ಗಾಂಧಿ ವಿಶೇಷ

ಹಿಂದ್ ಸ್ವರಾಜ್’ನಲ್ಲಿ ಗಾಂಧಿ

ಚಿಂತನೆ

:

  ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ?  ಪಾಶ್ಚಾತ್ಯ ನಾಗರಿಕತೆ ಇಂದು ಎತ್ತ ಸಾಗಿದೆ,  ನಮ್ಮ ದೇಶಕ್ಕೆ ಅವರು ತಂದ ನಾಗರಿಕತೆ ನಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ.  ಎತ್ತಿನ ಗಾಡಿಯಲ್ಲೋ ಕಾಲು ನಡಿಗೆಯಲ್ಲೋ ಊರಿಂದೂರಿಗೆ ಸಂಪರ್ಕವಿಟ್ಟುಕೊಂಡು ನಮ್ಮ ಜನರು ಸುಂದರ ಬದುಕನ್ನು ಸಾಗಿಸುತ್ತಿದ್ದ ಕಾಲವೊಂದಿತ್ತು.  ಪಾಶ್ಚಾತ್ಯರಿಂದ ಬಂದ ‌ಆಧುನಿಕತೆಯು ರೈಲುಗಳ ಮೂಲಕ ಭಾರತದ ಉತ್ತರ-ದಕ್ಷಿಣ ತುದಿಗಳನ್ನು ಜೋಡಿಸ ಒಂದಾಗಿಸಿತೆಂಬ ಭಾವನೆ ನಮ್ಮದು.  ಆದರೆ ಉತ್ತರದಲ್ಲಿ ಹುಟ್ಟಿಕೊಂಡ ಅನೇಕ ಸಮಸ್ಯೆಗಳು ಕೂಡಾ  ರೈಲುಗಳ ಮೂಲಕ ಶರವೇಗದಲ್ಲಿ ದಕ್ಷಿಣಕ್ಕೆ ರವಾನೆಯಾಗಲು ಸಾಧ್ಯ ಎಂಬ ಅದರ ಇನ್ನೊಂದು ಮುಖದ ಬಗ್ಗೆ ನಾವು ಯಾಕೆ ಆಲೋಚಿಸಲಿಲ್ಲ?

 ಆಧುನಿಕತೆಯ ಹೆಸರಿನಲ್ಲಿ ಇಂದು ಜಗತ್ತು ಭೋಗಮಯವಾಗುತ್ತಿದೆ. ಮೋಸ-ವಂಚನೆ-ಸುಲಿಗೆಗಳ ಮೂಲಕ ಹಣ ಗಳಿಸುವುದೊಂದೇ ಜನರ ಗುರಿಯಾಗಿ ಬಿಟ್ಟಿದೆ.  ಊರಿನ ಹಿರಿಯರ ಮೂಲಕ  ಜಗಳಗಳು ಇತ್ಯರ್ಥವಾಗಿ ನ್ಯಾಯ ಸಿಗುತ್ತಿದ್ದ ಕಾಲವೊಂದಿತ್ತು.  ಜಗಳ ಯಾರ ಮಧ್ಯೆ ತಾನೇ ಬರುವುದಿಲ್ಲ?  ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ-ತಮ್ಮಂದಿರು ಜಗಳವಾಡುವುದಿಲ್ಲವೆ?  ಸಿಟ್ಟು ತಣಿದಾಗ ಎಲ್ಲವೂ ಸಹಜವಾಗಿ ಸರಿಯಾಗುತ್ತದೆ.  ಆದರೆ ಆಂಗ್ಲರು ನಮಗೆ ಕಾನೂನು, ನ್ಯಾಯವಾದಿಗಳು ಮತ್ತು ಕೋರ್ಟು-ಕಛೇರಿಗಳನ್ನು ಕೊಡುಗೆಯಾಗಿತ್ತರು.  ನಾವು ಜಗಳ ಮಾಡಿದರೆ  ನಮ್ಮಲ್ಲಿರುವ ಹಣದ ಬಗ್ಗೆ ಮಾತ್ರ  ಆಸಕ್ತಿ ಹೊಂದಿದ ಮೂರನೆಯವರಾದ ವಕೀಲರು-ನ್ಯಾಯಾಧೀಶರುಗಳು ಇಷ್ಟ ಬಂದಷ್ಟು ಕಾಲ ನಮ್ಮನ್ನು ಸತಾಯಿಸಿ ಕೊನೆಗೆ ತೀರ್ಪಿನ ಹೆಸರಿನಲ್ಲಿ ಏನೋ ಒಂದು ನಿರ್ಧಾರವನ್ನು ಘೋಷಿಸುತ್ತಾರೆ.  ಹಾಗೆಯೇ ಸಹಜವಾದ ಔಷಧಿ ಮತ್ತು ಚಿಕಿತ್ಸೆಗಳು ನಮ್ಮ ಒಂದು ಜೀವನ ಕ್ರಮವಾಗಿತ್ತು.  ಎಷ್ಟೋ ರೋಗಗಳು ಕಾಲ ಬಂದಾಗ ತಮ್ಮಷ್ಟಕ್ಕೆ ತಾವೇ ಗುಣವಾಗುತ್ತಿದ್ದವು. ನಮ್ಮ ದೇಹದ ಆರೋಗ್ಯವನ್ನು ನೋಡಿಕೊಳ್ಳುವ ಹೊಣೆ ನಮ್ಮದಲ್ವೆ? ನಾವು ನಮ್ಮ ಆಹಾರ-ವ್ಯಾಯಾಮಗಳ ಬಗ್ಗೆ ಅಸಡ್ಡೆ ತೋರಿಸಿದರೆ  ಅದರಿಂದುಂಟಾಗುವ ತೊಂದರೆಗಳನ್ನು ಸಹಿಸಿಕೊಳ್ಳಲು  ನಮ್ಮ ದೇಹ-ಮನಸ್ಸುಗಳು ಸಿದ್ಧವಾಗಿರಬೇಕು.  ಆದರೆ ಆಧುನಿಕತೆಯು ನಮಗೆ  ವಿವಿಧ ವೈದ್ಯರುಗಳನ್ನೂ ವೈವಿಧ್ಯಮಯ ಔಷಧಿಗಳನ್ನೂ ಕೊಟ್ಟಿದೆ.  ಪರಿಣಾಮವಾಗಿ ನಾವು ನಮ್ಮ ದೇಹಬಲ  ಮತ್ತು ಮನೋಬಲಗಳನ್ನು ಕಳೆದುಕೊಂಡು ಗುಲಾಮರಾದೆವು.  ಆಧುನಿಕತೆಯ ಇನ್ನೊಂದು ಕೊಡುಗೆಯಾದ ಮಾಧ್ಯಮಗಳು ಶ್ರೀಸಾಮಾನ್ಯನನ್ನು ಮಾಹಿತಿಗಳ ಜಾಲದಲ್ಲಿ ಸಿಲುಕಿಸಿ ನಿಜವನ್ನು ಮರೆಮಾಚಿ ಆತನನ್ನು ಭ್ರಮಾಲೋಕಕ್ಕೆ ಒಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ.

 ಸತ್ಯಾಗ್ರಹದ ಮೂಲಕ ನಾವು ಬಯಸಿದ್ದನ್ನು ಸಾಧಿಸಲು ಹೇಗೆ ಸಾಧ್ಯ ಎಂದು ಆಧುನಿಕ ಮನಸ್ಸು ಕೇಳಬಹುದುೆ. ಯಾಕೆಂದರೆ ಅದಕ್ಕೆ ಗೊತ್ತಿರುವುದು ಆಯುಧಗಳ ಪ್ರಯೋಗ ಮಾತ್ರ.  ಪಾಶ್ಚಾತ್ಯರು ನಮಗೆ ಇತಿಹಾಸದ ಘಟನೆಗಳನ್ನು  ದಾಖಲಿಸುವ ವಿದ್ಯೆಯನ್ನು ಹೇಳಿ ಕೊಟ್ಟರು. ಏನು ಮಹಾ ಇತಿಹಾಸವೆಂದರೆ ? ಕೇವಲ ರಾಜ ಮಹಾರಾಜರುಗಳು ಅಧಿಕಾರ ದಾಹದಿಂದ ಕುರುಡರಾಗಿ  ನಡೆಸಿದ ಯುದ್ಧಗಳ ಮತ್ತು ಹರಿಸಿದ ನೆತ್ತರ ಹೊಳೆಗಳ ಕಥೆ ತಾನೆ ? ನಿಜವಾದ ಇತಿಹಾಸವನ್ನು ಸೃಷ್ಟಿಸಿದವರು ಕೋಟಿ ಕೋಟಿ ಸಂಖ್ಯೆಯಲಿರುವ ನಮ್ಮ ರೈತರು, ಕೆಲಸಗಾರರು, ಕಲಾವಿದರು, ಕವಿಗಳು ಮತ್ತು ಚಿತ್ರಕಾರರು ಅಲ್ಲವೆ? ಅವರು ಬೆಳೆಸಿಕೊಂಡ ಆತ್ಮಬಲಗಳ ಮುಂದೆ  ತಮ್ಮ ಮನಸ್ಸನ್ನೇ ಗೆಲ್ಲಲಾಗದ ದುರ್ಬಲ ವ್ಯಕ್ತಿತ್ವದ ರಾಜರುಗಳೆಲ್ಲಿ?  ಆತ್ಮ ಬಲವಿಲ್ಲದವರು ಹಿಂಸೆಯ ಮೂಲಕ ಕಟ್ಟುವ ರಾಜ್ಯ ಎಷ್ಟು ಕಾಲ ಉಳಿಯಬಲ್ಲುದು? ಸತ್ಯಾಗ್ರಹಕ್ಕೆ ಇರುವ ಬೆಂಬಲ ಆತ್ಮಬಲದ್ದು.  ಇದರ ಮೂಲಕ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂಬುದು ಮೂರ್ಖತನ. ಇಂಥ ನೂರಾರು ಮೌಲ್ಯಗಳಿಂದ ತುಂಬಿರುವ ಗಾಂಧೀಜಿಯ‘ಹಿಂದ್ ಸ್ವರಾಜ್’ ಎಲ್ಲರೂ ಓದಲೇ ಬೇಕಾದ ಒಂದು ಅಮೂಲ್ಯ ಕೃತಿ.

 ಸಮಾಜದಲ್ಲಿ ಒಳ್ಳೆಯದನ್ನು ಅಹಿಂಸಾತ್ಮಕವಾಗಿ ಸಾಧಿಸಲು ಆಧುನಿಕ ಮನುಷ್ಯನಿಗೆ ಗಾಂಧೀಜಿಯವರು ನೀಡಿದ ಸಂದೇಶಗಳ ಸಾರಸತ್ವವನ್ನು ಹೀಗೆ ಸಂಗ್ರಹಿಸಿ ಹೇಳಬಹುದು

೧.       ಒಳ್ಳೆಯದು ಎನ್ನುವುದು ಬಸವನ ಹುಳದಂತೆ ಪಯಣಿಸುತ್ತದೆ. ಕಾಯುವ ತಾಳ್ಮೆ ಇರಲಿ.

೨.       ಅಹಿಂಸೆಯೆಂಬುದು ನಿಧಾನವಾಗಿ ಬೆಳೆಯುವ ಮರ. ಅದರ ಬೆಳವಣಿಗೆ ಕಣ್ಣಿಗೆ ಕಾಣಿಸದು. ಆದರೆ ಅದು ಖಚಿತ.

೩.       ಬರೇ ಒಳ್ಳೆಯತನದಿಂದ ಅಷ್ಟೇನೂ ಉಪಯೋಗವಿಲ್ಲ.  ಅದರ ಜತೆಗೆ ವಿವೇಕ,  ಧೈರ್ಯ ಮತ್ತು ಸಂಕಲ್ಪಶಕ್ತಿಗಳಿರಬೇಕು.  ಆತ್ಮನಿಷ್ಠೆಯ ಜತೆಗೆ ವಿವೇಚನೆಯನ್ನೂ ಬೆಳೆಸಿಕೊಳ್ಳ ಬೇಕು.

೪.       ತತ್ವವಿಲ್ಲದ ರಾಜಕೀಯ, ಶ್ರಮವಿಲ್ಲದ ಸಂಪತ್ತು, ನೈತಿಕತೆಯಿಲ್ಲದ ವಾಣಿಜ್ಯ, ಗುಣವಿಲ್ಲದ ವಿದ್ಯೆ, ವಿವೇಕವಿಲ್ಲದ ಸಂತೋಷ, ಮಾನವೀಯತೆಯಿಲ್ಲದ ವಿಜ್ಞಾನ,  ಮತ್ತು ತ್ಯಾಗವಿಲ್ಲದ ಆರಾಧನೆ- ಇವು ನಾವು ಸದಾ ದೂರವಿರಬೇಕಾದ ಏಳು ಮಹಾ ಪಾಪಗಳು.

೫.       ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲಾರರು.

೬.       ಸೇಡು ಅನ್ನುವುದು ಯಾವಾಗಲೂ ಇಡೀ ಜಗತ್ತನ್ನು ಕುರುಡಾಗಿಸಿಯೇ ಕೊನೆಯಾಗುತ್ತದೆ.

೭.       ದುರ್ಬಲರು ಯಾವತ್ತೂ ಕ್ಷಮಿಸಲಾರರು. ಕ್ಷಮಿಸುವ ಶಕ್ತಿಯಿರುವುದು ಸಬಲರಿಗೆ ಮಾತ್ರ.

೮.       ನೀವು ನಾಳೆಯೇ ಸಾಯುವಿರಿ ಎಂಬ ಆಲೋಚನೆಯೊಂದಿಗೆ ಕೆಲಸ ಮಾಡಿ. ನಿಮ್ಮ ಜೀವನ ಶಾಶ್ವತವೇನೋ ಎಂಬಂತೆ ಜ್ಞಾನ ಸಂಪಾದಿಸಿ.

೯.       ನಿಮ್ಮನ್ನು ಹುಡುಕಿಕೊಳ್ಳುವ ಅತ್ಯುತ್ತಮ ಉಪಾಯವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ನೀವೇ ಮರೆಯುವುದು.

೧೦.    ಅವರು ನಿಮ್ಮನ್ನು ಮೊದಲು ಕಡೆಗಣಿಸಬಹುದು. ನಂತರ ನಗಬಹುದು, ನಂತರ ಹೋರಾಡಬಹುದು, ನಂತರ ನೀವೇ ಗೆಲ್ಲುವಿರಿ.

೧೧.    ನೀವು ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬಾರದು; ಮಾನವತೆ ಒಂದು ಸಾಗರ. ಸಾಗರದ ಕೆಲವು ಬಿಂದುಗಳು ಕೊಳಕಾಗಿ ಬಿಟ್ಟರೆ ಸಾಗರ ಕೊಳಕಾಗುವುದಲ್ಲ. ಆರೋಗ್ಯವೇ ಮನುಷ್ಯನ ನಿಜವಾದ ಐಶ್ವರ್ಯ. ಬೆಳ್ಳಿ ಬಂಗಾರಗಳ ಗಟ್ಟಿಗಳಲ್ಲ.

೧೨.    ಸಂತೋಷ ಸಿಗುವುದು ನೀವು ಆಲೋಚಿಸುವ, ಹೇಳುವ ಮತ್ತು ಮಾಡುವ ವಿಷಯಗಳಲ್ಲಿ ಸಾಮರಸ್ಯವಿದ್ದಾಗ.

೧೩.    ಕ್ರಿಯೆಯ ವಿನಃ ನೀವು ಎಲ್ಲೂ ತಲುಪಲಾರಿರಿ.

೧೪.    ಭವಿಷ್ಯವು ನೀವು ವರ್ತಮಾನದಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ.

೧೫.    ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆ. ಪ್ರತಿಯೊಬ್ಬನ ದುರಾಸೆಯನ್ನಲ್ಲ.

೧೬.    ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವುದಲ್ಲ. ಅಸೀಮ ಮನೋಬಲದಿಂದ ಮಾತ್ರ.

೧೭.    ನಿಮ್ಮ ಕ್ರಿಯೆಗಳ ಪರಿಣಾಮವೇನೆಂದು ನಿಮಗೆ ಗೊತ್ತಿರಲಾರದು. ಆದರೆ ನೀವು ಏನೂ ಮಾಡದಿದ್ದರೆ ಪರಿನಾಮವೇ ಇರಲಾರದು.

೧೮.   ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ಬರುವುದು ತಪ್ಪು ಮಾಡಲಿಕ್ಕೂ ಸ್ವಾತಂತ್ರ್ಯವಿದ್ದರೆ ಮಾತ್ರ.

೧೯.    ನೀವು ಮುಷ್ಟಿಯನ್ನು ಬಿಗಿ ಹಿಡಿದು ಕೈ ಕುಲುಕಲಾರಿರಿ.

***********************************

ಡಾ.ಪಾರ್ವತಿ ಜಿ.ಐತಾಳ್

One thought on “

Leave a Reply

Back To Top