರೆ ಭವಿಷ್ಯ ಅಧೋಗತಿ..
ಎಂಬ ಅರಿವಿನೊಂದಿಗೆ ರೈತನ ಬವಣೆಯನ್ನು ತೀರಾ ಸಾಮಾನ್ಯ ಜನರೂ ಅರ್ಥೈಸುವಂತೆ ಕವಿ ಇಲ್ಲಿ ತಮ್ಮ ಕವನವನ್ನು ಹೊಸೆದಿರುವರು.
ಈ ಪುಸ್ತಕಕೆ ಬೆನ್ನುಡಿ ಬರೆದ ಕವಿ ಮನಸಿನ ಗುರುಮಾತೆ
ಎಂ.ವಿಜಯ ಜಯಪ್ರಕಾಶ , ” ಸಂಪಾದನೆ ಮತ್ತು
ಸುಖದ ಜೀವನದತ್ತ ವಾಲುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ ಸುಜಾತಾ ವಿಶಿಷ್ಟವಾಗಿ ನಿಲ್ಲುತ್ತಿರುವದು ಅಭಿಮಾನದ ಸಂಗತಿಯಾಗಿದೆ. ತಾಜಾ ಪ್ರತಿಭೆಯಾದ ಸುಜಾತಾ ರವೀಶ್ ರಿಗೆ ತಮ್ಮ ಬಾಲ್ಯದ ಬದುಕಿನ
ಅನುಭವಗಳು ಬರವಣಿಗೆಯ ಮೇಲೆ ಪ್ರಭಾವ ಬೀರಿರುವದನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು. ಕ್ರಿಯಾಶೀಲ ಮನಸ್ಸಿನ ಇವರಿಗೆ ಸಂಬಂಧಗಳು,
ಪ್ರಕೃತಿ, ಸಾಮಾಜಿಕ ಜೀವನದ ಬಗ್ಗೆ ಅತೀವ ಆಸಕ್ತಿ ಇರುವುದು ವ್ಯಕ್ತವಾಗುತ್ತದೆ “. ಎಂದಿರುವರು.
ಮತ್ತೆ ಅಮ್ಮನ ಮಡಿಲ ಸೇರಿ ಮಗುವಾಗಿ ಬಿಡುವಾಸೆ
ಬೆರಗುಗಣ್ಣಲಿ ಹೊಸದಾಗಿ ಈ ಜಗವ ನೋಡುವಾಸೆ
ಪೂರ್ವಗ್ರಹಗಳ ಹಂಗಿಲ್ಲದೇ ಹೊಸ ನಂಟು ಬೆಸೆವಾಸೆ
ಮತ್ತೊಮ್ಮೆ ಬಾಲ್ಯವೆಂಬ ಕಡಲಲಿ ಮುಳುಗಿ ಬಿಡುವಾಸೆ
ಎಂದು ” ಮಗುವಾಗಿ ಬಿಡುವಾಸೆ ” ಕವಿತೆಯಲ್ಲಿ
ಮಗುಮನವನ್ನು ಬಿಚ್ಚಿಡುವರು. ಈ ಧಾವಂತ ಬದುಕಿನಲಿ ಆದೇ ದ್ವೇಷ ಅಸೂಯೆಗಳು , ನಂಬಿಕೆಗಳು
ಕಳೆದು ಹೋಗಿದೆ. ಎಲ್ಲೆಲ್ಲೋ ಹಣದ ವ್ಯಾಮೋಹ. ಈ ಬದುಕೇ ಸಾಕಾಗಿ ಬಿಟ್ಟಿದೆ. ಅದಕಾಗಿ ಎಲ್ಲವನೂ
ಮರೆತು ಅಮ್ಮನ ಮಡಿಲು ಸೇರಿ ಬಾಲ್ಯವೆಂಬ ಕಡಲಲಿ ಮಗುಮನದಿಂದ ಮುಳುಗುವಾ ಎಂದು ಕವಿ ಆಶಿಸುವರು.
ದೇಶ ಕಾಯುವ ಸೈನಿಕನ ಕುರಿತಾಗಿಯೂ ” ಪುಳಕ “
ಕವಿತೆಯಲ್ಲಿ ಬರೆಯುತ್ತಾ , ಇವರ ನಿಸ್ವಾರ್ಥ ಸೇವೆ ನೆನೆದು ಧನ್ಯತೆಯ ಪುಳಕವಾಗುವದು ಎಂಬ
ಧನ್ಯತಾಭಾವ ಮೈಗೂಡಿಸಿಕೊಂಡಿರುವರು.
ಈ ಪುಸ್ತಕದ ಕವಿತೆಗಳೊಡತಿ ಸುಜಾತಾ ಎನ್.” ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಓದುತ್ತಲೇ
ಬೆಳೆದಿದ್ದೆ.ಈಗ ನಾಲ್ಕು ವರ್ಷಗಳಿಂದೀಚೆ ಸಾಮಾಜಿಕ
ಮಾಧ್ಯಮಗಳಾದ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ
ತೊಡಗಿಸಿಕೊಂಡಾಗ ಸಾಹಿತ್ಯ ಚಟುವಟಿಕೆಗಳು ಮತ್ತೆ
ಗರಿಗೆದರಿದವು. ಸುಪ್ತವಾದ ಕವಿತೆಯ ಬರವಣಿಗೆಗೆ
ಮರುಚಾಲನೆ ದೊರೆಯಿತು. ಮನಸ್ಸಿನ ತೀರಕ್ಕೆ ಭಾವನೆಗಳ ಅಲೆ ಅಪ್ಪಳಿಸಿದಾಗ ಹುಟ್ಟಿದ ಅಕ್ಷರದ ಸಾಲುಗಳೇ ಈ ಕವನ ಸಂಕಲನ ” ಎಂದಿರುವರು.
ಹಳೆಯ ಬಟ್ಟೆಗಳ ಸಣ್ಣ ಚೂರುಗಳಾಗಿ ಮಾಡಿ ಹೊಲೆಯುವ ಹಾಗೆ ಮೆತ್ತಗಿನ ಬೆಚ್ಚಗಿನ ಕೌದಿ
ಎಂಬ ಮನದ ಸುಜಾತಾರವರು ಈ ಎಲ್ಲಾ ಕವಿತೆಗಳನ್ನೂ ಕೌದಿಯ ತೆರನಾಗೇ ವೈವಿಧ್ಯಮಯ
ವಿಷಯಗಳಿಂದ ಹೆಣೆದಿರುತ್ತಾರೆ. ಇವರ ಕವಿತೆಗಳು” ಬೆಚ್ಚನೆಯ ಕೌದಿಯ ತುಂಡುಗಳು ” ಇದ್ದಂತೆ.
ಕವಿತೆಗಳೆಂದರೆ ಪ್ರಾಸದಿಂದ , ಪ್ರಾಸಕ್ಕಾಗಿ ಬರೆಯುವ
ಸಾಲುಗಳಲ್ಲ ಎಂಬುದನ್ನು ಮನಗೊಂಡು ,ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ , ಕನ್ನಡ ಸಾಹಿತ್ಸವನ್ನು ಅಭ್ಯಸಿಸಿ , ಇದೇ ಹುರುಪಿನಿಂದ ಬರೆದರೆ ಇವರಿಂದ
ಮುಂದಿನ ದಿನದಲ್ಲಿ ಇನ್ನೂ ಒಳ್ಳೆ ಕವಿತೆಗಳನ್ನು ನಿರೀಕ್ಷಿಸುವಾ ಎಂದು ಹಾರೈಸಿ , ಇವರ ಮೊದಲವೇ
ಸಂಕಲನಕ್ಕಾಗಿ ” ನಾಗಸುಧೆ ” ಯಿಂದ ಶುಭಕೋರಿ ಅಭಿನಂದಿಸುವೆ.
**********************************************
ಪ್ರಕಾಶ ಕಡಮೆ
ನನ್ನ ಕವನ ಸಂಕಲನದ ಬಗ್ಗೆ ಸಹೃದಯಿ ನುಡಿಗಳನ್ನಾಡಿರುವ ಪ್ರಕಾಶ್ ಕಡಮೆಯವರಿಗೆ ಮತ್ತು ಈ ಬರಹವನ್ನು ಪ್ರಕಟಿಸಿದ ಸಂಗಾತಿಯ ಸಂಪಾದಕ ಬಳಗದವರಿಗೆ ನಾನು ತುಂಬಾ ತುಂಬಾ ಅಭಾರಿ. ಧನ್ಯವಾದಗಳು ಧನ್ಯೋಸ್ಮಿ .