ಗಝಲ್
ತೇಜಾವತಿ ಹೆಚ್.ಡಿ.
ಮತ್ಲಾಸಾನಿ /ಹುಸ್ನೆಮತ್ಲಾ ಗಜಲ್
ಕಂಡ ಕನಸೆಲ್ಲವೂ ಗುರಿಯ ಮುಟ್ಟವು ಕೇಳು
ನಡೆದ ಘಟನೆಯೆಲ್ಲವೂ ನನಸಾಗವು ಕೇಳು
ವನದ ಸುಮವೆಲ್ಲವೂ ಗುಡಿಯ ಸೇರವು ಕೇಳು
ಬೀರಿದ ಕಂಪೆಲ್ಲವೂ ಸುಗಂಧ ದ್ರವ್ಯವಾಗವು ಕೇಳು
ಅವನಿಯೆದೆಯ ಗೂಡ ಸ್ಪರ್ಶಿಸುವುದು ವರ್ಷಧಾರೆ
ಬಿದ್ದ ಹನಿಗಳೆಲ್ಲವೂ ಸ್ವಾತಿಯ ಮುತ್ತಾಗವು ಕೇಳು
ಬಯಲ ಭೂಮಿಯನ್ನೆಲ್ಲ ಹಸನು ಮಾಡಿ ಉಳಬಹುದು
ಬಿತ್ತಿದ ಬೆಳೆಗಳೆಲ್ಲವೂ ಫಲವ ನೀಡವು ಕೇಳು
ಭವದ ಸಾಗರವು ವಿಸ್ತಾರವಾಗಿರುವುದು ಈ ಜಗದಲ್ಲಿ
ಹೊರಟ ನಾವೆಗಳೆಲ್ಲವೂ ದಡವ ಸೇರವು ಕೇಳು
ಸಪ್ತ ವರ್ಣಗಳ ಮೂಲವು ಶ್ವೇತವೇ ಆಗಿರುವುದು
ನೋಡಿದ ಬಿಳುಪೆಲ್ಲವೂ ಕ್ಷೀರವಾಗಲಾರವು ಕೇಳು
ಇತಿಹಾಸದ ಚರಿತ್ರೆಯು ದೀರ್ಘವಾಗಿರುವುದು ‘ತೇಜ’
ನೆಟ್ಟ ಹೆಜ್ಜೆಗಲೆಲ್ಲವೂ ಗುರುತಾಗಲಾರವು ಕೇಳು
******************************